ಮಹಾಶಿವರಾತ್ರಿ ಆಚರಣೆಗಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಿಳುನಾಡಿನ ‘ಸದ್ಗುರು’ ಜಗ್ಗಿ ವಾಸುದೇವ್ ಅವರ ಈಶ ಯೋಗ ಕೇಂದ್ರಕ್ಕೆ ಭೇಟಿ ನೀಡಿದ ನಂತರ ರಾಜ್ಯ ಕಾಂಗ್ರೆಸ್‌ನೊಳಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸುವವರೊಂದಿಗೆ ಶಿವಕುಮಾರ್ ವೇದಿಕೆ ಹಂಚಿಕೊಂಡಿರುವುದರ ಹಿಂದಿನ ಸಮರ್ಥನೆಯನ್ನು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಪ್ರಶ್ನಿಸಿದ್ದಾರೆ.
“ರಾಹುಲ್ ಗಾಂಧಿಯನ್ನು ನನಗೆ ಗೊತ್ತಿಲ್ಲ ಎಂದು ಸದ್ಗುರು ಹೇಳಿದ್ದರು. ಅಲ್ಲವೇ? ಲೋಕಸಭೆಯಲ್ಲಿ ನಮ್ಮ ನಾಯಕ ರಾಹುಲ್ ಗಾಂಧಿ ಬಗ್ಗೆ ಜನರು ಏನು ಮಾತನಾಡುತ್ತಾರೆಂದು ಅವರಿಗೆ (ಶಿವಕುಮಾರ್) ನನಗಿಂತ ಚೆನ್ನಾಗಿ ತಿಳಿದಿದೆ. ಅಂತಹ ಜನರೊಂದಿಗೆ ವೇದಿಕೆ ಹಂಚಿಕೊಳ್ಳುವುದು ಎಷ್ಟು ಸಮರ್ಥನೀಯ ಎಂದು ಅವರು ಉತ್ತರಿಸಲಿ” ಎಂದು ರಾಜಣ್ಣ ಹಾಸನದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆದಾಗ್ಯೂ, ಮಾಜಿ ಸಂಸದ ಡಿ.ಕೆ. ಸುರೇಶ್ ತಮ್ಮ ಸಹೋದರನನ್ನು ಬೆಂಬಲಿಸಿದರು, ಶಿವಕುಮಾರ್ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗುವ ಮೊದಲು ಯಾವಾಗಲೂ ಪಕ್ಷಕ್ಕೆ ಮಾಹಿತಿ ನೀಡಿಯೆ ಹೋಗುತ್ತಾರೆ ಎಂದು ಹೇಳಿದ್ದಾರೆ.
“ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗಲೆಲ್ಲಾ ಅವರು ಪಕ್ಷದ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದಾರೆ. ಇಶಾ ಫೌಂಡೇಶನ್‌ನ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಅವರು ಹೈಕಮಾಂಡ್‌ಗೆ ಮಾಹಿತಿ ನೀಡಿದ್ದರು” ಎಂದು ಸುರೇಶ್ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶಿವಕುಮಾರ್ ಅವರ ಕಾರ್ಯಕ್ರಮಕ್ಕೆ ಭೇಟಿ ರಹಸ್ಯವಾಗಿರಲಿಲ್ಲ ಎಂದು ಅವರು ಜಗ್ಗಿ ವಾಸುದೇವ್ ಅವರೊಂದಿಗಿನ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ. ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಶಿವಕುಮಾರ್ ಅವರನ್ನು ವೈಯಕ್ತಿಕವಾಗಿ ಆಹ್ವಾನಿಸಲಾಗಿದ್ದು, ಅದನ್ನು ಅವರು ಸ್ವೀಕರಿಸಿ ಭಾಗವಹಿಸಿದ್ದರು ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ರಾಜ್ಯ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಬುಧವಾರ ಕೊಯಮತ್ತೂರಿನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಹಾಜರಿದ್ದರು. ತಮ್ಮ ಭೇಟಿಯನ್ನು ಸಮರ್ಥಿಸಿಕೊಂಡ ಶಿವಕುಮಾರ್ ಅವರು, “ನಾನು ಹಿಂದೂವಾಗಿ ಹುಟ್ಟಿದ್ದೇನೆ ಮತ್ತು ಹಿಂದೂವಾಗಿ ಸಾಯುತ್ತೇನೆ” ಎಂದು ಹೇಳಿದ್ದರು.
ಪ್ರಸ್ತುತ ಘಟನೆ ರಾಜ್ಯವನ್ನು ಮೀರಿ ಈಗ ರಾಷ್ಟ್ರೀಯ ವಿಷಯವಾಗಿದ್ದು, ಆದ್ದರಿಂದ ಪಕ್ಷದ ಹೈಕಮಾಂಡ್ ಅದನ್ನು ಗಮನಿಸಬೇಕು ಎಂದು ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. “ಇದು ಈಗ ಅಂತರರಾಜ್ಯ ಸಮಸ್ಯೆಯಾಗಿದ್ದು, ಹೈಕಮಾಂಡ್‌ಗೆ ಸಂಬಂಧಿಸಿದೆ. ದೆಹಲಿಯ ನಾಯಕರು ಇದನ್ನು ಗಮನಿಸಬೇಕು ಏಕೆಂದರೆ ನಮಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ತಿಳಿದಿಲ್ಲ” ಎಂದು ಅವರು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ಸಚಿವ ಎಂ.ಬಿ. ಪಾಟೀಲ್ ಕೂಡ ಶಿವಕುಮಾರ್ ಅವರ ಕೊಯಮತ್ತೂರಿನ ಭೇಟಿಯನ್ನು ಸಮರ್ಥಿಸಿಕೊಂಡಿದ್ದು, ಅವರು ಪಕ್ಷದ ನೀತಿಯನ್ನು ಉಲ್ಲಂಘಿಸಿಲ್ಲ ಎಂದು ಪ್ರತಿಪಾದಿಸಿದ್ದಾರೆ. “ಶಿವಕುಮಾರ್ ಹಿಂದೂ ಅಲ್ಲವೇ? ಶಿವರಾತ್ರಿ ಆಚರಣೆಗಳಲ್ಲಿ ಭಾಗವಹಿಸುವುದರಲ್ಲಿ ತಪ್ಪೇನು? ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪಕ್ಷದ ಉಲ್ಲಂಘನೆಯೇ? ನಾನು ಶಿವನ ದೇವಸ್ಥಾನಕ್ಕೆ ಹೋವುವುದಿಲ್ಲವೇ?” ಎಂದು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪಾಟೀಲ್ ಕೇಳಿದ್ದಾರೆ.
ಶಿವಕುಮಾರ್ ಒಬ್ಬ ಕಟ್ಟಾ ಕಾಂಗ್ರೆಸ್ ನಾಯಕ ಎಂದು ಒತ್ತಿ ಹೇಳಿದ ಅವರು, ಕೊಯಮತ್ತೂರಿಗೆ ಅವರ ಭೇಟಿಯ ಬಗ್ಗೆ ಇರುವ ಊಹಾಪೋಹಗಳನ್ನು “ಮಾಧ್ಯಮ ಸೃಷ್ಟಿ” ಎಂದು ಕರೆದಿದ್ದಾರೆ. ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವ ಬಗ್ಗೆಗಿನ ಆತಂಕದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ಅದರಲ್ಲಿ ಏನು ತಪ್ಪಿದೆ? ನಾವು ಕಾಂಗ್ರೆಸ್ ನಾಯಕರು ಅವರೊಂದಿಗೆ (ಬಿಜೆಪಿ ನಾಯಕರು) ಒಟ್ಟಿಗೆ ಕುಳಿತುಕೊಳ್ಳಲಿಲ್ಲವೇ?” ಎಂದು ಕೇಳಿದ್ದಾರೆ.
ಜಗ್ಗಿ ವಾಸುದೇವ್ ಪ್ರತಿ ವರ್ಷವೂ ಅದ್ಧೂರಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ಮತ್ತು ಈ ಕಾರ್ಯಕ್ರಮ ರಾಜಕೀಯ ಕಾರ್ಯಕ್ರಮವಾಗಿರಲಿಲ್ಲ ಎಂದು ಸಚಿವ ಪಾಟೀಲ್ ಹೇಳಿದ್ದಾರೆ.


