ಎಚ್‌ಡಿ ಕುಮಾರಸ್ವಾಮಿ ಕೇಂದ್ರ ಸಚಿವ ಆಗುತ್ತಿದ್ದಂತೆಯೇ ಜಾತ್ಯತೀತ ಜನತಾದಳ (ಜೆಡಿಎಸ್) ಶಾಸಕರುಗಳನ್ನೇ ಕಡೆಗಣಿಸಿದ್ದಾರೆ. ನಮ್ಮ ನೋವು ಕುಮಾರಸ್ವಾಮಿ ಅವರಿಗೆ ಮುಂದೆ ಅರ್ಥವಾಗಲಿ ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
“ಕೇಂದ್ರ ಸಚಿವ ಕುಮಾರಸ್ವಾಮಿ ಇದೇ ರೀತಿ ನಡೆದುಕೊಂಡರೆ ಜೆಡಿಎಸ್ ಇನ್ನಷ್ಟು ಶಾಸಕರುಗಳನ್ನು ಕಳೆದುಕೊಳ್ಳಲಿದೆ. ನಮ್ಮ ನೋವು ಕುಮಾರಸ್ವಾಮಿ ಅವರಿಗೆ ಮುಂದೆ ಅರ್ಥವಾಗಲಿ” ಎಂದಿದ್ದಾರೆ.
“ಕುಮಾರಸ್ವಾಮಿ ಕೇಂದ್ರ ಸಚಿವ ಆಗುತ್ತಿದ್ದಂತೆಯೇ ಜೆಡಿಎಸ್ ಶಾಸಕರುಗಳನ್ನೇ ಕಡೆಗಣಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೀಗೆ ಮುಂದುವರೆದರೆ, ಇದರ ಪರಿಣಾಮ ಅವರೇ ಎದುರಿಸಬೇಕಾಗುತ್ತದೆ. ಈಗಾಗಲೇ ಕಾಂಗ್ರೆಸ್ ಪಕ್ಷ ಜೆಡಿಎಸ್ ಶಾಸಕರುಗಳಿಗೆ ಗಾಳ ಹಾಕುತ್ತಿದೆ; ಇದರಲ್ಲಿ ನಾನೂ ಒಬ್ಬ” ಎಂದು ಅವರು ‘ಆಪರೇಷನ್ ಹಸ್ತ’ದ ಎಚ್ಚರಿಕೆ ನೀಡಿದ್ದಾರೆ.
‘ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುತ್ತಾರೆ’ ಎಂಬ ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಕಾಂಗ್ರೆಸ್ ಸೇರುವಂತೆ, ದೊಡ್ಡ ದೊಡ್ಡ ನಾಯಕರಿಂದಲೇ ನೇರ ಆಹ್ವಾನ ಬಂದಿದೆ. ನಾನು ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿಲ್ಲ, ಸದ್ಯಕ್ಕೆ ಜೆಡಿಎಸ್ ಪಕ್ಷದಲ್ಲಿ ಇದ್ದೇನೆ” ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದ್ದಾರೆ.
ನೇರವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಮಂಜುನಾಥ್, “ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕರುಗಳನ್ನೆ ಕಡೆಗಣಿಸುತ್ತಿದ್ದಾರೆ. ಸೋತವರೇ ಅವರ ಹಿಂಬಾಲಕರಾಗಿದ್ದಾರೆ. ನಮ್ಮ ಸ್ವಂತ ಬಲದಿಂದ ಶಾಸಕರಾದರೂ ನಮ್ಮ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ಇದೇ ಮುಂದುವರಿದರೆ ಜೆಡಿಎಸ್ ಇನ್ನಷ್ಟು ಶಾಸಕರುಗಳನ್ನು ಕಳೆದುಕೊಳ್ಳಲಿದೆ” ಎಂದು ಸಮೃದ್ಧಿ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ; ಸಾರಿಗೆ ನೌಕರರಿಗೆ ಸಿಗದ ಕೊರೊನಾ ಪರಿಹಾರ – ಸರ್ಕಾರದ ನಡೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ


