ಜಾರ್ಖಂಡ್ ವಿಧಾನಸಭೆಯು ಮಂಗಳವಾರದಂದು ‘ಗುಂಪು ಹತ್ಯೆ ಮತ್ತು ಗುಂಪು ಹಿಂಸಾಚಾರ’ದ ವಿರುದ್ಧ ಮಸೂದೆಯನ್ನು ಅಂಗೀಕರಿಸಿದೆ. ಸುದ್ದಿ ಸಂಸ್ಥೆ ಎಎನ್‌ಐ, “ಜಾರ್ಖಂಡ್ ಸರ್ಕಾರ ‘ಗುಂಪು ಹಿಂಸಾಚಾರ ಮತ್ತು ಗುಂಪು ಹತ್ಯೆ ತಡೆ ಮಸೂದೆ-2021’ ಕಾಯ್ದೆಯನ್ನು ಅಂಗೀಕರಿಸಿದೆ” ಎಂದು ವರದಿ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಮಸೂದೆಯು ಸಾಂವಿಧಾನಿಕ ಹಕ್ಕುಗಳ ಪರಿಣಾಮಕಾರಿ ರಕ್ಷಣೆ ಮತ್ತು ಗುಂಪು ಹಿಂಸಾಚಾರವನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ.
ಮಸೂದೆಯು ಗುಂಪು ಹಲ್ಲೆ ಅಥವಾ ಅದರಲ್ಲಿ ಭಾಗವಹಿಸಿದ ತಪ್ಪಿತಸ್ಥರಿಗೆ ಗರಿಷ್ಠ ಜೀವಾವಧಿ ಶಿಕ್ಷೆ ಮತ್ತು 25 ಲಕ್ಷ ರೂಪಾಯಿ ದಂಡವನ್ನು ವಿಧಿಸುತ್ತದೆ ಎಂದು ವರದಿಗಳು ಉಲ್ಲೇಖಿಸಿವೆ. ಈ ಬೆಳವಣಿಗೆಯೊಂದಿಗೆ, ಗುಂಪು ಹಲ್ಲೆಯ ವಿರುದ್ದ ಮಸೂದೆ ಅಂಗೀಕರಿಸಿರುವ ಮೂರನೇ ರಾಜ್ಯವಾಗಿ ಜಾರ್ಖಂಡ್ ಹೊರ ಹೊಮ್ಮಿದೆ. ಈ ಹಿಂದೆ ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ರಾಜ್ಯಗಳು ಗುಂಪು ಹಿಂಸಾಚಾರ ವಿರೋಧಿ ಮಸೂದೆಯನ್ನು ಅಂಗೀಕರಿಸಿದ್ದವು.
ಇದನ್ನೂ ಓದಿ:Explainer: ವೋಟರ್ ಐಡಿಯೊಂದಿಗೆ ಆಧಾರ್ ಲಿಂಕ್ ಮಾಡುವ ಮಸೂದೆಯ ಸಾಧಕ-ಬಾಧಕಗಳು
ಉದ್ದೇಶಿತ ವಿಧೇಯಕವು ಲಿಂಚಿಂಗ್ ತಡೆಗಟ್ಟುವಿಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಮನ್ವಯಗೊಳಿಸಲು ನೋಡಲ್ ಅಧಿಕಾರಿ ಎಂದು ಕರೆಯಲಾಗುವ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್ ಶ್ರೇಣಿಗಿಂತ ಕಡಿಮೆಯಿಲ್ಲದ ರಾಜ್ಯ ಸಂಯೋಜಕರನ್ನು ನೇಮಿಸಲು ಅವಕಾಶ ನೀಡುತ್ತದೆ. ಈ ನೋಡಲ್ ಅಧಿಕಾರಿಯನ್ನು ಪೊಲೀಸ್ ಮಹಾನಿರ್ದೇಶಕರು ನೇಮಿಸುತ್ತಾರೆ.
ಸಾಂವಿಧಾನಿಕ ನಿಯಮಗಳಿಗೆ ಅನುಸಾರವಾಗಿ ಕಾನೂನಾಗಲು ಈ ಮಸೂದೆಯನ್ನು ಈಗ ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಲಾಗುವುದು ಎನ್ನಲಾಗಿದೆ.
ಸದನದಲ್ಲಿ ಮಸೂದೆಯನ್ನು ಮಂಡಿಸಿದ ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಅಲಂಗೀರ್ ಆಲಂ, “ಜನರಿಗೆ ಪರಿಣಾಮಕಾರಿ ಭದ್ರತೆ ಒದಗಿಸುವುದು, ಅವರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದು ಮತ್ತು ಗುಂಪು ಹಿಂಸಾಚಾರವನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸಿ.ಬಿ.ಐ., ಇ.ಡಿ. ನಿರ್ದೇಶಕರ ಅಧಿಕಾರಾವಧಿ ವಿಸ್ತರಣೆ; ಸಂಸತ್ತಿನಲ್ಲಿ ಮಸೂದೆ ಅಂಗೀಕಾರ
ಮಸೂದೆಯ ಮೇಲಿನ ಚರ್ಚೆಯ ಸಮಯದಲ್ಲಿ, ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಹಲವಾರು ತಿದ್ದುಪಡಿಗಳನ್ನು ಮಂಡಿಸಿತು. ಅದನ್ನು ಸರ್ಕಾರವು ಧ್ವನಿ ಮತದ ಮೂಲಕ ಬದಿಗಿಟ್ಟಿತು. ಅಲ್ಪಸಂಖ್ಯಾತರ ಓಲೈಕೆಗಾಗಿ ರಾಜ್ಯ ಸರ್ಕಾರ ತರಾತುರಿಯಲ್ಲಿ ಮಸೂದೆಯನ್ನು ತಂದಿದೆ ಎಂದು ಬಿಜೆಪಿ ನಾಯಕ ಸಿಪಿ ಸಿಂಗ್ ಆರೋಪಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಗುಂಪು ಹಿಂಸಾಚಾರದ ಅನೇಕ ಪ್ರಕರಣಗಳು ವರದಿಯಾಗಿವೆ. 2019 ರಲ್ಲಿ 24 ವರ್ಷದ ತಬ್ರೇಜ್ ಅನ್ಸಾರಿಯನ್ನು ಸೆರೈಕೆಲಾ ಖಾರ್ಸಾವನ್ ಜಿಲ್ಲೆಯಲ್ಲಿ ಮೇಕೆ ಕಳ್ಳತನದ ಶಂಕೆಯ ಮೇಲೆ ಕಟ್ಟಿಹಾಕಿ ಥಳಿಸಿದಾಗ ರಾಜ್ಯದಲ್ಲಿ ಗುಂಪು ಹತ್ಯೆಯ ಘಟನೆಗಳು ಮುನ್ನೆಲೆಗೆ ಬಂದಿದ್ದವು. ಈ ಥಳಿತದಿಂದಾಗಿ ಅವರು ಸಾವನ್ನಪ್ಪಿದ್ದರು.
ಬುಡಕಟ್ಟು ರಾಜ್ಯವಾದ ಜಾರ್ಖಂಡ್‌ನಲ್ಲಿ ವಾಮಾಚಾರ ನಡೆಸುತ್ತಿದ್ದಾರೆ ಎಂದು ಶಂಕಿಸಿ ಗುಂಪು ಹತ್ಯೆ ಮಾಡಿದ ಘಟನೆಗಳೂ ನಡೆದಿವೆ. ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೊರೆನ್ ಗುಂಪು ಹಿಂಸಾಚಾರದ ಘಟನೆಗಳನ್ನು ಖಂಡಿಸಿ, ಅದರ ವಿರುದ್ಧ ಕಾನೂನು ತರುವುದಾಗಿ ಭರವಸೆ ನೀಡಿದ್ದರು.
ಇದನ್ನೂ ಓದಿ:ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಮಂಡನೆಯಾಗಲಿವೆ 26 ಹೊಸ ಮಸೂದೆ: ಇಲ್ಲಿದೆ ಸಂಕ್ಷಿಪ್ತ ವಿವರ


