ಜಮ್ಮು ಕಾಶ್ಮೀರ ಚುನಾವಣೆಯ ಎರಡನೇ ಹಂತದ ಮತದಾನ ಬುಧವಾರ ಪ್ರಾರಂಭವಾಗಿದ್ದು, ಮೊದಲ ನಾಲ್ಕು ಗಂಟೆಗಳಲ್ಲಿ ಸರಾಸರಿ 24.10% ದಷ್ಟು ಮತದಾನವಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ವಿಧಾನಸಭೆ ಚುನಾವಣೆಯ ಎರಡನೇ ಹಂತದಲ್ಲಿ 25 ಲಕ್ಷ ಮತದಾರರು ಮತದಾನ ಮಾಡಲಿದ್ದು, ರಾಜ್ಯದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ 26 ಕ್ಷೇತ್ರಗಳ 239 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬಿಗಿ ಭದ್ರತೆಯ ನಡುವೆ 26 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಧಾನಸಭಾ ಕ್ಷೇತ್ರಗಳು ಕಾಶ್ಮೀರ ಕಣಿವೆಯ ಮೂರು ಮತ್ತು ಜಮ್ಮು ವಿಭಾಗದಲ್ಲಿ ಆರು ಜಿಲ್ಲೆಗಳಿಗೆ ಸೇರಿವೆ ಎಂದು ಅವರು ಹೇಳಿದ್ದಾರೆ.
ಭಾರತದ ಚುನಾವಣಾ ಆಯೋಗವು ಎರಡನೆ ಹಂತದ ಚುನಾವಣೆ ವಿಭಾಗಗಳಲ್ಲಿ 3,502 ಮತಗಟ್ಟೆಗಳನ್ನು ಸ್ಥಾಪಿಸಿದೆ. 1,056 ನಗರ ಮತಗಟ್ಟೆಗಳು ಮತ್ತು 2,446 ಗ್ರಾಮೀಣ ಮತಗಟ್ಟೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್, ಸಶಸ್ತ್ರ ಪೊಲೀಸರು ಮತ್ತು ಕೇಂದ್ರ ಸಶಸ್ತ್ರ ಅರೆಸೇನಾ ಪಡೆಗಳನ್ನು ಒಳಗೊಂಡ ಭದ್ರತಾ ಸಿಬ್ಬಂದಿಯನ್ನು ಮತಗಟ್ಟೆಗಳ ಸುತ್ತಲೂ ಬಿಗಿಯಾಗಿ ನಿಯೋಜಿಸಲಾಗಿದೆ.
ಎರಡನೇ ಹಂತದ ಮತದಾನ ಭಯಮುಕ್ತ ವಾತಾವರಣದಲ್ಲಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿ ಮತಗಟ್ಟೆಯ ಸುತ್ತಲೂ ಬಹು ಹಂತದ ಭದ್ರತೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ಯಾವುದೇ ಭಾಗವನ್ನು ‘ಪಾಕಿಸ್ತಾನ’ ಎಂದು ಕರೆಯುವಂತಿಲ್ಲ : ಸುಪ್ರೀಂ ಕೋರ್ಟ್
2ನೇ ಹಂತದ ಚುನಾವಣೆಯಲ್ಲಿ 157 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 26 ಮಹಿಳೆಯರು ನಿರ್ವಹಿಸುವ ‘ಗುಲಾಬಿ ಮತಗಟ್ಟೆಗಳು’, 26 ವಿಶೇಷಚೇತನರು ನಿರ್ವಹಿಸುವ ಮತಗಟ್ಟೆಗಳು, 26 ಯುವಕರು ನಿರ್ವಹಿಸುವ ಮತಗಟ್ಟೆಗಳು, 31 ಗಡಿ ಮತಗಟ್ಟೆಗಳು, 26 ಹಸಿರು ಮತಗಟ್ಟೆಗಳು ಮತ್ತು 22 ವಿಶಿಷ್ಟ ಮತಗಟ್ಟೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಂತದಲ್ಲಿ ರಾಜ್ಯದ ಪ್ರಮುಖ ನಾಯಕರಾದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಜೆಕೆಪಿಸಿಸಿ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಮತ್ತು ಜಮ್ಮುಕಾಶ್ಮೀರದ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಅವರ ಭವಿಷ್ಯ ನಿರ್ಧಾರವಾಗಲಿದೆ.
ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದೆ. ಸೆಪ್ಟೆಂಬರ್ 18 ರಂದು ನಡೆದ ಮೊದಲ ಹಂತದ ಮತದಾನದಲ್ಲಿ 61% ಕ್ಕೂ ಹೆಚ್ಚು ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಮೂರನೇ ಹಂತದ ಮತದಾನ ಅಕ್ಟೋಬರ್ 1 ರಂದು ನಡೆಯಲಿದೆ. ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.
ವಿಡಿಯೊ ನೋಡಿ: ಕಲಬುರಗಿ- ಗೌರಿಯದ್ದು ವೈಚಾರಿಕ ಕೊಲೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ರಹಮತ್ ತರೀಕೆರೆ ಮಾತುಗಳು


