ಸಮಾಜವಾದಿ ನಾಯಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ಜನ್ಮಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಹಳೆ ವಿಷಯಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಪ್ರಶ್ನೆಗಳನ್ನು ಕೇಳಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶುಕ್ರವಾರ (ಅ.24) ಪೋಸ್ಟ್ ಹಾಕಿರುವ ರಾಷ್ಟ್ರೀಯ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್, “1979ರ ಏಪ್ರಿಲ್‌ನಲ್ಲಿ ಜನಸಂಘವು ಕರ್ಪೂರಿ ಠಾಕೂರ್ ಅವರ ಬಿಹಾರ ಸರ್ಕಾರವನ್ನು ಉರುಳಿಸಿರುವುದು ಸತ್ಯ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಮುಂದುವರಿದು, “ಆಗ ಕರ್ಪೂರಿ ಠಾಕೂರ್ ಅವರನ್ನು ಆರ್‌ಎಸ್‌ಎಸ್ ಮತ್ತು ಜನಸಂಘದ ನಾಯಕರು ಅತ್ಯಂತ ಕೆಟ್ಟದಾಗಿ ನಿಂದಿಸಿದ್ದರು ಎಂಬುದು ಸತ್ಯವಲ್ಲವೇ? ಎಂದು ಜೈರಾಮ್ ರಮೇಶ್ ಕೇಳಿದ್ದಾರೆ.
“ಸಂವಿಧಾನದಡಿಯಲ್ಲಿ ಬಿಹಾರದ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಒಬಿಸಿಗಳು ಮತ್ತು ಇಬಿಸಿಗಳಿಗೆ ಶೇಕಡ 65ರಷ್ಟು ಮೀಸಲಾತಿ ಒದಗಿಸುವ ಕಾನೂನಿಗೆ ರಕ್ಷಣೆ ನೀಡಲು ಪ್ರಧಾನಿ ಮತ್ತು ರಾಜ್ಯದಲ್ಲಿನ ಅವರ ‘ಟ್ರಬಲ್ ಇಂಜಿನ್ ಸರ್ಕಾರ’ ಏನೂ ಮಾಡಿಲ್ಲ ಎಂಬುದು ಸತ್ಯವಲ್ಲವೇ? ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
“ಏಪ್ರಿಲ್ 28, 2024ರಂದು ಪ್ರಧಾನ ಮಂತ್ರಿಯವರು ಜಾತಿ ಗಣತಿಗಾಗಿ ಒತ್ತಾಯಿಸಿದವರನ್ನು ‘ನಗರ ನಕ್ಸಲರು’ ಎಂದಿರುವುದು ಸತ್ಯವಲ್ಲವೇ?, ಸಂಸತ್ತಿನಲ್ಲಿ (ಜುಲೈ 20, 2021) ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ (ಸೆಪ್ಟೆಂಬರ್ 21, 2021) ಅವರ ಸರ್ಕಾರವು ಜಾತಿ ಗಣತಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿತಲ್ಲವೇ? ಎಂದಿದ್ದಾರೆ.
“ಭಾರತದ ಸಂವಿಧಾನದಡಿಯಲ್ಲಿ ಬಿಹಾರದ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಒಬಿಸಿಗಳು ಮತ್ತು ಇಬಿಸಿಗಳಿಗೆ ಶೇಕಡ 65ರಷ್ಟು ಮೀಸಲಾತಿ ಕಾನೂನಿಗೆ ರಕ್ಷಣೆ ನೀಡಲು ಪ್ರಧಾನಿ ಮೋದಿ ಮತ್ತು ಬಿಹಾರದ ಅವರ ‘ಟ್ರಬಲ್ ಇಂಜಿನ್ ಸರ್ಕಾರ’ ಏನೂ ಮಾಡಿಲ್ಲ ಎಂಬುದು ಸತ್ಯವಲ್ಲವೇ. ಕಾಂಗ್ರೆಸ್ ಸರ್ಕಾರ ಸೆಪ್ಟೆಂಬರ್ 1994ರಲ್ಲೇ ತಮಿಳುನಾಡಿನಲ್ಲಿ ಇದೇ ರೀತಿಯ ಕಾನೂನಿಗೆ ರಕ್ಷಣೆ ಒದಗಿಸಿದೆ” ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಬಿಹಾರದ ಸಮಸ್ತಿಪುರ ಮತ್ತು ಬೇಗುಸರಾಯ್ ಜಿಲ್ಲೆಗಳಲ್ಲಿ ಶುಕ್ರವಾರ ಎರಡು ಚುನಾವಣಾ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅದಕ್ಕೂ ಮುನ್ನ ಕರ್ಪೂರಿ ಠಾಕೂರ್ ಅವರ ಜನ್ಮಸ್ಥಳವಾದ ಕರ್ಪುರಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಬಿಹಾರದ ಪ್ರಸಿದ್ದ ರಾಜಕೀಯ ನಾಯಕ ಕರ್ಪೂರಿ ಠಾಕೂರ್ ಅವರಿಗೆ ಕಳೆದ ವರ್ಷ ಎನ್‌ಡಿಎ ಸರ್ಕಾರ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿತ್ತು.
ಬಿಹಾರ ಚುನಾವಣೆ: ಆರ್‌ಜೆಡಿ ಬೆಂಬಲಿಸಿ ತಮ್ಮ ನಾಮಪತ್ರ ಹಿಂಪಡೆದ ನಾಲ್ವರು ಮಹಾಘಟಬಂಧನ ಅಭ್ಯರ್ಥಿಗಳು


