Homeಮುಖಪುಟಉಮರ್ ಖಾಲಿದ್ ಮತ್ತು ಕೆ.ಎಲ್.ಅಶೋಕ್: ನಮ್ಮ ಕಣ್ಣೆದುರಿಗಿನ ಸತ್ಯವೊಂದನ್ನು ಚರ್ಚಿಸೋಣ.

ಉಮರ್ ಖಾಲಿದ್ ಮತ್ತು ಕೆ.ಎಲ್.ಅಶೋಕ್: ನಮ್ಮ ಕಣ್ಣೆದುರಿಗಿನ ಸತ್ಯವೊಂದನ್ನು ಚರ್ಚಿಸೋಣ.

ಉಮರ್‌ ಖಾಲಿದ್‌ ಅವರನ್ನು ಬಂಧಿಸಲಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿತ್ತು. ದೆಹಲಿಯಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪ್ರಜಾತಾಂತ್ರಿಕ ಪ್ರತಿರೋಧವನ್ನು ಎತ್ತಿ ಹಿಡಿದ ಅವರ ಬಂಧನಕ್ಕೆ ಮುಂಚೆಯೇ ಪ್ರತಿರೋಧ ಕಟ್ಟುವುದು ಏಕೆ ಆಗಲಿಲ್ಲ? ಕರ್ನಾಟಕದಲ್ಲಿ ಕೆ.ಎಲ್.ಅಶೋಕ್‌ ಅವರ ಪ್ರಕರಣದಲ್ಲಿ ಆದಂತೆ, ಪ್ರಜಾತಂತ್ರವಾದಿಗಳನ್ನು ಸಮುದಾಯ ಆತುಕೊಳ್ಳುವುದು ನಿರಂತರವಾಗಿ ಆಗದಿದ್ದರೆ, ಅಂತಿಮವಾಗಿ ಎಲ್ಲರೂ ʼಭಯೋತ್ಪಾದಕರೆಂಬ ಹಣೆಪಟ್ಟಿ ಹೊತ್ತುʼ ಜೈಲು ಸೇರಬೇಕಾಗುತ್ತದೆ.

- Advertisement -
- Advertisement -

ಉಮರ್‌ ಖಾಲಿದ್ ರ ಬಂಧನವಾಗಿದೆ. ಅದು ಅನಿರೀಕ್ಷಿತವೇನಾಗಿರಲಿಲ್ಲ. ಯಥಾಪ್ರಕಾರ ಯುಎಪಿಎ ಸೆಕ್ಷನ್ನುಗಳನ್ನು ಹಾಕಿರುವುದರಿಂದ ಹೊರಗೆ ಬರುವುದು ವರ್ಷಗಳೇ ಆಗಬಹುದೇನೋ. ಉಮರ್‍ರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಗೊತ್ತಿರುವುದು ಅತ್ಯಂತ ಸೂಕ್ಷ್ಮ ಒಳನೋಟಗಳುಳ್ಳ ಹಾಗೂ ಭಾರತದ ಪ್ರಜಾತಂತ್ರವು ಹೆಮ್ಮೆ ಪಡಬಹುದಾದ ವ್ಯಕ್ತಿತ್ವ ಅವರದ್ದು. ಮಧ್ಯಮವರ್ಗದ ಮುಸ್ಲಿಂ ಯುವಕರ ನೇತೃತ್ವದಲ್ಲಿ ಸಿಎಎ ವಿರೋಧಿ ಆಂದೋಲನದ ರೀತಿಯೊಂದು ಭಾರತದಲ್ಲಿ ನಡೆಯಲಿಕ್ಕಿದೆಯೆಂದು ಕರಾರುವಾಕ್ಕಾಗಿ ಊಹಿಸಿದ್ದ (ನನಗೆ ಗೊತ್ತಿರುವ ಹಾಗೆ) ಏಕೈಕ ವ್ಯಕ್ತಿ. ಅವರ ಬಂಧನದ ನಂತರ ಯೋಗೇಂದ್ರ ಯಾದವ್ ಅವರು ಬರೆದಿರುವ ಸಾಲುಗಳು ಉಮರ್ ಏನು ಎಂಬುದನ್ನು ಸಮರ್ಥವಾಗಿ ಕಟ್ಟಿಕೊಡುತ್ತದೆ.

‘ಉಮರ್ ಖಾಲಿದ್‍ ರಂತಹ ಯುವ, ಚಿಂತನಶೀಲ ಮತ್ತು ಆದರ್ಶವಾದಿಯನ್ನು ಬಂಧಿಸಲು ಯುಎಪಿಎದಂತಹ ಭಯೋತ್ಪಾದನಾ ತಡೆ ಕಾನೂನನ್ನು ಬಳಸಿರುವುದು ನನಗೆ ಆಘಾತವನ್ನುಂಟು ಮಾಡಿದೆ. ಆತ ಯಾವಾಗಲೂ ಎಲ್ಲಾ ರೂಪಗಳ ಕೋಮುವಾದ ಮತ್ತು ಹಿಂಸೆಯನ್ನು ವಿರೋಧಿಸಿರುವ ವ್ಯಕ್ತಿ. ನಿಸ್ಸಂಶಯವಾಗಿ ಭಾರತಕ್ಕೆ ಇಂದು ಅಗತ್ಯವಿರುವ ನಾಯಕರಲ್ಲಿ ಆತ ಒಬ್ಬ. ದೆಹಲಿ ಪೊಲೀಸರು ಭಾರತದ ಭವಿಷ್ಯವನ್ನು ದೀರ್ಘಕಾಲ ಬಂಧಿಸಿಡಲಾಗದು’.

ಆದರೆ ಈ ಉಮರ್ ಖಾಲಿದ್ ನಿಜಕ್ಕೂ ಭಯೋತ್ಪಾದಕರ ಜೊತೆ ಸಂಬಂಧ ಹೊಂದಿದ್ದರೂ ಹೊಂದಿರಬಹುದು ಎಂದು ಭಾವಿಸಿರುವವರಲ್ಲಿ ಬಲಪಂಥೀಯರು ಮಾತ್ರ ಇಲ್ಲ. ಬಹುಶಃ ನಾಸ್ತಿಕವಾದಿಯೂ ಆದ ಉಮರ್‌ ಖಾಲಿದ್ ಭಾರತದ ಪ್ರಜಾತಂತ್ರವನ್ನು ಗಟ್ಟಿಗೊಳಿಸಲು ಅಗತ್ಯವಿರುವ ಚಿಂತನೆ ಹಾಗೂ ಬದ್ಧತೆ ಹೊಂದಿರುವವರಾಗಿದ್ದಾರೆ. ಆದರೆ ಮುಸ್ಲಿಂ ಹೆಸರು ಈ ದೇಶದಲ್ಲಿ ಅನುಮಾನ ಹುಟ್ಟಿಸುತ್ತದೆ. ನೀವು ಧಾರ್ಮಿಕ ಮುಸ್ಲಿಂ ಆದರಂತೂ ಮುಗಿದೇ ಹೋಯಿತು. ದೇಶದ ಹೋರಾಟದ ರಾಜಕಾರಣದಲ್ಲಿ ಉಮರ್ ಜೊತೆಗೆ ಖ್ಯಾತಿಗೆ ಬಂದ ಹಲವರಿಗಿಂತ ಈತ ಹೆಚ್ಚು ಸೂಕ್ಷ್ಮಜ್ಞ ಮತ್ತು ರಾಜಕೀಯ ಒಳನೋಟವಿರುವ ವ್ಯಕ್ತಿಯೆಂಬುದು ಅವರಲ್ಲಿ ಹಲವರನ್ನು ಬಲ್ಲ ನನ್ನ ಸ್ಪಷ್ಟ ಅಭಿಪ್ರಾಯ. ಹೀಗಿದ್ದೂ, ಆತನ ಬಂಧನಕ್ಕೆ ಡಾ.ಕಫೀಲ್ ಖಾನ್ ಅಥವಾ ದೆಹಲಿಯ ಇನ್ನಿಬ್ಬರು ಮಹಿಳಾ ಆಕ್ಟಿವಿಸ್ಟ್‌ಗಳಿಗಿಂತ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗುತ್ತದೆಯೇ? ಕಾದು ನೋಡಬೇಕು. ಉಮರ್ ಇಂದಲ್ಲಾ ನಾಳೆ ಇಂತಹದೊಂದು ಸುಳ್ಳು ಕೇಸಿನಲ್ಲಿ ಬಂಧನಕ್ಕೊಳಗಾಗಬಹುದು ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೂ ಅದನ್ನು ತಡೆಯುವುದಕ್ಕೆ ಯಾವ ಪ್ರಯತ್ನವೂ ನಡೆಯಲಿಲ್ಲ. ಈ ಸಂಬಂಧ ಒಂದು ಸ್ಟ್ರಾಟೆಜಿ ಸಮಾನ ಮನಸ್ಕರಲ್ಲಿ ಇರಲಿಲ್ಲ. ಏಕೆ ಹೀಗೆ?

ಈ ಹಿನ್ನೆಲೆಯಲ್ಲೂ ಇತ್ತೀಚೆಗೆ ಕೋಮು ಸೌಹಾರ್ದ ಚಳವಳಿಯ ಮುಖಂಡ ಕೆ.ಎಲ್.ಅಶೋಕ್‍ರ ಸುತ್ತ ನಡೆದ ವಿದ್ಯಮಾನವನ್ನು ಚರ್ಚಿಸಬೇಕಿದೆ. ನೋ ಪಾರ್ಕಿಂಗ್ (ವಾಸ್ತವದಲ್ಲಿ ಅದು ನೋ ಪಾರ್ಕಿಂಗ್‌ ಜಾಗದ ಪಾರ್ಕಿಂಗ್ ಸಹಾ ಆಗಿರಲಿಲ್ಲ) ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರನ್ನು ನಿಂದಿಸಿದ್ದಕ್ಕೆ ಇಷ್ಟು ದೊಡ್ಡ ಪ್ರತಿಕ್ರಿಯೆ ಏಕೆ ಎಂದು ಹಲವರು ನನ್ನನ್ನು ಕೇಳಿದರು. ಸಣ್ಣ ಪ್ರಕರಣವನ್ನು ದೊಡ್ಡದು ಮಾಡಲಾಗುತ್ತಿದೆ ಎಂಬುದು ಕೆಲವರ ಅನಿಸಿಕೆಯಾಗಿದ್ದರೆ, ಅಶೋಕ್‍ರಷ್ಟು ಪ್ರಸಿದ್ಧಿ ಪಡೆದಿರದ ಹಲವರ ಮೇಲೆ ಆಗುವ ದೌರ್ಜನ್ಯಕ್ಕೆ ಈ ಮಟ್ಟದ ಪ್ರತಿಕ್ರಿಯೆ ಇರುವುದಿಲ್ಲವೆಂಬುದು ಕೆಲವು ಗೆಳೆಯರ ತಕರಾರು. ನೋ ಪಾರ್ಕಿಂಗ್ ತಪ್ಪಾಗಿದ್ದರಿಂದ ಏನೋ ಸ್ವಲ್ಪ ಅತಿರೇಕದಲ್ಲಿ ಪೊಲೀಸರು ನಡೆದುಕೊಂಡಿರಬಹುದು; ತಪ್ಪು ಮಾಡಿದವರೇ ಏಕೆ ಇಷ್ಟೆಲ್ಲಾ ದೊಡ್ಡ ಅವಾಂತರ ಮಾಡಬೇಕು ಎಂಬುದೂ ಕೆಲವರ ಅನಿಸಿಕೆ ಇರಬಹುದು.

ಇದನ್ನೂ ಓದಿ: ಕೊಪ್ಪದಲ್ಲಿ ಪೊಲೀಸರು ಕೆ.ಎಲ್‌.ಅಶೋಕ್‌ರನ್ನು ಅವಮಾನಿಸಿದ ಘಟನೆ

ಆದರೆ, ಇದು ಈಗೋ ಪ್ರಶ್ನೆಯಲ್ಲ. ಹೌದು, ಅಶೋಕ್ ಮತ್ತು ಚಿಕ್ಕಮಗಳೂರು, ಶಿವಮೊಗ್ಗಗಳ ಹಲವು ಗೆಳೆಯರು ಆರಂಭದಲ್ಲಿ ಇದನ್ನು ಭಾವನಾತ್ಮಕವಾಗಿ ತೆಗೆದುಕೊಂಡಿದ್ದು ನಿಜ. ಆದರೆ, ‘ಕೊಪ್ಪ ಚಲೋ’ ಮಾಡಬೇಕು ಎಂದು ಪ್ರಗತಿಪರ ಆಲೋಚನೆಯ ಜೆಡಿಎಸ್ ಮುಖಂಡ ಎಚ್.ಎಚ್.ದೇವರಾಜ್ ಮತ್ತಿತರರು ಕರೆ ಕೊಡುವತನಕ ಹೋಗಿದ್ದು ಕೇವಲ ಭಾವನಾತ್ಮಕ ಕಾರಣಕ್ಕಾಗಿಯಾಗಿರಲಿಲ್ಲ. ವಾಸ್ತವದಲ್ಲಿ ಅಶೋಕ್‍ರ ವಿಚಾರದಲ್ಲಿ ಇಂತಹದೊಂದು ಪ್ರತಿಕ್ರಿಯೆ ಬಂದುದು ಅತ್ಯಂತ ಸಕಾರಾತ್ಮಕವಾದ ಬೆಳವಣಿಗೆಯಾಗಿದೆ. ಜೊತೆಗೆ ಈ ಪ್ರಕರಣವನ್ನು ಸಾರ್ವಜನಿಕವಾಗಿ ಒಂದಷ್ಟು ಸಂಪರ್ಕಗಳು, ಸ್ನೇಹಿತ ಬಳಗ ಹೊಂದಿರುವ ವ್ಯಕ್ತಿಗಾದ ಅವಮಾನವೆಂಬಂತೆ ಮಾತ್ರವಲ್ಲದೇ, ಪೊಲೀಸರು ಸಾರ್ವಜನಿಕರ ಜೊತೆಗೆ ಹೇಗೆ ನಡೆದುಕೊಳ್ಳಬೇಕೆಂಬ ವಿಶಾಲ ನೆಲೆಗೆ ತೆಗೆದುಕೊಂಡು ಹೋದದ್ದರಲ್ಲಿ ಅವರೆಲ್ಲರ ಪ್ರಬುದ್ಧತೆಯೂ ಕಾಣುತ್ತದೆ. ಪೊಲೀಸರು ಎಲ್ಲರ ಜೊತೆಗೂ ಹೀಗೆಯೇ ನಡೆದುಕೊಳ್ಳುತ್ತಾರೆ ಎಂಬುದನ್ನು ‘ಮಾಮೂಲಿ ಸಂಗತಿ’ಯೆಂದು ನಿರ್ಲಕ್ಷಿಸದೇ ನಿರ್ದಿಷ್ಟ ಘಟನೆಯೊಂದರ ಸಂದರ್ಭದಲ್ಲಿ ಒಂದು ಭಾಗದ ಹಲವಾರು ಪ್ರಗತಿಪರ ಗಣ್ಯರು ಗಂಭೀರವಾಗಿ ಕೈಗೆತ್ತಿಕೊಂಡಿದ್ದಕ್ಕೆ ಮಹತ್ವವಿದೆ.

ಇದನ್ನೂ ಓದಿ: ಅಶೋಕ್‌ ಅವರ ಮೇಲಿನ ಅವಹೇಳನ ಖಂಡಿಸಿ ಪ್ರತಿಭಟನೆ

ಅಷ್ಟೇ ಮಹತ್ವದ ಇನ್ನೊಂದು ಸಂಗತಿಯಿದೆ. ಈ ಪ್ರಕರಣವು ನಾವು ಬದುಕುತ್ತಿರುವ ಈ ಕೆಟ್ಟ ಕಾಲದಲ್ಲಿ ಅಳವಡಿಸಬೇಕಾದ ಮಾರ್ಗೋಪಾಯವನ್ನು ಸೂಚಿಸುತ್ತದೆ. ಉಮರ್ ಖಾಲಿದ್‍ರಂತಹ ಎಷ್ಟೋ ಮಹತ್ವದ ವ್ಯಕ್ತಿಗಳು ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯದಿರಬೇಕಾದರೆ ಅಥವಾ ಜೈಲಿಗೆ ಹೋದರೂ ಅದು ಸಮಾಜದಲ್ಲಿ ಒಂದು ತಲ್ಲಣವನ್ನಾದರೂ ಉಂಟು ಮಾಡಬೇಕೆಂದರೆ ಏನು ಮಾಡಬೇಕು ಎಂಬುದಕ್ಕೂ ಅಲ್ಲಿ ಪಾಠವಿದೆ. ಅದೇನೆಂದರೆ, ಜೀವಪರವಾಗಿ ದುಡಿಯುವ ಹಲವು ವ್ಯಕ್ತಿಗಳ ಮೇಲೆ ಹಲ್ಲೆ/ಅವಹೇಳನ/ದೌರ್ಜನ್ಯ ಅಥವಾ ಕೊಲೆಗಳಂಥವು ಸಂಭವಿಸಿದಾಗ ನಾವು ಎಷ್ಟರಮಟ್ಟಿಗೆ ಪ್ರತಿಕ್ರಿಯೆ ನೀಡಬೇಕೆಂದು ಗುಲಗಂಜಿ ತೂಕ ಹಾಕಬೇಕಾದ ಸಂದರ್ಭ ಇದಲ್ಲ. ಬದಲಿಗೆ, ನಾವೇ ಮುಂದಾಗಿ ನಮ್ಮ ನಡುವಿನ ಹೋರಾಟಗಾರರನ್ನು ಸಮಾಜದ ನಾಯಕರಾಗಿ ಆತುಕೊಳ್ಳುವ ಸಂದರ್ಭವಿದು.

ಮಂಡ್ಯದಲ್ಲಿ ನಾವುಗಳು ಅಸಂಘಟಿತ ಕಾರ್ಮಿಕರು ಮತ್ತು ಸ್ಲಂ ಜನರ ಪರವಾಗಿ ಹೋರಾಟ ಮಾಡುತ್ತಿದ್ದಾಗ, ನಮ್ಮ ಗೆಳೆಯ ಎಂ.ಬಿ.ನಾಗಣ್ಣ ಒಂದು ಪ್ರಶ್ನೆಯನ್ನು ಎತ್ತಿದ್ದರು. ಕಾಂಗ್ರೆಸ್‌ ಅಥವಾ ಜೆಡಿಎಸ್‌ ಪಕ್ಷಗಳ ಸಣ್ಣ ಮುಖಂಡರದ್ದೂ ಫೋಟೋ ಹಾಕಿ ಸುದ್ದಿ ಮಾಡುವ ಪತ್ರಕರ್ತರು, ದೊಡ್ಡ ಸಮುದಾಯಗಳನ್ನು ಮುನ್ನಡೆಸುವ ಹೋರಾಟಗಾರರ ಒಂದು ಸಣ್ಣ ಫೋಟೋವನ್ನೂ ಹಾಕುವುದಿಲ್ಲವೇಕೆ? ಏಕೆಂದರೆ, ಸ್ವತಃ ನಾವೇ ಅಂಥದ್ದಕ್ಕೆ ಮುಜುಗರ ಪಟ್ಟುಕೊಳ್ಳುತ್ತೇವೆ. ಸ್ವತಃ ನಾಗಣ್ಣ ತಾನೇ ನಡೆಸುವ ಪತ್ರಿಕೆಯಲ್ಲಿ ತನ್ನ ಲೇಖನದ ಜೊತೆಗೆ ಫೋಟೋ ಹಾಕಿಕೊಂಡಿದ್ದು ನಮಗೆಲ್ಲರಿಗೂ ಆಕ್ಷೇಪಾರ್ಹ ಸಂಗತಿಯಾಗಿತ್ತು. ಹೀಗೆ ಮಾಡುತ್ತಾ ಹೋರಾಟಗಾರರು ಕಿಡಿಗೇಡಿಗಳಂತೆಯೂ, ದಬ್ಬಾಳಿಕೆ ದೌರ್ಜನ್ಯ ನಡೆಸುವವರು ನಾಯಕರಂತೆಯೂ ಬಿಂಬಿತವಾಗುವ ಪರಿಸ್ಥಿತಿ ನಮ್ಮೆದುರಿನಲ್ಲಿ ಬಂದು ನಿಂತಿದೆ.

ಕೊಪ್ಪ ಪ್ರಕರಣದಲ್ಲಿ ಇನ್ನೂ ಒಂದು ತಕರಾರು ಕೇಳಿ ಬರುತ್ತದೆ. ಬೇರೆ ಇನ್ನೊಬ್ಬರಿಗೆ ದೌರ್ಜನ್ಯ ಆದಾಗ ಹೀಗೆಯೇ  ಪ್ರತಿಕ್ರಿಯೆ ಏಕೆ ಬರಲಿಲ್ಲ, ಇವರ ವಿಚಾರದಲ್ಲಿ ಮಾತ್ರ ಏಕೆ ದನಿಯೆತ್ತುತ್ತಿದ್ದೀರಿ? ಎಂಬುದು ಅಶೋಕ್‌ ಸಂದರ್ಭದಲ್ಲೂ ಕೇಳಿ ಬಂದ ಪ್ರಶ್ನೆ. ಪ್ರಶ್ನೆ ತಪ್ಪಲ್ಲ; ಆದರೆ ಅದು ನಾವು ಫ್ಯಾಸಿಸ್ಟ್‌ ಪ್ರಭುತ್ವವನ್ನು ಎದುರಿಸುವಾಗ ಅನುಸರಿಸಬೇಕಾದ ತಂತ್ರಗಾರಿಕೆಯನ್ನು ದುರ್ಬಲಗೊಳಿಸಬಾರದು.

ಧಾಬೋಲ್ಕರ್, ಪಾನ್ಸರೆ, ಕಲಬುರ್ಗಿಯಂಥವರ ಹತ್ಯೆಯು ಗೌರಿಲಂಕೇಶರ ಹತ್ಯೆಯಷ್ಟೇ ಖಂಡನೀಯ ಮತ್ತು ಅಷ್ಟೇ ಪ್ರಮಾಣದ ಆಕ್ರೋಶವನ್ನು ನಮ್ಮೆಲ್ಲರಲ್ಲಿ ಹುಟ್ಟಿಸಬೇಕು. ಆದರೆ ನಿರ್ದಿಷ್ಟ ಸಂದರ್ಭವೊಂದರಲ್ಲಿ, ನಮಗೆ ಗೊತ್ತಿರುವ ಮತ್ತು ಗೊತ್ತಿರದ ಕಾರಣಗಳಿಗಾಗಿ ಗೌರಿ ಲಂಕೇಶರ ಹತ್ಯೆಯು ಕರ್ನಾಟಕ, ದೇಶ ಮತ್ತು ಪ್ರಪಂಚದಾದ್ಯಂತ ದೊಡ್ಡ ಪ್ರತಿಭಟನೆಗಳಿಗೆ ಕಾರಣವಾದರೆ, ಆ ಪ್ರತಿರೋಧವನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸಬೇಕು.

ಉಮರ್‌ ಖಾಲಿದ್

‘ಒಳಗೆ’ ವಿಶ್ಲೇಷಣೆಗಳನ್ನು ಮಾಡಬಹುದಾದರೂ, ಮಿಕ್ಕವರ ವಿಚಾರದಲ್ಲಿ ಇಂತಹ ಪ್ರತಿಕ್ರಿಯೆ ಏಕೆ ಬರಲಿಲ್ಲ ಎಂಬ ಮಾತನ್ನು ಆಡಲಾಗದು. ಈ ರೀತಿಯ ‘ಹೋಲಿಕೆ’ಗಳನ್ನು ಎಂದೂ ಮಾಡಬಾರದು ಎಂಬುದು ನನ್ನ ಅನಿಸಿಕೆಯಲ್ಲ. ದಲಿತ ಹೆಣ್ಣುಮಗಳೊಬ್ಬಳ ಅತ್ಯಾಚಾರ-ಕೊಲೆಗೂ, ನಗರ ಪ್ರದೇಶದ ಮೇಲ್ವರ್ಗದ ಹೆಣ್ಣುಮಗಳ ಮೇಲಾಗುವ ದೌರ್ಜನ್ಯಕ್ಕೂ ಸಮಾಜ ಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುವುದನ್ನು ಪ್ರಶ್ನಿಸಬೇಕಾದ ಸಂದರ್ಭದಲ್ಲಿ ಪ್ರಶ್ನಿಸಬೇಕು. ಆದರೆ, ಭಾರತವು ಒಂದು ಬಹಳ ಅಪಾಯಕಾರಿಯಾದ ಸನ್ನಿವೇಶದಲ್ಲಿ ಹಾದುಹೋಗುತ್ತಿದೆಯೆಂಬುದು ನಮಗ್ಯಾರಿಗೂ ಗೊತ್ತಿಲ್ಲದೇನಲ್ಲ. ಇಂತಹ ಹೊತ್ತಿನಲ್ಲಿ ಪ್ರಗತಿಪರವಾಗಿ ಚಿಂತಿಸಿ, ಬದುಕುತ್ತಿರುವ ಯಾರ ಮೇಲಾದರೂ, ಮಹಿಳೆ, ಶೋಷಿತ ಜಾತಿ, ಅಲ್ಪಸಂಖ್ಯಾತ ಇತ್ಯಾದಿ ಹಿನ್ನೆಲೆಗಳ ಯಾರ ಮೇಲಾದರೂ ದೌರ್ಜನ್ಯವಾದಾಗ ಅದರ ವಿರುದ್ಧ ಯಾವ ನೆಲೆಯಿಂದ ಎಷ್ಟು ಪ್ರಮಾಣದ ದನಿ ಮೇಲೆದ್ದು ಬಂದರೂ ಅದನ್ನು ಹೃತ್ಪೂರ್ವಕವಾಗಿ ಸ್ವಾಗತಿಸಬೇಕು.

ನಾವು ದೊಡ್ಡ ಪ್ರಮಾಣದಲ್ಲಿ ಪ್ರತಿಕ್ರಿಯಿಸಲು ಯಾರೋ ಒಬ್ಬರು ಕೊಲೆಗೀಡಾಗುವತನಕ ಕಾಯಬೇಕೇ? ಅಥವಾ ಅಂತಹದೊಂದು ಸಂಭವನೀಯ ಬೆಳವಣಿಗೆಯನ್ನು ತಡೆಗಟ್ಟಲು ಮುಂಚೆಯೇ ಏನಾದರೂ ಮಾಡಬಹುದೇ ಎಂಬ ಪ್ರಶ್ನೆಯನ್ನು ಇಲ್ಲಿ ಕೇಳಿಕೊಳ್ಳಬಯಸುತ್ತೇನೆ. ಏಕೆಂದರೆ ಅಶೋಕ್‌ ಅವರ ಮೇಲೆ ಇದುವರೆಗೂ ಹಲ್ಲೆ ನಡೆಯದಿರುವುದು ಆಶ್ಚರ್ಯದ ಸಂಗತಿ ಅಷ್ಟೇ. 2002ರಲ್ಲಿ ಚಿಕ್ಕಮಗಳೂರಿನಲ್ಲಿ ಬಾಬಾಬುಡನ್‍ಗಿರಿ ಹೋರಾಟವನ್ನು ಕೈಗೊಂಡ ಅವಧಿಯಲ್ಲಿ ನಮ್ಮ ಮಧ್ಯೆ ಒಂದು ಅರೆ ತಮಾಷೆಯ ಚರ್ಚೆ ನಡೆಯುತ್ತಿತ್ತು. ಅಶೋಕ್ ಭಜರಂಗದಳದವರಿಂದ ಕೊಲೆಗೀಡಾಗಬಹುದಾದ ರೀತಿ ಏನಿರಬಹುದು ಎಂಬ ಸಾಧ್ಯತೆಗಳನ್ನು ಮಾತಾಡಿಕೊಳ್ಳುತ್ತಿದ್ದೆವು. ಚಿಕ್ಕಮಗಳೂರು ಬಸ್‍ಸ್ಟಾಂಡ್‍ನಲ್ಲಿ ಅವರ ಸುತ್ತ ಸುತ್ತುತ್ತಿದ್ದ ಅನುಮಾನಾಸ್ಪದ ವ್ಯಕ್ತಿಗಳು ಅಂತಹ ಚರ್ಚೆಗೆ ಕಾರಣರಾಗಿದ್ದರು. ಚಿಕ್ಕಮಗಳೂರಿನಲ್ಲಿ ಬಾಬಾಬುಡನ್‍ಗಿರಿ ಸೌಹಾರ್ದ ಸಮಾವೇಶದ ಬ್ಯಾನರ್ ಕಟ್ಟಲು ಸಂಘಪರಿವಾರ ಬಿಟ್ಟಿರಲಿಲ್ಲ. ರಾತ್ರಿ ಗೋಡೆ ಬರಹ ಮಾಡುತ್ತಿದ್ದ ಕಾರ್ಯಕರ್ತನ ಕೈ ಕಡಿಯುತ್ತೇವೆಂದು ಬೆದರಿಕೆ ಹಾಕಿ ನಿಲ್ಲಿಸಿದ್ದರು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಸ್ಥಳೀಯ ಕಾಂಗ್ರೆಸ್ ಶಾಸಕರು ಸಚಿವರೂ ಆಗಿದ್ದರು. ಕೋಮು ಸೌಹಾರ್ದದ ಚಳವಳಿಯು ಕಾಂಗ್ರೆಸ್‍ನಿಂದ ದೈಹಿಕ ರಕ್ಷಣೆಯನ್ನೂ ಪಡೆದುಕೊಂಡಿರಲಿಲ್ಲ. ಕೋಮುವಾದವನ್ನು ವಿರೋಧಿಸಲು ಹೋರಾಡಿದ ಜನರು ತಮ್ಮ ಬದ್ಧತೆಯ ಕಾರಣದಿಂದ ಪ್ರತಿರೋಧವನ್ನು ಕಾಪಾಡಿಕೊಂಡು ಬಂದರೇ ಹೊರತು ಕಾಂಗ್ರೆಸ್‌ನ ಬೆಂಬಲದಿಂದಲ್ಲ. ಗೌರಿ ಲಂಕೇಶರ ಹತ್ಯೆಯಾಗಿದ್ದೂ ಸಹಾ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗಲೇ. ಅಂದರೆ ಬಿಜೆಪಿ, ಆರೆಸ್ಸೆಸ್‌ ವಿರುದ್ಧ  ಹೋರಾಟಕ್ಕೆ ನಿಲ್ಲುವವರ ರಕ್ಷಣೆಯನ್ನು ಈ ವಿಚಾರದಲ್ಲಿ ಬದ್ಧತೆ ಹೊಂದಿರುವವರೇ ಮಾಡಿಕೊಳ್ಳಬೇಕಾಗುತ್ತದೆ. ಅದನ್ನು ಕಾಂಗ್ರೆಸ್ಸಿಗೋ ಅಥವಾ  ಇನ್ನಾರಿಗೋ ಗುತ್ತಿಗೆ ನೀಡಲಾಗುವುದಿಲ್ಲ.

ಉಮರ್‌ ಖಾಲಿದ್
ಬಾಬಾಬುಡನ್‌ಗಿರಿ ಹೋರಾಟಕ್ಕೆ ೧೫ ವರ್ಷವಾದ ಸಂದರ್ಭದ ಸಮಾವೇಶ

ನಾವೆಲ್ಲರೂ ಬಯಸುವ ನೆಮ್ಮದಿಯ ಸಮಾಜ ನಿರ್ಮಾಣಕ್ಕೆ ಬೀದಿಯಲ್ಲಿ ಘೋಷಣೆ ಕೂಗಿ, ಇನ್ನಾರದೋ ಟಾರ್ಗೆಟ್ ಆಗುವ ಧೈರ್ಯ ಇರುವ ಹಲವರು ಬೇಕಾಗುತ್ತಾರೆ. ಹಾಗೆ ನೋಡಿದರೆ ಇಂತಹ ಆಶಯದ ಸಾರ್ವಜನಿಕ ಅಭಿವ್ಯಕ್ತಿ ಹಾಗೂ ಸಂಘಟನೆ ಅಂತಹವರಿಂದಲೇ ಆಗುತ್ತದೆ. ಅಂತಹವರು ಮುಂದೊಂದು ದಿನ ಹುತಾತ್ಮರಾದರೆ ಅದು ನಮ್ಮೆಲ್ಲರಲ್ಲೂ ನೋವು, ಆಕ್ರೋಶವನ್ನೂ ಉಂಟು ಮಾಡುತ್ತದೆ. ಆದರೆ ಅಂತಹವರನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನೂ ನಾವೆಲ್ಲಾ ಸಾಧ್ಯವಾದಷ್ಟೂ ಹೊರಬೇಕಲ್ಲವೇ? ಆ ಕಾಪಾಡಿಕೊಳ್ಳುವಿಕೆಗೆ ನಾವು ಪ್ರಯತ್ನ ಮಾಡಿದರೆ ಅದು ‘ಹುತಾತ್ಮರಾಗಲು ಸಿದ್ಧರಿರುವ’ವರನ್ನು ರಕ್ಷಿಸಿಕೊಳ್ಳುವುದಕ್ಕೆ ಸೀಮಿತವಾಗುವುದಿಲ್ಲ. ಅದು ಜೀವಪರವಾದ ಎಲ್ಲವನ್ನೂ ಕಾಯ್ದುಕೊಳ್ಳುವುದಕ್ಕೆ ವಿಸ್ತರಣೆ ಆಗಿಯೇ ಆಗುತ್ತದೆ. ಸ್ವತಃ ಅಶೋಕ್ ಅಥವಾ ಉಮರ್ ಖಾಲಿದ್ ಅತ್ಯಂತ ತಳಸ್ತರದ ಜನರ ಒಳಿತಿಗಾಗಿ ಚಿಂತಿಸಿದ ಮತ್ತು ಕಾರ್ಯಪ್ರವೃತ್ತರಾದ ಮುಂಚೂಣಿ ಕಾರ್ಯಕರ್ತರೇ ಆಗಿದ್ದಾರೆ. ಹಾಗಾಗಿ ಅಂಥವರನ್ನು ರಕ್ಷಿಸಿಕೊಳ್ಳುವುದೆಂದರೆ, ಅದು ಅವರು ದುಡಿಯುತ್ತಿರುವ ಆಶಯಗಳ ರಕ್ಷಣೆಗೆ, ಶೋಷಿತ ಸಮುದಾಯಗಳ ರಕ್ಷಣೆಗೆ ಮಾಡುವ ಪ್ರಯತ್ನವೂ ಆಗಿರುತ್ತದೆ.

ಹಾಗಾಗಿ ನಡೆಯಬಾರದ ಘಟನೆಯೊಂದು ನಡೆದ ನಂತರ, ನಡೆದ ಪ್ರಮಾಣಕ್ಕೆ ತಕ್ಕುನಾದ ಪ್ರತಿಕ್ರಿಯೆ ನೀಡುವುದು ಮಾತ್ರವಲ್ಲದೇ, ಮುಂಚೆಯೇ ಸಾಧ್ಯವಾದ ರಕ್ಷಣಾ ಕಾರ್ಯಾಚರಣೆಗೆ ಇಳಿಯುವ ಅಗತ್ಯವಿದೆ. ಕೆಲವೊಮ್ಮೆ ರಕ್ಷಣೆಯು ನಾವೇ ಮುಂದಾಗಿ ನಡೆಸುವ ಕಾರ್ಯಯೋಜನೆ (ಇದನ್ನು ಕೇವಲ ದೈಹಿಕ ದಾಳಿಯೆಂದು ತಿಳಿಯಬಾರದು ಎಂಬ ನಿರೀಕ್ಷಣಾ ಜಾಮೀನನ್ನು ಕೋರುತ್ತೇನೆ)ಯಾಗಿರಬೇಕಾಗುತ್ತದೆ. ವಾಸ್ತವದಲ್ಲಿ ಭಾರತದ ಇಂದಿನ ಸನ್ನಿವೇಶದಲ್ಲಿ ಅಂತಹ ಕಾರ್ಯಾಚರಣೆಯು ನಿರಂತರವಾಗಿ ಮತ್ತು ಯೋಜಿತವಾಗಿ ನಡೆಯಬೇಕಿದೆ. ಅಂಥದ್ದು ‘ಬಂಧನಕ್ಕೊಳಗಾಗುತ್ತಾರೆ ಎಂದು ನಿಸ್ಸಂದೇಹವಾಗಿ ಗೊತ್ತಿದ್ದ’ ಉಮರ್ ಖಾಲಿದರ ವಿಚಾರದಲ್ಲಿ ಆಗಲೇ ಇಲ್ಲ. ಅವರ ಪರವಾಗಿ ಮುಂಚೆಯೇ ದನಿಯೆತ್ತುವುದು ಹೋಗಲಿ, ಈ ಉಮರ್ ಖಾಲಿದ್ ಎಂದರೆ ಯಾರು ಎಂಬುದನ್ನು ಕನಿಷ್ಠ ಪ್ರಗತಿಪರರ ನಡುವೆ ತಿಳಿಸುವ ಕೆಲಸವೂ ಆಗಲಿಲ್ಲ. ರಾಯಚೂರಿನ ಕಾರ್ಯಕ್ರಮವೊಂದಕ್ಕೆ ಅವರನ್ನು ಕರೆಸುವ ಚರ್ಚೆ ನಡೆದಾಗ, ನಮ್ಮ ನಡುವಿನ ಪ್ರಗತಿಪರ ಹಿರಿಯರೊಬ್ಬರು ಉಮರ್‌ ಖಾಲಿದರಂತಹ ಮುಸ್ಲಿಂ ತೀವ್ರಗಾಮಿಗಳನ್ನು ಕರೆಯದಿದ್ದರೆ ಒಳ್ಳೆಯದು ಎಂದು ಹೇಳಿದ್ದರು! ವಾಸ್ತವದಲ್ಲಿ ಉಮರ್‌ರಂತಹ ಲಿಬರಲ್‌ ಮುಸ್ಲಿಂ (ಜೆಎನ್‌ಯು ಘಟನೆ ನಡೆಯುವವರೆಗೂ ಧಾರ್ಮಿಕ ಐಡೆಂಟಿಟಿ ಸಹಾ ಅವರಿಗಿರಲಿಲ್ಲ)ಗಳನ್ನು ಅವರೂ ನೋಡಿರಲಿಕ್ಕಿಲ್ಲ. ದೇಶದ ವಿವಿಧ ಭಾಗಗಳ ಪ್ರಗತಿಪರರು ಈ ರೀತಿಯಾಗಿ ತಮ್ಮವರನ್ನು ಆತುಕೊಳ್ಳಲು ಹಿಂಜರಿಯುತ್ತಿದ್ದ ಹೊತ್ತಿನಲ್ಲೇ, ಉಮರ್‍ರನ್ನು ಕೊಲ್ಲುವ ಪ್ರಯತ್ನವು ಕೇಂದ್ರ ದೆಹಲಿಯ ಬೀದಿಯಲ್ಲಿ ನಡೆಯಿತು. ಆ ನಂತರವೂ ನಾವೆಲ್ಲರೂ ಯಾವ ಪರಿಣಾಮಕಾರಿ ಯೋಜನೆಯನ್ನು ರೂಪಿಸಿ ಕಾರ್ಯಪ್ರವೃತ್ತರಾಗಲಿಲ್ಲ.

ಉಮರ್ ಖಾಲಿದ್‌ ರನ್ನು ಕರೆಯಲು ಹಿಂಜರಿದ ಅಥವಾ ಆಶೋಕ್‍ರ ವಿಚಾರದಲ್ಲಿ ‘ಇಷ್ಟೊಂದು ಪ್ರತಿಕ್ರಿಯೆ ಬೇಕೇ?’ ಎಂದು ಕೇಳಿದ ಸಮಾನ ಮನಸ್ಕ ಗೆಳೆಯರ ಆತಂಕವನ್ನು ಅರ್ಥ ಮಾಡಿಕೊಳ್ಳಬಹುದು; ಆದರೆ, ಸದಾ  ನಮ್ಮವರಲ್ಲೇ ತಪ್ಪು ಹುಡುಕಬಯಸುವ ಕೆಲವರ ಅನುಮಾನಗಳು ಅರ್ಥವಾಗುವುದಿಲ್ಲ. ಗೌರಿ ಲಂಕೇಶರ ಕುರಿತಾಗಿಯೂ ಕೆಲವರಿಗೆ ಅಂತಹ ತಕರಾರುಗಳಿದ್ದವು. ಅವರು ಆ ರೀತಿ ಮಾತು ಆಡದಿದ್ದರೆ ಚೆನ್ನಾಗಿರುತ್ತದೆ ಎಂದು ಹಲವಾರು ‘ಉದಾರ ಪಂಥೀಯರು’ ಹೇಳಿದ್ದರು. ಗೌರಿ ಲಂಕೇಶರೊಟ್ಟಿಗೆ ನಮಗೂ ಇದ್ದ ಅಂತಹ ತಕರಾರುಗಳನ್ನು ಮುಂದಿಟ್ಟು ಅವರೊಡನೆಯೇ ಜಗಳವಾಡುತ್ತಿದ್ದ ನಮಗೆ ‘ಗೌರಿಯವರು ತಾವಾಡಿದ ಮಾತುಗಳಿಂದಾಗಿಯೇ ಕೊಲೆಗೀಡಾದರು’ ಎನಿಸುವುದಿಲ್ಲ. ‌

ಏಕೆಂಬುದನ್ನು ಹಿರಿಯ ಗೆಳೆಯ ಶಿವಸುಂದರ್‍ ಅವರು ಬರೆದ ಕವನವು ಸಮರ್ಥವಾಗಿ ಮುಂದಿಡುತ್ತದೆ.

‘ಹೌದು, ನಿನ್ನ ಮಾತಿನಲ್ಲಿ ಅಲ್ಲೆರಡು ಪದ, ಇಲ್ಲೊಂದು ಚಿಹ್ನೆ ಬೇಕಿರಲಿಲ್ಲ…

ಅಂದ ಮಾತ್ರಕ್ಕೆ ಗುಂಡಿನ ಗುರಿಯೇನೂ ಬದಲಾಗುತ್ತಿರಲಿಲ್ಲ….

ಕೊಂದಿದ್ದುಂಟೆ ಎಂದಾದರೂ ಅಡ್ಡಗೋಡೆಯ ಮೇಲೆ ಕೂತ ನಾಜೂಕಯ್ಯಗಳನ್ನು?

ಧರ್ಮಭೀರುವೇ ಆದರೂ ಕೊಂದರೇಕೆ ಗಾಂಧಿಯನ್ನು?’

ಎಂದೋ ಭಜರಂಗದಳದವರ ಕೈಯ್ಯಲ್ಲಿ ಇಲ್ಲವಾಗಿಬಿಡಬಹುದಾಗಿದ್ದ ಕೆ.ಎಲ್.ಅಶೋಕ್ ಮಾತ್ರವಲ್ಲದೇ, ಸಮಾಜಪರ ಚಿಂತನೆಯೊಂದಿಗೆ ಕೆಲಸ ಮಾಡುತ್ತಿರುವ ನೂರಾರು ಮುಂಚೂಣಿ ಕಾರ್ಯಕರ್ತರು ಹಾಗೂ ನಾಯಕರು ರಾಜ್ಯದಲ್ಲಿದ್ದಾರೆ. ಅವರೆಲ್ಲರನ್ನೂ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮದಾಗಿದೆ. ಮೊನ್ನೆ ಅಶೋಕ್‌ ಅವರ ಪರವಾಗಿ ಬಂದ ದನಿಯು (ಆ ಸಂದರ್ಭದ ಅಗತ್ಯವನ್ನು ಮೀರಿ ಎದ್ದಿರಬಹುದಾದರೂ) ಅಂತಹ ಜವಾಬ್ದಾರಿ ನಿರ್ವಹಣೆಯ ಭಾಗವಾಗಿ ಸ್ಥಳೀಯರು ನಡೆಸಿದ ಮುಂದಾಲೋಚನೆಯ ಕ್ರಮವಾಗಿರಬಹುದು. ಅದನ್ನು ಅವರು ಯೋಜಿಸಿ ಮಾಡಿರದಿದ್ದರೂ, ಜನಪರ ಹೋರಾಟಗಾರನೊಬ್ಬನ ಪರವಾಗಿ ಇಷ್ಟೊಂದು ಭಿನ್ನ ಬಗೆಯ ಬೆಂಬಲವಿದೆ ಎಂದು ತೋರಿದ್ದು ಶ್ಲಾಘನೀಯ.

ಜೀವಪರ ಕಾಳಜಿಯುಳ್ಳವರೆಲ್ಲರೂ ಪರಸ್ಪರರ ಕಾಲೆಳೆಯುವ ಬದಲು, ಕೂದಲು ಸೀಳುವ ಬದಲು ಸಾಧ್ಯವಾದಷ್ಟೂ ಕೈ ಜೋಡಿಸೋಣ. ಅಹಿಂಸೆ, ಪ್ರಜಾತಂತ್ರ, ಪ್ರೀತಿ, ಸಮಾನತೆಯ ಆಶಯಗಳಿಂದ ಕೂಡಿದ ಪ್ರತಿರೋಧವನ್ನು ಪ್ರತಿಪಾದಿಸಿದ ಉಮರ್ ಖಾಲಿದ್ ಭಯೋತ್ಪಾದಕ ವಿರೋಧಿ ಕಾನೂನಿನಡಿ ಬಂಧಿತವಾಗಿರುವ ಸಂದರ್ಭದಲ್ಲಿ ಅಪಾಯದ ತೀವ್ರತೆ ಇನ್ನೊಮ್ಮೆ ಅರಿಯೋಣ. ದೆಹಲಿಯಲ್ಲಿ ಹಿಂಸೆಯನ್ನು ಬಿತ್ತಿದವರು, ಗುಂಡು ಹೊಡೆದವರು, ಲಾಠಿ ದೊಣ್ಣೆಗಳಿಂದ ಬಡಿದವರು ಬೀದಿಯಲ್ಲಿ ಮೆರೆಯುತ್ತಿರುವಾಗಲೇ, ಶಾಂತಿಗಾಗಿ ದನಿಯೆತ್ತಿದವರು ಜೈಲು ಸೇರುತ್ತಿದ್ದಾರೆ. ಬಲಿಯಾಗಲು, ಜೈಲಿಗೆ ಸೇರಲು ಹೆದರಬೇಕಿಲ್ಲ; ಆದರೆ ಎಲ್ಲವೂ ಇನ್ನೂ ಮುಗಿದಿಲ್ಲ. ಪುಟ್ಟ ಮಗಳು ಮತ್ತು ವಯಸ್ಸಾದ ಅತ್ತೆಯ ಜೊತೆಗೆ ಖಾಸಗಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಅಶೋಕ್‍ರನ್ನು ಉದ್ದೇಶಪೂರ್ವಕವಾಗಿ ಅವಹೇಳನ ಮಾಡಲಾಯಿತೆಂಬ ವಿಚಾರಕ್ಕೆ ಬಂದ ಸ್ವಯಂಪ್ರೇರಿತ ಪ್ರತಿಕ್ರಿಯೆಯು ಅದನ್ನು ತೋರಿಸುತ್ತದೆ. ಚಿಂತನಶೀಲರಾದ ಮುತ್ಸದ್ದಿತನಕ್ಕಿಂತ ಹೃದಯದಿಂದ ದಿಟ್ಟವಾಗಿ ಬಂದ ಪ್ರತಿಕ್ರಿಯೆ ಅದು.

ಉಮರ್‌ ಖಾ
ಶಾಹಿನ್‌ ಬಾಗ್ ನ ಪ್ರತಿಭಟನೆ ಫೋಟೋ.

ಇನ್ನೂ ಒಂದು ಸಂಗತಿಯನ್ನು ಹೇಳಿ ಈ ಬರಹ ಮುಗಿಸುತ್ತೇನೆ. ಎಲ್ಲವೂ ಮುಗಿದು ಹೋಯಿತು ಎಂಬಂತೆ, ದೇಶಕ್ಕೆ ದೇಶವೇ ದಿಗ್ಭ್ರಾಂತವಾಗಿದ್ದಾಗ ಶಾಹೀನ್‍ಬಾಗ್‍ನ ಅರೆ ಶಿಕ್ಷಿತ, ಬಡ ಮಹಿಳೆಯರು ದಾರಿ ತೋರಿಸಿದರು. ಯಾವ ಸಮುದಾಯವನ್ನು ಕಾಪಾಡಲು ನಮ್ಮಿಂದ ಆಗುತ್ತಿಲ್ಲ ಎಂದು ಬುದ್ಧಿಜೀವಿಗಳು ದುಃಖಿತರಾಗಿ ಕೈ ಚೆಲ್ಲಿದ್ದರೋ, ಅದೇ ಸಮುದಾಯದ ಸಾಮಾನ್ಯ ಜನರು ಸಿಎಎ ವಿರುದ್ಧದ ಹೋರಾಟದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ನೆರೆದು ಬುದ್ಧಿಜೀವಿಗಳಿಗೂ ಧೈರ್ಯ ತಂದುಕೊಟ್ಟರು. ಯಾರೇನೇ ಹೇಳಲಿ, ಈ ದೇಶದಲ್ಲಿ ಇನ್ನೂ ಎಲ್ಲವೂ ಮುಗಿದಿಲ್ಲ. ಶೋಷಿತ ಸಾಮಾನ್ಯ ಜನರ ಹೃದಯ ಹಾಗೂ ಮನಸ್ಸಿನಿಂದ ಹೊರಡುವ ಚೈತನ್ಯ ಹಾಗೂ ಚಿಂತನಶೀಲರ ವಿವೇಕವು ಜೊತೆಗೂಡುವುದಾದರೆ ಅಪಾರವಾದ ಸಾಧ್ಯತೆಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ ಎಂಬುದರಲ್ಲಿ ಸಂಶಯವೇ ಇಲ್ಲ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...