Homeಮುಖಪುಟಲಂಕೇಶ್-86: 'ಯಾಕ್‌ ಅಂದ್ರ ಅದು ಲಂಕೇಶ್‌ದೊಳಗ ಬಂದದ ಅಂದ್ರ ಖರೆ ಇದ್ದೇ ಇರ್ತದ'

ಲಂಕೇಶ್-86: ‘ಯಾಕ್‌ ಅಂದ್ರ ಅದು ಲಂಕೇಶ್‌ದೊಳಗ ಬಂದದ ಅಂದ್ರ ಖರೆ ಇದ್ದೇ ಇರ್ತದ’

- Advertisement -
- Advertisement -

ಬುದ್ಧಿವಂತರು ಮೆಡಿಕಲ್-ಇಂಜಿನಿಯರಿಂಗ್ ಬಿಟ್ಟು ಬೇರೆ ಓದಬಾರದು ಅನ್ನೋ ಕಾಲದಲ್ಲಿ ನಾವು ಹುಬ್ಬಳ್ಳಿಯಲ್ಲಿ ಓದುತ್ತಾ ಇದ್ದೆವು.

ನಮ್ಮ ಹಾಸ್ಟೆಲ್‌ನಲ್ಲಿ ಬಹಳ ಬುದ್ಧಿವಂತರೂ, ಸ್ನೇಹಜೀವಿಗಳೂ ಆದ ನಮ್ಮ ಸೀನಿಯರ್ ಒಬ್ಬರು ಇದ್ದರು. ಜೂನಿಯರ್ ಹುಡುಗರು ಎಲ್ಲರೂ ಓದುವಾಗ ಯಾವುದಾದರೂ ಸಂದೇಹ ಬಂದರೆ ಅವರ ಕೋಣೆಗೆ ಹೋಗಿ ಪ್ರಶ್ನೆ ಕೇಳುವುದು, ಅದಕ್ಕೆ ಅವರು ಸರಳ ಭಾಷೆಯಲ್ಲಿ ತಿಳಿಸಿ ಹೇಳುವುದು, ಇದು ನಡೆಯುತ್ತಾ ಇತ್ತು.

ಮೊದಲಿಗೆ ಅವರು ಕೇವಲ ವಿಜ್ಞಾನ ಹೇಳಿಕೊಡುತ್ತಿದ್ದರು ಅಂತ ನಾವು ತಿಳಿದುಕೊಂಡಿದ್ದೆವು. ಆದರೆ ಅವರು ಕನ್ನಡ-ಇಂಗ್ಲಿಷ್, ಸಮಾಜ ವಿಜ್ಞಾನ, ಅರ್ಥಶಾಸ್ತ್ರ ಇತ್ಯಾದಿ ಎಲ್ಲಾ ಹೇಳಿಕೊಡುತ್ತಿದ್ದರು. ವೈದ್ಯ ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕ ಆರೋಗ್ಯದ ಬಗ್ಗೆ, ಇಂಜಿನಿಯರಿಂಗ್ ಹುಡುಗರ ಜೊತೆ ಕಂಪ್ಯೂಟರ್ ಚರ್ಚೆ ಮಾಡುತ್ತಿದ್ದರು. ಸಮಾನ ಮನಸ್ಕರೊಂದಿಗೆ ಸಿನಿಮಾ, ಶಾಸ್ತ್ರೀಯ ಸಂಗೀತ, ಯಕ್ಷಗಾನ, ನಾಟಕ, ಇತ್ಯಾದಿಗಳ ಬಗ್ಗೆ ಮಾತನಾಡುತ್ತಾ ಹೊಸ ಹೊಸ ವಿಷಯ ಹೇಳುತ್ತಿದ್ದರು.

ಒಳ್ಳೆ ಕಂಠದ ಅವರು ಹಾಡುತ್ತಿದ್ದರು, ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿದ್ದರು.

ನಮ್ಮ ಹಾಸ್ಟೆಲ್‌ನಲ್ಲಿ ಇನ್ನೊಬ್ಬ ಮಜಾ ಆಸಾಮಿ ಇದ್ದ. ಅವನ ಹೆಸರು ಬಾಬು. ಅವನು ಕೆಲವರಿಗೆ ಉಡಾಳನಂತೆಯೂ, ಇನ್ನೂ ಕೆಲವರಿಗೆ ಮಗುವಿನ ಮನಸ್ಸಿನ ಹುಡುಗನಂತೆಯೂ ಕಾಣುತ್ತಿದ್ದ. ಒಂದು ದಿವಸ ಊಟದ ಕೋಣೆಯ ಹೊರಗೆ ಮಾತಾಡುತ್ತಾ ನಿಂತಾಗ ಅವನು ಕೇಶವ ಅವರನ್ನು ಕೇಳಿಬಿಟ್ಟ: “ನೀವು ಇಷ್ಟೆಲ್ಲಾ ಬುದ್ಧಿವಂತರು ಇದ್ದೀರಿ, ನೀವು ಯಾಕ್ ಮೆಡಿಕಲ್ ಇಂಜಿನಿಯರಿಂಗ್ ಹಚ್ಚಲಿಲ್ಲಾ?” ಅವರು ನಗುತ್ತಾ ಉತ್ತರಿಸಿದರು: “ಅಯ್ಯೋ ಬುದ್ಧಿವಂತಿಕೆ ಯಾರಿಗೆ ಬೇಕು? ಈಗಿನ ಕಾಲದಲ್ಲಿ ಎಲ್ಲರಿಗೂ ಬರೀ ಮಾರ್ಕ್ಸ್-ಸಿಇಟಿ ಅಂಕ ಬೇಕು” ಅಂತ ಅಂದ್ರು. ಬುದ್ಧಿವಂತಿಕೆ ಹಾಗೂ ಮಾರ್ಕ್ಸ್‌ಗೆ ಸಂಬಂಧ ಇಲ್ಲ ಅಂತ ನನಗೆ ಮೊದಲಿನಿಂದಲೂ ಒಂದು ಸಂದೇಹ ಇತ್ತು. ಅದು ಅವತ್ತು ಖಾತ್ರಿ ಆತು.

ಆನಂತರ ಅವರು ತಮ್ಮ ಕತೆ ದೊಡ್ಡದು ಮಾಡಿ ಹೇಳಿದರು. “ನಾವು ಹೈಸ್ಕೂಲ್ ಇದ್ದಾಗ ಲಂಕೇಶ್ ಪತ್ರಿಕೆ ಓದಲಿಕ್ಕೆ ಶುರು ಮಾಡಿದೆವು. ಆ ನಂತರ ಪಿಯುಸಿ ಇದ್ದಾಗ ಅದನ್ನು ತುಂಬ ಹಚ್ಚಿಕೊಂಡುಬಿಟ್ಟೆವು. ಅದು ಇಲ್ಲದೆ ಇದ್ರೆ ನಾವು ಜೀವಂತ ಇರಲಿಕ್ಕೆ ಸಾಧ್ಯ ಇಲ್ಲ ಅನ್ನೋ ಹಾಗೆ ಆಗಿಬಿಟ್ಟೆವು. ಅದನ್ನು ನೋಡಿದ ನಮ್ಮ ಮನೆಯವರೆಲ್ಲಾ ನನಗೇನೋ ಹುಚ್ಚು ಹಿಡಿದಿದೆ, ಇದು ನನ್ನ ಪರೀಕ್ಷೆಯ ಮೇಲೆ ಪರಿಣಾಮ ಬೀರುತ್ತದೆ ಅಂತ ಅಂದುಕೊಂಡುಬಿಟ್ಟರು” ಅಂತ.

“ನಮ್ಮ ಊರು ಸಣ್ಣ ಊರು, ಎಲ್ಲರ ಮನೆಯ ವಿಷಯ ಎಲ್ಲರಿಗೂ ಗೊತ್ತು. ನಮ್ಮ ಕುಟುಂಬದವರು, ಗುರುತು ಪರಿಚಯದವರು ತಮ್ಮ ಹತ್ತಿರದವರಿಗೆ ಪಿಸುಮಾತಿನಲ್ಲಿ ಹೇಳಿಕೊಂಡುಬಿಟ್ಟರು. ‘ನಮ್ಮ ಹುಡುಗ ಬುದ್ಧಿವಂತ, ಆದರೆ ಅವನಿಗೆ ಲಂಕೇಶ್ ಪತ್ರಿಕೆಯ ಚಟ. ಅದರಿಂದ ಭವಿಷ್ಯ ಹಾಳಾಗಬಹುದು,’ ಅಂತ. ಅದನ್ನು ಕೇಳಿದ ನನ್ನ ಹಳೆಯ ಶಾಲೆ ಮಾಸ್ತರು ಒಬ್ಬರು ಅವನು ತುಂಬ ಒಳ್ಳೆಯವನು. ಅವನು ಯಾವ ಕ್ಷೇತ್ರದಲ್ಲಿ ಬೇಕಾದರೂ ಸಾಧನೆ ಮಾಡುತ್ತಾನೆ. ಅವನ ಭವಿಷ್ಯದ ಬಗ್ಗೆ ಯಾಕೆ ಚಿಂತೆ ಮಾಡುತ್ತೀರಿ, ಅವನು ತನ್ನ ದಾರಿ ತಾನು ನೋಡಿಕೊಳ್ಳಬಲ್ಲ, ಅಂತ ಹೇಳಿದರು. ಆ ನಂತರ ನಮ್ಮ ಮನೆಯವರು ನನ್ನನ್ನು ನನ್ನಷ್ಟಕ್ಕೆ ಬಿಟ್ಟರು. ನಾನು ಹುಬ್ಬಳ್ಳಿಗೆ ಬಂದೆ” ಅಂತ.

ಅವರು ಬಿ.ಎಸ್‌ಸಿ ಮುಗಿಸಿ ಎಂಎಸ್‌ಸಿ ಮಾಡಿದರು. ಬ್ರಿಟನ್ ವಿವಿಯೊಂದರಲ್ಲಿ ಸಂಶೋಧನೆ ಮಾಡಿದರು, ನಂತರ ಕಾಲೇಜು ಶಿಕ್ಷಕರಾದರು. ಪರಿಸರ, ಪಶ್ಚಿಮ ಘಟ್ಟದ ಸಸ್ಯಗಳ ಬಗ್ಗೆ ಅಧಿಕಾರಯುತವಾಗಿ ಮಾತಾಡುವ ಸಂಶೋಧಕರಾದರು. ಪರಿಸರ ರಕ್ಷಣೆಯ ಪ್ರಮುಖ ಚಿಂತಕರಲ್ಲಿ ಒಬ್ಬರಾಗಿ, ಕನ್ನಡ ಪತ್ರಿಕೆಗಳಿಗೆ ನಿಯಮಿತವಾಗಿ ಬರೆಯುವ ಲೇಖಕರಾಗಿ ರೂಪುಗೊಂಡರು.

ಹಾಗಾದಲ್ಲಿ ‘ಕನ್ನಡ ಜಾಣಜಾಣೆಯರ ಪತ್ರಿಕೆ’ಯಾಗಿದ್ದ ಲಂಕೇಶ್ ಪತ್ರಿಕೆ ತನ್ನನ್ನು ನಿಷ್ಠೆಯಿಂದ ಓದುವ ಹುಡುಗರನ್ನು ದಡ್ಡರನ್ನಾಗಿ ಮಾಡುವ ಪೇಪರ್ ಅಂತ ಇಮೇಜು ಬೆಳೆಸಿಕೊಂಡಿದ್ದು ಏಕೆ ಮತ್ತು ಹೇಗೆ? ಅದು ಆ ಪತ್ರಿಕೆ ಓದಿದವರ ಅಭಿಪ್ರಾಯವೋ ಅಥವಾ ಓದದೆ ಇದ್ದವರ ಅಭಿಪ್ರಾಯವೋ ಅಂತ ನನಗೆ ಆ ಕಾಲಕ್ಕೆ ತಿಳಿಯದೆಹೋಯಿತು.

‘ಕಿರಾಣಿ ಅಂಗಡಿಯಲ್ಲಿ ಮಂಡಕ್ಕಿ ಚುರುಮುರಿ ಸುತ್ತಿಕೊಟ್ಟ ಪೇಪರ್ ಸಹಿತ ಓದುತ್ತಾನೆ’ ಎನ್ನುವ ಇಮೇಜ್ ಇಟ್ಟುಕೊಂಡಿದ್ದ ನಾನು ಹಾಗೂ ನನ್ನ ಅಂತಹುದೇ ಕೆಲವು ಸ್ನೇಹಿತರು ಲಂಕೇಶ್ ಪತ್ರಿಕೆ ಓದುತ್ತಲೇ ಬೆಳೆದವರು. ಆ ಪತ್ರಿಕೆ ನಮ್ಮ ಊರಿಗೆ ಬರಲು ಆರಂಭವಾಗಿದ್ದು, ಅವರು 1983ರಲ್ಲಿ ಚುನಾವಣಾ ಪೂರ್ವ ವರದಿ ಮಾಡಿದ ನಂತರ. ನಮ್ಮ ಊರಲ್ಲಿ ಕಾಂಗ್ರೆಸ್-ಐ ಹಾಗೂ ಜೆಪಿ ಹಿಂಬಾಲಕರ ನಡುವೆ ದೊಡ್ಡ ಜಗಳಗಳೇ ನಡೆದುಹೋಗಿದ್ದವು. ಹಿರಿಯರೆಲ್ಲರೂ ಕಾಂಗ್ರೆಸ್ ಪರ ಹಾಗೂ ತರುಣರೆಲ್ಲರೂ ಕಾಂಗ್ರೆಸ್ ವಿರೋಧಿ ಅಂತ ಮೊಗಮ್ಮಾಗಿ ಒಪ್ಪಿಗೆ ಆಗಿಬಿಟ್ಟಿತ್ತು. ಆ ನಂತರದ ದಿನಗಳಲ್ಲಿ ರಾಮಕೃಷ್ಣ ಹೆಗಡೆ ಹಾಗೂ ಅವರ ಪಕ್ಷದ ಚರ್ಚೆ ಶುರುವಾಯಿತು. ಆ ಹೊತ್ತಿನಲ್ಲಿ ಚರ್ಚೆಗೆ ಬಂದಿದ್ದು ಪತ್ರಿಕೆ. ಮೊದಲಿಗೆ ರಾಜಕಿಯ ನಾಯಕರ ಹಾಗೂ ಅಸಕ್ತರ ಮನೆಗಳಲ್ಲಿ ಕಾಣುತ್ತಿದ್ದ ಈ ಪತ್ರಿಕೆ ಆನಂತರ ಅನೇಕರ ಮನೆಗಳಲ್ಲಿ ನಮಗೆ ಓದಲಿಕ್ಕೆ ಸಿಗಲಿಕ್ಕೆ ಶುರು ಆಯಿತು.

“ಲಂಕೇಶ್ ಅನ್ನುವುದು ಅವರ ಹೆಸರು ಇರಲಿಕ್ಕೆ ಇಲ್ಲ. ಅವರ ಕಾವ್ಯನಾಮ ಇರಬಹುದು. ಲಂಕೇಶ್ ಅಂತ ಯಾವ ತಂದೆ ತನ್ನ ಮಗನಿಗೆ ಹೆಸರು ಇಡತಾನ?” ಅಂತ ನಮ್ಮ ಹಿರೀಕರು ಮಾತಾಡುತ್ತಿದ್ದರು. ಹುಬ್ಬಳ್ಳಿಗೆ ಓದಲಿಕ್ಕೆ ಬರುವವರೆಗೂ ನಾನೂ ಹೀಗೇ ತಿಳಿದುಕೊಂಡಿದ್ದೆ. “ಯಾರೋ ಬೆಂಗಳೂರು ಕಡೆ ಪ್ರೊಫೆಸರ್ ಅಂತ. ನೌಕರಿ ಸಾಕಾಗಿ ಪೇಪರ್ ಶುರು ಮಾಡಿಬಿಟ್ಟಾನ. ಬ್ಯಾರೆ ಪೇಪರ್‌ದ ಒಳಗ ಬರಲಾರದ ವಿಷಯ ಎಲ್ಲಾ ಇದರಾಗ ಸಿಗತಾವು. ಇವನಿಗೆ ಸರಕಾರ ಸಹಿತ ಹೆದರತೈತಿ, ಇವನ ಸುದ್ದಿಗೆ ವಿಧಾನಸೌಧ ಅಳಗಾಡತೈತಿ. ಹಂಗ ಅಂತ ಅವನ ಕನ್ನಡನೂ ಚಲೋ ಅದ” ಅಂತ ನಮ್ಮ ಹಳ್ಳಿಯ ಮಾಸ್ತರುಗಳು ತಮ್ಮತಮ್ಮೊಳಗೆ ಮಾತಾಡಿಕೊಳ್ಳುವುದು ನಮಗೆ ಕೇಳುತ್ತಿತ್ತು. ಅವರ ಒಳಗೆ ‘ಇವನೂ ನಮ್ಮ ಹಾಗೆಯೇ ಒಬ್ಬ ಮಾಸ್ತರ ಇದ್ದಾ’ ಅನ್ನುವ ಅಭಿಮಾನವೂ ಇರಬಹುದು ಅಂತ ನಮಗೆ ಅನ್ನಿಸುತ್ತಿತ್ತು.

ಮನೆಗೆ ಪಿಜ್ಜಾ ಬಂದಾಗ ಹುಡುಗರು ಅದರ ಬೇರೆ ಬೇರೆ ತುಂಡು ಬಿಡಿಸಿ ತಿನ್ನುವ ರೀತಿಯಲ್ಲಿ ನಾವು ಲಂಕೇಶ್ ಪತ್ರಿಕೆ ಪುಟ ಬೇರೆ ಬೇರೆ ಮಾಡಿ, ಓದುತ್ತಾ ಇದ್ದೆವು. ಒಮ್ಮೊಮ್ಮೆ ನಡುವಿನ ಜೋಡು ಪುಟಗಳನ್ನು ಹರಿದು ಓದುತ್ತಿದ್ದೆವು.

ಹದಿಹರೆಯದ ಹುಡುಗರಾದ ನಮಗೆ ಲಂಕೇಶ್ ಬರೆಯುವ ವಿಶ್ವದ ವಿದ್ಯಮಾನಗಳು ಬಹಳ ಇಷ್ಟವಾಗುತ್ತಿದ್ದವು. ನಮ್ಮ ಕೆಲವು ಹಿರಿಯ ಗೆಳೆಯರಿಗೆ ರಾಜಕೀಯ, ಸಿನಿಮಾ ಇಷ್ಟವಾದರೆ ಇನ್ನೂ ನಮ್ಮ ಓಣಿಯ ಹೆಣ್ಣು ಮಕ್ಕಳು ಕತೆ-ಕವನ ಓದುವವರು. ಸಣ್ಣ ಹುಡುಗರಾದ ನಾವು ಅವರಿಗೆ ಒಂದು ಪುಟ, ಇವರಿಗೆ ಒಂದು ಪುಟ ತಲುಪಿಸುವ ಕೊರಿಯರ ಬಾಯ್‌ಗಳಾಗಿ ಓಡಾಡುತ್ತಿದ್ದೆವು.

ಒಂದು ದಿವಸ ನಮ್ಮ ಊರಿನ ಲೈಬ್ರರಿ ಇದ್ದ ಬ್ಯಾಂಕಿನ ಕಟ್ಟಡದ ಮೆಟ್ಟಿಲುಗಳ ಮೇಲೆ ಕೂತಾಗ ನಮ್ಮ ಹಿರಿಯ ಗೆಳೆಯ ಪ್ರದೀಪ್ “ಅಮೆರಿಕದೊಳಗ ಬಿಳಿಯರು ಕರಿಯರನ್ನು ಈಜು ಕೊಳದ ನೀರಿನಲ್ಲಿ ಮುಳುಗಿಸಿ ಕೊಲ್ಲಾಕ್ ಹತ್ಯಾರ” ಅಂತ ಅಂದ. ನಮ್ಮ ದೋಸ್ತ ಮುಕುಂದ “ನೀನರ ನಿಮ್ಮ ಓಣಿ ಬಿಟ್ಟು ಹೋಗೋದಿಲ್ಲ. ಅಮೆರಿಕದ ಸುದ್ದಿ ಯಾರು ಹೇಳಿದರಪ್ಪ ನಿಂಗ” ಅಂತ ಕೇಳಿದ. ‘ಲಂಕೇಶ್ ಪತ್ರಿಕೆ’ ಅಂತ ಪ್ರದೀಪ್ ಎರಡೇ ಶಬ್ದದ ಉತ್ತರ ಕೊಟ್ಟ. ಇದನ್ನು ಯಾರು ಖಂಡಿಸಲಿಕ್ಕೆ ಹೋಗಲಿಲ್ಲ. ಯಾಕ್‌ಅಂದ್ರ ಅದು ಲಂಕೇಶ್‌ದೊಳಗ ಬಂದದ ಅಂದ್ರ ಖರೆ ಇದ್ದೇ ಇರ್ತದ ಅಂತ ಎಲ್ಲರಿಗೂ ಖಾತ್ರಿ ಇತ್ತು.

ವಯಸ್ಸು ಬೆಳೆದ ಹಾಗೆ ನಾನು ಲಂಕೇಶ್ ಓದುವ ರೀತಿ ಬದಲಾಯಿತು. ಅದರಲ್ಲಿನ ಸುದ್ದಿಗಳಿಗಿಂತ ಹೆಚ್ಚು ಅವರ ಸಾಮಾಜಿಕ ಜೀವನದ ಒಳನೋಟಗಳ ಬಗ್ಗೆ ಆಕರ್ಷಣೆ ಹೆಚ್ಚು ಆಯಿತು. ಲಂಕೇಶ್ ಅವರ ಸಾಹಿತ್ಯ ಕೃತಿಗಳನ್ನು ಓದುವ ಪ್ರವೃತ್ತಿ ನನ್ನಲ್ಲಿ ಬೆಳೆಯಲಿಕ್ಕೆ ಕಾರಣ, ಆ ದಿನಗಳಲ್ಲಿ ನಮಗಿಂತ ಹೆಚ್ಚು ಓದಿದ, ಕವಿ, ವಿಮರ್ಶಕ, ವೈದ್ಯ ವಿದ್ಯಾರ್ಥಿ ಡಾ. ಕೇಶವ ಅವರ ಪರಿಚಯ-ಸ್ನೇಹದಿಂದ. “ಲಂಕೇಶ್ ಒಳ್ಳೆಯ ಪತ್ರಕರ್ತ. ಅದಕ್ಕಿಂತಲೂ ಒಳ್ಳೆಯ ಕವಿ” ಅಂತ ಅವರು ನಮ್ಮ ಮೊದಲ ಭೇಟಿಯಲ್ಲಿಯೇ ಹೇಳಿದರು. ಇಷ್ಟು ಪ್ರಖರ – ಧೈರ್ಯಶಾಲಿ ಪತ್ರಿಕೋದ್ಯಮ ಮಾಡುವ ಈ ಮನುಷ್ಯ ಇನ್ನು ಎಂಥ ಕತೆ- ಕವನ ಬರೀತಿದ್ದಾನು ಅಂತ ಅಂದುಕೊಂಡೆ. ಆ ನಂತರ ಲೈಬ್ರರಿಗಳಲ್ಲಿ ನಾನು ಅವರ ಕತೆ- ಕವನ- ನಾಟಕ ಓದಲು ಆರಂಭಿಸಿದೆ. ಈ ಪುಣ್ಯಾತ್ಮ ಎಷ್ಟು ಛಂದ ಸಾಹಿತ್ಯ ಬರಿತಾನ. ಇದನ್ನೆಲ್ಲಾ ಬಿಟ್ಟು ವಾರಾ-ವಾರಾ ‘ಅಪಘಾತದಲ್ಲಿ ಒಂದು ಸಾವು ಎರಡು ಗಾಯ’ದಂತಾ ಸುದ್ದಿ ಬರಿಲಿಕ್ಕೆ ಯಾಕ್ ಹೋಗತಾನ ಅಂತ ಅನೇಕ ಬಾರಿ ಅನ್ನಿಸಿದ್ದು ಇದೆ.

ಅವರ ಚಿಂತನೆ-ಬರಹ-ಹೋರಾಟ, ಹೋರಾಟಗಾರರು, ಸಂಘಸಂಸ್ಥೆಗಳಿಗೆ ಬೆಂಬಲ, ಎಲ್ಲವನ್ನೂ ನೋಡಿದ ಅನೇಕರಿಗೆ ಅವರು ಸ್ಪೂರ್ತಿಯಾದರು. “ಸದ್ಯಕ್ಕೆ ಅಂತೂ ಲಂಕೇಶ್‌ರಂತಹ ಪತ್ರಕರ್ತ-ಸಾಹಿತಿ ಇನ್ನೊಬ್ಬರು ಬರಲಿಕ್ಕೆ ಸಾಧ್ಯ ಇಲ್ಲ ಅನ್ನುವ ನಂಬಿಕೆ ಅನೇಕ ತಲೆಮಾರುಗಳ ಯುವಕ-ಯುವತಿಯರಲ್ಲಿ ಮೂಡಿದ್ದು ಸಹಜ-ನಿಜ.

ಸರಳ ಭಾಷೆಯ ಪ್ರತಿಪಾದಕನಾದ ನಾನು ಪತ್ರಿಕೋದ್ಯಮ-ಸಾಹಿತ್ಯ ವಿದ್ಯಾರ್ಥಿಗಳ ಎದುರು ಭಾಷಣ ಮಾಡುವಾಗ, ತರಬೇತಿ ನೀಡುವಾಗ ಇಂಗ್ಲಿಷ್‌ಗೆ ಕೊಡುವ ಉದಾಹರಣೆ ಜ್ಯೋತಿ ಸನ್ಯಾಲ ಅವರದ್ದು, ಆದರೆ ಕನ್ನಡದ ಉದಾಹರಣೆ ಲಂಕೇಶ್ ಅವರದ್ದು. ತಮಗೆ ತಿಳಿದೋ-ತಿಳಿಯದೋ ಅವರು ಜಾಗೃತ ಮನೋ ವಿಚಾರಧಾರೆಯ ತಂತ್ರ ಬಳಸುತ್ತಿದ್ದರು ಅಂತ ನನಗೆ ಅನ್ನಿಸಿದೆ. ಅವರು ತಮ್ಮ ವಿಚಾರ ಸ್ಪಷ್ಟತೆಗೆ ವಿವಿಧ ಅರ್ಥದ ಪದಗಳನ್ನು ಹೈಫನ್ ಹಾಕಿ ಬಳಸುವ ತಂತ್ರವನ್ನು ನಾನು ಕೇವಲ ಅವರಲ್ಲಿ ಕಂಡಿದ್ದೇನೆ.

ನನ್ನ ಓದು-ಪತ್ರಿಕೋದ್ಯಮದ ಮೊದಲು ಹತ್ತು ವರ್ಷಗಳು ಬೆಂಗಳೂರಿನಲ್ಲಿ ಕಳೆದರೂ ನಾನು ಅವರನ್ನು ಯಾವತ್ತೂ ಭೇಟಿ ಆಗಲು ಆಗಲಿಲ್ಲ. ಒಂದು ವಿಚಾರ ಸ್ವಾತಂತ್ರ್ಯದ ಹೋರಾಟದಲ್ಲಿ ಅವರನ್ನು ನಾನು ದೂರದಿಂದ ಕಂಡೆ. ಇವರು ಬರೆಯುವಷ್ಟು ಚನ್ನಾಗಿ ಮಾತು ಆಡೋದಿಲ್ಲ ಅಂತ ನನ್ನ ಗೆಳೆಯ ಮಹೇಶ್ ಹೇಳಿದ ಮಾತು ನನಗೆ ಸರಿ ಅನ್ನಿಸಿತು. ಅವರು ತೀರಿಹೋದ ದಿನ ನಾನು ಬೆಂಗಳೂರಿನಲ್ಲಿಯೇ ಇದ್ದೇ. ಆದರೆ ಅವತ್ತೂ ಅವರನ್ನು ನೋಡಲಿಕ್ಕೆ ಆಗಲಿಲ್ಲ.

ನನ್ನ ಜೀವನ ಎಂಬೋ ಸಫಾರಿಯಲ್ಲಿ ಲಂಕೇಶ್ ಅವರ ಬಗ್ಗೆ ಕೆಟ್ಟದಾಗಿ ಮಾತು ಆಡುವವರು ಸಹಿತ ಭೆಟ್ಟಿ ಆದರು. “ನಾವು ಏನೋ ಸುಮ್ಮನೆ ಮಾತು ಆಡುವಾಗ ವಿಶ್ವಾಸದಿಂದ ಹೇಳಿದ ವಿಷಯಗಳನ್ನು ಅವರು ಪತ್ರಿಕೆಯಲ್ಲಿ ಬರೆದೇಬಿಡುತ್ತಾರೆ. ಆಮೇಲೆ ಆ ಸುದ್ದಿಗೆ ಸಂಬಂಧಪಟ್ಟವರು ಎಲ್ಲಾದರು ಭೇಟಿ ಆದಾಗ ತುಂಬ ಮುಜುಗರ ಆಗುತ್ತದೆ” ಅಂತ ಒಬ್ಬ ವಿಧಾನ ಪರಿಷತ್ ಸದಸ್ಯರು ಒಮ್ಮೆ ಹೇಳಿದರು.

“ಲಂಕೇಶ್‌ಗೆ ಶ್ರೀಮಂತರನ್ನು ಕಂಡರೆ ಆಗಲ್ಲ. ಅದಕ್ಕೆ ಅವನು ಏನಾದರೂ ಮಾಡಿ ಶ್ರೀಮಂತರಿಗೆ ಬೈಯ್ಯಕ್ಕೆ ನೋಡ್ತಾನೆ” ಅಂತ ಲಂಕೇಶ್ ಅವರ ಸಹೋದ್ಯೋಗಿಯಾಗಿದ್ದ ಬೆಂಗಳೂರು ವಿವಿ ಪ್ರೊಫೆಸರ್ ಒಬ್ಬರು ಹೇಳಿದ್ದರು.

“ಇತರ ಪತ್ರಿಕೆಗಳು ಒಂದು ಸುದ್ದಿಯ ಎರಡೂ ಮಗ್ಗುಲನ್ನು ಬರೆಯುವುದಿಲ್ಲ ಅಂತ ಲಂಕೇಶ್ ಕಂಪ್ಲಯಿಂಟ್ ಮಾಡ್ತಾನೆ, ಆದರೆ ತಾನು ಮಾಡೋದು ಏನು? ಬಹುಶಃ ಇತರ ಪತ್ರಿಕೆಗಳು ಬಿಟ್ಟು ಬಿಟ್ಟಿರುವ ಸುದ್ದಿಯ ಮಗ್ಗಲು ಇವನು ಬರೀತಾನೆ ಅಂತ ನಾವು ಸಮಾಧಾನ ಪಟ್ಟುಕೊಬೇಕೇನೋ” ಅಂತ ಪತ್ರಿಕೋದ್ಯಮ ಶಿಕ್ಷಕರು ಒಬ್ಬರು ಹೇಳುತ್ತಾ ನಗಾಡಿದ್ದರು.

ನಾನು ಸುದ್ದಿಮನೆ ಸೇರುವ ಮೊದಲೇ ವೃತ್ತ ಪತ್ರಿಕೆ ಓದುವ ಹವ್ಯಾಸ ಇಟ್ಟುಕೊಂಡವನು. ಆ ನಂತರ ಡಾ. ನಂಜುಂಡಪ್ಪ ಅವರ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಸೇರಿದ ಮೇಲೆ ಅಂತಾರಾಷ್ಟ್ರೀಯ ಪತ್ರಿಕೆಗಳನ್ನು ಓದಲು ಆರಂಭಿಸಿದೆ. ಆ ಅಭ್ಯಾಸ ಈಗಲೂ ಇದೆ.

ಕಂಚನಹಳ್ಳಿ ಗಂಗಾಧರಮೂರ್ತಿ ಕೊಲೆ ವಿರುದ್ಧ ಹೋರಾಟ ನಡೆಸಿದ ದೇವೇಗೌಡರು ಕೊನೆಗೆ ಆ ಕೊಲೆ ಆರೋಪಿಯ ಪರ ವಕಾಲತ್ತು ವಹಿಸಿದರು. ಮೃತನ ಹೆಂಡತಿ ಕಡೆಯಿಂದ ಆರೋಪಿಯ ಚುನಾವಣೆ ಪ್ರಚಾರ ಮಾಡಿಸಿದರು ಅನ್ನುವ ಸುದ್ದಿ ಬಂದಿತ್ತು. ಆಗ ಲಂಕೇಶ್ ಅವರು ಒಂದು ಟಿಪ್ಪಣಿ ಬರೆದರು. ಅದರಲ್ಲಿ ಹಾಸನ-ಮಂಡ್ಯಕ್ಕೆ ಸಂಬಂಧ ಇರದ ಸುದ್ದಿಯೊಂದರ ಪ್ರಸ್ತಾಪ ಮಾಡಿದರು.

“ಕ್ರೊಯೆಶಿಯದಲ್ಲಿ ಸೈನಿಕ ತುಕಡಿಯೊಂದು ಮುಗ್ಧ ನಾಗರಿಕರ ಮೇಲೆ ಹಲ್ಲೆ ನಡೆಸಿ ಅನೇಕರನ್ನು ಕೊಂದುಹಾಕಿತು. ಆ ಮಾರಣಹೋಮದಲ್ಲಿ ಸತ್ತುಹೋದ ಕೆಲವರ ಹೆಂಡತಿಯರು “ಈ ಸೈನಿಕರು ತುಂಬಾ ಒಳ್ಳೆಯವರು. ಅವರದು ಏನು ತಪ್ಪು ಇಲ್ಲ ಅಂತ ಹೇಳುತ್ತಾ ತಿರುಗುತ್ತಿದ್ದಾರಂತೆ. ಅವರು ಹಾಗೆ ಓಡಾಡುವಾಗ ಕೆಲವು ಮೃತ ದೇಹಗಳ ಗುಡ್ಡೆಗಳ ಮೇಲೆ ಓಡಾಡಿದರಂತೆ” ಅಂತ ಲಂಕೇಶ್ ಬರೆದಿದ್ದರು.

ಅದು ನಾನು ಕಂಡ ಅತ್ಯಂತ ಶ್ರೇಷ್ಠ ಪತ್ರಿಕೋದ್ಯಮದ ಉದಾಹರಣೆಗಳಲ್ಲಿ ಒಂದು ಅಥವಾ ಅದು ನಾನು ಓದಿದ ಶ್ರೇಷ್ಠ ಸಾಹಿತ್ಯ ಕೃತಿಗಳಲ್ಲಿ ಒಂದು ಅಂತಲೂ ಅನ್ನಬಹುದೇನೋ.

ಹೃಷಿಕೇಶ ಬಹದ್ದೂರ ದೇಸಾಯಿ

ಹೃಷಿಕೇಶ ಬಹಾದ್ದೂರ ದೇಸಾಯಿ
ಹಿಂದೂ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೃಷಿಕೇಶ ಅವರಿಗೆ ಕರ್ನಾಟಕದ ಬಹು ಸಂಸ್ಕೃತಿಗಳ ಬಗ್ಗೆ ಆಸಕ್ತಿ. ಬಹಮನಿ ಸುಲ್ತಾನರು, ನಿಜಾಮರ ಕಾಲದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಂಗತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರ್ದು ಭಾಷೆಯಿಂದ ಕವಿತೆಗಳನ್ನು ಅನುವಾದಿಸುವುದು ಅವರ ಆಸಕ್ತಿಗಳಲ್ಲಿ ಒಂದು.


ಇದನ್ನೂ ಓದಿ: ಜಾರ್ಜ್ ಫ್ಲಾಯ್ಡ್ ಹೆಸರಿನಲ್ಲಿ ಪೊಲೀಸ್ ಸುಧಾರಣಾ ಶಾಸನ ಅಂಗೀಕರಿಸಿದ ಅಮೆರಿಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...