ಭಾರೀ ರಾಜಕೀಯ ಕುತೂಹಲಕ್ಕೆ ಕಾರಣವಾಗಿದ್ದ ಮಂಡ್ಯ ನಗರಸಭಾ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ. ಇಂದು (ಆ.28) ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಗಳು ಜೆಡಿಎಸ್ ಪಾಲಾಗಿದೆ.
ಕಾಂಗ್ರೆಸ್ ನಾಯಕ ಹಾಗೂ ಸಚಿವ ಚೆಲುವರಾಯಸ್ವಾಮಿ ಮತ್ತು ಜೆಡಿಎಸ್‌ನ ನಾಯಕ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮಂಡ್ಯ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ನಾಗೇಶ್ ಆಯ್ಕೆಯಾದರೆ, ಉಪಾಧ್ಕಕ್ಷರಾಗಿ ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ.
ಚುನಾವಣೆಗೆ ಮುನ್ನ ಆಪರೇಷನ್ ಹಸ್ತ ಮಾಡಿದ್ದ ಕಾಂಗ್ರೆಸ್ ಮುಖಂಡರು, ಜೆಡಿಎಸ್‌ನ ಎರಡು ಸದಸ್ಯರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು. ಇದಕ್ಕೆ ಪ್ರತಿತಂತ್ರ ರೂಪಿಸಿದ ಕುಮಾರಸ್ವಾಮಿ, ‘ರಿವರ್ಸ್ ಆಪರೇಷನ್’ ಮಾಡಿ ಕಾಂಗ್ರೆಸ್‌ನ ಒಬ್ಬ ಪ್ರಭಾವಿ ನಾಯಕನನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಲ್ಲದೇ, ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಡ್ಯ ನಗರಸಭೆಯ ನೂತನ ಅಧ್ಯಕ್ಷರಾಗಿ ಶ್ರೀ ನಾಗೇಶ್ ಮತ್ತು ಉಪಾಧ್ಯಕ್ಷರಾಗಿ ಶ್ರೀ ಅರುಣ್ ಕುಮಾರ್ ಅವರುಗಳು ಆಯ್ಕೆಯಾಗಿದ್ದು, ಇಬ್ಬರಿಗೂ ಹೃದಯಪೂರ್ವಕ ಅಭಿನಂದನೆಗಳು.
ಆಡಳಿತಾರೂಢ @INCKarnataka ಹೂಡಿದ ಷಡ್ಯಂತ್ರ್ಯ, ಕುತಂತ್ರಗಳನ್ನು ಮೆಟ್ಟಿನಿಂತು ಮಂಡ್ಯ ಜನರ ಆಶಯದ ಪ್ರತೀಕವಾಗಿ ನಗರಸಭೆಯ ಅಧಿಕಾರವು @JanataDal_S, @BJP4Karnataka… pic.twitter.com/rCS5Gilxcu
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) August 28, 2024
ನಗರಸಭೆಯಲ್ಲಿ ಜೆಡಿಎಸ್‌ನಿಂದ 18, ಕಾಂಗ್ರೆಸ್‌ನಿಂದ 10, ಬಿಜೆಪಿಯಿಂದ 2 ಮತ್ತು ಐವರು ಪಕ್ಷೇತರರು ಸೇರಿ ಒಟ್ಟು 35 ಸದಸ್ಯರಿದ್ದಾರೆ. ಈ ಪೈಕಿ ಕಾಂಗ್ರೆಸ್‌ನಿಂದ ನಗರಸಭೆಯ ಮಾಜಿ ಅಧ್ಯಕ್ಷರಾದ ಹೆಚ್.ಎಸ್. ಮಂಜು ಅವರು ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಇದೇ ಸ್ಥಾನಕ್ಕೆ ಜೆಡಿಎಸ್‌ನಿಂದ ನಾಗೇಶ್ ಅವರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ ಅರುಣ್ ಕುಮಾರ್ ಹಾಗೂ ಕಾಂಗ್ರೆಸ್‌ನಿಂದ ಝಾಕಿರ್ ನಾಮಪತ್ರ ಸಲ್ಲಿಸಿದ್ದರು.
ಇಂದು ನಡೆದ ಚುನಾವಣೆಯಲ್ಲಿ ಸಂಸದ ಕುಮಾರಸ್ವಾಮಿ ಅವರ ಒಂದು ಮತ, ಮಂಡ್ಯ ನಗರ ಶಾಸಕ ಪಿ.ರವಿಕುಮಾರ್ ಅವರ ಒಂದು ಮತ ಹಾಗೂ 35 ಸದಸ್ಯರ ಮತಗಳು ಸೇರಿ ಒಟ್ಟು 37 ಮತಗಳು ಚಲಾವಣೆಯಾದವು. ಈ ಪೈಕಿ ಜೆಡಿಎಸ್ ಅಭ್ಯರ್ಥಿಗಳಿಗೆ ತಲಾ 19 ಮತಗಳು ಬಂದಿವೆ.
ಇದನ್ನೂ ಓದಿ : ವಿಶೇಷ ಆತಿಥ್ಯ ಆರೋಪ | ಬಳ್ಳಾರಿ ಜೈಲಿಗೆ ದರ್ಶನ್ ಸ್ಥಳಾಂತರ : ಒಂಬತ್ತು ಸಹಚರರು ಬೇರೆಡೆಗೆ


