Homeಮುಖಪುಟ'ಮುಂಗಾರು’ ಪತ್ರಿಕೆಯ ಹಾದಿಯಲ್ಲೇ ಹೆಜ್ಜೆಹಾಕಿದ ‘ಜನವಾಹಿನಿ’...

‘ಮುಂಗಾರು’ ಪತ್ರಿಕೆಯ ಹಾದಿಯಲ್ಲೇ ಹೆಜ್ಜೆಹಾಕಿದ ‘ಜನವಾಹಿನಿ’…

ಪ್ರತೀ ವಾರ ಹಾಸ್ಯ ಲೇಖನ ಪ್ರಕಟವಾಗುವ ಜಾಗವನ್ನು ಖಾಲಿ ಬಿಟ್ಟು ಹೀಗೆ ಪ್ರಕಟಿಸಲಾಗಿತ್ತಂತೆ- ‘ದೇಶವು ಸಂಕಷ್ಟ ಸ್ಥಿತಿಯಲ್ಲಿದ್ದು, ಹಾಸ್ಯಕ್ಕಿದು ಕಾಲವಲ್ಲ!’

- Advertisement -
- Advertisement -

ಜನವಾಹಿನಿಯ ನೆನಪುಗಳು-11 : ನಿಖಿಲ್ ಕೋಲ್ಪೆ
ಕೃಪೆ: ‘ಆರ್ಸೋ’ ಕೊಂಕಣಿ ಪತ್ರಿಕೆ

ಆದರ್ಶವಾದ, ನ್ಯಾಯಪರತೆ, ಜನಪರತೆಯ ವಿಷಯದಲ್ಲಿ ‘ಮುಂಗಾರು’ ಹಾಕಿಕೊಟ್ಟ ಹಾದಿಯಲ್ಲೇ ‘ಜನವಾಹಿನಿ’ ನಡೆಯುತ್ತಿತ್ತು. ಈ ಎರಡು ಪತ್ರಿಕೆಗಳಿಗೆ ಇದ್ದ ಸಾಮ್ಯ ಮತ್ತು ಭಿನ್ನತೆಗಳಿಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ಕಳೆದ ಸಂಚಿಕೆಯಲ್ಲಿ ನೋಡಿದ್ದೆವು. ಮುಖ್ಯವಾಗಿ ಭಿನ್ನತೆ ಇದ್ದದ್ದು ತಾಂತ್ರಿಕ ವಿಭಾಗದಲ್ಲಿ. ಈ ಕುರಿತು ಈಗ ನೋಡೋಣ.

‘ಜನವಾಹಿನಿ’ಯ ತಾಂತ್ರಿಕ ಶ್ರೇಷ್ಟತೆಯ ಬಗ್ಗೆ ಹಿಂದೆ ಬರೆದಿದ್ದೆ. ‘ಮುಂಗಾರು’ ಈ ವಿಷಯದಲ್ಲಿ ತನ್ನ ಕಾಲಕ್ಕಿಂತಲೂ ಸ್ವಲ್ಪ ಹಿಂದೆಯೇ ಇತ್ತು. ‘ಜನವಾಹಿನಿ’ಯ ಸಿಬ್ಬಂದಿ ಆಯ್ಕೆ ಪ್ರಕ್ರಿಯೆಯ ಬಗ್ಗೆ ನೀವಿಲ್ಲಿ ಓದಿದ್ದಿರಿ. ‘ಮುಂಗಾರು’ವಿನಲ್ಲಿ ನನ್ನ ಆಯ್ಕೆ ಪ್ರಕ್ರಿಯೆ ಬಗ್ಗೆ ಇಲ್ಲಿ ಸ್ವಲ್ಪ ಬರೆದರೆ ಅಪ್ರಸ್ತುತ ಆಗಲಾರದು ಎಂದು ಭಾವಿಸುವೆ.

ಪತ್ರಿಕೆ ಆರಂಭವಾದಾಗ ವಡ್ಡರ್ಸೆ ರಘುರಾಮ ಶೆಟ್ಟಿಯವರು ಬೆಂಗಳೂರಿನಿಂದ ಇಂದೂಧರ ಹೊನ್ನಾಪುರ ಮುಂತಾದ ಘಟಾನುಘಟಿಗಳನ್ನು ಜೊತೆಗೆ ತಂದಿದ್ದರು. ಆಗ ದಿನೇಶ್ ಅಮೀನ್ ಮಟ್ಟು, ಟಿ.ಕೆ. ತ್ಯಾಗರಾಜ್ ಮುಂತಾದ ಈಗ ಪ್ರಸಿದ್ಧರಾಗಿರುವ ಪತ್ರಕರ್ತರೂ ಇದ್ದರು. ಆ ಬಗ್ಗೆ ನನಗೆ ನಂತರ ತಿಳಿದದ್ದು. ನಾನು ಮುಂಬಯಿಯಿಂದ ಬಂದಾಗ ನನ್ನ ದೊಡ್ಡಪ್ಪ ಎಸ್. ಬಿ. ಕೋಲ್ಪೆಯವರು ತಮ್ಮ ಶಿಷ್ಯ ವಡ್ಡರ್ಸೆಯವರಿಗೆ ಒಂದು ಪತ್ರ ಕೊಟ್ಟಿದ್ದರು. ಆಗ ನನಗೆ ಇಂಗ್ಲೀಷ್ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವವಿತ್ತು. ಜೊತೆಗೆ ಮುಂಬಯಿಯಲ್ಲಿ ಕೆ.ಟಿ ವೇಣುಗೋಪಾಲ್, ಈಶ್ವರ ಅಲೆಯೂರು, ಭರತಕುಮಾರ ಪೊಲಿಪು, ಶ್ರೀನಿವಾಸ ಜೋಕಟ್ಟೆ ಮುಂತಾದವರು ಇದ್ದ, ಸ್ವಲ್ಪ ಕಾಲ ಯಶಸ್ವಿಯಾಗಿಯೇ ನಡೆದ ‘ಮುಂಬಯಿವಾಣಿ’ ಎಂಬ ವಾರಪತ್ರಿಕೆಯಲ್ಲಿ ಕಾರ್ಯನಿರ್ವಾಹಕ ಸಂಪಾದಕ(!)ನಾಗಿಯೂ ಕೆಲಸ ಮಾಡಿದ್ದೆ!

ನಾನು ಅಲೆವೂರು ಅವರ ಜೊತೆ ಬಂಟ್ಸ್ ಹಾಸ್ಟೆಲ್ ಬಳಿ ಇದ್ದ ‘ಮುಂಗಾರು’ ನಗರ ಕಚೇರಿಗೆ ಹೋಗಿ ಆಗ ವರದಿಗಾರರಾಗಿದ್ದ ಚಿದಂಬರ ಬೈಕಂಪಾಡಿಯವರಿಗೆ ಪತ್ರ ತೋರಿಸಿದೆ. ಈಗ ವಡ್ಡರ್ಸೆಯವರು ಕಚೇರಿಗೆ ಬರುವುದು ಕಡಿಮೆ ಎಂದರವರು. (ಆಗ ಪತ್ರಿಕೆ ಬಿಕ್ಕಟ್ಟು ಎದುರಿಸುತ್ತಿತ್ತು). ವೈ.ಎಂ. ಹೆಗ್ಡೆಯವರ ಉಸ್ತುವಾರಿಯಲ್ಲಿ ಪತ್ರಿಕೆ ನಡೆಯುತ್ತಿತ್ತು. ಚಿದಂಬರ ಅವರ ಮನೆಗೆ ಫೋನ್ ಮಾಡಿ, ನಾನು ಬಂದಿರುವ ವಿಷಯ ತಿಳಿಸಿದರು. ಅವರೂ ಕೋಲ್ಪೆಯವರ ಶಿಷ್ಯ. ನನ್ನ ಹೆಸರು ಕೇಳಿ, ನಾನವರಿಗೆ ಸಂಬಂಧವೇ ಎಂದು ಕೇಳಿದರು. ಹೌದೆಂದಾಗ ತಕ್ಷಣ ಮನೆಗೆ ಕಳಿಸಿ ಎಂದರು. ಹಾಗೆ ಹೋದಾಗ ಅವರು ಹೇಳಿದ್ದು- “I owe him so much!”. ಆದರೆ, ಇಲ್ಲಿ ಶಿಫಾರಸ್ಸು ನಡೆಯುವುದಿಲ್ಲ. ಇಲ್ಲಿ ಸಂಬಳ ಕಡಿಮೆ. ನಿಮಗೆ ಅರ್ಹತೆ ಇದ್ದರೆ, ಕೆಲಸ ಕೊಡುತ್ತೇನೆ. ನಾಳೆ ಕಚೇರಿಗೆ ಬಂದು ಪರೀಕ್ಷೆ ಬರೆಯಿರಿ!”

ಮರುದಿನ ಕಚೇರಿಗೆ ಹೋದಾಗ ಸುದ್ದಿ ಸಂಪಾದಕ ಮಂಜುನಾಥ ಭಟ್ಟರಲ್ಲಿ, ಇವರಿಗೆ ಒಂದೆರಡು ಕಾಪಿ ಕೊಡಿ ನೋಡೋಣ ಎಂದರು. ಭಟ್ಟರು ಒಂದೆರಡಲ್ಲ ಹತ್ತು ಕಾಪಿ ಕೊಟ್ಟರು! ವಿಜ್ಞಾನ, ರಾಜಕೀಯ, ವಿಚಿತ್ರ ಸುದ್ದಿಗಳು ಎಲ್ಲವೂ ಇದ್ದವು! ಡೆಸ್ಕಿನಲ್ಲಿ ಜನರ ಕೊರತೆ ಇದೆ ಎಂದು ತಕ್ಷಣ ನನಗೆ ಗೊತ್ತಾಯಿತು. ಅನುವಾದಿಸಿ ಕೊಟ್ಟೆ. ಪತ್ರದ ಮೂಲಕ ಫಲಿತಾಂಶ ತಿಳಿಸುವುದಾಗಿ ಹೇಳಲಾಯಿತು. ನನಗೆ ಆತಂಕ. ಮರುದಿನ ಬೆಳಿಗ್ಗೆ ಪೇಟೆಗೆ ಓಡಿ ಪತ್ರಿಕೆ ನೋಡಿದೆ. ನಾನು ಅನುವಾದಿಸಿದ ಎಲ್ಲವೂ ಯಥಾವತ್ ಪ್ರಕಟವಾಗಿದ್ದವು. ಬರೆದದ್ದು ಸರಿಯಾಗಿದೆ; ಕೆಲಸ ಗ್ಯಾರಂಟಿ ಎಂದಾಯಿತು! ಹಾಗೆಯೇ ಆಯಿತು!

ಮುಂಬಯಿಯಲ್ಲಿ ನನಗೆ ಮೊಳೆ ಜೋಡಿಸುವ ಪದ್ಧತಿಯ ಟ್ರೆಡಲ್ ಮೆಷಿನ್‍ನಿಂದ ಹಿಡಿದು, ಸೀಸ ಕರಗಿಸಿ ಟೈಪ್ ಮಾಡಿ ಅಚ್ಚು ತಯಾರಿಸುವ ಲೈನೋ ಟೈಪ್, ವ್ಯಾಕ್ಯೂಂ ಮೂಲಕ ಕಾಗದ ಫೀಡ್ ಮಾಡುವ ಮರ್ಸಿಡಿಸ್ ಮುದ್ರಣ ಯಂತ್ರ ಇತ್ಯಾದಿಗಳು ಪರಿಚಯವಾಗಿದ್ದವು. ಆಗ ಫೊಟೋ ಪ್ರಕಟಿಸುವುದಿದ್ದರೆ, ಬ್ಲಾಕ್ ಮಾಡಿಸಬೇಕಾಗಿತ್ತು. ಇದಕ್ಕೆ ಖರ್ಚು, ಸಮಯ ಎರಡೂ ತಗಲುತ್ತಿದ್ದವು. ಅದೇ ಬ್ಲಾಕುಗಳನ್ನು ಮತ್ತೆ ಮತ್ತೆ ಬಳಸಬೇಕಾಗಿತ್ತು. ನಿತ್ಯ ಬರುವ ಫೊಟೋಗಳವರು ಚಿರಯೌವನಿಗರಾಗಿಯೇ ಇರುತ್ತಿದ್ದರು- ಹೊಸ ಬ್ಲಾಕ್ ಮಾಡಿಸುವ ತನಕ! ನಂತರ ಫೊಟೋ ಕಂಪೋಸಿಂಗ್, ಲೇಸರ್ ಪ್ರಿಂಟ್, ಡಿಟಿಪಿ, ಆಫ್‍ಸೆಟ್ ಮುದ್ರಣ ಎಲ್ಲಾ ಪರಿಚಯವಾಗಿತ್ತು.

ಅರ್ಥಪೂರ್ಣವಾದ ಮುಂಗಾರು ಸಂಕೇತ

ಅದರೆ, ‘ಮುಂಗಾರು’ ಸೇರಿದಾಗ ಅಲ್ಲಿದ್ದ ತಂತ್ರಜ್ಞಾನ ನನಗೆ ಪರಿಚಯ ಇದ್ದುದಕ್ಕಿಂತ ಕೆಲವು ವರ್ಷ ಹಳೆಯದಾಗಿತ್ತು. ‘ಬಂಧು’ ಎಂಬ ಕಂಪೆನಿಯ ವೆಬ್ ಆಫ್‍ಸೆಟ್ ಎಂಬ ಯಂತ್ರವಿತ್ತಾದರೂ, ಕಂಪ್ಯೂಟರ್‌ಗಳು ಲಭ್ಯವಿದ್ದರೂ, ವಡ್ಡರ್ಸೆಯವರು ಹೆಚ್ಚು ಕಾರ್ಮಿಕರಿಗೆ ಕೆಲಸಕೊಡುವ ಅದರ್ಶವಾದದ ಬೆನ್ನುಹತ್ತಿ ಪ್ರವಾಹದ ವಿರುದ್ಧ ಈಜಿದರು. ಮೊಳೆ ಜೋಡಿಸುವ ಪದ್ಧತಿಯನ್ನೇ ಅನುಸರಿಸಿದರು. ಇದುವೇ ಮುಂದೆ ನಷ್ಟ, ಮುಷ್ಕರ ಇತ್ಯಾದಿಗಳಿಗೆ ಕಾರಣವಾಯಿತು. ಕಂಪ್ಯೂಟರ್ ಬಳಸಿದ್ದರೆ, ಕಡಿಮೆ ಜನ ಮತ್ತು ಖರ್ಚಿನಲ್ಲಿ ಪತ್ರಿಕೆ ತರಬಹುದಾಗಿತ್ತು.

ಅಲ್ಲಿದ್ದ ವ್ಯವಸ್ಥೆಯ ಪ್ರಕಾರ ಪಿಟಿಐಯ ಟೆಲಿಪ್ರಿಂಟರ್‌ನಲ್ಲಿ ಬರುತ್ತಿದ್ದ ಸುದ್ದಿಗಳನ್ನು ಎಟೆಂಡರ್‌ಗಳು ಕತ್ತರಿಸಿ ಜೋಡಿಸಿ ಡೆಸ್ಕುಗಳಿಗೆ ಕೊಡುತ್ತಿದ್ದರು. ಅಲ್ಲಿ ಡೆಸ್ಕ್ ಮುಖ್ಯಸ್ಥರು ಸುದ್ದಿಗಳನ್ನು ಉಪ ಸಂಪಾದಕರಿಗೆ ಹಂಚುತ್ತಿದ್ದರು. ಅವರು ಅದನ್ನು ಅನುವಾದಿಸಿ, ಮರಳಿಸಿದ ಮೇಲೆ ಮುಖ್ಯಸ್ಥರು, ಅಥವಾ ಸುದ್ದಿ ಸಂಪಾದಕರು ಅದನ್ನು ನೋಡಿ, ಶೀರ್ಷಿಕೆ ಕೊಟ್ಟು ಮೊಳೆ ಜೋಡಿಸಲು ಕಳಿಸುತ್ತಿದ್ದರು. ಅಲ್ಲಿಂದ ಪ್ರೂಫ್ ರೀಡಿಂಗ್, ಕರೆಕ್ಷನ್ ಎಲ್ಲಾ ಮುಗಿದ ಮೇಲೆ ಪುಟ ಕಟ್ಟಿ ಹಳೆ ಕಾಲದ ಟ್ರೆಡಲ್ ಮೆಷಿನ್‍ನಲ್ಲಿ ಬಟರ್ ಪೇಪರ್ ಮೇಲೆ ರಿವರ್ಸ್ ಪ್ರಿಂಟ್ ತೆಗೆದು, ನೆಗೆಟಿವ್ ಮಾಡಿ, ಟಚ್ ಅಪ್ ಮಾಡಿ, ಪಾಸಿಟಿವ್ ಮಾಡಿ, ಪ್ಲೇಟು ಮಾಡಿ ಆಫ್‍ಸೆಟ್ ಮುದ್ರಣ ನಡೆಯುತ್ತಿತ್ತು. ಸ್ಥಳೀಯ ಸುದ್ದಿಗಳು ಬಸ್ ಪಾರ್ಸೆಲ್‍ಗಳಲ್ಲೋ, ಅಂಚೆಯಲ್ಲೋ ಬರುತ್ತಿದ್ದವು, ನಮ್ಮದೇ ವರದಿಗಾರರು ಕಳಿಸಿದ್ದು ಬಿಟ್ಟರೆ, ಉಳಿದವರು ಕಳಿಸುವ ರಾಮಾಯಣ ಕತೆಗಳನ್ನು, ಒಗಟಿನ ವರದಿಗಳನ್ನು ತಿದ್ದುವುದೇ ಗ್ರಾಮೀಣ ವಿಭಾಗದವರ ತಲೆಬಿಸಿಯ ಕೆಲಸವಾಗಿತ್ತು!

ಸ್ಥಾಪಕ ಸಂಪಾದಕ ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿ

ಫ್ಯಾಕ್ಸ್-ಗೀಕ್ಸ್ ಏನೂ ಇರಲಿಲ್ಲ. ಮೊಬೈಲ್, ಇಂಟರ್‍ನೆಟ್ ಎಲ್ಲಾ ಎಲ್ಲೋ ವಿದೇಶಗಳಲ್ಲಿ ಇವೆ ಎಂದು ಕೇಳುತ್ತಿದ್ದ ವಿಷಯವಾಗಿತ್ತು. ಏನಾದರೂ ತುರ್ತು ಸುದ್ದಿ ಇದ್ದರೆ ಫೋನ್ ಮೂಲಕ ಕೊಡಲಾಗುತ್ತಿತ್ತು! ಹೀಗಿದ್ದರೂ ‘ಮುಂಗಾರು’ ವೃತ್ತಿಪರತೆಯಲ್ಲಿ ಹಿಂದೆಬಿದ್ದಿರಲಿಲ್ಲ! ಸೀಮಿತ ಅವಕಾಶದಲ್ಲಿಯೂ ಹಲವರು ಹಲವಾರು ಪ್ರಯೋಗಗಳನ್ನು ಪುಟವಿನ್ಯಾಸದಲ್ಲಿ ನಡೆಸಿದ್ದರು.

‘ಮುಂಗಾರು’ ಸ್ವಂತ ಛಾಯಾಚಿತ್ರಗಾರರನ್ನು ಹೊಂದಿತ್ತು. ಇಲ್ಲಿ ಕೃಪಾಕರ್ ಅವರು ಕೆಲಸ ಮಾಡಿದ್ದರು ಎಂದು ಕೇಳಿದ್ದೇನೆ. ಅವರ ಹಕ್ಕಿಯ ಚಿತ್ರವೊಂದು ಮತ್ತು ದಿವಂಗತ ಕೇಶವ ವಿಟ್ಲ ಅವರ ಚಿತ್ರವೊಂದು ಬಹಳ ಕಾಲ ನಮ್ಮ ಲೈಬ್ರರಿಯಲ್ಲಿ ಇದ್ದವು.

‘ಮುಂಗಾರು’ ಸ್ವಂತ ವ್ಯಂಗ್ಯಚಿತ್ರಗಾರರನ್ನೂ ಹೊಂದಿತ್ತು. ಬಹುಶಃ ಪಂಜು ಗಂಗೊಳ್ಳಿಯವರು ಮತ್ತು ಸಂಗೀತಗಾರ ವಿ. ಮನೋಹರ್ ಅವರು ಇಲ್ಲಿ ಕೆಲಸ ಮಾಡಿದ್ದರೆಂದು ಕೇಳಿದ್ದೇನೆ. ಪ್ರಕಾಶ್ ಶೆಟ್ಟಿಯವರ ವ್ಯಂಗ್ಯಚಿತ್ರಗಳಂತೂ ಜನಪ್ರಿಯವಾಗಿದ್ದವು. ನಾನು ಸೇರಿದಾಗ ಅವರೆಲ್ಲಾ ಬಿಟ್ಟುಹೋಗಿದ್ದರು. ಆಗ ಇದ್ದವರು ಮತ್ತು ಅಗಾಧವಾಗಿ ಬೆಳೆದವರು ಗೆಳೆಯ ಪಿ. ಮಹಮ್ಮದ್ ಅವರು.

‘ಮುಂಗಾರು’ ಪತ್ರಿಕೆಯಲ್ಲಿ ಒಂದು ಸಾಕಷ್ಟು ಒಳ್ಳೆಯ ಲೈಬ್ರೆರಿ ಕೂಡಾ ಇತ್ತು. ವಿಮರ್ಶೆಗೆ ಬಂದ ಪುಸ್ತಕಗಳು ಇಲ್ಲಿ ಸೇರ್ಪಡೆಯಾಗುತ್ತಿದ್ದವು. ಈಗ ಪ್ರಸಿದ್ಧ ಕತೆ, ಕಾದಂಬರಿಗಾರ್ತಿಯಾಗಿರುವ ಎಚ್. (ಹೊನ್ನಕಟ್ಟೆ?) ನಾಗವೇಣಿಯವರು ಇಲ್ಲಿ ಕೆಲಸ ಮಾಡಿದ್ದರಂತೆ. ಅವರು ನೀಟಾಗಿ ಇಂಡೆಕ್ಸ್ ಮಾಡಿ ಜೋಡಿಸಿದ್ದ ಪೇಪರ್ ಕಟ್ಟಿಂಗ್‍ಗಳು, ಪೋಟೋ ಪಾಸಿಟಿವ್‍ಗಳು ನಮಗೆ ತುಂಬಾ ಉಪಯೋಗಕ್ಕೆ ಬಂದಿದ್ದವು.

‘ಮುಂಗಾರು’ ಮತ್ತು ‘ಜನವಾಹಿನಿ’ಗೆ ಒಂದು ವಿಷಯದಲ್ಲಿ ತುಂಬಾ ವ್ಯತ್ಯಾಸವಿತ್ತು. ಅದೆಂದರೆ ಸಂಬಳದ ವಿಷಯ. ನಾನು ಸೇರಿದ ಕಾಲಕ್ಕೆ ‘ಮುಂಗಾರು’ ಆರ್ಥಿಕ ಸಂಕಷ್ಟದಲ್ಲಿತ್ತು. ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಡಾ. ಚಂದ್ರಶೇಖರ ಚೌಟ ಅವರು ಪತ್ರಿಕೆ ನಡೆಸಲು ಪರದಾಡುತ್ತಿದ್ದರು. ಕೆಲವೊಮ್ಮೆ ನ್ಯೂಸ್‍ಪ್ರಿಂಟಿಗೂ ತತ್ವಾರ! 750, 800 ರೂ. ಸಂಬಳ. ಕಡಿಮೆ ಸಂಬಳವೂ ಸಮಯಕ್ಕೆ ಸರಿಯಾಗಿ ಸಿಗುತ್ತಿರಲಿಲ್ಲ. ಕೆಲವೊಮ್ಮೆ ಕಂತಿನಲ್ಲಿ ಸಂಬಳ! ಒಮ್ಮೆ ಎರಡು ರೂ. ನೋಟುಗಳಲ್ಲಿ, ಒಮ್ಮೆ ಒಂದು ರೂ. ಪಾವಲಿಯಲ್ಲಿ ಸಂಬಳವಾದದ್ದೂ ಇದೆ! ಇವರೇನು ದೇವಸ್ಥಾನದ ಕಾಣಿಕೆಡಬ್ಬಿ ಕದಿಯುತ್ತಾರೋ ಎಂದು ನಾವು ವ್ಯಂಗ್ಯವಾಡಿದ್ದೆವು. ಇದಕ್ಕಾಗಿ ಸಂಘರ್ಷವೂ ನಡೆಯುತ್ತಿತ್ತು.

‘ಜನವಾಹಿನಿ’ಯಲ್ಲಿ ಸಮಯಕ್ಕೆ ಸರಿಯಾಗಿ ಸಂಬಳ ನಮ್ಮ ಬ್ಯಾಂಕ್ ಖಾತೆಗೆ ಬೀಳುತ್ತಿತ್ತು. ಬೇಕಾದರೆ ಮುಂಗಡ ಕೂಡಾ ಸಿಗುತ್ತಿತ್ತು. ಮುಂದೆ ನಾನು ಕೆಲಸ ಬಿಟ್ಟ ನಂತರ ‘ಮುಂಗಾರು’ವಿನ ಪರಿಸ್ಥಿತಿ ‘ಜನವಾಹಿನಿ’ಗೂ ಬಂತೆಂದು ಕೇಳಿದ್ದೇನೆ. ಹೇಗಿದ್ದ ಪತ್ರಿಕೆಯನ್ನು ಕೆಲವು ಸ್ವಾರ್ಥಿಗಳು ಎಂತಹ ಸ್ಥಿತಿಗೆ ತಂದು ಕೊಂದರೆಂದು ಯೋಚಿಸಿದರೆ ದುಃಖವಾಗುತ್ತದೆ!

ಹಾಸ್ಯಕ್ಕಿದು ಕಾಲವಲ್ಲ!

‘ಮುಂಗಾರು’ ಪತ್ರಿಕೆಯಲ್ಲಿ ದೊಡ್ಡ ಸಮಸ್ಯೆ ಎಂದರೆ ಉತ್ತಮ ಲೇಖನ, ಅದರಲ್ಲೂ ಹಾಸ್ಯ ಬರಹಗಳ ಕೊರತೆ. ಓದುಗರಿಂದ ಬರಹಗಳು ಬರದಿದ್ದಾಗ ಉಪಸಂಪಾದಕರುಗಳೇ ಒಂದು ಕೈ ತೋರಿಸುತ್ತಿದ್ದರು! ಮುಂದೆ ನಾನು ಮ್ಯಾಗಜಿನ್ ವಿಭಾಗದ ಉಸ್ತುವಾರಿ ವಹಿಸಿಕೊಂಡಾಗ ಇದು ಸರಿಯಾಗಿ ಅನುಭವಕ್ಕೆ ಬಂತು!

ನಾನು ಸೇರುವ ಬಹಳ ಮೊದಲು ಒಂದು ಘಟನೆ ನಡೆಯಿತಂತೆ! ಅದು ಇಂದಿರಾ ಗಾಂಧಿಯವರು ಹತ್ಯೆಗೀಡಾದ ವಾರವಂತೆ. ಮ್ಯಾಗಜಿನ್ ವಿಭಾಗಕ್ಕೆ ಹಾಸ್ಯ ಲೇಖನ ಒಂದೂ ಬಂದಿರಲಿಲ್ಲ. ತಕ್ಷಣಕ್ಕೆ ಹಾಸ್ಯ ಲೇಖನ ಬರೆಯುವುದು ಸುಲಭವಲ್ಲ! ಏನು ಮಾಡುವುದು?!

ಪ್ರತೀ ವಾರ ಹಾಸ್ಯ ಲೇಖನ ಪ್ರಕಟವಾಗುವ ಜಾಗವನ್ನು ಖಾಲಿ ಬಿಟ್ಟು ಹೀಗೆ ಪ್ರಕಟಿಸಲಾಗಿತ್ತಂತೆ- ‘ದೇಶವು ಸಂಕಷ್ಟ ಸ್ಥಿತಿಯಲ್ಲಿದ್ದು, ಹಾಸ್ಯಕ್ಕಿದು ಕಾಲವಲ್ಲ!’

ಆಗ ‘ಮುಂಗಾರು’ ಪತ್ರಿಕೆಯಲ್ಲಿ ಎಂತೆಂತಹ ‘ಪ್ರಚಂಡ’ರು ಇದ್ದಿರಬಹುದು ಎಂಬುದನ್ನು ನೆನಪಿಸಲು ಇದನ್ನು ಬರೆಯುತ್ತಿದ್ದೇನೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...