ಜಮ್ಮುವಿನ ಬಕ್ಷಿ ನಗರದಲ್ಲಿ ನಡೆದ ಘಟನೆಯೊಂದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಳ್ಳತನದ ಆರೋಪಿಯೊಬ್ಬನನ್ನು ಅರೆ ನಗ್ನಗೊಳಿಸಿ, ಕೈಗಳಿಗೆ ಬೇಡಿ ಹಾಕಿ, ಚಪ್ಪಲಿ ಹಾರ ಹಾಕಿ ಪೊಲೀಸ್ ಜೀಪಿನ ಬಾನೆಟ್ ಮೇಲೆ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆಗಿದೆ. ಈ ಕೃತ್ಯದ ವಿರುದ್ಧ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
ವೈರಲ್ ಆದ ವಿಡಿಯೋದಲ್ಲಿ ಪೊಲೀಸರು ಆರೋಪಿಯನ್ನು ಜನನಿಬಿಡ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಿದ್ದಾಗ, ಸಾರ್ವಜನಿಕರು ಹರ್ಷೋದ್ಗಾರ ಮಾಡುತ್ತಿರುವುದು ಕಂಡುಬಂದಿದೆ. ವಾಹನದ ಬಾನೆಟ್ ಮೇಲೆ ಕುಳಿತಿದ್ದ ಆರೋಪಿ ತಲೆ ತಗ್ಗಿಸಿದ್ದನು, ಸುತ್ತಲೂ ಸಮವಸ್ತ್ರಧಾರಿ ಪೊಲೀಸರು ಇರುವುದನ್ನು ಕಾಣಬಹುದು. ಈ ದೃಶ್ಯಗಳು ಪೊಲೀಸರ ನಡವಳಿಕೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ಗಂಭೀರ ಕಳವಳಕ್ಕೆ ಕಾರಣವಾಗಿವೆ.
ಆರೋಪಿಯು ಮಾದಕ ದ್ರವ್ಯ ಸೇವಿಸಿದ್ದಾಗ, ಸ್ಥಳೀಯರೊಬ್ಬರು 40,000 ರೂ. ಕಳ್ಳತನ ಮಾಡಿದ ಆರೋಪದ ಮೇಲೆ ಆತನನ್ನು ಗುರುತಿಸಿದ್ದಾರೆ. ವಿಚಾರಣೆ ವೇಳೆ, ಆರೋಪಿಯು ದೂರುದಾರರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ನಂತರ, ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರೂ, ಪೊಲೀಸರು ಮತ್ತು ಸ್ಥಳೀಯ ಯುವಕರು ಬೆನ್ನಟ್ಟಿ ಆತನನ್ನು ಹಿಡಿದಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.
ಕಾನೂನುಬದ್ಧ ಪ್ರಕ್ರಿಯೆಗಳನ್ನು ಅನುಸರಿಸುವ ಬದಲು, ಪೊಲೀಸರು ಆರೋಪಿಯನ್ನು ಸಾರ್ವಜನಿಕವಾಗಿ ಅವಮಾನಿಸಲು ಅವಕಾಶ ನೀಡಿದ್ದಾರೆ ಮತ್ತು ಅವರೇ ಅದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಯ ಕೈಗಳನ್ನು ಹಗ್ಗದಿಂದ ಕಟ್ಟಿ, ಚಪ್ಪಲಿ ಹಾರವನ್ನು ಕುತ್ತಿಗೆಗೆ ಹಾಕಿ, ಪೊಲೀಸ್ ವಾಹನದ ಬಾನೆಟ್ ಮೇಲೆ ಬಲವಂತವಾಗಿ ನಿಲ್ಲಿಸಿ ಇಡೀ ಪ್ರದೇಶದಲ್ಲಿ ಮೆರವಣಿಗೆ ಮಾಡಲಾಯಿತು. ಈ ಘಟನೆಯನ್ನು ಜಮ್ಮುವಿನ ಹಿರಿಯ ಪೊಲೀಸ್ ಅಧೀಕ್ಷಕರು (SSP) ಜೋಗಿಂದರ್ ಸಿಂಗ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕ್ರಮ ಪೊಲೀಸರಿಗೆ ಶೋಭೆ ತರುವಂತಹದ್ದಲ್ಲ ಎಂದು ಅವರು ಬಣ್ಣಿಸಿದ್ದಾರೆ.
Bakshi Nagar Police in Jammu have arrested a suspected thief and turned the incident into a public spectacle by placing a garland of shoes around his neck and making him sit on the bonnet of their official vehicle. Instead of following standard procedure and placing him inside… pic.twitter.com/zEJt81qG6N
— Nasir Khuehami (ناصر کہویہامی) (@NasirKhuehami) June 24, 2025
ಘಟನೆಯ ಸತ್ಯಾಂಶಗಳನ್ನು ಪತ್ತೆಹಚ್ಚಲು ಪ್ರಾಥಮಿಕ ತನಿಖೆಗೆ ಆದೇಶಿಸಿರುವುದಾಗಿ ಅವರು ಘೋಷಿಸಿದರು. ಈ ತನಿಖೆಯನ್ನು ಸಿಟಿ ನಾರ್ತ್‌ನ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಅವರಿಗೆ ವಹಿಸಲಾಗಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. “ಪೊಲೀಸ್ ಸಿಬ್ಬಂದಿಯ ಈ ಕ್ರಮ ಒಪ್ಪುವಂತದ್ದಲ್ಲ. ಸಂಪೂರ್ಣ ತನಿಖೆ ನಡೆಸಿ, ಕಂಡುಬಂದ ಅಂಶಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಎಸ್‌ಎಸ್‌ಪಿ ಸಿಂಗ್ ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವ್ಯಾಪಕ ಆಕ್ರೋಶ, ಕಾನೂನು ಕ್ರಮಕ್ಕೆ ಆಗ್ರಹ
ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದ ಬಳಕೆದಾರರು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಡಿಜಿಪಿ ನಲಿನ್ ಪ್ರಭಾತ್ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಟ್ಯಾಗ್ ಮಾಡಿದ್ದಾರೆ. ಹಲವರು ಈ ವಿಡಿಯೋವನ್ನು “ಮಾನವ ಹಕ್ಕುಗಳ ಆಘಾತಕಾರಿ ಉಲ್ಲಂಘನೆ” ಎಂದು ಬಣ್ಣಿಸಿದ್ದು, ಕಾನೂನು ಪಾಲಕರು ಕಾನೂನು ಭಂಜಕರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಭಾರತದಾದ್ಯಂತದ ಹನ್ನೊಂದು ಮಂದಿ ವಕೀಲರು ಈ ಘಟನೆ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ಅವರಿಗೆ ಪತ್ರ ಬರೆದಿದ್ದಾರೆ. ಜಮ್ಮುವಿನಲ್ಲಿ ನಡೆದ ಎರಡು ಘಟನೆಗಳ ಸ್ವಯಂಪ್ರೇರಿತ (suo motu) ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ. ಇವುಗಳಲ್ಲಿ ಗಂಗ್ಯಾಲ್ ಘಟನೆ ಮತ್ತು ಚಪ್ಪಲಿ ಹಾರ ಹಾಕಿ ಆರೋಪಿಯ ಸಾರ್ವಜನಿಕ ಮೆರವಣಿಗೆಯ ಘಟನೆಗಳು ಸೇರಿವೆ.
ಇದೇ ರೀತಿ, ಜೂನ್ 11ರಂದು ಗಂಗ್ಯಾಲ್‌ನಲ್ಲಿ, ಜಮ್ಮು ಪೊಲೀಸರು ಗುಂಡಿನ ದಾಳಿ ಪ್ರಕರಣದ ಮೂವರು ಕೈದಿಗಳ ಕೈಗಳಿಗೆ ಬೇಡಿ ಹಾಕಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದರು. ಸಾರ್ವಜನಿಕರ ಮುಂದೆ ಅವರನ್ನು ದೊಣ್ಣೆಗಳಿಂದ ಹೊಡೆದು, ಕಪಾಳಮೋಕ್ಷ ಮಾಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಘಟನೆಯ ವಿಡಿಯೋಗಳು ವ್ಯಾಪಕವಾಗಿ ಹರಿದಾಡಿದ್ದವು.
ವಕೀಲರು ಈ ಘಟನೆಗಳನ್ನು ಅಸಾಂವಿಧಾನಿಕ ಕೃತ್ಯಗಳು ಎಂದು ಬಣ್ಣಿಸಿದ್ದಾರೆ. “ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿರುವ ಈ ಘಟನೆಗಳು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಅವರು ಒತ್ತಿ ಹೇಳಿದ್ದಾರೆ.
ಕಾನೂನು ಜಾರಿಗೊಳಿಸುವ ಸಂಸ್ಥೆಗಳು ಸಾಂವಿಧಾನಿಕ ನಿಯಮಗಳನ್ನು ನಿರ್ಲಕ್ಷಿಸಿ, ಕಾನೂನುಬದ್ಧ ತನಿಖಾ ವಿಧಾನಗಳ ಬದಲು ಸಾರ್ವಜನಿಕ ಪ್ರದರ್ಶನದ ಮೂಲಕ ಶಿಕ್ಷೆ ನೀಡುತ್ತಿವೆ ಎಂದು ಪತ್ರದಲ್ಲಿ ಅಭಿಪ್ರಾಯಿಸಲಾಗಿದೆ. ಈ ರೀತಿಯ ಕೃತ್ಯಗಳು ಆರೋಪಿಗಳ ಘನತೆ ಮತ್ತು ಮೂಲಭೂತ ಹಕ್ಕುಗಳಿಗೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡುತ್ತವೆ ಎಂದು ಸಹಿ ಮಾಡಿದ ವಕೀಲರು ಪ್ರತಿಪಾದಿಸಿದ್ದಾರೆ.
ಇಂತಹ ಕೃತ್ಯಗಳು “ನ್ಯಾಯ ದೊರಕಿಸಿಕೊಡುವ ಬದಲು, ಪ್ರತೀಕಾರದ ಪ್ರದರ್ಶನದಂತೆ” ಕಾಣಿಸುತ್ತವೆ ಎಂಬ ಆತಂಕವನ್ನು ಪತ್ರದಲ್ಲಿ ವ್ಯಕ್ತಪಡಿಸಲಾಗಿದೆ. ಇಂತಹ ನಡವಳಿಕೆಗೆ ಅವಕಾಶ ನೀಡಬಾರದು ಎಂದು ಎಚ್ಚರಿಸಲಾಗಿದೆ. ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಯುವ ಮೊದಲೇ ಶಿಕ್ಷೆ ನೀಡಿದರೆ ನ್ಯಾಯಾಂಗದ ಪರಿಶೀಲನೆಯನ್ನು ತಪ್ಪಿಸಿ, ಕಾನೂನು ಪ್ರಕ್ರಿಯೆಯನ್ನು ದುರ್ಬಲಗೊಳಿಸಿದಂತಾಗುತ್ತದೆ ಎಂದು ವಕೀಲರು ತಿಳಿಸಿದ್ದಾರೆ.
ಈ ರೀತಿಯ ವ್ಯಕ್ತಿಗಳು ನಂತರ ನಿರಪರಾಧಿ ಎಂದು ಸಾಬೀತಾದರೆ, ಪೊಲೀಸರು ಚಿತ್ರೀಕರಿಸಿದ ವಿಡಿಯೋಗಳು ಮತ್ತು ಅವರ ಕೃತ್ಯಗಳು ರಾಜ್ಯದ ವಿರುದ್ಧವೇ ಸಾಕ್ಷಿಯಾಗಬಹುದು ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ. ಇಂತಹ ಸನ್ನಿವೇಶವು ಪರಿಹಾರಕ್ಕಾಗಿ ದೊಡ್ಡ ಮೊತ್ತದ ಹಕ್ಕು ಹಾಗೂ ನಾಗರಿಕ/ಕ್ರಿಮಿನಲ್ ಕಾನೂನು ಕ್ರಮಗಳಿಗೆ ಕಾರಣವಾಗಬಹುದು. ಇದು ನ್ಯಾಯ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ ಎಂದು ಒತ್ತಿ ಹೇಳಿದ್ದಾರೆ.
ಅರ್ಜಿದಾರರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (NHRC) ಈ ಎರಡೂ ಘಟನೆಗಳ ಬಗ್ಗೆ ತಕ್ಷಣವೇ ಸ್ವಯಂಪ್ರೇರಿತ ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರಿಗೆ (DGP) ಈ ಕುರಿತು ತಕ್ಷಣ ವಿವರಣೆ ನೀಡುವಂತೆ ನೋಟಿಸ್ ನೀಡುವಂತೆ ಮನವಿ ಮಾಡಿದ್ದಾರೆ.
ಅವರು ಇವುಗಳನ್ನೂ ಒತ್ತಾಯಿಸಿದ್ದಾರೆ:
- ಘಟನೆಗಳ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು.
- ಸಂತ್ರಸ್ತರಿಂದ ಯಾವುದೇ ಬೆದರಿಕೆಯಿಲ್ಲದೆ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕು.
- ಭಾಗಿಯಾಗಿರುವ ಎಲ್ಲ ಅಧಿಕಾರಿಗಳ ವಿರುದ್ಧ ಶಿಸ್ತುಬದ್ಧ ಮತ್ತು ಕಾನೂನು ಕ್ರಮಗಳನ್ನು ಶಿಫಾರಸು ಮಾಡಬೇಕು.
- ಮುಂದೆ ಇಂತಹ ಉಲ್ಲಂಘನೆಗಳು ನಡೆಯದಂತೆ ತಡೆಯಲು, ಎಲ್ಲ ಪೊಲೀಸ್ ಸಿಬ್ಬಂದಿಗೆ “ಬಂಧಿತರ ಹಕ್ಕುಗಳು, ಮಾನವ ಘನತೆ ಮತ್ತು ಕಾನೂನುಬದ್ಧ ಕಾರ್ಯವಿಧಾನಗಳ” ಕುರಿತು ತರಬೇತಿ ನೀಡಬೇಕು.
ಲಂಗೇಟ್ ಶಾಸಕ ಶೇಖ್ ಖುರ್ಷೀದ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು “ಮಾನವ ಘನತೆಗೆ ಮಾಡಿದ ಅವಮಾನ ಮಾತ್ರವಲ್ಲದೆ, ಅಧಿಕಾರದ ಸ್ಪಷ್ಟ ದುರುಪಯೋಗ” ಎಂದು ಅವರು ಬಣ್ಣಿಸಿದ್ದಾರೆ.
“ಯಾವ ಅಪರಾಧವೇ ಇರಲಿ, ನಮ್ಮ ನ್ಯಾಯ ವ್ಯವಸ್ಥೆಯು ಕಾನೂನಿನ ಆಡಳಿತದಿಂದ ನಡೆಯಬೇಕು, ಹೊರತು ಜನರ ಭಾವನೆಗಳು ಅಥವಾ ಸಾರ್ವಜನಿಕವಾಗಿ ಅವಮಾನ ಮಾಡುವುದರಿಂದಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಪ್ಪಿತಸ್ಥರಿಗೆ ತಕ್ಷಣ ಹೊಣೆಗಾರಿಕೆ ನಿಗದಿಪಡಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ ಶಾಸಕರು, “ಕಾನೂನು ಜಾರಿಗೊಳಿಸುವ ಸಂಸ್ಥೆಗಳು ಎಂದಿಗೂ ಪ್ರದರ್ಶನಕ್ಕಾಗಲಿ ಅಥವಾ ಅವಮಾನ ಮಾಡುವುದಕ್ಕಾಗಲಿ ಬಳಕೆಯಾಗಬಾರದು” ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘದ ರಾಷ್ಟ್ರೀಯ ಸಂಚಾಲಕ ನಾಸಿರ್ ಖುಹಾಮಿ ಕೂಡ ಪೊಲೀಸರ ವರ್ತನೆಯನ್ನು ಖಂಡಿಸಿದ್ದಾರೆ. “ಪೊಲೀಸರು ಜನಸಮೂಹವಲ್ಲ. ಅವರು ಕಾನೂನಿನ ರಕ್ಷಕರು. ಅವರ ಕೆಲಸ ತನಿಖೆ ನಡೆಸುವುದು ಮತ್ತು ನ್ಯಾಯವನ್ನು ಎತ್ತಿಹಿಡಿಯುವುದು, ಸಾರ್ವಜನಿಕವಾಗಿ ಶಿಕ್ಷೆ ನೀಡುವುದಲ್ಲ” ಎಂದು ಅವರು ಹೇಳಿದ್ದಾರೆ.
ರೈತರ ಜೊತೆ ಇಲ್ಲೇ ಮಲಗುತ್ತೇನೆ, ಜೈಲಿಗೆ ಹಾಕುವುದಾದರೆ ಹಾಕಿ: ನಟ ಪ್ರಕಾಶ್ ರಾಜ್


