ವಿವಾದಾತ್ಮಕ ವಕ್ಫ್ ಕಾಯ್ದೆಯ ಕುರಿತು ಸಭೆ ನಡೆಸಲು ಧಾರ್ಮಿಕ ಸಂಘಟನೆಗಳಿಗೆ ಜಮ್ಮು ಕಾಶ್ಮೀರ ಅಧಿಕಾರಿಗಳು ಅವಕಾಶ ನೀಡಲಿಲ್ಲ ಎಂದು ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷರಾದ ಮಿರ್ವೈಜ್ ಉಮರ್ ಫಾರೂಕ್ ಅವರ ಕಚೇರಿ ಬುಧವಾರ ತಿಳಿಸಿದೆ. ಹಲವಾರು ಧಾರ್ಮಿಕ ಸಂಘಟನೆಗಳ ಒಕ್ಕೂಟವಾದ ಮುತಾಹಿದಾ ಮಜ್ಲಿಸ್-ಎ-ಉಲೇಮಾ (ಎಂಎಂಯು) ಈ ಸಭೆ ನಡೆಸಿ ವಕ್ಫ್ ಕಾಯ್ದೆಯ ಬಗ್ಗೆ ಚರ್ಚಿಸಲು ತೀರ್ಮಾನಿಸಿದ್ದರು ಎಂದು ವರದಿ ಹೇಳಿದೆ.
ಮಿರ್ವೈಜ್ ಅವರು ಜಮ್ಮು ಕಾಶ್ಮೀರದ ಪ್ರಮುಖ ಧಾರ್ಮಿಕ ಮುಖಂಡ ಕೂಡಾ ಆಗಿದ್ದು, ಶ್ರೀನಗರದ ನೈಜೀನ್ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಎಂಎಂಯು ಸಭೆ ಸೇರಲು ನಿರ್ಧರಿಸಲಾಗಿತ್ತು ಎಂದು ವರದಿಯಾಗಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಮಿರ್ವೈಜ್ ಅವರ ಕಚೇರಿ, “ವಕ್ಫ್ ಮಸೂದೆಗೆ ಸಂಬಂಧಿಸಿದಂತೆ ಮಿರ್ವೈಜ್ ಅವರ ನಿವಾಸದಲ್ಲಿ ಮುತಾಹಿದಾ ಮಜ್ಲಿಸ್-ಎ-ಉಲೇಮಾ (MMU) ನಡೆಸುವ ಮಹತ್ವದ ಸಭೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಅವರ ಕಚೇರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ” ಎಂದು ಹೇಳಿದೆ.
Mutahida Majlis Ulema (MMU) important meet regarding the recent Wakf Amendment Act was not allowed to take place at my residence by authorities. Religious representatives of J&K, including from Ladakh, Kargil and Jammu had reached the valley to attend this meet today. It is… pic.twitter.com/kPKkGmof5L
— Mirwaiz Umar Farooq (@MirwaizKashmir) April 9, 2025
ಮಿರ್ವೈಜ್ ನಿವಾಸಕ್ಕೆ ಹೋಗುವ ಎಲ್ಲಾ ರಸ್ತೆಗಳು ಮತ್ತು ಒಳರಸ್ತೆಗಳನ್ನು “ಸೀಲ್ ಮಾಡಲಾಗಿದೆ” ಎಂದು ಅದು ಹೇಳಿದೆ. “ಇತ್ತೀಚೆಗೆ ಅಂಗೀಕರಿಸಲಾದ ವಕ್ಫ್ ಮಸೂದೆಗೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ಗಂಭೀರ ಆತಂಕಗಳನ್ನು ಚರ್ಚಿಸುವ ಉದ್ದೇಶದಿಂದ ಲಡಾಖ್, ಕಾರ್ಗಿಲ್ ಮತ್ತು ಜಮ್ಮು ಪ್ರದೇಶ ಸೇರಿದಂತೆ ಜಮ್ಮು ಕಾಶ್ಮೀರದ ಎಲ್ಲಾ ಜಿಲ್ಲೆಗಳ ಧಾರ್ಮಿಕ ಪ್ರತಿನಿಧಿಗಳು ಈ ಮಹತ್ವದ ಸಭೆಯಲ್ಲಿ ಭಾಗವಹಿಸಲು ತಲುಪಿದ್ದರು” ಎಂದು ಅದು ಹೇಳಿದೆ.
ಮತ್ತೊಂದು ಎಕ್ಸ್ ಪೋಸ್ಟ್‌ನಲ್ಲಿ, ಕಣಿವೆಯಲ್ಲಿರುವ ಮುಸ್ಲಿಂ ವಿದ್ವಾಂಸರಿಗೆ ಇಂತಹ ಗಂಭೀರ ವಿಷಯದ ಬಗ್ಗೆ ಚರ್ಚಿಸುವ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಮಿರ್ವೈಜ್ ಹೇಳಿದ್ದಾರೆ.
“ಈ ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿ ಮುಸ್ಲಿಂ ವಿದ್ವಾಂಸರು ಮತ್ತು ಧಾರ್ಮಿಕ ಸಂಸ್ಥೆಗಳು ಈ ಗಂಭೀರ ವಿಷಯದ ಬಗ್ಗೆ ಚರ್ಚಿಸಲು ಮತ್ತು ಶಾಂತಿಯುತವಾಗಿ ಪ್ರತಿಕ್ರಿಯಿಸುವ ಚರ್ಚೆಯನ್ನು ಸಹ ನಿಷೇಧಿಸಲಾಗಿದೆ ಎಂಬುದು ವಿಚಿತ್ರವಾಗಿದೆ. ಪ್ರತಿಯೊಂದು ರಾಜಕೀಯ ಪಕ್ಷವು ಭಾರತೀಯ ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಬಹುದಾಗಿದೆ. ಇಂತಹದ್ದೆ ಹಕ್ಕನ್ನು ಜಮ್ಮು ಕಾಶ್ಮೀರದ ಮುಸ್ಲಿಂ ರಾಜಕೀಯ ಮತ್ತು ಧಾರ್ಮಿಕ ಪ್ರತಿನಿಧಿಗಳಿಗೂ ವಿಸ್ತರಿಸಬೇಕು” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
“ಎಲ್ಲಾ ಸದಸ್ಯರೊಂದಿಗೆ ಸಮಾಲೋಚಿಸಿ ಸಿದ್ಧಪಡಿಸಲಾದ ಈ ವಿಷಯದ ಕುರಿತು ಜಂಟಿ ನಿರ್ಣಯವನ್ನು ಮಸೀದಿಗಳಲ್ಲಿ ಮತ್ತು ಎಲ್ಲಾ ಧಾರ್ಮಿಕ ಸಭೆಗಳಲ್ಲಿ ಬರುವ ಶುಕ್ರವಾರ ಓದಲಾಗುವುದು ಎಂದು MMU ನಿರ್ಧರಿಸಿದೆ. MMU ತನ್ನ ಸಂಪೂರ್ಣ ಬೆಂಬಲವನ್ನು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ಗೆ ನೀಡುತ್ತದೆ. ಹೊಸ ಕಾನೂನಿನಿಂದ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತವೆಂದು ಭಾವಿಸುವ ಯಾವುದೇ ಕ್ರಮಕೈಗೊಳ್ಳುವುದಿದ್ದರೆ ಎಂಎಂಯು ಅವರ ಪರವಾಗಿ ನಿಲ್ಲುತ್ತದೆ” ಎಂದು ಅವರು ಹೇಳಿದ್ದಾರೆ.
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (AIMPLB), ಇತರ ಮುಸ್ಲಿಂ ಸಂಘಟನೆಗಳು ಮತ್ತು ರಾಜಕಾರಣಿಗಳು ಈಗಾಗಲೆ ವಕ್ಫ್ ಕಾಯ್ದೆಯ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಏಪ್ರಿಲ್ 15 ರಂದು ಸುಪ್ರಿಂಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ನಡೆಸಲಿದೆ. ಜಮ್ಮು ಕಾಶ್ಮೀರ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ಇದರ ಬದಲಿಗೆ ಮಾನಸಿಕ ಆಸ್ಪತ್ರೆ ಸೇರುವುದು ಉತ್ತಮ..’: ಬಿಗ್‌ಬಾಸ್ ಆಫರ್ ತಿರಸ್ಕರಿಸಿದ ಕುನಾಲ್ ಕಮ್ರಾ
‘ಇದರ ಬದಲಿಗೆ ಮಾನಸಿಕ ಆಸ್ಪತ್ರೆ ಸೇರುವುದು ಉತ್ತಮ..’: ಬಿಗ್‌ಬಾಸ್ ಆಫರ್ ತಿರಸ್ಕರಿಸಿದ ಕುನಾಲ್ ಕಮ್ರಾ

