ಜೈಪುರ: ಇಲ್ಲಿನ ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಮತ್ತು ಹಲವು ವಾಹನಗಳ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಿಂದಾಗಿ 9 ಮಂದಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಘಟನೆಯಲ್ಲಿ 35 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು 30 ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ದಟ್ಟವಾದ ಕಪ್ಪು ಹೊಗೆ ಅವರಿಸಿದೆ. ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳದ ವಾಹನಗಳು ಅಪಘಾತದ ನಡೆದ ಸ್ಥಳಕ್ಕೆ ಧಾವಿಸುತ್ತಿದ್ದಂತೆ ಸುಮಾರು ಒಂದು ಕಿಲೋಮೀಟರ್ ದೂರದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳನ್ನು ಕರೆದೊಯ್ಯಲು ಹೋಗುತ್ತಿದ್ದ ಶಾಲಾ ವ್ಯಾನ್ ಚಾಲಕನೊಬ್ಬ ಬೆಂಕಿಯಲ್ಲಿ ಸುಟ್ಟು ಕರಕಲಾದ ದೃಶ್ಯವನ್ನು ವ್ಯಕ್ತಿಯೊಬ್ಬ ಚಿತ್ರಿಕರಿಸಿದ್ದಾನೆ.
ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ರಾಜಸ್ಥಾನದ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವರು ವಾಹನದಿಂದ ಹೊರಬರಲಾಗದೆ ಒಳಗೆ ಸುಟ್ಟು ಕರಕಲಾದ ಸಾಧ್ಯತೆಗಳಿವೆ. ಎಲ್ಲ ವಾಹನಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಪರಿಸ್ಥಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಮತ್ತು ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಖಿಮ್ಸರ್ ಅವರು ಗಾಯಾಳುಗಳನ್ನು ದಾಖಲಿಸಲಾಗಿರುವ ಎಸ್‌ಎಂಎಸ್ ಆಸ್ಪತ್ರೆಗೆ ಧಾವಿಸಿದ್ದಾರೆ. ಶರ್ಮಾ ಅವರು ಆಡಳಿತ ಅಧಿಕಾರಿಗಳು ಮತ್ತು ವೈದ್ಯರೊಂದಿಗೆ ಮಾತನಾಡಿ, ಸೂಕ್ತ ಚಿಕಿತ್ಸೆಗೆ ಅನುಕೂಲವಾಗುವಂತೆ ನಿರ್ದೇಶನಗಳನ್ನು ನೀಡಿದ್ದಾರೆ. ನಂತರ ಅವರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಮುಖ್ಯಮಂತ್ರಿ ತಮ್ಮ ಎಕ್ಸ್‌ನಲ್ಲಿ ಹಿಂದಿಯಲ್ಲಿ ಬರೆದ ಪೋಸ್ಟ್‌ನಲ್ಲಿ, ಜೈಪುರ-ಅಜ್ಮೀರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಗ್ಯಾಸ್ ಟ್ಯಾಂಕರ್ ಡಿಕ್ಕಿ ಘಟನೆಯಿಂದಾದ ಸಾವುನೋವುಗಳ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ನಾನು ಸ್ಥಳಕ್ಕೆ ಹೋದೆ. ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಎಸ್‌ಎಂಎಸ್ ಆಸ್ಪತ್ರೆಯ ವೈದ್ಯರಿಗೆ ಸೂಚಿಸಿದೆ.
ಜೈಪುರ ಪೊಲೀಸ್ ಆಯುಕ್ತ ಬಿಜು ಜಾರ್ಜ್ ಜೋಸೆಫ್ ಮತ್ತು ಇಲಾಖೆಯ ಇತರ ಅಧಿಕಾರಿಗಳು ದುರ್ಘಟನೆ ನಡೆದ ಹೆದ್ದಾರಿಯಲ್ಲಿ ಮೊಕಂ ಹೂಡಿದ್ದಾರೆ. ಆಸ್ಪತ್ರೆಗೆ ಕರೆತರಲಾದ ಸುಮಾರು ಅರ್ಧದಷ್ಟು ಗಾಯಾಳುಗಳ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಖಿಮ್ಸರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಯನ್ನು ಕರೆಸಲಾಗಿದೆ. ರೋಗಿಗಳಿಗೆ ವಸತಿ ಕಲ್ಪಿಸಲು ಮತ್ತೊಂದು ವಾರ್ಡ್ ತೆರೆಯಲಾಗಿದೆ. ಕೆಲವರು ಹತ್ತಿರದ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಪಘಾತ ನಡೆದ ಸ್ಥಳದಿಂದ ಎಸ್‌ಎಂಎಸ್ ಆಸ್ಪತ್ರೆವರೆಗೆ ‘ಗ್ರೀನ್ ಕಾರಿಡಾರ್’ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.
ಅಪಘಾತ ಸಂಭವಿಸಿದಾಗ ರಾಜ್‌ಸಮಂದ್‌ನಿಂದ ಜೈಪುರಕ್ಕೆ ತೆರಳುತ್ತಿದ್ದ ಸ್ಲೀಪರ್ ಬಸ್ ಗ್ಯಾಸ್ ಟ್ಯಾಂಕರ್ ಹಿಂದೆ ಇತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಟ್ಟ ವಾಹನಗಳನ್ನು ಹೆದ್ದಾರಿಯಿಂದ ತೆಗೆಯಲಾಗುತ್ತಿದ್ದು, ಸಂಚಾರ ಪುನರಾರಂಭಿಸಬಹುದಾಗಿದೆ. ಸಿಎಂ ಶರ್ಮಾ, ರಾಜ್ಯಪಾಲ ಹರಿಭಾವು ಬಗಾಡೆ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಪಘಾತದಲ್ಲಿ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ. ಆರಂಭದಲ್ಲಿ ಬೆಂಕಿಯನ್ನು ಹತೋಟಿಗೆ ತರಲು ಕಷ್ಟವಾಯಿತು ಎಂದು ಬಂಕ್ರೋಟಾದ ಠಾಣಾಧಿಕಾರಿ ಮನೀಶ್ ಗುಪ್ತಾ ತಿಳಿಸಿದ್ದಾರೆ.
ಆಗ್ನಿಶಾಮಕ ದಳದ ತಂಡಗಳು ಆರಂಭದಲ್ಲಿ ಸುಟ್ಟುಹೋದ ವಾಹನಗಳ ಹತ್ತಿರ ತಲುಪಲು ಸಾಧ್ಯವಾಗಲಿಲ್ಲ. ಈ ಪ್ರದೇಶದಲ್ಲಿ ಮೂರು ಪೆಟ್ರೋಲ್ ಪಂಪ್‌ಗಳಿವೆ. ಆದರೆ ಅದೃಷ್ಟವಶಾತ್ ಅವು ಸುರಕ್ಷಿತವಾಗಿವೆ ಎಂದು ಅವರು ಹೇಳಿದ್ದಾರೆ.
ಸಂತ್ರಸ್ತರನ್ನು ಆಸ್ಪತ್ರೆಗೆ ಸಾಗಿಸಲು 25ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ಬಳಸಲಾಗಿದೆ. ಅಪಘಾತದಿಂದಾಗಿ ಹೆದ್ದಾರಿಯ ಸುಮಾರು 300 ಮೀಟರ್ ಜನನಿಬಿಡ ಪ್ರದೇಶಕ್ಕೆ ಪರಿಣಾಮ ಬೀರಿದೆ. ಇದರಿಂದಾಗಿ ವಾಹನಗಳ ಉದ್ದನೆಯ ಸರತಿಗೆ ಕಾರಣವಾಯಿತು. ಹೆದ್ದಾರಿಯುದ್ದಕ್ಕೂ ಕೆಲವು ಸಂಸ್ಥೆಗಳಿಗೆ ಬೆಂಕಿ ಆವರಿಸಿದೆ. ಆದರೆ ನಿಜವಾದ ನಷ್ಟದ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಕಿಲೋಮೀಟರ್ ದೂರದಿಂದ ಜ್ವಾಲೆಗಳು ಗೋಚರಿಸುತ್ತಿವೆ ಮತ್ತು ಹೆದ್ದಾರಿಯಲ್ಲಿ ಭಯ ಮತ್ತು ಅವ್ಯವಸ್ಥೆ ಉಂಟಾಗಿದೆ ಎಂದು ಶಾಲಾ ವ್ಯಾನ್ ಚಾಲಕ ತಿಳಿಸಿದ್ದಾರೆ.
ನಾನು ಸ್ಥಳಕ್ಕೆ ಹತ್ತಿರವಾಗುತ್ತಿದ್ದಂತೆ, ಜನರು ತರಾತುರಿಯಲ್ಲಿ ಓಡಿ ಬಂದು ಸಹಾಯಕ್ಕಾಗಿ ಕೂಗುತ್ತಿರುವುದನ್ನು ನಾನು ನೋಡಿದೆ. ಒಬ್ಬ ವ್ಯಕ್ತಿ ಬೆಂಕಿಯಲ್ಲಿ ಬೆಂದುಹೋಗುತ್ತಿರುವುದನ್ನು ನೋಡಿದೆ. ಇದು ಭಯಾನಕ ದೃಶ್ಯವಾಗಿತ್ತು. ಅಗ್ನಿಶಾಮಕ ದಳಗಳು ಮತ್ತು ಆಂಬ್ಯುಲೆನ್ಸ್‌ಗಳು ಅಲ್ಲಿದ್ದವು. ಆದರೆ ಅವರಿಗೆ ದುರ್ಘಟನೆಯ ಸ್ಥಳಕ್ಕೆ ತಲುಪಲು ಕಷ್ಟವಾಯಿತು ಎಂದು ಅವರು ಹೇಳಿದರು.
ಸಂತ್ರಸ್ತರ ಕುಟುಂಬ ಸದಸ್ಯರಿಗೆ ಸಹಾಯ ಮಾಡಲು ಜಿಲ್ಲಾಡಳಿತದ ತಂಡ ಸಜ್ಜುಗೊಂಡಿದೆ. ಜನರು ವಿಚಾರಣೆ ಅಥವಾ ಸೂಕ್ತ ಮಾಹಿತಿಗಾಗಿ ಸಂಪರ್ಕಿಸಲು ಜೈಪುರ ಪೊಲೀಸರು ಸಹಾಯವಾಣಿ ಸಂಖ್ಯೆ 9166347551, 8764688431 ಮತ್ತು 7300363636 ಅನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ…ಚಿಕ್ಕಮಗಳೂರು | ದೇವಾಲಯ ಪ್ರವೇಶಿಸಿದ ದಲಿತರಿಗೆ 2.50 ಲಕ್ಷ ರೂ. ದಂಡ ವಿಧಿಸಿದ ಸವರ್ಣೀಯರು!


