ರಾಜಸ್ಥಾನದ ಜೈಪುರ ಮುನ್ಸಿಪಲ್ ಕಾರ್ಪೊರೇಷನ್ ಗ್ರೇಟರ್ ಪ್ರದೇಶದಲ್ಲಿ ಮಾಂಸ ಮಾರಾಟಗಾರರಿಗೆ ನೂತನ ಆದೇಶ ನೀಡಿದೆ. ಈ ಹೊಸ ನಿಯಮದ ಪ್ರಕಾರ, ಮಾಂಸದ ಅಂಗಡಿಗಳು ತಮ್ಮ ಅಂಗಡಿಗಳ ಹೊರಗೆ ‘ಝಟ್ಕಾ’ ಅಥವಾ ‘ಹಲಾಲ್’ ಚಿನ್ಹೆಯನ್ನು ಪ್ರದರ್ಶಿಸುವುದು ಈಗ ಕಡ್ಡಾಯವಾಗಿದೆ. ಈ ನಿರ್ಧಾರವನ್ನು ಬೃಹತ್ ಮಹಾನಗರ ಪಾಲಿಕೆಯ ಮೇಯರ್ ಡಾ. ಸೌಮ್ಯ ಗುರ್ಜರ್ ಅವರು ಅನುಮೋದಿಸಿದ್ದಾರೆ. ಕಾರ್ಯಕಾರಿ ಸಮಿತಿಯ ನಾಲ್ಕನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಇದರ ಜೊತೆಗೆ, ವಸತಿ ಪ್ರದೇಶಗಳಲ್ಲಿ ಮಾಂಸದ ಅಂಗಡಿಗಳನ್ನು ನಿಷೇಧಿಸಲಾಗಿದೆ. ವಾಣಿಜ್ಯ ಗುತ್ತಿಗೆಯನ್ನು ಹೊಂದಿದ್ದರೆ ಮಾತ್ರ ಮಾಂಸದ ಅಂಗಡಿಗಳಿಗೆ ಪರವಾನಗಿಗಳ ನವೀಕರಣವನ್ನು ನೀಡಲಾಗುವುದು. ಯೋಗಿ ಸರ್ಕಾರದ ಅಡಿಯಲ್ಲಿ ಉತ್ತರ ಪ್ರದೇಶದಲ್ಲಿ ಅಂಗಡಿಗಳ ಮೇಲೆ ನಾಮಫಲಕಗಳನ್ನು ಪ್ರದರ್ಶಿಸುವ ವಿಷಯವು ಪ್ರಸ್ತುತ ಚರ್ಚೆಯ ವಿಷಯವಾಗಿದೆ. ಆದರೆ, ಜೈಪುರವು ‘ಹಲಾಲ್’ ಮತ್ತು ‘ಜಟ್ಕಾ’ ಮಾಂಸದ ಚಿನ್ಹೆ ಪ್ರದರ್ಶಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.
ನಗರದಲ್ಲಿ ವಾಣಿಜ್ಯ ಗುತ್ತಿಗೆ ಪತ್ರಗಳಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಮಾಂಸದ ಅಂಗಡಿಗಳನ್ನು ಮುಚ್ಚಲಾಗುವುದು ಎಂದು ಜೈಪುರ ನಾಗರಿಕ ಸಂಸ್ಥೆ ಘೋಷಿಸಿದ ಕೆಲವು ದಿನಗಳ ನಂತರ ಹೊಸ ಆದೇಶ ಬಂದಿದೆ. ಮಹಾನಗರ ಪಾಲಿಕೆಯಲ್ಲಿ ಬಾಕಿ ಉಳಿದಿರುವ ಗುತ್ತಿಗೆ ಅರ್ಜಿಗಳನ್ನು ತಿಂಗಳೊಳಗೆ ವಿಲೇವಾರಿ ಮಾಡಲು ನಿರ್ಧರಿಸಲಾಯಿತು.
ಜೈಪುರ ಗ್ರೇಟರ್ ನಾಗರಿಕ ಸಂಸ್ಥೆಯ ಪ್ರಕಾರ, ಒಂದು ಉದ್ದೇಶಕ್ಕಾಗಿ ಅಂಗಡಿಗಳಿಗೆ ಪರವಾನಗಿ ಪಡೆದುಕೊಂಡು, ಸಂಪೂರ್ಣವಾಗಿ ವಿಭಿನ್ನ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಎಂದು ದೂರುಗಳು ನಿರಂತರವಾಗಿ ಸ್ವೀಕರಿಸಲ್ಪಟ್ಟಿವೆ. ಈ ದೂರುಗಳನ್ನು ಗಮನದಲ್ಲಿಟ್ಟುಕೊಂಡು, ಈಗ ಅಂಗಡಿಗಳು ಹಲಾಲ್ ಅಥವಾ ಝಟ್ಕಾ ಮಾಂಸವನ್ನು ಮಾರಾಟ ಮಾಡುವ ಬಗ್ಗೆ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಇದಲ್ಲದೆ, ಈ ಅಂಗಡಿಗಳ ಸ್ಥಳಗಳು ಮತ್ತು ಅವು ಎಷ್ಟು ಪ್ರಮಾಣದಲ್ಲಿ ನಿಯಮಾವಳಿಗಳನ್ನು ಅನುಸರಿಸುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಮೀಕ್ಷೆಯನ್ನು ನಡೆಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಮಹಾನಗರ ಪಾಲಿಕೆ ಈ ನಿಯಮಗಳನ್ನು ಜಾರಿಗೆ ತರಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಅತಿ ಶೀಘ್ರದಲ್ಲಿ ಜಾರಿಯಾಗಲಿದೆ. ಪರವಾನಗಿ ಹೊಂದಿರುವವರು ಹಾಜರುಪಡಿಸಬೇಕು, ಪರವಾನಗಿ ಇಲ್ಲದವರು ಆದಷ್ಟು ಬೇಗ ವಾಣಿಜ್ಯ ಪರವಾನಗಿ ಪಡೆಯಬೇಕು ಎಂದು ಎಲ್ಲರಿಗೂ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ; ಮಣಿಪುರದ ಪರಿಸ್ಥಿತಿ ತ್ರಿಪುರದಲ್ಲಿ ಸ್ಫೋಟಗೊಳ್ಳುವುದನ್ನು ಕಾಂಗ್ರೆಸ್ ಬಯಸುವುದಿಲ್ಲ: ಗೌರವ್ ಗೊಗೊಯ್


