ಕಳೆದ ವಾರ ಪ್ರಕಟವಾದ ಜಾರ್ಖಂಡ್ ಚುನಾವಣಾ ಫಲಿತಾಂಶದಲ್ಲಿ ಇದುವೆ ಮೊದಲ ಬಾರಿಗೆ ರಾಜ್ಯದ ವಿಧಾನಸಭೆಗೆ ಗರಿಷ್ಠ ಸಂಖ್ಯೆಯ ಮಹಿಳಾ ಶಾಸಕರು ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ. ಇಂಡಿಯಾ ಮತ್ತು ಎನ್‌ಡಿಎ ಮೈತ್ರಿಕೂಟಗಳು ಒಟ್ಟಾಗಿ ಕಣಕ್ಕಿಳಿಸಿದ 26 ಮಹಿಳಾ ಅಭ್ಯರ್ಥಿಗಳ ಪೈಕಿ ಹನ್ನೆರಡು ಮಂದಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. 2019ರಲ್ಲಿ ರಾಜ್ಯದ ವಿಧಾನಸಭೆಗೆ 10 ಮಂದಿ ಮಹಿಳಾ ಶಾಸಕರು ಆಯ್ಕೆಯಾಗಿದ್ದರು.
24 ವರ್ಷಗಳ ಹಿಂದೆ ರಚನೆಯಾದ ಜಾರ್ಖಂಡ್ ರಾಜ್ಯದ ವಿಧಾನಸಭೆಯಲ್ಲಿ ಪ್ರತಿ ವಿಧಾನಸಭಾ ಚುನಾವಣೆಗೂ ಮಹಿಳಾ ಶಾಸಕರ ಸಂಖ್ಯೆ ಹೆಚ್ಚುತ್ತಿದೆ. 81 ಸ್ಥಾನಗಳಿರುವ ಜಾರ್ಖಂಡ್ ವಿಧಾನಸಭೆಯಲ್ಲಿ 2000 ರಲ್ಲಿ, ರಾಜ್ಯದಲ್ಲಿ ಮೂವರು ಮಹಿಳಾ ಶಾಸಕರು ಆಯ್ಕೆಯಾಗಿದ್ದರು. 2005 ರಲ್ಲಿ ಈ ಸಂಖ್ಯೆ ಎಂಟಕ್ಕೆ ಮತ್ತು 2014 ರಲ್ಲಿ ಸಂಖ್ಯೆ ಒಂಬತ್ತಕ್ಕೆ ಏರಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಚುನಾಯಿತರಾದ 12 ಮಂದಿ ಮಹಿಳಾ ಶಾಸಕರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಗರಿಷ್ಠ ಐವರು ಆಯ್ಕೆಯಾಗಿದ್ದರೆ, ನಾಲ್ವರು ಬಿಜೆಪಿ ಟಿಕೆಟ್‌ನಲ್ಲಿ ಆಯ್ಕೆಯಾಗಿದ್ದಾರೆ. ಉಳಿದ ಮೂವರು ಮಹಿಳಾ ಶಾಸಕರು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜೆಎಂಎಂ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಪ್ರಮುಖ ಮಹಿಳೆಯರಲ್ಲಿ ಹೇಮಂತ್ ಸೋರೆನ್ ಅವರ ಪತ್ನಿ ಕಲ್ಪನಾ, ಬಿಜೆಪಿಯ ಮಾಜಿ ಸಚಿವ ಡಾ ಲೋಯಿಸ್ ಮರಾಂಡಿ ಮತ್ತು ಸಬಿತಾ ಮಹತೋ ಸೇರಿದ್ದಾರೆ.
ಆಯ್ಕೆಯಾದ 12 ಮಹಿಳೆಯರ ಪೈಕಿ ಕಾಂಗ್ರೆಸ್‌ನ ನಿಸಾತ್ ಆಲಂ ಗರಿಷ್ಠ 86,000 ಮತಗಳ ಅಂತರದಿಂದ ಪಾಕುರ್ ಕ್ಷೇತ್ರವನ್ನು ಗೆದ್ದ ಕೀರ್ತಿಗೆ ಪಾತ್ರರಾಗಿದ್ದಾರೆ. ಟೆಂಡರ್ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಸ್ತುತ ಜೈಲು ಸೇರಿರುವ ಮಾಜಿ ಸಚಿವ ಅಲಂಗೀರ್ ಆಲಂ ಅವರ ಪತ್ನಿ ನಿಸಾತ್ ಆಲಂ ಅವರು ತಮ್ಮ ಪತಿ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಮತ್ತೊಬ್ಬ ಮಹಿಳಾ ಶಾಸಕರಾದ ಕಾಂಗ್ರೆಸ್ ನಾಯಕ ಸಮ್ರೇಶ್ ಸಿಂಗ್ ಅವರ ಸೊಸೆ ಶ್ವೇತಾ ಸಿಂಗ್ ಕೂಡ ಬೊಕಾರೊದಿಂದ ಬಿಜೆಪಿಯ ಬಿರಾಂಚಿ ನಾರಾಯಣ್ ಅವರನ್ನು 7,207 ಮತಗಳಿಂದ ಸೋಲಿಸುವ ಮೂಲಕ ಆಯ್ಕೆಯಾಗಿದ್ದಾರೆ.
ಮಹಿಳಾ ಶಾಸಕರ ಪೈಕಿ ಪ್ರಮುಖ ವ್ಯಕ್ತಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಅವರು 17,142 ಮತಗಳ ಅಂತರದಿಂದ ಬಿಜೆಪಿಯ ಮುನಿಯಾ ದೇವಿ ಅವರನ್ನು ಸೋಲಿಸುವ ಮೂಲಕ ಸತತ ಎರಡನೇ ಅವಧಿಗೆ ಜಾರ್ಖಂಡ್ ವಿಧಾನಸಭೆಗೆ ಪ್ರವೇಶಿಸಿದ್ದಾರೆ.
ಮಾಜಿ ಸಚಿವೆ ದೀಪಿಕಾ ಪಾಂಡೆ ಸಿಂಗ್ ಅವರು ಮಹ್ಗಾಮ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಅಶೋಕ್ ಕುಮಾರ್ ಅವರನ್ನು 18,645 ಅಂತರದಿಂದ ಸೋಲಿಸುವ ಮೂಲಕ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.
ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ನಂತರ ಜೆಎಂಎಂಗೆ ಪಕ್ಷಾಂತರವಾದ ಬಿಜೆಪಿಯ ಮಾಜಿ ಸಚಿವ ಲೂಯಿಸ್ ಮರಾಂಡಿ ಕೂಡ ಜಾಮಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಅದೇ ರೀತಿ, ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಶಿಲ್ಪಿ ನೇಹಾ ಟಿರ್ಕಿ ಎರಡನೇ ಬಾರಿಗೆ ಮರ್ದಾರ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಈ ನಡುವೆ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿಯನ್ನು ಆಹ್ವಾನಿಸಲು ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಅವರ ಪತ್ನಿ ಕಲ್ಪನಾ ಸೋರೆನ್ ಅವರು ದೆಹಲಿಗೆ ಪ್ರಯಾಣಿಸಿದ್ದಾರೆ. ಇದೇ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ ಗಣ್ಯರನ್ನು ಗುರುವಾರ ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ| ಪೊಲೀಸ್ ಕಸ್ಟಡಿಯಲ್ಲಿ ಇಬ್ಬರು ಮಹಿಳೆಯರಿಗೆ ಚಿತ್ರಹಿಂಸೆ ಪ್ರಕರಣ; ಎಸ್‌ಐಟಿ ತನಿಖೆಗೆ ಸುಪ್ರೀಂಕೋರ್ಟ್ ಆದೇಶ


