ಹಿಂದಿ ದಿನ, ಏಕರಾಷ್ಟ್ರ
ಫೋಟೋ ಕೃಪೆ: ಪ್ರಜಾವಾಣಿ

ಹಿಂದಿ ಕಲಿಕೆಯೋ, ಹಿಂದಿ ಹೇರಿಕೆಯೋ ಇದು ಇಂದು ನೆನ್ನೆಯ ಚರ್ಚೆಯಲ್ಲ. ಕಳೆದ ನೂರು ವರ್ಷಗಳಲ್ಲಿ “ಭಾರತ” ಎನ್ನುವ ರಾಷ್ಟ್ರವನ್ನು ನಿರೂಪಿಸಿಸುತ್ತ ಬರಲಾಗಿರುವ ವಿವಿಧ ಮಾದರಿಗಳಲ್ಲಿ ಒಂದಾಗಿರುವ “ಭಾಷಾ ರಾಷ್ಟ್ರೀಯತೆ’ಯ ವ್ಯಾಖ್ಯಾನ. ಈ ಭಾಷಾ ರಾಷ್ಟ್ರೀಯತೆಯ ಹಿನ್ನೆಲೆಯಲ್ಲಿ ಹಿಂದಿಯನ್ನು ದೇಶದ ಎಲ್ಲ ರಾಜ್ಯಗಳು ಶಿಕ್ಷಣದಲ್ಲಿ ಆಳವಡಿಸಿಕೊಳ್ಳಬೇಕೆನ್ನುವ ಕೇಂದ್ರ ಸರ್ಕಾರದ ಒತ್ತಾಯವನ್ನು ಪ್ರಶ್ನಿಸುವ ಅಥವಾ ಹಿಂದಿಯನ್ನು ಆಡಳಿತದ ಎಲ್ಲ ಹಂತಗಳಲ್ಲಿ ಬಳಸಬೇಕೇ? ಬೇಡವೇ? ಎನ್ನುವ ಚರ್ಚೆಯಾಚೆಗೆ ನೋಡುವ ಅಗತ್ಯವಿದೆ.

ಹಿಂದಿ ಹೇರಿಕೆಯನ್ನು ಬಲಿಷ್ಠ ರಾಷ್ಟ್ರೀಯತೆಯ ವ್ಯಾಖ್ಯಾನಗಳ ಮತ್ತು ವೈವಿಧ್ಯತೆಯಲ್ಲಿ ಏಕತೆ ಎನ್ನುವ ವಿರೋಧಾಭಾಸವನ್ನು ಮುಖಾಮುಖಿ ಮಾಡಿಕೊಳ್ಳುವ ಮೂಲಕ ಅರ್ಥ ಮಾಡಿಕೊಳ್ಳಬೇಕಿದೆ. ಹಿಂದಿಯನ್ನು ರಾಷ್ಟ್ರಭಾಷೆ ಮಾಡಬೇಕೆನ್ನುವ ಮತ್ತು ಮಾಡಬಾರದೆನ್ನುವ ಕಳೆದ ನೂರು ವರ್ಷಗಳ ವಾಗ್ವಾದಗಳನ್ನು ಗಮನಿಸುವ ಮೂಲಕ ಇಂದಿನ “ಏಕರಾಷ್ಟ್ರ-ಏಕಭಾಷೆ” ಎನ್ನುವ ಪ್ರಭುತ್ವ ಪ್ರಯೋಜಿತ ಬಲಿಷ್ಠ ರಾಷ್ಟ್ರೀಯತೆಯ ರಾಜಕಾರಣವನ್ನು ವಿವರಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಸೆಪ್ಟಂಬರ್ 14 ಹಿಂದಿ ದಿವಸ ಆಚರಣೆಗೆ ಕನ್ನಡಿಗರ ತೀವ್ರ ವಿರೋಧ

ಮೊದಲ ಹಂತದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಅನುಷ್ಠಾನ ಮಾಡಬೇಕೆನ್ನುವ ಚಾರಿತ್ರಿಕ ಬೆಳವಣಿಗೆಗಳನ್ನು ವಿವರಿಸಲಾಗಿದ್ದು; ಎರಡನೇ ಹಂತದಲ್ಲಿ ಇಂದಿನ ಪ್ರಭುತ್ವ ಪ್ರಾಯೋಜಿತ ಬಲಿಷ್ಠ ರಾಷ್ಟ್ರೀಯತೆಯ ನಿರೂಪಣೆಗಳ ರಾಜಕಾರಣವನ್ನು ಚರ್ಚಿಸಲಾಗಿದೆ.

1

ಹಿಂದಿಯನ್ನು ರಾಷ್ಟ್ರಭಾಷೆಯಾಗಿಸಬೇಕೆನ್ನುವ ಚರ್ಚೆ ಯಾಕಾಗಿ ಪ್ರಾರಂಭವಾಯಿತು ಎನ್ನುವುದಕ್ಕೆ ಉತ್ತರ; ನಾವು ಸ್ವಾತಂತ್ರ್ಯಪೂರ್ವದಲ್ಲಿ ರೂಪಿಸಿಕೊಳ್ಳಲು ಹೊರಟಿದ್ದ “ಭಾರತ” ಎನ್ನುವ ರಾಷ್ಟ್ರ ಕಲ್ಪನೆಯಲ್ಲಿ ಅಡಗಿದೆ. ಭಾರತೀಯರ ಈ “ಒಂದು ರಾಷ್ಟ್ರ” ಎನ್ನುವ ಕಲ್ಪನೆಗೆ ಬ್ರಿಟಿಷರ ಶಿಕ್ಷಣ ಮತ್ತು ವಸಾಹತುಶಾಹಿಯ ಚೌಕಟ್ಟಿನ ಕಾರಣಕ್ಕಾಗಿ, ಆಗಿನ ಯೂರೋಪಿಯನ್ ದೇಶಗಳ ರಾಷ್ಟ್ರೀಯತೆಯ ಪ್ರಭಾವವಿತ್ತಾದರು ಎರಡರ ನಡುವೆ ಸಮಾನ ಗುಣಲಕ್ಷಣಗಳಿರಲಿಲ್ಲ. ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ಮತ್ತು ಭಾಷಿಕ/ಪ್ರಾದೇಶಿಕ ನೆಲೆಯ ಏಕೀಕರಣದ ಚಳವಳಿಗಳೆರಡು ಜೊತೆ ಜೊತೆಯಲ್ಲೇ ಸಾಗಿಬಂದಿವೆ. ಸ್ವಾತಂತ್ರ್ಯಪೂರ್ವ ಕರ್ನಾಟಕದ ಸಂದರ್ಭವನ್ನೇ ಇದಕ್ಕೆ ಉದಾಹರಣೆಯಾಗಿ ನೋಡಬಹುದು.

ಕರ್ನಾಟಕದ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಸದಸ್ಯರಾಗಿದ್ದವರೇ ಮುಂಚೂಣಿಯಲ್ಲಿ ನಿಂತು ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣ ಚಳವಳಿ ಎರಡನ್ನು ಮುನ್ನಡೆಸಿದ್ದರು. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಭಾರತ ಎನ್ನುವ ರಾಷ್ಟ್ರವೊಂದು ರೂಪುಗೊಳ್ಳುವುದು ಎಷ್ಟು ಮುಖ್ಯವಾಗಿತ್ತೋ, ಭಾರತದಲ್ಲಿ ಭಾಷೆಯ ಆಧಾರದ ಮೇಲೆ ಒಂದು ಆಡಳಿತಕ್ಕೆ ಒಳಪಡಬೇಕೆನ್ನುವ ಪ್ರಾದೇಶಿಕ ಬಯಕೆಗಳು ಸಹಾ ಅಂದಿನ ಎಲ್ಲ ಬಲಿಷ್ಠ ಭಾಷೆಗಳ ಜನರಿಗೆ ಮುಖ್ಯವಾಗಿತ್ತು. ಭಾರತದ ಜನಕ್ಕೆ ರಾಷ್ಟ್ರೀಯತೆ ಮತ್ತು ಉಪರಾಷ್ಟ್ರೀಯತೆ ಎನ್ನುವ ಪರಿಕಲ್ಪನೆಗಳೆರಡು ಆಧುನಿಕ ಶಿಕ್ಷಣದ ಮೂಲಕ ಸಾಂಸ್ಕೃತಿಕ ಮತ್ತು ರಾಜಕೀಯದ ನೆಲೆಯಲ್ಲಿ ರೂಪಿಸಿಕೊಂಡಿದ್ದ ಎರಡು ಹೊಸ ಒಳನೋಟಗಳಾಗಿತ್ತು.

1903ರಲ್ಲಿ ಓರಿಯಾ ಮಾತನಾಡುವ ಜನರನ್ನೆಲ್ಲ ಒಂದೇ ಆಡಳಿತದ ಭಾಗವಾಗಬೇಕೆನ್ನುವ ಚಳವಳಿಯಿಂದ ಆರಂಭವಾಗಿ, ಮತೀಯ ನೆಲೆಯಲ್ಲಿ ಬಂಗಾಳವನ್ನು 1905ರಲ್ಲಿ ಬಂಗಾಳವನ್ನು ವಿಭಜಿಸಿದ್ದ ಬ್ರಿಟಿಷರ ವಿರುದ್ಧ ಭಾಷಾ ಭಾವೈಕ್ಯತೆಯ ಚಳವಳಿಯ ಮೂಲಕ ಅಲ್ಲಿನ ಹಿಂದೂ ಮುಸ್ಲಿಂ ಜನರನ್ನು ಬಂಗಾಳಿ ಭಾಷಿಕ ಅನನ್ಯತೆಯ ಮೂಲಕ ಒಂದುಗೂಡಿದ್ದು ಇದೆ. ಹೀಗೆ ಭಾಷಿಕ ನೆಲೆಯಲ್ಲಿ ಒಂದು ಆಡಳಿತ ಪ್ರಾಂತವಾಗಿ ಆಡಳಿತಕೊಳಪಡಬೇಕು ಮತ್ತು ಭಾರತವನ್ನು ಸ್ವತಂತ್ರ ರಾಷ್ಟ್ರವಾಗಿಸಬೇಕೆನ್ನುವ ಎರಡು ಕಲ್ಪನೆಗಳು ಒಂದೇ ಹೋರಾಟದಲ್ಲಿ ಬೆಸೆದುಕೊಂಡಿದ್ದವು. ಕುವೆಂಪುರ “ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೇ” ಎಂದು ಬರೆದ ಹಿನ್ನೆಲೆಯಲ್ಲಿಯೂ, ಭಾರತವನ್ನು ಒಂದು ರಾಷ್ಟ್ರವನ್ನಾಗಿ ನೋಡುವ ಮತ್ತು ಕನ್ನಡ ಮಾತಾಡುವ ಭೂಭಾಗಗಳನ್ನು ಒಂದು ಆಡಳಿತದ ಭಾಗವಾಗಿ ನೋಡುವ ಭಾವುಕ ಆದರ್ಶವಿತ್ತು.

ಇದನ್ನೂ ಓದಿ: “ಹಿಂದಿ ತೆರಿಯಾದು ಪೊಡಾ (ಹಿಂದಿ ಗೊತ್ತಿಲ್ಲ, ಹೋಗೋ)” ಟೀಶರ್ಟ್ ವೈರಲ್;‌ ತಯಾರಿಕರಿಗೆ ಬೆದರಿಕೆ!‌

ಸ್ವಾತಂತ್ರ್ಯ ಹೋರಾಟ ಎನ್ನುವುದು ಕೇವಲ ಬ್ರಿಟಿಷ್ ಆಡಳಿತದಿಂದ ಮುಕ್ತಿ ಪಡೆಯುವ ಹೋರಾಟ ಮಾತ್ರವಾಗಿರದೆ, ರಾಷ್ಟ್ರವೊಂದರ ರೂಪೂರೇಷೆಗಳನ್ನು ತನ್ನ ಒಡಲಲ್ಲೇ ಬಿತ್ತಿ ಬೆಳೆಸಿಕೊಂಡುಬಂದ ಹಾದಿಯಾಗಿತ್ತು. ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಯಲ್ಲೇ ಭಾರತವನ್ನು ಒಂದು ರಾಷ್ಟ್ರವಾಗಿ ಕನಸಲು ಬೇಕಿದ್ದ ಎಲ್ಲ ಬಗೆಯ ಸಂಕಂಥನಗಳು ರೂಪುಗೊಳ್ಳುತ್ತಿದ್ದವು. ಇದರ ಭಾಗವಾಗಿಯೇ ಒಂದು ರಾಷ್ಟ್ರಕ್ಕೆ ಒಂದು ಭಾಷೆ ಎನ್ನುವ ನಿರೂಪಣೆಗಳು ಚಾಲ್ತಿಗೆ ಬಂದಿದ್ದು. ಒಂದು ಭಾಷೆ ಮಾತನಾಡುವ ಎಲ್ಲರೂ ಒಂದು ಪ್ರಾಂತೀಯ ಆಡಳಿತಕ್ಕೆ ಒಳಪಡಬೇಕೆನ್ನುವ ಭಾಷಾ ಏಕೀಕರಣದ ವಾದಗಳಿಗೆ ಇದ್ದ ಭಾಷಿಕ, ಚಾರಿತ್ರಿಕ, ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ತುರ್ತುಗಳು, ಅಖಿಲ ಭಾರತೀಯ ಮಟ್ಟಕ್ಕೆ ಒಂದು ಭಾಷೆ ಬೇಕು ಮತ್ತು ಅದು ರಾಷ್ಟ್ರಭಾಷೆಯಾಗಿರಬೇಕು ಎನ್ನುವಾಗ ಇರಲಿಲ್ಲ.

ಇಂಗ್ಲಿಷ್ ಶಿಕ್ಷಣ ಮತ್ತು ಆಡಳಿತದ ಭಾಷೆಯಾಗಿ ಅಂದಿನ ಭಾರತದ ಆಡಳಿತಾತ್ಮಕ ಸಂವಹನಗಳಲ್ಲಿ ಚಾಲ್ತಿಯಲ್ಲಿತ್ತು. ಈ ರಾಷ್ಟ್ರ ಭಾಷೆಯ ಚರ್ಚೆಯ ಹಿನ್ನೆಲೆಯಲ್ಲಿ ಇಂಗ್ಲಿಷ್ ಭಾಷೆಯ ಯಜಮಾನಿಕೆಯನ್ನು ನಿರಾಕರಿಸುವ ಮತ್ತು ಭಾರತೀಯ ಭಾಷೆಯ ಮೂಲಕ ಪ್ರತಿಯಜಮಾನಿಕೆಯನ್ನು ರೂಪಿಸಿಕೊಳ್ಳುವ ಮುನ್ನೋಟಗಳಾವು ಇರಲಿಲ್ಲ. ಆದಾಗ್ಯೂ ರಾಷ್ಟ್ರಭಾಷೆಯ ಚರ್ಚೆಗಳು 1920ರ ವೇಳೆಗಾಗಲೇ ಕಾಂಗ್ರೆಸ್‍ನ ಅಧಿವೇಶನಗಳಲ್ಲಿ ಕಾಣಿಸಿಕೊಂಡಿದ್ದವು. 1921ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಸಮ್ಮೇಳನದಲ್ಲಿ ಹಿಂದಿಯನ್ನು ರಾಷ್ಟ್ರ ಭಾಷೆಯಾಗಿ ಘೋಷಿಸಬೇಕೆನ್ನುವ ನಿಲುವು ವ್ಯಕ್ತವಾಗಿತ್ತು.

Image Courtesy: Prajavani

ಗಾಂಧಿ ರಾಷ್ಟ್ರಭಾಷೆಯೊಂದರ ಅಗತ್ಯದ ಕುರಿತು ಮಾತನಾಡುತ್ತ ಹೀಗೆ ಬರೆಯುತ್ತಾರೆ “ಈ ಭಾರತೀಯ ಭಾಷೆಗಳಲ್ಲಿ ಒಂದು ನಮಗೆ ಅಖಿಲ ಭಾರತ ವ್ಯವಹಾರಕ್ಕೆ ಬೇಕು. ಬಹುಜನಕ್ಕೆ ಈಗಾಗಲೇ ಗೊತ್ತಿದ್ದು ಉಳಿದವರೂ ಸುಲಭವಾಗಿ ಕಲಿಯಬಹುದಾದ ಭಾಷೆಯನ್ನು ಆರಿಸಬೇಕು. ಹಿಂದಿಯೇ ನಿರ್ವಿವಾದವಾಗಿ ಅಂಥ ಭಾಷೆ. ಉತ್ತರದ ಹಿಂದೂ-ಮುಸ್ಲಿಮರಿಬ್ಬರೂ ಈ ಭಾಷೆಯನ್ನು ಬಲ್ಲರು; ಆಡುತ್ತಾರೆ ಕೂಡ. ಪಾರ್ಸೀ ಲಿಪಿಯಲ್ಲಿ ಬರೆದರೆ ಇದೇ ಉರ್ದು ಅನಿಸಿಕೊಳ್ಳುತ್ತದೆ. 1925 ರ ಕಾನ್ಪುರ ಕಾಂಗ್ರೆಸ್ಸಿನಲ್ಲಿ ಈ ಅಖಿಲ ಭಾರತೀಯ ಭಾಷೆಗೆ ಹಿಂದೂಸ್ತಾನಿ ಎಂಬ ಹೆಸರಿಟ್ಟಿತು. ಅಂದಿನಿಂದ ತಾತ್ವಿಕವಾಗಿಯಾದರೂ ಹಿಂದೂಸ್ತಾನಿಯೇ ರಾಷ್ಟ್ರಭಾಷೆಯಾಗಿದೆ.” ರಾಷ್ಟ್ರಭಾಷೆಯೊಂದರ ಅಗತ್ಯ ಮತ್ತು ಸ್ವರೂಪವನ್ನು ಕುರಿತು ಹಿಂದಿಯನ್ನು ಕೇಂದ್ರೀಕರಿಸಿ ನೋಡಿರುವ ಗಾಂಧಿಯವರ ಈ ದೃಷ್ಟಿಕೋನವೇ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿಸುವ ಒಟ್ಟಾರೆ ಅಂದಿನ ರಾಜಕಾರಣವನ್ನು ಅರಿಯಲು ದಾರಿ ಮಾಡಿಕೊಡುತ್ತದೆ.

ಇದನ್ನೂ ಓದಿ: ನಾನು ಭಾರತೀಯ, ನಾನು ಹಿಂದಿ ಮಾತನಾಡುವುದಿಲ್ಲ: ಹಿಂದಿ ಹೇರಿಕೆ ವಿರುದ್ಧ ವಿಭಿನ್ನ ಪ್ರತಿರೋಧ

ಭಾಷೆಯೊಂದು ಸಂಹವನದ ಕಾರಣವಾಗಿ ಭಿನ್ನ ಭಾಷಿಕರ ನಡುವೆ ಅಗತ್ಯವಾಗುವುದಕ್ಕೂ, ಅದನ್ನೂ ಮೀರಿ ಭಾಷೆಯೊಂದನ್ನು ರಾಷ್ಟ್ರೀಯ ಅಗತ್ಯವಾಗಿ ಮಂಡಿಸುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ಹಿಂದಿಯನ್ನು ರಾಷ್ಟ್ರಭಾಷೆಯಾಗಿಸುವಾಗ ಗಾಂಧಿ ಮತ್ತು ಕಾಂಗ್ರೆಸ್ ದೃಷ್ಟಿಕೋನಕ್ಕೆ ಎರಡು ಆಯಾಮಗಳಿದ್ದವು. ಒಂದು ಇಂಗ್ಲಿಷ್‍ಗೆ ಪರ್ಯಾಯವಾಗಿ ರಾಷ್ಟ್ರೀಯ ಅಗತ್ಯಗಳಾದ ಶಿಕ್ಷಣ, ಆಡಳಿತದಲ್ಲಿ ಹಿಂದಿಯನ್ನು ಸ್ಥಾಪಿಸುವುದು. ಮತ್ತೊಂದು ಹಿಂದಿಯನ್ನು ಏಕೈಕ ರಾಷ್ಟ್ರಭಾಷೆಯಾಗಿಸುವುದು. ಉತ್ತರಪ್ರದೇಶದ ಗಾಂಧಿ ಎಂದೆಲ್ಲ ಕರೆಸಿಕೊಂಡಿದ್ದ ಪುರುಷೋತ್ತಮದಾಸ್ ಟಂಡನ್ ಹಿಂದಿಯನ್ನು ಭಾರತದ ಏಕಮಾತ್ರ ಭಾಷೆ ಎಂಬಂತೆ ಭಾಷಾ ಮೂಲಭೂತವಾದಿಯಾಗಿ ಪ್ರತಿಪಾದಿಸಿದ್ದರು.

ಹಿಂದೂಸ್ಥಾನ-ಹಿಂದಿ-ಭಾಷಾವಾರು ಪ್ರಾಂತ್ಯಗಳು:- ಭಾರತವನ್ನು ಒಂದು ರಾಷ್ಟ್ರವಾಗಿ ರೂಪಿಸಿಕೊಳ್ಳುವಾಗ ಇದ್ದ ಆತಂಕ ಭಾಷಾವಾರು ಪ್ರಾಂತ್ಯಗಳನ್ನಾಗಿ ಭಾರತವನ್ನು ವಿಭಜಿಸಿಬಿಟ್ಟರೆ ಅವು “ಭಾರತದ ರಾಷ್ಟ್ರೀಯತೆ”ಗೆ ಅಪಾಯವಾಗಬಲ್ಲವು ಎನ್ನುವುದು. ಆದರೆ ಭಾರತದಲ್ಲಿ ವಿಚಿತ್ರ ಸಮೀಕರಣವೆಂಬಂತೆ ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಯಲ್ಲೇ ಭಾಷಾವಾರು ಪ್ರಾಂತ್ಯಗಳಾಗಬೇಕೆನ್ನುವ ಬೇಡಿಕೆಯೂ ಜೊತೆ ಸೇರಿಬೆಳೆಯಿತು.

ಪೆರಿಯಾರ್‌

ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ್ದ ಆಲೂರು ವೆಂಕಟರಾಯರಾದಿಯಾಗಿ ಎಲ್ಲರು ತಮ್ಮ ಭಾಷಣ ಮತ್ತು ಬರಹಗಳಲ್ಲಿ ಅಖಿಲ ಭಾರತೀಯ ಮಟ್ಟದಲ್ಲಿ ಭಾಷಾವಾರು ಪ್ರಾಂತ್ಯಗಳಾದರೆ ಸಂಭವಿಸಬಹುದೆಂದು ಊಹಿಸಿಕೊಳ್ಳುತ್ತಿದ್ದ ವಿಭಜನೆಯ ಆತಂಕಗಳನ್ನು ದೂರ ಮಾಡುವ ಮಾತುಗಳನ್ನೇ ಪದೇ ಪದೇ ಉಚ್ಚರಿಸುತ್ತಾರೆ. ಇಂಗ್ಲಿಷ್‍ಗೆ ಪರ್ಯಾಯವಾಗಿ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಬೆಳೆಸಬೇಕೆನ್ನುವ ನಿಲುವುಗಳನ್ನು ಶಿರಸಾವಹಿಸಿ ಒಪ್ಪುತ್ತಾರೆ.

ತಮಿಳು ಜನರು ಮಾತ್ರ ಮೊದಲಿನಿಂದಲೂ ಹಿಂದೂಸ್ಥಾನ-ಹಿಂದಿ-ಭಾಷಾವಾರು ಪ್ರಾಂತ್ಯಗಳ ಈ ಬಗೆಯ ಸಮೀಕರಣವನ್ನು ವಿರೋಧಿಸುತ್ತಲೇ ಬಂದಿದ್ದರು. ಕಾಂಗ್ರೆಸ್ ಸರ್ಕಾರ 1937 ತಮಿಳುನಾಡಿನ ಶಾಲೆಗಳಲ್ಲಿ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಿದಾಗ ಹಿಂದಿ ಹೇರಿಕೆಯನ್ನು ತಮಿಳುಜನ ದೊಡ್ಡ ಚಳವಳಿಯಾಗಿ ವಿರೋಧಿಸಿದರು. ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಹೋರಾಟ ಎಲ್ಲಿಯವರೆಗೆ ಹೋಗಿತ್ತೆಂದರೆ “1939ರಲ್ಲಿ ಪೆರಿಯಾರ್ ಸ್ವತಂತ್ರವಾದ ದ್ರಾವಿಡ ಸ್ಥಾನದ ಬೇಡಿಕೆಯೊಂದಿಗೆ ದ್ರಾವಿಡನಾಡು ಕಾನ್ಪರೇನ್ಸ್’ ಸಂಘಟಿಸಿದರು. ಮುಂದಿನ ವರ್ಷ ಪಾಕಿಸ್ತಾನ ಸ್ಥಾಪನೆ ಬೇಡಿಕೆಯನ್ನಿಟ್ಟು ಮುಸ್ಲಿಮ್ ಲೀಗ್ ಲಾಹೋರ್ ನಿರ್ಣಯವನ್ನು ಮಂಡಿಸಿದ ಮಾದರಿಯಲ್ಲಿ “ದ್ರಾವಿಡ ಸ್ಥಾನ”ದ ಬೇಡಿಕೆಯನ್ನು ಉಚ್ಚರಿಸಲಾಯಿತು.

ಇದನ್ನೂ ಓದಿ: ’ಹಿಂದಿ’ ದಕ್ಷಿಣ ಭಾರತೀಯರ ಅವಕಾಶಗಳನ್ನು ಕಸಿದಿದೆ: ಎಚ್‌.ಡಿ ಕುಮಾರಸ್ವಾಮಿ

ತಮಿಳು, ತೆಲುಗು, ಕನ್ನಡ, ಮಲಯಾಳಿ ಮುಂತಾದ ಬ್ರಾಹ್ಮಣೇತರ ದ್ರಾವಿಡ ಜನರು ಜನಾಂಗೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಆರ್ಯನ್ನರಿಂದ ಭಿನ್ನವಾಗಿರುವರು. ಅವರನ್ನು ಆರ್ಯನ್ನರ ಆಡಳಿತದ ಹಿಡಿತದಿಂದ ಮುಕ್ತಗೊಳಿಸುವುದೇ ಈ ದ್ರಾವಿಡ ರಾಜ್ಯದ ಆಶಯ” ಎಂದು ಘೋಷಿಸಿಕೊಂಡಿದ್ದರು. ತಮಿಳುನಾಡಿನಲ್ಲಿ ಮಾತ್ರವೇ ಹಿಂದಿ ವಿರೋಧಿ ಚಳವಳಿ ಮೊದಲಿನಿಂದಲೂ ಇದ್ದ ಬ್ರಾಹ್ಮಣಶಾಹಿ ವಿರೋಧಿ, ಕಾಂಗ್ರೆಸ್ ವಿರೋಧಿ ಹೋರಾಟಗಳ ಜೊತೆಯಾಗಿಸಿಕೊಂಡು ಸ್ವಾಯತ್ತ ರಾಷ್ಟ್ರೀಯತೆಯ ಬೇಡಿಕೆಯಾಗಿ ಬದಲಾಗಿದ್ದು. ಆದರೆ ಪೆರಿಯಾರರ ದ್ರಾವಿಡ ರಾಷ್ಟ್ರೀಯತೆಯ ಹೋರಾಟಕ್ಕೆ ದಕ್ಷಿಣ ಭಾರತೀಯರ ಮತ್ತು ತಮಿಳರ ಬೆಂಬಲವೂ ಸಿಗದೆ ಗೌಣವಾಯಿತು. ಆದಾಗ್ಯೂ ಹಿಂದಿ ವಿರೋಧಿ ಮತ್ತು ಪ್ರಾದೇಶಿಕ ಅಸ್ಮಿತೆಯ ಪ್ರಜ್ಞೆಗಳು ಮಾತ್ರ ಬಲವಾಗಿ ತಮಿಳರಲ್ಲಿ ಇಂದಿಗೂ ಬೇರೂರಿರುವುದು ಕಾಣಬಹುದು.

ಭಾಷಾವಾರು ಪ್ರಾಂತ್ಯಗಳಾದರೆ ಭಾರತದ ಒಕ್ಕೂಟ ವ್ಯವಸ್ಥೆಗೆ ದಕ್ಕೆ ಬರಬಹುದೆಂಬ ಆತಂಕ ಸ್ವಾತಂತ್ರ್ಯ ಪಡೆದುಕೊಂಡ ನಂತರದಲ್ಲೂ ಕಾಂಗ್ರೆಸ್ ಸರ್ಕಾರಕ್ಕಿತ್ತು. ಸ್ವಾತಂತ್ರ ಹೋರಾಟದ ಜೊತೆಯಲ್ಲೇ ಬೆಳೆದುಬಂದಿದ್ದ ಭಾರತ ರಾಷ್ಟ್ರೀಯತೆಯೊಳಗೆ ಪ್ರಾದೇಶಿಕ ಉಪರಾಷ್ಟ್ರೀಯತೆಗಳೆನ್ನುವ ಸಾಮರಸ್ಯದ ಸಮೀಕರಣ ಭಾಷಾವಾರು ಪ್ರಾಂತ್ಯಗಳಲ್ಲಿ ಆಳವಾಗಿ ಬೇರೂರಿದ್ದರಿಂದ ವಿಭಜನೆಯ ಆತಂಕಗಳು ನಿಧಾನವಾಗಿ ದೂರವಾದವು. ಆದರೆ ಇಂಗ್ಲಿಷ್‍ಗೆ ಪರ್ಯಾಯವಾಗಿ ಮತ್ತು ಹಿಂದಿಯನ್ನು ಏಕೈಕ ರಾಷ್ಟ್ರಭಾಷೆಯಾಗಿಸಬೇಕೆಂಬ ರಾಜಕಾರಣಕ್ಕೆ ದಕ್ಷಿಣಭಾರತೀಯರ ಅದರಲ್ಲೂ ತಮಿಳುನಾಡಿನ ವ್ಯಾಪಕವಿರೋಧದ ಕಾರಣವಾಗಿ ಸಂವಿಧಾನ ಜಾರಿಗೊಂಡ 15 ವರ್ಷಗಳವರೆಗೂ ವಿನಾಯಿತಿ ನೀಡಿ ಇಂಗ್ಲಿಷ್‍ನ ಜೊತೆಯಲ್ಲಿ ಹಿಂದಿಯನ್ನು ಆಡಳಿತ ಭಾಷೆಯಾಗಿಸಬೇಕೆನ್ನುವುದು ನೀತಿಯಾಗಿತ್ತು.

Image Courtesy: Printrest

ಈ ಕಾರಣವಾಗಿ ಭಾರತದ ಎಲ್ಲ ಪ್ರಾಂತ್ಯಗಳಲ್ಲೂ ಹಿಂದಿ ಕಲಿಕೆಗೆ ಹಿಂಬಾಗಿಲನ್ನು ತೆರೆಯಲಾಗಿತ್ತು. ಮೊದಲಿನಿಂದಲೂ ಸ್ವಾತಂತ್ರ್ಯ ಹೋರಾಟದ ಜೊತೆಯಲ್ಲೇ ರಾಷ್ಟ್ರಭಾಷೆಯೊಂದರ ಅಗ್ಯತಗಳನ್ನು ಬೆರೆಸಿ ಹಿಂದಿಯನ್ನು ಆ ಸ್ಥಾನದಲ್ಲಿ ಮುಂಚೂಣಿಗೆ ತಂದಿದ್ದರಿಂದ ಉತ್ತರ ಭಾರತದ ಹಿಂದಿಯೇತರ ರಾಜ್ಯಗಳು ಹಿಂದಿ ಹೇರಿಕೆಯನ್ನು ಅನಾಯಾಸವಾಗಿ ಒಪ್ಪಿಕೊಂಡವು.

ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ಹಿಂದಿ ಹೇರಿಕೆ ಚರ್ಚೆ

ಇಂಗ್ಲಿಷನ್ನು ಪಾಳೆಗಾರಿಕೆಯ ಭಾಷೆ ಎಂದು ಉಗ್ರವಾಗಿ ಟೀಕಿಸುವ ಲೋಹಿಯಾರವರು ಪಾಳೆಗಾರಿಕೆಯ ಭಾಷೆ ಹಾಗೂ ಜನಭಾಷೆಗಳ ಮುಖಾಮುಖಿ ಎನ್ನುವ ತಮ್ಮ ಬರಹವೊಂದರಲ್ಲಿ “ಇಂಗ್ಲಿಷನ್ನು ತೊಲಗಿಸುವುದೆಂದರೆ ಹಿಂದಿಯನ್ನು ಆ ಸ್ಥಾನಕ್ಕೆ ತರುವುದಲ್ಲವೆಂದು ನಾನು ಸ್ಪಷ್ಟವಾಗಿ ಸೂಚಿಸಿದ್ದೇನೆ. ಇಂಗ್ಲಿಷನ್ನು ತೊಲಗಿಸುವುದೆಂದರೆ ತಮಿಳು, ತೆಲುಗು, ಬಂಗಾಳಿ, ಕನ್ನಡವೇ ಮುಂತಾದ ನಮ್ಮವೇ ಭಾಷೆಗಳನ್ನು ಅಧಿಕಾರದ ಗದ್ದುಗೆಗೆ ಏರಿಸುವುದೇ ಆಗಿದೆ.” ಎನ್ನುತ್ತಾರೆ.

ಆದರೆ ಅದೇ ಬರಹದಲ್ಲಿ ಲೋಹಿಯಾರವರು ಸಂವಿಧಾನಕ್ಕೆ ಬದ್ದರಾಗಿರಬೇಕಿದ್ದ ಜನಪ್ರತಿನಿಧಿಗಳು ಇಂಗ್ಲಿಷ್ ಮೇಲಿನ ಮೋಹದಿಂದಾಗಿ ಹಿಂದಿಯನ್ನು ರಾಷ್ಟ್ರದ ಆಡಳಿತ ಭಾಷೆಯಾಗಿ ಜಾರಿಗೆ ತರಲಿಲ್ಲ ಎಂದು ಹಿಂದಿ ಹೇರಿಕೆಯನ್ನು ಮೌಲ್ಯೀಕರಿಸುತ್ತಾರೆ. “ಸಂವಿಧಾನಕ್ಕೆ ನಿಷ್ಠರಾಗಿರುವುದಾಗಿ ತಾವು ಮಾಡಿದ ಪ್ರಮಾಣವಚನವನ್ನು ಅವರು ನಿರ್ಲಜ್ಜರಾಗಿ ಮುರಿದಿದ್ದಾರೆ. ಈ ಥರದ ವಚನಭ್ರಷ್ಟತೆ ಮುಂದೆ ನಡೆಯದಂತೆ ನೋಡಿಕೊಳ್ಳಬೇಕು. ಕಾಲಮಿತಿ ಹಾಕದಿದ್ದರೆ ಅದು ಅಸಾಧ್ಯ” ಎನ್ನುತ್ತ ಹಿಂದಿ ಅನುಷ್ಠಾನವನ್ನು ಸಾಂವಿಧಾನಿಕ ಹೊಣೆಗಾರಿಕೆ ಎನ್ನುವಂತೆ ವ್ಯಾಖ್ಯಾನ ಮಾಡುತ್ತಾರೆ.

1965ರ ನಂತರ ಪುನಃ ಹಿಂದಿಯನ್ನು ರಾಷ್ಟ್ರಭಾಷೆಯಾಗಿಸಬೇಕೆಂದು ಅಂದಿನ ಕೇಂದ್ರ ಸರ್ಕಾರ ಹೊರಟಾಗ ತೀವ್ರವಿರೋಧಗಳು ಬಂದಿದ್ದರಿಂದ ಮತ್ತೆ ಹಿಂದಿಯನ್ನು ಮಾತ್ರ ಏಕೈಕ ರಾಷ್ಟ್ರ ಭಾಷೆಯಾಗಿಸಬೇಕೆಂಬ ಬಯಕೆ ಹಿಂದಕ್ಕೆ ಸರಿಯಿತಾದರು ಹಿಂಭಾಗಿಲಿನಿಂದ ಹೇರುವ ಮತ್ತು ಕಲಿಸುವ ಯೋಜನೆಗಳು ಮಾತ್ರ ನಿರಂತರವಾಗಿಯೇ ನಡೆದಿದೆ.

ಏಕ ಧರ್ಮ-ಏಕಭಾಷೆ-ಏಕರಾಷ್ಟ್ರ ಸಮೀಕರಣ

ಸ್ವಾತಂತ್ರ್ಯ ಪೂರ್ವದಿಂದಲೂ ವೈವಿಧ್ಯತೆಯಲ್ಲಿ ಏಕತೆ ಎನ್ನುವ ಸೌಹಾರ್ದ ಮೌಲ್ಯಗಳ ಮೇಲೆ ಭಾರತದ ರಾಷ್ಟ್ರೀಯತೆಯನ್ನು ವ್ಯಾಖ್ಯಾನಿಸಿಕೊಂಡು ಬರಲಾಗಿತ್ತು. ಕೋಮುಸಂಘರ್ಷ, ಮತೀಯತೆಯ ಕಾರಣವಾಗಿ ದೇಶ ವಿಭಜನೆಗೊಂಡರು, ಧಾರ್ಮಿಕ ರಾಷ್ಟ್ರೀಯತೆಗೆ ಸಂವಿಧಾನದಲ್ಲಿ ಅವಕಾಶ ನೀಡದೆ ವೈವಿಧ್ಯತೆಯಲ್ಲಿ ಏಕತೆ ಎನ್ನುವ ಸೌಹಾರ್ಧತೆಯನ್ನು ಪ್ರತಿಪಾದಿಸಲಾಗಿತ್ತು. ಆದರೆ ಭಾರತದಂತಹ ಸಾಮಾಜಿಕ ಅಸಮಾನತೆ, ಸಾಂಸ್ಕೃತಿಕ ಭಿನ್ನತೆ ಮತ್ತು ವೈರುಧ್ಯಗಳಿರುವ ದೇಶದಲ್ಲಿ ವೈವಿಧ್ಯತೆಯಲ್ಲಿ ಏಕತೆ ಎನ್ನುವುದು ಕೆಲವು ನೆಲೆಗಳಿಗೆ ಮಾತ್ರ ಅನ್ವಯಿಸಬಹುದಾದ ಆದರ್ಶ. ಜಾತಿ ವ್ಯವಸ್ಥೆಯ ಅಸಮಾನತೆಗಳಲ್ಲಿ ವೈವಿಧ್ಯತೆ ಎನ್ನುವುದು ವೈರುಧ್ಯ, ಅದೇ ಭಾಷೆ, ಧರ್ಮಗಳ ವಿಷಯದಲ್ಲಿ ವೈವಿಧ್ಯತೆಯ ಮೂಲಕವೂ ಸಾಧಿಕೊಳ್ಳಬಹುದಾದ ಏಕತೆ.

ಮೊದಲು ಕನ್ನಡದ ಅಸ್ಮಿತೆಗೆ ಪ್ರಾಧಾನ್ಯತೆ ಕೊಡಿ ರಾಜಕಾರಣಿಗಳೇ!
PC: ಮಾ.ಕೃ. ಮಂಜು ಕನ್ನಡ ಪ್ರಪಂಚ

“ವೈವಿಧ್ಯತೆಯಲ್ಲಿ ಏಕತೆ” ಎನ್ನುವುದು ದೊಡ್ಡ ಆದರ್ಶವಾದರೂ, ಆಧುನಿಕ ರಾಷ್ಟ್ರೀಯ ಪ್ರಭುತ್ವಗಳ ಕಾಲಘಟ್ಟದಲ್ಲಿ ಹೆಚ್ಚುದಿನ ಬಾಳಿಕೆಬರಲಾರದು ಎನ್ನುವುದನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನಮ್ಮ ಪ್ರಭುತ್ವಗಳೇ ಸಾಬೀತಪಡಿಸಲು ಟೊಂಕಕಟ್ಟಿ ನಿಂತಿರುವ ಪರಂಪರೆಯೇ ಇದೆ. ಇದರಲ್ಲಿ ಕಾಂಗ್ರೆಸ್ ಬಿಜೆಪಿ ಎನ್ನುವ ವ್ಯತ್ಯಾಸವೇನಿಲ್ಲ.

ಇದನ್ನೂ ಓದಿ: ಹಿಂದಿಯ ’ಹಾರ್ಟ್ ಲ್ಯಾಂಡ್’ ಉತ್ತರ ಪ್ರದೇಶದ 7.97 ಲಕ್ಷ ವಿದ್ಯಾರ್ಥಿಗಳು ಹಿಂದಿಯಲ್ಲಿ ಫೇಲ್!

ಇದು ಯಾಕಾಗಿ? ಭಾರತದಂತಹ ಬಹುಭಾಷಿಕ, ಬಹುಧಾರ್ಮಿಕ, ಬಹುಸಂಸ್ಕೃತಿಗಳ ಭಿನ್ನತೆ ಮತ್ತು ವೈರುಧ್ಯಗಳಿರುವ ಜಾಗದಲ್ಲಿ ಒಂದು ರಾಷ್ಟ್ರವಾಗಿ ಕಂಡುಕೊಳ್ಳಲು ಬೇಕಾದ ಯಾವುದೇ ಪ್ರಬಲ ಸಮಾನ ಅಂಶಗಳಿಲ್ಲ. ಹಾಗಾಗಿಯೇ ಪ್ರಬಲವಾದ ಸಮಾನಗುಣಗಳನ್ನು, ಪ್ರಬಲ ರಾಷ್ಟ್ರೀಯತೆಯನ್ನು ಬೆಸೆಯುವ ಕಾರಣವಾಗಿ ಏಕಧರ್ಮ-ಏಕಭಾಷೆ- ಏಕರಾಷ್ಟ್ರದ ಸೂತ್ರೀಕರಣವನ್ನು ಬಲಪಂಥೀಯ ರಾಜಕಾರಣ ಮುನ್ನಲೆಗೆ ತಂದಿರುವುದು.

22 ಭಾಷೆಗಳನ್ನು ರಾಷ್ಟ್ರಭಾಷೆಗಳೆಂದು ಸಂವಿಧಾನದಲ್ಲಿ ಹೇಳಿದ್ದಾಗಿಯೂ ಬಿಜೆಪಿ ಸೆಪ್ಟಂಬರ್ 14 ನೇ ತಾರೀಖು ಹಿಂದಿ ದಿವಸ್ ಮಾತ್ರ ಆಚರಿಸಿತು. ಹಿಂದಿ ದಿವಸ್ ಕೇವಲ ಆಚರಣೆಯಷ್ಟೇ ಆಗದೆ ಹಿಂದಿಯನ್ನು ತನ್ನ ಪ್ರಬಲ ರಾಷ್ಟ್ರೀಯತೆಗೆ ಬೇಕಾದ ಪ್ರೊಪಾಗಂಡದ ಭಾಗವಾಗಿ ಬಳಸಿಕೊಳ್ಳಲು ಹೊರಟಿದೆ. ಹಿಂದಿ ದಿವಸ್ ಆಚರಣೆಯ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದ ಅಮಿತ್‍ಶಾ ಮತ್ತು ಇತರ ಬಿಜೆಪಿ ನಾಯಕರ ಹೇಳಿಕಗಳಲ್ಲಿ ಈ ಪ್ರೋಪಾಗಂಡ ಸ್ಪಷ್ಟವಾಗಿ ಕಾಣಿಸುತ್ತಿದೆ.

“ಜಾಗತಿಕ ಮಟ್ಟದಲ್ಲಿ ದೇಶದ ಹೆಗ್ಗುರುತಾಗಬಲ್ಲ ಒಂದು ಭಾಷೆಯನ್ನು ಹೊಂದಬೇಕಾದ ಅಗತ್ಯ ಹೆಚ್ಚಿದೆ. ದೇಶವನ್ನು ಬೆಸೆಯಬಲ್ಲ, ವ್ಯಾಪಕವಾಗಿ ಮಾತನಾಡಬಲ್ಲ ಒಂದು ಭಾಷೆ ಎಂದರೆ ಅದು ಹಿಂದಿ ಮಾತ್ರ” ಎಂದು ಹಿಂದಿಯನ್ನು ಜಾಗತಿಕ ಮಾನ್ಯ ದೇಶಭಾಷೆಯೆನ್ನುವಂತೆ ಮಾತನಾಡಿದ್ದರು ಅಮಿತ್ ಶಾ. ಮುಂದುವರೆದು “ಮಹಾತ್ಮ ಗಾಂಧಿ ಮತ್ತು ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಆಶಯಗಳು ಈಡೇರಿಸಬೇಕೆಂದರೆ ದೇಶದ ಜನತೆ ಮಾತೃಭಾಷೆ ಜತೆಗೆ ಹಿಂದಿಯನ್ನು ಹೆಚ್ಚಾಗಿ ಬಳಸಬೇಕು” ಎಂದು ಕರೆನೀಡಿದ್ದರು ಕೂಡ.

ಇದನ್ನೂ ಓದಿ: ನಂಗೆ ಹಿಂದಿ ಬರಲ್ಲ ಹೋಗ್ರಪ್ಪ: ಹಿಂದಿ ಹೇರಿಕೆಯ ವಿರುದ್ಧ ಬಹುಭಾಷ ನಟ ಪ್ರಕಾಶ್ ರಾಜ್ ದನಿ

ಬಿಜೆಪಿಯ ಭಾಷೆ ಸೆಲೆಕ್ಟಿವ್. ಅದು ಅಮಿತ್ ಶಾರ ಮಾತಲ್ಲಿ ಪ್ರತಿಫಲಿಸಿದೆ. ಭಾರತದ ಬಲಪಂಥೀಯ ರಾಜಕಾರಣ ತನಗೆ ಬೇಕು ಅನ್ನುವುದನ್ನು ಸಮರ್ಥಿಸಲು ತನ್ನ ಸಿದ್ಧಾಂತಗಳಿಗೆ ವಿರುದ್ಧವಿರುವವರನ್ನು ಕೂಡ ಯಾವುದೇ ನಾಚಿಕೆ ಇಲ್ಲದೆ ಎಳೆದು ತರುತ್ತದೆ. ಇದು ಮೇಲು ನೋಟಕ್ಕೆ ಅನೈತಿಕವೆನಿಸಿದರು ಬಲಪಂಥೀಯ ರಾಜಕಾರಣದ ಯಶಸ್ಸಿನ ಭಾಷೆ ರೂಪುಗೊಂಡಿರುವುದೇ ಹಾಗೆ. ಬಿಜೆಪಿಯ ತ್ರಿಪುರಾದ ಸಿಎಂ ಹಿಂದಿಪರವಾದ ಸಮರ್ಥನೆಗೆ “ಭಾರತವನ್ನು ಪ್ರೀತಿಸದವರು ಹಿಂದಿ ಭಾಷೆಯನ್ನು ವಿರೋಧಿಸುತ್ತಾರೆ” ಎಂದಿದ್ದರು. ಬಲಪಂಥೀಯ ರಾಜಕಾರಣದ ದೊಡ್ಡ ಸಮಸ್ಯೆಯೇ ಇದು. ತನ್ನನ್ನು ತನ್ನ ಸಿದ್ಧಾಂತಗಳನ್ನು ಒಪ್ಪದವರನ್ನು ದೇಶದ್ರೋಹಿಗಳೆಂದು ನಿರೂಪಿಸಲು ಸಲಿಸಾಗಿ ಹೊರಡುತ್ತದೆ. ತನ್ನದಲ್ಲದ ಯಾವುದನ್ನೂ, ಯಾವುದೇ ಸಂವಾದಕ್ಕೂ, ತರ್ಕಕ್ಕೂ ಅವಕಾಶವಿಲ್ಲದಂತೆ ಅದು ದೇಶದ್ರೋಹಿಯಾಗಿಸಿ ಬಿಡುತ್ತದೆ.

PC: [email protected]

ಬಿಜೆಪಿ ಹಿಂದಿಯನ್ನು ರಾಷ್ಟ್ರಭಾಷೆಯಾಗಿಸಬೇಕೆನ್ನುವುದು ಮತ್ತು ಅದನ್ನು ಭಾರತದ ಎಲ್ಲ ಭಾಷಾವಾರು ಪ್ರಾಂತ್ಯಗಳು ಒಪ್ಪಬೇಕೆಂದು ಒತ್ತಾಯಿಸುತ್ತಿರುವುದರ ಹಿನ್ನೆಲೆಯಲ್ಲಿ ಬಲಪಂಥೀಯ ರಾಷ್ಟ್ರೀಯತೆಗೆ ಇಲ್ಲಿನ ಬಹುಭಾಷ ಪರಿಸ್ಥಿತಿಗಳೇ ತನ್ನ ರಾಷ್ಟ್ರೀಯತೆಯ ವಾದಕ್ಕೆ ತೊಡಕಾಗಬಹುದು ಎನ್ನುವ ಆತಂಕವಿದೆ. ಇದು ಕಾಂಗ್ರೆಸ್ ಆದಿಯಾಗಿ ಎಲ್ಲ ರಾಷ್ಟ್ರೀಯ ಪಕ್ಷಗಳಲ್ಲೂ ಇರುವ ಆತಂಕ. ಆದರೆ ಭಾರತದ ಸಂದರ್ಭದಲ್ಲಿ ಬಲಪಂಥೀಯ ರಾಜಕಾರಣಕ್ಕೆ ಹಿಂದೂ ಧಾರ್ಮಿಕ ರಾಷ್ಟ್ರೀಯತೆಯನ್ನು ಪ್ರಬಲವಾಗಿ ಕಟ್ಟುವಾಗ ಅವರಿಗಿರುವ ದೊಡ್ಡ ಸವಾಲು ಭಾರತದ ಬಹುಭಾಷಾ ಪರಿಸ್ಥಿತಿ.

ಭಾರತದ ಜನಸಮುದಾಯಗಳು ಧಾರ್ಮಿಕ ನಂಬುಗೆಗಳ ಜೊತೆಗೆ ತೀವ್ರಭಾವನಾತ್ಮಕವಾಗಿ ಸ್ಪಂದಿಸುವಂತೆ; ತಮ್ಮ ಭಾಷಾ ಅಸ್ಮಿತೆಗಳ ವಿಷಯಗಳು ಬಂದಾಗಲೂ ಸ್ಪಂದಿಸುತ್ತಾರೆ. ಇಂಗ್ಲಿಷನ್ನು ವ್ಯವಹಾರದ ಮತ್ತು ಉದ್ಯೋಗದ ಭಾಷೆಯಾಗಿ ಭಾರತದ ಎಲ್ಲ ಭಾಷಾ ಸಮುದಾಯಗಳು ಕಲಿಯುತ್ತವೆ. ಆದರೆ ಹಿಂದಿಯನ್ನು ಹಾಗೇ ಕಲಿಯುವುದಕ್ಕೆ ಕಾರಣಗಳಿಲ್ಲ. ಜೊತೆಗೆ ಹಿಂದಿಯನ್ನು ತಮ್ಮ ಭಾಷಾಸ್ಥಾನಮಾನಗಳಿಗಿಂತಲು ಮೇಲಿಟ್ಟು ರಾಷ್ಟ್ರೀಯ ಭಾಷೆಯಾಗಿ ನೋಡಬೇಕು ಎನ್ನುವುದನ್ನು ಕಳೆದ 70 ವರ್ಷಗಳಿಂದಲೂ ಬಹುತೇಕ ಭಾಷಾ ಪ್ರಾಂತ್ಯಗಳು ಒಪ್ಪಿಲ್ಲ.

ಇದನ್ನೂ ಓದಿ: ‘ಹಿಂದಿ ಹೇರಿಕೆಯು ಬ್ರಾಹ್ಮಣರಿಗೆ ಕುರಾನ್ ಕೊಟ್ಟಂತೆ’: ಪತ್ರಬರೆದ IRS ಅಧಿಕಾರಿ

ಹಾಗಾಗಿಯೇ ಹಿಂದೂ ನಾವೆಲ್ಲ ಒಂದು ಎನ್ನುವ ಧಾರ್ಮಿಕ ರಾಷ್ಟ್ರೀಯತೆಯ ಸಮೀಕರಣಕ್ಕೆ ಮುಂದೆ ದೊಡ್ಡ ಸವಾಲಾಗಬಹುದಾದದ್ದು; ಭಾರತದ ಬಹು ಭಾಷಾ ರಾಷ್ಟ್ರೀಯತೆಗಳು. ಅದರಲ್ಲೂ ದಕ್ಷಿಣ ಭಾರತೀಯ ರಾಜ್ಯಗಳ ಭಾಷಿಕ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಗಳು ಬಲಪಂಥೀಯ ಧಾರ್ಮಿಕ ರಾಷ್ಟ್ರೀಯತೆಗೆ ಮುಖಾಮುಖಿಯಾಗಿ ಎಂತಹ ಸಂಘರ್ಷದ ಸ್ವರೂಪವನ್ನಾದರೂ ಪಡೆಯಬಹುದು. ಭಾರತದ ಬಹುಭಾಷಾ ವೈವಿಧ್ಯತೆ ಎನ್ನುವುದು ಧಾರ್ಮಿಕ ರಾಷ್ಟ್ರೀಯತೆಯ ತಮ್ಮ ಪ್ರತಿಪಾದನೆಗಳಿಗೆ ಅಪಾಯವಾಗಬಹುದೆನ್ನುವುದು ಬಲಪಂಥೀಯ ರಾಜಕಾರಣಕ್ಕೆ ಸ್ಪಷ್ಟವಾಗಿ ಗೊತ್ತಿದೆ. ಹಾಗಾಗಿಯೇ ಏಕ ಧಾರ್ಮಿಕ ರಾಷ್ಟ್ರೀಯತೆಯನ್ನು ಪ್ರಬಲವಾಗಿ ರೂಪಿಸಿಕೊಳ್ಳಲು ಏಕ ಭಾಷಾ ರಾಷ್ಟ್ರೀಯತೆಯನ್ನೂ ಸಹಾ ಸಮೀಕರಿಸಿಕೊಳ್ಳುವ ಆತಂಕಮಯ ಒತ್ತಡಕ್ಕೆ ಬಿದ್ದಿದೆ.

ಆದರೆ ಹಿಂದಿಯನ್ನೇ ರಾಷ್ಟ್ರ ಭಾಷೆಯಾಗಿ ಬೆಳೆಸಬೇಕೆನ್ನುವ ತನ್ನ ವಾದದ ಹಿನ್ನೆಲೆಯಲ್ಲಿ ಜನಸಂಖ್ಯಾವಾರು ಹೆಚ್ಚು ಜನ ಭಾರತೀಯರ ಮಾತೃ ಭಾಷೆ ಎನ್ನುವ ಕಾರಣಗಳ ಜೊತೆಯಲ್ಲಿ ಸಂಸ್ಕೃತ ಮೂಲವಾದ ಸಾಂಸ್ಕೃತಿಕ ಹೆಮ್ಮೆಗಳು ಇಲ್ಲದೇ ಇರಲಾರದು. ಸಂಸ್ಕೃತವನ್ನೇ ರಾಷ್ಟ್ರೀಯ ಭಾಷೆಯೆಂದು ಮಾಡಿಕೊಳ್ಳಬೇಕೆನ್ನುವ ಚರ್ಚೆಗಳು ನೂರು ವರ್ಷಗಳಿಂದಲೂ ನಡೆದಿದ್ದಾಗಿಯೂ, ಭಾರತದ ಬಲಪಂಥೀಯ ರಾಜಕಾರಣಕ್ಕೆ ಸಂಸ್ಕೃತವನ್ನು ದೇವಭಾಷೆಯಾಗಿಯೇ ಉಳಿಸಿ ಬೆಳೆಸಿಕೊಳ್ಳುವುದು ಮತ್ತು ಸಂಸ್ಕೃತ ಮೂಲವಾದ ಹಿಂದಿಯನ್ನು ರಾಷ್ಟ್ರಭಾಷೆಯಾಗಿಸಿ ಭಾರತದ ಎಲ್ಲಾ ಭಾಷಾಪ್ರಾಂತ್ಯಗಳವರು ಒಪ್ಪಿಕೊಳ್ಳುವಂತೆ ಮಾಡುವ ತುರ್ತು ಏರ್ಪಟ್ಟಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

"ಹಿಂದಿ ತೆರಿಯಾದು ಪೊಡಾ (ಹಿಂದಿ ಗೊತ್ತಿಲ್ಲ, ಹೋಗೋ)" ಟೀಶರ್ಟ್‌ ತಯಾರಿಕರಿಗೆ ಬೆದರಿಕೆ!‌

ಹಾಗಾಗಿಯೇ ಹಿಂದಿ ವಿರೋಧವನ್ನು ದೇಶದ್ರೋಹಕ್ಕೆ ಸಮೀಕರಿಸುವುದನ್ನೂ ಕೂಡ ಮಾಡುತ್ತಿದೆ. ಹಿಂದಿಯನ್ನು ಇಂಗ್ಲಿಷ್‍ಗೆ ಪರ್ಯಾಯವಾಗಿ ಸಂವಹನದ ಭಾಷೆ ಮಾಡಿಕೊಳ್ಳಬೇಕೆಂಬ ವಾದವೂ ಸಾಧ್ಯವಿಲ್ಲದ ಹಾದಿಗೆ ಬಂದಾಗಿದೆ. ಇಂಗ್ಲಿಷ್ ಈಗ ಭಾರತದ ರಾಜ್ಯಗಳ ನಡುವಿನ ಸಂಪರ್ಕ ಭಾಷೆಯಾಗಿ ಮಾತ್ರವೇ ಉಳಿದಿಲ್ಲ. ಇಂಗ್ಲಿಷ್ ಉದ್ಯೋಗ, ವ್ಯವಹಾರ ಮತ್ತು ಅಭಿವೃದ್ದಿಯ ಭಾಷೆಯಾಗಿ ಜಾಗತಿಕವಾಗಿಯೇ ಅನಿವಾರ್ಯವಾಗಿದೆ. ಭಾರತದ ದಲಿತ ಮತ್ತು ತಳಸಮುದಾಯಗಳ ರಾಜಕಾರಣ ಇಂಗ್ಲಿಷನ್ನು ತಮ್ಮ ಸಾಮಾಜಿಕ ಮತ್ತು ಆರ್ಥಿಕ ವಿಮೋಚನೆಯ ಸಣ್ಣ ಬೆಳಕಿಂಡಿಯೆನ್ನುವಂತೆಯೂ ನೋಡುತ್ತಿರುವುದು ವಾಸ್ತವ. ಹಾಗಿದ್ದಾಗ್ಯೂ ಭಾರತೀಯ ಸಂದರ್ಭದಲ್ಲಿ ಇಂಗ್ಲಿಷ್‍ಗೆ ಪರ್ಯಾಯವಾಗಿ ಹಿಂದಿಯನ್ನು ತರಬೇಕೆನ್ನುವುದು ಇಂಗ್ಲಿಷಿನ ಅನಿವಾರ್ಯತೆಯ ಜೊತೆಯಲ್ಲಿ ಮತ್ತೊಂದು ಅನಗತ್ಯ ಭಾಷಾ ಕಲಿಕೆಯನ್ನು ಹೇರಿದಂತಾಗುತ್ತದೆ.

ಹಿಂದಿ ಕಲಿಕೆ/ಹೇರಿಕೆ ಭಾರತೀಯ ಸಂದರ್ಭದಲ್ಲಿ ಅನಿವಾರ್ಯವಲ್ಲದಿದ್ದರು ಅದನ್ನು ಮೊದಲಿಂದಲೂ ಮಾಡುತ್ತಿರುವುದು ಭಾಷಾವಾರು ಪ್ರಾಂತ್ಯಗಳ ಪ್ರಾದೇಶಿಕ ಅನನ್ಯತೆಗಳನ್ನೂ ಮೀರಿ ಅಖಿಲಭಾರತೀಯ ಏಕ ಭಾಷಾ ರಾಷ್ಟ್ರೀಯತೆಯನ್ನು ಸಾಧಿಸಿಕೊಳ್ಳಲು. ಇದು ಹುಸಿ ಧಾರ್ಮಿಕ ಅಸ್ಮಿತೆಗಳ ಆತಂಕದಿಂದ ಹೊರಟಿರುವ ಏಕ ಧಾರ್ಮಿಕ ರಾಷ್ಟ್ರೀಯತೆಯ ಮುಂದುವರೆದ ಹೊಸ ಆವೃತ್ತಿಯಂತೆ ಕಾಣುತ್ತಿದೆ. ಆದರೆ ಇದು ಮತ್ತೊಂದು ತೀವ್ರ ಸ್ವರೂಪದ ಒಡಕುಗಳನ್ನು ಭಾಷಾಪ್ರಾಂತ್ಯಗಳ ನಡುವೆ ತರಲೂಬಹುದು. ಇದಕ್ಕೆ ಹಿಂದಿ ಭಾಷಾ ಹೇರಿಕೆಗೆ ಚಾರಿತ್ರಿಕವಾಗಿಯೇ ಬಂದಿರುವ ವಿರೋಧಗಳು ಸಾಕ್ಷಿ.

ಹಾಗಿದ್ದರು ಬಲಪಂಥೀಯ ರಾಷ್ಟ್ರೀಯತೆ ಹಿಂದೂ-ಹಿಂದಿ-ಹಿಂದೂಸ್ಥಾನ ಎನ್ನುವ ರಾಷ್ಟ್ರೀಯತೆಯ ಸಮೀಕರಣವನ್ನು ಪ್ರಬಲ ರಾಷ್ಟ್ರೀಯತೆಯ ಏಕರೂಪೀಕರಣಕ್ಕೆ ತರುತ್ತಿರುವುದರ ಹಿಂದೆ ಬಲಪಂಥೀಯ ರಾಜಕಾರಣವೂ ಆರ್ಥಿಕ ಮತ್ತು ಸಾಂಸ್ಕೃತಿಕ ಯಜಮಾನಿಕೆಗಳನ್ನು ಸ್ಥಾಪಿಸಿಕೊಳ್ಳುವ ಹುಚ್ಚುತನಗಳು ಮಾತ್ರವೇ ಕಾಣಿಸುತ್ತಿದೆ ಬಿಟ್ಟರೆ ಯಾವ ಆದರ್ಶಗಳು ಇಲ್ಲ. ಭಾರತದಂತಹ ವೈವಿಧ್ಯತೆಯಲ್ಲಿ ಏಕತೆಯನ್ನು ರೂಪಿಸಿಕೊಂಡು ಬಹುತ್ವವನ್ನು ಉಳಿಸಿ ಬೆಳೆಸಿಕೊಂಡು ಮುಂಚೂಣಿಗೆ ಬರಬೇಕೆನ್ನುವ ಸಾಂವಿಧಾನಿಕ ಮೌಲ್ಯಗಳ ಆದರ್ಶಮಯ ರಾಷ್ಟ್ರೀಯತೆಗೆ ಬಲಪಂಥೀಯ ರಾಜಕಾರಣವೇ ಕೇಡಾಗುತ್ತಿರುವುದು ಇಂದಿಗೆ ಕಾಣುತ್ತಿದೆ

– ಮಂಜುಬಷೀರ್

ಇಂದೂಧರ ಹೊನ್ನಾಪುರ ಅವರು ಸಂಪಾದಿಸುವ ’ಸಂವಾದ’ ಮಾಸ ಪತ್ರಿಕೆಯ ಜನವರಿ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನವಿದು. ಹಿಂದಿ ದಿವಸ್‌ಗೆ ಪ್ರತಿರೋಧ ಬರುತ್ತಿರುವ ಈ ಸಂದರ್ಭದಲ್ಲಿ ಇದನ್ನು ಮತ್ತೆ ಪ್ರಕಟಿಸಲಾಗುತ್ತಿದೆ.

ಇದನ್ನೂ ಓದಿ: ಮೆಟ್ರೋದಲ್ಲಿ ಹಿಂದಿ ತೆಗೆಯಿರಿ, ಇಲ್ಲ ಎಲ್ಲಾ ಅಧಿಕೃತ 22 ಭಾಷೆಗಳನ್ನು ಬಳಸಿ: ಟಿ.ಎಸ್.ನಾಗಾಭರಣ

LEAVE A REPLY

Please enter your comment!
Please enter your name here