ಶುಕ್ರವಾರ (ನವೆಂಬರ್ 14) ರಾತ್ರಿ ಜಮ್ಮು ಮತ್ತು ಕಾಶ್ಮೀರದ ನೌಗಮ್ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಆಕಸ್ಮಿಕ ಸ್ಫೋಟದಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ವೈಟ್ ಕಾಲರ್ ಭಯೋತ್ಪಾದನೆಗೆ ಸಂಬಂಧಿಸಿದಂತೆ ಫರಿದಾಬಾದ್‌ನಲ್ಲಿ ಇತ್ತೀಚೆಗೆ ವಶಪಡಿಸಿಕೊಂಡ ಸ್ಫೋಟಕಗಳ ಸಂಗ್ರಹದಿಂದ ಅಧಿಕಾರಿಗಳು ಮಾದರಿಗಳನ್ನು ಹೊರತೆಗೆಯುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೋನಿಯಂ ನೈಟ್ರೇಟ್ ಸೇರಿದಂತೆ 360 ಕೆಜಿ ಸ್ಫೋಟಕಗಳನ್ನು ಫರಿದಾಬಾದ್‌ನ ಬಂಧಿತ ಆರೋಪಿ ಡಾ. ಮುಜಮ್ಮಿಲ್ ಗನೈ ಅವರ ಬಾಡಿಗೆ ಮನೆಯಿಂದ ವಶಪಡಿಸಿಕೊಳ್ಳಲಾಗಿತ್ತು ಮತ್ತು ಅದನ್ನು ಪೊಲೀಸ್ ಠಾಣೆಯಲ್ಲಿ ಸಂಗ್ರಹಿಸಲಾಗಿತ್ತು.
ವಿಧಿವಿಜ್ಞಾನ ಪ್ರಯೋಗಾಲಯ ತಂಡ, ಸ್ಥಳೀಯ ಪೊಲೀಸ್ ಸಿಬ್ಬಂದಿ ಮತ್ತು ಕಂದಾಯ ಅಧಿಕಾರಿಗಳನ್ನು ಒಳಗೊಂಡ ನಿಯಮಿತ ತಪಾಸಣೆ ಮತ್ತು ಮಾದರಿ ಸಂಗ್ರಹಣೆಯ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಗಳು ಹೇಳಿವೆ.
ಸ್ಫೋಟದಿಂದಾಗಿ ಪೊಲೀಸ್ ಠಾಣಾ ಕಟ್ಟಡಕ್ಕೆ ವ್ಯಾಪಕ ಹಾನಿಯಾಗಿದ್ದು, ಹಲವಾರು ವಾಹನಗಳು ಬೆಂಕಿಗಾಹುತಿಯಾಗಿವೆ. ಹತ್ತಿರದ ಮನೆಗಳ ಕಿಟಕಿ ಗಾಜುಗಳು ಸಹ ಪುಡಿಪುಡಿಯಾಗಿದ್ದು, ಹಲವಾರು ಕಿಲೋಮೀಟರ್‌ಗಳ ದೂರದಲ್ಲಿಯೂ ಇದರ ಪರಿಣಾಮ ಕಂಡುಬಂದಿದೆ.
“ಇದು ಆಕಸ್ಮಿಕ ಸ್ಫೋಟವೋ ಅಥವಾ ವಿಧ್ವಂಸಕ ಕೃತ್ಯವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ಆರಂಭಿಸಲಾಗಿದೆ” ಎಂದು ಪೊಲೀಸ್ ಮೂಲಗಳು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಘಟನೆಯಲ್ಲಿ ಸಾವನ್ನಪ್ಪಿದವರಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಮೂವರು ಸಿಬ್ಬಂದಿ, ನಯಬ್ ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಇಬ್ಬರು ಅಧಿಕಾರಿಗಳು, ಇಬ್ಬರು ಪೊಲೀಸ್ ಛಾಯಾಗ್ರಾಹಕರು, ರಾಜ್ಯ ತನಿಖಾ ಸಂಸ್ಥೆಯ ಒಬ್ಬ ಸದಸ್ಯ ಮತ್ತು ಒಬ್ಬ ದರ್ಜಿ ಸೇರಿದ್ದಾರೆ. ಮೃತದೇಹಗಳನ್ನು ಶ್ರೀನಗರದ ಪೊಲೀಸ್ ನಿಯಂತ್ರಣ ಕೊಠಡಿಗೆ ಸಾಗಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡ ಕನಿಷ್ಠ 24 ಪೊಲೀಸ್ ಸಿಬ್ಬಂದಿ ಮತ್ತು ಮೂವರು ನಾಗರಿಕರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆ: ಕೊಲೆ ಆರೋಪಿ ಅನಂತ್ ಸಿಂಗ್ ಗೆ ಮೊಕಾಮಾದಲ್ಲಿ ಭರ್ಜರಿ ಗೆಲುವು


