Homeಮುಖಪುಟ'ಜನವಾಹಿನಿ' ಪತ್ರಿಕೆಯ ಆರಂಭ ಕಾಲದ ಪೇಚುಗಳು : ನಿಖಿಲ್‌ ಕೋಲ್ಪೆ

‘ಜನವಾಹಿನಿ’ ಪತ್ರಿಕೆಯ ಆರಂಭ ಕಾಲದ ಪೇಚುಗಳು : ನಿಖಿಲ್‌ ಕೋಲ್ಪೆ

- Advertisement -
- Advertisement -

ಜನವಾಹಿನಿಯ ನೆನಪುಗಳು -12

ನಿಖಿಲ್ ಕೋಲ್ಪೆ

ಕೃಪೆ: ‘ಆರ್ಸೋ’ ಕೊಂಕಣಿ ಪತ್ರಿಕೆ

ಒಂದು ರೀತಿಯಲ್ಲಿ ನೋಡಿದರೆ ‘ಜನವಾಹಿನಿ’ಯು ‘ಮುಂಗಾರು’ ಪತ್ರಿಕೆಯ ಆಧುನಿಕವಾದ, ಹೆಚ್ಚು ಹರವು ಹಾಗೂ ಹೆಚ್ಚು ಪುಟಗಳನ್ನು ಹೊಂದಿದ ಆವೃತ್ತಿಯಾಗಿತ್ತು. ಆರಂಭದ ದಿನಗಳಲ್ಲಿ ‘ಜನವಾಹಿನಿ’ ಹೇಗೆ ಹೆಜ್ಜೆಗಳನ್ನು ಇಟ್ಟು ಬೀಳುತ್ತಾ ಏಳುತ್ತಾ ಬಹುಬೇಗನೇ ನಡೆಯಲು ಕಲಿಯಿತು ಎಂಬುದನ್ನೀಗ ನೋಡೋಣ.

ಮೊದಲ ಕೆಲವು ದಿನಗಳಲ್ಲೇ ದೈನಂದಿನ ಕೆಲಸ ಒಂದು ಶಿಸ್ತಿಗೆ ಬರಲು ಆರಂಭವಾಯಿತು. ಪುಟಗಳು ಸಮಯಕ್ಕೆ ಸರಿಯಾಗಿ ಮುಗಿಯುತ್ತಿದ್ದವು. ಕೆಲವು ಪುಟಗಳು ತಡವಾಗುತ್ತಿದ್ದರೆ ಅದಕ್ಕೆ ಏನು ಕಾರಣ ಎಂಬುದನ್ನು ತಿಳಿದು ಪರಿಹರಿಸಲಾಯಿತು. ಕಾರಣಗಳು ಹಲವಿದ್ದವು. ಮೊತ್ತ ಮೊದಲನೆಯದಾಗಿ ನೆಟ್‍ವರ್ಕ್ ಸಮಸ್ಯೆಗಳಿದ್ದವು. ಆ ಕಂಪ್ಯೂಟರ್ ಈ ಕಂಪ್ಯೂಟರಿಗೆ ಸಿಗುವುದಿಲ್ಲ ಇತ್ಯಾದಿ. ಬೇಕಾದ ವಿಷಯ (matter) ಯಾವ ರೂಟಲ್ಲಿ, ಯಾವ ಫೋಲ್ಡರಲ್ಲಿ ಇದೆ ಎಂದು ಹುಡುಕಬೇಕಾಗಿತ್ತು. ಇದಕ್ಕೆ ಒಂದು ನಿರ್ದಿಷ್ಟವಾದ ಫೈಲಿಂಗ್ ವ್ಯವಸ್ಥೆ ಮಾಡಲಾಯಿತು. ಎಲ್ಲರೂ ಅದನ್ನು ಅನುಸರಿಸಿದರೆ ಯಾರೊಬ್ಬರೂ ರಜೆಯಲ್ಲಿದ್ದರೆ ಅಥವಾ ಕರ್ತವ್ಯದಲ್ಲಿ ಇಲ್ಲದೆ ಇದ್ದರೆ ಹುಡುಕಲು ಕಷ್ಟವಾಗದು.

ಎರಡನೇ ಸಮಸ್ಯೆಯೆಂದರೆ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದು. ಕೆಲವು ಕಂಪ್ಯೂಟರ್‌ಗಳಿಂದ ಪ್ರಿಂಟ್ ಕೊಟ್ಟರೆ ಅಥವಾ ಕೆಲವು ಪುಟಗಳಲ್ಲಿ ‘ಹೆವಿ’ (ಹೆಚ್ಚು ಬೈಟ್‌ಗಳಿರುವ) ಚಿತ್ರಗಳಿದ್ದರೆ ಪ್ರಿಂಟ್ ಬರುವುದು ತುಂಬಾ ತಡವಾಗುತ್ತಿತ್ತು. ಹೆಚ್ಚು ಬಣ್ಣದ ಚಿತ್ರಗಳಿರುವ ಮುಖಪುಟ ಮತ್ತು ಕ್ರೀಡಾಪುಟಗಳಿಗೆ ಇದು ಹೆಚ್ಚು ಅನ್ವಯವಾಗುತ್ತಿತ್ತು. ಕೆಲವೊಮ್ಮೆ ಸಮಯಕ್ಕೆ ಮುಂಚಿತವಾಗಿ ಪುಟ ಮುಗಿಸಿದರೂ, ಪುಟ ಹೊರಬರಲು ಪ್ರಿಂಟರ್ ಮುಂದೆ ಕಾಯಬೇಕಿತ್ತು. ಒಂದೊಂದು ನಿಮಿಷಕ್ಕೂ ಒಂದೊಂದು ಯುಗದ ತೂಕ ಬಂದು ನಾವು ಕೈ ಹಿಸುಕುತ್ತಾ ಶತಪಥ ಅಡ್ಡಾಡುತ್ತಿದ್ದೆವು. ಹೆಂಡತಿ ಚೊಚ್ಚಲ ಹೆರಿಗೆಗೆ ಹೋದಾಗ ಹೊರಗೆ ಕಾಯುವ ಗಂಡನ ಸ್ಥಿತಿ ನಮ್ಮದಾಗುತ್ತಿತ್ತು. ಇದನ್ನು ಅನುಭವಿಸಿದವರು ತಾನೇ ಬಲ್ಲರು! ಆಗ ತಾಂತ್ರಿಕ ವಿಭಾಗದವರು ವೈದ್ಯರಂತೆ ಬಂದು ಅದು-ಇದು, ಸಿಸೇರಿಯನ್-ಗಿಸೇರಿಯನ್ ಮಾಡಿ ಪುಟ ಹೊರ ತೆಗೆಯುತ್ತಿದ್ದರು! ಮುಖಪುಟದ ಮತ್ತು ಇಡೀ ಎಡಿಷನ್ ಹೊರಬರುವ ಸಮಯದ (ಸಂಪಾದಕೀಯ ವಿಭಾಗ ಮಾತ್ರ) ಬಗ್ಗೆ ನಾನು ಮರುದಿನ ಆಡಳಿತ ನಿರ್ದೇಶಕ ಸ್ಯಾಮುಯೆಲ್ ಸಿಕ್ವೇರಾ ಅವರಿಗೆ ಉತ್ತರ ಹೇಳಬೇಕಿತ್ತಲ್ಲ! ಹಾಗಾಗಿ ಹೆಚ್ಚು ಆತಂಕ. ಆದರೆ ಅವರು ಸಾಕಷ್ಟು ತಾಂತ್ರಿಕ ಪರಿಚಯ ಇದ್ದವರಾದುದರಿಂದ, ಸಮಸ್ಯೆಗಳು ಬಂದಾಗಲೆಲ್ಲಾ ತಾಂತ್ರಿಕ ವಿಭಾಗದವರೊಂದಿಗೆ ಚರ್ಚಿಸಿ ತಕ್ಷಣ ಸರಿಪಡಿಸುತ್ತಿದ್ದರು. ನಾವೆಲ್ಲಾ ಈ ವಿಷಯದಲ್ಲಿ ‘ನವಸಾಕ್ಷರ’ರಾಗಿ ಇದ್ದದ್ದು ಅವರಿಗೂ ಗೊತ್ತಿತ್ತು!

ನಮ್ಮದು ಬಣ್ಣದ ಮುದ್ರಣವಾದುದರಿಂದ ನಾವು ಹೆಚ್ಚು ಹೆಚ್ಚು ಚಿತ್ರಗಳನ್ನು ಬಳಸಿ ಪತ್ರಿಕೆಯನ್ನು ಹೆಚ್ಚು ಆಕರ್ಷಕವನ್ನಾಗಿಸಲು ನಿರ್ಧರಿಸಿದ್ದೆವು. ಈಗಿನಂತೆ ಬೇಕುಬೇಕಾದ ಚಿತ್ರಗಳನ್ನು ಕ್ಷಣಮಾತ್ರದಲ್ಲಿ ಇಂಟರ್‌ನೆಟ್ ಮೂಲಕ ತೆಗೆಯುವಂತೆ ಇರಲಿಲ್ಲ. (ನಮ್ಮಲ್ಲಿ ಇಂಟರ್‌ನೆಟ್ ಇತ್ತು. ಈ ವಿಷಯಕ್ಕೆ ನಂತರ ಬರೋಣ). ಹಾಗಾಗಿ ನಾವು ಒಂದೆರಡು ನ್ಯೂಸ್ ಏಜೆನ್ಸಿಗಳ ಚಂದಾದಾರರಾಗಿದ್ದೆವು. ಅವರು ಒಂದಿಷ್ಟು ಬಣ್ಣದ ಚಿತ್ರಗಳನ್ನು ಸಂಜೆಯ ಹೊತ್ತಿಗೆ ಎಲೆಕ್ಟ್ರಾನಿಕ್ ಮಾಧ್ಯಮದಲ್ಲೇ ಕಳುಹಿಸುತ್ತಿದ್ದರು. ಚಿತ್ರಗಳು ಬಂದ ತಕ್ಷಣ ತಾಂತ್ರಿಕ ವಿಭಾಗದವರು ‘ಬಂದಿದೆ’ ಎಂದು ಹೇಳುತ್ತಿದ್ದರು. ಒಂದು ವೇಳೆ ಸಂಜೆ ಬೇಗನೇ ಈ ‘ಬಂದಿದೆ’ ಕಿವಿಗೆ ಕೇಳಿಸಿದರೆ ನಿರಾಳ. ಕೆಲವೊಮ್ಮೆ ಸಂಜೆ 7 ಗಂಟೆಯಾದರೂ ಈ ‘ಬಂದಿದೆ’ಯ ಸುದ್ದಿ ಇಲ್ಲದಿದ್ದರೆ ಮಾತ್ರ ಆತಂಕ. ಸಾಮಾನ್ಯವಾಗಿ ಚಿತ್ರಗಳಿಗೆ ಮೀಸಲಿಟ್ಟ ಜಾಗಕ್ಕೆ ಬೇರೆ ಸುದ್ದಿಗಳನ್ನು ಸಿದ್ಧಪಡಿಸಬೇಕಾಗಿತ್ತು. ಕೆಲವು ಸಲ ಬರೀ ನಿಷ್ಪ್ರಯೋಜಕ, ವಿದೇಶಿ ಚಿತ್ರಗಳೇ ಬರುತ್ತಿದ್ದವು.

ಉದಾಹರಣೆಗೆ ಕ್ಯಾಲಿಫೋರ್ನಿಯದ ‘ಕ್ಯಾಟಲ್ ಫೇರ್’(ಜಾನುವಾರು ಜಾತ್ರೆ) ಚಿತ್ರ ಬಂತೆಂದಿಟ್ಟುಕೊಳ್ಳೋಣ. ಸಾವಿರಾರು ರೈತರು, ಜನಪದರು ಸೇರುವ ನಮ್ಮದೇ ಸುಬ್ರಹ್ಮಣ್ಯದ ಜಾನುವಾರು ಜಾತ್ರೆಯ ಚಿತ್ರ ಹಾಕಲು ಸಂಪನ್ಮೂಲಗಳ ಕಾರಣದಿಂದ ಸಾಧ್ಯವಿಲ್ಲದ ನಾವು, ಅಮೆರಿಕಾದ ಜಾನುವಾರು ಜಾತ್ರೆಯ ಚಿತ್ರ ಹಾಕುವುದು ‘ದೇಶದ್ರೋಹ’ದ ಕೆಲಸವೆಂದೇ ನಾವು ನಿರ್ಧರಿಸಿದ್ದೆವು. ಇಲ್ಲಿ ನಾವು ಇಂದಿಗೂ ಗಂಭೀರವಾಗಿ ಪರಿಗಣಿಸಬೇಕಾದ ವಿಷಯವೊಂದಿದೆ. ಇಂದು ತಂತ್ರಜ್ಞಾನಗಳು, ಸಂಪನ್ಮೂಲಗಳು ಇರುವ ಪತ್ರಿಕೆಗಳಲ್ಲಿಯೂ ವಿದೇಶಿ ಚಿತ್ರಗಳು ಪ್ರಕಟವಾಗುವಂತೆ, ನಮ್ಮದೇ ನೆಲದಲ್ಲಿ ನಮ್ಮದೇ ಗ್ರಾಮೀಣ ಚಿತ್ರಗಳು ಪ್ರಕಟವಾಗುವುದಿಲ್ಲ! ಸುದ್ಧಿಗಳ ಮಟ್ಟಿಗೂ ಇದು ನಿಜವಾಗಿರುವುದು ನಮ್ಮ ದುಸ್ಥಿತಿಗೆ ಹಿಡಿದ ಕನ್ನಡಿ.

ಸರಿ ಬಿಡಿ! ಈ ಏಜೆನ್ಸಿ ಚಿತ್ರಗಳು ಬರದಿದ್ದರೆ, ತಡವಾಗಿ ಬಂದರೆ ಹೆಚ್ಚು ಆತಂಕವಾಗುತ್ತಿದ್ದದ್ದು ಕ್ರೀಡಾ ವಿಭಾಗದವರಿಗೆ. ಪರಿಸ್ಥಿತಿ ಗಮನಿಸಿ! ‘ಮುಂಗಾರು’ ಪತ್ರಿಕೆಯಲ್ಲಿ ತೆಂಡುಲ್ಕರ್ ಸೆಂಚುರಿ ಹೊಡೆದರೆ ಹಿಂದೆಯೇ ಬಳಸಿದ ಸಿಂಗಲ್ ಕಾಲಂ ಅಥವಾ ಡಬಲ್ ಕಾಲಂ ಪಾಸಿಟಿವ್ ಹುಡುಕಿ ಹಾಕಿದರೆ ಮುಗಿಯಿತು. ಈಗ ಅಂತೂ ಫೋಟೊಗಳಿಗೆ ಕೊರತೆಯಿಲ್ಲ. ಅಲ್ಲದೆ ಎಲ್ಲರೂ ಟಿವಿಯಲ್ಲಿ ಮೊಬೈಲ್‍ನಲ್ಲಿ ಲೈವ್ ನೋಡಿರುತ್ತಾರೆ. ಆದರೆ ‘ಜನವಾಹಿನಿ’ ಕಾಲದಲ್ಲಿ ಹಾಗಲ್ಲ. ಎಲ್ಲರಿಗೂ ಟಿವಿ ಇರಲಿಲ್ಲ. ತಮ್ಮ ‘ಆರಾಧ್ಯ ದೇವತೆ’ಯ ಬಣ್ಣದ ಚಿತ್ರವನ್ನು ಪತ್ರಿಕೆಯಲ್ಲಾದರೂ ನೋಡಿ ಧನ್ಯರಾಗುವುದು ಓದುಗರ ಹಕ್ಕಲ್ಲವೆ?! ಸೆಂಚುರಿ ಹೊಡೆದಾಗ ಬ್ಯಾಟ್ ಮೇಲೆತ್ತಿ ಆಕಾಶ ನೋಡುವ ಚಿತ್ರ ಅಥವಾ ಕ್ಲಾಸಿಕ್ ಕಾಪಿಬುಕ್ ಕವರ್ ಡ್ರೈವ್ ಚಿತ್ರವನ್ನಾದರೂ ಹಾಕಬೇಕಾದುದು ನಮ್ಮ ಕರ್ತವ್ಯ ಅಲ್ಲವೆ? ಅದೂ ನಮ್ಮ ಪ್ರತಿಸ್ಪರ್ಧಿ ಪತ್ರಿಕೆಯಲ್ಲಿ ನಮಗಿಂತ ಉತ್ತಮ ತಂತ್ರಜ್ಞಾನ ಮತ್ತು ಸಂಪನ್ಮೂಲವಿದ್ದು, ಅದೂ ತನ್ನ ಕಪ್ಪು ಬಿಳುಪು ವೇಷ ಕಳಚಿ ಬಣ್ಣದಲ್ಲಿ ಮುದ್ರಣಗೊಳ್ಳಲು ಆರಂಭವಾಗಿರುವಾಗ?!

ಇಂತದೇ ಸಮಸ್ಯೆ ಸುದ್ದಿಗಳದ್ದು. ಈ ವಿಷಯದಲ್ಲಿ ದೇಶ-ವಿದೇಶಗಳ ಸುದ್ದಿಗಳಿಗೆ ಎಲ್ಲರೂ ಅವಲಂಬಿಸುತ್ತಿದ್ದುದು ಸುದ್ದಿ ಸಂಸ್ಥೆಗಳು ಅಥವಾ ಏಜೆನ್ಸಿಗಳನ್ನು. ‘ಜನವಾಹಿನಿ’ಯಲ್ಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಮತ್ತು ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ (ಯುಎನ್‍ಐ)ದ ಎರಡು ಟರ್ಮಿನಲ್‍ಗಳಿದ್ದವು. ಒಂದು ಕೈ ಕೊಟ್ಟರೆ ಇನ್ನೊಂದು ಇರಲಿ ಎಂದು ಈ ವ್ಯವಸ್ಥೆ. ಅಲ್ಲದೆ, ಪಿಟಿಐಯಲ್ಲಿ ರಾಜಕೀಯ ಸುದ್ದಿಗಳು ಹೆಚ್ಚಾಗಿ ಬರುತ್ತಿದ್ದರೆ ಯುಎನ್‍ಐಯಲ್ಲಿ ರಂಜಕ ಮತ್ತು ಮಾನವಾಸಕ್ತಿ (human interest)ಯ ಸುದ್ದಿಗಳು ಹೆಚ್ಚಾಗಿ ಬರುತ್ತಿದ್ದವು. ಕೆಲವು ಸಲ ಎರಡೂ ಕೈ ಕೊಟ್ಟರೆ ಮಾತ್ರ ನಾವು ಕಣ್ಣು ಕಟ್ಟಿ ಕಾಡಿಗೆ ಬಿಟ್ಟ ಕುದುರೆಯಂತಾಗುತ್ತಿದ್ದೆವು!

ವಿಶೇಷ ಎಂದರೆ, ಏನಾದರೂ ಪ್ರಮುಖ ಘಟನೆ ನಡೆದಾಗ ಮಾತ್ರ ಈ ರೀತಿ ಆಗುವುದನ್ನು ಮುಖಪುಟದ ಜವಾಬ್ದಾರಿ ಹೊತ್ತಿದ್ದ ನಾನು ಗಮನಿಸಿದ್ದೆ. ‘ಮುಂಗಾರು’ ಪತ್ರಿಕೆಯಲ್ಲಿ ನನಗೆ ಇದರ ಅನುಭವವಿತ್ತು ಮತ್ತು ಇದಕ್ಕೆ ಯಾರು ಕಾರಣ ಎಂಬುದರ ಸುಳಿವೂ ಇತ್ತು. ‘ಮುಂಗಾರು’ವಿನಲ್ಲಾದರೆ ಟೆಲಿಫೋನ್ ಸಂಪರ್ಕ ಕೂಡಾ ಕೈ ಕೊಡುತ್ತಿತ್ತು. ಇಲ್ಲಿ ಆ ಸಮಸ್ಯೆ ಇಲ್ಲ. ಕೆಲವೊಮ್ಮೆ ಪ್ರತಿಸ್ಪರ್ಧಿ ಪತ್ರಿಕೆಯಲ್ಲಿ ಬಂದ ಸುದ್ದಿ ನಮಗೆ ಬರುತ್ತಿರಲಿಲ್ಲ ಅಥವಾ ತಡವಾಗಿ ಕೊನೆಯ ಗಳಿಗೆಯಲ್ಲಿ ಬರುತ್ತಿತ್ತು. ಇದಕ್ಕೆ ಹಿಂದಿನಿಂದಲೂ ಕಾರಣವಾಗಿದ್ದುದು ನಮ್ಮ ಪ್ರತಿಸ್ಪರ್ಧಿ ಪತ್ರಿಕೆಯ ಕರಾಮತ್ತು ಮತ್ತು ಪ್ರಭಾವ ಎಂದು ಬೇರೆ ಹೇಳಬೇಕಾಗಿಲ್ಲ. ಇದನ್ನು ನಾನು ಆಡಳಿತ ನಿರ್ದೇಶಕರ ಗಮನಕ್ಕೆ ತಂದು ಆಗಾಗ ಅವರು ಈ ಸುದ್ದಿ ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿದ್ದಿದೆ. ಈ ವಿದ್ಯಮಾನಕ್ಕೆ ಇನ್ನೊಂದು ಕಾರಣವೆಂದರೆ, ಒಂದು ಸಂಸ್ಥೆಯ ಮುಖ್ಯ ಕಚೇರಿ ಇದ್ದದ್ದೇ ಆ ಪತ್ರಿಕೆಯ ಕಟ್ಟಡದಲ್ಲಿ! ಅದಕ್ಕೇ ಹೇಳುವುದು ಸುದ್ದಿಗಾರರು ಯಾರ ಹಂಗಿನಲ್ಲೂ ಇರಬಾರದೆಂದು!

ಇನ್ನು ಸ್ಥಳೀಯ ಸುದ್ದಿಗಳು ಬರುತ್ತಿದ್ದುದು ಆನ್‍ಲೈನ್, ಫ್ಯಾಕ್ಸ್‌ಗಳ ಮೂಲಕ. ಉಡುಪಿ, ಮಂಗಳೂರು ಮತ್ತು ಬೆಂಗಳೂರು ಕಚೇರಿಗಳಿಂದ ನೇರವಾಗಿ ಸುದ್ದಿಗಳು ಆನ್‍ಲೈನ್ ಬರುತ್ತಿದ್ದವು. ನೆಟ್‍ಡೌನ್ ಆದರೆ ಈ ವಿಳಂಬ ಸಮಸ್ಯೆ ಎದುರಿಸಬೇಕಿತ್ತು. ಉಳಿದಂತೆ ಎಲ್ಲಾ ಪ್ರಮುಖ ಕೇಂದ್ರಗಳ ವರದಿಗಾರರಿಗೆ ಫ್ಯಾಕ್ಸ್ ವ್ಯವಸ್ಥೆ ಒದಗಿಸಲಾಗಿತ್ತು. ಈಗ ಈ ಫ್ಯಾಕ್ಸ್ ಎಂಬುದು ಅದು ಹುಟ್ಟಿದ ಜಪಾನಿನಿಂದಲೇ ಬಹುತೇಕ ಮಾಯವಾಗಿದೆಯಾದರೂ, ಅದು ಆ ಕಾಲದಲ್ಲಿ ಎರಡು ಮುಖ್ಯ ಕೆಲಸಗಳನ್ನು ಮತ್ತು ಸಮಯವನ್ನು ಉಳಿಸುತ್ತಿತ್ತು. ಬಹಳ ಹಿಂದೆ ಪ್ರಮುಖ ಸುದ್ದಿಗಳನ್ನು ಟೆಲಿಗ್ರಾಂ ಮೂಲಕ ಕಳಿಸಲಾಗುತ್ತಿತ್ತು. ಅದಕ್ಕಾಗಿ ಪತ್ರಕರ್ತರಿಗೆ ವಿಶೇಷ ವಿನಾಯಿತಿ ಇತ್ತು. ಇದಕ್ಕಿಂತ ಆಧುನಿಕ ವ್ಯವಸ್ಥೆಯೆಂದರೆ ಟೆಲೆಕ್ಸ್. ಟೈಪ್ ಮಾಡಿದ ರೀತಿಯಲ್ಲೇ ಅದು ಕಚೇರಿಯಲ್ಲಿ ಪ್ರತ್ಯಕ್ಷವಾಗುತ್ತಿತ್ತು. ಇವೆಲ್ಲಾ ಇಂಗ್ಲಿಷ್‍ನಲ್ಲಿ ಮಾತ್ರ ಸಾಧ್ಯವಿತ್ತು. ಬೇರೆ ಭಾಷೆಯ ಪತ್ರಿಕೆಗಳವರು ಇದನ್ನು ಅನುವಾದ ಮಾಡಬೇಕಿತ್ತು. ಸುದ್ದಿ ಸಂಸ್ಥೆಗಳ ವರದಿಗಳು ಬರುತ್ತಿದ್ದುದು ಇದೇ ಟಕ್ ಟಕ್ ಟಕ್ ಟೆಲಿಪ್ರಿಂಟರ್ ವ್ಯವಸ್ಥೆಯಲ್ಲಿಯೇ! ಇಲ್ಲವೆಂದರೆ ದೂರವಾಣಿ ಮೂಲಕ ಸುದ್ದಿ ಕೊಡಬೇಕಾಗಿತ್ತು. ಅದನ್ನು ಉಪಸಂಪಾದಕರು ಬರೆದುಕೊಂಡು ನಂತರ ತಾವೂ ತಿದ್ದಿ ಬರೆದು, ಮೊಳೆ ಜೋಡಿಸಿ ಇಲ್ಲವೇ ಡಿಟಿಪಿ ಮಾಡಿ… ಯೋಚಿಸಿ! (ಕೆಲವು ಸಲ ವರದಿಗಾರ ‘ವಿಷಯ’ ಎಂದು ಹೇಳಿದ್ದು ಉಪಸಂಪಾದಕರ ಕೈಯಲ್ಲಿ ‘ವಿಷ’ವಾಗುತ್ತಿತ್ತು!)

ಈ ಫ್ಯಾಕ್ಸ್ ವ್ಯವಸ್ಥೆಯಲ್ಲಿ ಅವರವರ ಕೈಬರಹದಲ್ಲಿಯೇ ಬರೆದ ಹಾಳೆಗಳು ತಕ್ಷಣದಲ್ಲಿ- ಅಂದರೆ ಸಮಯ ಉಳಿತಾಯದಿಂದ ಕೈಗೆ ಸಿಗುತ್ತಿದ್ದವು. ಆದರೆ, ಈ ವ್ಯವಸ್ಥೆಯಲ್ಲಿ ಕೆಲವು ದೋಷಗಳಿದ್ದವು. ಉದಾಹರಣೆಗೆ ಕೆಲವು ಸಲ ಬಂದ ಫ್ಯಾಕ್ಸ್ ಗಳು ‘ಲೈನ್’ಗೆ ಅನುಗುಣವಾಗಿ ವಿಕಾರವಾಗಿ ಇರುತ್ತಿದ್ದವು. ಕೆಲವು ಪದಗಳು ಅಸ್ಪಷ್ಟವಾಗಿ ಇರುತ್ತಿದ್ದವು. ‘ಮತ್ತೆ ಕಳಿಸಿ’ ಎಂದು ಫೋನ್ ಮಾಡಿ, ನಂತರ ತರಿಸಿದರೂ ಮತ್ತೆ ಅಸ್ಪಷ್ಟ. ಎರಡೆರಡು ಮೂರು ಮೂರು ‘ಫ್ಯಾಕ್ಸ್ ವರದಿ’ಗಳನ್ನು ಹೋಲಿಸಿ ನೋಡಿ, ಅದರಲ್ಲಿ ಇರದ್ದನ್ನು ಇದರಿಂದ ಹೆಕ್ಕಿ ವರದಿ ಸಿದ್ಧಪಡಿಸಬೇಕಾಗಿತ್ತು. ನಮ್ಮ ಉಪಸಂಪಾದಕರು (ಇಂದು ದೊಡ್ಡ ದೊಡ್ದ, ಹೆಚ್ಚು ಆಧುನಿಕವಾದ, ಆದರೆ ನ್ಯಾಯ ಮತ್ತು ವೃತ್ತಿನಿಷ್ಟೆಯಲ್ಲಿ ಹಿಂದುಳಿದಿರುವ, ಆದರೆ ತಾಂತ್ರಿಕವಾಗಿ ತುಂಬಾ ಮುಂದುವರಿದಿರುವ ವ್ಯವಸ್ಥೆಯಲ್ಲಿ ದೊಡ್ದ ದೊಡ್ದ ಜವಾಬ್ದಾರಿ ಹೊಂದಿರುವವರು) ಅದೇ ಫ್ಯಾಕ್ಸ್ ಮೆಷಿನಿನ ಮುಂದೆ ವರದಿಗಾರನ ವರದಿ ಯಾವಾಗ ಬರುತ್ತದೆ/ಬರುತ್ತದೆಯೋ ಇಲ್ಲವೋ/ಬರದಿದ್ದಲ್ಲಿ ಏನು ಮಾಡಲಿ ಎಂದು ಚಿಂತಿಸುತ್ತಾ ನಿಂತಿರುವುದು, ಚಡಪಡಿಸುವುದು ಪಕ್ಕದಲ್ಲೇ ಇದ್ದ ನನಗೆ ಅರ್ಥವಾಗುತ್ತಿತ್ತು. ಅದೇ ರೀತಿ ವರದಿಗಾರರೂ ಕೆಲವರು ‘ನಾನು ವರದಿ ಕಳಿಸದಿದ್ದರೆ ಇವರೇನು ಮಾಡುತ್ತಾರೆ?’ ಎಂಬ ಅಹಂಕಾರದಿಂದಲೋ ‘ಆಟ’ ಆಡುತ್ತಿದ್ದುದು ಕೂಡಾ ನನ್ನ ಗಮನಕ್ಕೆ ಬರುತ್ತಲೇ ಇತ್ತು. ಇದಕ್ಕೆ ಏನು ಮಾಡೋಣ? ಇದನ್ನು ನಿಯಂತ್ರಿಸುವುದು ಹೇಗೆ? ಆಡಳಿತದ ಗಮನಕ್ಕೆ ಇದು ಬಂದಿದೆಯೇ? ಅಥವಾ ಈ ಮಕ್ಕಳ ನಿಷ್ಟೆಯನ್ನು ‘ಹೊರಗಿನ ಶಕ್ತಿ’ಗಳು ನಿಯಂತ್ರಿಸುತ್ತಿವೆಯೆ? ಎಂಬ ಸಂಶಯ ನನ್ನನ್ನು ಮುಂದಾಗಿ ಕಾಡಿತು – ಮೊದಲ ಬಾರಿ ಅಲ್ಲ! ಈ ಕುರಿತು ಮುಂದೆ ಬರೆಯುವೆ.

******

ಮುದ್ರಾ ರಾಕ್ಷಸ ಮತ್ತು ಅಟ್ಟಹಾಸ!

‘ಮುಂಗಾರು’ ಪತ್ರಿಕೆಯಲ್ಲಿ ಆಗ ಉಪಸಂಪಾದರು ಬರೆದದ್ದನ್ನು ಕಂಪೋಸಿಂಗ್ ವಿಭಾಗಕ್ಕೆ ಕಳಿಸಿದರೆ, ಅದು ಅಲ್ಲಿಂದ ಕರಡು ತಿದ್ದುವವರ ವಿಭಾಗಕ್ಕೆ ಹೋಗುತ್ತದೆ. ಅಲ್ಲಿಂದ ಮತ್ತೆ ತಿದ್ದುಪಡಿಗಾಗಿ ಕಂಪೋಸಿಂಗ್ ವಿಭಾಗಕ್ಕೆ. ಆಗ ‘ಮುಂಗಾರು’ ಇತರ ಎಲ್ಲಾ ವಿಷಯಗಳಲ್ಲಿ ಗೌರವ ಪಡೆದಿದ್ದರೂ, ಸಾಕಷ್ಟು ಮುದ್ದಣ ದೋಷಗಳು ನುಸುಳುತ್ತಿದ್ದವು. ಕೆಲವೊಮ್ಮೆ ಸಂಬಳ ಸಿಗದ ಕಂಪೋಸಿಟರುಗಳು ಸಿಟ್ಟಿನಿಂದ ಬೇಕೆಂದೇ ಪ್ರೂಫ್ ತಿದ್ದದೇ, ಕರೆಕ್ಷನನ್ನು ಮುದ್ದೆ ಮಾಡಿ ಎಸೆಯುತ್ತಿದ್ದರು!

ಕರಡು ತಿದ್ದುವ ಕೆಲಸ ನಡೆಯುತ್ತಿದ್ದುದು ಒಬ್ಬರು ಬ್ರಾಹ್ಮಣ, ವಯೋವೃದ್ದ, ಹಳೆಯ ವಾಯುಸೇನೆಯ ನಿವೃತ್ತ ಸೈನಿಕರೊಬ್ಬರ ಉಸ್ತುವಾರಿಯಲ್ಲಿ! ಅತ್ಯಂತ ಖ್ಯಾತ ಕತೆಗಾರರೊಬ್ಬರ ತಮ್ಮನಾಗಿದ್ದ ಅವರು, ಪ್ರತೀ ದಿನ ಹಲವಾರು ಕಿಲೋಮೀಟರ್ ನಡೆದೇ ಕಚೇರಿಗೆ ಬಂದುಹೋಗಿ ಮಾಡುತ್ತಿದ್ದರು. ಚಾಟಿಯಂತೆ ಸಪೂರ ಉದ್ದಕ್ಕೆ ನಾರಿನಂತೆ ಇದ್ದ ಅವರ ನಾಲಗೆ ಕೂಡಾ ಚಾಟಿಯಂತೆ ಇತ್ತು. ಕರಡು ತಿದ್ದುವವರು ‘ತಿದ್ದು’ವವರಾಗಿರುವುದರಿಂದ ಉಪಸಂಪಾದಕರಿಗಿಂತ ತಾವೇ ಮೇಲು ಎಂಬ ಒಣಜಂಬ ಆ ಹಿರಿಯರಲ್ಲಿತ್ತು. ಉಪಸಂಪಾದಕರು ಏನಾದರೂ ಚಿಕ್ಕ ತಪ್ಪು ಮಾಡಿದರೆ ಕಾಪಿ ಹಿಡಿದುಕೊಂಡು ಮೇಲಿನ ಮಹಡಿಗೆ ಬಂದು ವಾಚಾಮಗೋಚರ ಬೈಯ್ಯುತ್ತಿದ್ದರು. ಹಿರಿಯ ಉಪಸಂಪಾದಕರೂ ಅವರ ನಾಲಿಗೆಗೆ ಹೆದರುತ್ತಿದ್ದರು.

ನಾನು ಕೆಲಸಕ್ಕೆ ಸೇರಿ ಕೆಲವು ವಾರಗಳಾಗಿದ್ದವಷ್ಟೇ! ನಾನು ಬರೆದ ಒಂದು ಇಂಗ್ಲಿಷ್ ಶಬ್ದವನ್ನು ಹಿಡಿದುಕೊಂಡ ಅವರು, ಮೇಲೆ ಬಂದು ನನ್ನನ್ನು ಯದ್ವಾತದ್ವಾ ಜಾಲಾಡಿಸಿದರು. ಯಕ್ಷಗಾನದ ರಾಕ್ಷಸನ ಅವತಾರವಾಗಿತ್ತು ಅವರದ್ದು! ನಾನು ಬರೆದದ್ದು ಹಳೆಯ ಇಂಗ್ಲಿಷ್ ಶಬ್ದವಾಗಿದ್ದು, ಅದು ಸರಿಯೇ ಆಗಿತ್ತು. ನನಗೆ ಸಿಟ್ಟು ಏರುತ್ತಿತ್ತು. ಆದರೆ, ಅವರ ಮಾತು “ನಿನ್ನನ್ನು ಹುಟ್ಟಿಸಿದ ತಂದೆ-ತಾಯಿ ಯಾರು? ಕಲಿಸಿದ ಗುರುಗಳು ಯಾರು!? ಅವರು ನಾಚಿಕೆಯಲ್ಲಿ ತಲೆತಗ್ಗಿಸಬೇಕು..” ಎಂದೆಲ್ಲಾ ಯಕ್ಷಗಾನ ಶೈಲಿಯಲ್ಲಿ ಹೇಳಿದಾಗ ನಾನು ಅವರ ವಯಸ್ಸು ನೋಡದೆ ಯದ್ವಾತದ್ವಾ ಬೈದುಬಿಟ್ಟು, ಅಕ್ಷರ ತಪ್ಪಿದ್ದರೆ ತಿದ್ದುವುದು ಮಾತ್ರ ನಿಮ್ಮ ಕೆಲಸ, ನಡೆಯಿರಿ ಎಂದುಬಿಟ್ಟೆ! ಎಲ್ಲರೂ ಅವರ ಗರ್ವಭಂಗವಾದದ್ದಕ್ಕೆ ಖುಶಿಪಟ್ಟರು.

ಸಂಪಾದಕರು ಬಂದಾಗ ದೂರು ಹೋಯಿತು. ನಾನು ಬರೆದದ್ದೇ ಸರಿ ಎಂದು ನಿರ್ಧಾರವಾಗಿ, ಅವರಿಗೆ ಎಚ್ಚರಿಕೆ ನೀಡಲಾಯಿತು. ಮರುದಿನ ಪತ್ರಿಕೆ ಪ್ರಕಟವಾದಾಗ ನಾನು ಬರೆದದ್ದು, ಅವರು ಹೇಳಿದ್ದು ಎರಡೂ ಪ್ರಕಟವಾಗಿರಲಿಲ್ಲ! ಅರ್ಥವೇ ಇಲ್ಲದ ಯಾವುದೊ ಪದ ಪ್ರಕಟವಾಗಿತ್ತು! ಸಿಟ್ಟು ಇಳಿಯದಿದ್ದ ನಾನು ಅದನ್ನು ಸಂಪಾದಕರ ಗಮನಕ್ಕೆ ತಂದೆ. ಅವರಿಗೆ ಇನ್ನೊಮ್ಮೆ ಅರ್ಚನೆಯಾಯಿತು. ಆ ಬಳಿಕ ಅವರೆಂದೂ ಸಂಪಾದಕೀಯ ವಿಭಾಗಕ್ಕೆ ಕಾಲಿರಿಸಲಿಲ್ಲ. ಅವರು ನನ್ನೊಂದಿಗೆ ಮಾತನಾಡುತ್ತಿರಲಿಲ್ಲ!

ಆದರೆ, ಅವರ ಮೇಲೆ ಗೌರವ ಮೂಡಿ, ನನ್ನ ಸಿಟ್ಟಿನ ವರ್ತನೆ ಬಗ್ಗೆ ನಾಚಿಕೆ ಆಗುವ ಒಂದು ಚಿಕ್ಕ ಘಟನೆ ನಡೆಯಿತು. ನನ್ನದೊಂದು ಬರಹ ಪ್ರಕಟವಾಗಿತ್ತು. ಕ್ಯಾಂಟೀನ್‍ನಿಂದ ಬರುತ್ತಾ, ಎದುರು ಸಿಕ್ಕಿದ ಈ ಹಿರಿಯರು, “ನಿಮ್ಮ ಬರಹ ಓದಿದೆ. ಯೂ ಆರ್ ವೆರಿ ಟ್ಯಾಲೆಂಟೆಡ್! ಕೀಪ್ ಇಟ್ ಅಪ್” ಎಂದರು. ನಾನು ನನ್ನ ವರ್ತನೆಗೆ ಕ್ಷಮೆ ಕೇಳಿದೆ. ಅಲ್ಲಿಂದ ನನ್ನ ಅಹಂಕಾರ ಬಹುತೇಕ ನಿಯಂತ್ರಣದಲ್ಲಿದೆ. ಮುಂದೆ ‘ಜನವಾಹಿನಿ’ಯಲ್ಲೂ ಈ ಮುದ್ರಾ ರಾಕ್ಷಸ ಕಾಟ ಕೊಡುತ್ತಿದ್ದುದರಿಂದ ಇದು ನೆನಪಾಯಿತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...