Homeಕರ್ನಾಟಕ🛑 Live Updates: ಚಕ್ರತೀರ್ಥ ಸಮಿತಿಯ ಅಧ್ವಾನಗಳು: ‘ಭಕ್ತಿಪಂಥ’ ಪಾಠದಲ್ಲಿ ಶರೀಫ, ಕನಕ-ಪುರಂದರದಾಸರ ವ್ಯಕ್ತಿ ಚಿತ್ರಣ...

🛑 Live Updates: ಚಕ್ರತೀರ್ಥ ಸಮಿತಿಯ ಅಧ್ವಾನಗಳು: ‘ಭಕ್ತಿಪಂಥ’ ಪಾಠದಲ್ಲಿ ಶರೀಫ, ಕನಕ-ಪುರಂದರದಾಸರ ವ್ಯಕ್ತಿ ಚಿತ್ರಣ ತೆರವು

ಪಠ್ಯ ಪುಸ್ತಕ ಪರಿಶೀಲನೆ ವಿವಾದಕ್ಕೆ ಸಂಬಂಧಿಸಿದ ವಿವರಗಳು ಅಪ್‌ಡೇಟ್‌ ಆಗಲಿವೆ. ಈ ಲಿಂಕ್‌ ಆಗಾಗ್ಗೆ ರೀಫ್ರೆಶ್ ಮಾಡಿರಿ.

- Advertisement -
- Advertisement -

(ಬಲ ಪಂಥೀಯ ಬರಹಗಾರ ರೋಹಿತ್‌ ಚಕ್ರತೀರ್ಥ ನೇತೃತ್ವದಲ್ಲಿ ಪರಿಶೀಲಿಸಲಾಗಿರುವ ಪಠ್ಯಪುಸ್ತಕಗಳಲ್ಲಿ ಆಗಿರುವ ತಪ್ಪುಗಳು ಒಂದೆರಡಲ್ಲ. ಆದರೆ ಇದೇ ಪಠ್ಯಪುಸ್ತಕವನ್ನು ಮಕ್ಕಳಿಗೆ ಓದಿಸಲು ಸರ್ಕಾರ ನಿರ್ಧಾರ ಮಾಡಿದಂತಿದೆ. ನಾಡಿನ ಮಕ್ಕಳು ಇಷ್ಟೊಂದು ತಪ್ಪುಗಳಿರುವ ಪಠ್ಯಪುಸ್ಕಕಗಳನ್ನೂ ಓದಬೇಕೆ? ಬೇಡವೇ? ನೀವೇ ನಿರ್ಧರಿಸಬೇಕಿದೆ. ಅದಕ್ಕೆ ಸಂಬಂಧಿಸಿದ ವಿವರಗಳನ್ನು ಇಲ್ಲಿ ಅಪ್‌ಲೋಡ್‌ ಮಾಡಲಾಗುವುದು. ಓದುಗರು ರೀಫ್ರೆಶ್ ಮಾಡುತ್ತಿರಿ.) 


‘ಭಕ್ತಿಪಂಥ’ ಪಾಠದಲ್ಲಿ ಶಿಶುನಾಳ ಶರೀಫ, ಕನಕ, ಪುರಂದರದಾಸರ ವ್ಯಕ್ತಿ ಚಿತ್ರಣ ತೆರವು

ಕನ್ನಡ ನೆಲದಲ್ಲಿ ನಡೆದ ಭಕ್ತಿ ಪಂಥ ಚಳವಳಿಯಲ್ಲಿ ದಾಸವರೇಣ್ಯರ ಕೊಡುಗೆಯನ್ನೂ ಯಾರೂ ಅಲ್ಲಗಳೆಯಲಾರರು. ಆದರೆ ಚಕ್ರತೀರ್ಥ ಪುಸ್ತಕ ಪರಿಶೀಲನಾ ಸಮಿತಿಯು 9ನೇ ತರಗತಿ ಸಮಾಜ ವಿಜ್ಞಾನ ಭಾಗ-2ರಲ್ಲಿ ನೀಡಿರುವ ‘ಭಕ್ತಪಂಥ’ ಪಾಠದಲ್ಲಿ ದಾಸವರೇಣ್ಯರ ವ್ಯಕ್ತಿಚಿತ್ರಣವನ್ನು ಕಿತ್ತು ಬಿಸಾಡಿದೆ.

ಬರಗೂರು ರಾಮಚಂದ್ರಪ್ಪನವರ ಸರ್ವಾಧ್ಯಕ್ಷತೆಯಲ್ಲಿ ರಚಿತವಾದ ಪಠ್ಯಪುಸ್ತಕದಲ್ಲಿ ಕನಕದಾಸರು, ಪುರಂದರದಾಸರು ಹಾಗೂ ಶಿಶುನಾಳ ಷರೀಫರ ವ್ಯಕ್ತಿಚಿತ್ರಣವನ್ನು ಪರಿಚಯಿಸಲಾಗಿತ್ತು. ಸಮಾಜದ ಮೇಲೆ ಅವರು ಬೀರಿದ ಪ್ರಭಾವವನ್ನು ತಿಳಿಸಲಾಗಿತ್ತು. ಆದರೆ ಈ ವಿವರಗಳನ್ನು ತೆರವು ಮಾಡಿರುವ ಚಕ್ರತೀರ್ಥ ಸಮಿತಿಯು, ಕರ್ನಾಟಕದಲ್ಲಿ ಭಕ್ತಿಪಂಥ ಚಳಿವಳಿಕಾರರ ಇತಿಹಾಸವನ್ನು ಎರಡು ವಾಕ್ಯಗಳಿಗೆ ಸೀಮಿತ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪಾಠದಲ್ಲಿ ಆರಂಭದಲ್ಲಿ- ‘ಈ ಅಧ್ಯಾಯದಲ್ಲಿ ಕೆಳಗಿನ ಅಂಶಗಳನ್ನು ತಿಳಿಯುತ್ತೇವೆ’ ಎಂದು ಪ್ರಸ್ತಾಪಿಸುತ್ತಾ “ರಮಾನಂದ, ಚೈತನ್ಯ, ಗುರುನಾನಕ್‌ರ ಬಗ್ಗೆ, ಕರ್ನಾಟಕದಲ್ಲಿ ಭಕ್ತಿ ಪಂಥ, ಭಕ್ತಿ ಪಂಥದ ಪರಿಣಾಮಗಳು, ಭಕ್ತಿಪಂಥದ ಪ್ರಮುಖ ಅಂಶಗಳು” ಈ ವಿಚಾರಗಳನ್ನು ತಿಳಿಯುತ್ತೇವೆ ಎಂದು ಸೂಚಿಸಲಾಗಿದೆ. ಆದರೆ ಬರಗೂರರ ಸಮಿತಿ ರೂಪಿಸದ ಪಠ್ಯದಲ್ಲಿಯೇ ಈ ಅಂಶಗಳನ್ನು ನಮೂದಿಸಲಾಗಿತ್ತು. ಅವುಗಳನ್ನು ಯಥಾವತ್ತು ಉಳಿಸಿಕೊಂಡಿರುವ ಚಕ್ರತೀರ್ಥ ಸಮಿತಿ, ಕರ್ನಾಟಕದ ಭಕ್ತಿಪಂಥ ಚಳವಳಿಯ ಬಗ್ಗೆ ವಿವರಣೆಯನ್ನೇ ನೀಡಿಲ್ಲ! ‘ಸೂಫಿಸಂ’ ಬಗ್ಗೆ ಒಂದು ಪ್ಯಾರಾ ಪಾಠವಿದ್ದರೂ ಅದು ಕರ್ನಾಟಕ್ಕಷ್ಟೇ ಸೀಮಿತವಾಗಿ ನಿಲ್ಲುವುದಿಲ್ಲ.

ಅಸ್ಸಾಮಿನ ಭಕ್ತಿಪಂಥ ಚಳವಳಿಕಾರರಾದ ಶಂಕರದೇವ ಹಾಗೂ ಮಾಧವದೇವ ಅವರ ಕುರಿತು ಹೊಸದಾಗಿ ಸೇರಿಸಲಾಗಿದೆ. ದಾಸವರೇಣ್ಯರ ವಿವರ ಕೈಬಿಡಲಾಗಿದೆ. ಅಲ್ಲದೆ ಗುರುನಾನಕರ್‌ರ ಪಾಠದಲ್ಲೂ ಕತ್ತರಿ ಪ್ರಯೋಗ ನಡೆದಿದೆ.

ಅಸ್ಸಾಮಿನ ಭಕ್ತಿಪಂಥ ಚಳವಳಿಕಾರರಾದ ಶಂಕರದೇವ ಹಾಗೂ ಮಾಧವದೇವ ಅವರ ಕುರಿತು ರೋಹಿತ್ ಚಕ್ರತೀರ್ಥ ಸಮಿತಿ ಹೊಸದಾಗಿ ಸೇರಿಸಿದೆ.

ಮೀರಾಬಾಯಿಯವರ ಕುರಿತು ಇರುವ ಭಾಗದಲ್ಲಿಯೇ ಕರ್ನಾಟಕದಲ್ಲಿ ಭಕ್ತಿಪಂಥ ಚಳವಳಿ ಬೀರಿದ ಪ್ರಭಾವದ ಕುರಿತು ಎರಡು ವಾಕ್ಯಗಳನ್ನು ತುರುಕಲಾಗಿದೆ. “ಪುರಂದರದಾಸರು ಮತ್ತು ಕನಕದಾಸರು ಕರ್ನಾಟಕದ ಭಕ್ತಿ ಚಳವಳಿಯ ಪ್ರಮುಖರಾಗಿದ್ದರು. ಪುರಂದರದಾಸರು ‘ಕೀರ್ತನೆ’ಗಳನ್ನು ರಚಿಸಿದರೆ, ಕನಕದಾಸರು, ‘ಮೋಹನ ತರಂಗಿಣಿ’ ಎಂಬ ಕಾವ್ಯವನ್ನು ಮತ್ತು ಕೀರ್ತನೆಗಳನ್ನು ಕನ್ನಡದಲ್ಲಿ ರಚನೆ ಮಾಡಿದರು”- ಇದಿಷ್ಟೇ ಮಾಹಿತಿ!

ಶಿಶುನಾಳ ಶರೀಫರು, ಕನಕ ಹಾಗೂ ಪುರಂದರದಾಸರ ವ್ಯಕ್ತಿ ಚಿತ್ರಣವನ್ನು ಬರಗೂರು ನೇತೃತ್ವದ ಸಮಿತಿ ನೀಡಿತ್ತು.


‘ಅಕ್ಷರದವ್ವ’ ಸಾವಿತ್ರಿಬಾಯಿ ಫುಲೆಯವರಿಗೆ, ‘ಏಕವಚನ’ ಬಳಕೆ

ಬರಗೂರು ರಾಮಚಂದ್ರಪ್ಪ ಅವರ ಸಮಿತಿಯು ಏಳನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ಪೂರಕ ಪಠ್ಯವಾಗಿ ಎಚ್.ಎಸ್.ಅನುಪಮ ಅವರು ಬರೆದಿರುವ ‘ಸಾವಿತ್ರಿಬಾಯಿ ಫುಲೆ’ ಪಾಠವನ್ನು ಅಳವಡಿಸಿತ್ತು. ಆದರೆ ಚಕ್ರತೀರ್ಥ ಸಮಿತಿಯು ಎಚ್‌.ಎಸ್.ಅನುಪಮಾ ಅವರ ಪಾಠವನ್ನು ತೆಗೆದುಹಾಕಿ ಕಾರ್ಕಳದ ರಮಾನಂದ ಆಚಾರ್ಯ ಎಂಬವರು ಬರೆದಿರುವ ‘ಸಾಮಾಜಿಕ ಚಳವಳಿಯ ಮೊದಲ ಶಿಕ್ಷಕಿ’ ಪಾಠವನ್ನು ಅಳವಡಿಸಿದೆ. ‘ಅಕ್ಷರದವ್ವ ಸಾವಿತ್ರಿಬಾಯಿ ಫುಲೆ’ಯವರ ಕುರಿತ ಈ ಪಾಠದಲ್ಲಿ ‘ಏಕವಚನ’ಗಳನ್ನು ಬಳಸಲಾಗಿದೆ.

“ನಿರಕ್ಷರಿಯಾಗಿದ್ದ ಸಾವಿತ್ರಿಬಾಯಿ ಆಗಲೇ ಪಣತೊಟ್ಟಳು, ಏನೇ ಆಗಲಿ ನಾನು ಉಚ್ಚ ಶಿಕ್ಷಣ ಪಡೆದೇ ಪಡೆಯುವೆ. ತಾನೂ ಶಿಕ್ಷಣ ಪಡೆಯುವುದಷ್ಟೇ ಅಲ್ಲ, ಎಲ್ಲಾ ಮಹಿಳೆಯರೂ ಶಿಕ್ಷತರಾಗಬೇಕೆಂಬ ಕನಸು ಕಂಡು, ಅದನ್ನು ಸಾಕಾರಗೊಳಿಸಿದಳು”- ಹೀಗೆ ‘ಅವಳು’, ‘ಇವಳು’ಗಳು ಪಠ್ಯದಲ್ಲಿ ಹೇರಳವಾಗಿ ಬಳಕೆಯಾಗಿವೆ.

‘ಜ್ಯೋತಿ ಬಾ ಫುಲೆಯೊಂದಿಗೆ ಅವಳ ವಿವಾಹ’, ‘ಆಚೆ ಮನನೊಂದಳು’, ‘ಸಂಘರ್ಷಕ್ಕೆ ಅಣಿಯಾದಳು’, ‘ಅವಳು ಪಾಠ ಕಲಿತು’, ‘ಅಧ್ಯಾಪಕಿಯಾದಳು’, ‘ತನ್ನ ಕಾರ್ಯದಲ್ಲಿ ಮುಂದುವರಿದಳು’, ‘ಪ್ರೇರೇಪಿಸಿದಳು’, ‘ಆಶ್ರಯವಿತ್ತಳು’, ‘ಮೇಲ್ಪಂಕ್ತಿ ಹಾಕಿಕೊಟ್ಟಳು’, ‘ಮನವೊಲಿಸಿದಳು’, ‘ಬೆಳಕಾದಳು’, ‘ತೊಡಗಿದ್ದಳು’, ‘ನಿಧನ ಹೊಂದಿದಳು’- ಹೀಗೆ ಪದಗಳನ್ನು ಬಳಸಿರುವುದನ್ನು ಕಾಣಬಹುದು.


ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪಾಠದಲ್ಲಿ ಕತ್ತರಿ

ಆರನೇ ತರಗತಿ ಸಮಾಜ ವಿಜ್ಞಾನ ಭಾಗ ಒಂದರಲ್ಲಿ ‘ನಮ್ಮ ಕರ್ನಾಟಕ’ ಪಾಠದಲ್ಲಿ ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕುರಿತು ಇದ್ದ ವಿವರಗಳಿಗೆ ಚಕ್ರತೀರ್ಥ ಸಮಿತಿ ಕತ್ತರಿ ಪ್ರಯೋಗ ಮಾಡಿದೆ.

“ಸ್ವಾತಂತ್ರ್ಯ ಪೂರ್ವದಿಂದಲೂ ಸರ್ಕಾರವು ಪ್ರಾಥಮಿಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಅನೇಕ ಧಾರ್ಮಿಕ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಸಿದ್ಧಗಂಗಾ ಮಠವು ಶ್ರೀ ಶಿವಕುಮಾರಸ್ವಾಮಿಗಳ ನೇತೃತ್ವದಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅಕ್ಷರ ಮತ್ತು ಅನ್ನ ದಾಸೋಹದ ಕಾರ್ಯ ನಡೆಸುತ್ತಿದೆ. ರಾಮನಗರ ಜಿಲ್ಲೆಯಲ್ಲಿ ಜನಿಸಿದ ಶ್ರೀ ಬಾಲಗಂಗಾಧರ ಸ್ವಾಮೀಜಿಯವರ ನೃತೃತ್ವದಲ್ಲಿ ಬೆಳೆದ ಆದಿಚುಂನಗಿರಿ ಮಠದ ಶೈಕ್ಷಣಿಕ ಸೇವೆಯು ಅಪೂರ್ವವಾಗಿದ್ದು. ಮೂಲಶಿಕ್ಷಣ, ವೃತ್ತಿ ಶಿಕ್ಷಣದ ಕಾಲೇಜುಗಳನ್ನು ನಡೆಸುತ್ತಿದೆ. ಚಿತ್ರದುರ್ಗದ ಮುರುಘರಾಜೇಂದ್ರ ಮಠ ಮತ್ತು ಸಿರಿಗೆರೆ ತರಳಬಾಲು ಮಠಗಳ ಶೈಕ್ಷಣಿಕ ಸೇವೆಯೂ ಗಮನಾರ್ಹ” ಎಂದು ಹಳೆಯ ಪಠ್ಯದಲ್ಲಿ ವಿವರವಿತ್ತು.

‘ನಮ್ಮ ಹೆಮ್ಮೆಯ ರಾಜ್ಯ- ಕರ್ನಾಟಕ’ ಎಂಬ ಶೀರ್ಷಿಕೆಯಲ್ಲಿ ಪಾಠವನ್ನು ಪರಿಷ್ಕರಣೆ ಮಾಡಿರುವ ಚಕ್ರತೀರ್ಥ ಸಮಿತಿ ಈ ಹಿಂದೆ ಇದ್ದ ವಿವರಗಳಿಗೆ ಕತ್ತರಿ ಹಾಕಿದೆ.

“ಅನೇಕ ಧಾರ್ಮಿಕ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಸಿದ್ಧಗಂಗಾ ಮಠ ಹಾಗೂ ಆದಿಚುಂಚನಗಿರಿ ಮಠ, ಮರುಘರಾಜೇಂದ್ರ ಮಠ ಮತ್ತು ಸಿರಿಗೆರೆ ತರಳಬಾಳು ಮಠಗಳ ಶೈಕ್ಷಣಿಕ ಸೇವೆಯು ಗಮನಾರ್ಹ” ಎಂದು ಬರೆಯಲಾಗಿದೆ. ನಾಲ್ಕೈದು ಸಾಲುಗಳ ವಿವರಗಳನ್ನು ಎರಡು ವಾಕ್ಯಗಳಿಗೆ ಇಳಿಸಲಾಗಿದೆ.


ಆರನೇ ತರಗತಿ ಸಮಾಜ ವಿಜ್ಞಾನ ಭಾಗ-1ರಲ್ಲಿ ‘ಮೈಸೂರು ವಿಭಾಗ’ ಪಾಠದಲ್ಲಿ ಟಿಪ್ಪು ಸುಲ್ತಾನ್‌ ಭಾವಚಿತ್ರವನ್ನು ತೆರವು ಮಾಡಲಾಗಿದೆ. ಅದರ ಬದಲಿಗೆ ವಿಶ್ವೇಶ್ವರಯ್ಯನವರ ಫೋಟೋ ಬಳಸಲಾಗಿದೆ. ಇದೇ ಪಠ್ಯಪುಸ್ತಕದಲ್ಲಿ ‘ನಮ್ಮ ಹೆಮ್ಮೆಯ ರಾಜ್ಯ- ಕರ್ನಾಟಕ ಪಾಠದಲ್ಲಿಯೂ ಬಳಸಲಾಗಿದೆ. ಟಿಪ್ಪು ಫೋಟೋ ತೆಗೆದು ಅನಗತ್ಯವಾಗಿ ಮತ್ತೊಮ್ಮೆ ಸರ್‌.ಎಂ.ವಿಶ್ವೇಶ್ವರಯ್ಯನವರ ಫೋಟೋ ಹಾಕಲಾಗಿದೆ. ಬರಗೂರರ ಸಮಿತಿ ರಚಿಸಿದ ಪಾಠದಲ್ಲಿ ಒಂದು ಕಡೆ ಮಾತ್ರ ವಿಶ್ವೇಶ್ವರಯ್ಯನವರ ಫೋಟೋ ಬಳಸಲಾಗಿತ್ತು.

ಸಮಾಜ ವಿಜ್ಞಾನ ಆರನೇ ತರಗತಿ ಪಠ್ಯಪುಸ್ತಕದಲ್ಲಿ ದೇವನೂರ ಮಹಾದೇವ ಅವರ ಫೋಟೋವನ್ನು ತೆಗೆದು, ವಿಜ್ಞಾನಿ ರಾಜರಾಮಣ್ಣ ಅವರ ಫೋಟೋವನ್ನು ಹಾಕಲಾಗಿದೆ. ಹೊಸಧರ್ಮಗಳ ಉದಯ ಪಾಠವನ್ನು ಕೈಬಿಡಲಾಗಿದೆ. ಈ ಪಾಠವು ಜೈನ ಮತ್ತು ಬೌದ್ಧಧರ್ಮಗಳ ವಿವರಣೆ ನೀಡಿದ್ದವು.

ಮಧ್ವಾಚಾರ್ಯರ ಜಾತಿ ಪ್ರಸ್ತಾಪ

‘ಭಾರತೀಯ ವೈಚಾರಿಕೆ ಹಾಗೂ ಭಕ್ತಿಪಂಥ’ ಎಂಬ ಪಾಠದಲ್ಲಿ ಧಾರ್ಮಿಕ- ಸಾಮಾಜಿಕ ಸುಧಾರಕರ ಪರಿಚಯ ಮಾಡಿಕೊಡಲಾಗಿದೆ. ಶಂಕರಾಚಾರ್ಯರು, ರಾಮಾನುಜಚಾರ್ಯರು, ಮಧ್ವಾಚಾರ್ಯರು, ಬಸವಣ್ಣ ಮೊದಲಾದವರ ಪರಿಚಯ ಮಾಡಿಕೊಡುವಾಗ ಪ್ರಸ್ತಾಪವಾಗದ ಜಾತಿ, ‘ಮಧ್ವಾಚಾರ್ಯ’ರ ವಿಚಾರ ಬಂದಾಗ ಪ್ರಸ್ತಾಪವಾಗಿದೆ. “ತುಳು ಬ್ರಾಹ್ಮಣರಾದ ಮಧ್ಯಗೇಹ ಭಟ್ಟ ಹಾಗೂ ವೇದವತಿ ಇವರ ತಂದೆ ತಾಯಿ. ಇವರು ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು” ಎಂಬ ಅಂಶವನ್ನು ಚಕ್ರತೀರ್ಥ ಸಮಿತಿ ಸೇರಿಸಿದೆ. ಹಳೆಯ ಪಠ್ಯದಲ್ಲಿ ಜಾತಿಯ ಪ್ರಸ್ತಾಪವಿರಲಿಲ್ಲ.

ಕನ್ನಡ ರಾಜ್ಯೋತ್ಸವ ಕುರಿತು ‘ಮೆರವಣಿಗೆ’ ಪಾಠ ತೆರವು

ಆರನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ‘ಮೆರವಣಿಗೆ’ ಎಂಬ ಪಾಠವಿತ್ತು. ಅದು ‘ಕನ್ನಡ ರಾಜ್ಯೊತ್ಸವಕ್ಕೆ ಸಂಬಂಧಿಸಿತ್ತು. ಆ ಪಾಠವನ್ನು ತೆಗೆದ ರೋಹಿತ್‌ ಚಕ್ರತೀರ್ಥ ಸಮಿತಿ ‘ಸಿದ್ಧಾರೂಢ ಜಾತ್ರೆ’ಯ ಕುರಿತ ಪಾಠ ಇರಿಸಿದೆ. ಒಂದು ಧರ್ಮದ ಬಗ್ಗೆ ಮುಸ್ಲಿಂ ಹುಡುಗಿಗೆ ಬೋಧನೆ ಮಾಡುವುದನ್ನೂ ಇಲ್ಲಿ ಕಾಣಬಹುದು. ‘ಕನ್ನಡ ಅಸ್ಮಿತೆ ವರ್ಸಸ್‌ ಧರ್ಮ ರಾಜಕಾರಣ’ವನ್ನು ಇಲ್ಲಿ ಮುನ್ನೆಲೆಗೆ ತರಲಾಗಿದೆ ಎಂಬ ಗುಮಾನಿ ಹುಟ್ಟುತ್ತದೆ. (‘ಮೆರವಣಿಗೆ’ ಪಾಠದ ಕುರಿತ ಹೆಚ್ಚಿನ ವಿವರ ‘ಇಲ್ಲಿ’ ಓದಿರಿ)

(ಮುಂದುವರಿಯಲಿದೆ… ಮತ್ತಷ್ಟು ವಿವರಗಳು ಅಪ್‌ಲೋಡ್‌ ಆಗಲಿವೆ…)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...