Homeಮುಖಪುಟಸ್ವಂತ ಉದ್ಯಮ ಪ್ರಾರಂಭಿಸಬೇಕೆಂದಿದ್ದೀರಾ? ಹಾಗಾದರೆ ಈ ಅಂಶಗಳನ್ನೊಮ್ಮೆ ಓದಿ

ಸ್ವಂತ ಉದ್ಯಮ ಪ್ರಾರಂಭಿಸಬೇಕೆಂದಿದ್ದೀರಾ? ಹಾಗಾದರೆ ಈ ಅಂಶಗಳನ್ನೊಮ್ಮೆ ಓದಿ

ಮೊದಲಿಗೆ ನಿಮಗೆ ಬೇಕಾಗಿರುವುದು ಮನಃಸ್ಥಿತಿಯ ಪರಿವರ್ತನೆ. ನಾನೂ ಸಹ ಏನಾದರೂ ಆಗಬೇಕೆಂಬ ಛಲ. ಆಗುತ್ತೇನೆ ಎಂಬ ಆತ್ಮವಿಶ್ವಾಸ. ನಿಮ್ಮನ್ನು ನೀವೇ ಮುಂದಕ್ಕೆ ಕೊಂಡೊಯ್ಯುವ ಉತ್ಸಾಹ. ಅದಕ್ಕೆ ಬೇಕಾದ ಕಲೆಗಳನ್ನು ಕಲಿಯುತ್ತೇನೆ, ಪ್ರಯತ್ನ ಪಡುತ್ತೇನೆ, ಯಾವುದೇ ಕಷ್ಟ ಬರಲಿ, ಎದುರಿಸುತ್ತೇನೆ ಎನ್ನುವ ಧೈರ್ಯ

- Advertisement -
- Advertisement -

ಜೀವನ ಕಲೆಗಳು: ಅಂಕಣ-20

ಸ್ವ-ಉದ್ಯೋಗ ಪ್ರಾರಂಬಿಸುವ ಮನೋವೃತ್ತಿ

ಇಂದಿನ ಪರಿಸ್ಥಿತಿಯಲ್ಲಿ ಓದು ಮುಗಿಸಿದ ನಂತರ ಎಲ್ಲರಿಗೂ ನೌಕರಿ ಸಿಕ್ಕೇ ಸಿಗುತ್ತದೆ ಎನ್ನುವ ಖಾತರಿ ಇಲ್ಲ. ಅದರಲ್ಲೂ ಕೇವಲ 10ನೆಯ, 12ನೆಯ ತರಗತಿವರೆಗೆ ಓದಿದ್ದರೆ ಇನ್ನೂ ಕಷ್ಟ. ಖಾಸಗಿ ಮತ್ತು ಸರಕಾರಿ ಕ್ಷೇತ್ರದಲ್ಲಿ ಕೆಲಸಗಳು ಕಡಿಮೆಯಾಗುತ್ತಿದೆ. ಹೂಡಿಕೆಯ ಅಭಾವದಿಂದ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ನೌಕರಿ ನೀಡಬಹುದಾದಂತಹ ಬೃಹತ್ ಉದ್ದಿಮೆಗಳು ಪ್ರಾರಂಭವಾಗುತ್ತಿಲ್ಲ. ಆದ್ದರಿಂದ ಯುವಕರು ತಮ್ಮ ಉದ್ಯೋಗ ತಾವೇ ಸೃಷ್ಟಿಸಿಕೊಳ್ಳುವ ಅವಶ್ಯಕತೆ ಇದೆ. ಅಷ್ಟೇ ಅಲ್ಲ, ನಮ್ಮ ಯುವಜನ ನೌಕರಿ ಕೇಳುವವರಾಗುವ ಬದಲಿಗೆ ನೌಕರಿ ನೀಡುವ ಉದ್ದಿಮೆಶೀಲರಾಗಬೇಕಾಗಿದೆ. “ನಮ್ಮ ಹತ್ತಿರ ಹಣ ಇಲ್ಲ, ಯಾವುದೇ ಅನುಭವವಿಲ್ಲ, ಹಾಗಾದರೆ ನಾವೇನು ಉದ್ಯೋಗ ಪ್ರಾರಂಭಿಸಲು ಸಾಧ್ಯ?” ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು.

ಮೊಟ್ಟಮೊದಲಿಗೆ ನಿಮ್ಮ ಯೋಚನಾ ಲಹರಿ, ಮನಃಸ್ಥಿತಿ ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ.

ಮೈಕ್ರೋಸಾಫ್ಟ್ ಕಂಪನಿಯ ಸಂಸ್ಥಾಪಕ ಬಿಲ್ ಗೇಟ್ಸ್, ಆåಪಲ್ ಕಂಪನಿಯ ಸ್ಟೀವ್ ಜಾಬ್ಸ್, ಇಬ್ಬರೂ ಕಾಲೇಜು ವಿದ್ಯಾಭ್ಯಾಸ ಅರ್ಧಕ್ಕೇ ಬಿಟ್ಟು, ತಮ್ಮ ಸ್ವಂತ ಕಂಪನಿ ಪ್ರಾರಂಬಿಸಿದರು. ಅವರ ಹತ್ತಿರವೂ ಹಣವಾಗಲೀ, ಅನುಭವವಾಗಲೀ ಇರಲಿಲ್ಲ. ಆ ಕಾಲದಲ್ಲಿ ಅಂತಹ ಕಂಪ್ಯೂಟರ್ ಸಾಫ್ಟ್-ವೇರ್ ಕಂಪನಿಗಳೇ ಇರಲಿಲ್ಲ. ಏನು ಮಾಡಬೇಕು, ಹೇಗೆ ಮಾಡಬೇಕು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಇವತ್ತು ಅವರ ಕಂಪನಿಗಳು ವಿಶ್ವದಾದ್ಯಂತ ಕೋಟ್ಯಾಂತರ ಜನರಿಗೆ ಕೆಲಸ ನೀಡಿದೆ. ದೂರದ ಅಮೇರಿಕ ದೇಶದವರ ಕತೆ ಬೇಡ, ಹತ್ತಿರದ ಉದಾಹರಣೆ ತೆಗೆದುಕೊಳ್ಳೋಣ.

ತಮಿಳುನಾಡಿನ ಪ್ರೇಮ್ ಗಣಪತಿ ಓದಿದ್ದು ಹತ್ತನೆಯ ತರಗತಿಯವರೆಗೆ. 1990ರಲ್ಲಿ, ತನ್ನ ಹದಿನೇಳನೆಯ ವಯಸ್ಸಿನಲ್ಲಿ, ಚೆನ್ನೈಗೆ ಹೋಗಿ ರಸ್ತೆ ಬದಿಯ ಟೀ-ಕಾಫಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅವನ ಅಂಗಡಿಯ ಮಾಲೀಕನ ತಮ್ಮ ಮುಂಬಯಿನಿಂದ ಬಂದಿದ್ದ. ಅವನ ಜೊತೆ, ಹೇಳದೆ-ಕೇಳದೆ, ಮುಂಬಯಿಗೆ ಬಂದ. ಯಾರನ್ನು ನಂಬಿಕೊಂಡು ಬಂದಿದ್ದನೋ, ಅವನು ಕೈ ಕೊಟ್ಟಿದ್ದ.

ಕಿಸೆಯಲ್ಲಿ ಹಣವಿಲ್ಲ, ತಮಿಳು ಭಾಷೆ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಯಾವ ಕೆಲಸದ ಅನುಭವವೂ ಇಲ್ಲ. ರಸ್ತೆ ಬದಿಯಲ್ಲಿ ಅಳುತ್ತಾ ಕುಳಿತಿದ್ದ. ಅವನ ಅವಸ್ಥೆಯನ್ನು ನೋಡಿ ಕನಿಕರಪಟ್ಟು ಯಾರೋ ತಮಿಳರು ಅವನಿಗೋಸ್ಕರ ರೈಲು ಟಿಕೇಟಿಗೆ ಆಗುವಷ್ಟು ಹಣ ಸಂಗ್ರಹಿಸಿ ನೀಡಲು ಮುಂದಾದರು. ಅದನ್ನು ಸ್ವೀಕರಿಸದೆ, ಇಲ್ಲೇ ಏನಾದರೂ ಕೆಲಸ ಮಾಡುತ್ತೇನೆ ಎಂದ. ಒಂದು ಬೇಕರಿಯಲ್ಲಿ ಟ್ರೇ ತೊಳೆಯುವ ಕೆಲಸ ಸಿಕ್ಕಿತು, ಮಲಗಲು ಸ್ಥಳ, ತಿನ್ನಲು ಬ್ರೆಡ್ ಸಿಗುತ್ತಿತ್ತು.

ಅಲ್ಲಿಂದ ಮುಂದಕ್ಕೆ, 20 ವರ್ಷದಲ್ಲಿ ತನ್ನ ಸ್ವಂತ ಪರಿಶ್ರಮದಿಂದ ದುಡಿದು ಅವನು ಪ್ರಾರಂಭಿಸಿದ ಹೋಟೆಲ್ “ದೋಸಾ ಪ್ಲಾಜಾ” ಇವತ್ತು 26 ನಗರಗಳಲ್ಲಿ, ಹಲವಾರು ದೇಶಗಳಲ್ಲಿ ಸುಪ್ರಸಿದ್ಧವಾಗಿದೆ. ತಾನು ಕೋಟ್ಯಾಧೀಶ್ವರ ಆಗುವುದರ ಜೊತೆಗೆ ನೂರಾರು ಜನರಿಗೆ ನೌಕರಿ ನೀಡಿದ್ದಾನೆ, ಲಕ್ಷಾಂತರ ಜನಕ್ಕೆ ಮಾದರಿ ವ್ಯಕ್ತಿಯಾಗಿದ್ದಾನೆ. ಇಂತಹ ಅನೇಕ ಉದಾಹರಣೆ ನಮ್ಮ ನಗರಗಳಲ್ಲೇ ಇದೆ. ಆದ್ದರಿಂದ ನೀವೂ ಏಕೆ ಸ್ವ-ಉದ್ದಿಮೆದಾರರಾಗಬಾರದು?

ಮೊದಲಿಗೆ ನಿಮಗೆ ಬೇಕಾಗಿರುವುದು ಮನಃಸ್ಥಿತಿಯ ಪರಿವರ್ತನೆ. ನಾನೂ ಸಹ ಏನಾದರೂ ಆಗಬೇಕೆಂಬ ಛಲ. ಆಗುತ್ತೇನೆ ಎಂಬ ಆತ್ಮವಿಶ್ವಾಸ. ನಿಮ್ಮನ್ನು ನೀವೇ ಮುಂದಕ್ಕೆ ಕೊಂಡೊಯ್ಯುವ ಉತ್ಸಾಹ. ಅದಕ್ಕೆ ಬೇಕಾದ ಕಲೆಗಳನ್ನು ಕಲಿಯುತ್ತೇನೆ, ಪ್ರಯತ್ನ ಪಡುತ್ತೇನೆ, ಯಾವುದೇ ಕಷ್ಟ ಬರಲಿ, ಎದುರಿಸುತ್ತೇನೆ ಎನ್ನುವ ಧೈರ್ಯ. ಒಮ್ಮೆ ನೀವು ಮನಸ್ಸಿನಲ್ಲಿ ದೃಢನಿಶ್ಚಯ ಮಾಡಿಕೊಂಡರೆ ಸಾಕು, ಮುಂದಿನ ಬಾಗಿಲು-ಕಿಟಕಿಗಳು ತಾವಾಗಿಯೇ ತೆರೆದುಕೊಳ್ಳಲು ಪ್ರಾರಂಭಿಸುತ್ತವೆ.

ಏಕೆ ಸ್ವ-ಉದ್ದಿಮೆದಾರರಾಗಬೇಕು?

·         ನಿಮ್ಮ ಅಂತರ್ದೃಷ್ಟಿಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬಹುದು.

·         ನಿಮ್ಮ ಸಮಯ, ನಿಮ್ಮ ಸ್ವಂತ ಯೋಚನೆಯನ್ನು, ನಿಮ್ಮ ಪರಿಶ್ರಮದಿಂದ ಅಭಿವೃದ್ಧಿಗೊಳಿಸಿ, ಅದನ್ನು ದೊಡ್ಡ ಉದ್ದಿಮೆಯನ್ನಾಗಿ ಬೆಳೆಸಬಹುದು.

·         ನಿಮ್ಮ ಸ್ವಂತ ಸಸಿ ಮರವಾಗುವುದನ್ನು ನೋಡುವ ಆನಂದವೇ ಬೇರೆ.

·         ಇನ್ನೊಬ್ಬರ ಗುಲಾಮರಾಗಬೇಕಿಲ್ಲ.

ಇದಕ್ಕೆ ಬೇಕಾದ ಈ ಕಲೆಗಳು ನಿಮ್ಮಲ್ಲಿ ಈಗಾಗಲೇ ಇಲ್ಲದಿದ್ದರೆ, ನೀವು ಕಲಿಯಬೇಕಾಗಿರುವ ಕಲೆಗಳು:

ಸ್ವ-ಅರಿವು: ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳುವ ಕಲೆ –ಇದರ ಬಗ್ಗೆ ನಾನು ವಿಸ್ತಾರವಾಗಿ ಬರೆದಿದ್ದೇನೆ. ತನ್ನಸ್ವಂತಶಕ್ತಿ/ದೌರ್ಬಲ್ಯ/ಅವಕಾಶ/ಭೀತಿಯನ್ನುಅರಿತುಕೊಳ್ಳುವಕಲೆಗೆ “ಸ್ವೊಟ್ಎನಾಲಿಸಿಸ್” (SWOT ANALYSIS) ಎನ್ನುತ್ತಾರೆ. ಲಿಂಕ್ ಕ್ಲಿಕ್ಕಿಸಿ ವ್ಯಕ್ತಿತ್ವ-ವಿಕಸನ-2 .

·         ಸ್ವಯಂ-ಪ್ರೇರಿತರಾಗಿದ್ದು, ಅನುಶಾಸನವುಳ್ಳ ವ್ಯಕ್ತಿ ನೀವಾಗಿರಬೇಕು.

·         ವ್ಯವಸ್ಥಾಪನಾ ಕಲೆ: ಸ್ವಂತ ಸಮಯಮತ್ತು ಇತರ ಸಹೋದ್ಯೋಗಿ/ಕೆಲಸಗಾರರನ್ನು ನಿರ್ವಹಿಸುವ ಕಲೆ.

·         ಸಂವಹನಾ ಕಲೆ: ನಿಮ್ಮಲ್ಲಿರುವ ಯೋಚನೆಯನ್ನು ಇತರರು ಖರೀದಿಸು/ಒಪ್ಪುವಂತೆ ಮಾಡುವ ಕಲೆ.

·         ಏಕಾಂಗಿಯಾಗಿ ಮತ್ತು ತಂಡದೊಡನೆ ಕೆಲಸಮಾಡುವ ಕಲೆ.

·         ಆರ್ಥಿಕ ಅಕ್ಷರ ಜ್ಞಾನ ಇರಬೇಕು. ಹಣಕಾಸಿನ ವ್ಯವಹಾರದ ಕನಿಷ್ಠ ಜ್ಞಾನ ಅತ್ಯಂತ ಅವಶ್ಯಕ.

·         ಮಾರುಕಟ್ಟೆ ಸಂಶೋಧನೆ ಮಾಡಿ, ಬೇಕಾದ ಮಾಹಿತಿ ಸಂಗ್ರಹಿಸುವ ಕಲೆ.

·         ಅವಕಾಶಗಳನ್ನು ಹುಡುಕುವ ಕಲೆ.

·         ಯೋಜನೆ ಹಾಕಿ, ಸಂಪನ್ಮೂಲಗಳನ್ನು ಕ್ರೋಢೀಕರಿಸಿ, ಸಮರ್ಪಕ ವ್ಯವಸ್ಥೆ ಮಾಡುವ ಕಲೆ.

·         ಕಾಲ ಮತ್ತು ಸನ್ನಿವೇಶಕ್ಕೆ ತಕ್ಕಂತೆ ತನ್ನನ್ನು ತಾನು ಹೊಂದಿಸಿಕೊಳ್ಳುವ ಕಲೆ.

·         ಸೃಜನಶೀಲತೆ ಮತ್ತು ಹೊಸದನ್ನು ಹುಡುಕುವ ಕಲೆ.

·         ಏಕಕಾಲಕ್ಕೆ ಅನೇಕ ಕೆಲಸ/ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸುವ ಕಲೆ.

·         ಜವಾಬ್ದಾರಿ ವಹಿಸಿಕೊಂಡು, ಸಮಯೋಚಿತವಾಗಿ, ತಕ್ಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಲೆ.

·         ಒತ್ತಡದಲ್ಲೂ ಕೆಲಸಮಾಡುವ ಕಲೆ.

·         ಸತತ ಪ್ರಯತ್ನ ಮಾಡುವ ಛಲಗಾರ ನೀವಾಗಿರಬೇಕು.

·         ಯಾವುದೇ ರೀತಿಯ ಸ್ಪರ್ಧೆಗೆ ಸಿದ್ಧವಾಗಿರಬೇಕು.

·         ಅಪಾಯ ಸಂಭವ (ರಿಸ್ಕ್) ಎದುರಿಸುವ ಕಲೆ.

·         ಜನರನ್ನು ಸಂಪರ್ಕಿಸಿ ತನ್ನ ಸಂಪರ್ಕ-ಜಾಲ ನಿರ್ಮಿಸಿಕೊಳ್ಳುವ ಕಲೆ.

ಈ ಎಲ್ಲಾ ಕಲೆಗಳು ಬಹಳ ಸುಲಭವಾಗಿ ಕಲಿಯಬಹುದಾದ ಕಲೆಗಳು.

ಭಾರತ ಸರಕಾರದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳ ಮಂತ್ರಾಲಯದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಜಾಲತಾಣದಲ್ಲಿ ಈ ರೀತಿಯ ಸ್ವಯಂ ಉದ್ದಿಮೆದಾರರಿಗೆ ಬೇಕಾದ ತರಬೇತಿ ನೀಡುವ ಸಂಸ್ಥೆಗಳ ವಿವರ ಲಭ್ಯವಿದೆ. ಈ ಲಿಂಕ್ ಕ್ಲಿಕ್ಕಿಸಿ (ಕರ್ನಾಟಕ ಅಥವಾಬೇರೆ ರಾಜ್ಯ ಹುಡುಕಿ):

ಇದೇ ರೀತಿಯ ಹಲವಾರು ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ನಿಮಗೆ ಬೇಕಾದ ತರಬೇತಿ ನೀಡಲು ಲಭ್ಯವಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...