Homeಮುಖಪುಟದೇಶದ ಕಾನೂನಿಗಿಂತ ವಿಎಚ್‌ಪಿ ದೊಡ್ಡದೆ?: ಅಮಿತ್‌ ಶಾಗೆ ಕೆಟಿಆರ್ ಪ್ರಶ್ನೆ

ದೇಶದ ಕಾನೂನಿಗಿಂತ ವಿಎಚ್‌ಪಿ ದೊಡ್ಡದೆ?: ಅಮಿತ್‌ ಶಾಗೆ ಕೆಟಿಆರ್ ಪ್ರಶ್ನೆ

- Advertisement -
- Advertisement -

‘ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ದೇಶದ ಕಾನೂನಿಗಿಂತ ದೊಡ್ಡದೆ?’ ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ, ತೆಲಂಗಾಣ ರಾಜ್ಯ ಸಚಿವ ಕೆ.ಟಿ.ರಾಮರಾವ್ ಪ್ರಶ್ನಿಸಿದ್ದಾರೆ.

ಜಹಾಂಗೀರ್‌ಪುರಿಯಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನ್ನ ಕಾರ್ಯಕರ್ತರ ವಿರುದ್ಧ ಯಾವುದೇ ಕ್ರಮ ಕೈಗೊಂಡರೆ ದೆಹಲಿ ಪೊಲೀಸರ ವಿರುದ್ಧ ಹೋರಾಟ ನಡೆಸುವುದಾಗಿ ವಿಎಚ್‌ಪಿ ಬೆದರಿಕೆ ಹಾಕಿರುವ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ದೆಹಲಿ ಪೊಲೀಸರ ವಿರುದ್ಧದ ಇಂತಹ ಅತಿರೇಕದ ಅಸಂಬದ್ಧತೆಯನ್ನು ಸಹಿಸುತ್ತೀರಾ” ಎಂದು ಕೆಟಿಆರ್‌‌, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೇಳಿದ್ದಾರೆ.

“ಗೃಹ ಸಚಿವ ಅಮಿತ್ ಶಾಜೀ, ಈ ವ್ಯಕ್ತಿಗಳು ದೇಶದ ಕಾನೂನು ಮತ್ತು ಐಪಿಸಿ (ಭಾರತೀಯ ದಂಡ ಸಂಹಿತೆ)ಗಿಂತ ಮೇಲಿದ್ದಾರೆಯೇ?” ಎಂದು ಕೆಟಿಆರ್ ಟ್ವೀಟ್ ಮಾಡಿದ್ದು, “ನಿಮಗೆ ನೇರವಾಗಿ ವರದಿ ಮಾಡುವ ದೆಹಲಿ ಪೊಲೀಸರ ವಿರುದ್ಧ  ಇಂತಹ ಅತಿರೇಕದ ಅಸಂಬದ್ಧತೆಯನ್ನು ನೀವು ಸಹಿಸಿಕೊಳ್ಳುತ್ತೀರಾ?” ಎಂದು ಕೇಳಿದ್ದಾರೆ.

ಎರಡು ದಿನಗಳ ಹಿಂದೆ ಕೋಮುಗಲಭೆ ಭುಗಿಲೆದ್ದ ಜಹಾಂಗೀರ್‌ಪುರಿಯಲ್ಲಿ ಹನುಮ ಜಯಂತಿ ಮೆರವಣಿಗೆಯನ್ನು ಅನುಮತಿಯಿಲ್ಲದೆ ರ್‍ಯಾಲಿ ನಡೆಸಿದ್ದಕ್ಕಾಗಿ ಆಯೋಜಕರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರ ವಿಎಚ್‌ಪಿ ಬೆದರಿಕೆ ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಶನಿವಾರ ಸಂಜೆ ರ್‍ಯಾಲಿಯ ಸಂಘಟಕರ ವಿರುದ್ಧ ಐಪಿಸಿ ಸೆಕ್ಷನ್ 188 (ಸಾರ್ವಜನಿಕ ಸೇವಕರು ಘೋಷಿಸಿದ ಆದೇಶಕ್ಕೆ ಅವಿಧೇಯತೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಾಯುವ್ಯ ದೆಹಲಿಯ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಉಷಾ ರಂಗನಾನಿ ಹೇಳಿದ್ದಾರೆ.

ಇದಕ್ಕೂ ಮುನ್ನ ಡಿಸಿಪಿ ಅಧಿಕೃತ ಸಂದೇಶ ರವಾನಿಸಿದ್ದು, ಅನುಮತಿ ಇಲ್ಲದೆ ಧಾರ್ಮಿಕ ಮೆರವಣಿಗೆ ನಡೆಸಿದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಸ್ಥಳೀಯ ವಿಎಚ್‌ಪಿ ನಾಯಕ ಪ್ರೇಮ್ ಶರ್ಮಾ ಅವರನ್ನು ಬಂಧಿಸಲಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಇಷ್ಟೆಲ್ಲ ಆದ ಮೇಲೆ ಹೇಳಿಕೆಯನ್ನು ಪೊಲೀಸರು ಹಿಂಪಡೆದ್ದಾರೆ. ಐಪಿಸಿ ಸೆಕ್ಷನ್ 188ರ ಅಡಿಯಲ್ಲಿನ ಅಪರಾಧವು ಜಾಮೀನಿಗೆ ಅರ್ಹವಾಗಿದೆ. ತನಿಖೆಗೆ ಸಂಬಂಧಿಸಿದ ವ್ಯಕ್ತಿಯನ್ನು ವಿಚಾರಣೆಯ ನಂತರ ಬಿಡುಗಡೆ ಮಾಡಲಾಗಿದೆ. ಪೊಲೀಸರು ನೀಡಿರುವ ಪರಿಷ್ಕೃತ ಹೇಳಿಕೆಯಲ್ಲಿ ವಿಎಚ್‌ಪಿ ಮತ್ತು ಬಜರಂಗದಳದ ಹೆಸರೂ ಕೂಡ ಇಲ್ಲ.

ಇದನ್ನೂ ಓದಿರಿ: ದಲಿತ್‌ ಫೈಲ್ಸ್‌‌: ಕೂಲಿ ಕೇಳಿದ ದಲಿತ ಬಾಲಕನಿಗೆ ಹಲ್ಲೆ ನಡೆಸಿ ಪಾದ ನೆಕ್ಕಿಸಿದ ದುಷ್ಕರ್ಮಿಗಳು

ಇದೇ ವೇಳೆ ಕೆಟಿಆರ್ ಮತ್ತೊಂದು ಟ್ವೀಟ್ ನಲ್ಲಿ ಎನ್‌ಡಿಎ ಸರ್ಕಾರವನ್ನು ಎನ್‌ಪಿಎ ಎಂದು ಬಣ್ಣಿಸಿದ್ದಾರೆ. “ಭಾರತದಲ್ಲಿ ನಿರುದ್ಯೋಗ 45 ವರ್ಷಗಳ ಗರಿಷ್ಠದ್ದಾಗಿದೆ, 30 ವರ್ಷಗಳ ಗರಿಷ್ಠ ಹಣದುಬ್ಬರ, ಇಂಧನ ಬೆಲೆಗಳ ಸಾರ್ವಕಾಲಿಕ ಹೆಚ್ಚಳ, ಎಲ್ಪಿಜಿ ಸಿಲಿಂಡರ್ ಬೆಲೆ ವಿಶ್ವದಲ್ಲೇ ಅತಿ ಹೆಚ್ಚು, ಆರ್‌ಬಿಐ ಗ್ರಾಹಕರ ವಿಶ್ವಾಸ ಕುಸಿತ” ಎಂದು ಅವರು ಕುಟುಕಿದ್ದಾರೆ.

“ನಾವು ಇದನ್ನು ಎನ್‌ಡಿಎ ಸರ್ಕಾರ ಎನ್ನಬೇಕೋ? ಎನ್‌ಪಿಎ ಸರ್ಕಾರ ಎಂದು ಕರೆಯಬೇಕೋ? ಭಕ್ತರಿಗೆ ಎನ್‌ಪಿಎ= ನಿರುಪಯುಕ್ತ ಆಸ್ತಿ (ನಾನ್‌ ಫರ್‍ಫಾರ್ಮಿಂಗ್‌ ಅಸೆಟ್‌)” ಎಂದು ಕೆಟಿಆರ್‌ ತಿವಿದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...