Homeಕರ್ನಾಟಕಮಂಗಳೂರು: ಮೀನು ಸಂಸ್ಕರಣಾ ಘಟಕದಲ್ಲಿ ದುರಂತ; 5 ಕಾರ್ಮಿಕರ ಸಾವು

ಮಂಗಳೂರು: ಮೀನು ಸಂಸ್ಕರಣಾ ಘಟಕದಲ್ಲಿ ದುರಂತ; 5 ಕಾರ್ಮಿಕರ ಸಾವು

ಜಿಲ್ಲೆಯಲ್ಲಿ ಹೆಣ ಬಿದ್ದಕೂಡಲೇ ಬರುತ್ತಿದ್ದ ಯಾವುದೆ ಜನಪ್ರತಿನಿಧಿಗಳು, ಇಷ್ಟು ದೊಡ್ಡ ದುರ್ಘಟನೆ ನಡೆದರೂ ಸಂತ್ರಸ್ತರ ಕುಟುಂಬಕ್ಕೆ ಕನಿಷ್ಠ ಸಾಂತ್ವನ ಕೂಡಾ ಹೇಳಿಲ್ಲ ಎಂದು ಸ್ಥಳೀಯ ಕಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ

- Advertisement -
- Advertisement -

ಮಂಗಳೂರು ಹೊರವಲಯದ ಬಜ್ಪೆಯಲ್ಲಿರುವ ಮೀನು ಸಂಸ್ಕರಣಾ ಘಟಕದ ತ್ಯಾಜ್ಯ ಸಂಗ್ರಹದ ತೊಟ್ಟಿಯನ್ನು ಸ್ವಚ್ಛ ಮಾಡುತ್ತಿದ್ದಾಗ ದುರಂತ ಸಂಭವಿಸಿ ಐವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಸೋಮವಾರ ವರದಿಯಾಗಿದೆ. ಪ್ರಕರಣದ ಸಂಬಂಧ ಸಂಸ್ಥೆಯ ನಾಲ್ವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಕಮಿಷನರ್ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

“ಮೀನು ಸಂಸ್ಕರಣಾ ಘಟಕದ ಮಾಲೀಕರು ಸೇರಿದಂತೆ ನಾಲ್ವರ ಮೇಲೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯಕ್ಕೆ ಕಂಪೆನಿಯ ಪ್ರೊಡಕ್ಷನ್ ಮ್ಯಾನೇಜರ್ ರೂಬಿ ಜೋಸೆಫ್, ಏರಿಯಾ ಮ್ಯಾನೇಜರ್ ಕುಬೇರ್, ಸೂಪರ್ ವೈಸರ್ ಮುಹಮ್ಮದ್ ಅನ್ವರ್, ಫಾರೂಕ್ ಸೇರಿ ಒಟ್ಟು ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ” ಎಂದು ಶಶಿಕುಮಾರ್‌ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳದೇ ಕೆಲಸ ಮಾಡಿಸಿರುವ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ. ಈ ಬಗ್ಗೆ ಐಪಿಸಿ ಕಲಂ 337, 338, 304 ಹಾಗೂ 34ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಂಘ ಕಟ್ಟಿ ಹಕ್ಕು ಕೇಳಿದ್ದಕ್ಕೆ ಕೆಲಸದಿಂದ ವಜಾ: ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ ಕಾರ್ಮಿಕರು

“ಭಾನುವಾರ ಸಂಜೆಯ ವೇಳೆ ಮೀನು ಸಂಸ್ಕರಣಾ ಘಟಕದ ತ್ಯಾಜ್ಯ ಸಂಗ್ರಹ ತೊಟ್ಟಿಯನ್ನು ಸ್ವಚ್ಛ ಗೊಳಿಸುತ್ತಿದ್ದ ವೇಳೆ ಕಾರ್ಮಿಕನೊಬ್ಬ ಕುಸಿದು ಬಿದ್ದ ಕಾರಣ ಅಲ್ಲೇ ಇದ್ದ ಇತರ ಏಳು ಮಂದಿ ಕಾರ್ಮಿಕರು ಆತನ ರಕ್ಷಣೆಗೆ ಧಾವಿಸಿದ್ದಾರೆ. ದುರಂತದಲ್ಲಿ ಮೂರು ಮಂದಿ ಭಾನುವಾರ ತಡ ರಾತ್ರಿಯೇ ಸಾವನ್ನಪ್ಪಿದ್ದರೆ, ಇಬ್ಬರು ಸೋಮವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮತ್ತೆ ಮೂರು ಮಂದಿ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಇದೊಂದು ಗಂಭೀರ ಪ್ರಕರಣವಾಗಿ ಪರಿಗಣಿಸಲಾಗಿದೆ” ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಸೋಮವಾರ ಆಸ್ಪತ್ರೆ ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಕಮಿಷನರ್, ಕಂಪೆನಿಯ ಅಧಿಕಾರಿಗಳನ್ನು ತರಾಟೆಗೈದು ಕಾರ್ಖಾನೆಗೆ ಬೀಗ ಜಡಿಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಈದಿನ.ಕಾಂ ವರದಿ ಮಾಡಿದೆ.

ಮೃತಪಟ್ಟ ಕಾರ್ಮಿಕರನ್ನು ಪಶ್ಚಿಮ ಬಂಗಾಳದ ಮುಹಮ್ಮದ್‌ ಸಮೀಯಲ್ಲಾ ಇಸ್ಲಾಂ, ಉಮರ್‌ ಫಾರೂಕ್‌, ನಿಝಾಮುದ್ದೀನ್‌ ಆಲಿಸ್, ಮಿರಾಜುಲ್ ಇಸ್ಲಾಂ ಮತ್ತು ಶರಾಫತ್‌ ಅಲಿ ಎಂದು ಗುರುತಿಸಲಾಗಿದೆ. ಮೃತರಲ್ಲಿ ಒಬ್ಬ ಕಾರ್ಮಿಕ ಅಪ್ರಾಪ್ತ ಎಂದು ಹೇಳಲಾಗುತ್ತಿದೆ ಎಂದು ವಾರ್ತಭಾರತಿ ವರದಿ ಮಾಡಿದೆ. ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

“ಕಂಪೆನಿಯಲ್ಲಿ ಕೆಲಸ ಮಾಡುವವರೆಲ್ಲ ಬಹುತೇಕರು ಯುವಕರಾಗಿದ್ದಾರೆ. ಮುಂಬೈ ಮೂಲದ ರಾಜು ಗೋರಕ್ ಎಂಬವರ ಒಡೆತನದ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಯಾವುದೇ ರೀತಿಯ ರಕ್ಷಣಾತ್ಮಕ ಉಪಕರಣಗಳನ್ನು ಒದಗಿಸಲಾಗಿಲ್ಲ. ಮೃತದೇಹದ ಮೂಗು ಬಾಯಿಯಲ್ಲೂ ಮೀನಿನ ತ್ಯಾಜ್ಯ ಕಂಡು ಬಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ” ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಕಾರ್ಖಾನೆಯಲ್ಲಿ ಅಮೋನಿಯಂ ಸೋರಿಕೆ 

ಶ್ರೀ ಉಲ್ಕಾ ಎಲ್‌ಎಲ್‌ಪಿ ಕಾರ್ಖಾನೆಯು ಮುಂಬೈ ಮೂಲದ ಮೀನು ಸಂಸ್ಕರಣಾ ಕಾರ್ಖಾನೆಯಾಗಿದ್ದು, ಇಲ್ಲಿಂದ ಮೀನು ಸಂಸ್ಕರಣೆಗೊಂಡು ಏಷ್ಯಾದ ವಿವಿಧ ರಾಷ್ಟ್ರಗಳು, ರಷ್ಯಾ ಸೇರಿದಂತೆ ವಿದೇಶ ಹಾಗೂ ದೇಶದ ಇತರ ರಾಜ್ಯಗಳಿಗೆ ರಫ್ತು ಮಾಡಲಾಗುತ್ತದೆ. ಕಳೆದ ಮೂರು ವರ್ಷಗಳಿಂದ ಈ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿದೆ. ನೇರವಾಗಿ ಮತ್ತು ಪರೋಕ್ಷವಾಗಿ ಸುಮಾರು 100 ಮಂದಿ ಕಾರ್ಮಿಕರು ಕಾರ್ಖಾನೆಯಲ್ಲಿ ದುಡಿಯುತ್ತಿದ್ದಾರೆ ಎಂದು ಕಂಪೆನಿಯ ಆಡಳಿತ ವ್ಯವಸ್ಥಾಪಕಿ ಪ್ರಿಯಾ ಎಂಬವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ

ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ದುರ್ಘಟನೆ ನಡೆದಾಗ ಬಿಜೆಪಿ ಶಾಸಕರೊಬ್ಬರು ಸ್ಥಳಕ್ಕೆ ಭೇಟಿ ಕೊಟ್ಟು ಹೋಗಿದ್ದಾರೆ ಆದರೆ ಈ ಬಗ್ಗೆ ಯಾವುದೆ ಹೇಳಿಕೆ ನೀಡಿಲ್ಲ ಎಂದು ಕಾರ್ಮಿಕ ಸಂಘಟನೆಗಳ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಜಿಲ್ಲೆಯ ಸಂಸದರಾದ ನಳಿನ್ ಕುಮಾರ್‌ ಕಟೀಲ್‌ ಆಗಲಿ, ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್‌ ಆಗಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ, ಮೃತಪಟ್ಟವರ ಕುಟುಂಬಕ್ಕೆ ಸಾಂತ್ವಾನ ಹೇಳಿಲ್ಲ.  ಜಿಲ್ಲೆಯಲ್ಲಿ ಹೆಣ ಬಿದ್ದಕೂಡಲೇ ಬರುತ್ತಿದ್ದ ಯಾವುದೆ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಚುನಾವಣೆಯಲ್ಲಿ ಲಾಭ ಇದ್ದರೆ ಮಾತ್ರ ಅವರು ಬರುತ್ತಾರೆ. ಬೇರೆ ರಾಜ್ಯದ ಕಾರ್ಮಿಕರು ಇಲ್ಲಿ ಬಂದು ಮೃತಪಟ್ಟರೆ ಅವರಿಗಾಗಿ ಅಳಲು ಕೂಡಾ ಜನರು ಇರುವುದಿಲ್ಲ” ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ನಾನುಗೌರಿ.ಕಾಂಗೆ ಹೇಳಿದ್ದಾರೆ.

ಈ ಮಧ್ಯೆ ಕಾರ್ಮಿಕ ಸಂಘಟನೆಗಳ ಮುಖಂಡರು ತಡರಾತ್ರಿಯವರೆಗೆ ಸತತ ಪ್ರಯತ್ನ ನಡೆಸಿ ಮೃತ ಪಟ್ಟ ಐದು ಬಂಗಾಳಿ ಕಾರ್ಮಿಕರ ಕುಟುಂಬಕ್ಕೆ ಕಂಪೆನಿ ಕಡೆಯಿಂದ ತಲಾ ಹದಿನೈದು ಲಕ್ಷ ರೂಪಾಯಿ ಮಧ್ಯಂತರ ಪರಿಹಾರ ಕೊಡಿಸಲು ಒಪ್ಪಿಸಿದ್ದಾರೆ. ಅಲ್ಲದೆ ಮೃತ ದೇಹಗಳನ್ನು ಬಂಗಾಳಕ್ಕೆ ತಲುಪಿಸುವುದರ ಜೊತೆಗೆ 25 ಕಾರ್ಮಿಕರು ಮೃತ ದೇಹದ ಜೊತೆಗೆ ಊರಿಗೆ ತಲುಪಲು ವಿಮಾನ ಟಿಕೇಟ್ ಒದಗಿಸಲು ಕಂಪೆನಿ ಒಪ್ಪಿಕೊಂಡಿದೆ ಎಂದು ಮಂಗಳೂರು ಸಿಪಿಐಎಂ ಪ್ರಧಾನ ಕಾರ್ಯರ್ಶಿ ಸುನಿಲ್ ಕುಮಾರ್‌ ಬಜಾಲ್‌ ಹೇಳಿದ್ದಾರೆ.

ಇದನ್ನೂ ಓದಿ: ಕಂಪೆನಿಯ ಹೊಸ ನೀತಿಗಳ ವಿರುದ್ಧ ಸಿಡಿದೆದ್ದ ‘ಅರ್ಬನ್ ಕಂಪನಿ’ಯ ಮಹಿಳಾ ಕಾರ್ಮಿಕರು

ಅನ್ಯರಾಜ್ಯದ ಕಾರ್ಮಿಕರ ಜೀತಗಾರಿಕೆ ಮಾಡಲಾಗುತ್ತಿದೆ: ಮುನೀರ್ ಕಾಟಿಪಳ್ಳ ಆಕ್ರೋಶ

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, “ಸ್ಥಳೀಯ ಯುವಜನರಿಗೆ ಲಕ್ಷಗಟ್ಟಲೆ ಉದ್ಯೋಗ ಸೃಷ್ಟಿ ಎಂಬ ಭರವಸೆಯೊಂದಿಗೆ ಮಂಗಳೂರು ಎಸ್ಇಝೆಡ್ ಸ್ಥಾಪನೆ ಮಾಡಲಾಗಿತ್ತು. ಆದರೆ ಅಲ್ಲಿ ನಡೆಯುತ್ತಿರುವುದು ಅಸ್ಸಾಂ, ಜಾರ್ಖಂಡ್, ಪಶ್ಚಿಮ ಬಂಗಾಳ ರಾಜ್ಯಗಳ ಅಗ್ಗದ ಕಾರ್ಮಿಕರ ಜೀತಗಾರಿಕೆ” ಎಂದು ಕಿಡಿಕಾರಿದ್ದಾರೆ.

“ಸರಕಾರದ ಮೂಗಿನ ನೇರಕ್ಕೆ ನಡೆಯುವ ಇಂತಹ ಜೀತಗಾರಿಕೆಗೆ ಬಡಪಾಯಿಗಳಾದ ಬಂಗಾಳದ ಐದು ಕಾರ್ಮಿಕರ ಬಲಿಯಾಗಿದೆ. ಉಲ್ಕಾ ಎಂಬ ಮೀನು ಉದ್ಯಮದಲ್ಲಿ ನಡೆದ ಇಂತಹ ಕರುಳು ಹಿಂಡುವ ಅವಘಡಕ್ಕೆ ಕಂಪೆನಿಗೆ ತಾತ್ಕಾಲಿಕ ಬೀಗ ಜಡಿದು, ನಾಲ್ಕು ಸೂಪರ್ ವೈಸರ್ ಗಳನ್ನು ವಶಕ್ಕೆ ಪಡೆದರೆ ಸಾಕೇ..? ಕುಟುಂಬಕ್ಕೆ ನೀಡುವ ಜುಜುಬಿ ದುಡ್ಡು ಇದಕ್ಕೆ ಪರಿಹಾರವೇ..? ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ನೀಡಿ ಈಶಾನ್ಯ ರಾಜ್ಯದ ಕಾರ್ಮಿಕರ ಜೀತಗಾರಿಕೆಗೆ ಅವಕಾಶ ಕೊಟ್ಟ ಜಿಲ್ಲೆಯ ಶಾಸಕ, ಸಂಸದರು, ಜಿಲ್ಲಾಡಳಿತದ ಚುಕ್ಕಾಣಿ ಹಿಡಿದಿರುವ ಅಧಿಕಾರಿಗಳು ಹೊಣೆ ಹೊರಬೇಡವೇ..? ಶಿಕ್ಷೆಗೆ ತಮ್ಮನ್ನು ಒಡ್ಡಿಕೊಳ್ಳಬೇಡವೇ..? ತುಳುನಾಡಿನ ಜನ ಸಮೂಹಕ್ಕೆ ಇದೆಲ್ಲಾ ಅರ್ಥ ಆಗುವುದು ಯಾವಾಗ?” ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...