ವಾಮಾಚಾರ ಮಾಡುತ್ತಿದ್ದ ಆರೋಪದಲ್ಲಿ 55 ವರ್ಷದ ಮಹಿಳೆಯೊಬ್ಬರಿಗೆ ಬಿದಿರಿನ ಕೋಲುಗಳಿಂದ ಮನಬಂದಂತೆ ಥಳಿಸಿ, ಚಿತ್ರಹಿಂಸೆ ಕೊಟ್ಟು ವಿಷ ಕುಡಿಸಿ ಹತ್ಯೆಗೈದ ಹೃದಯ ವಿದ್ರಾವಕ ಘಟನೆ ಜಾರ್ಖಂಡ್‌ನಲ್ಲಿ ಗುರುವಾರ (ಜೂ.9) ಸಂಜೆ ನಡೆದಿದ್ದು, ಪ್ರಕರಣದಲ್ಲಿ 24 ಜನರನ್ನು ಬಂಧಿಸಲಾಗಿದೆ.
ಜಾರ್ಖಂಡ್‌ನ ಲೋಹರ್ದಗಾದ ಗಣೇಶಪುರ ಗ್ರಾಮದಲ್ಲಿ ಹೊಲೊ ದೇವಿ ಎಂದು ಗುರುತಿಸಲಾದ ಮಹಿಳೆಗೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿದ ಗ್ರಾಮಸ್ಥರು ಆಕೆಯ ಮೃತದೇಹವನ್ನು ಗೋಣಿಚೀಲದಲ್ಲಿ ಹಾಕಿ ಗ್ರಾಮದ ಸಮೀಪವಿರುವ ಧಾರ್ಧರಿಯಾ ಜಲಪಾತಕ್ಕೆ ಎಸೆದು, ವಿಕೃತಿ ಮೆರೆದಿದ್ದರು.
ಮಹಿಳೆಯ ಕುಟುಂಬಸ್ಥರಿಂದ ಮಾಹಿತಿ ಪಡೆದ ಪೊಲೀಸರು ಗ್ರಾಮಕ್ಕೆ ಆಗಮಿಸಿ ಜಲಪಾತದ ತಳದಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ತಕ್ಷಣ ಕಾರ್ಯರೂಪಕ್ಕೆ ಬಂದ ಪೊಲೀಸರು ಸೆರೆಂಗ್‌ಡಾಗ್ ಪೊಲೀಸ್ ಠಾಣೆಯಲ್ಲಿ ಹೆಸರಿಸಲಾದ 27 ಮಂದಿ ಮತ್ತು 20 ಕ್ಕೂ ಹೆಚ್ಚು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಮೂರೂವರೆ ವರ್ಷದಲ್ಲಿ 752 ಕೋಮು ಪ್ರಕರಣಗಳನ್ನು ಕಂಡ ’ಸೌಹಾರ್ದ ಕರ್ನಾಟಕ’
“ಇದುವರೆಗೆ ಪ್ರಕರಣದಲ್ಲಿ ನಾವು 24 ಆರೋಪಿಗಳನ್ನು ಬಂಧಿಸಿದ್ದೇವೆ, ಇತರರ ಹುಡುಕಾಟ ಇನ್ನೂ ಮುಂದುವರೆದಿದೆ” ಎಂದು ಲೋಹರ್ಡಗಾ ಎಸ್‌ಪಿ ಆರ್.ರಾಮ್‌ಕುಮಾರ್ ಹೇಳಿದ್ದಾರೆ.
ಈ ವರ್ಷದ ಜನವರಿಯಿಂದ ಗ್ರಾಮದಲ್ಲಿ ಐವರು ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಇದಕ್ಕೆ ಮಹಿಳೆ ವಾಮಾಚಾರ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಆದರೆ, ಇದು ಮೂಢನಂಬಿಕೆಗೆ ಸಂಬಂಧಿಸಿದೆ ಎಂದು ಮೃತ ಮಹಿಳೆಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಮೃತ ಮಹಿಳೆಯ ಕುಟುಂಬದ ಸದಸ್ಯೆ ಚಂದ್ರಮಣಿ ದೇವಿ ಹೇಳುವಂತೆ, “ಗ್ರಾಮಸ್ಥರು ಬೆಳಿಗ್ಗೆ 6 ಗಂಟೆಗೆ ಕರೆದ ಪಂಚಾಯತಿ ಕರೆದರು, ಸಂಜೆಯವರೆಗೂ ನಡೆಯಿತು. ಬಳಿಕ ಗ್ರಾಮಸ್ಥರು ಮಹಿಳೆಗೆ ಮರಣದಂಡನೆ ವಿಧಿಸಿದರು. ಆಕೆಗೆ ಮೊದಲು ಎಲ್ಲರು ಹೊಡೆದರು. ಬಳಿಕ ಬಿದಿರಿನ ಕೋಲುಗಳಿಂದ ಅರ್ಧ ಸಾಯುವಂತೆ ಮಾಡಿ, ನಂತರ ವಿಷ ಕುಡಿಸಿ ಆಕೆಯನ್ನು ಹೊಡೆದು ಕೊಂದರು. ನೀರಿಗಾಗಿ ಕೂಗಾಡುತ್ತಿದ್ದರೂ ಗ್ರಾಮಸ್ಥರು ನೀರು ಕೊಡಲು ಬಿಡಲಿಲ್ಲ’ ಎಂದು ನೋವು ತೋಡಿಕೊಂಡಿದ್ದಾರೆ. ಅವರು ಸತ್ತಿದ್ದಾರೆ ಎಂದು ಗ್ರಾಮಸ್ಥರಿಗೆ ಖಾತ್ರಿಯಾದ ನಂತರ, ಮೃತದೇಹವನ್ನು ಗೋಣಿಚೀಲದಲ್ಲಿ ಹಾಕಿ ಗ್ರಾಮದ ಸಮೀಪವಿರುವ ಧಾರ್ಧರಿಯಾ ಜಲಪಾತದ ಮೇಲಿನಿಂದ ಆಕೆಯನ್ನು ಎಸೆದರು ಎಂದು ಘಟನೆಯನ್ನು ವಿವರಿಸಿದ್ದಾರೆ.
ಬುಧವಾರ ನಡೆದ ಮತ್ತೊಂದು ಘಟನೆಯಲ್ಲಿ, ಜಾರ್ಖಂಡ್‌ನ ಗುಮ್ಲಾದಲ್ಲಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಇಬ್ಬರು ಬುಡಕಟ್ಟು ಯುವಕರಿಗೆ ಗ್ರಾಮಸ್ಥರುನ ಬೆಂಕಿ ಹಚ್ಚಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಯಿತಾದರೂ ಒಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ರಾಜ್ಯದ 11 ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಣೆ


