‘ದೇಶದ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಪ್ರತ್ಯೇಕವಾದವನ್ನು ಉತ್ತೇಜಿಸುವ’ ಆರೋಪದ ಮೇಲೆ ಜಮ್ಮು ಕಾಶ್ಮೀರ ಆಡಳಿತವು 25 ಶೀರ್ಷಿಕೆಗಳ ಪುಸ್ತಕಗಳನ್ನು ನಿಷೇಧಿಸಿದೆ. ಭಾರತ ಮತ್ತು ವಿದೇಶಗಳ ಪ್ರಮುಖ ಬರಹಗಾರರು ಹಾಗೂ ಇತಿಹಾಸಕಾರರು ಬರೆದಿರುವ ಕೆಲ ಪುಸ್ತಕಗಳು ಇವುಗಳಲ್ಲಿ ಒಳಗೊಂಡಿವೆ ಎಂದು ವರದಿಯಾಗಿದೆ.
ಪುಸ್ತಕಗಳ ನಿಷೇಧದ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೇತೃತ್ವದ ಜಮ್ಮು ಕಾಶ್ಮೀರದ ಗೃಹ ಇಲಾಖೆಯು ಮಂಗಳವಾರ (ಆಗಸ್ಟ್ 5) ಆದೇಶ ಹೊರಡಿಸಿದೆ. ನಿಷೇಧಿತ ಪುಸ್ತಕಗಳು ಜಮ್ಮು ಕಾಶ್ಮೀರದ ಬಗ್ಗೆ ಸುಳ್ಳು ಕಥನಗಳನ್ನು ಪ್ರಚಾರ ಮಾಡುತ್ತಿವೆ. ಇದು ಹಿಂಸಾಚಾರ ಮತ್ತು ಭಯೋತ್ಪಾದನೆಯಲ್ಲಿ ಯುವಜನರ ತೊಡಗಿಸಿಕೊಳ್ಳುವುದರಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದು ಹೇಳಿದೆ.
2019ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಆರನೇ ವರ್ಷಾಚರಣೆಯಂದೇ ಪುಸ್ತಕಗಳನ್ನು ನಿಷೇಧಿಸಿದ ಆದೇಶ ಹೊರಡಿಸಲಾಗಿದೆ. 370ನೇ ವಿಧಿಯ ರದ್ದತಿಯ ಬಳಿಕ ಜಮ್ಮು ಕಾಶ್ಮೀರ ರಾಜ್ಯ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಗೊಂಡಿವೆ.
ಪುಸ್ತಕ ಪ್ರಕಟಣೆ ಉದ್ಯಮದ ಪ್ರಮುಖ ಸಂಸ್ಥೆಗಳಾದ ಪೆಂಗ್ವಿನ್, ಬ್ಲೂಮ್ಸ್‌ಬರಿ, ಹಾರ್ಪರ್‌ಕಾಲಿನ್ಸ್, ಪ್ಯಾನ್ ಮ್ಯಾಕ್‌ಮಿಲನ್ ಇಂಡಿಯಾ, ರೂಟ್‌ಲೆಡ್ಜ್ ಮತ್ತು ವರ್ಸೊ ಬುಕ್ಸ್‌ನ ಪುಸ್ತಕಗಳು ನಿಷೇಧಿತ ಪಟ್ಟಿಯಲ್ಲಿ ಸೇರಿವೆ. ಈ ಸಂಸ್ಥೆಗಳು ಇನ್ನು ಮುಂದೆ ನಿಷೇಧಿತ ಪುಸ್ತಕಗಳನ್ನು ಮರುಮುದ್ರಣ ಮತ್ತು ವಿತರಣೆ ಮಾಡಬಾರದು ಎಂದು ಗೃಹ ಇಲಾಖೆಯ ಆದೇಶ ಹೇಳಿದೆ.
ಭಾರತೀಯ ಸಾಂವಿಧಾನಿಕ ತಜ್ಞ ಮತ್ತು ಬುದ್ಧಿಜೀವಿ ಎ.ಜಿ. ನೂರಾನಿ ಅವರ ವ್ಯಾಪಕವಾಗಿ ಮೆಚ್ಚುಗೆ ಪಡೆದ ‘ದಿ ಕಾಶ್ಮೀರ್ ಡಿಸ್ಪ್ಯೂಟ್’, ಬ್ರಿಟಿಷ್ ಲೇಖಕಿ ಮತ್ತು ಇತಿಹಾಸಕಾರ್ತಿ ವಿಕ್ಟೋರಿಯಾ ಸ್ಕೋಫೀಲ್ಡ್ ಅವರ ‘ಕಾಶ್ಮೀರ್ ಇನ್ ಕಾನ್ಫ್ಲಿಕ್ಟ್ – ಇಂಡಿಯಾ, ಪಾಕಿಸ್ತಾನ್ ಅಂಡ್ ದಿ ಅನ್ ಎಂಡಿಂಗ್ ವಾರ್’, ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ ಅವರ ‘ಆಜಾದಿ’ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಪ್ರಾಧ್ಯಾಪಕಿ ಸುಮಂತ್ರ ಬೋಸ್ ಅವರ ‘ಕಾಂಟೆಸ್ಟೆಡ್ ಲ್ಯಾಂಡ್ಸ್’ ಪುಸ್ತಕಗಳು ನಿಷೇಧಿತ ಪಟ್ಟಿಯಲ್ಲಿ ಸೇರಿವೆ.
ಗೃಹ ಇಲಾಖೆಯ ಆದೇಶದ ಪ್ರಕಾರ, ಈ ಪುಸ್ತಕಗಳನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ಸೆಕ್ಷನ್ 98 ರ ಪ್ರಕಾರ ‘ಜಪ್ತಿ’ ಎಂದು ಘೋಷಿಸಬೇಕಾಗಿದೆ. ಬಿಎನ್‌ಎಸ್ಎಸ್‌ನ ಸೆಕ್ಷನ್ 98 ಸರ್ಕಾರಕ್ಕೆ ಪುಸ್ತಕಗಳು ಅಥವಾ ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲು ಮತ್ತು ಅಂತಹ ದಾಖಲೆಗಳಿಗಾಗಿ ಶೋಧ ವಾರಂಟ್‌ಗಳನ್ನು ಹೊರಡಿಸಲು ಅಧಿಕಾರ ನೀಡುತ್ತದೆ.
ಈ ಪುಸ್ತಕಗಳು ಜಮ್ಮು ಮತ್ತು ಕಾಶ್ಮೀರದ ‘ಐತಿಹಾಸಿಕ ಅಥವಾ ರಾಜಕೀಯ ವ್ಯಾಖ್ಯಾನದ ವೇಷದಲ್ಲಿವೆ’ ಆದರೆ, ಇವುಗಳು ‘ಯುವಜನರನ್ನು ದಾರಿ ತಪ್ಪಿಸುವಲ್ಲಿ, ಭಯೋತ್ಪಾದನೆಯನ್ನು ವೈಭವೀಕರಿಸುವಲ್ಲಿ ಮತ್ತು ಭಾರತದ ರಾಜ್ಯದ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ’ ಎಂದು ಗೃಹ ಇಲಾಖೆಯ ಆದೇಶ ಹೇಳಿದೆ.
ಈ ಪುಸ್ತಕಗಳು ಕೊರತೆಗಳು, ಸಂತ್ರಸ್ತ ಭಾವನೆ ಮತ್ತು ಭಯೋತ್ಪಾದಯನ್ನು ಶೌರ್ಯದಂತೆ ಉತ್ತೇಜಿಸುವ ಮೂಲಕ ಯುವಕರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಅಲ್ಲದೆ, ಐತಿಹಾಸಿಕ ವಿಷಯಗಳನ್ನು ವಿರೂಪಗೊಳಿಸುತ್ತವೆ, ಭಯೋತ್ಪಾದಕರನ್ನು ವೈಭವೀಕರಿಸುತ್ತವೆ, ಭದ್ರತಾ ಪಡೆಗಳನ್ನು ದೂಷಿಸುತ್ತವೆ. ಧಾರ್ಮಿಕ ಮೂಲಭೂತೀಕರಣ ಮಾಡುತ್ತವೆ, ಪರಕೀಯತೆಯ ಪ್ರಚಾರ ಮಾಡುತ್ತವೆ ಈ ಮೂಲಕ ಜಮ್ಮು ಕಾಶ್ಮೀರದಲ್ಲಿ ಯುವಜನರು ಹಿಂಸೆ ಮತ್ತು ಭಯೋತ್ಪಾದನೆಯ ತೊಡಗಿಸಿಕೊಳ್ಳಲು ಕೊಡುಗು ನೀಡುತ್ತವೆ ಎಂದು ಲೆಫ್ಟಿನೆಂಟ್ ಗವರ್ನರ್ ಹೊರಡಿಸಿದ ಆದೇಶದಲ್ಲಿ ಆರೋಪಿಸಲಾಗಿದೆ.
ಮುಂದುವರಿದು, ಈ ಪುಸ್ತಕಗಳು ‘ಪ್ರತ್ಯೇಕತಾವಾದವನ್ನು ಪ್ರಚೋದಿಸುತ್ತವೆ ಮತ್ತು ಭಾರತದ ಸಾರ್ವಭೌಮತ್ವ, ಸಮಗ್ರತೆಗೆ ಅಪಾಯವನ್ನುಂಟುಮಾಡುತ್ತವೆ’ ಎಂದು ಕಂಡುಬಂದಿದೆ. ಹಾಗಾಗಿ, ಇವುಗಳ ವಿರುದ್ದ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023ರ ಸೆಕ್ಷನ್ 152, 196 ಮತ್ತು 197 ಅಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶ ಹೇಳಿದೆ.
ಬಿಎನ್‌ಎಸ್‌ನ ಸೆಕ್ಷನ್ 152 ‘ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ’ ಅಪರಾಧಗಳನ್ನು ಒಳಗೊಂಡಿದೆ; ಬಿಎನ್‌ಎಸ್‌ನ ಸೆಕ್ಷನ್ 196 ಧರ್ಮ, ಜಾತಿ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದಕ್ಕೆ ಸಂಬಂಧಿಸಿದ ಅಪರಾಧಗಳನ್ನು ಒಳಗೊಂಡಿದೆ ಮತ್ತು ಬಿಎನ್‌ಎಸ್‌ನ ಸೆಕ್ಷನ್ 197 ‘ರಾಷ್ಟ್ರೀಯ ಏಕೀಕರಣಕ್ಕೆ ವಿರುದ್ದವಾದ ಆರೋಪಗಳು ಮತ್ತು ಪ್ರತಿಪಾದನೆಯ’ ಅಪರಾಧಗಳನ್ನು ಒಳಗೊಂಡಿದೆ.
ಆದ್ದರಿಂದ, ‘ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ 98ರ ಮೂಲಕ ನೀಡಲಾದ ಅಧಿಕಾರವನ್ನು ಚಲಾಯಿಸಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು 25 ಪುಸ್ತಕಗಳ ಪ್ರಕಟಣೆಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಈ ಮೂಲಕ ಘೋಷಿಸುತ್ತದೆ’ ಎಂದು ಗೃಹ ಇಲಾಖೆಯ ಆದೇಶವು ಹೇಳಿದೆ.
ನಿಷೇಧಿತ ಪಟ್ಟಿಯಲ್ಲಿರುವ ಇತರ ಪ್ರಮುಖ ಪುಸ್ತಕಗಳಲ್ಲಿ ಆಸ್ಟ್ರೇಲಿಯನ್ ಅಕಾಡೆಮಿಕ್ ಕ್ರಿಸ್ಟೋಫರ್ ಸ್ನೆಡೆನ್ ಅವರ ‘ಇಂಡಿಪೆಂಡೆಂಟ್ ಕಶ್ಮೀರ್’, ಪತ್ರಕರ್ತೆ ಹಾಗೂ ಸಂಪಾದಕಿ ಅನುರಾಧಾ ಭಾಸಿನ್ ಅವರ ‘ಎ ಡಿಸ್ಮ್ಯಾಂಟಲ್ಡ್ ಸ್ಟೇಟ್- ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ್ ಆಫ್ಟರ್ ಆರ್ಟಿಕಲ್ 370’, ತಾರಿಕ್ ಅಲಿ, ಹಿಲಾಲ್ ಭಟ್, ಅಂಗನಾ ಪಿ. ಚಟರ್ಜಿ, ಪಂಕಜ್ ಮಿಶ್ರಾ ಮತ್ತು ಅರುಂಧತಿ ರಾಯ್ ಅವರ ‘ದಿ ಕೇಸ್ ಆಫ್ ಫ್ರೀಡಂ’, ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಮೊಹಮ್ಮದ್ ಯೂಸುಫ್ ಸರಾಫ್ ಅವರ ‘ಕಶ್ಮೀರೀಸ್ ಫೈಟ್ ಫಾರ್ ಫ್ರೀಡಂ‘, ಹ್ಯಾಲಿ ಡುಸ್ಚಿನ್ಸ್ಕಿ, ಮೋನಾ ಭಟ್ ಅಥೆರ್ ಜಿಯಾ ಮತ್ತು ಸಿಂಥಿಯಾ ಮಹಮೂದ್ ಅವರ ‘ರೆಸಿಸ್ಟಿಂಗ್ ಆಕ್ಯುಪೇಷನ್ ಇನ್ ಕಾಶ್ಮೀರ್’, ಪಾಕಿಸ್ತಾನಿ ಇಸ್ಲಾಮಿಕ್ ವಿದ್ವಾಂಸ ಮತ್ತು ಜಮಾತ್-ಎ-ಇಸ್ಲಾಮಿಯ ಸಂಸ್ಥಾಪಕ ಅಬುಲ್ ಅಲಾ ಅಲ್-ಮೌದುದಿ ಅವರ ‘ಅಲ್ ಜಿಹಾದುಲ್ ಫಿಲ್ ಇಸ್ಲಾಂ’, ಎಸ್ಸಾರ್ ಬತೂಲ್ ಅವರ ‘ಡು ಯು ರಿಮೆಂಬರ್ ಕೌನ್ ಪೋಸ್ಪೋರಾ?’, ಸುಗತ ಬೋಸ್ ಮತ್ತು ಆಯೇಷಾ ಜಲಾಲ್ ಅವರು ಸಂಪಾದಿಸಿರುವ ‘ಕಶ್ಮೀರ್ ಅಂಡ್ ದ ಫ್ಯೂಚರ್ ಆಫ್ ಸೌತ್ ಏಷ್ಯಾ’.
ಗೃಹ ಇಲಾಖೆಯ ಪುಸ್ತಕಗಳನ್ನು ನಿಷೇಧಿಸಿರುವ ಕುರಿತು ಪ್ರತಿಕ್ರಿಯಿಸಿರುವ ಲೇಖಕಿ ಅನುರಾಧ ಭಾಸಿನ್, ನಿಷೇಧಿತ ಪುಸ್ತಕಗಳು ಭಯೋತ್ಪಾದನೆಯನ್ನು ವೈಭವೀಕರಿಸುತ್ತವೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ.
ನಿಷೇಧಿತ ಪುಸ್ತಕಗಳ ಪಟ್ಟಿಯನ್ನು ಉಲ್ಲೇಖಿಸಿದ ಅವರು, “ಆ ಎಲ್ಲಾ ಪುಸ್ತಕಗಳು ಸಂಶೋಧನಾತ್ಮಕ ಕೃತಿಗಳಾಗಿವೆ. ಅವುಗಳು ಆಡಳಿತ ಹೇಳಿದಂತೆ ಭಯೋತ್ಪಾದನೆಯನ್ನು ವೈಭವೀಕರಿಸುವುದಿಲ್ಲ” ಎಂದಿದ್ದಾರೆ.
I've read most of these books & written one. They're well researched & not one glorifies terrorism which this govt claims to have ended. Scared of words challenging your lies!
J&K bans 25 books citing ‘false narrative’ and ‘glorification of terrorism’ https://t.co/S9i3Y6DJdQ
— Anuradha Bhasin (@AnuradhaBhasin_) August 6, 2025
ನಿಷೇಧಿತ ಪಟ್ಟಿಯಲ್ಲಿ, ಸೀಮಾ ಕಾಜಿಯವರ ಬಿಟ್ವೀನ್ ಡೆಮಾಕ್ರಸಿ ಅಂಡ್ ನೇಷನ್ – ‘ಜೆಂಡರ್ ಅಂಡ್ ಮಿಲಿಟರೈಸೇಶನ್ ಇನ್ ಕಾಶ್ಮೀರ್’, ಹಫ್ಸಾ ಕಾಂಜ್ವಾಲ್ ಅವರ ‘ಕಾಲೋನೈಸಿಂಗ್ ಕಾಶ್ಮೀರ್ – ಸ್ಟೇಟ್-ಬಿಲ್ಡಿಂಗ್ ಅಂಡರ್ ಇಂಡಿಯನ್ ಆಕ್ಯುಪೇಶನ್’ ಮತ್ತು ಡೇವಿಡ್ ದೇವದಾಸ್ ಅವರ ಇನ್ ಸರ್ಚ್ ಆಫ್ ಎ ಫ್ಯೂಚರ್ ದಿ ಸ್ಟೋರಿ ಆಫ್ ಕಶ್ಮೀರೀಸ್’, ಪಿಯೋಟರ್ ಬಾಲ್ಸೆರೋವಿಚ್ ಮತ್ತು ಅಗ್ನಿಸ್ಕಾ ಕುಸ್ಜೆವ್ಸ್ಕಾ ಅವರ ‘ಹ್ಯೂಮನ್ ರೈಟ್ಸ್ ವಯಲೇಷನ್ಸ್ ಇನ್ ಕಾಶ್ಮೀರ್’, ಅಬ್ದುಲ್ ಜಬ್ಬಾರ್ ಗೋಖಾಮಿ ಅವರ ‘ಕಾಶ್ಮೀರ್: ಪಾಲಿಟಿಕ್ಸ್ ಅಂಡ್ ಪ್ಲೆಬಿಸೈಟ್’, ಇಮಾಮ್ ಹಸನ್ ಅಲ್-ಬನಾ ಶಹೀದ್ ಅವರ ಮೌಲಾನಾ ಮೊಹಮ್ಮದ್ ಎನಾಯತುಲ್ಲಾ ಸುಭಾನಿ ಸಂಪಾದಿಸಿರುವ ‘ಮುಜಾಹಿದ್ ಕಿ ಅಝಾನ್’, ಮರೂಫ್ ರಝಾ ಅವರ ‘ಕನ್ಫ್ರಂಟಿಂಗ್ ಟೆರರಿಸಂ’, ರಾಧಿಕಾ ಗುಪ್ತಾ ಅವರ ‘ಫ್ರೀಡಮ್ ಇನ್ ಕ್ಯಾಪ್ಟಿವಿಟಿ – ನೆಗೋಷಿಯೇಷನ್ಸ್ ಆಫ್ ಬಿಲೋಂಗಿಂಗ್ ಅಲಾಂಗ್ ಕಾಶ್ಮೀರಿ ಫ್ರಾಂಟಿಯರ್’, ಶಂಶಾದ್ ಶಾನ್ ಅವರ ‘ಯುಎಸ್ಎ ಅಂಡ್ ಕಾಶ್ಮೀರ್’, ಪಿಯೋಟರ್ ಬಾಲ್ಸೆರೋವಿಚ್ ಮತ್ತು ಅಗ್ನಿಸ್ಕಾ ಕುಸ್ಜೆವ್ಸ್ಕಾ ಅವರ ‘ಲಾ & ಕಾನ್ಫ್ಲಿಕ್ಟ್ – ರೆಸಲ್ಯೂಷನ್ ಇನ್ ಕಾಶ್ಮೀರ್’ ಅಫಾಕ್ ಅವರ ‘ತಾರಿಖ್-ಇ-ಸಿಯಾಸತ್ ಕಾಶ್ಮೀರ್’ ಸೇರಿವೆ.
‘ಓರ್ವ ಮನುಷ್ಯ ಮತ್ತೊಬ್ಬರನ್ನು ಬಂಡಿಯಲ್ಲಿ ಎಳೆಯುವ ಪದ್ಧತಿ ಅಮಾನವೀಯ’: ಸುಪ್ರೀಂ ಕೋರ್ಟ್


