ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಸರ್ಕಾರವನ್ನು ಬಿಜೆಪಿ ಉರುಳಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪದ ನಡುವೆ, ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಸೋಮವಾರ ತಮ್ಮ ಪರವಾಗಿ ಬಹುಮತವನ್ನು ಸಾಬೀತು ಮಾಡಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಚುನಾವಣಾ ಆಯೋಗವು ಭ್ರಷ್ಟಾಚಾರದ ಆರೋಪ ಮಾಡಿದೆ.
ಒಂದು ದಿನದ ವಿಶೇಷ ಅಧಿವೇಶನದ ಕಲಾಪಗಳ ಉದ್ದಕ್ಕೂ ಪ್ರತಿಭಟಿಸಿದ ಪ್ರತಿಪಕ್ಷ ಬಿಜೆಪಿ ವಿಶ್ವಾಸ ಮತಯಾಚೆನೆಗೂ ಮುನ್ನ ಸದನದಿಂದ ಹೊರನಡೆದಿದೆ.
ವಿಶ್ವಾಸ ಮತ ಯಾಚೆನೆಯ ನಂತರ ಮಾತನಾಡಿದ ಸಿಎಂ ಹೇಮಂತ್ ಸೊರೆನ್, “ಚುನಾವಣೆಯಲ್ಲಿ ಗೆಲ್ಲಲು ಗಲಭೆಗಳನ್ನು ಉತ್ತೇಜಿಸುವ ಮೂಲಕ ಬಿಜೆಪಿಯು ದೇಶದಲ್ಲಿ ಅಂತರ್ಯುದ್ಧದಂತಹ ಪರಿಸ್ಥಿತಿ ಉಂಟು ಮಾಡಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ.
“ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಜಾರ್ಖಂಡ್ ಸರ್ಕಾರವನ್ನು ಉರುಳಿಸುವ ಸಲುವಾಗಿ ಪಕ್ಷದ ಶಾಸಕರನ್ನು ಖರೀದಿಸುವಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಪ್ರತಿಪಕ್ಷ ಬಿಜೆಪಿ ಪ್ರಜಾಪ್ರಭುತ್ವವನ್ನು ನಾಶಪಡಿಸಿದ್ದು, ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದೆ…ಸದನದಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ” ಎಂದು ಬಿಜೆಪಿ ಶಾಸಕರು ಘೋಷಣೆ ಕೂಗಿದ ಹಿನ್ನೆಲೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ.
विश्वास मत पेश करते हुए @HemantSorenJMM काफ़ी आक्रामक मुद्रा में दिखे @ndtv @ndtvindia pic.twitter.com/Txpt3LwFpq
— manish (@manishndtv) September 5, 2022
“ಬಟ್ಟೆ, ಪಡಿತರ, ದಿನಸಿ ಖರೀದಿಸುವವರ ಬಗ್ಗೆ ಕೇಳಿದ್ದೇವೆ. ಆದರೆ ಬಿಜೆಪಿ ಶಾಸಕರನ್ನು ಖರೀದಿಸುತ್ತಿದೆ…ದೇಶದ ಮೊದಲ ಬುಡಕಟ್ಟು ಜನಾಂಗದ ರಾಷ್ಟ್ರಪತಿಯನ್ನು ಪ್ರತಿಷ್ಠಾಪಿಸಿ, ನಂತರ ಅವರು ಬುಡಕಟ್ಟು ಮುಖ್ಯಮಂತ್ರಿಯನ್ನು ಪದಚ್ಯುತಗೊಳಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಢದಿಂದ ವಿಶೇಷ ವಿಮಾನದಲ್ಲಿ ಆಡಳಿತಾರೂಢ ಒಕ್ಕೂಟದ ಶಾಸಕರು ಭಾನುವಾರದಂದು ರಾಜ್ಯ ರಾಜಧಾನಿ ರಾಂಚಿಗೆ ಹಿಂತಿರುಗಿದರು. ಶಾಸಕರನ್ನು ಆಪರೇಷನ್ ಕಮಲ ನಡೆಸದೆ ಇರಲು ಅವರನ್ನು ಐಷಾರಾಮಿ ರೆಸಾರ್ಟ್‌ನಲ್ಲಿ ಅವರನ್ನು ಇಡಲಾಗಿತ್ತು. ಅತಿಥಿ ಗೃಹದಲ್ಲಿ ಇದ್ದ ಶಾಸಕರನ್ನು ನೇರವಾಗಿ ವಿಧಾನಸಭೆಗೆ ಕರೆದೊಯ್ಯಲಾಯಿತು.
ಗಣಿ ಗುತ್ತಿಗೆ ನೀಡುವ ಮೂಲಕ ಚುನಾವಣಾ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಹೇಮಂತ್ ಸೋರೆನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಬಿಜೆಪಿ ಹೇಳಿದೆ. ಹೊಸದಾಗಿ ಚುನಾವಣೆ ನಡೆಸುವಂತೆ ಅದು ಕರೆ ನೀಡಿದ್ದು, ಮುಖ್ಯಮಂತ್ರಿ ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ.
ಜಾರ್ಖಂಡ್ ರಾಜ್ಯಪಾಲ ಮುಖ್ಯಮಂತ್ರಿ ಸೋರೆನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರೆ, ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ. ಚುನಾವಣಾ ಆಯೋಗವು ರಾಜ್ಯಪಾಲರಿಗೆ ತನ್ನ ಅಭಿಪ್ರಾಯವನ್ನು ಸಲ್ಲಿಸಿದ್ದು, ಅವರು ಯಾವುದೇ ಸಮಯದಲ್ಲಿ ಸೊರೆನ್ ಅವರ ನಿರ್ಧಾರವನ್ನು ಪ್ರಕಟಿಸುವ ನಿರೀಕ್ಷೆಯಿದೆ.
81 ಸದಸ್ಯರ ವಿಧಾನಸಭೆಯಲ್ಲಿ ಆಡಳಿತಾರೂಢ ಸಮ್ಮಿಶ್ರ 49 ಶಾಸಕರನ್ನು ಹೊಂದಿದ್ದು, ಇದರಲ್ಲಿ ಬಹುಮತಕ್ಕೆ 41 ಸ್ಥಾನಗಳ ಅಗತ್ಯವಿದೆ. ಅತಿ ದೊಡ್ಡ ಪಕ್ಷವಾದ ಜೆಎಂಎಂ 30 ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್ 18 ಮತ್ತು ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಒಬ್ಬ ಸದಸ್ಯರನ್ನು ಹೊಂದಿದೆ. ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿ 26 ಶಾಸಕರನ್ನು ಹೊಂದಿದೆ.


