ಪ್ರೊ.ಕಬಡ್ಡಿ ಐದನೇ ಪಂದ್ಯದಲ್ಲಿ ಬಲಿಷ್ಠ ಯು ಮುಂಬಾ ಮಣಿಸಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಗೆಲುವಿನ ಖಾತೆ ತೆರೆದಿದೆ. ಇಂದು ಹೈದರಾಬಾದ್ ನ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 42-23 (19 ಅಂಕಗಳ ಅಂತರದಿಂದ) ಜೈಪುರ ಗೆಲುವಿನ ಅಭಿಯಾನ ಆರಂಭಿಸಿದೆ.
ಜೈಪುರ್ ಪಿಂಕ್ ಪ್ಯಾಂಥರ್ಸ್ 2014ರಲ್ಲಿ ಮೊದಲ ಪ್ರೊ.ಕಬಡ್ಡಿ ಆವೃತ್ತಿಯಲ್ಲಿ ಸೊಗಸಾದ ಆಟವಾಡುವ ಮೂಲಕ ಚಾಂಪಿಯನ್ ಆಗಿತ್ತು. ಆನಂತರ ಅಂತಹ ಉತ್ತಮ ಪ್ರದರ್ಶನಗಳು ಕಂಡುಬಂದಿಲ್ಲ. ಈ ಆವೃತ್ತಿಯಲ್ಲಿ ಹೇಗೆ ಆಡುತ್ತಾರೆ ನೋಡಬೇಕಿದೆ. ಇಂದಿನ ಪಂದ್ಯ ಅವರ ವಿಶ್ವಾಸ ಹೆಚ್ಚಿಸಿದೆ.
ಜೈಪುರ ಪರವಾಗಿ ದೀಪಕ್ ನಿವಾಸ್ ಹೂಡ ರೈಡಿಂಗ್ ವಿಭಾಗದಲ್ಲಿ 11 ಪಾಯಿಂಟ್ ಗಳಿಸುವ ಮೂಲಕ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು. ಅಲ್ಲದೇ ಅವರು ತಮ್ಮ 25 ಸೂಪರ್ ಟೆನ್ ಸಾಧನೆ ಮಾಡಿದರು. ಅದೇ ರೀತಿ ಡಿಫೆಂಡಿಂಗ್ ನಲ್ಲಿ ಅಮಿತ್ ಹೂಡಾ 5 ಟ್ಯಾಕಲ್ ಮಾಡುವ ಮೂಲಕ ಉತ್ತಮ ಸಾಥ್ ನೀಡಿದರು. ಪಂದ್ಯದ ಮೊದಲಾರ್ಧದಲ್ಲಿಯೇ 22-10 ಅಂಕಗಳಲ್ಲಿ 10 ಪಾಯಿಂಟ್ಸ್ ಮುನ್ನಡೆ ಗಳಿಸಿದ್ದ ಜೈಪುರ್ ಪಿಂಕ್ ಪ್ಯಾಂಥರ್ಸ್ ಕೊನೆಯವರೆಗೂ ಪಂದ್ಯದ ಮೇಲೆ ಬಿಗಿ ಹಿಡಿತ ಹೊಂದಿತ್ತು.
ಯು ಮುಂಬಾ ತಂಡದ ಮೊನ್ನೆ ತೆಲಗು ಟೈಟನ್ಸ್ ವಿರುದ್ಧ ಮಿಂಚಿದ್ದ ಅಭಿಷೇಕ್ ಸಿಂಗ್ ಇಂದು ಕೇವಲ 7 ಪಾಯಿಂಟ್ಸ್ ಗಳಿಸುವ ಮೂಲಕ ನಿರಾಶೆ ಮೂಡಿಸಿದರು. ಡಿಫೆಂಡರ್ ಸುರೇಂದರ್ ಸಿಂಗ್ ಸಹ 3 ಟ್ಯಾಕಲ್ ಪಾಯಿಂಟ್ ಗಳಿಗೆ ಸೀಮಿತಗೊಂಡರು.


