ವಾಷಿಂಗ್ಟನ್‌ನ ಅಮೆರಿಕ ಸಂಸತ್ (ಕ್ಯಾಪಿಟಲ್) ಮೇಲೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅನಿರೀಕ್ಷಿತ ದಾಳಿ ನಡೆಸಿ ಗಲಭೆ ನಡೆಸುತ್ತಿರುವುದರ ನಡುವೆಯೇ ಜೋ ಬೈಡನ್-ಕಮಲಾ ಹ್ಯಾರಿಸ್ ರವರ ಅಧ್ಯಕ್ಷೀಯ ಚುನಾವಣಾ ವಿಜಯವನ್ನು ಕಾಂಗ್ರೆಸ್ ಅಧಿಕೃತವಾಗಿ ಪ್ರಮಾಣೀಕರಿಸಿದೆ.
ಹೌಸ್ ಮತ್ತು ಸೆನೆಟ್ ಎರಡೂ ಸದನಗಳು ಡೆಮೋಕ್ರಾಟ್‌ಗಳ ಚುನಾವಣಾ ಎಲೆಕ್ಟೋರೊಲ್ ಗೆಲುವನ್ನು ಪ್ರಮಾಣೀಕರಿಸಿವೆ. ಇದಕ್ಕೂ ಮೊದಲು ಟ್ರಂಪ್ ಚುನಾವಣೆಯಲ್ಲಿ ಮೋಸ ನಡೆದಿದೆ ಎಂದು ಆರೋಪಿಸಿ ತಾನು ಗೆದ್ದಿದ್ದೆನೆಂದು ಪದೇ ಪದೇ ಆಧಾರ ರಹಿತ ವಾದಗಳನ್ನು ಮಾಡಿದ್ದರು.
ನವೆಂಬರ್ 03 ರಂದು ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡನ್ ಅವರನ್ನು ಪ್ರಾಮಾಣೀಕರಿಸುವ ಕಾರ್ಯಕ್ರಮ ಇಂದು ನಿಗಧಿಯಾಗಿತ್ತು. ಅದಕ್ಕಾಗಿ ಹಲವಾರು ಶಾಸಕರು ಸೇರಿದ್ದರು. ಈ ವೇಳೆ ಸಂಸತ್ ಹೊರಗಿದ್ದ ಟ್ರಂಪ್ ಬೆಂಬಲಿಗರು ಬಲವಂತವಾಗಿ ಬ್ಯಾರಿಕೇಡ್ ಮುರಿದು ಒಳ ಪ್ರವೇಶಿಸಿದ್ದಾರೆ. ಗಲಭೆ ಭುಗಿಲೆದ್ದು ಇದುವರೆಗೂ ನಾಲ್ಕು ಜನರು ಮೃತಪಟ್ಟಿದ್ದಾರೆ. ಪ್ರಪಂಚಾದ್ಯಂತ ಈ ಘಟನೆಯನ್ನು ಖಂಡಿಸಿದ್ದಾರೆ.
ಜೋ ಬೈಡನ್ 306-232 ಚುನಾವಣಾ ಮತಗಳಿಂದ ಟ್ರಂಪ್ ಅವರನ್ನು ಸೋಲಿಸಿದರು ಮತ್ತು ಜನವರಿ 20 ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕೃತವಾಗಿ ಕಾರ್ಯನಿರ್ವಹಿಸಲಿದ್ದಾರೆ.
ಇದನ್ನೂ ಓದಿ: ಅಮೆರಿಕ ಸಂಸತ್ ಮೇಲೆ ದಾಳಿ: ಟ್ರಂಪ್ ಖಾತೆ ಸ್ಥಗಿತಗೊಳಿಸಿದ ಟ್ವಿಟರ್, ಫೇಸ್‌ಬುಕ್!


