ಜಾರ್ಖಂಡ್ ರಾಜ್ಯದ 81 ವಿಧಾನಸಭಾ ಕ್ಷೇತ್ರಗಳಿಗೆ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಮಹಾರಾಷ್ಟ್ರ ಹರಿಯಾಣದಲ್ಲಿ ಪ್ರಯಾಸಕರ ಗೆಲುವು ಸಾಧಿಸಿ, ಸರ್ಕಾರ ರಚಿಸಲು ಒದ್ದಾಡುತ್ತಿರುವ ಬಿಜೆಪಿ ಪಾಲಿಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮತ್ತಷ್ಟು ಹುರುಪಿನಿಂದ ಹೋರಾಡಲು ಸಜ್ಜುಗೊಂಡಿವೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಆರೋರ ಚುನಾವಣಾ ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬರಲಿದೆ. ಈ ಬಾರಿಯ ಚುನಾವಣೆಯಲ್ಲಿ ಶೇಕಡ 20ರಷ್ಟು ಮತ ಕೇಂದ್ರಗಳನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.
ಮೊದಲ ಹಂತದ ಚುನಾವಣೆ ನವೆಂಬರ್ 30, ಎರಡನೇ ಹಂತದ ಚುನಾವಣೆ ಡಿಸೆಂಬರ್ 7, ಮೂರನೇ ಹಂತದ ಚುನಾವಣೆ ಡಿಸೆಂಬರ್ 12, ನಾಲ್ಕನೇ ಹಂತದ ಚುನಾವಣೆ ಡಿಸೆಂಬರ್ 16, ಐದನೇ ಮತ್ತು ಕೊನೆಯ ಹಂತದ ಚುನಾವಣೆ ಡಿಸೆಂಬರ್ 20ರಂದು ನಡೆಯಲಿದೆ. ಡಿಸೆಂಬರ್ 23ರಂದು ಮತಯಂತ್ರಗಳ ಎಣಿಕೆ ನಡೆಯಲಿದೆ ಎಂದರು.
ಚುನಾವಣೆಯಲ್ಲಿ ಸೂಕ್ತ ಭದ್ರತೆ ಕಲ್ಪಿಸಲಾಗುವುದು. 19 ಕ್ಷೇತ್ರಗಳು ನಕ್ಸಲ್ ಬಾಧಿತ ಪ್ರದೇಶಗಳೆಂದು ಗುರುತಿಸಲಾಗಿದ್ದು, ಅಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
2014ರ ಚುನಾವಣೆಯಲ್ಲಿ 81 ಕ್ಷೇತ್ರಗಳಲ್ಲಿ ಬಿಜೆಪಿ 37 ಹಾಗೂ ಎಜೆಎಸ್ ಯು-5 ಸ್ಥಾನ ಗಳಿಸಿ ಎರಡೂ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಯಾಗಿತ್ತು.ಬಿಜೆಪಿಯ ರಘುಬರ್ ದಾರ್ ಮುಖ್ಯಮಂತ್ರಿಯಾಗಿದ್ದಾರೆ. ಅವರ ಅವಧಿ ಜನವರಿ ಮೊದಲ ವಾರದವರೆಗೆ ಇದೆ. ಆದರೂ ಅವಧಿಪೂರ್ವವಾಗಿ ಚುನಾವಣೆ ಘೋಷಿಸಲಾಗಿದೆ.


