ನಿನ್ನೆ ಬಂಗಾಲದಲ್ಲಿ ಹಣದ ರಾಶಿಯೊಂದಿಗೆ ಸಿಕ್ಕಿಬಿದ್ದಿದ್ದ ಜಾರ್ಖಂಡ್‌ನ ಮೂವರು ಕಾಂಗ್ರೆಸ್ ಶಾಸಕರನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ವಹಿಸಿಕೊಳ್ಳಲಿದೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
“ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಇಂದು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಸರ್ಕಾರವನ್ನು ಪತನ ಮಾಡಲು ಮೂವರು ಶಾಸಕರಿಗೆ ಬಿಜೆಪಿ ಹಣ ನೀಡಿದೆ” ಎಂದು ಕಾಂಗ್ರೆಸ್ ಹೇಳಿದೆ. ಇದನ್ನು ಅಲ್ಲಗಳೆದಿರುವ ಬಿಜೆಪಿ, “ಈ ಹಣ ಜಾರ್ಖಂಡ್ ಮುಕ್ತಿ ಮೋರ್ಚಾ-ಕಾಂಗ್ರೆಸ್ ಮೈತ್ರಿ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ” ಎಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪ್ರತಿ ಶಾಸಕರಿಗೆ ₹ 10 ಕೋಟಿ ನೀಡುವ ಮೂಲಕ ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪಶ್ಚಿಮ ಬಂಗಾಳದ ಹೌರಾದಲ್ಲಿ ಬಂಧಿಸಲಾದ ತನ್ನ ಮೂವರು ಶಾಸಕರ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ತಿಳಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸಚಿವ ಅಲಂಗೀರ್ ಆಲಂ, “ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ ತಲಾ ₹ 10 ಕೋಟಿ ಮತ್ತು ಸಚಿವ ಸ್ಥಾನ ನೀಡುವ ಆಮಿಷವನ್ನು ಶಾಸಕರಿಗೆ ಒಡ್ಡಲಾಗಿದೆ. ಬರ್ಮೊ ಶಾಸಕ ಕುಮಾರ್ ಜಯಮಂಗಲ್ ಅವರು ಮೂವರು ಶಾಸಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ನಮ್ಮಲ್ಲಿ ಪ್ರತಿಯೊಬ್ಬರ ಬಗ್ಗೆ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ಇಂತಹ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು- ಯಾರೇ ಆಗಿರಲಿ ಕ್ರಮ ಜರುಗಿಸಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಮತ್ತು ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ಈ ಹಿಂದೆ ಹೇಳಿದ್ದರು.
ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಾಂಡೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಮೂವರು ಶಾಸಕರನ್ನು ಅಮಾನತುಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಶಾಸಕರಾದ ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ಬಿಕ್ಸಲ್ ಕೊಂಗರಿ ಅವರನ್ನು ಹೌರಾ ಗ್ರಾಮಾಂತರ ಪೊಲೀಸರು ಹಣದ ಮೂಲದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಸುಳಿವಿನ ಆಧಾರದ ಮೇರೆಗೆ ಪೊಲೀಸರು ಶನಿವಾರ ಹೌರಾದ ರಾನಿಹಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ-16 ರಲ್ಲಿ ಕಾಂಗ್ರೆಸ್ ಶಾಸಕರು ಪ್ರಯಾಣಿಸುತ್ತಿದ್ದ ಎಸ್‌ಯುವಿಯನ್ನು ತಡೆದರು. ವಾಹನದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ.
“ತಮ್ಮದಲ್ಲದ ಯಾವುದೇ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವುದು ಮತ್ತು ಅಸ್ಥಿರಗೊಳಿಸುವುದು ಬಿಜೆಪಿಯ ಸ್ವಭಾವವಾಗಿದೆ. ಸಿಎಂ ಹೇಮಂತ್ ಸೋರೆನ್ ಅವರ ಸರ್ಕಾರದ ವಿರುದ್ಧವೂ ಅದೇ ರೀತಿ ಯತ್ನಿಸಲಾಗಿದೆ” ಎಂದು ಜಾರ್ಖಂಡ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಬಂಧು ಟಿರ್ಕಿ ಈ ಹಿಂದೆ ಆರೋಪಿಸಿದ್ದರು. “ಶಾಸಕರಿಗೆ ಹಣ ನೀಡಿದ ಏಕೈಕ ಕಾರಣ ಸರಕಾರ ಬೀಳಿಸಲಷ್ಟೇ” ಎಂದಿದ್ದರು.
ಇದನ್ನೂ ಓದಿರಿ: ಮುಸ್ಲಿಮರನ್ನು ಕೊಲ್ಲಲು ಪ್ರಚೋದನೆ; ಕಾಳಿ ಸ್ವಾಮೀಜಿ ವಿರುದ್ಧ ಎಫ್‌ಐಆರ್
ಆದರೆ, ಜಾರ್ಖಂಡ್‌ನಲ್ಲಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪವನ್ನು ಶಾಸಕ ಇರ್ಫಾನ್ ಅನ್ಸಾರಿ ಅವರ ಸಂಬಂಧಿಕರು ತಳ್ಳಿಹಾಕಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
“ಕೇವಲ ₹ 40-50 ಲಕ್ಷ ಅಲ್ಪ ಮೊತ್ತದಲ್ಲಿ ಸರ್ಕಾರವನ್ನು ಉರುಳಿಸಲು ಸಾಧ್ಯವಿಲ್ಲ. ಹಬ್ಬಕ್ಕಾಗಿ ಬಟ್ಟೆಗಳನ್ನು ಖರೀದಿಸಲು ಇಷ್ಟು ಹಣವನ್ನು ತೆಗೆದುಕೊಂಡು ಹೋಗುತ್ತಿದ್ದರು” ಎಂದು ಹೇಳಿಕೆ ನೀಡಲಾಗಿದೆ.
ಜಾರ್ಖಾಂಡ್‌ನಲ್ಲಿ ಆಪರೇಷನ್ ಕಮಲ ಮಾಡಲು ಆಗುತ್ತಿರುವ ಪ್ರಯತ್ನಗಳನ್ನು ಈ ಘಟನೆ ಸೂಚಿಸುತ್ತದೆ ಎಂದು ಕಾಂಗ್ರೆಸ್‌ನ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ. “ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ಕೆಡವಿದಂತೆಯೇ ಇಲ್ಲಿಯೂ ಸರ್ಕಾರವನ್ನು ಬೀಳಿಸಲು ಯತ್ನಿಸಲಾಗಿದೆ” ಎಂದು ದೂರಿದ್ದಾರೆ.


