Homeಮುಖಪುಟಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಸಮೀಕ್ಷೆ ಹೀಗಿದೆ..

ಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಸಮೀಕ್ಷೆ ಹೀಗಿದೆ..

ಈ ನಡುವೆ ಲಿಂಗಾಯತರ ಅನುಕಂಪ ಪಡೆದಿರುವ ಆಯನೂರು ಮಂಜುನಾಥರನ್ನು ಬಿಜೆಪಿಯಿಂದ ಕರೆತಂದು ಅಖಾಡಕ್ಕಿಸುವ ಪ್ರಯತ್ನ ಕಾಂಗ್ರೆಸ್‌ನ ಒಂದು ಒಂದು ವರ್ಗ ಮಾಡುತ್ತಿದೆ.

- Advertisement -
- Advertisement -

ಕರ್ನಾಟಕ ಬಿಜೆಪಿಯ ಹಿರಿಯ ನಾಯಕ, 40% ಕಮಿಷನ್ ಆರೋಪದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಕೆ.ಎಸ್.ಈಶ್ವರಪ್ಪನವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆಯುವ ಮೂಲಕ ಸ್ವ-ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಲು ಬಯಸಿದ್ದೇನೆ” ಎಂದು ಘೋಷಿಸಿದ್ದಾರೆ. ಈಶ್ವರಪ್ಪ ಅವರು ತಮ್ಮ ಪುತ್ರ ಕೆ.ಇ.ಕಾಂತೇಶ್‌ಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದು ಈ ಹಿನ್ನಲೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಸ್ಥಿತಿಗತಿ ಹೀಗಿದೆ..

2007ರ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ಸ್ಥಳೀಯ ಮಹಾನಗರ ಪಾಲಿಕೆಯ 25 ವಾರ್ಡುಗಳಲ್ಲಿ 23ನ್ನು ಸೇರಿಸಿ ಶಿವಮೊಗ್ಗ (ನಗರ) ಕ್ಷೇತ್ರ ರಚಿಸಲಾಗಿದೆ. ಪೊಲೀಸ್ ಫೈಲ್‌ನಲ್ಲಿ ’ಕೋಮು ಸೂಕ್ಷ್ಮ ಪ್ರದೇಶ’ ಎಂದು ನಮೂದಾಗಿರುವ ಶಿವಮೊಗ್ಗ ಹಿಂದುತ್ವದ ಎರಡನೆ ಪ್ರಯೋಗ ಶಾಲೆಯಾಗಿದೆ ಎಂಬ ಆತಂಕ ಜನರಲ್ಲಿ ವ್ಯಾಪಕವಾಗಿದೆ.

ರಾಜ್ಯದ ದಕ್ಷಿಣ ಕನ್ನಡ ಬಿಟ್ಟರೆ ಆರ್‌ಎಸ್‌ಎಸ್‌ನ ಹಿಡನ್ ಅಜೆಂಡಾ ಹೆಚ್ಚು ಬಳಕೆಯಾಗುವುದು ಶಿವಮೊಗ್ಗದಲ್ಲಿ; ಹಿಂದು ಮತ್ತು ಮುಸ್ಲಿಮ್ ಫ್ರಿಂಜ್ ಪಡೆಗಳು ರಹಸ್ಯ ಕಾರ್ಯಾಚರಣೆ ನಡೆಸುವುದರಿಂದ ಈ ವಾಣಿಜ್ಯ ನಗರ ಆಗಾಗ ಕೋಮು ಕಲಹ-ಕೊಲೆಯಂಥ ಕ್ರೂರ ಕಾರಣಕ್ಕೆ ಸುದ್ದಿಯಾಗುತ್ತಿರುತ್ತದೆ; ಮುಸ್ಲಿಮರ ನಂತರ ಬ್ರಾಹ್ಮಣ ಬಾಹುಳ್ಯ ಹೆಚ್ಚಾಗಿರುವ ಶಿವಮೊಗ್ಗದಲ್ಲಿ ಲಾಗಾಯ್ತಿನಿಂದ ಹಿಂದೂ ಮಹಾಸಭಾ, ಆರ್‌ಎಸ್‌ಎಸ್, ಜನ ಸಂಘದ ಚಟುವಟಿಕೆ ನಾಜೂಕಾಗಿ ನಡೆಯುತ್ತಿದೆಯಾದರೂ ಇದು ಸಮ ಸಮಾಜ ನಿರ್ಮಾಣ ಆಶಯದ ಗಾಂಧಿವಾದಿ-ಸಮಾಜವಾದಿಗಳ ಕಾರ್ಯಕ್ಷೇತ್ರವಾಗಿತ್ತು; ಬಾಬರಿ ಮಸೀದಿ ಧ್ವಂಸದ ಬಳಿಕ ಶಿವಮೊಗ್ಗ ಈಶ್ವರಪ್ಪನಂಥ ಉಗ್ರ ಕೋಮು ಪ್ರಚೋದಕ ಮಾತುಗಾರ ಎಮ್ಮೆಲ್ಲೆಯ ಮತ್ತು ವ್ಯಗ್ರ ಗುಂಪು ದಾಳಿಕೋರರ ಆಡೊಂಬಲವಾಗಿರುವುದು ದಿಗಿಲು ಮೂಡಿಸುತ್ತದೆಂದು ಸಾಮಾಜಿಕ ಕಾರ್ಯಕರ್ತರೊಬ್ಬರು ’ನ್ಯಾಯಪಥ’ಕ್ಕೆ ತಿಳಿಸಿದರು.

ಅಡಿಕೆ ಆಧಾರಿತ ಆರ್ಥಿಕತೆ!

ರಾಜ್ಯದ ಪ್ರಮುಖ ವ್ಯಾಪಾರೋದ್ಯಮ ಮಹಾನಗರ ಎನಿಸಿರುವ ಶಿವಮೊಗ್ಗದ ಆರ್ಥಿಕತೆಯ ಜೀವ ಜೀವಾಳ ಅಡಿಕೆ ವಹಿವಾಟು. ಮಲೆನಾಡಿನಲ್ಲಿ ಬೆಳೆಯುವ ಲಕ್ಷಾಂತರ ಟನ್ ಅಡಿಕೆಯ ಕ್ರಯ-ವಿಕ್ರಯದ ಬೃಹತ್ ಮಾರುಕಟ್ಟೆ ಶಿವಮೊಗ್ಗ ನಗರ! ಇಲ್ಲಿ ಸುಮಾರು ಒಂದೂಕಾಲು ಸಾವಿರ ಅಡಿಕೆ ವ್ಯಾಪಾರದ ಮಂಡಿಗಳಿವೆ ಎಂದು ಅಂದಾಜಿಸಲಾಗಿದೆ. ಎಪಿಎಂಸಿ, ಮ್ಯಾಮ್ಕೊಸ್‌ನಂಥ ಕೋಟ್ಯಂತರ ರೂ. ಅಡಿಕೆ ವಹಿವಾಟು ಮಾಡುವ ಸಹಕಾರ ಸಂಸ್ಥೆಗಳಿವೆ. ಅಡಿಕೆ ಸುತ್ತ ಶಿವಮೊಗ್ಗದ ಆರ್ಥಿಕ ವಲಯ ಸೃಷ್ಟಿಯಾಗಿದೆ. ಒಂದು ಕಾಲದಲ್ಲಿ ಭತ್ತ ಅತಿ ಹೆಚ್ಚು ಬೆಳೆಯುತ್ತಿದ್ದ ಶಿವಮೊಗ್ಗ ಜಿಲ್ಲೆಯನ್ನು ’ಅನ್ನದ ಬಟ್ಟಲು’ ಎನ್ನಲಾಗುತ್ತಿತ್ತು. ಆದರೆ ಇತ್ತೀಚಿನ ದಶಕದಲ್ಲಿ ಭತ್ತದ ಗದ್ದೆಗಳನ್ನು ವಾಣಿಜ್ಯ ಬೆಳೆಯಾದ ಅಡಿಕೆಯ ತೋಟಗಳು ಆಕ್ರಮಿಸುತ್ತಿವೆ. ಹೀಗಾಗಿ ಅಡಿಕೆ ವ್ಯಾಪಾರ ಶಿವಮೊಗ್ಗದ ಆರ್ಥಿಕ ಮಾರುಕಟ್ಟೆಯ ಏರಿಳಿತ ಅವಲಂಬಿಸಿದೆ. ಏನಿಲ್ಲದಿದ್ದರೂ ನಡೆದೀತು; ಅಡಿಕೆ ಒಂದಿಲ್ಲದಿದ್ದರೆ ಶಿವಮೊಗ್ಗಕ್ಕೆ ಅಸ್ತಿತ್ವವೇ ಇಲ್ಲ ಎಂಬ ಅಭಿಪ್ರಾಯ ಆರ್ಥಿಕ ತಜ್ಞರದಾಗಿದೆ. ಜತೆಗೆ ಕಾಳು ಮೆಣಸು, ಏಲಕ್ಕಿ, ಜಾಯಿಕಾಯಿಯಂಥ ಆರ್ಥಿಕ-ಸಾಂಬಾರ ಬೆಳೆಗಳ ಮಹತ್ವದ ಮಾರುಕಟ್ಟೆಯೂ ಶಿವಮೊಗ್ಗ. ಈಗಿತ್ತಲಾಗಿ ಶುಂಠಿ ವ್ಯಾಪಾರ ಜೋರಾಗಿದ್ದು ಶಿವಮೊಗ್ಗದ ಆರ್ಥಿಕತೆಯ ಗ್ರಾಫ್ ಏರಿಸಿದೆ ಎಂಬ ಮಾತು ಕೇಳಿಬರುತ್ತಿದೆ.

ಶಿವಮೊಗ್ಗ ವಾಣಿಜ್ಯ, ವಿದ್ಯೆ ಮತ್ತು ವೈದ್ಯಕೀಯ ವ್ಯವಹಾರದ ನಗರ. ಇಲ್ಲಿ ಎರಡು ಮೆಡಿಕಲ್, ಎರಡು ಇಂಜಿನಿಯರಿಂಗ್, ಒಂದು ಡೆಂಟಲ್ ಕಾಲೇಜು ಮತ್ತಿತರ ವೃತ್ತಿಪರ ಕೋರ್ಸ್‌ಗಳ ಶೈಕ್ಷಣಿಕ ಸಂಸ್ಥೆಗಳಿವೆ. ಯಡಿಯೂರಪ್ಪ ಮತ್ತು ಈಶ್ವರಪ್ಪ ಪೈಪೋಟಿಗೆ ಬಿದ್ದು ಕ್ಯಾಪಿಟೇಷನ್-ಡೊನೇಷನ್ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿದ್ದಾರೆ; ಯಡಿಯೂರಪ್ಪ ಉಪಮುಖ್ಯಮಂತ್ರಿಯಾದಾಗ ಶಿವಮೊಗ್ಗದ ಭೂಮಿಗೆ ಚಿನ್ನಕ್ಕಿಂತ ಹೆಚ್ಚು ರೇಟು ಬಂದು ಅಕ್ರಮ ಭೂದಂಧೆ ಚಿಗಿತುಕೊಂಡಿತು; ಈಶ್ವರಪ್ಪ ಉಪಮುಖ್ಯಮಂತ್ರಿಯಾದಾಗ ಬಿಲ್ಡರ್‍ಸ್, ರಿಯಲ್ ಎಸ್ಟೇಟ್ ಮಾಫಿಯಾ ಹಾವಳಿ ಹಚ್ಚಾಯಿತು. ಇದರಿಂದ ಯಡಿಯೂರಪ್ಪ ಮತ್ತು ಈಶ್ವರಪ್ಪ ಕುಟುಂಬದ ವಾಣಿಜ್ಯ ಸಾಮ್ರಾಜ್ಯ ವಿಸ್ತಾರ ಆಯಿತೆ ವಿನಃ ನಿರುದ್ಯೋಗಿಗಳಿಗೇನೂ ಅನುಕೂಲವಾಗಲಿಲ್ಲ. ಯಡಿಯೂರಪ್ಪರ ಮಗ ಸಂಸದ ರಾಘವೇಂದ್ರ ಮತ್ತು ಈಶ್ವರಪ್ಪರ ಪುತ್ರ ಜಿಪಂ ಸದಸ್ಯ ಕಾಂತೇಶ್ ರಿಯಲ್ ಎಸ್ಟೇಟ್ ಧಣಿಗಳಾಗಿದ್ದಾರೆ ಎಂಬದು ಟಾಕ್ ಆಫ್ ದಿ ಟೌನ್.

ಕೇವಲ 20 ಕಿಮೀ. ದೂರದ ಭದ್ರಾವತಿಯಲ್ಲಿದ್ದ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಕಾಗದ ಕಾರ್ಖಾನೆ, ಸಕ್ಕರೆ ಕಾರ್ಖಾನೆ ಮತ್ತಿತರ ಕೈಗಾರಿಕೆಗಳಿಂದ ಸೃಷ್ಟಿಯಾಗುತ್ತಿದ್ದ ಆರ್ಥಿಕ ಸಂಪನ್ಮೂಲ ನೇರವಾಗಿ ಶಿವಮೊಗ್ಗ ಮಾರುಕಟ್ಟೆಯನ್ನು ಪ್ರಭಾವಿಸುತ್ತಿತ್ತು. ಈ ಕೈಗಾರಿಕೆಗಳು ಈಗ ಒಂದೊಂದಾಗಿ ಮುಚ್ಚಿರುವುದರಿಂದ ಶಿವಮೊಗ್ಗದ ಆರ್ಥಿಕತೆಯಲ್ಲಿ ಹಿಂಜರಿತ ಆಗಿದೆ ಎನ್ನಲಾಗುತ್ತಿದೆ. ಏಷ್ಯಾದಲ್ಲೆ ಹೆಸರುವಾಸಿಯಾದ ಫೌಂಡ್ರಿ ಅಟೋಮೊಬೈಲ್ ಪಾರ್ಕ್ ಮತ್ತು ಗಾರ್ಮೆಂಟ್ ಉದ್ಯಮ, ಸಣ್ಣ-ಪುಟ್ಟ ಕೈಗಾರಿಕೆಗಳು ಇವೆಯಾದರೂ ಅಲ್ಲೆಲ್ಲ ಸೀಮಿತ ಉದ್ಯೋಗಾವಕಾಶ. ವಿಮಾನ ನಿಲ್ದಾಣ ಮರೀಚಿಕೆಯಂತಾಗಿದೆ ಎಂದು ಶಿವಮೊಗ್ಗದ ಮಂದಿ ಬೇಸರಿಸುತ್ತಾರೆ.

ಕ್ಷೇತ್ರ ಆಕಾರ

ಶಿವಮೊಗ್ಗ ವಿಧಾನಸಭಾ ಕ್ಷೇತ್ರ ಧರ್ಮ ದಂಗಲ್ ಅಖಾಡ! ಅಸಂಸದೀಯ ಮಾತುಗಾರಿಕೆ ಮತ್ತು ಅತಿರೇಕದ ಹಿಂದುತ್ವದ ಭಾಷಣಗಳಿಂದ ರಾಜ್ಯ ಬಿಜೆಪಿಯ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗುತ್ತಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕಳೆದೆರಡು ದಶಕದಿಂದ ಕೇಸರಿ ಶಾಲು ಮತ್ತು ಕಡು ಕೆಂಪು ಕುಂಕುಮಾಂಕಿತರನ್ನು ಮುಂದಿಟ್ಟುಕೊಂಡು ಹಿಂದುತ್ವದ ರಾಜಕಾರಣ ಮಾಡುತ್ತಿದ್ದಾರೆಂಬ ಮಾತು ಶಿವಮೊಗ್ಗದಲ್ಲಿ ಸಾಮಾನ್ಯವಾಗಿದೆ. ಈಶ್ವರಪ್ಪರ ಚುನಾವಣಾ ಸಮರವೆಂದರೆ ಅಭಿವೃದ್ಧಿಯ ಹಂಗು ಅಥವಾ ಮನುಷ್ಯತ್ವದ ಮುಲಾಜಿಲ್ಲದ ಕಟ್ಟರ್ ವಿಭಜಕ ತಂತ್ರಗಾರಿಕೆ. ಈಶ್ವರಪ್ಪ ಶಾಸಕತ್ವದ ಹೊಣೆಗಾರಿಕೆ ಅದೆಷ್ಟು ನಿಭಾಯಿಸಿದ್ದಾರೆ ಅಥವಾ ಕೈಬಾಯಿ ಅದೆಷ್ಟು ಶುದ್ಧವಾಗಿಟ್ಟುಕೊಂಡಿದ್ದಾರೆ ಎಂಬುದು ಶಿವಮೊಗ್ಗದ ಇಲೆಕ್ಷನ್‌ನಲ್ಲಿ ಗಣನೆಗೆ ಬರುತ್ತಿಲ್ಲ; ಈಶ್ವರಪ್ಪ ಮುಸ್ಲಿಮರನ್ನು ಯಾವ ಮಟ್ಟದಲ್ಲಿ ಮೂದಲಿಸಿ ಹಿಂದುತ್ವದ ಕಾಲಾಳುಗಳನ್ನು ಪ್ರಚೋದಿಸುತ್ತಾರೆ ಎಂಬುದಷ್ಟೇ ಮುಖ್ಯವಾಗುತ್ತಿರುವುದು ಶಿವಮೊಗ್ಗದ ಘೋರ ದುರಂತ ಎಂದು ಪ್ರಜ್ಞಾವಂತರು ಆತಂಕಪಡುತ್ತಾರೆ!

ಶಿವಮೊಗ್ಗ (ಶಿವಮೊಗ್ಗ ನಗರ) ವಿಧಾನಸಭಾ ಕ್ಷೇತ್ರ ಬ್ರಾಹ್ಮಣರ ಹಿಡಿತದಲ್ಲಿದೆ ಎಂಬ ವಿಶ್ಲೇಷಣೆಗಳು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿದೆ. 1957ರಿಂದ 2018ರ ತನಕದ 14 ಚುನಾವಣೆಯಲ್ಲಿ 8 ಬಾರಿ ಬ್ರಾಹ್ಮಣರೇ ಶಾಸಕರಾಗಿದ್ದಾರೆ. ಶಿವಮೊಗ್ಗ ನಗರ 1985 ಚುನಾವಣೆ ತನಕ ಒಂಥರಾ ಬ್ರಾಹ್ಮಣ ಮೀಸಲು ಕ್ಷೇತ್ರದಂತಾಗಿತ್ತು. ಒಟ್ಟು 2,56,373 ಮತದಾರರಿರುವ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮರು 58 ಸಾವಿರ, ಎಸ್‌ಸಿ ಮತ್ತು ಎಸ್‌ಟಿ 50 ಸಾವಿರ, ಬ್ರಾಹ್ಮಣರು 41 ಸಾವಿರ, ಲಿಂಗಾಯತರು 32 ಸಾವಿರ, ಕುರುಬರು 14 ಸಾವಿರ, ಮರಾಠರು ಮತ್ತು ಒಕ್ಕಲಿಗರು ತಲಾ 13 ಸಾವಿರ, ಕ್ರೈಸ್ತರು ಹಾಗು ತಮಿಳರು ತಲಾ 11 ಸಾವಿರ ಗಣನೀಯ ಸಂಖ್ಯೆಯಲ್ಲಿರುವ ಸಮುದಾಯಗಳು ಎಂದು ಅಂದಾಜಿಸಲಾಗಿದೆ.

ಈಶ್ವರಪ್ಪ ರಂಗಪ್ರವೇಶ!

1980ರ ದಶಕದ ಅಂತ್ಯದಲ್ಲಿ ಶಿವಮೊಗ್ಗ ನಗರದಲ್ಲಿ ಮತೀಯ ರಾಜಕಾರಣದ ದಾಳಗಳು ನಾಜೂಕಾಗಿ ಉರುಳತೊಡಗಿದ್ದವು; ಅದೇ ಹೊತ್ತಿಗೆ ಬೆಂಗಳೂರಿನ ಕೇಶವಕೃಪಾದಲ್ಲಿ ಆಶ್ರಯದಾತರನ್ನು ಕಂಡುಕೊಂಡಿದ್ದ ಶಿವಮೊಗ್ಗ ನಗರದ ಆರ್‌ಎಸ್‌ಎಸ್ ಕಟ್ಟಾಳು ಕೆ.ಎಸ್.ಈಶ್ವರಪ್ಪ ಸ್ಥಳೀಯ ಬಿಜೆಪಿಯಲ್ಲಿ ಮುನ್ನಲೆಗೆ ಬರಲಾರಂಭಿಸಿದ್ದರು ಎನ್ನಲಾಗಿದೆ. ರಾಜ್ಯ ಬಿಜೆಪಿಯಲ್ಲಿ ಪ್ರಭಾವಿಯಾಗಿದ್ದ ಯಡಿಯೂರಪ್ಪರಿಗೆ ನಿಷ್ಟರಾಗಿದ್ದ ಕುರುಬ ಜನಾಂಗದ ಈಶ್ವರಪ್ಪರಿಗೆ 1989ರ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಲಾಯಿತು; ಶಾಸಕ ಕೆ.ಎಚ್.ಶ್ರೀನಿವಾಸ್ ಕಾಂಗ್ರೆಸ್ ಕ್ಯಾಂಡಿಡೇಟಾದರೆ, ಜೆಡಿಎಸ್ ಮುಸ್ಲಿಮ್ ಜನಾಂಗದ ಎ.ಪಿ.ಅನ್ವರ್‌ರನ್ನು ಸ್ಪರ್ಧೆಗಿಳಿಸಿತು. ಸಂಘ ಪರಿವಾರದ ಮತೀಯ ಧ್ರುವೀಕರಣ ತಂತ್ರಗಾರಿಕೆ ಒಂಚೂರು ವರ್ಕ್‌ಔಟ್ ಆಗಿತ್ತು. ಆದರೆ ಅಕ್ಕಿಂತ ಹೆಚ್ಚಾಗಿ ಜೆಡಿಎಸ್ (16,439) ಮತ್ತು ಕಾಂಗ್ರೆಸ್ (30,987) ನಡುವೆ ಮುಸ್ಲಿಮ್ ಮತಗಳು ಪಾಲಾಗಿದ್ದರಿಂದ ಬಿಜೆಪಿಗೆ (32,289) ಲಾಭವಾಯಿತು ಎನ್ನುವುದು ಆ ಚುನಾವಣೆಯ ಅಂಕಿ-ಅಂಶದ ಮೇಲೆ ಕಣ್ಣಾಡಿಸಿದರೆ ಅರ್ಥವಾಗುತ್ತದೆ. 1,302 ಮತಗಳಿಂದ ಅಚಾನಕ್ ಶಾಸಕನಾಗಿದ್ದು ಖುದ್ದು ಈಶ್ವರಪ್ಪನವರೇ ಬೆಚ್ಚಿಬೀಳುವ ಅಚ್ಚರಿಯ ಫಲಿತಾಂಶ ಆಗಿತ್ತೆಂದು ಚುನಾವಣಾ ಪಂಡಿತರು ತರ್ಕಿಸುತ್ತಾರೆ.

ಕಾಂತೇಶ್ಬಾಬರಿ ಮಸೀದಿ ಪತನದ ಬಳಿಕ ಶಿವಮೊಗ್ಗ ನಗರ ಮತೋನ್ಮತ್ತಗೊಂಡಿದ್ದರಿಂದ 1994ರ ಇಲೆಕ್ಷನ್ ಹೋರಾಟ ಬಿಜೆಪಿ ಶಾಸಕ ಈಶ್ವರಪ್ಪರಿಗೆ ಸುಲಭವಾಯಿತು ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತದೆ. ಕಾಂಗ್ರೆಸ್‌ನ ಕೆ.ಎಚ್.ಶ್ರೀನಿವಾಸ್‌ರಿಗೆ ಸ್ವಜಾತಿ ಬ್ರಾಹ್ಮಣರ ಮತಗಳು ನಿರೀಕ್ಷಿತ ಪ್ರಮಾಣದಲ್ಲಿ ಬರಲಿಲ್ಲ; ಬ್ರಾಹ್ಮಣರು ಕೇಸರೀಕರಣದತ್ತ ಒಲವು ಹೊಂದಿದ್ದೇ ’ಅರ್ಹ ಜನ ಪ್ರತಿನಿಧಿ’ಯಾಗುವ ಸಕಲ ಗುಣಲಕ್ಷಣವಿದ್ದ ಸಂಯಮದ ಶ್ರೀನಿವಾಸ್ (41,219), 16,166 ಮತಗಳ ದೊಡ್ಡ ಅಂತರದಲ್ಲಿ ಸೋತು ’ವಿಕ್ಷಿಪ್ತ’ ಈಶ್ವರಪ್ಪ ನಿರಾಯಾಸವಾಗಿ ಮತ್ತೆ ಎಮ್ಮೆಲ್ಲೆಯಾಗಿದ್ದು ಶಿವಮೊಗ್ಗದ ದುರಂತವೆಂದು ಹಿರಿಯ ಪತ್ರಕರ್ತರೊಬ್ಬರು ’ನ್ಯಾಯಪಥ’ಕ್ಕೆ ಹೇಳಿದರು!

1999ರಲ್ಲಿ ಅಸೆಂಬ್ಲಿ ಹಾಗು ಪಾರ್ಲಿಮೆಂಟ್ ಚುನಾವಣೆ ಏಕಕಾಲಕ್ಕೆ ಎದುರಾಗಿತ್ತು. ಬಂಗಾರಪ್ಪ ಕಾಂಗ್ರೆಸ್‌ನಲ್ಲಿ ತಮ್ಮ ಕೆಸಿಪಿ ವಿಲೀನಗೊಳಿಸಿ ಪಾರ್ಲಿಮೆಂಟಿಗೆ ಸ್ಪರ್ಧಿಸಿದರು. ಶಿವಮೊಗ್ಗ ನಗರದಲ್ಲಿ ಹೆಚ್ಚು ಮತ ತಾನು ಪಡೆಯುವುದರೊಂದಿಗೆ ಅಲ್ಲಿ ಕಾಂಗ್ರೆಸ್ ಶಾಸಕನನ್ನು ತಯಾರು ಮಾಡಲು ಬಂಗಾರಪ್ಪ ಹೊಸ ಸ್ಟ್ರಾಟರ್ಜಿ ಹೆಣೆದರು. ಬ್ರಾಹ್ಮಣರ ಬದಲಿಗೆ ಲಿಂಗಾಯತ ಕೋಮಿನ ಎಚ್.ಎಂ.ಚಂದ್ರಶೇಖರಪ್ಪರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದರು. ಬಿಜೆಪಿ ಅಭ್ಯರ್ಥಿ ಈಶ್ವರಪ್ಪರ ಹಿಂದುತ್ವದ ಲೆಕ್ಕಾಚಾರ ಉಲ್ಟಾ ಹೊಡೆಯಿತು. ಕ್ಷೇತ್ರದಲ್ಲಿ ಮೂರನೆ ಬಹುಸಂಖ್ಯಾತರಾದ ಲಿಂಗಾಯತರು ಕಾಂಗ್ರೆಸ್‌ನ ಚಂದ್ರಶೇಖರಪ್ಪರನ್ನು ಇಡಿಯಾಗಿ ಬೆಂಬಲಿಸಿದರು. ಬಿಜೆಪಿಯ ಈಶ್ವರಪ್ಪ(52,916), 6,574 ಮತಗಳಿಂದ ಸೋಲು ಅನುಭವಿಸಬೇಕಾಗಿಬಂತು. ಶಾಸಕನಾಗಲು ವಿಫಲನಾದರೂ ಸಂಘ ಸರದಾರರ ನಿಷ್ಠಾವಂತರಾದ ಈಶ್ವರಪ್ಪನವರಿಗೆ ಅಂದು ಕೇಂದ್ರದಲ್ಲಿದ್ದ ಎನ್‌ಡಿಎ ಸರಕಾರ ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷತೆ ಕೊಟ್ಟು ಪುನರ್ವಸತಿ ಕಲ್ಪಿಸಿತು ಎಂಬ ವಿಶ್ಲೇಷಣೆ ಕ್ಷೇತ್ರದಲ್ಲಿದೆ.

2004ರಲ್ಲಿ ಈಶ್ವರಪ್ಪರಿಗೆ ಮತ್ತೆ ಲಾಟರಿ ಹೊಡೆಯಿತು; ಬಂಗಾರಪ್ಪ ಕಾಂಗ್ರೆಸ್ ಬಿಟ್ಟು ನೇರ ಬಿಜೆಪಿಗೆ ಸೇರಿದ್ದು, ಶಾಸಕ ಚಂದ್ರಶೇಖರಪ್ಪರಿಗೆ ಸುತ್ತಿಕೊಂಡಿದ್ದ ಆಂಟಿ ಇನ್‌ಕಂಬೆನ್ಸ್ ಹಾಗು ಯಡಿಯೂರಪ್ಪರ ಪ್ರಭಾವದಲ್ಲಿ ಲಿಂಗಾಯತರ ಹೆಚ್ಚಿನ ಮತಗಳು ಬಿಜೆಪಿಗೆ ಬಂದಿದ್ದರಿಂದ ಈಶ್ವರಪ್ಪ 69,015 ಓಟು ಪಡೆದು, 19,249 ಮತಗಳ ದೊಡ್ಡ ಅಂತರದಲ್ಲಿ ಗೆಲ್ಲಲು ಸಾಧ್ಯವಾಯಿತು ಎನ್ನಲಾಗುತ್ತಿದೆ. ಕುಮಾರಸ್ವಾಮಿ-ಯಡಿಯೂರಪ್ಪ ಸಮ್ಮಿಶ್ರ ಸರಕಾರದಲ್ಲಿ ಈಶ್ವರಪ್ಪ ಸಂಪದ್ಭರಿತ ಜಲ ಸಂಪನ್ಮೂಲ ಇಲಾಖೆಯ ಮಂತ್ರಿಯಾದರು.

2008ರ ಚುನಾವಣೆಯಲ್ಲಿ ಯಡಿಯೂರಪ್ಪರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿ ಗದ್ದುಗೆಯಿಂದ ವಂಚಿಸಿದರೆಂಬ ಹಿನ್ನೆಲೆಯಲ್ಲಿ ಅನುಕಂಪ ಸೃಷ್ಟಿಯಾಗಿದ್ದು ಬಿಜೆಪಿಗೆ ಅನಕೂಲಕರವಗಿತ್ತು. ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಮುಸ್ಲಿಮ್ ಸಮುದಾಯದವರಾಗಿದ್ದನ್ನು ವಿಭಜಕ ತಂತ್ರಗಾರಿಕೆ ಬಳಸಿಕೊಂಡ ಈಶ್ವರಪ್ಪ ಕ್ಷೇತ್ರವನ್ನು ಅನುಕೂಲಕರವಾಗಿ ಹದಗೊಳಿಸಿಕೊಂಡರೆನ್ನಲಾಗಿದೆ. ಆ ಹೊತ್ತಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪರ ಮಧ್ಯೆ ಶೀತಲ ಸಮರವಿತ್ತಾದರೂ ಸಂಬಂಧ ತೀರಾ ಹದಗೆಟ್ಟಿಲಿಲ್ಲ. ಹೀಗಾಗಿ ಲಿಂಗಾಯತರ ಓಟು ದಂಡಿಯಾಗಿ ಪಡೆದ ಈಶ್ವರಪ್ಪ ಮತೀಯ ಧ್ರುವೀಕರಣದ ಸಹಾಯದಿಂದ ನಾಲ್ಕನೆ ಬಾರಿ ಶಾಸಕರಾದರೆಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲದೆ. ಆ ಕದನ ಕುತೂಹಲದಲ್ಲಿ ಬಿಜೆಪಿಯ ಈಶ್ವರಪ್ಪ 58,982 ಮತ ಗಳಿಸಿದರೆ ಕಾಂಗ್ರೆಸ್‌ನ ಇಸ್ಮಾಯಿಲ್ ಖಾನ್‌ಗೆ 26,563 ಓಟು ಪಡೆಯಲಷ್ಟೇ ಸಾಧ್ಯವಾಯಿತು; ಜೆಡಿಎಸ್ ಹುರಿಯಾಳು ಶ್ರೀಕಾಂತ್ 19,232 ಮತ ಪಡೆದರು.

ಸ್ವಂತ ಅಸ್ತಿತ್ವವಿಲ್ಲದ ಈಶ್ವರಪ್ಪ!

2008ರಲ್ಲಿ ಯಡಿಯೂರಪ್ಪ ತಮ್ಮ ಸರಕಾರದಲ್ಲಿ ಈಶ್ವರಪ್ಪರನ್ನು ವಿದ್ಯುತ್ ಇಲಾಖೆಯ ಮಂತ್ರಿ ಮಾಡಿದರು. ಸದಾನಂದ ಗೌಡ ಸಿಎಂ ಆದಾಗ ಈಶ್ವರಪ್ಪರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು; ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಈಶ್ವರಪ್ಪರನ್ನು ಉಪ ಮುಖ್ಯಮಂತ್ರಿ ಮಾಡಲಾಯಿತು. ಯಡಿಯೂರಪ್ಪ ವಿರೋಧಿಯೆಂಬ ಕಾರಣಕ್ಕೆ ಈಶ್ವರಪ್ಪರಿಗೆ ಸಂಘ ಸೂತ್ರಧಾರರು ಆಯಕಟ್ಟಿನ ಸ್ಥಾನ-ಮಾನ ನೀಡುತ್ತಾ ಹೋದರು; ತನ್ಮೂಲಕ ಯಡಿಯೂರಪ್ಪರ ನಿಯಂತ್ರಿಸುವ ತಂತ್ರಗಾರಿಕೆ ಸಂಘ ಪರಿವಾರದ್ದಾಗಿತ್ತೆಂಬ ಮಾತು ರಾಜಕೀಯ ವಲಯದಲ್ಲಿದೆ. ಈಶ್ವರಪ್ಪ ಅದೆಷ್ಟೇ ಮತೀಯ ಮಸಲತ್ತು ಮಾಡಿದರೂ ಅಥವಾ ಸಂಘ ಶೇಷ್ಠರ ಬೆಂಬಲದಿಂದ ಮೆರೆದಾಡಿದರೂ ಯಡಿಯೂಪ್ಪರ ಸಹಕಾರವಿಲ್ಲದೆ ಶಾಸಕನಾಗಿ ಆಯ್ಕೆಯಾಗಲು ಸಾಧ್ಯವೇ ಇಲ್ಲವೆಂಬ ಅಭಿಪ್ರಾಯ ಜಿಲ್ಲೆಯಲ್ಲಿದೆ. ಈ ವಾದವನ್ನು ಪುಷ್ಟೀಕರಿಸುವಂತಿದೆ 2013 ಅಸೆಂಬ್ಲಿ ಇಲೆಕ್ಷನ್‌ನ ಸೋಲು-ಗೆಲುವಿನ ಚಿತ್ರಣ.

2013ರ ಅಸೆಂಬ್ಲಿ ಚುನಾವಣೆಗೆ ಸ್ವಲ್ಪ ಮೊದಲು ಯಡಿಯೂರಪ್ಪ ಬಿಜೆಪಿ ವಿರುದ್ಧ ಬಂಡೆದ್ದು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಕಟ್ಟಿದರು. ತನಗೆ ಬಿಜೆಪಿಯಲ್ಲಿ ಮಗ್ಗಲು ಮುಳ್ಳಾಗಿದ್ದ ಈಶ್ವರಪ್ಪರನ್ನು ಸೋಲಿಸುವ ಹಠ ಯಡಿಯೂರಪ್ಪ ತೊಟ್ಟಿದ್ದರೆನ್ನುವುದು ಜಿಲ್ಲೆಯ ರಾಜಕಾರಣದಲ್ಲಿ ಜನಜನಿತ ಸಂಗತಿ. 2008ರಲ್ಲೇ ಈಶ್ವರಪ್ಪರಿಗೆ ಬಿಜೆಪಿ ಟಿಕೆಟ್ ತಪ್ಪಿಸಿ ತಮ್ಮ ಪರಮಾಪ್ತ ಎಸ್.ರುದ್ರೇಗೌಡರಿಗೆ ಅಭ್ಯರ್ಥಿ ಮಾಡುವ ಯೋಚನೆ ಯಡಿಯೂರಪ್ಪರದಾಗಿತ್ತೆಂದು ಆ ಹೊತ್ತಲ್ಲಿ ಸುದ್ದಿಯೂ ಆಗಿತ್ತು. 2013ರ ಜಿದ್ದಾಜಿದ್ದಿಯಲ್ಲಿ ಲಿಂಗಾಯತ ಜನಾಂಗದ ಹಣವಂತ ಕೈಗಾರಿಕೋದ್ಯಮಿ ರುದ್ರೇಗೌಡ (39,077) ಕೆಜೆಪಿಯಿಂದ ಅಖಾಡಕ್ಕಿಳಿದರು. ಕಾಂಗ್ರೆಸ್ ಬ್ರಾಹ್ಮಣ ಸಮುದಾಯದ ಕೆ.ಬಿ.ಪ್ರಸನ್ನಕುಮಾರ್‌ಗೆ (39,355) ಅವಕಾಶ ಕೊಟ್ಟಿತು. ಈಶ್ವರಪ್ಪ (33,462) ಬಿಜೆಪಿ ಕ್ಯಾಂಡಿಡೇಟ್. ಕುರುಬ ಸಮುದಾಯದ ಎಂ.ಶ್ರೀಕಾಂತ್ (21,638) ಜೆಡಿಎಸ್ ಅಭ್ಯರ್ಥಿ. ಈ ತುರುಸಿನ ಚತುಷ್ಕೋನ ಸ್ಪರ್ಧೆಯಲ್ಲಿ ಕಾಂಗ್ರೆಸ್‌ನ ಪ್ರಸನ್ನಕುಮಾರ್ ಸಮೀಪದ ಪ್ರತಿಸ್ಪರ್ಧಿ ಕೆಜೆಪಿಯ ರುದ್ರೇಗೌಡರನ್ನು ಕೇವಲ 278 ಮತದಿಂದ ಸೋಲಿಸಿ ಶಾಸನಸಭೆಗೆ ಆಯ್ಕೆಯಾದರೆ ಈಶ್ವರಪ್ಪ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು!

ಗಣನೀಯ ಪ್ರಮಾಣದಲ್ಲಿ ಮುಸ್ಲಿಮರ ಮತ ಪಡೆದಿದ್ದ ರುದ್ರೇಗೌಡರು ವಿಜಯದ ಹೊಸ್ತಿಲಿಗೆ ಬಂದು ಎಡವಿದ್ದರು. ಯಡಿಯೂರಪ್ಪರಿಗೆ ಶಿವಮೊಗ್ಗ ಮುಸ್ಲಿಮರ ಮೇಲಿದ್ದ ಪ್ರಭಾವದಿಂದ ಆ ಜನಾಂಗದ ಮತ ಕೆಜೆಪಿಗೆ ಬಂದಿತ್ತು. ಅಲ್ಲಿಗೆ ಯಡಿಯೂರಪ್ಪ ಇಲ್ಲದೆ ಈಶ್ವರಪ್ಪರಿಗೆ ಕ್ಷೇತ್ರದಲ್ಲಿ ಸ್ವತಂತ್ರ ಅಸ್ತಿತ್ವ ಇಲ್ಲವೆಂಬುದು ಸಾಬೀತಾಯಿತೆಂದು ವಿಶ್ಲೇಷಿಸಲಾಗುತ್ತಿದೆ. ಅಸೆಂಬ್ಲಿ ಇಲೆಕ್ಷನ್‌ನಲ್ಲಿ ಮುಖಭಂಗವಾದರೂ ಯಡಿಯೂರಪ್ಪರಿಗೆ ಸೆಡ್ಡು ಹೊಡೆಯುವ ಛಾತಿವಂತನೆಂಬ ಕಾರಣಕ್ಕೆ ಬಿಜೆಪಿಯಲ್ಲಿ ಈಶ್ವರಪ್ಪರ ಕೈಮೇಲಾಯಿತು. 2014ರಲ್ಲಿ ವಿಧಾನಪರಿಷತ್‌ಗೆ ಈಶ್ವರಪ್ಪರನ್ನು ಕಳಿಸಲಾಯಿತಷ್ಟೆ ಅಲ್ಲ, ಕ್ಯಾಬಿನೆಟ್ ಮಂತ್ರಿ ಸೌಲಭ್ಯದ ವಿರೋಧ ಪಕ್ಷದ ನಾಯಕನಾಗಿಯೂ ಮಾಡಲಾಯಿತು! 2018ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಕರಾವಳಿ ಮತ್ತು ಮಲೆನಾಡಿನಲ್ಲಾದ ದೊಡ್ಡಮಟ್ಟದ ಕೋಮು ಧ್ರುವೀಕರಣ ಮತ್ತು ಬಿಜೆಪಿಗೆ ಮರುಳಿದ್ದ ಯಡಿಯೂರಪ್ಪರ ಪ್ರಭಾವದಿಂದ ಈಶ್ವರಪ್ಪನವರಿಗೆ 1,04,027 ಮತ ಬಂತು! ಈಶ್ವರಪ್ಪ ಕಾಂಗ್ರೆಸ್‌ನ ಪ್ರಸನ್ನಕುಮಾರ್‌ರನ್ನು 46,107 ಮತಗಳ ಆಗಾಧ ಅಂತರದಿಂದ ಸೋಲಿಸಿ ಶಾಸಕನಾದರು.

40% ಪರ್ಸೆಂಟ್ ಮಂತ್ರಿ ವಿವಾದ!

ಯಡಿಯೂರಪ್ಪ ತಮ್ಮ ಸರಕಾರದಲ್ಲಿ ಈಶ್ವರಪ್ಪರಿಗೆ ಮಂತ್ರಿಯೇನೊ ಮಾಡಿದರು. ಆದರೆ ಸಂಬಂಧ ಹಳಸಿ ಪ್ರಚ್ಛನ್ನ ಕಾಳಗ ನಡೆದಿತ್ತು ಎನ್ನಲಾಗಿದೆ. ಸಿಎಂ ತನ್ನ ಗ್ರಾಮೀಣಾಭಿವೃದ್ಧಿ ಖಾತೆಯಲ್ಲಿ ಹಸ್ತಕ್ಷೇಪ ನಡೆಸಿರುವುದರಿಂದ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಆಗುತ್ತಿಲ್ಲ ಎಂಬರ್ಥದ ದೂರನ್ನು ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ಕೊಟ್ಟಿದ್ದು ಸುದ್ದಿಯಾಗಿತ್ತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗ ಗ್ರಾಮೀಣ ಭಾಗದಲ್ಲಿ ನಡೆಯುವ ಕೋಟ್ಯಂತರ ರೂ. ಕಾಮಗಾರಿ ಉಸ್ತುವಾರಿಯುಳ್ಳ ಅದೇ ಖಾತೆಯನ್ನು ಮತ್ತೆ ಪಡೆದುಕೊಂಡ ಈಶ್ವರಪ್ಪ ಪರ್ಸೆಂಟೇಜ್ ವ್ಯವಹಾರ ನಿರತರಾಗಿದ್ದಾರೆಂಬ ಆರೋಪ ಜೋರಾಗಿ ಕೇಳಿಬಂದಿತ್ತು.

ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಮಂತ್ರಿ ಈಶ್ವರಪ್ಪ ಕಾಮಗಾರಿಯ ಬಿಲ್ ಪಾವತಿಗೆ ಶೇ.40 ಕಮಿಷನ್ ಕೇಳುತ್ತಿದ್ದಾರೆಂದು ನೇರವಾಗೆ ಆರೋಪಿಸಿದ್ದರು; ಪ್ರಧಾನಿ ಮೋದಿಗೂ ಈಶ್ವರಪ್ಪರ ಮೇಲೆ ದೂರು ಕೊಟ್ಟಿದ್ದರು. ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ಸಂತೋಷ್ ಪಾಟೀಲ್ ಬೇರೆ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾದರು ಎನ್ನಲಾದ ಪ್ರಕರಣ ಆಡಳಿತಾರೂಢ ಬಿಜೆಪಿಯಲ್ಲಿ ಮಾತ್ರವಲ್ಲದೆ, ಇಡೀ ರಾಜ್ಯದಲ್ಲಿ ತಲ್ಲಣ ಮೂಡಿಸಿತ್ತು. ಇಷ್ಟಾದರೂ ಮಂತ್ರಿಗಿರಿ ಬಿಡಲು ಈಶ್ವರಪ್ಪ ಒಪ್ಪಲಿಲ್ಲ; ಮುಜುಗರಕ್ಕೀಡಾದ ಬಿಜೆಪಿ ಈಶ್ವರಪ್ಪರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕಾಗಿಬಂತು! ಈಗ ಸದ್ರಿ ಪ್ರಕರಣದಿಂದ ’ಕ್ಲೀನ್ ಚಿಟ್’ ಪಡೆದಿರುವ ಈಶ್ವರಪ್ಪ ಮತ್ತೆ ಸಚಿವನಾಗುವ ಪ್ರಯತ್ನ ಮಾಡುತ್ತಿದ್ದರೆ, ಅತ್ತ ಸಂಘ ಪರಿವಾರ ಪ್ರಮುಖರು ಮುಂಬರುವ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಡದೆ ಕಡ್ಡಾಯ ನಿವೃತ್ತಿಗೆ ಯೋಚಿಸುತ್ತಿದ್ದಾರೆ ಎಂಬ ಸುದ್ದಿಗಳು ಬಿಜೆಪಿ ಪಡಸಾಲೆಯಿಂದ ಬರುತ್ತಿದೆ.

ನಗರದ ನೋವು-ನಲಿವು!

ಶಿವಮೊಗ್ಗ ಮಹಾನಗರದ ಉದ್ದಗಲಕ್ಕೊಮ್ಮೆ ಕಣ್ಣು ಹಾಯಿಸಿದರೆ ಯದ್ವಾತದ್ವಾ ಬೆಳೆದ ಅಸ್ತವ್ಯಸ್ತ ಊರಿನಂತೆ ಗೋಚರಿಸುತ್ತದೆ. ಕುಡಿಯುವ ನೀರು, ಚರಂಡಿ, ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ, ನೈರ್ಮಲ್ಯದಂಥ ಮೂಲಭೂತ ಸಮಸ್ಯೆಗಳ ಶಿವಮೊಗ್ಗದಲ್ಲಿ ಈಗ ನಡೆಯುತ್ತಿರುವ 1,200 ಕೋಟಿ ರೂ.ಸ್ಮಾರ್ಟ್ ಸಿಟಿ ಯೋಜನೆಯನ್ನಾದರೂ ವೈಜ್ಞಾನಿಕ ನೀಲನಕ್ಷೆಯಂತೆ ಕಾರ್ಯಗತ ಮಾಡಿದರೂ ಸಾಕಿತ್ತು; ನಗರ ಕೊಂಚವಾದರೂ ವ್ಯವಸ್ಥಿತವಾಗುತ್ತಿತ್ತೆಂದು ಜನರು ಹೇಳುತ್ತಾರೆ. ಇದೊಂದು ಪಕ್ಕಾ ಅವೈಜ್ಞಾನಿಕ, ಅಸಮರ್ಪಕ ಮತ್ತು ಕಳಪೆ ಕಾಮಗಾರಿ; ಆಳುವವರಿಗೆ ಅನಾಯಾಸವಾಗಿ ಶೇ.40 ಕಮಿಷನ್ ಸಿಗುವ ಹುಚ್ಚು ಪ್ರಾಜೆಕ್ಟ್ ಎಂಬ ಆಕ್ರೋಶ ಭುಗಿಲೆದ್ದಿದೆ ಐದು ಬಾರಿ ಎಮ್ಮೆಲ್ಲೆ, ನಾಲ್ಕೈದು ಸಲ ಸಚಿವನಾಗಿರುವ ಈಶ್ವರಪ್ಪ ಸಾಧನೆ ಏನೆಂದು ಕೇಳಿದರೆ- “ಅವರೆಂದು ಅಭಿವೃದ್ಧಿ ರಾಜಕಾರಣ ಮಾಡಿದವರಲ್ಲ; ಶ್ರಮವಿಲ್ಲದೆ ದಂಡಿಯಾಗಿ ಮತ ತರುವ ಮತೀಯ ರಾಜಕಾರಣದಲ್ಲಿ ಅವರು ನಿಷ್ಣಾತರು. ಶಿವಮೊಗ್ಗದಲ್ಲಿ ಏನಾದರು ಪ್ರಗತಿ-ಕೆಲಸ-ಕಾಮಗಾರಿ ಆಗಿದ್ದರೆ, ಅದು ಯಡಿಯೂರಪ್ಪ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದು” ಎಂಬ ಉತ್ತರ ಪಕ್ಷ-ಪಂಗಡದ ಹಂಗಿಲ್ಲದೆ ಬರುತ್ತದೆ!

ಕಳೆದ ಏಪ್ರಿಲ್ 20ರಂದು ಭಜರಂದ ದಳದ ಕಾರ್ಯಕರ್ತ ಹರ್ಷನ ಕೊಲೆಯಾದಾಗ ಶಿವಮೊಗ್ಗದಲ್ಲಿ ಭೀಭತ್ಸ ಮತೀಯ ಸಂಘರ್ಷ ಆಗಿಹೋಯಿತು. ಇದು ಧರ್ಮಕಾರಣಿಗಳಿಗೆ ಖುಷಿಯ ಸಂಗತಿಯಾದರೆ ಅತ್ತ ಹರ್ಷನ ಕುಟುಂಬದ ಕಣ್ಣೀರು ಮತ್ತು ದುಗುಡವಿನ್ನೂ ಕಡಿಮೆಯಾಗಿಲ್ಲ. ಹರ್ಷನ ಕುಟುಂಬವನ್ನು ಧರ್ಮಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾತು ಸಹ ಕೇಳಿಬರುತ್ತಿದೆ. ತಮ್ಮನ ಕೊಲೆ ಕೇಸ್ ತನಿಖೆಯ ಬಗ್ಗೆ ವಿಚಾರಿಸಲು ಬಂದಿದ್ದ ಹರ್ಷನ ಅಕ್ಕ ಅಶ್ವಿನಿಗೆ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಮತ್ತು ಜಿಲ್ಲಾ ಮಂತ್ರಿಯಾಗಿದ್ದ ಈಶ್ವರಪ್ಪ ಬೈದು ಕಳಿಸಿದ್ದು ದೊಡ್ಡ ಸುದ್ದಿಯೂ ಆಯಿತು.

ಟಿಕೆಟ್ ಫೈಟ್!

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಆಕಾಂಕ್ಷಿಗಳ ಸರದಿ ಸಾಲು ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ದಿನ ಕಳೆದಂತೆ ಬೆಳೆಯುತ್ತಲೇ ಇದೆ. ಯಾರಿಗೆ ಟಿಕೆಟ್ ಸಿಗಬಹುದೆಂದು ಸಣ್ಣದೊಂದು ಊಹೆ ಕೂಡ ಮಾಡಲಾಗದಷ್ಟು ಗೊಂದಲ ಎರಡೂ ಪಕ್ಷದಲ್ಲಿದೆ. ಸ್ಥಳೀಯ ಹಿಂದುತ್ವ ಸಂಘಟನೆ ಹಾಗು ಬಿಜೆಪಿಯ ಒಂದು ವರ್ಗಕ್ಕೆ ಈಶ್ವರಪ್ಪರ ಬಗ್ಗೆ ಅಸಮಧಾನ-ಆಕ್ರೋಶವಿದೆ; ಈಶ್ವರಪ್ಪರ ವಿಚಿತ್ರ ಮ್ಯಾನರಿಸಂ ಮತ್ತು ಅಸಂಬದ್ಧ ಮಾತುಗಾರಿಕೆಯಿಂದ ಸಂಘ ಪರಿವಾರಕ್ಕೂ ಮುಜುಗರ ಆಗುತ್ತಿದೆ ಎಂಬ ಸುದ್ದಿಗಳು ತೇಲಾಡುತ್ತಿದೆ. 2008-2013ರ ಅವಧಿಯಲ್ಲಿ ಮಂತ್ರಿಯಾಗಿದ್ದಾಗ ಪೊಲೀಸರಿಗೆ ನೋಟು ಎಣಿಸುವ ಯಂತ್ರ ಈಶ್ವರಪ್ಪ ಮನೆಯಲ್ಲಿ ಸಿಕ್ಕಿದ್ದು, ಈಗ ಬಂದಿರುವ 40 ಪರ್ಸೆಂಟ್ ಆರೋಪ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ, ಈಚೆಗೆ ಹತ್ಯೆಗೀಡಾದ ಹಿಂದುತ್ವದ ಸಂಘಟನೆಯಲ್ಲಿದ್ದ ಹುಡುಗ ಹರ್ಷನ ಕೊಲೆ ಮತ್ತು ಆನಂತರ ಕೇಸರಿ ಪಡೆಯಲ್ಲಿ ಸ್ಥಳೀಯ ನಾಯಕತ್ವದ ಬಗ್ಗೆ ಮೂಡಿರುವ ಅನುಮಾನ, ಹರ್ಷನ ಅಕ್ಕ ಈಶ್ವರಪ್ಪ ಬಗ್ಗೆ ಅಸಮಾಧಾನದಿಂದ ಮಾತನಾಡುತ್ತಿರುವುದು ಮತ್ತು 2023ರ ಚುನಾವಣೆ ಹೊತ್ತಲ್ಲಿ ಈಶ್ವರಪ್ಪರಿಗೆ 74 ವರ್ಷ ವಯಸ್ಸಾಗುವುದರಿಂದ ಅವರಿಗೆ ಟಿಕೆಟ್ ಸಿಗಲಾರದೆಂಬ ಲೆಕ್ಕಾಚಾರದ ಚರ್ಚೆ ಬಿಜೆಪಿಯಲ್ಲಿ ಬಿರುಸಾಗಿತ್ತು.

ಈಶ್ವರಪ್ಪ ಸುಲಭಕ್ಕೆ ಸೀಟು ಬಿಟ್ಟು ಕೊಡುವ ಪೈಕಿಯಲ್ಲ; ತಮ್ಮ ವ್ಯವಹಾರವನ್ನೆಲ್ಲ ನೋಡಿಕೊಳ್ಳುತ್ತಿರುವ-ಜಿಪಂ ಸದಸ್ಯನಾಗಿದ್ದ ಮಗ ಕಾಂತೇಶ್‌ಗೆ ಟಿಕೆಟ್ ಕೇಳುತ್ತಿದ್ದಾರೆ. ಯಡಿಯೂರಪ್ಪರ ಮಗನಿಗೆ ಶಿಕಾರಿಪುರದಲ್ಲಿ ಅವಕಾಶ ಕೊಡುವುದಾದರೆ ತನ್ನ ಮಗನಿಗೇಕೆ ಶಿವಮೊಗ್ಗದಲ್ಲಿ ಟಿಕೆಟ್ ಕೊಡಬಾರದೆಂಬ ವಾದ ಈಶ್ವರಪ್ಪರದು ಎನ್ನಲಾಗುತ್ತಿದೆ. ಯಡಿಯೂರಪ್ಪರಿಗೆ ತಮ್ಮ ಸ್ವಜಾತಿ ಪರಮಾಪ್ತ ರುದ್ರೇಗೌಡರಿಗೆ ಅಭ್ಯರ್ಥಿ ಮಾಡುವ ಮನಸ್ಸಿದೆಯಾದರೂ ಅವರಿಗೆ ವಯಸ್ಸಾಗಿರುವುದರಿಂದ ಕಷ್ಟವೆಂಬ ಮಾತಿದೆ. ಸೂಡಾದ ಅಧ್ಯಕ್ಷರಾಗಿದ್ದ ಲಿಂಗಾಯತ ಸಮುದಾಯದ ಜ್ಯೋತಿ ಪ್ರಕಾಶ್ ಹೆಸರು ಕೇಳಿಬರುತ್ತಿದೆ. ಎಮ್ಮೆಲ್ಸಿ ಆಯನೂರು ಮಂಜುನಾಥ್ ತನಗಿದು ಕೊನೆಯ ಅವಕಾಶ ಟಿಕೆಟ್ ಕೊಡಿಯೆಂದು ಸಂಘ ಶ್ರೇಷ್ಠರಿಗೆ ದುಂಬಾಲು ಬಿದ್ದಿದ್ದಾರೆ. ಇಲ್ಲದಿದ್ದರೆ ಕಾಂಗ್ರೆಸ್ ಸೇರುವುದಾಗಿ ಬೆದರಿಕೆ ಸಹ ಹಾಕಿದ್ದಾರೆ.

ಈ ಬಾರಿ ಬ್ರಾಹ್ಮಣ ಸಮುದಾಯ ಬಿಜೆಪಿ ಟಿಕೆಟ್‌ಗೆ ಗಂಭೀರ ಪ್ರಯತ್ನ ಮಾಡುತ್ತಿದೆ; ಮಾಜಿ ಎಮ್ಮೆಲ್ಸಿ ಭಾನುಪ್ರಕಾಶ್, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ದತ್ತಾತ್ರಿ ಮತ್ತು ಸ್ಥಳೀಯ ಹಿಂದು ಮಹಾ ಸಭಾದ ಅಧ್ಯಕ್ಷ ನಟರಾಜ ಭಾಗ್ವತ್ ಎಮ್ಮೆಲ್ಲೆ ಆಗುವ ಕನಸು ಕಾಣುತ್ತಿದ್ದಾರೆ ಎಂಬುದು ಶಿವಮೊಗ್ಗೆಯಲ್ಲಿ ಬಹಿರಂಗ ರಹಸ್ಯ. ಯಡಿಯೂರಪ್ಪ ವಿರೋಧಿ ಕ್ಯಾಂಪಿನ ಭಾನುಪ್ರಕಾಶ್ ತನಗಲ್ಲದಿದ್ದರು ತಮ್ಮ ಮಗನಿಗಾದರು ಟಿಕೆಟ್ ಕೊಡುವಂತೆ ಕೇಳುತ್ತಿದ್ದಾರಂತೆ. ಆರ್‌ಎಸ್‌ಎಸ್ ಹಿನ್ನೆಲೆಯ ಈ ಮೂವರಿಗೆ ತಮ್ಮಲ್ಲಿ ಯಾರು ಸಂಘ ಸರದಾರರ ನೆಚ್ಚಿನ ಕಪ್ಪು ಕುದುರೆ ಆಗಬಹುದೆಂಬುದು ಅರ್ಥವಾಗದೆ ಗೊಂದಲಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಫೈಟ್

ನಗರದ ಹೆಸರಾಂತ ವೈದ್ಯ ಡಾ.ಧನಂಜಯ್ ಸರ್ಜಿ ಬಿಜೆಪಿ ಅಥವಾ ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ಪ್ರಯತ್ನದಲ್ಲಿದ್ದಾರೆಂಬ ಸುದ್ದಿ ಸದ್ದು ಮಾಡುತ್ತಿರುವುದು ಕುತೂಹಲಕ್ಕೆಡೆಮಾಡಿದೆ. ಮಾಜಿ ಶಾಸಕ ಪ್ರಸನ್ನಕುಮಾರ್ ಸೋತರೂ ಜನರ ನಡುವಿದ್ದಾರೆ. ಆದರೆ ಬಿಜೆಪಿ ಕಡೆಗೆ ಹೋಗುವ ಸ್ವಜಾತಿ ಮತ ಸೆಳೆಲು ಪ್ರಸನ್ನಕುಮಾರ್‌ರಿಂದ ಆಗದಿರುವುದರಿಂದ ಲಿಂಗಾಯತ ಅಥವಾ ಕುರುಬ ಸಮುದಾಯದವರಿಗೆ ಅವಕಾಶ ಕೊಟ್ಟರೆ ಗೆಲ್ಲುವ ಸಂಭವವಿದೆ ಎಂಬ ಚರ್ಚೆಗಳು ಕಾಂಗ್ರೆಸ್‌ನಲ್ಲಿ ನಡೆದಿದೆಯೆನ್ನಲಾಗುತ್ತಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಕಾರ್ಪೊರೆಟ್ ಎಚ್.ಸಿ.ಯೋಗೀಶ್ ಮತ್ತು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಸ್ಪರ್ಧಿಸಿ ಸೋತಿರುವ ದಿನೇಶ್ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ. ದಿನೇಶ್ ಬೆನ್ನಿಗೆ ಲಿಂಗಾಯತ ಪಂಗಡದ ಪ್ರಭಾವಿ ಮುಖಂಡ ಶಾಮನೂರು ಶಿವಶಂಕರಪ್ಪನವರಿದ್ದರೆ ಯೋಗೀಶ್‌ಗೆ ಮಾಜಿ ಶಾಸಕ ಚಂದ್ರಶೇಖರಪ್ಪರ ಮಗನೆಂಬುದೆ ಬಲ ಎನ್ನಲಾಗುತ್ತಿದೆ.

ಈ ನಡುವೆ ಲಿಂಗಾಯತರ ಅನುಕಂಪ ಪಡೆದಿರುವ ಆಯನೂರು ಮಂಜುನಾಥರನ್ನು ಬಿಜೆಪಿಯಿಂದ ಕರೆತಂದು ಅಖಾಡಕ್ಕಿಸುವ ಪ್ರಯತ್ನ ಕಾಂಗ್ರೆಸ್‌ನ ಒಂದು ಒಂದು ವರ್ಗ ಮಾಡುತ್ತಿದ್ದರೆ, ಮತ್ತೊಂದೆಡೆ ಎರಡು ಸಲ ಅಸೆಂಬ್ಲಿಗೆ ಸ್ಪರ್ಧಿಸಿದಾಗ 19-21 ಸಾವಿರದಷ್ಟು ಮತ ಪಡೆದ ಕುರುಬ ಜನಾಂಗದ ಜನಬಳಕೆ ಮುಖಂಡ ಎಂ.ಶ್ರೀಕಾಂತ್‌ರನ್ನು ಜೆಡಿಎಸ್‌ನಿಂದ ಸೆಳೆಯುವ ಕಾರ್ಯಾಚರಣೆ ಆಗುತ್ತಿದೆ ಎಂಬ ಮಾತು ಜಿಲ್ಲೆಯ ರಾಜಕೀಯ ವಲಯದಲ್ಲಿದೆ. ಕಾಂಗ್ರೆಸ್ಸಿಗೆ ಈಶ್ವರಪ್ಪರ ಸಂಪನ್ಮೂಲ ಮತ್ತು ಸಂಘ ಪರಿವಾರದ ಅಕ್ರಮಣಕಾರಿ ಹಿಂದುತ್ವ ಕೌಂಟರ್ ಮಾಡುವ ’ಗಟ್ಟಿ’ ಅಭ್ಯರ್ಥಿ ಬೇಕಾಗಿದೆ ಎಂದು ಆ ಪಕ್ಷದ ಕಾರ್ಯಕರ್ತರು ಹೇಳುತ್ತಾರೆ.

ಇದನ್ನೂ ಓದಿ; ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುಬ್ಬಳ್ಳಿ-ಧಾರವಾಡ ಕೇಂದ್ರ: ಶೆಟ್ಟರ್ ನಾಗಾಲೋಟಕ್ಕೆ ಬ್ರೇಕ್ ಹಾಕುವ ನಿರೀಕ್ಷೆಯಲ್ಲಿ ವಾಣಿಜ್ಯ ನಗರ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...