Homeಕರ್ನಾಟಕಕರ್ನಾಟಕ ಬಂದ್ ಯಶಸ್ವಿಯಾದದ್ದು ಏಕೆ? ಹೇಗೆ? ಚಳವಳಿಗಳ ಮಟ್ಟಿಗೆ ತಿರುವು ಬಿಂದು ಆಗಬಹುದಾದ ಬೆಳವಣಿಗೆ ಇದು

ಕರ್ನಾಟಕ ಬಂದ್ ಯಶಸ್ವಿಯಾದದ್ದು ಏಕೆ? ಹೇಗೆ? ಚಳವಳಿಗಳ ಮಟ್ಟಿಗೆ ತಿರುವು ಬಿಂದು ಆಗಬಹುದಾದ ಬೆಳವಣಿಗೆ ಇದು

ಕರ್ನಾಟಕ ಬಂದ್‌ಗೆ ಕರೆ ಕೊಟ್ಟವರಿಗೇ ಅದು ಈ ಪ್ರಮಾಣದ ಯಶಸ್ಸು ಕಾಣುತ್ತದೆ ಎಂದು ತೋರಿರಲಿಲ್ಲ. ಹೀಗಾಗಿ ಈ ಯಶಸ್ಸಿನ ಕಾರಣಗಳು ಮತ್ತು ಪಾಠಗಳನ್ನು ವಿಶ್ಲೇಷಿಸುವ ಅಗತ್ಯವಿದೆ.

- Advertisement -
- Advertisement -

ರೈತ, ದಲಿತ, ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯು ನೀಡಿದ ಕರ್ನಾಟಕ ಬಂದ್‍ಅನ್ನು ಯಶಸ್ವಿ ಎಂದು ಕರೆಯಲು ಬೇಕಾದ ಮಾನದಂಡಗಳನ್ನು ಅದು ಪೂರೈಸಿದೆ. ಲಾಕ್‍ಡೌನ್ ಅಥವಾ ಹೆದರಿಕೆ ಇದ್ದಾಗ ಹೊರತುಪಡಿಸಿ ಸಂಪೂರ್ಣ ಬಂದ್ ಎಂದೂ ಆಗುವುದಿಲ್ಲ. ಕಾವೇರಿ ವಿಚಾರಕ್ಕೆ ಬಂದ್ ಕರೆ ಕೊಟ್ಟಾಗ, ದಕ್ಷಿಣದ ನಾಲ್ಕೈದು ಜಿಲ್ಲೆಗಳಲ್ಲಿ ಮಾತ್ರ ಬಂದ್ ಆಗುತ್ತಿತ್ತು; ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲೂ ಸ್ಪಂದನೆ ಇದ್ದಂತಹ ಬಂದ್‍ಗಳು ನಡೆದದ್ದು ಬಹಳ ಕಡಿಮೆ. ಆದರೆ ಇಂದಿನ ಬಂದ್ ಇಡೀ ರಾಜ್ಯದಲ್ಲಿ ಒಂದಲ್ಲಾ ಒಂದು ಮಟ್ಟಕ್ಕೆ ಪರಿಣಾಮ ಬೀರಿದೆ. ಕೇಂದ್ರ ಬೆಂಗಳೂರಿನಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲವೂ ಬಂದ್ ಆಗಿತ್ತೆನ್ನುವುದು ಮಾತ್ರವಲ್ಲದೇ, ವಿವಿಧ ಭಾಗಗಳಲ್ಲಿ ಸಂಚಾರ ಹಾಗೂ ಚಟುವಟಿಕೆ ಕಡಿಮೆಯಾಗಿತ್ತು; ಜೊತೆಗೆ ಇಡೀ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಮತ್ತು ನೂರಕ್ಕೂ ಹೆಚ್ಚು ತಾಲೂಕು ಕೇಂದ್ರಗಳಲ್ಲಿ ಬಂದ್‍ನ ವಾತಾವರಣ ಉಂಟಾಗಿದ್ದು ಸ್ಪಷ್ಟ.‌

ಇದು ಹೇಗೆ ಸಾಧ್ಯವಾಯಿತು ಎಂಬುದು ಒಂದು ಮಟ್ಟಿಗೆ ಅಚ್ಚರಿಯೇ ಸರಿ. ಇದು ಕಾಂಗ್ರೆಸ್ ಅಥವಾ ಜೆಡಿಎಸ್‍ನ ಬೆಂಬಲದಿಂದ ಆಯಿತು ಎಂದೇನಾದರೂ ಭಾವಿಸಿದರೆ ಸ್ವತಃ ಅವರಿಗೇ ಅಚ್ಚರಿಯಾಗುತ್ತದೆ. ಏಕೆಂದರೆ ಅಳೆದೂ ಸುರಿದು ನಿನ್ನೆ ಮಧ್ಯಾಹ್ನದ ಮೇಲೆ ಅವೆರಡೂ ಪಕ್ಷಗಳು ಬಂದ್‍ಗೆ ಬೆಂಬಲ ಘೋಷಿಸಿದವು ಮತ್ತು ಇಂದಿನ ಬಂದ್‍ನ ಸಂದರ್ಭದಲ್ಲೂ ಅವರು ಬೀದಿಗಳಲ್ಲಿ ಹೆಚ್ಚೇನೂ ಕಾಣಲಿಲ್ಲ. ಮಂಡ್ಯದಂತಹ ಜಿಲ್ಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರು ಇನ್ನೊಬ್ಬ ನಾಯಕರೊಂದಿಗೆ (ಇನ್ನಿಬ್ಬರು ಜೊತೆಗಾರರನ್ನೂ ಕರೆತರದೇ) ಬಂದ್‍ಗೆ ಬೆಂಬಲ ಸೂಚಿಸಿದ್ದರು! ಇದು ಅವರ ಬೆಂಬಲದ ಪರಿ!! ರಾಜಕೀಯ ಪಕ್ಷಗಳ ತೋರಿಕೆಯ ಬೆಂಬಲದ ಘೋಷಣೆಗೆ ಮುಂಚೆಯೇ ಬಹುತೇಕ ಎಲ್ಲಾ ಜಿಲ್ಲೆಗಳು ಮತ್ತು ನೂರಕ್ಕೂ ಹೆಚ್ಚು ತಾಲೂಕುಗಳಲ್ಲಿ ಬಂದ್‍ಗೆ ಪೂರ್ವಭಾವಿ ಸಭೆಗಳನ್ನು ಹಲವಾರು ಸಂಘಟನೆಗಳು ಒಟ್ಟುಗೂಡಿ ನಡೆಸಿದ್ದವು; ಸ್ಥಳೀಯ ಜಿಲ್ಲಾಧಿಕಾರಿ ಮತ್ತು ಎಸ್‍ಪಿಗಳು ಅವರೊಂದಿಗೆ ಸಭೆ ನಡೆಸಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಲು ಕೋರಿದ್ದರು.

ಬೆಂಗಳೂರಿನಲ್ಲಿ ಕನ್ನಡ ಸಂಘಟನೆಗಳು ಬೀದಿಗಿಳಿದವಾದರೂ ವಿವಿಧ ಬಡಾವಣೆಗಳಲ್ಲೆಲ್ಲಾ ವ್ಯಾಪಿಸಿದ ಪ್ರಚಾರ, ಬೈಕ್‍ಗಳಲ್ಲಿ ವಿಪರೀತ ಓಡಾಟ, ಸ್ಥಳೀಯವಾದ ಬೆದರಿಕೆ ಇತ್ಯಾದಿಗಳ ಮೂಲಕ ಅದು ವ್ಯಕ್ತಗೊಳ್ಳಲಿಲ್ಲ. ಹೀಗಿದ್ದೂ ಈ ಬಂದ್ ಬಹುಮಟ್ಟಿಗೆ ಯಶಸ್ವಿಯಾದದ್ದು ಹೇಗೆ?‌

ಕರ್ನಾಟಕ ಬಂದ್

ಒಂದು ವೇಳೆ ಟಿವಿ ಮತ್ತು ಪತ್ರಿಕೆಗಳಲ್ಲಿ ನಾಳೆ ಈ ಬಂದ್‍ಅನ್ನು ಭಾಗಶಃ ಯಶಸ್ವಿ ಅಥವಾ ಪರಿಣಾಮಕಾರಿ ಬಂದ್ ಎಂದಾದರೆ ಕರೆಯದೇ ಇದ್ದಲ್ಲಿ ಅದು ಅವರು ಬಿಜೆಪಿಗೆ ಮಾರಿಕೊಂಡಿದ್ದಾರೆನ್ನುವ ಭಾವ ಇನ್ನಷ್ಟು ಗಟ್ಟಿಯಾಗಬಹುದೇ ಹೊರತು ಅದಕ್ಕಿಂತ ಹೆಚ್ಚೇನಿಲ್ಲ.

ಏಕೆಂದರೆ ಯಾವುದೇ ‘ಭಾವನಾತ್ಮಕವಾದ ವಿಚಾರ’ ಇಲ್ಲದೇ, ತೋಳ್ಬಲ ಅಥವಾ ಅಧಿಕಾರದ ಬಲವಿಲ್ಲದೇ, ಸರ್ಕಾರವನ್ನು ಎದುರು ಹಾಕಿಕೊಂಡು ನಡೆದು ಈ ಮಟ್ಟಿಗಿನ ಪರಿಣಾಮ ಬೀರಿರುವುದು ಸದ್ಯದ ಸಂದರ್ಭದಲ್ಲಿ ಅಸಾಧಾರಣವೇ ಸರಿ. ಅದರಲ್ಲೂ ಬಹುತೇಕ ಮಾಧ್ಯಮಗಳು ಆಳುವ ಪಕ್ಷದ ಮತ್ತು ಸಿದ್ಧಾಂತದ ತುತ್ತೂರಿಗಳಾಗಿರುವಾಗ ಅದರ ಬಲವೂ ಖಾತರಿಯಿರಲಿಲ್ಲ. ಆದರೂ ಇದ್ದುದರಲ್ಲಿ ಕೆಲವು ಟಿವಿ ಚಾನೆಲ್‍ಗಳು ಬಂದ್ ನಡೆಯಲಿದೆ ಎನ್ನುವ ಸಂದೇಶವನ್ನು ಬಲವಾಗಿಯೇ ಸಾರಿದ್ದವು. ಹಾಗೆಂದು ಈ ಬಂದ್‍ನ ಕ್ರೆಡಿಟ್‍ಅನ್ನು ಮಾಧ್ಯಮಗಳು ತೆಗೆದುಕೊಳ್ಳುವುದೂ ಸಾಧ್ಯವಿಲ್ಲ. ‌

ಹಾಗಾದರೆ ಈ ಬಂದ್ ಕರೆ ಇಷ್ಟು ಯಶಸ್ವಿಯಾದದ್ದು ಹೇಗೆ?

ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ಭಾವನೆ

ಮೊದಲನೆಯದಾಗಿ, ನರೇಂದ್ರ ಮೋದಿಯವರು, ಯಡಿಯೂರಪ್ಪನವರು ಹಾಗೂ ಬಿಜೆಪಿ ಪಕ್ಷವು ತಾವು ರೈತರ ಪರವಾದ ನೀತಿಗಳನ್ನು ಅನುಸರಿಸುತ್ತಿದ್ದೇವೆ ಎಂದು ಎಷ್ಟೇ ಹೇಳಿದರೂ ಹೌದೆಂದು ಬಹುತೇಕ ಯಾರಿಗೂ ಅನ್ನಿಸುತ್ತಿಲ್ಲ. ಇವರಿಗಿಂತ ಕಾಂಗ್ರೆಸ್ ಅಥವಾ ಜೆಡಿಎಸ್ ಅಥವಾ ಇನ್ಯಾವುದೋ ಪಕ್ಷಗಳು ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದರು ಎಂದೂ ಅನ್ನಿಸಿರಲಿಕ್ಕಿಲ್ಲ. ಆದರೆ ಬಿಜೆಪಿ ನೇತೃತ್ವದ ಸರ್ಕಾರಗಳು ರೈತರ ಪರವಾಗಿದ್ದಾರೆ ಎಂಬುದು ಅದರ ಬೆಂಬಲಿಗರ ಭಾವನೆಯೂ ಆಗಿಲ್ಲ. ಈ ಹೊತ್ತಿನಲ್ಲಂತೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ರೈತರಿಗೆ ಅನ್ಯಾಯವಾಗಿದೆ ಮತ್ತು ಆಗುತ್ತಿದೆ ಎಂಬ ಭಾವವು ಎಲ್ಲೆಡೆ ಮೂಡಿದೆ. ಎಪಿಎಂಸಿ ಮತ್ತು ಇನ್ನಿತರ ಕಾಯ್ದೆ ತಿದ್ದುಪಡಿಗಳು ಒಳ್ಳೆಯದಲ್ಲ ಎಂಬ ಭಾವನೆ ವ್ಯಾಪಕವಾಗತೊಡಗಿದೆ. ನಿಜಕ್ಕೂ ಕೆಟ್ಟಿದ್ದ, ಒಂದು ಮಟ್ಟಿಗೆ ರೈತವಿರೋಧಿಯೂ ಆಗಿದ್ದ ಎಪಿಎಂಸಿಯ ಕುರಿತು ದೊಡ್ಡ ನಿರೀಕ್ಷೆಯು ರೈತರಲ್ಲಿಲ್ಲ; ಹಾಗೆಂದು ಅದರ ರಚನೆಯನ್ನೇ ಬದಲಿಸುವುದು ಸರಿಯೆಂದು ಯಾರಿಗೂ ಅನ್ನಿಸಿದಂತಿಲ್ಲ.

ಈ ಸರ್ಕಾರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ಅನಿಸಿಕೆ

ರೈತರಿಗೆ ಮಾತ್ರವಲ್ಲದೇ, ಮಿಕ್ಕ ಜನರಿಗೂ ಈ ಸರ್ಕಾರಗಳು ಏಕೋ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಭಾವ ಹೆಚ್ಚಾಗುತ್ತಿದೆ. ಅಂತಹ ಅಭಿಪ್ರಾಯ ರೂಪಿಸುವಲ್ಲಿ ಸೋಷಿಯಲ್‌ ಮೀಡಿಯಾ ವಾರಿಯರ್‌ಗಳು ಮಾತ್ರ ಪಾತ್ರ ಹೊಂದಿಲ್ಲ. ಅನಕ್ಷರಸ್ಥರು, ಹಳ್ಳಿಯ ಹಿರಿಯರು, ಮೇಲ್ನೋಟಕ್ಕೆ ಅಷ್ಟು ಸುಶಿಕ್ಷಿತರೆಂದು ತೋರದವರು ಸಾಮಾನ್ಯವಾಗಿ ಪ್ರಮುಖ ಪಾತ್ರ ವಹಿಸುತ್ತಾರೆ. ‘ಈ ಮೋದಿದು ಬರೀ ಮಾತೇ ಆಯಿತು. ಜನರಿಗೆ ಸಹಾಯಕ್ಕೆ ಬರೋ ಅಂಥದ್ದು ಏನೂ ಆಗಲಿಲ್ಲ’ ಎಂಬ ಮಾತುಗಳು ಹಳ್ಳಿಗಳಲ್ಲಿ ದಿನೇ ದಿನೇ ಹೆಚ್ಚಾಗುತ್ತಿವೆ. ತಾಲೂಕು ಕೇಂದ್ರವೊಂದರಲ್ಲಿ ವಾಸಿಸುವ ಅಂತಹ ಒಬ್ಬ ಹಿರಿಯರು ತಾವೇ ಸ್ವತಃ ಬಿಜೆಪಿಯಲ್ಲಿದ್ದರೂ ‘ಎಷ್ಟು ದಿನಾ ಅಂತ ನಿರೀಕ್ಷೆ ಇಟ್ಟುಕೊಳ್ಳೋದು ಇವ್ರೇ, ಜನರಿಗೆ ಗೊತ್ತಾಗೋಗುತ್ತೆ ಇದು ಬರೀ ಬುಡ್‍ಬುಡಿಕೆ ಅಂತ’ ಎಂದು ಹೇಳಿದ ಮಾತು ಅಚ್ಚರಿ ಹುಟ್ಟಿಸುತ್ತಿದೆ.

ಕೊರೊನಾ ಮತ್ತು ಲಾಕ್‍ಡೌನ್ ಸಂದರ್ಭದ ಸಮಸ್ಯೆಗಳು

ಇಂತಹ ಬಿಕ್ಕಟ್ಟಿನ ಹೊತ್ತಿನಲ್ಲಿ ಸರ್ಕಾರಗಳ ಯಶಸ್ಸು, ವೈಫಲ್ಯಗಳನ್ನು ಜನರು ಕೂಡಲೇ ಅಳೆಯಲು ಹೋಗುವುದಿಲ್ಲ. ಆದರೆ ಇಲ್ಲಿ ಸುದೀರ್ಘ ಆರು ತಿಂಗಳುಗಳೇ ಕಳೆದು ಹೋದವು. ಸಾಮಾನ್ಯ ಸಂದರ್ಭದಲ್ಲಿ ಇನ್ಯಾರ ಮೇಲೋ ಹಾಕಿ ನುಣುಚಿಕೊಳ್ಳುವುದು ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಧ್ಯವಾಗದು. ಒಂದೆರಡು ತಿಂಗಳುಗಳ ಕಾಲ ‘ಯಾವ ಸರ್ಕಾರವಾದರೂ ಏನು ಮಾಡಲಾದೀತು?’ ಎಂದುಕೊಳ್ಳುತ್ತಿರುತ್ತಾರೆ. ಆದರೆ ಎಡವಟ್ಟುಗಳ ಪರಂಪರೆ ಮುಂದುವರೆದಂತೆ ಜನರಿಗೆ ಅಸಮಾಧಾನ ಹೆಚ್ಚಾಗುತ್ತಾ ಹೋಗುತ್ತದೆ. ‘ನಮ್ಮ ಜನರೇ ಸರಿಯಿಲ್ಲ’ ಎಂದು ಜನರಲ್ ಆಗಿ ಹೇಳುವುದು ಈಗಲೂ ಇದೆ, ಆದರೆ ‘ಮೇಲಿಂದಲೇ ಎಲ್ಲೋ ಎಡವಟ್ಟಾಗಿದೆ’ ಎಂಬುದು ಎಲ್ಲರಿಗೂ ಗೊತ್ತಾದಂತಿದೆ. ಇದರ ಅರಿವು ನರೇಂದ್ರ ಮೋದಿಯವರಿಗೂ ಇತ್ತು. ಹಾಗಾಗಿಯೇ ಮೊದಲ ಒಂದೆರಡು ಸಾರಿ ಬಿಟ್ಟರೆ ನಂತರ ಅವರು ಕೊರೊನಾ ವಿಚಾರದಲ್ಲಿ ದೇಶವನ್ನುದ್ದೇಶಿಸಿ ಮಾತಾಡಿ, ಎಲ್ಲದರ ಹೊಣೆಯನ್ನು ತಾವೇ ಹೊತ್ತುಕೊಳ್ಳಲು ಹೋಗಲಿಲ್ಲ.

ಕರ್ನಾಟಕ ಬಂದ್

ಕೊರೊನಾ ಹೊತ್ತಿನ ಆಕ್ರೋಶಕ್ಕೆ ವೇದಿಕೆ

ಈ ಸಂದರ್ಭವೇ ಹೇಗಿತ್ತೆಂದರೆ ಜನರು ವಿಪರೀತವಾಗಿ ತಮ್ಮ ಆಕ್ರೋಶವನ್ನು ಹೊರಚೆಲ್ಲಲು ಸಾಧ್ಯವಿರಲಿಲ್ಲ. ಹೆಚ್ಚಿನವರು ಮನೆಯಲ್ಲೇ ಇದ್ದರು. ಹಬ್ಬ ಹರಿದಿನಗಳು, ಮದುವೆ, ತಿಥಿಗಳೂ ದೊಡ್ಡದಾಗಿ ಜನರನ್ನು ಸೇರಿಸಿ ನಡೆದಿರಲಿಲ್ಲ. ಹೀಗಾಗಿ ಸಾರ್ವಜನಿಕವಾಗಿ ಹರಿದು ಹೋಗಬಹುದಾದ ಅಸಮಾಧಾನಗಳಿಗೂ ವೇದಿಕೆ ಸಿಕ್ಕಿರಲಿಲ್ಲ. ಅದಕ್ಕೂ ಈಗೊಂದು ವೇದಿಕೆ ಸಿಕ್ಕಿದೆ. ಅದು ಇನ್ಯಾವುದೋ ನಿರ್ದಿಷ್ಟ ಸಮುದಾಯವಾಗಿದ್ದರೆ ಅಷ್ಟು ಸುಲಭಕ್ಕೆ ಬೆಸೆದುಕೊಳ್ಳುತ್ತಿರಲಿಲ್ಲ; ‘ಅನ್ನ ನೀಡುವ’ ರೈತರದ್ದಾಗಿರುವುದರಿಂದ ಮಿಕ್ಕವರಿಗೂ ಲಿಂಕ್ ಮಾಡಿಕೊಳ್ಳಲು ಸಾಧ್ಯವಾಗಿದೆ.

ಪ್ರಜ್ಞಾವಂತ ಗುಂಪುಗಳ ಬೆಂಬಲ

ವಿವಿಧ ಸಂಘಟನೆಗಳ (ವಿಶೇಷವಾಗಿ ಕನ್ನಡ ಸಂಘಟನೆಗಳ) ಸ್ವಯಂಪ್ರೇರಿತ ಬೆಂಬಲವು ಈ ಹೋರಾಟಕ್ಕೆ ಹರಿದುಬಂದಿದ್ದು ಎದ್ದು ಕಾಣುತ್ತಿತ್ತು. ಇನ್ನೂ ಬಂದ್‍ಗೆ ಕರೆಯೇ ಹೊರಬರದ ಹೊತ್ತಿನಲ್ಲೇ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡರು ವಿಡಿಯೋ ಮಾಡಿ ಬೆಂಬಲ ಸೂಚಿಸಿದ್ದರು! ಕಳೆದ ಆರು ತಿಂಗಳಿನಿಂದ ಪ್ರತಿಭಟನೆಗಳನ್ನು ಮಾಡಲಾಗದಿದ್ದ ಸಂಘಟನೆಗಳು, ಕ್ರಿಯಾಶೀಲರೆಲ್ಲರೂ ತಮ್ಮ ಸಾರ್ವಜನಿಕ ಅಭಿವ್ಯಕ್ತಿ ಹಾಗೂ ವ್ಯವಸ್ಥೆಯ ವಿರೋಧಿ ದನಿಗೆ ಇದೊಂದು ಸಂದರ್ಭ ಎಂದು ಅಪ್ರಜ್ಞಾಪೂರ್ವಕವಾಗಿ ಜೊತೆಗೂಡಿರುವ ಸಾಧ್ಯತೆಯೂ ಇದೆ.‌

 

 

ಐಕ್ಯ ಕರೆಯ ಶಕ್ತಿ

ಅಲ್ಪಸ್ವಲ್ಪ ಭಿನ್ನದನಿಗಳಿದ್ದರೂ, ರೈತ ಸಂಘಟನೆಗಳು ಒಟ್ಟಾರೆಯಾಗಿ ಜೊತೆಗೂಡಿ ಕರೆ ನೀಡಿದ್ದು ಸಹಾ ಈ ಬಂದ್‍ಗೆ ಒಳ್ಳೆಯದನ್ನೇ ಮಾಡಿತು. ಸೆ.21ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಗುಂಪಿನೊಂದಿಗೆ ಪ್ರತ್ಯೇಕತೆ ಕಾಯ್ದುಕೊಂಡಿದ್ದು ಗೊಂದಲವನ್ನು ಮೂಡಿಸಿತ್ತು. ಸೆ.25ರಂದು ಬಂದ್ ಕರೆ ಕೊಡುವ ವಿಚಾರದಲ್ಲೂ ಗೊಂದಲವುಂಟಾಗಿತ್ತು. ಆದರೆ ನಂತರ ಬಡಗಲಪುರ ನಾಗೇಂದ್ರ ಮತ್ತು ಗುರುಪ್ರಸಾದ್ ಕೆರಗೋಡು ಅವರುಗಳು ತೋರಿದ ಪ್ರಬುದ್ಧತೆಯಿಂದ ಭಿನ್ನದನಿಗಳಿಗೆ ಅವಕಾಶವಿರದೇ ಒಂದೇ ದನಿಯ ಕರೆಯು ಸ್ಪಷ್ಟ ಸಂದೇಶವನ್ನು ರವಾನೆ ಮಾಡಿತು. ಹಾಗಾಗಿ ಯಾರು ಕರೆ ಕೊಟ್ಟಿದ್ದಾರೆ ಎಂಬುದನ್ನು ಹೆಚ್ಚು ನೋಡದೇ ಪ್ರತೀ ಜಿಲ್ಲೆ, ತಾಲೂಕಿನಲ್ಲಿ ಹಲವರು ಪ್ರತಿಕ್ರಿಯಿಸಿದ್ದು ನಡೆಯಿತು.

ಎಲ್ಲಕ್ಕಿಂತ ಮುಖ್ಯವಾಗಿ ಈ ಸಂದರ್ಭದಲ್ಲಿ ಬಂದ್ ಕರೆ ಕೊಡಬಹುದು ಎಂಬ ತೀರ್ಮಾನಕ್ಕೆ ಬಂದಿದ್ದು ಅತ್ಯಂತ ಮಹತ್ವಪೂರ್ಣವಾದದ್ದು. ಕರ್ನಾಟಕದ ಜನತೆಯು ಸದರಿ ಮಸೂದೆಗಳ ವಿರುದ್ಧವಾದ ಅನಿಸಿಕೆ ಹೊಂದಿದ್ದಾರೆ ಎಂಬುದನ್ನು ಗ್ರಹಿಸಿ ಸೂಕ್ತ ಕಾಲದಲ್ಲಿ ಕರೆ ಕೊಡದಿದ್ದರೆ ಈ ಸಾಧ್ಯತೆಯೇ ಉಂಟಾಗುತ್ತಿರಲಿಲ್ಲ.

ಕೆಲವು ಪಾಠಗಳು
1. ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಅನಿವಾರ್ಯವಲ್ಲ.
2. ಬಿಜೆಪಿಯ ವಿರುದ್ಧ ಜನಾಭಿಪ್ರಾಯವು ರೂಪುಗೊಳ್ಳುತ್ತಿದೆ. ಅದನ್ನು ಸರಿಯಾದ ರೀತಿಯಲ್ಲಿ ಗ್ರಹಿಸಿ ಮುಂದಡಿಯಿಟ್ಟರೆ ಅದು ಜನಾಂದೋಲನವಾಗಿ ರೂಪುಗೊಳ್ಳುವ ಸಾಧ್ಯತೆ ಹೊಂದಿದೆ.
3. ಅದಿನ್ನೂ ಚುನಾವಣಾ ರಾಜಕೀಯ ಶಕ್ತಿಯಾಗಿ ಘನೀಭವಿಸುವ ರೀತಿ ಕೂಡಲೇ ಕಾಣುತ್ತಿಲ್ಲ.
4. ಸಂಘಟನೆಗಳು ತಮ್ಮ ಸೀಮಿತ ಹಿತಾಸಕ್ತಿಗಳಾಚೆ ಯೋಚಿಸುವ ಅಗತ್ಯವಿದೆ.

ಕೊನೆಯದಾಗಿ,
ಇದರ ಹತ್ತುಭಾಗದಷ್ಟು ಬಲ (ಹಣಬಲ, ಅಧಿಕಾರದ ಬಲ, ತೋಳ್ಬಲ ಇತ್ಯಾದಿ) ಇದ್ದು, ಇದರ ಅರ್ಧ ಭಾಗದಷ್ಟು ಬಂದ್ ನಡೆದರೂ ಅದನ್ನು ಯಶಸ್ಸು ಎಂದು ಹೇಳಿ, ಇದನ್ನು ಯಶಕಾಣದ ಬಂದ್ ಎಂದು ಹೇಳಬಹುದಾದವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂಬುದನ್ನು ರಾಜ್ಯದ ಎಲ್ಲಾ ಭಾಗಗಳಲ್ಲೂ ನಡೆದ ಪರಿಣಾಮಕಾರಿ ಪ್ರತಿಭಟನೆಗಳು ತೋರಿವೆ. ಆದರೆ ತಲೆ ಕೆಡಿಸಿಕೊಳ್ಳದೇ ಮುಂದಕ್ಕೆ ಹೋಗುವ ಅಗತ್ಯವಿದೆ. ಇದರಿಂದ ಅಲ್ಪತೃಪ್ತರಾದರೆ ಪ್ರಯೋಜನವಾಗದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....