Homeಕರ್ನಾಟಕಮಾಂದಲ್‌ಪಟ್ಟಿಯ ಗುಡ್ಡ ವಿಸ್ತಾರದಲ್ಲಿ ಅರಳಿದ ನೀಲಿ ಸಂತಸ! ಕಣ್ಮನ ಸೆಳೆದ ನೀಲಕುರಿಂಜಿಯ ಸೋದರ ಸಂಬಂಧಿ

ಮಾಂದಲ್‌ಪಟ್ಟಿಯ ಗುಡ್ಡ ವಿಸ್ತಾರದಲ್ಲಿ ಅರಳಿದ ನೀಲಿ ಸಂತಸ! ಕಣ್ಮನ ಸೆಳೆದ ನೀಲಕುರಿಂಜಿಯ ಸೋದರ ಸಂಬಂಧಿ

- Advertisement -
- Advertisement -

ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ 7000ಕ್ಕೂ ಮಿಗಿಲಾದ ಹೂ ಬಿಡುವ ಸಸ್ಯ ಪ್ರಬೇಧಗಳಿವೆ. ಆದರೆ ಸಮುದ್ರ ಮಟ್ಟದಿಂದ 1700 ಮೀಟರ್‌ಗಿಂತಲೂ ಹೆಚ್ಚಿನ ಎತ್ತರದ ಪ್ರದೇಶಗಳಲ್ಲಿರುವ ಶೋಲಾ ಅರಣ್ಯ ಪ್ರದೇಶಗಳ ಪರ್ವತ ಶ್ರೇಣಿಗಳಲ್ಲಿ ಬೆಳೆಯುವ ಹೂ ಬಿಡುವ ಪೊದೆಯಂತಹ ಸಸ್ಯಜಾತಿಯೇ ಕುರಿಂಜಿ ಹೂ ಅಥವಾ ನೀಲಕುರಿಂಜಿ ಹೂ.

ಏನಿದು ನೀಲಕುರಿಂಜಿ?

ವೈಜ್ಞಾನಿಕವಾಗಿ ಗುರುತಿಸಲ್ಪಟ್ಟಿರುವ ಹಲವಾರು ಸಸ್ಯ ಪ್ರಬೇಧಗಳಲ್ಲಿ ಸ್ಟ್ರೊಬಿಲಾಂತಸ್ (Strobilanthes) ಅನ್ನುವ ಸಸ್ಯಕುಲಕ್ಕೆ ಸೇರಿದ ಅಕ್ಯಾಂತೇಸಿಯೇ (Acanthaceae) ಕುಟುಂಬದ ಒಂದು ಸದಸ್ಯ ಈ ನೀಲಕುರಿಂಜಿ. ಸ್ಟ್ರೊಬಿಲಾಂತಸ್ ಸಸ್ಯಕುಲದಲ್ಲಿ 250ಕ್ಕೂ ಹೆಚ್ಚಿನ ಹೂವುಗಳು ಅರಳುತ್ತವೆ. ಕರ್ನಾಟಕದ ಕೊಡಗು ಜಿಲ್ಲೆಯ ಪುಷ್ಪಗಿರಿ ಪರ್ವತಶ್ರೇಣಿ, ಬ್ರಹ್ಮಗಿರಿ ಪರ್ವತಶ್ರೇಣಿ, ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿ ಪರ್ವತಶ್ರೇಣಿ ಮತ್ತು ಬಳ್ಳಾರಿಯ ಸಂಡೂರಿನ ಬೆಟ್ಟಗಳಲ್ಲಿ ಕೂಡಾ ಈ ಹೂವುಗಳು ಅರಳುತ್ತವೆ.

ನೀಲಕುರಿಂಜಿಯ ವಿಶೇಷ ಏನು?

ಸ್ಟ್ರೊಬಿಲಾಂತಸ್ ಸಸ್ಯಕುಲದ ಹೂವುಗಳಲ್ಲಿ ಕೆಲವು ಹೂವುಗಳು ಪ್ರತೀ ವರ್ಷ ಅರಳಿದರೆ ಕೆಲವು 16 ವರ್ಷಗಳಿಗೊಮ್ಮೆ ಅರಳುತ್ತವೆ. ಹಾಗೇ 12 ವರ್ಷಗಳಿಗೊಮ್ಮೆ ಅರಳುವ ಹೂವೇ ನೀಲಕುರಿಂಜಿ ಹೂವು. ನೀಲಕುರಿಂಜಿ ಎನ್ನುವುದು ಮೂಲದಲ್ಲಿ ತಮಿಳಿನದಾಗಿದ್ದು ನೀಲಿ ಬಣ್ಣದಿಂದ ತುಂಬಿದ ಪರ್ವತ ಎಂದರ್ಥ. ವೈಜ್ಞಾನಿಕವಾಗಿ ಸ್ಟ್ರೊಬಿಲಾಂತಸ್ ಕುಂತಿಯಾನ (Strobilanthes kunthiana) ಎಂಬ ಹೆಸರಿನ ಈ ಹೂವು ಆ ಕುಲದಲ್ಲೇ ಅತೀ ಹೆಚ್ಚು ಪ್ರಮಾಣದಲ್ಲಿ ಪರ್ವತಶ್ರೇಣಿಯ ತುಂಬೆಲ್ಲಾ ಹಬ್ಬಿ ಅರಳುವ ಹೂವಾಗಿದೆ. ಈ ಹೂವು ಅರಳಿರುವ ಕಾಲದಲ್ಲಿ ಇಡೀ ಪರ್ವತವೇ ನೀಲಿ ಬಣ್ಣದಿಂದ ತುಂಬಿ ನೀಲಕುರಿಂಜಿಯೆ ಹೆಸರಿನ ಅರ್ಥವನ್ನು ಸಾರುತ್ತದೆ ಮಾತ್ರವಲ್ಲ ನೋಡುಗರ ಕಣ್ಮನ ಸೆಳೆಯುತ್ತದೆ.

ಈ ನೀಲಕುರಿಂಜಿ ಹೂವುಗಳು ಪ್ರತೀ 12 ವರ್ಷಗಳಿಗೊಮ್ಮೆ ಅರಳುತ್ತದೆ. ಈಗಾಗಲೇ ದಾಖಲಿಸಲ್ಪಟ್ಟಿರುವ ಮಾಹಿತಿಯಂತೆ ಈ ಹೂವು ಮೊದಲ ಬಾರಿಗೆ 1838ರಲ್ಲಿ ದಾಖಲಾಗಿದ್ದು ನಂತರ 12 ವಷರ್ಗಳ ಅಂತರದಲ್ಲಿ 1850, 1862 1874, 1886, 1898, 1910, 1922, 1934, 1946, 1958, 1970, 1982, 1994, 2006 ಮತ್ತು ಕೊನೆಯದಾಗಿ 2018ರಲ್ಲಿ ಅರಳಿರುವುದು ದಾಖಲಾಗಿರುತ್ತದೆ. 2018ರಲ್ಲಿ ಕೊಡಗಿನ ಪುಷ್ಪಗಿರಿ ಪರ್ವತ ಶ್ರೇಣಿಯ ತುದಿಯಲ್ಲಿ ಈ ಹೂವುಗಳು ಅರಳಿರುವುದನ್ನು ಅಲ್ಲಿನ ಅರಣ್ಯಾಧಿಕಾರಿಗಳು ದೃಢೀಕರಿಸಿರುತ್ತಾರೆ. ಮುಂದೆ 2030ಕ್ಕೆ ಅರಳುವುದನ್ನು ನಿರೀಕ್ಷಿಸಲಾಗಿದೆ. ಪುಷ್ಪಗಿರಿ ಅರಣ್ಯ ಪ್ರದೇಶವು ಸಮುದ್ರ ಮಟ್ಟದಿಂದ 1700 ಮೀಟರ್ ಎತ್ತರದಲ್ಲಿರುವುದು ನಾವು ಗಮನಿಸಬೇಕಾದ ವಿಚಾರ.

2021ರಲ್ಲಿ ಕೊಡಗಿನಲ್ಲಿ ಅರಳಿರುವ ಹೂವು ಯಾವುದು?

ಸ್ಟ್ರೊಬಿಲಾಂತಸ್ ಸಸ್ಯಕುಲದಲ್ಲಿ 250ಕ್ಕೂ ಹೆಚ್ಚಿನ ಹೂವುಗಳಿದ್ದು ಅವುಗಳಲ್ಲಿ ಕೊಡಗು ಜಿಲ್ಲೆಯ ಪರ್ವತ ಶ್ರೇಣಿಗಳಲ್ಲಿ ಮೂರು ಜಾತಿಯ ಹೂವುಗಳು ಅರಳುವುದು ದಾಖಲಾಗಿರುತ್ತದೆ. ಅವುಗಳೆಂದರೆ ಸ್ಟ್ರೊಬಿಲಾಂತಸ್ ಕುಂತಿಯಾನ (Strobilanthes kunthiana), ಸ್ಟ್ರೊಬಿಲಾಂತಸ್ ಸಿಸಿಲಿಸ್ (Strobilanthes sessilis) ಮತ್ತು ಸ್ಟ್ರೊಬಿಲಾಂತಸ್ ಕುಸ್ಪಿಡೇಟಸ್ (Strobilanthes cuspidatus). ಇವುಗಳಲ್ಲಿ ಸ್ಟ್ರೊಬಿಲಾಂತಸ್ ಕುಂತಿಯಾನ ಹೊರತುಪಡಿಸಿ ಉಳಿದ 2 ಜಾತಿಯ ಹೂವುಗಳು 4-5-6-7 ವರ್ಷಗಳ ಅಂತರದಲ್ಲಿ ಕೊಡಗು ಜಿಲ್ಲೆಯ ಪರ್ವತಗಳಲ್ಲಿ ಅಥವಾ ಎತ್ತರದ ಗುಡ್ಡಗಳಲ್ಲಿ ಅರಳುವುದನ್ನು ಅಲ್ಲಿನ ಸ್ಥಳೀಯರು ದಾಖಲಿಸಿರುತ್ತಾರೆ. ಸದರಿ 2021ರ ಆಗಸ್ಟ್ ಮಾಹೆಯಲ್ಲಿ ಕೊಡಗಿನ ಅತ್ಯಂತ ಆಕರ್ಷಣೀಯ ಪರ್ವತ ಪ್ರದೇಶವಾದ ಮಾಂದಲ್‌ಪಟ್ಟಿಯಲ್ಲಿ ಮತ್ತು ಪುಷ್ಪಗಿರಿ ಪರ್ವತ ಪ್ರದೇಶದಲ್ಲಿ ಅರಳಿರುವುದು ಸ್ಟ್ರೊಬಿಲಾಂತಸ್ ಸಿಸಿಲಿಸ್ ಜಾತಿಯ ಕುರಿಂಜಿ ಹೂವಾಗಿರುತ್ತದೆ.

ಈ ಹೂವುಗಳನ್ನು ಕಳೆದ ಮೂರು ವರ್ಷಗಳಿಂದ ಕೊಡಗಿನ ಬೇರೆ ಬೇರೆ ಗುಡ್ಡ ಪ್ರದೇಶಗಳಲ್ಲಿ ಅರಳಿರುವುದನ್ನು ನಾನೇ ಕಂಡಿದ್ದೇನೆ. ಕಳೆದ ವರ್ಷ ಕೂಡಾ ಕೊಡಗು ಜಿಲ್ಲೆಯ ಕಾಲೂರಿನಲ್ಲಿ ಮತ್ತು ಪುಷ್ಪಗಿರಿಯಲ್ಲಿ ಈ ಹೂವುಗಳು ಅರಳಿದೆ. ಆದರೆ ಈ ವರ್ಷ ಮಾಂದಲ್‌ಪಟ್ಟಿಯ ಬೆಟ್ಟದ ಪೂರ್ತಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಅರಳಿರುವುದರಿಂದ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಸುದ್ದಿಯಾಗಿದ್ದು ಮಾತ್ರವಲ್ಲದೆ ಪ್ರವಾಸಿಗರನ್ನು ಆಕರ್ಷಿಸುವ ಕಾರಣದಿಂದಲೋ ಅಥವಾ ಮಾಹಿತಿಯ ಕೊರತೆಯಿಂದಲೋ ಸುದ್ದಿ ಮಾಧ್ಯಮಗಳು ಮತ್ತು ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜನ ಈ ಹೂವುಗಳನ್ನು ನೀಲಕುರಿಂಜಿ ಎಂದು ಕರೆದರು. ಆದರೆ
ವಾಸ್ತವದಲ್ಲಿ ಕೊಡಗು ಜಿಲ್ಲೆಯ ಅನೇಕ ಗುಡ್ಡಗಳಲ್ಲಿ ಅರಳಿರುವ ಈ ನೀಲಿ ಸುಂದರಿ ಮಾತ್ರ ಸ್ಟ್ರೊಬಿಲಾಂತಸ್ ಸಿಸಿಲಿಸ್!.

ವ್ಯತ್ಯಾಸವೇನು?

ಸ್ಟ್ರೊಬಿಲಾಂತಸ್ ಕುಂತಿಯಾನ ಮತ್ತು ಸ್ಟ್ರೊಬಿಲಾಂತಸ್ ಸಿಸಿಲಿಸ್ ಹೂವುಗಳ ನಡುವೆ ಕಾಣಲು ಅಂತಹ ದೊಡ್ಡ ವ್ಯತ್ಯಾಸವೇನಿರುವುದಿಲ್ಲ. ಎರಡೂ ಪೊದೆಯ ಸಸ್ಯಗಳಾಗಿದ್ದು ಹೂವುಗಳು ಗೊಂಚಲಾಗಿ ಬೆಳೆಯುತ್ತದೆ ಮತ್ತು ಹೂವುಗಳಿಗೆ ಬೇರೆ ಹೂವುಗಳಂತೆ ತೊಟ್ಟುಗಳಿರುವುದಿಲ್ಲ. ಹೂವನ್ನು ನೇರ ಗೊಂಚಲಿನಿಂದಲೇ ಬೇರ್ಪಡಿಸಬೇಕು. ಕನಕಾಂಬರ ಹೂವಿನ ಹಾಗೆ!.

ನೀಲಕುರಿಂಜಿಯ ಹೂವುಗಳ ಕಾಂಡವು ತುಸು ಎತ್ತರಕ್ಕೆ, ನೇರವಾಗಿ ಬೆಳಯುವುದಲ್ಲದೆ ಕಾಂಡವು ಗಟ್ಟಿಯಾಗಿರುತ್ತದೆ. ಎಲೆಗಳು ತುಸು ಉದ್ದವಾಗಿರುತ್ತದೆ. ಹೂವಿನ ಮುಂಭಾಗ ತುಸು ಹೆಚ್ಚೇ ಅಗಲವಾಗಿರುತ್ತದೆ. ಆದರೆ ಸ್ಟ್ರೊಬಿಲಾಂತಸ್ ಸಿಸಿಲಿಸ್ ಹೂವುಗಳು ಗಂಟೆಯಾಕಾರದಲ್ಲಿ ಅರಳಿ ಹೂವಿನ ದಳದ ಅಂಚುಗಳು ಸ್ವಲ್ಪವೇ ಸ್ವಲ್ಪ ಹಿಮ್ಮುಖವಾಗಿ ಬಾಗಿರುತ್ತದೆ. ಎರಡೂ ಹೂವುಗಳನ್ನು ಒಟ್ಟಿಗೇ ನೋಡುವ ಕಾಲ ಬಹುಶಃ ಸಿಗಲಾರದೇನೋ ಅಥವಾ ಮುಂಬರುವ ದಿನಗಳಲ್ಲಿ ಒಟ್ಟಿಗೇ ಒಂದೇ ವರ್ಷ ಅರಳುವುದೇನೋ? ಕಾದು ನೋಡಬೇಕಿದೆ.

ವಿನೋದ್ ಕುಮಾರ್ ವಿ ಕೆ

ವಿನೋದ್ ಕುಮಾರ್ ವಿ ಕೆ
ವಿನೋದ್ ಹುಟ್ಟಿದ್ದು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ. 2011ರಿಂದ ಛಾಯಾಗ್ರಹಣದಲ್ಲಿ ಆಸಕ್ತಿ. ಹಕ್ಕಿ, ಚಿಟ್ಟೆ, ಕೀಟಗಳಿಂದ ಪ್ರಾರಂಭವಾಗಿ ಟ್ರೆಕ್ಕಿಂಗ್ ಹವ್ಯಾಸವಾಗಿ ಬೆಳೆದಿದೆ. ಅರಣ್ಯ ಇಲಾಖೆಯಲ್ಲಿ ಕಚೇರಿ ಸಹಾಯಕನಾಗಿ ವೃತ್ತಿ. ಸದ್ಯಕ್ಕೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ವಾಸವಾಗಿದ್ದಾರೆ.


ಇದನ್ನೂ ಓದಿ: ಗೌರಿ ಕಾರ್ನರ್: ಸೌಹಾರ್ದ ಗಿರಿಯಲ್ಲಿ ನಿಸರ್ಗದ ’ನೀಲಿಗ್ಯಾನ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...