ಹೊಸಬರಿಗೆ ಅವಕಾಶ ನೀಡುವುದಕ್ಕಾಗಿ ಟಿಕೆಟ್ ನೀಡಲಾಗುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್ ಹೇಳಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸ್ಪರ್ಧೆ ಮಾಡಿಯೇ ತೀರುತ್ತೇನೆ ಎಂದು ಘೋಷಿಸಿದ್ದಾರೆ. “ನಾನು ಸತತ ಆರು ಬಾರಿ ಗೆದ್ದು ಬಂದಿದ್ದೇನೆ. 21,000 ಹೆಚ್ಚು ಮತಗಳ ಅಂತರದಲ್ಲಿ ಗೆದ್ದಿದ್ದೇನೆ. ಪ್ರತಿ ಬಾರಿಯೂ ನನ್ನ ಗೆಲುವಿನ ಅಂತರ ದೊಡ್ಡದಿದೆ. ಆದರೂ ನನಗ್ಯಾಕೆ ಟಿಕೆಟ್ ನೀಡುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಪಕ್ಷದ ವರಿಷ್ಠರಿಂದ ಬೆಳಗ್ಗೆ ಫೋನ್ ಬಂದಿತ್ತು. ನೀವು ಹಿರಿಯರಿದ್ದೀರಿ ಬೇರಿಯವರಿಗೆ ಅವಕಾಶ ಕೊಡಿ ಎಂದು ಕೇಳಿದ್ದಾರೆ. ಆದರೆ ಪಕ್ಷದ ಆಂತರೀಕ ಸಮೀಕ್ಷೆಯಲ್ಲಿ ನನ್ನ ಪರವಾಗಿ ವರದಿ ಬಂದಿದೆ. ನನಗೆ ಜನರ ಆರ್ಶೀವಾದವಿದೆ. ಹಾಗಾಗಿ ನಾನು ಸ್ಪರ್ಧಿಸುತ್ತೇನೆ. ನನಗೆ ಈ ಸಲವೂ ಸ್ಪರ್ಧಿಸಲು ಪಕ್ಷ ಅವಕಾಶ ನೀಡಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಅವರು ಬೆದರಿಕೆ ಹಾಕಿದ್ದಾರೆ. ಪಕ್ಷ ನಿಷ್ಠನಾಗಿ ಆಗಿ ಕೆಲಸ ಮಾಡಿದ್ದೇನೆ. ಲಾಯಲ್ ಆಗಿ ಕೆಲಸ ಮಾಡಿದವರಿಗೆ ಗೌರವ ಇಲ್ಲವೇ ಎಂದು ವರಿಷ್ಠರನ್ನು ಪ್ರಶ್ನಿಸಿದ್ದೇನೆ” ಎಂದಿದ್ದಾರೆ. ಹಾಗಾದರೆ ಅವು ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ ಕೇಂದ್ರ ವಿಧಾನಸಭಾ ಕ್ಷೇತ್ರದ ಸಮೀಕ್ಷೆ ಹೇಗಿದೆ ನೋಡೋಣ.
ಮಲೆನಾಡು ಮತ್ತು ಡೆಕ್ಕನ್ ಪ್ರಸ್ಥಭೂಮಿಯ ಸಮಭಾಜಕ ರೇಖೆಯ ಮೇಲಿರುವ ಹುಬ್ಬಳ್ಳಿ ನಗರ ಉತ್ತರ ಕರ್ನಾಟಕದ ರಾಜಧಾನಿಯೆನ್ನಬಹುದು; ಛೋಟಾ ಮುಂಬೈ ಎಂದು ಹೆಸರುವಾಸಿಯಾಗಿರುವ ಬೃಹತ್ ಕೈಗಾರಿಕೆಗಳ ಈ ದೈತ್ಯ ವಾಣಿಜ್ಯ ನಗರದ ಹೃದಯ ಭಾಗವೆ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ. ಬಹು ಭಾಷೆ-ಸಂಸ್ಕೃತಿ-ಸಂಪ್ರದಾಯದ ಕನ್ನಡ ನೆಲ ಹುಬ್ಬಳ್ಳಿ ಕಾಸ್ಮೋಪಾಲಿಟನ್ ನಗರ. ಹುಬ್ಬಳ್ಳಿ ಹೆಸರಿನ ವ್ಯುತ್ಪತ್ತಿಯ ಮೂಲ ಕನ್ನಡದ “ಹೂ ಬಿಡುವ ಬಳ್ಳಿ” ಎಂದು ಸ್ಥಳನಾಮ ಪುರಾಣ ಹೇಳುತ್ತದೆ. ಹೂವಿನ ಬಳ್ಳಿಯ ಆಂಗ್ಲೀಕೃತ ಆವೃತ್ತಿ ಹುಬ್ಬಳ್ಳಿ ಎನ್ನಲಾಗಿದೆ. ಪ್ರಾಚೀನ ಕಾಲದಲ್ಲಿ ಹುಬ್ಬಳ್ಳಿಯನ್ನು ರಾಯರ ಹುಬ್ಬಳ್ಳಿ ಅಥವಾ ಪುರಬಳ್ಳಿ ಇಲ್ಲವೆ ಎಲೆಯ ಪೂರ್ವದ ಹಳ್ಳಿ ಎಂದು ಕರೆಯಲಾಗುತಿತ್ತೆಂದು ಚರಿತ್ರೆ ಹೇಳುತ್ತದೆ.
ರಾಯರ ಹುಬ್ಬಳ್ಳಿ ಹತ್ತಿ, ಕಬ್ಬಿಣ ಮತ್ತು ಉಪ್ಪಿನಕಾಯಿಗೆ ಹೆಸರಾಗಿತ್ತು. ವಿಜಯನಗರ ರಾಯರ ಸಾಮ್ರಾಜ್ಯದಲ್ಲಿ ರಾಯರ ಹುಬ್ಬಳ್ಳಿ ಪ್ರಮುಖ ವಾಣಿಜ್ಯ ನಗರವಾಗಿ ಪ್ರವರ್ಧಮಾನಕ್ಕೆ ಬಂತು. ಆದಿಲ್ ಶಾಹಿಗಳ ಕಾಲದಲ್ಲಿ ಬ್ರಿಟಿಷರು ಇಲ್ಲಿ ಕಾರ್ಖಾನೆಗಳನ್ನು ತೆರೆದರು. 1673ರಲ್ಲಿ ಶಿವಾಜಿ ಇಲ್ಲಿನ ಕಾರ್ಖಾನೆಗಳನ್ನು ಲೂಟಿ ಮಾಡಿದನೆಂದು ಇತಿಹಾಸದಲ್ಲಿದೆ. 17ನೆ ಶತಮಾನದಲ್ಲಿ ರಾಯರ ಹುಬ್ಬಳ್ಳಿ ಮೊಘಲರ ಆಳ್ವಿಕೆಗೆ ಒಳಪಟ್ಟಿತು. ಆ ಬಳಿಕ ಸವಣೂರಿನ ನವಾಬರು ವಶಪಡಿಸಿಕೊಂಡರು. ಮಜಿರ್‍ಪುರ ಎಂಬ ವಿಸ್ತರಣೆ ನವಾಬರ ಕಾಲದಲ್ಲಿ ಆಯಿತು. ದೀರ್ಘ ಕಾಲದ ರಾಜರು, ಮೊಘಲರು ಮತ್ತು ಬ್ರಿಟಿಷರ ದರ್ಬಾರಿನ ನಂತರ ಬಸಪ್ಪ ಶೆಟ್ಟರ್ ಎಂಬ ವರ್ತಕ ಕೋಟೆ ಮೈದಾನದ (ದುರ್ಗದ ಬೈಲ್) ಸುತ್ತಮುತ್ತಲಿನಲ್ಲಿ ಹೊಸ ಹುಬ್ಬಳ್ಳಿ ನಿರ್ಮಿಸಿದನು. ಈ ಹೊಸ ಹುಬ್ಬಳ್ಳಿಯನ್ನು ಮರಾಠರು ವಶಪಡಿಸಿಕೊಂಡರು. ಸಾಂಗ್ಲಿಯ ಪಟವರ್ಧನರು ಕಪ್ಪ ಕೊಡಲಾಗದೆ ಬ್ರಿಟಿಷರಿಗೆ ಹಳೆಹುಬ್ಬಳ್ಳಿ ಮತ್ತು ಹೊಸಹುಬ್ಬಳ್ಳಿಯನ್ನು ಬಿಟ್ಟುಕೊಟ್ಟರು.
ಬ್ರಿಟಿಷರು 1880ರಲ್ಲಿ ರೈಲ್ವೆ ಕಾರ್ಯಾಗಾರವನ್ನು ಹುಬ್ಬಳ್ಳಿಯಲ್ಲಿ ಆರಂಭಿಸಿದರು. ಇದು ಹುಬ್ಬಳ್ಳಿ ಪ್ರಮುಖ ಕೈಗಾರಿಕಾ ಹಾಗು ವಾಣಿಜ್ಯ ನಗರವಾಗಿ ಬೆಳೆಯಲು ರಹದಾರಿಯಾಯಿತು. ಈಗ ಹುಬ್ಬಳ್ಳಿ ನಗರದಲ್ಲಿ ವಿವಿಧ ಗಾತ್ರದ ಒಂದು ಲಕ್ಷಕ್ಕಿಂತ ಹೆಚ್ಚು ಕೈಗಾರಿಕೆಗಳಿವೆ. ಕೈಗಾರಿಕೆ-ವಾಣಿಜ್ಯ-ವ್ಯವಹಾರ ಹುಬ್ಬಳ್ಳಿ ಆರ್ಥಿಕತೆಯ ಜೀವ-ಜೀವಾಳ; ಹುಬ್ಬಳ್ಳಿ ಗ್ರಾಮೀಣ ಪ್ರದೇಶದ ಕೃಷಿ ಉತ್ಪನ್ನ, ನಗರದ ಹೆಚ್ಚುವರಿ ಆದಾಯ ಮೂಲ. ಇದು ನಗರದ ಆರ್ಥಿಕತೆ ಹಾಗು ಜನಜೀವನವನ್ನು ಪ್ರಭಾವಿಸುತ್ತದೆ. ಹುಬ್ಬಳ್ಳಿಯ ದೈನಂದಿನ ಕೋಟ್ಯಾಂತರ ರೂ.ವಹಿವಾಟು ರಾಜ್ಯದ ಆರ್ಥಿಕತೆಗೆ ದೊಡ್ಡ ಕೊಡುಗೆ ಕೊಡುತ್ತಿದೆ. ನಾನಾ ನಮೂನೆಯ ಕೈಗಾರಿಕೆ, ಕಂಪನಿ ವ್ಯಾಪಾರಿ ಕೇಂದ್ರ ಮತ್ತು ಪ್ರವಾಸಿತಾಣಗಳ ಹುಬ್ಬಳ್ಳಿ ಬಾಬರಿ ಮಸೀದಿ ಪತನದ ನಂತರದ ದಿನಮಾನದ ಧರ್ಮಕಾರಣ ಪ್ರಚೋದಿತ ಹಿಂಸೆ-ದೊಂಬಿಯ ಆತಂಕದ ನಡುವೆಯೂ ವಾಣಿಜ್ಯೋದ್ಯಮಿಗಳಿಗೆ ಮತ್ತು ಪ್ರವಾಸಿಗರಿಗೆ ಅಚ್ಚು-ಮೆಚ್ಚಿನ ಮಹಾನಗರವಾಗಿದೆ!
ಕ್ಷೇತ್ರ ರಚನೆ-ರಾಜಕಾರಣ
ಮೇಲ್ವರ್ಗದ ಲಿಂಗಾಯತ ಜಾತಿ ಪ್ರತಿಷ್ಠ ಮತ್ತು ಹಿಂದುತ್ವದ ಜಂಟಿ ತಂತ್ರಗಾರಿಕೆಯ ಅಖಾಡ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ. 1957, 1967 ಮತ್ತು 2008ರ ಕ್ಷೇತ್ರ ಪುನರ್ ವಿಂಗಡಣೆಯ ಕಾಲಘಟ್ಟದಲ್ಲಾದ ಭೌಗೋಳಿಕ ವ್ಯಾಪ್ತಿ ಬದಲಾವಣೆಯಲ್ಲಿ ಈ ಕ್ಷೇತ್ರ ಹುಬ್ಬಳ್ಳಿ ನಗರ, ಹುಬ್ಬಳ್ಳಿ ಗ್ರಾಮೀಣ ಮತ್ತು ಹುಬ್ಬಳ್ಳಿ-ಧಾರವಾಡ ಕೇಂದ್ರ ಎಂದು ನಾಮಾಂತರಗೊಂಡಿದೆ. 2008ರ ಪೂರ್ವದಲ್ಲಿ ಕ್ಷೇತ್ರದ ಜತೆಗಿದ್ದ ಹುಬ್ಬಳ್ಳಿ ತಾಲೂಕಿನ ಹಳ್ಳಿಗಳನ್ನು ನವಲಗುಂದ ಹಾಗು ಕುಂದಗೋಳ ಕ್ಷೇತ್ರಗಳೊಂದಿಗೆ ಸೇರಿಸಿ ಮಹಾನಗರ ಪಾಲಿಕೆಯ ವಾರ್ಡ್‌ಗಳಷ್ಟೆ ಇರುವ ಹು-ಧಾ ಕೇಂದ್ರ ಕ್ಷೇತ್ರ ರಚನೆ ಮಾಡಲಾಗಿದೆ. ಒಟ್ಟು 2,42,736 ಮತದಾರರಿರುವ ಸದ್ರಿ ಕ್ಷೇತ್ರದಲ್ಲಿ ವಿವಿಧ ಒಳಪಂಗಡಗಳ ಲಿಂಗಾಯತರು 70 ಸಾವಿರ, ಮುಸ್ಲಿಮರು 40 ಸಾವಿರ, ಎಸ್ಸಿ-ಎಸ್ಟಿ 35 ಸಾವಿರ, ಬ್ರಾಹ್ಮಣರು 26 ಸಾವಿರ ಮತ್ತು ಮರಾಠರು, ಜೈನರು, ಗುಜರಾತಿ, ಸಿಖ್ ಮುಂತಾದವರಿದ್ದಾರೆಂದು ಅಂದಾಜಿಸಲಾಗಿದೆ.
ಹುಬ್ಬಳ್ಳಿಯಲ್ಲಿ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದಾರೆ; ಆಯಕಟ್ಟಿನ ವ್ಯವಹಾರ-ಉದ್ಯಮದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಅನಾದಿಕಾಲದಿಂದ ಇಲ್ಲೊಂಥರಾ ವರ್ಗ ಸಂಘರ್ಷವಿದೆ. ಅದನ್ನು ಧರ್ಮಯುದ್ಧವಾಗಿ ಮಾರ್ಪಡಿಸಿ ಹಿಂದುತ್ವದ ದ್ವೇಷಾಸೂಯೆಯ ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕೋಮುಸೂಕ್ಷ್ಮ ಪ್ರದೇಶ ಎಂಬ ಆತಂಕಕ್ಕೆ ಈಡಾಗಿರುವ ಹುಬ್ಬಳ್ಳಿಯ ವಿವಿಧ ಧರ್ಮದ ಜನರ ನಡುವಿನ ಅಪನಂಬಿಕೆ-ಅಭದ್ರತೆ-ಅಂಜಿಕೆ ಬಂಡವಾಳ ಮಾಡಿಕೊಂಡು ಬಿಜೆಪಿ ಬಲಗೊಂಡಿದೆ ಎಂಬುದು ಸಾಮಾನ್ಯ ರಾಜಕೀಯ ತಿಳಿವಳಿಕೆ. ಹುಬ್ಬಳ್ಳಿ ಸಂಘ ಪರಿವಾರದ ಆಡೊಂಬಲವಾದರೂ 1957ರಿಂದ 1989ರವರೆಗಿನ 8 ಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲಲಾಗಲಿಲ್ಲ. 1990ರ ದಶಕದ ಈದ್ಗಾ ಮೈದಾನ ವಿವಾದ ಮತ್ತು ಬಾಬರಿ ಮಸೀದಿ ಧ್ವಂಸದ ನಂತರದ ಮತೀಯ ಮತ ಬ್ಯಾಂಕ್ ಧ್ರುವೀಕರಣದ ಪರಿಣಾಮವಾಗಿ 1994ರ ಚುನಾವಣೆಯಲ್ಲಿ ಬಿಜೆಪಿ ಹುಬ್ಬಳ್ಳಿ ಗ್ರಾಮಾಂತರದಲ್ಲಿ ಗೆಲುವು ಕಂಡಿತು ಎಂದು ಸಾಮಾಜಿಕ-ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಗೆದ್ದವರು-ಬಿದ್ದವರು!
1957ರ ಪ್ರಪ್ರಥಮ ಚುನಾವಣೆಯಲ್ಲಿ ಅಂದಿನ ಪ್ರಭಾವಿ ಕಾಂಗ್ರೆಸ್ ಮುಂದಾಳಾಗಿದ್ದ ಮುಸ್ಲಿಮ್ ಸಮುದಾಯದ ಎಫ್.ಎಚ್. ಮೋಹಸಿನ್ ಮತ್ತು ಭಾರತೀಯ ಜನ ಸಂಘದ ಎಂ.ಜಿ.ಜರತಾಘರ್ ನಡುವೆ ಹೋರಾಟ ಏರ್ಪಟ್ಟಿತು. ಜನಸಂಘದ ಜರಾತಘರ್‌ಗೆ ಕೇವಲ 4,799 ಮತಗಳಷ್ಟೆ ಪಡೆಯಲು ಸಾಧ್ಯವಾಯಿತು. ಕಾಂಗ್ರೆಸ್‌ನ ಮೋಹಸಿನ್ 12,810 ಮತ ಗಳಿಸಿ ಮೊದಲ ಶಾಸಕ ಎನಿಸಿಕೊಂಡರು. 1962ರ ಇಲೆಕ್ಷನ್‌ನಲ್ಲಿ ಶಾಸಕ ಮೋಹಸಿನ್ ಸ್ಪರ್ಧಿಸಲಿಲ್ಲ; ಮೋಹಸಿನ್ ಪಾರ್ಲಿಮೆಂಟಿಗೆ ಆಯ್ಕೆಯಾದರು. ಕಾಂಗ್ರೆಸ್‌ನ ರಾಜೇಸಾಬ್ ಎ. ಕೊಪ್ಪಳ್ ಮತ್ತು ಆ ಕಾಲದ ಸಂಘ ಪರಿವಾರದ ಕಟ್ಟರ್ ಮುಂದಾಳಾಗಿದ್ದ ಸದಾಶಿವ ಎಸ್.ಶೆಟ್ಟರ್ (ಹಾಲಿ ಶಾಸಕ-ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಚಿಕ್ಕಪ್ಪ) ಮುಖಾಮುಖಿಯಾಗಿದ್ದರು. 11,900 ಮತ ಪಡೆದಿದ್ದ ಶೆಟ್ಟರ್‌ರನ್ನು ಕಾಂಗ್ರೆಸ್‌ನ ರಾಜೇಸಾಬ್ ಕೊಪ್ಪಳ್ 9,269 ಮತದಂತರದಿಂದ ಪರಾಭವಗೊಳಿಸಿ ಅಸೆಂಬ್ಲಿಗೆ ಪ್ರವೇಶ ಪಡೆದರು.
ಮೊದಲೆರಡು ಚುನಾವಣೆಗಳಲ್ಲಿ ಹುಬ್ಬಳ್ಳಿ ಸಿಟಿ ಎಂದು ಹೆಸರಾಗಿದ್ದ ಈ ಕ್ಷೇತ್ರ 1967ರಲ್ಲಿ ಹುಬ್ಬಳ್ಳಿ ಗ್ರಾಮೀಣ ಎಂದಾಯಿತು. 1967ರಲ್ಲಿ ಜನ ಸಂಘದ ಕಟ್ಟಾಳು ಸದಾಶಿವ ಶೆಟ್ಟರ್ ಪಕ್ಕದ ಹುಬ್ಬಳ್ಳಿ ಕ್ಷೇತ್ರದಿಂದ ಸ್ಪರ್ಧೆಗಿಳಿದರು. ಹುಬ್ಬಳ್ಳಿ ಗ್ರಾಮೀಣದಲ್ಲಿ 22,540 ಮತ ಪಡೆದ ಕಾಂಗ್ರೆಸ್ ಪಕ್ಷದ ಪಿ.ಎಂ.ರಾಮನ ಗೌಡ 8,713 ಮತ ಗಳಿಸಿದ್ದ ಜನ ಸಂಘದ ಕೆ.ಸಿ.ಸಿದ್ದಪ್ಪರನ್ನು ಸೋಲಿಸಿದರು. 1972ರಲ್ಲಿ ಕಾಂಗ್ರೆಸ್‌ನ ರಾಮಸ್ವಾಮಿ ಸಾಂಡ್ರ ಮತ್ತು ಸಂಸ್ಥಾ ಕಾಂಗ್ರೆಸ್‌ನ ವಾಲಿ ರಾಚಪ್ಪ ನಡುವೆ ಕಾಳಗ ನಡೆಯಿತು. ಸಾಂಡ್ರ 17,230 ಮತದಂತರದಿಂದ ವಾಲಿ ರಾಚಪ್ಪರನ್ನು (10,515) ಮಣಿಸಿ ಶಾಸನ ಸಭೆ ಪ್ರವೇಶಿಸಿದರು.
ರಾಯಿಸ್ಟ್ ಬೊಮ್ಮಾಯಿ
ಕ್ರಾಂತಿಕಾರಿ ಚಿಂತಕ-ಮಾನವತಾವಾದಿ ಎಮ್.ಎನ್.ರಾಯ್ ಅನುಯಾಯಿ ಎಸ್.ಆರ್.ಬೊಮ್ಮಾಯಿ (ಸದರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಂದೆ) ಕ್ವಿಟ್ ಇಂಡಿಯಾ ಹಾಗು ಕರ್ನಾಟಕ ಏಕೀಕರಣ ಚಳವಳಿ ಹೋರಾಟ, ವಕೀಲರಾಗಿ (ಭೂಸುಧಾರಣಾ ಕಾಯ್ದೆ ಬರುವ ಮೊದಲೆ) ಬಡ ಗೇಣಿದಾರನ ಪರ ನ್ಯಾಯಾಲಯದಲ್ಲಿ ಹೋರಾಟ ಮತ್ತು ಜನಪರ ರಾಜಕಾರಣಿಯಾಗಿ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಜನಜನಿತರಾಗಿದ್ದರು; ಬೆನ್ನಹಿಂದೆ ಪ್ರಬಲ ಸ್ವಜಾತಿ ಲಿಂಗಾಯತ ಸಮುದಾಯದ ಬೆಂಬಲವೂ ಇತ್ತು. ಶಿಗ್ಗಾವಿ (ಈಗಿನ ಹಾವೇರಿ ಜಿಲ್ಲೆಯಲ್ಲಿದೆ) ಮೂಲದ ಸೋಮಪ್ಪ ರಾಯಪ್ಪ ಬೊಮ್ಮಾಯಿ ಹತ್ತಿರದ ಕುಂದಗೋಳ ಕ್ಷೇತ್ರದಿಂದ 1962ರಲ್ಲಿ ಪಕ್ಷೇತರರಾಗಿ ಅಸೆಂಬ್ಲಿಗೆ ಸ್ಪರ್ಧಿಸಿ ಪರಾಜಿತರಾದರು. ಅದೇ ಕ್ಷೇತ್ರದಿಂದ 1967ರಲ್ಲಿ ಪಕ್ಷೇತರ ಶಾಸಕನಾಗಿ ಆಯ್ಕೆಯಾದ ಬೊಮ್ಮಾಯಿಯವರಿಗೆ 1972ರಲ್ಲಿ ಪುನರಾಯ್ಕೆ ಸಾಧ್ಯವಾಗಲಿಲ್ಲ. ಇಂದಿರಾ ಗಾಂಧಿ ವಿರೋಧಿ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಬೊಮ್ಮಾಯಿ 1972ರಲ್ಲಿ ವಿಧಾನ ಪರಿಷತ್ ಸದಸ್ಯರಾದರು.

1978ರ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮಾಯಿ ತಮ್ಮ ಕರ್ಮಭೂಮಿ ಹುಬ್ಬಳ್ಳಿ ಗ್ರಾಮೀಣದಿಂದ ಜನತಾ ಪಕ್ಷದ ಹುರಿಯಾಳಾಗಿ ಕಾಂಗ್ರೆಸ್‌ನ ಪ್ರಭಾವಿ ಲಿಂಗಾಯತ ಮುಂದಾಳಾಗಿದ್ದ ಎಫ್.ಎಂ.ಕಿತ್ತೂರ್‌ಗೆ ಸೆಡ್ಡು ಹೊಡೆದರು! 1978ರಲ್ಲಿ ಬಲವಾಗಿ ಬೀಸಿದ ದೇವರಾಜ ಅರಸರ ಸಾಮಾಜಿಕ ನ್ಯಾಯದ ಬಿರುಗಾಳಿಯಲ್ಲಿ ರಾಜ್ಯದಾದ್ಯಂತ ಜನತಾ ಪಕ್ಷ ಕೊಚ್ಚಿ ಹೋಯಿತಾದರೂ ಬೊಮ್ಮಾಯಿ ಮಾತ್ರ ತಮ್ಮ ವೈಯಕ್ತಿಕ ತಾಕತ್ತಿನಿಂದ ಕಾಂಗ್ರೆಸ್ ಕ್ಯಾಂಡಿಡೇಟ್ ಕಿತ್ತೂರ್(23,137)ರನ್ನು 8,634 ಮತದಿಂದ ಮಣಿಸಿ ಶಾಸನಸಭೆಗೆ ಹೋದರು. 1983ರಲ್ಲಿ ಕಾಂಗ್ರೆಸ್‌ನ ವಾಲಿ ರಾಚಪ್ಪರನ್ನು (22,341) ಸೋಲಿಸಿದ ಬೊಮ್ಮಾಯಿ (31,644) ರಾಮಕೃಷ್ಣ ಹೆಗಡೆ ರಚಿಸಿದ್ದ ಪ್ರಥಮ ಕಾಂಗ್ರೆಸ್ಸೇತರ ಸರಕಾರದಲ್ಲಿ ಮಂತ್ರಿಯೂ ಆದರು.
ಜನತಾ ಪಕ್ಷದ ಕೆಲವೇ ಕೆಲವು ಮಹತ್ವದ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ ಮಾಜಿ ಮಂತ್ರಿ ಬೊಮ್ಮಾಯಿಯವರು 1985ರ ನಡುಗಾಲ ಚುನಾವಣೆಯ ಆಖಾಡಕ್ಕೆ ಇಳಿದರು. ಕಾಂಗ್ರೆಸ್ ಗೋಪಿನಾಥ ಸಾಂಡ್ರಗೆ ಟಿಕೆಟ್ ಕೊಟ್ಟಿತು. ಆಂಧ್ರ ಪ್ರದೇಶದ ಕಮ್ಮ ಸಮುದಾಯದ ಗೋಪಿನಾಥ ಸಾಂಡ್ರಾರ ತಂದೆ ಮಾಜಿ ಶಾಸಕ ರಾಮಸ್ವಾಮಿ ಸಾಂಡ್ರ ಹುಬ್ಬಳ್ಳಿಗೆ ವಲಸೆ ಬಂದು ಟ್ರಾವೆಲ್ಸ್ ಮತ್ತು ಟ್ರಾನ್ಸ್‌ಪೋರ್ಟ್ ಉದ್ಯಮ ನಡೆಸಿಕೊಂಡಿದ್ದರು. ಗೋಪಿನಾಥ ಸಾಂಡ್ರ ಯೂತ್ ಕಾಂಗ್ರೆಸ್ ಮೂಲಕ ಬಂಗಾರಪ್ಪನಂಥ ಪ್ರಭಾವಿ ಮುಖಂಡರ ನಂಟು ಬೆಳೆಸಿಕೊಂಡಿದ್ದರು. ಹುಬ್ಬಳ್ಳಿಯಲ್ಲಿ ಯುವಕರ ಪಡೆ ಕಟ್ಟಿಕೊಂಡಿದ್ದ ಗೋಪಿನಾಥ ಸಾಂಡ್ರ ಪ್ರಬಲ ಹೋರಾಟ ನಡೆಸಿ ಬೊಮ್ಮಾಯಿಯವರ ಬೆವರಿಳಿಸಿದರು.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಧಾರವಾಡ: ಲಿಂಗಾಯತ ಏಕಸ್ವಾಮ್ಯದ ರಾಜಕಾರಣಕ್ಕೆ ಕೇಸರಿ ಖದರು!
ಈ ನಿಕಟ ಸ್ಪರ್ಧೆಯಲ್ಲಿ 32,175 ಮತ ಪಡೆದ ಬೊಮ್ಮಾಯಿ ತೀರಾ ಸಣ್ಣ ಅಂತರದಲ್ಲಿ (1,488) ಬಚಾವಾದರು. ಹೆಗಡೆ ಸರಕಾರದಲ್ಲಿ ಆಯಕಟ್ಟಿನ ಹಣಕಾಸು, ಕೈಗಾರಿಕೆಗಳಂಥ ಇಲಾಖೆಗಳ ಸಚಿವರಾಗಿದ್ದ ಬೊಮ್ಮಾಯಿಯವರಿಗೆ 1988ರಲ್ಲಿ ಮುಖ್ಯಮಂತ್ರಿಯಾಗುವ ಯೋಗವೂ ಕೂಡಿಬಂತು! ರಾಮಕೃಷ್ಣ ಹೆಗಡೆ ಭಿನ್ನಮತೀಯ ನಾಯಕ ದೇವೇಗೌಡರ ಬಣದ ವಿರೋಧದಿಂದ ಹೈರಾಣಾಗಿ ಗದ್ದುಗೆಯಿಂದ ಕೆಳಗಿಳಿಯಬೇಕಾಯಿತು. ಆಗ ಹೆಗಡೆಗೆ ನಿಷ್ಠರಾಗಿದ್ದ ಬೊಮ್ಮಾಯಿ ಸಿಎಂ ಆದರು. ಎಂಟೇ ತಿಂಗಳಲ್ಲಿ ದೇವೇಗೌಡರ ಬಳಗದ ಶಾಸಕರು ಬೊಮ್ಮಾಯಿ ಸರಕಾರಕ್ಕೆ ಬೆಂಬಲ ಹಿಂಪಡೆದರು. ರಾಜ್ಯಪಾಲ ವೆಂಕಟಸುಬ್ಬಯ್ಯ, ಬೊಮ್ಮಾಯಿ ಸರಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದರು.
ಸದನದಲ್ಲಿ ಬಹುಮತ ಪರೀಕ್ಷೆಗೆ ಅವಕಾಶ ಕೊಡದೆ ರಾಜ್ಯಪಾಲರು ಏಕಪಕ್ಷೀಯವಾಗಿ ಸರಕಾರವನ್ನು ವಜಾಮಾಡಿದ್ದು ಸಂವಿಧಾನ ವಿರೋಧಿ ಎಂಬ ಪ್ರಬಲ ಟೀಕೆಗಳು ಭುಗಿಲೆದ್ದಿತು. ಬೊಮ್ಮಾಯಿ ಪ್ರಕರಣವನ್ನು (ಎಸ್.ಆರ್.ಬೊಮ್ಮಾಯಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ) ಸುಪ್ರೀಮ್ ಕೋರ್ಟಿಗೆ ತೆಗೆದುಕೊಂಡುಹೋದರು. ರಾಜ್ಯಪಾಲರ ಕ್ರಮ ಸರಿಯಲ್ಲ; ಸಂವಿಧಾನದ 356ನೆ ವಿಧಿ ದುರ್ಬಳಕೆ ಸಲ್ಲದು. ಸದನದಲ್ಲಿ ಬಹುಮತ ಸಾಬೀತಿಗೆ ಅವಕಾಶ ಕೊಡಬೇಕಿತ್ತು ಎಂದು ಸುಪ್ರೀಮ್ ಕೋರ್ಟ್ ಹೇಳಿತು. ಎಸ್.ಆರ್.ಬೊಮ್ಮಾಯಿ ಸರ್ವೋಚ್ಚ ನ್ಯಾಯಾಲಯದ ಈ ಐತಿಹಾಸಿಕ ತೀರ್ಪಿನ ಚಾಂಪಿಯನ್ ಎಂದು ವ್ಯಾಪಕವಾಗಿ ನೆನೆಯಲಾಗುತ್ತದೆ!
1989ರ ಅಸೆಂಬ್ಲಿ ಇಲೆಕ್ಷನ್ ವೇಳೆಗೆ ರಾಮಕೃಷ್ಣ ಹೆಗಡೆ ಹಾಗು ದೇವೇಗೌಡ ಜನತಾದಳವನ್ನು ಹಿಸೆ ಮಾಡಿಕೊಂಡದ್ದರು. ಈ ದಾಯಾದಿ ಕಲಹದಲ್ಲಿ ಬೊಮ್ಮಾಯಿ ಮೂಲ ಜನತಾದಳ ಅಂದರೆ ಹೆಗಡೆ ಜತೆ ಉಳಿದರು. ಜನತಾದಳದ ಮಾಜಿ ಸಿಎಂ ಬೊಮ್ಮಾಯಿ ಮತ್ತು ಕಾಂಗ್ರೆಸ್‌ನ ಗೋಪಿನಾಥ ಸಾಂಡ್ರ ಮುಖಾಮುಖಿಯಾದರು. ಬೊಮ್ಮಾಯಿ(42,548) 3,170 ಮತದಂತರದಿಂದ ಸಾಂಡ್ರಾಗೆ ಶರಣಾಗಬೇಕಾಯಿತು. ಮೊಯ್ಲಿ ಸರಕಾರದಲ್ಲಿ ಮಂತ್ರಿಯಾಗುವ ಭಾಗ್ಯವೂ ಸಾಂಡ್ರಾರಿಗೆ ಬಂದಿತ್ತು. ಜನತಾದಳ ಒಡೆದು ಹೋಳಾಗಿದ್ದು ಮತ್ತು ಲಿಂಗಾಯತ ಸಮುದಾಯದ ಪ್ರಭಾವಿ ಮುಂದಾಳು ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಕ್ಯಾಂಡಿಡೇಟ್ ಎಂದು ಬಿಂಬಿಸಿದ್ದು ಬೊಮ್ಮಾಯಿ ಸೋಲಿಗೆ ಕಾರಣವೆಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಾರೆ. ಅಸೆಂಬ್ಲಿಗೆ ಸೋತರು ಜನತಾ ಪರಿವಾರದ ಅಧಿಕಾರ ರಾಜಕಾರಣದಲ್ಲಿ ಬೊಮ್ಮಾಯಿ ಅದೃಷ್ಟಶಾಲಿ ಎಂಬ ಮಾತೊಂದಿದೆ. 1992ರಲ್ಲಿ ಬೊಮ್ಮಾಯಿ ರಾಜ್ಯಸಭಾ ಸಂಸದರಾಗುತ್ತಾರೆ. 1996ರಲ್ಲಿ ಪ್ರಧಾನಮಂತ್ರಿ ದೇವೇಗೌಡ ತಮ್ಮ ತವರಿನ ಗೆಳೆಯ ಬೊಮ್ಮಾಯಿಯವರನ್ನು ಮಹತ್ವದ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ಮಂತ್ರಿ ಮಾಡುತ್ತಾರೆ; ದೇವೇಗೌಡ ಪದಚ್ಯುತಿಯಾಗಿ ಐ.ಕೆ.ಗುಜ್ರಾಲ್ ಪಟ್ಟವೇರಿದಾಗಲೂ ಬೊಮ್ಮಾಯಿ ಮಂತ್ರಿಗಿರಿಗೆ ಭಂಗ ಬರುವುದಿಲ್ಲ.
ಬಸು ವರ್ಸಸ್ ಶೆಟ್ಟರ್!
ಹೆಗಡೆ ಮತ್ತು ಗೌಡ ’ಅನಿವಾರ್ಯವಾಗಿ’ ಒಂದಾಗಿ 1994ರ ಚುನಾವಣಾ ಸಮರ ಸಾರುತ್ತಾರೆ. ಬೊಮ್ಮಾಯಿ ಸತತ ಮೂರು ಸಲ ಗೆದ್ದು ಒಮ್ಮೆ ಬಿದ್ದಿದ್ದ ಹುಬ್ಬಳ್ಳಿ ಗ್ರಾಮೀಣ ಆಖಾಡದಲ್ಲಿ ತಮ್ಮ ಪುತ್ರ ಬಸವರಾಜ ಬೊಮ್ಮಾಯಿಗೆ (ಹಾಲಿ ಸಿಎಂ) ಜನತಾ ದಳದ ಹುರಿಯಾಳಾಗಿಸುತ್ತಾರೆ. ಸಂಘ ಪರಿವಾರ-ಜನಸಂಘದ ಜತೆ ನಿಕಟ ನಂಟಿದ್ದ ಶೆಟ್ಟರ್ ಕುಟುಂಬದ ಕುಡಿ ಜಗದೀಶ್ ಶೆಟ್ಟರ್ ಬಿಜೆಪಿ ಟಿಕೆಟ್ ತರುತ್ತಾರೆ. ಜಗದೀಶ್ ಶೆಟ್ಟರ್ ತಂದೆ ಎಸ್.ಎಸ್.ಶೆಟ್ಟರ್ ಐದು ಬಾರಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಜನಸಂಘದ ಕಾರ್ಪೊರೇಟರ್ ಆಗಿದ್ದರೆ, ಚಿಕ್ಕಪ್ಪ ಸದಾಶಿವ ಶೆಟ್ಟರ್ ಜನಸಂಘದ ಶಾಸಕರಾಗಿದ್ದರು. ಮಂತ್ರಿ ಸಾಂಡ್ರಾ ಬದಲಿಗೆ ಕಾಂಗ್ರೆಸ್ ರಾಜಾ ದೇಸಾಯಿಗೆ ಅಭ್ಯರ್ಥಿ ಮಾಡುತ್ತದೆ. ತ್ರಿಕೋನ ಹಣಾಹಣಿ ನಡೆಯುತ್ತದೆ. ಮೊದಲ ಪ್ರಯತ್ನದಲ್ಲೆ ಬಿಜೆಪಿಯ ಜಗದೀಶ್ ಶೆಟ್ಟರ್ ಸಮೀಪ ಸ್ಪರ್ಧಿ ಬಸು ಬೊಮ್ಮಾಯಿಯವರನ್ನು (26,794) ಭರ್ಜರಿ ಅಂತರದಿಂದ (15,974) ಮಣಿಸಿ ವಿಧಾನಸಭೆಗೆ ಪ್ರವೇಶ ಪಡೆಯುತ್ತಾರೆ!

1994ರ ಚುನಾವಣೆಗೂ ಮೊದಲಿನ ಈದ್ಗಾ ಮೈದಾನ ಜಗಳ, ಬಾಬರಿ ಮಸೀದಿ ಉರುಳಿಸಿದ್ದು ಮತ್ತು ಬಿಟ್ಟೂಬಿಡದೆ ನಡೆದ ಕೋಮು ದಂಗೆಗಳು ಸಂಘ ಪರಿವಾರದ ವ್ಯವಸ್ಥಿತ ಚಟುವಟಿಕೆಯ ಹುಬ್ಬಳ್ಳಿಯಲ್ಲಿ ಮತೀಯ ಧ್ರುವೀಕರಣವನ್ನು ಸರಳಗೊಳಿಸಿತ್ತು. ಇದು ಜಗದೀಶ್ ಶೆಟ್ಟರ್‌ರವರನ್ನು ಅನಾಯಾಸವಾಗಿ ಎಮ್ಮೆಲ್ಲೆ ಮಾಡಿತು ಎಂಬ ವಿಶ್ಲೇಷಣೆಗಳು ಇವತ್ತಿಗೂ ಉತ್ತರ ಕರ್ನಾಟಕದಲ್ಲಿ ಚಾಲ್ತಿಯಲ್ಲಿದೆ. 1999ರ ಚುನಾವಣೆ ಎದುರಾಗುವ ಹೊತ್ತಿಗೆ ವಿಭಜಕ ರಾಜಕಾರಣದ ಬೇರುಗಳು ಹುಬ್ಬಳ್ಳಿಯಾದ್ಯಂತ ಆಳವಾಗಿ ಇಳಿದಿತ್ತು ಎಂದು ಎರಡೂಕಾಲು ದಶಕದ ಹಿಂದಿನ ಹಣಾಹಣಿ ಕಂಡವರು ಹೇಳುತ್ತಾರೆ. ಶಾಸಕ ಶೆಟ್ಟರ್ 1999ರಲ್ಲಿ ಬಿಜೆಪಿ ಹುರಿಯಾಳಾದರೆ, ಕಾಂಗ್ರೆಸ್ ಹಳೆ ಹುಲಿ ಗೋಪಿನಾಥ ಸಾಂಡ್ರರೆ ಪ್ರಬಲ ಕ್ಯಾಂಡಿಡೇಟೆಂದು ಬಗೆದು ಟಿಕೆಟ್ ನೀಡಿತು. ಬಸವರಾಜ ಬೊಮ್ಮಾಯಿ ಮತ್ತೆ ಸ್ಪರ್ಧಿಸುವ ಧೈರ್ಯ ಮಾಡಲಿಲ್ಲ. ಜನತಾ ದಳದಿಂದ ಎಲ್.ಎಚ್.ಹಿರೇಕೆರೂರ್ ಕಣಕ್ಕಿಳಿದರು. ಜಾತಿ ಮತ್ತು ಹಿಂದುತ್ವದ ಜಂಟಿ ಪ್ರಾಬಲ್ಯ ಶೆಟ್ಟರ್‌ದಾಯಿತು. 62,691 ಮತ ಪಡೆದ ಬಿಜೆಪಿ ಶೆಟ್ಟರ್ ಕಾಂಗ್ರೆಸ್‌ನ ಜಾತಿ ಬಲವಿಲ್ಲದ ಸಾಂಡ್ರರನ್ನು ದೊಡ್ಡ ಅಂತರದಲ್ಲಿ (25,254) ಸೋಲಿಸಿದರು.
ಯಡಿಯೂರಪ್ಪ ವರ್ಸಸ್ ಶಿವಪ್ಪ
1999ರಲ್ಲಿ ಕಾಂಗ್ರೆಸ್‌ನ ಎಸ್.ಎಂ.ಕೃಷ್ಣ ಸರಕಾರ ರಚಿಸಿದರೆ ಬಿಜೆಪಿ ಅಧಿಕೃತ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಆ ಬಾರಿ ಬಿಜೆಪಿಯ ಪರಮೋಚ್ಚ ನಾಯಕ ಯಡಿಯೂರಪ್ಪ ಶಿಕಾರಿಪುರದಲ್ಲಿ ಸೋಲನುಭವಿಸಿದ್ದರು. ಆದರೆ ಯಡಿಯೂರಪ್ಪ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದರು. ಆರಂಭದಲ್ಲಿ ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ್ದ ಯಡಿಯೂರಪ್ಪರ ಪ್ರತಿಸ್ಪರ್ಧಿಯಾಗಿದ್ದ ಬಿ.ಬಿ.ಶಿವಪ್ಪ ಸಕಲೇಶಪುರದಿಂದ ಶಾಸಕರಾಗಿದ್ದರು. ಹಿರಿಯರು-ಪ್ರಬಲ ಲಿಂಗಾಯತ ಕೋಮಿಗೆ ಸೇರಿದವರೂ ಆಗಿದ್ದ ಶಿವಪ್ಪರಿಗೆ ಸಹಜವಾಗಿಯೇ ವಿರೋಧ ಪಕ್ಷದ ನಾಯಕರಾಗುವ ಅವಕಾಶ ಎದುರಾಗಿತ್ತು. ಆದರೆ ಯಡಿಯೂರಪ್ಪರ ತಂತ್ರಗಾರಿಕೆಯಿಂದ ಸೌಮ್ಯ ಸ್ವಭಾವದ ಜಗದಿಶ್ ಶೆಟ್ಟರ್ ವಿರೋಧ ಪಕ್ಷದ ನಾಯಕತ್ವದ ಲಾಟರಿ ಹೊಡೆಯಿತು; ಶಿವಪ್ಪ ವಿರೋಧ ಪಕ್ಷದ ನಾಯಕರಾದರೆ, ಅವರು ಲಿಂಗಾಯತರಲ್ಲಿ ಮತ್ತು ರಾಜ್ಯ ಬಿಜೆಪಿಯಲ್ಲಿ ಶಕ್ತಿಶಾಲಿಯಾಗಿ ತಾನು ಮೂಲೆಗುಂಪಾಗಬೇಕಾಗುತ್ತದೆಂಬ ಎಣಿಕೆ ಯಡಿಯೂರಪ್ಪರದಾಗಿತ್ತು ಎನ್ನಲಾಗುತ್ತದೆ.
ಕಾಂಗ್ರೆಸ್ 2004ರಲ್ಲಿ ಲಿಂಗಾಯತ ಸಮುದಾಯದ ಅನಿಲ್‌ಕುಮಾರ್ ಪಾಟೀಲ್‌ರನ್ನು ಆಖಾಡಕ್ಕೆ ಇಳಿಸಿತು. ಹೀಗಾಗಿ ಬಿಜೆಪಿಯ ಜಗದೀಶ್ ಶೆಟ್ಟರ್ ಮತಗಳಿಕೆ ಇಳಿಯಿತು. ಬಿಜೆಪಿ ಸಂಸದರಾಗಿದ್ದ ವಿಜಯ್ ಸಂಕೇಶ್ವರ್ ಆ ಪಕ್ಷದ ಲೀಡರ್‌ಗಳ ಮೇಲೆ ಸೆಟಗೊಂಡು ತಮ್ಮದೆ ಕನ್ನಡ ನಾಡು ಎಂಬ ಪಕ್ಷಕಟ್ಟಿ ಹೋರಾಟಕ್ಕೆ ಧುಮುಕಿದ್ದರು. ಈ ಪ್ರತಿಷ್ಠೆಯ ಕಾಳಗದಲ್ಲಿ ಶೆಟ್ಟರ್ 58,501 ಮತ ಪಡೆದು ಗೆದ್ದರಾದರೂ ಅವರ ಎದುರಾಳಿಗಳಾದ ಕಾಂಗ್ರೆಸ್‌ನ ಅನಿಲ್ ಪಾಟೀಲ್ (31,965), ಜೆಡಿಎಸ್‌ನ ಪ್ರಪುಲ್ ಚಂದ್ರ (29,869) ಮತ್ತು ಉದ್ಯಮಿ ಸಂಕೇಶ್ವರ್ (9,479) ಪಡೆದ ಒಟ್ಟು ಓಟು ಶೆಟ್ಟರ ಪಡೆದ ಮತಗಳಿಗಿಂತ ಹೆಚ್ಚಿತ್ತು. ಇದೊಂದು ಮತೋನ್ಮತ್ತ ಫಲಿತಾಂಶ; ಕ್ಷೇತ್ರದಲ್ಲಿ ಜನಪರ-ಅಭಿವೃದ್ಧಿ ಪರ ದೂರದರ್ಶಿತ್ವವಿಲ್ಲದ ಶೆಟ್ಟರ್ ಶಾಸಕನಾಗುವುದು ಬೇಡ ಎನ್ನುವವರೆ ಜಾಸ್ತಿಯಿದ್ದಾರೆ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿತ್ತು.
2004ರಲ್ಲಿ ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾದರೆ, 2005ರಲ್ಲಿ ಶೆಟ್ಟರ್ ರಾಜ್ಯ ಬಿಜೆಪಿ ಅಧ್ಯಕ್ಷರಾದರು. ಆ ಬಳಿಕದ ಅದೃಷ್ಟದಾಟದಲ್ಲಿ ಶೆಟ್ಟರ್‌ಗೆ ಆಯಕಟ್ಟಿನ ಅಧಿಕಾರ ಒಂದರ ಹಿಂದೊಂದರಂತೆ ದಕ್ಕುತ್ತ ಹೋಯಿತು. 2006ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಶೆಟ್ಟರ್‌ರವರಿಗೆ ತೂಕದ ಕಂದಾಯ ಖಾತೆ ದೊರಕಿತು. 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಂಕ್ರಣ್ಣ ಮುನವಳ್ಳಿಯವರನ್ನು (32,738) ಸೋಲಿಸಿ ಶೆಟ್ಟರ್ (58,747) ನಾಲ್ಕನೆ ದಿಗ್ವಿಜಯ ಸಾಧಿಸಿದರು. ಆದರೆ ಆಗ ಆಪರೇಷನ್ ಕಮಲ ಕೃಪಾಪೋಷಿತ ಸರಕಾರ ರಚಿಸಿದ್ದ ಯಡಿಯೂರಪ್ಪ ಶೆಟ್ಟರ್‌ರವರನ್ನು ಮಂತ್ರಿ ಮಾಡಲಿಲ್ಲ. ಯಡಿಯೂರಪ್ಪ ಉಪಾಯದಿಂದ ಶೆಟ್ಟರ್‌ರನ್ನು ಸ್ಪೀಕರ್ ಪಟ್ಟದತ್ತ ಸಾಗಹಾಕಿದರು.
ಸಿಎಂ ಶೆಟ್ಟರ್!
ಒಲ್ಲದ ಮನಸ್ಸಿನಿಂದ ಸ್ಪೀಕರ್ ಪೀಠದಲ್ಲಿ ಕೂತಿದ್ದ ಶೆಟ್ಟರ್ ಮಂತ್ರಿಗಿರಿಗೆ ನಿರಂತರ ಪ್ರಯತ್ನ ನಡೆಸಿದ್ದರು. ಲಿಂಗಾಯತ ಲಾಬಿಗೆ ಮಣಿದರೆನ್ನಲಾದ ಯಡಿಯೂರಪ್ಪ 2009ರಲ್ಲಿ ಶೆಟ್ಟರ್‌ರವರಿಗೆ ಗ್ರಾಮೀಣಾಭಿವೃದ್ಧಿ ಮಂತ್ರಿ ಮಾಡಿದರು. ಯಡಿಯೂರಪ್ಪ ಭ್ರಷ್ಟಾಚಾರದ ಆರೋಪ ಮತ್ತು ಭಿನ್ನಮತದ ಕಾಟದಿಂದ ಸಿಎಂ ಸ್ಥಾನ ತ್ಯಜಿಸಬೇಕಾಗಿ ಬಂದಾಗ ಶೆಟ್ಟರ್ ಆ ಸ್ಥಾನಕ್ಕೆ ಏರದಂತೆ ನೋಡಿಕೊಂಡರೆಂಬ ಮಾತಿದೆ. ಯಡಿಯೂರಪ್ಪರ ಕೃಪೆಯಿಂದ ಸದಾನಂದ ಗೌಡ ಮುಖ್ಯಮಂತ್ರಿಯಾದರು. ಆದರೆ ಕೆಲವೇ ತಿಂಗಳಲ್ಲಿ ಯಡಿಯೂರಪ್ಪ-ಸದಾನಂದ ಗೌಡ ನಡುವೆ ವೈಮನಸ್ಸು ಮೂಡಿತು. ಆಗ ಯಡಿಯೂರಪ್ಪ ಶೆಟ್ಟರ್ ಮುಖ್ಯಮಂತ್ರಿ ಆಗುವಂತೆ ತಂತ್ರಗಾರಿಕೆ ನಡೆಸಿ ಸ್ವಜಾತಿ ಲಿಂಗಾಯತ ವಲಯದಲ್ಲಿ ತಮ್ಮ ಬಗೆಗೆ ಮೂಡಿದ್ದ ಅಸಮಾಧಾನವನ್ನು ಸರಿಪಡಿಸಿಕೊಂಡರೆನ್ನಲಾಗಿದೆ. ಇಂತಹ ಸಂದರ್ಭಗಳ ಒತ್ತಡದಿಂದಲೇ ಶೆಟ್ಟರ್ ನಿರಂತರವಾಗಿ ಅಧಿಕಾರ ಸ್ಥಾನಗಳನ್ನು ಪಡೆಯುತ್ತ ಹೋದರೆಂಬ ತರ್ಕ ರಾಜಕೀಯ ಪಡಸಾಲೆಯಲ್ಲಿದೆ.

2013ರ ಅಸೆಂಬ್ಲಿ ಇಲೆಕ್ಷನ್‌ನಲ್ಲಿ ಜಗದೀಶ್ ಶೆಟ್ಟರ್ (58,201) ಕಾಂಗ್ರೆಸ್‌ನ ಡಾ.ಮಹೇಶ್ ನಲವಾಡ್‌ರನ್ನು (40,447) ಸೋಲಿಸಿದರು. ಯಡಿಯೂರಪ್ಪರ ಕೆಜೆಪಿ ಬಿಜೆಪಿಯಲ್ಲಿ ವಿಲೀನವಾದಾಗ ಶೆಟ್ಟರ್‌ಗೆ ವಿರೋಧ ಪಕ್ಷದ ನಾಯಕ ಸ್ಥಾನ ಅನಾಯಾಸವಾಗಿ ದಕ್ಕಿತು. 2018ರಲ್ಲಿ ಮತ್ತೆ ಜಗದೀಶ್ ಶೆಟ್ಟರ್ ಹಾಗು ಕಾಂಗ್ರೆಸ್ ಪಕ್ಷದ ಡಾ.ಮಹೇಶ್ ನಲವಾಡ ಮಧ್ಯೆ ಜದ್ದಾಜಿದ್ದಿ ಏರ್‍ಪಟ್ಟಿತ್ತು. 21,306 ಮತದಿಂದ ಚುನಾಯಿತರಾದ ಮಾಜಿ ಸಿಎಂ ಶೆಟ್ಟರ್ (75,794) ಯಡಿಯೂರಪ್ಪನವರ ಆಪರೇಷನ್ ಕಮಲ-2 ಸರಕಾರದಲ್ಲಿ ಹಿಂಬಡ್ತಿ ಸಹಿಸಿಕೊಂಡು ಬೃಹತ್ ಕೈಗಾರಿಕಾ ಮಂತ್ರಿಯಾದರು. ಆದರೆ ಯಡಿಯೂರಪ್ಪರನ್ನು ಬಿಜೆಪಿ ಹೈಕಮಾಂಡ್ ಪದಚ್ಯುತಿಗೊಳಿಸಿ ಬಸವರಾಜ ಬೊಮ್ಮಾಯಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದಾಗ ’ಜೂನಿಯರ್ ಬಸು’ ಕೈ ಕೆಳಗೆ ಮಂತ್ರಿಯಾಗುವುದಿಲ್ಲ ಎಂದರೆನ್ನಲಾಗಿದೆ.
ಸಿಟಿಯ ಅಭಿವೃದ್ಧಿ ’ಗತಿ’!
ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ಪಕ್ಕಾ ನಗರ ಕೇಂದ್ರಿತ ಪ್ರದೇಶವಾದ್ದರಿಂದ ಸಮಸ್ಯೆಗಳು ಹೆಚ್ಚೇನಿಲ್ಲ. ಕೈಗಾರಿಕೆ-ಉದ್ಯಮ-ವ್ಯಾಪಾರದ ಮೇಲೆ ಅವಲಂಬಿಸಿ ಬದುಕು ಕಟ್ಟಿಕೊಂಡಿರುವ ಮಂದಿ ಮೂಲಸೌಕರ್ಯ ಕೇಳುತ್ತಾರಷ್ಟೆ. ಕುಡಿಯುವ ನೀರು, ರಸ್ತೆ, ಸಾರಿಗೆ, ಶಿಕ್ಷಣ, ನೈರ್ಮಲ್ಯ ಅನುಕೂಲತೆ ಸಿಟಿಯಲ್ಲಿ ಸಮರ್ಪಕವಾಗಿಲ್ಲವೆಂಬ ಕೊರಗು ಜನರದು. ರಸ್ತೆಗಳು ಕಿತ್ತುಹೋಗಿವೆ; ಟ್ಯೂಶನ್ ಮಾಫಿಯಾದ ಸುಲಿಗೆ ಹಾವಳಿಯಿಂದ ಶೈಕ್ಷಣಿಕ ವಾತಾವರಣ ಕಲುಷಿತವಾಗಿದೆ; ಖಾಸಗಿ ಶಿಕ್ಷಣ ಮಾಫಿಯಾದ ಒತ್ತಡದಿಂದ ಸರಕಾರಿ ಪಿಯು, ಪದವಿ, ತಾಂತ್ರಿಕ ಕಾಲೇಜುಗಳನ್ನು ಆಳುವವರು ತರುತ್ತಿಲ್ಲ; ನೀರಿನ ಬವಣೆಯೂ ಇದೆ. ಸೌಂದರ್ಯೀಕರಣದ ಹೆಸರಲ್ಲಿ ಕೆರೆಗಳನ್ನು ಕೋಟ್ಯಾಂತರ ರೂ.ಖರ್ಚು ಮಾಡಿ ಲೂಟಿ ಹೊಡೆಯಲಾಗಿದೆ; ರಸ್ತೆ ಅಗಲೀಕರಣದ ಹೊತ್ತಲ್ಲಿ ಬೀದಿ ವ್ಯಾಪಾರಿಗಳನ್ನು ಬೀದಿಪಾಲು ಮಾಡಲಾಗಿದೆ; ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಹೇಳಿದ್ದ ಶಾಸಕ ಶೆಟ್ಟರ್ ಈಗೇನೂ ಮಾತಾಡುತ್ತಿಲ್ಲ ಎಂಬ ಆಕ್ರೋಶ ಕ್ಷೇತ್ರದಲ್ಲಿ ಮಡುಗಟ್ಟಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮುಳಬಾಗಿಲು: ಪಕ್ಷೇತರ ಅಭ್ಯರ್ಥಿಗಳ ಪಾರುಪತ್ಯಕ್ಕೆ ಈ ಬಾರಿ ಬ್ರೇಕ್ ಬೀಳಲಿದೆಯೆ?
ಹು-ಧಾ ನಗರ ಪಾಲಿಕೆಗೆ ಬರುವ ಅನುದಾನದಲ್ಲಿ ಹುಬ್ಬಳ್ಳಿ ಭಾಗದ್ದೇ ಏಕಸ್ವಾಮ್ಯ; ಧಾರವಾಡ ಏರಿಯಾ ಅಭಿವೃದ್ಧಿಯಾಗುತ್ತಿಲ್ಲ. ನಮಗೆ ಪ್ರತ್ಯೇಕ ಪಾಲಿಕೆ ಅಥವಾ ನಗರಸಭೆಯಾದರೂ ಬೇಕೆಂಬ ಹೋರಾಟ ಧಾರವಾಡ ಕಡೆಯವರು ಮಡುತ್ತಿದ್ದಾರೆ. ತಮಾಷೆಯೆಂದರೆ, ಇತ್ತ ಹುಬ್ಬಳ್ಳಿ ಸಿಟಿಯಲ್ಲಾಗಿರುವ ಪ್ರಗತಿ ಕೂಡ ಅಷ್ಟಕ್ಕಷ್ಟೆ; ಮಂಗಳೂರು ಮಹಾನಗರದ ಪ್ರಗತಿಯ ಗತಿಗೆ ಹೋಲಿಸಿದರೆ ಹುಬ್ಬಳ್ಳಿ ಹಳ್ಳಿಯಂತಿದೆ ಅನ್ನಿಸುತ್ತದೆ ಎಂದು ಹಿರಿಯ ವರದಿಗಾರರೊಬ್ಬರು ’ನ್ಯಾಯಪಥ’ಕ್ಕೆ ತಿಳಿಸಿದರು. ಬಿಆರ್‌ಟಿಎಸ್ (ಬಸ್ ರ್‍ಯಾಪಿಡ್ ಟ್ರಾನ್ಸಿಸ್ಟ್ ಸಿಸ್‌ಸ್ಟೆಮ್) ಎಂಬ ಕ್ಷಿಪ್ರ ಸಾರಿಗೆ ಯೋಜನೆ ಶುದ್ಧ ಅವೈಜ್ಞಾನಿಕವಾದದ್ದು; ಹುಬ್ಬಳ್ಳಿ-ಧಾರವಾಡದ ನಡುವೆ ಸರಕಾರಿ ಸಾರಿಗೆ ಬಸ್, ಆಂಬುಲೆನ್ಸ್, ಸರಕಾರಿ ಮತ್ತು ಮಂತ್ರಿ ಮಹೋದಯರ ವಾಹನಗಳು ವೇಗವಾಗಿ-ಸುರಕ್ಷಿತವಾಗಿ ಓಡಾಡಲೆಂದು ಮಾಡಿರುವ ಕೋಟಿಕೋಟಿ ವ್ಯಯದ ಈ ರಸ್ತೆಯಿಂದ ಜನರಿಗೆ ಅನುಕೂಲಕ್ಕಿಂತ ತೊಂದರೆಯೆ ಜಾಸ್ತಿಯಾಗಿದೆ.
ಈ ರಸ್ತೆಯಲ್ಲಿ ಶೇ.30ರಷ್ಟು ಮಾತ್ರ ವಾಹನಗಳು ಓಡಾಡುತ್ತವೆ; ಶೇ.70ರಷ್ಟು ವಾಹನಗಳ ಓಡಾಟವಿರುವ ರಸ್ತೆಗೆ ಬಿಟ್ಟಿರುವ ಜಾಗ ತೀರಾ ಸಣ್ಣದಾಗಿದೆ. ಈ ಇಕ್ಕಟ್ಟು ಮತ್ತು ದಟ್ಟಣೆಯಲ್ಲಿ ವಾಹನ ಓಡಾಟ ಪ್ರಯಾಸಕರ; ಪಾದಚಾರಿಗಳಿಗೂ ಗಂಡಾಂತರಕಾರಿ ಎಂಬ ಆಕ್ಷೇಪ ಕೇಳಿಬರುತ್ತಿದೆ.

ಹಿಂದುತ್ವದ ತಂತ್ರಗಾರಿಕೆಯಲ್ಲಿ ನಿರಾಯಾಸವಾಗಿ ಗೆಲ್ಲುತ್ತಿರುವ ಶಾಸಕ ಜಗದೀಶ್ ಶೆಟ್ಟರ್ ಅವರಿಗೆ ಅಭಿವೃದ್ಧಿ ರಾಜಕಾರಣದ ಹಂಗಿಲ್ಲ. ಕ್ಷೇತ್ರದ ಬೇಕುಬೇಡಗಳ ಬಗ್ಗೆ ಅವರೆಂದೂ ತಲೆಕೆಡಿಸಿಕೊಂಡವರೇ ಅಲ್ಲ. ಪ್ರಭಾವಿ ಮಂತ್ರಿಗಿರಿ, ಸ್ಪೀಕರ್, ಮುಖ್ಯಮಂತ್ರಿಯಂತ ಉನ್ನತ ಸ್ಥಾನಕ್ಕೇರಿದ ಶೆಟ್ಟರ್ ಸಿಟಿಯನ್ನು ಸುವ್ಯವಸ್ಥೆ ಮಾಡಬಹುದಾದ ಹಲವು ಅವಕಾಶಗಳಿದ್ದವು; ಯಡಿಯೂರಪ್ಪರ ಶಿಕಾರಿಪುರದಲ್ಲಿ ಆಗಿರುವ ಪ್ರಗತಿಯ ಕಾಲು ಭಾಗದಷ್ಟೂ ಶೆಟ್ಟರ್ ಮಾಡಿಸಿಲ್ಲ; ನಿಧಾನಗತಿಯ ಶೆಟ್ಟರ್‌ರಿಂದ ವೇಗದ ಪ್ರಗತಿ ಸಾಧ್ಯವೇ ಇಲ್ಲ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿದೆ. ವ್ಯಾಪಾರಿ ಮನೆತನದ ಬಣಜಿಗ ಲಿಂಗಾಯತ ಶೆಟ್ಟರ್ ಮೂಲತಃ ರಿಯಲ್ ಎಸ್ಟೇಟ್ ಉದ್ಯಮಿ. ಹಾಗಾಗಿ ರಿಯಲ್ ಎಸ್ಟೇಟ್-ಬಿಲ್ಡರ್‍ಸ್ ಲಾಬಿಗೆ ಅನುಕೂಲವಾಗಿ ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿದೆ; ಶಾಸಕರು ಕಂಟ್ರಾಕ್ಟರ್‍ಸ್ ಬಳಗ ಬೆಳೆಸಿಕೊಂಡಿದ್ದಾರೆ ಎಂಬ ಆರೋಪ ಕ್ಷೇತ್ರದಲ್ಲಿದೆ.
ಶೆಟ್ಟರ್‌ಗೆ ಎದುರಾಳಿ ಯಾರು?!
ಹಲವು ಋಣಾತ್ಮಕ ಅಂಶಗಳ ನಡುವೆಯೂ ಸತತ ಆರು ಬಾರಿ ಆರಾಮಾಗಿ ಶೆಟ್ಟರ್ ಗೆದ್ದಿದ್ದಾರೆ. ಇದಕ್ಕೆರಡು ಕಾರಣಗಳನ್ನು ರಾಜಕೀಯ ವಿಶ್ಲೇಷಕರು ಗುರುತಿಸುತ್ತಾರೆ. ಒಂದು,ಹುಬ್ಬಳ್ಳಿಯಲ್ಲಿ ನೆಲೆಯಾಗಿರುವ ಮತೀಯ ಧ್ರುವೀಕರಣ. ಮತ್ತೊಂದು, ಮುಖ ಅಗಲಿಸಿ ನಗುನಗುತ್ತ ಎದುರು ಕಂಡವರ ಬೆನ್ನು ಸವರುವ ಶೆಟ್ಟರ್‌ರ ಸರಳತೆ. ಶೆಟ್ಟರ್ ಜನರ ಕೈಗೆ ಸಿಗುತ್ತಾರೆ; ಎಲ್ಲೇ ಮದುವೆ-ಮುಂಜಿ-ಪ್ರಸ್ತವಾದರೂ ಹೋಗಿ ಊಟ ಮಾಡಿಬರುತ್ತಾರೆ ನಿಜ. ಆದರೆ ಸುಮಾರು ಮೂರು ದಶಕದಿಂದ ಶೆಟ್ಟರ್‌ರ ಮಂದ ರಾಜಕಾರಣ ನೋಡಿ ಜನರಿಗೆ ಬೇಸರಬಂದಿದೆ; ಬದಲಾವಣೆಯ ಹಂಬಲವೂ ಕ್ಷೇತ್ರದಲ್ಲಿದೆ ಎಂದು ಬಿಜೆಪಿಯವರೆ ಹೇಳುತ್ತಾರೆ. ಆದರೆ ಶೆಟ್ಟರ್‌ಗೆ ಟಿಕೆಟ್ ತಪ್ಪಿಸಿ ಕ್ಯಾಂಡಿಡೇಟಾಗುವ ಪರ್ಯಾಯ ನಾಯಕತ್ವ ಸ್ಥಳೀಯ ಬಿಜೆಪಿಯಲ್ಲಿ ಬೆಳೆದಿಲ್ಲ; ಆದರೂ ಬಿಜೆಪಿ ಹೊಸಬರಿಗೆ ಟಿಕೆಟ್ ಕೊಡಲು ಯೋಚಿಸುತ್ತಿದೆ. ಕಾಂಗ್ರೆಸ್ ಇನ್ನ ಈ ಕ್ಷೇತ್ರಕ್ಕೆ ಅಭ್ಯರ್ಥಿ ಫೈನಲ್ ಮಾಡಿಲ್ಲ.
ಆದರೆ ಶೆಟ್ಟರ್‌ಗೆ ಆಂಟಿ ಇನ್‌ಕಂಬೆನ್ಸ್ ಭಯವೂ ಇದೆ; ಶೆಟ್ಟರ್ ನಿವೃತ್ತರಾದರೆ ತನಗೆ ಅಭ್ಯರ್ಥಿ ಮಾಡಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಬೇಡಿಕೆ ಇಟ್ಟಿದ್ದಾರಂತೆ. ಶೆಟ್ಟರ್ ವಿರುದ್ಧ ಸೋತವರೆಲ್ಲ ಬಿಜೆಪಿ ಸೇರುತ್ತಾರೆಂಬ ಮಾತೊಂದು ಹುಬ್ಬಳ್ಳಿ ಸಿಟಿಯಲ್ಲಿ ಚಾಲ್ತಿಯಲ್ಲಿದೆ.
ಈಗಿನ ಸಿಎಂ ಬಸವರಾಜ ಬೊಮ್ಮಾಯಿ, ಶೆಟ್ಟರ್ ಎದುರು ಪರಾಭವಗೊಂಡ ಬಳಿಕ ಬಿಜೆಪಿ ಸೇರಿಕೊಂಡರು. ಹಿಂದಿನ ಎರಡು ಇಲೆಕ್ಷನ್‌ನಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದ ಡಾ.ಮಹೇಶ್ ನಲವಾಡ್ ಈಗ ಬಿಜೆಪಿಯಲ್ಲಿದ್ದಾರೆ. ರಜತ್ ಉಳ್ಳಾಗಡ್ಡಿಮಠ, ಉದ್ಯಮಿ ಗಿರೀಶ್ ಗದಿಗೆಪ್ಪ ಗೌಡ ಮತ್ತು ಕಾಂಗ್ರೆಸ್‌ನ ನಗರ ಘಟಕದ ಮಾಜಿ ಅಧ್ಯಕ್ಷ ಅನಿಲ್‌ಕುಮಾರ್ ಹೆಸರು ಅಭ್ಯರ್ಥಿತನಕ್ಕೆ ಕಾಂಗ್ರೆಸ್‌ನಿಂದ ಕೇಳಿಬರುತ್ತಿದೆ.
ಈ ಮೂರು ಟಿಕೆಟ್ ಆಕಾಂಕ್ಷಿಗಳಲ್ಲಿ ರಜತ್ ಉಳ್ಳಾಗಡ್ಡಿಮಠ ಲಕ್ಷಾಂತರ ರೂಪಾಯಿ ದಾನ-ಧರ್ಮ, ಕೋವಿಡ್ ಸಂದರ್ಭದ ನೆರವು ಕಾರ್ಯವೆ ಮುಂತಾದ ಧನಾಧಾರಿತ ರಾಜಕಾರಣದಿಂದ ಹೆಚ್ಚು ಪ್ರಚಾರದಲ್ಲಿದ್ದಾರೆ. ಬೆಳಗಾವಿ ಶಾಸಕಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಪ್ತವಲಯದ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯನಾಗಿರುವ (ಸಹೋದರಿ ಮಗಳ ಗಂಡ) ರಜತ್‌ಗೆ ರಾಜಕೀಯ ಹಿನ್ನೆಲೆಯೂ ಇದೆ. ರಜತ್ ತಂದೆ ವಿಶ್ವಪ್ರಸಾದ್ ಉಳ್ಳಾಗಡ್ಡಿಮಠ್ ಹಿಂದೊಮ್ಮೆ ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಲನುಭವಿಸಿದ್ದರು. ತಾನೆ ಕಾಂಗ್ರೆಸ್ ಹುರಿಯಾಳೆಂದು ಬಿಂಬಿಸಿಕೊಳ್ಳುತ್ತಿರುವ ರಜತ್‌ಗೆ ಅವಕಾಶ ಸಿಕ್ಕುವ ಸಾಧ್ಯತೆ ಹೆಚ್ಚು; ಸೋತರೂ ಪರವಾಗಿಲ್ಲ, ಮುಂದೆ ಕಾಂಗ್ರೆಸ್‌ನಲ್ಲಿ ಪ್ರವರ್ಧಮಾನಕ್ಕೆ ಬರಬಹುದೆಂಬ ಎಣಿಕೆ ಅತ್ತೆ-ಅಳಿಯನದಾಗಿದೆ ಎನ್ನಲಾಗಿದೆ. ಹಿಂದೆರಡು ಬಾರಿ ವಿಫಲರಾಗಿರುವ ರಾಜಣ್ಣ ಕೊರವಿ ಮತ್ತು ತಬ್ರೇಜ್ ಸಂಶಿ ಜೆಡಿಎಸ್ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರಂತೆ.
ಹಿಂದುತ್ವ ಮಂದವಾಗಿ ಬೇಸರವಾಗಿರವ ಶೆಟ್ಟರ್‌ರನ್ನು ಲಿಂಗಾಯತರು ಬದಲಿಸಬಹುದೆ? ಮತೀಯ ಧ್ರುವೀಕರಣ ಬೇಡದ ಶೆಟ್ಟರ್‌ರನ್ನು ಮತ್ತೆ ವಿಧಾನಸಭೆಯತ್ತ ತೇಲಿಸುವುದೆ? ಎಂಬ ಚರ್ಚೆ ಕ್ಷೇತ್ರದಲ್ಲಿ ನಡೆದಿದೆ.
ಇದನ್ನೂ ಓದಿ: ಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಸಮೀಕ್ಷೆ ಹೀಗಿದೆ..


