Homeಕರ್ನಾಟಕವಿಶ್ವಾಸಮತ ಯಾಚನೆ ಇಂದೂ ನಡೆಯುವುದು ಅನುಮಾನ ಎಂಬ ವಾತಾವರಣ ಏಕೆ ನಿರ್ಮಾಣವಾಗಿದೆ?

ವಿಶ್ವಾಸಮತ ಯಾಚನೆ ಇಂದೂ ನಡೆಯುವುದು ಅನುಮಾನ ಎಂಬ ವಾತಾವರಣ ಏಕೆ ನಿರ್ಮಾಣವಾಗಿದೆ?

ಅನರ್ಹರಾಗಲಿ, ಸರ್ಕಾರ ಉಳಿಯೋದು ಬೇಡ ಎಂಬುದು ಸ್ಪೀಕರ್ ಅಪೇಕ್ಷೆಯಾಗಿತ್ತು

- Advertisement -
- Advertisement -

ಶಾಸಕರ ಅನರ್ಹತೆ ಕುರಿತ ಅಂತಿಮ ತೀರ್ಮಾನ ತೆಗೆದುಕೊಂಡಿದ್ದ ಸ್ಪೀಕರ್ ಮೇಲೆ ಬಂದ ಒತ್ತಡವು ವಿಶ್ವಾಸಮತ ಯಾಚನೆಯನ್ನು ಮಂಗಳವಾರಕ್ಕೆ ಮುಂದೂಡುವಂತೆ ಮಾಡುವ ಸಾಧ್ಯತೆ ಇದೆ. ಸೋಮವಾರ ಬೆಳಿಗ್ಗೆಯವರೆಗೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮುಖಂಡರ ಒತ್ತಡಕ್ಕೆ ಸ್ಪೀಕರ್ ಒಂದಿಂಚೂ ಬಗ್ಗಿರಲಿಲ್ಲ. ‘ನಿಮಗೆ ಇಷ್ಟು ಸಮಯ ಸಿಕ್ಕಿದ್ದರೂ ಒಬ್ಬರೂ ಬಂದಿಲ್ಲ. ಸದನದಲ್ಲಿ ನಡೆದ ಚರ್ಚೆಯು ಈಗಾಗಲೇ ಬಿಜೆಪಿಯವರು ಮಾಡಿದ್ದು ತಪ್ಪು ಎಂಬ ಭಾವನೆಯು ಬರುವಂತೆ ಆಗಿದೆ. ಆದರೆ, ಇದನ್ನು ಮತ್ತಷ್ಟು ಎಳೆಯುವುದು ಒಳ್ಳೆಯದಲ್ಲ. ನಾನೂ ಸಹಾ ಶುಕ್ರವಾರ ಸದನದಲ್ಲಿ ಸೋಮವಾರ ಮುಗಿಸುವ ವಿಚಾರ ಹೇಳಿದ್ದೇನೆ. ಒಂದು ವೇಳೆ ನೀವು ನನ್ನ ಮೇಲೆ ಒತ್ತಡ ತರುವುದಾದಲ್ಲಿ ನಾನು ರಾಜೀನಾಮೆ ಕೊಡುತ್ತೇನೆ’ ಎಂದು ಸ್ಪೀಕರ್ ಹೇಳಿದರೆಂದು ಅವರ ಸಮೀಪವರ್ತಿಗಳು ಹೇಳುತ್ತಾರೆ.

ಇಡೀ ಪ್ರಕರಣದ ಕೇಂದ್ರಬಿಂದುವಾಗಿರುವ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರದ ಮೇಲೆ ವಿಶ್ವಾಸಮತ ಯಾಚನೆ ಯಾವಾಗ ಆಗುತ್ತದೆಂಬುದು ತೀರ್ಮಾನವಾಗಲಿದೆ. ಇಂದು ಸಂಜೆಯವರೆಗೂ ಅವರ ಕಟು ನಿರ್ಧಾರ ‘ಆಪರೇಷನ್ ಕಮಲದ ಆಮಿಷಕ್ಕೆ ಪಕ್ಷಾಂತರ ಮಾಡಿರುವ ಶಾಸಕರನ್ನು ಅನರ್ಹಗೊಳಿಸಲೇಬೇಕು. ಅವರಿಗಾಗಿ ಕಾಯುತ್ತಾ ವಿಶ್ವಾಸಮತವನ್ನು ಎಳೆಯುವ ಸಮ್ಮಿಶ್ರ ಪಕ್ಷಗಳ ಉದ್ದೇಶವನ್ನು ತಾನು ಒಪ್ಪುವುದಿಲ್ಲ’ ಎಂದೇ ಆಗಿತ್ತು. ಆದರೆ, ‘ಗುರುವಾರದವರೆಗೆ ಕಾದರೆ ಗ್ರಹಗತಿಗಳು ಸರಿ ಹೋಗುತ್ತವೆ, ಸರ್ಕಾರ ಉಳಿಯುತ್ತದೆ’ ಎಂಬ ಮೌಢ್ಯಕ್ಕೆ ಬಲಿ ಬಿದ್ದಿರುವ ಗೌಡರ ಕುಟುಂಬವು ಅವರನ್ನು ಒಲಿಸುವ ಪ್ರಯತ್ನಕ್ಕೆ ಕೈ ಹಾಕಿ ಸಫಲವಾಗಿರಲಿಲ್ಲ. ಕನಿಷ್ಠ ಪಕ್ಷ ನಾಳೆ ಒಂದು ದಿನದ ಮಟ್ಟಿಗಾದರೂ ಮುಂದೂಡಿ ಎಂಬುದು ಅವರ ಆಗ್ರಹವಾಗಿತ್ತು. ಮೊದಮೊದಲು ಅವರ ದನಿಗೆ ಹ್ಞೂಂಗುಡದಿದ್ದ ಸಿದ್ದರಾಮಯ್ಯನವರೂ ನಂತರ ಸ್ಪೀಕರ್ ಅವರಿಗೆ ‘ಒಂದು ದಿನ ನೋಡೋಣ’ ಎಂಬ ಸಂದೇಶ ಕಳಿಸಿದ್ದಾರೆ.

ಅಂತಿಮವಾಗಿ ಕೆ.ಸಿ.ವೇಣುಗೋಪಾಲ್ ಅವರ ಮೂಲಕ ಫೋನ್ ಮಾಡಿಸಿ, ಸ್ಪೀಕರ್ ಮೇಲೆ ಇನ್ನಿಲ್ಲದ ಒತ್ತಡ ತಂದರೆಂದು ಹೇಳಲಾಗುತ್ತಿದೆ. ಈ ಮಧ್ಯೆ ಡಿ.ಕೆ.ಶಿವಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿ ‘ರೆಬೆಲ್ ಶಾಸಕರು ಬೇಗ ತೀರ್ಮಾನ ತೆಗೆದುಕೊಂಡು ಬೆಳಿಗ್ಗೆ 11 ಗಂಟೆ ಒಳಗೆ ವಾಪಸ್ ಬರಲಿ. ಇಲ್ಲವಾದರೆ ಅನರ್ಹತೆ ಖಚಿತ. ಬಿಜೆಪಿಯವರು ನಿಮ್ಮ ತಲೆಗೆ ಮಂಗನ ಟೋಪಿ ತೊಡಿಸುತ್ತಾರೆ ಅಷ್ಟೇ’ ಎಂದು ಹೇಳಿದರು.

ಇವೆಲ್ಲದರ ಕಾರಣದಿಂದ ಒತ್ತಡಕ್ಕೆ ಒಳಗಾದ ಸ್ಪೀಕರ್ ಯಾವ ತೀರ್ಮಾನ ತೆಗೆದುಕೊಳ್ಳುವುದು ಎಂಬ ತೂಗುಯ್ಯಾಲೆಯಲ್ಲಿ ಬಿದ್ದಿರುವುದರಿಂದಲೇ ಯಾವ ನಿರ್ಧಾರವನ್ನೂ ಘೋಷಿಸದೇ ಮ್ಲಾನವದನರಾಗಿ ಕುಳಿತಿದ್ದಾರೆ. ಯಾರಿಗೂ ಚೈತನ್ಯದಿಂದ ಮಾತನಾಡುವ ಉಮೇದೂ ಇಲ್ಲದೇ, ಎಳೆಯುವ ಉದ್ದೇಶದಿಂದ ಮಾತ್ರ ಮಾತನಾಡುತ್ತಿರುವಾಗ ಅನಗತ್ಯವಾಗಿ ಮುಂದೂಡುವ ಮೂಲಕ ಮೈತ್ರಿ ಪಕ್ಷಗಳ ಒತ್ತಡಕ್ಕೆ ಗುರಿಯಾಗುತ್ತಾರಾ, ಇಲ್ಲವೇ ಅವರ ಮೂಲ ನಿಲುವಿಗೆ ಬದ್ಧರಾಗಿ ವಿಶ್ವಾಸಮತಯಾಚನೆಗೆ ಹಾಕುತ್ತಾರಾ ಕಾದು ನೋಡಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...