ಕುತೂಹಲ ಕೆರಳಿಸಿದ್ದ ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ಆರಂಭವಾಗಿದ್ದ ಹಾಲಿ ಅಧಿಕಾರದಲ್ಲಿದ್ದ ಬಿಜೆಪಿಗೆ ಮುಖಭಂಗವಾಗುವ ಸಾಧ್ಯತೆಯಿದೆ. ಸದ್ಯದ ವರದಿಗಳ ಪ್ರಕಾರ 80 ಕ್ಷೇತ್ರಗಳಲ್ಲಿ ಸುಮಾರು 40 ರಲ್ಲಿ ಜೆಎಂಎಂ-ಆರ್‌ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ಮುನ್ನಡೆ ಸಾಧಿಸಿದ್ದು ಸರಳ ಬಹುಮತದತ್ತ ದಾಪುಗಾಲು ಹಾಕಿವೆ.
ಇನ್ನೊಂದೆಡೆ ಕಳೆದ ಬಾರಿ 43 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಬಾರಿ 29ರಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಕಳೆದ ಬಾರಿ ಬಿಜೆಪಿ ಜೆವಿಎಂ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಈ ಬಾರಿ ಅವೆರಡು ಸಹ ಪ್ರತ್ಯೇಕವಾಗಿ ಸ್ಪರ್ಧಿಸಿವೆ. ಜೆವಿಎಂ ಇದುವರೆಗೂ ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಹಾಲಿ ಮುಖ್ಯಮಂತ್ರಿ ರಘುಭರ್‌ದಾಸ್ ಎರಡನೇಬಾರಿಗೆ ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದರು. ಆದರೆ ಅದು ಸುಲಭವಲ್ಲ ಎಂಬುದು ಫಲಿತಾಂಶದ ದಿಕ್ಕು ನೋಡಿದರೆ ತಿಳಿಯುತ್ತಿದೆ. ಆದರೆ ಮುನ್ನಡೆಯೇ ಅಂತಿಮವಲ್ಲ, ಬಿಜೆಪಿ ಬಹುಮತ ಪಡೆಯುವ ನಿರೀಕ್ಷೆಯಿದೆ ಎಂದು ರಘುಭರ್‌ದಾಸ್ ತಿಳಿಸಿದ್ದಾರೆ.
ಇನ್ನುಳಿದಂತೆ ಎಜೆಎಸ್‌ಯು ಪಕ್ಷವು 4 ಸ್ಥಾನಗಳಲ್ಲಿ ಮುನ್ನಡೆ ಕಂಡಿದ್ದರೆ, ಸಿಪಿಐ(ಎಂಎಲ್) ಒಂದು ಕಡೆ, ಎನ್‌ಸಿಪಿ ಒಂದು ಕಡೆ, ಪಕ್ಷೇತರರು ಒಂದು ಕಡೆ ಮುನ್ನಡೆ ಸಾಧಿಸಿದ್ದಾರೆ.


