ಜುಲೈ 4, 2025ರಂದು ಮಹಾರಾಷ್ಟ್ರದ ಪುಣೆ ಬಳಿಯ ಪಟ್ಟಣವೊಂದರ ನದಿಪಾತ್ರದಲ್ಲಿ ಅಕ್ರಮ ನಿರ್ಮಾಣ ಚಟುವಟಿಕೆಯ ಕುರಿತು ವರದಿ ಮಾಡುತ್ತಿದ್ದಾಗ ಪತ್ರಕರ್ತೆ ಸ್ನೇಹಾ ಬಾರ್ವೆ ಅವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಲಾಗಿತ್ತು.
ಈ ಪ್ರಕರಣದ ಪ್ರಮುಖ ಆರೋಪಿ, ರಾಜಕೀಯ ಸಂಪರ್ಕ ಹೊಂದಿರುವ ಸ್ಥಳೀಯ ಉದ್ಯಮಿ ಪಾಂಡುರಂಗ ಸಖಾರಾಮ್ ಮೊರ್ಡೆ ಅವರನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ದಿ ವೈರ್ ವರದಿ ಮಾಡಿದೆ.
ಪುಣೆ ಜಿಲ್ಲೆಯ ಮಂಚಾರ್ ಪಟ್ಟಣದ ಬಳಿಯ ನಿಗೋಥ್ವಾಡಿ ಗ್ರಾಮದ ನದಿಪಾತ್ರದಲ್ಲಿ ಅಕ್ರಮ ನಿರ್ಮಾಣ ಚಟುವಟಿಕೆ ನಡೆಸಲಾಗುತ್ತಿತ್ತು. ಸ್ಥಳಕ್ಕೆ ತೆರಳಿದ್ದ ಸಮರ್ಥ ಭಾರತ್ ಪತ್ರಿಕೆ ಮತ್ತು ಎಸ್‌ಬಿಪಿ ಯೂಟ್ಯೂಬ್ ಚಾನೆಲ್‌ನ ಸ್ಥಾಪಕ-ಸಂಪಾದಕಿ ಬಾರ್ವೆ, ವಿಡಿಯೋ ವರದಿ ಮಾಡಲು ಶುರು ಮಾಡಿದ್ದರು. ಈ ವೇಳೆ ಆರೋಪಿ ಮೊರ್ಡೆ ಕಟ್ಟಿಗೆಯಿಂದ ಆಕೆಯ ಮೇಲೆ ಏಕಾಏಕಿ ದಾಳಿ ನಡೆಸಿದ್ದ. ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಇದರಿಂದ ಆಕೆ ಕಿರುಚಾಡುತ್ತಾ ಸ್ಥಳದಲ್ಲಿ ಬಿದ್ದಿದ್ದರು.
View this post on Instagram
ಸ್ನೇಹಾ ಬಾರ್ವೆಗೆ ಪ್ರಜ್ಞೆ ತಪ್ಪುವವರೆಗೆ ಆರೋಪಿ ಮೊರ್ಡೆ ಥಳಿಸಿದ್ದ. ಬಾರ್ವೆ ಅವರ ಕ್ಯಾಮರಾಮ್ಯಾನ್ ಅಜಾಝ್ ಶೇಖ್ ಮೇಲೂ ಮೊರ್ಡೆಯ ಸಹಚರರು ಹಲ್ಲೆ ಮಾಡಿದ್ದರು. ಪತ್ರಕರ್ತರ ಸಹಾಯಕ್ಕೆ ಬಂದಿದ್ದ ಸ್ಥಳೀಯರ ಮೇಲೂ ಆರೋಪಿಗಳು ದಾಳಿ ನಡೆಸಿದ್ದರು. ಇದರಿಂದ ಒಬ್ಬರ ಕೈ ಮುರಿದರೆ, ಇನ್ನೊಬ್ಬರ ಮೂಗಿಗೆ ಗಾಯವಾಗಿತ್ತು.
ತೀವ್ರವಾಗಿ ಗಾಯಗೊಂಡಿದ್ದ ಬಾರ್ವೆ ಅವರನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಪಿಂಪ್ರಿ ಚಿಂಚ್‌ವಾಡ್‌ನಲ್ಲಿರುವ ಡಿವೈ ಪಾಟೀಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಹಲ್ಲೆಯಿಂದ ಅವರ ತಲೆ ಮತ್ತು ಬೆನ್ನಿಗೆ ಗಾಯಗಳಾಗಿತ್ತು. ತಲೆಯ ಸಿಟಿ ಸ್ಕ್ಯಾನ್‌ನಲ್ಲಿ ಆಂತರಿಕ ಗಾಯ ಮತ್ತು ಊತ ಕಂಡುಬಂದಿತ್ತು.
ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಫ್ರೀ ಸ್ಪೀಚ್ ಕಲೆಕ್ಟಿವ್ ಜೊತೆ ಮಾತನಾಡಿದ ಬಾರ್ವೆ, ”
ಹಲ್ಲೆಯ ವಿಡಿಯೋ ನೋಡುವವರೆಗೂ ದಾಳಿಯ ಪ್ರಮಾಣವನ್ನು ಗ್ರಹಿಸುವ ಸ್ಥಿತಿಯಲ್ಲಿ ನಾನು ಇರಲಿಲ್ಲ” ಎಂದು ಹೇಳಿದ್ದಾರೆ.
“ಆರೋಪಿ ಮೊರ್ಡೆ ನದಿಪಾತ್ರವನ್ನು ಮುಚ್ಚಿ ಗೋಡೆ ನಿರ್ಮಿಸಿದ್ದರಿಂದ ತರಕಾರಿ ಮಾರುಕಟ್ಟೆಗೆ ನೀರು ನುಗ್ಗುವ ಸಾಧ್ಯತೆ ಇತ್ತು. ಈ ಬಗ್ಗೆ ವರದಿ ಮಾಡಲು ನಾವು ಹೋಗಿದ್ದೆವು. ಇಂತಹ ದಾಳಿ ನಡೆಯುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ನಾನು ಮೊದಲೇ ಸ್ಥಳಕ್ಕೆ ಹೋಗಿ ಫೋಟೊಗಳನ್ನು ತೆಗೆದುಕೊಂಡು ನನ್ನ ಸ್ಕ್ರಿಪ್ಟ್ ಸಿದ್ಧಪಡಿಸಿದ್ದೆ. ಆರೋಪಿ ಮೊರ್ಡೆಯ ಹೇಳಿಕೆಯನ್ನೂ ತೆಗೆದುಕೊಳ್ಳಲು ಬಯಸಿದ್ದೆ. ಆದರೆ, ಆತ ಕ್ಯಾಮರಾ ಮುಂದೆ ಬರಲು ನಿರಾಕರಿಸಿದ. ಅಲ್ಲದೆ, ಏಕಾಏಕಿ ನನ್ನ ಮೇಲೆ ದಾಳಿ ನಡೆಸಿದ” ಎಂದು ಬಾರ್ವೆ ವಿವರಿಸಿದ್ದಾರೆ.
ಪಾಂಡುರಂಗ ಮೊರ್ಡೆ ಯಾರು?
ಶಿವಸೇನೆಯ ಶಿಂಧೆ ಬಣ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಬಣ ಎರಡರೊಂದಿಗೂ ಪ್ರಬಲ ರಾಜಕೀಯ ಸಂಪರ್ಕ ಹೊಂದಿರುವ ಸ್ಥಳೀಯ ಉದ್ಯಮಿ ಪಾಂಡುರಂಗ ಮೊರ್ಡೆ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಯಾಗಿದ್ದಾರೆ. 2003 ಮತ್ತು 2007 ರಲ್ಲಿ ಕ್ರಮವಾಗಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೊಲೆ ಮತ್ತು ಕೊಲೆಯತ್ನದ ಆರೋಪ ಈತನ ಮೇಲಿತ್ತು. ಒಂದು ಪ್ರಕರಣದಲ್ಲಿ ಖುಲಾಸೆಗೊಂಡರೂ, ಇನ್ನೊಂದು ಪ್ರಕರಣ ಬಾಕಿ ಇದೆ. ಸದ್ಯಕ್ಕೆ ಆತ ಜಾಮೀನಿನ ಮೇಲೆ ಹೊರಗಿದ್ದಾರೆ.
ಪತ್ರಕರ್ತರ ಮೇಲಿನ ದಾಳಿ ಬಗ್ಗೆ ಎರಡೂ ಪಕ್ಷಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹಲ್ಲೆಗೊಳಗಾದ ಬಾರ್ವೆ ಎಂಟು ವರ್ಷಗಳ ಹಿಂದೆ ಮಾಧ್ಯಮ ರಂಗಕ್ಕೆ ಕಾಲಿಟ್ಟವರು. ತಮ್ಮದೇ ಆದ ಪತ್ರಿಕೆ ಮತ್ತು ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಇವರು “ನಾನು ಇದಕ್ಕಾಗಿ ತುಂಬಾ ಶ್ರಮಿಸುತ್ತಿದ್ದೇನೆ. ಬಹಳಷ್ಟು ಭ್ರಷ್ಟಾಚಾರಗಳನ್ನು ಬಹಿರಂಗಪಡಿಸಿದ್ದೇನೆ. ಈ ಕ್ಷೇತ್ರದಲ್ಲಿ ಬೇರೆ ಯಾರೂ ಅಂತಹ ಕೆಲಸವನ್ನು ಮಾಡುವುದಿಲ್ಲ” ಎಂದು ಹೇಳಿಕೊಂಡಿದ್ದಾರೆ.
ಬಾರ್ವೆ ಅವರಿಗೆ ವಿವಾದಗಳು ಹೊಸದೇನಲ್ಲ. ಕಳೆದ ಜುಲೈನಲ್ಲಿ ಶಿರೂರಿನ ಮಾಜಿ ಸಂಸತ್ ಸದಸ್ಯ ಶಿವಾಜಿರಾವ್ ಅಧಲ್‌ರಾವ್ ಪಾಟೀಲ್ ಅವರ ವಿರುದ್ದ ಬಾರ್ವೆ ಅಂಬೆಗಾಂವ್ ಪೊಲೀಸರಿಗೆ ದೂರು ನೀಡಿದ್ದರು. ತನ್ನ ವರದಿಯಿಂದ ನಷ್ಟ ಉಂಟಾಗಿದೆ ಎಂದು ಆರೋಪಿಸಿ ಶಿವಾಜಿರಾವ್ ಬೆದರಿಕೆ ಹಾಕಿದ್ದಾರೆ ಎಂದು ಬಾರ್ವೆ ಆರೋಪಿಸಿದ್ದರು. ಈ ವಿವಾದಕ್ಕೆ ಸಂಬಧಪಟ್ಟ ವಿಡಿಯೋವೊಂದನ್ನು ಸ್ಥಳೀಯ ದೂರದರ್ಶನ ಚಾನೆಲ್‌ಗಳು ಪ್ರಸಾರ ಮಾಡಿದ್ದವು.
“ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆ, ಆದರೆ ನಾನು ಸುಮ್ಮನಿರುವುದಿಲ್ಲ. ನನ್ನ ಮೇಲೆ ಆದಂತಹ ದಾಳಿ ಇತರ ಯಾವುದೇ ಮಹಿಳೆ, ಯಾವುದೇ ಪತ್ರಕರ್ತೆಯ ಮೇಲೂ ಆಗಬಹುದು” ಎಂದು ಬಾರ್ವೆ ಹೇಳಿದ್ದಾರೆ.
ಸ್ನೇಹಾ ಬಾರ್ವೆ ಮೇಲಿನ ದಾಳಿಯು ಪತ್ರಿಕಾ ಸ್ವಾತಂತ್ರ್ಯದ ದುರ್ಬಲ ಸ್ಥಿತಿಯನ್ನು ನಿರೂಪಿಸುತ್ತದೆ. ವಿಶೇಷವಾಗಿ ಜಿಲ್ಲಾ ಪ್ರದೇಶಗಳಲ್ಲಿ ಪತ್ರಕರ್ತರು ಭ್ರಷ್ಟಾಚಾರ ಮತ್ತು ಸ್ಥಳೀಯ ಅಧಿಕಾರಗಳ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ವರದಿ ಮಾಡಲು ಧೈರ್ಯ ಮಾಡಿದರೆ, ತಕ್ಷಣದ ಮತ್ತು ಹಿಂಸಾತ್ಮಕ ಪ್ರತೀಕಾರಕ್ಕೆ ಒಳಗಾಗುತ್ತಾರೆ.
ಕಳೆದ ವರ್ಷದ ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ವರದಿಯ ಪ್ರಕಾರ, 2014 ರಿಂದ ಭಾರತದಲ್ಲಿ ಕೊಲ್ಲಲ್ಪಟ್ಟ 28 ಪತ್ರಕರ್ತರಲ್ಲಿ ಕನಿಷ್ಠ 13 ಮಂದಿ ಪರಿಸರ ಸಂಬಂಧಿತ ವಿಷಯಗಳಲ್ಲಿ ಕೆಲಸ ಮಾಡುತ್ತಿದ್ದವರು. ಮುಖ್ಯವಾಗಿ ಭೂ ಕಬಳಿಕೆ, ಕೈಗಾರಿಕಾ ಉದ್ದೇಶಗಳಿಗಾಗಿ ಅಕ್ರಮ ಗಣಿಗಾರಿಕೆ ಮತ್ತು ಭ್ರಷ್ಟಾಚಾರದ ಬಗ್ಗೆ ಅವರು ವರದಿ ಮಾಡುತ್ತಿದ್ದರು.
ಈ ದಾಳಿಗಳನ್ನು ಮುಚ್ಚಿಹಾಕುವ ಶಿಕ್ಷೆಯ ವಿನಾಯಿತಿಯನ್ನು ಬಹು ವರದಿಗಳು ದಾಖಲಿಸಿವೆ.
ಪ್ರೆಸ್ ಮತ್ತು ಪ್ಲಾನೆಟ್ ಇನ್ ಡೇಂಜರ್, 2024ರ ವರದಿಯಲ್ಲಿ, ಯುನೆಸ್ಕೋ ವಿಶ್ಲೇಷಣೆಯು 2009-2023ರ ಅವಧಿಯಲ್ಲಿ ಪರಿಸರ ಸಮಸ್ಯೆಗಳ ಕುರಿತು ವರದಿ ಮಾಡಿದ ಕನಿಷ್ಠ 749 ಪತ್ರಕರ್ತರು ಮತ್ತು ಸುದ್ದಿ ಮಾಧ್ಯಮಗಳು ಕೊಲೆ, ದೈಹಿಕ ಹಿಂಸೆ, ಬಂಧನ, ಆನ್‌ಲೈನ್ ಕಿರುಕುಳ ಮತ್ತು ಕಾನೂನು ದಾಳಿಗಳಿಗೆ ಬಲಿಯಾಗಿದ್ದಾರೆ ಎಂದು ಬಹಿರಂಗಪಡಿಸಿದೆ. 2019-2023ರ ನಡುವೆ 300ಕ್ಕೂ ಹೆಚ್ಚು ಈ ರೀತಿಯ ದಾಳಿಗಳು ನಡೆದಿವೆ. ಇದು ಹಿಂದಿನ ಐದು ವರ್ಷಗಳ ಅವಧಿಗೆ (2014-2018) ಹೋಲಿಸಿದರೆ ಶೇಕಡ 42ರಷ್ಟು ಹೆಚ್ಚಳವಾಗಿದೆ ಎಂದಿದೆ.
ಕಳೆದ 15 ವರ್ಷಗಳಲ್ಲಿ ಕನಿಷ್ಠ 44 ಪತ್ರಕರ್ತರು ಪರಿಸರ ಸಮಸ್ಯೆಗಳನ್ನು ತನಿಖೆ ಮಾಡುತ್ತಿದ್ದಾರೆ. ಈ ಪ್ರಕರಣಗಳಲ್ಲಿ ಕೇವಲ 5 ಜನರಿಗೆ ಮಾತ್ರ ಶಿಕ್ಷೆಯಾಗಿದೆ. ಶಿಕ್ಷೆಯಿಂದ ವಿನಾಯಿತಿ ಹೊಂದಿದವರ ಪ್ರಮಾಣ ಆಘಾತಕಾರಿ ರೀತಿಯಲ್ಲಿ ಶೇಕಡ 90ರಷ್ಟಿದೆ.
ಸ್ನೇಹಾ ಬಾರ್ವೆ ಅವರ ಈ ಪ್ರಕರಣದಲ್ಲೂ, ಸ್ಥಳೀಯ ಪೊಲೀಸರು ಎಫ್‌ಐಆರ್ ದಾಖಲಿಸುವಲ್ಲಿ ತ್ವರಿತವಾಗಿ ಕಾರ್ಯನಿರ್ವಹಿಸಲಿಲ್ಲ ಮತ್ತು ಮೊರ್ಡೆ ಅವರನ್ನು ಬಂಧಿಸುವಲ್ಲಿ ವಿಳಂಬ ಮಾಡಿದ್ದಾರೆ ಎಂದು ದಾಳಿಯನ್ನು ಪ್ರತಿಭಟಿಸಲು ಯೋಜಿಸಿರುವ ಸ್ಥಳೀಯ ಪತ್ರಕರ್ತರು ಹೇಳಿದ್ದಾರೆ. (ಕೆಳಗಿನ ಪೋಸ್ಟರ್ ನೋಡಿ)

ಪತ್ರಿಕೆಯನ್ನು ಪ್ರಕಟಿಸುವ ಮತ್ತು ಯೂಟ್ಯೂಬ್ ಚಾನೆಲ್ ಅನ್ನು ಪ್ರಸಾರ ಮಾಡುವ ಸಮರ್ಥ ಭಾರತ್ ಪರಿವಾರ್ ಸಂಸ್ಥೆಯ ನಿರ್ದೇಶಕ ಡಾ. ಸಮೀರ್ ರಾಜೆ, ಪೊಲೀಸರು ತನಿಖೆಯನ್ನು ತುಂಬಾ ಹಗುರವಾಗಿ ಪರಿಗಣಿಸಿದ್ದಾರೆ ಎಂದು ಹೇಳಿದ್ದಾರೆ. ಸ್ನೇಹಾ ತಕ್ಷಣ ಎಫ್‌ಐಆರ್ ದಾಖಲಿಸುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ, ಅವರು ಚೇತರಿಸಿಕೊಂಡ ನಂತರ ತಮ್ಮ ದೂರಿನೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದಿದ್ದಾರೆ. ದಾಳಿಯಲ್ಲಿ ಗಾಯಗೊಂಡ ಇತರರು ಈಗಾಗಲೇ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯ ಘೋರ ಸ್ವರೂಪದ ಹೊರತಾಗಿಯೂ, ದೂರುದಾರ ಸುಧಾಕರ್ ಬಾಬುರಾವ್ ಕಾಳೆ ದಾಖಲಿಸಿದ ಎಫ್‌ಐಆರ್‌ನಲ್ಲಿ ಗಂಭೀರವಾದ ನೋವು, ಬೆದರಿಕೆ, ಕಾನೂನುಬಾಹಿರ ಸಭೆ ಮತ್ತು ಬೆದರಿಕೆಗೆ ಸಂಬಂಧಿಸಿದ ಸೆಕ್ಷನ್‌ಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ (ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 118 (2), 115 (2), 189 (2), 191 (2), 190 ಮತ್ತು 351 (2), ಇವುಗಳೆಲ್ಲವೂ ಗರಿಷ್ಠ ಒಂದರಿಂದ ಎರಡು ವರ್ಷಗಳ ಶಿಕ್ಷೆಯನ್ನು ವಿಧಿಸಬಹುದಾದ ಅಪರಾಧಗಳಾಗಿವೆ.
ಫ್ರೀ ಸ್ಪೀಚ್ ಕಲೆಕ್ಟಿವ್ ಜೊತೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಅವರು, “ಮೊರ್ಡೆ ಅವರನ್ನು ಇನ್ನೂ ಬಂಧಿಸಲಾಗಿಲ್ಲ. ಅವರು ತಮ್ಮ ಮೂಳೆ ಮುರಿತಕ್ಕೊಳಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.
“ಅವರು ಆಸ್ಪತ್ರೆಯಿಂದ ಬಿಡುಗಡೆಯಾದ ತಕ್ಷಣ ನಾವು ಬಂಧಿಸುತ್ತೇವೆ. ಅವರ ಪುತ್ರರಾದ ಪ್ರಶಾಂತ್ ಮತ್ತು ನೀಲೇಶ್ ಮೊರ್ಡೆ ಸೇರಿದಂತೆ ಕುಟುಂಬದ ನಾಲ್ಕೈದು ಜನರನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ” ಎಂದು ಗಿಲ್ ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ, “ಮೊರ್ಡೆ ನದಿಪಾತ್ರದ ಬಳಿ ಗೋಡೆ ನಿರ್ಮಿಸುತ್ತಿದ್ದರು. ಸ್ಥಳೀಯರು ಇದು ಕಾನೂನುಬಾಹಿರ ಎಂದು ಅಭಿಪ್ರಾಯಟ್ಟಿದ್ದರು.. ಆದಾಗ್ಯೂ, ತನಿಖೆಯಿಂದ ನಿರ್ಮಾಣವು ಸರ್ಕಾರಿ ಭೂಮಿಯಲ್ಲಿ ನಡೆಯುತ್ತಿದೆಯೂ..ಇಲ್ಲವೋ ಎಂಬುದನ್ನು ನಿರ್ಧರಿಸಲಾಗುತ್ತದೆ. ಪ್ರಮುಖ ಆರೋಪಿ ಮೊರ್ಡೆ ಐವರು ಸಹೋದರರ ಒಡೆತನದ ಭೂಮಿಯನ್ನು ಖರೀದಿಸಿದ್ದ. ಅವರಲ್ಲಿ ನಾಲ್ವರು ಭೂಮಿಯನ್ನು ಮಾರಾಟ ಮಾಡಿದ್ದರು. ಆದರೆ, ಒಬ್ಬ ಸಹೋದರ ಮಾರಾಟ ಮಾಡಿರಲಿಲ್ಲ ಎಂಬುವುದು ನಮಗೆ ತಿಳಿದುಬಂದಿದೆ. ಬಹುಶಃ, ಮೊರ್ಡೆ ಸರ್ಕಾರಿ ಭೂಮಿ ಅಥವಾ ಸಾರ್ವಜನಿಕ ಭೂಮಿಯನ್ನು ಅತಿಕ್ರಮಿಸುತ್ತಿದ್ದಾರೆ ಎಂದು ಅವರ ಸಂಬಂಧಿಕರು ಪತ್ರಕರ್ತರಿಗೆ ಮಾಹಿತಿ ನೀಡಿರಬಹುದು ಎಂದು ಗಿಲ್ ಹೇಳಿದ್ದಾರೆ.
ಪೊಲೀಸರು ಸಮಗ್ರ ತನಿಖೆ ನಡೆಸಲಿದ್ದಾರೆ. ವಿಡಿಯೋ ನೋಡಿದ ತಕ್ಷಣ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ವರದಿಯು ತನಗೆ ಅಪಖ್ಯಾತಿ ತರುತ್ತಿದೆ ಎಂದು ಆರೋಪಿ ಭಾವಿಸಿದ್ದರೂ, ಅವರು ಪೊಲೀಸರಿಗೆ ದೂರು ನೀಡಬಹುದಿತ್ತು ಅಥವಾ ಲಭ್ಯವಿರುವ ಸಾಂವಿಧಾನಿಕ ಕಾರ್ಯವಿಧಾನಗಳನ್ನು ಬಳಸಬಹುದಿತ್ತು. ಅದನ್ನು ಹೊರತು ಹಿಂಸಾಚಾರಕ್ಕೆ ಇಳಿಯಬಾರದಿತ್ತು. ಯಾರನ್ನೂ ಹೊಡೆಯುವ ಹಕ್ಕು ಅವರಿಗೆ ಇಲ್ಲ” ಎಂದು ಗಿಲ್ ತಿಳಿಸಿದ್ದಾರೆ.
“ಹೌದು, ಅಪರಾಧವನ್ನು ದಾಖಲಿಸುವುದು ತನಿಖಾಧಿಕಾರಿಯ ಕರ್ತವ್ಯ. ಆದರೆ, ಕೆಲವೊಮ್ಮೆ ತಕ್ಷಣ ಮಧ್ಯಪ್ರವೇಶಿಸುವುದು ಅತ್ಯಗತ್ಯವಾಗುತ್ತದೆ. ಬಾರ್ವೆ ಅವರು ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಬೇಕೆಂದು ಬಯಸಿದ್ದರು. ಆದರೆ, ನಾವು ಒಂದೇ ಪ್ರಕರಣಕ್ಕೆ ಎರಡು ಎಫ್‌ಐಆರ್ ದಾಖಲಿಸುವುದಿಲ್ಲ. ನಾವು ಪ್ರಕರಣ ದಾಖಲಿಸಿದ ಸಂದರ್ಭ ಬಾರ್ವೆ ಅವರು ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ, ನಾವು ಹಲ್ಲೆಗೊಳಗಾದ ಮತ್ತೊಬ್ಬ ವ್ಯಕ್ತಿಯ ಹೇಳಿಕೆ ಪಡೆದಿದ್ದೇವೆ. ವಿವರವಾದ ಹೇಳಿಕೆಯನ್ನು ಸಲ್ಲಿಸಲು ನಾವು ಬಾರ್ವೆ ಅವರನ್ನು ಕೇಳಿದ್ದೇವೆ. ಅಗತ್ಯವಿದ್ದರೆ ನಾವು ಪ್ರಕರಣವನ್ನು ವಿಭಾಗಿಸುತ್ತೇವೆ ಮತ್ತು ನಾನು ಅದನ್ನು ವೈಯಕ್ತಿವಾಗಿ ಪರಿಶೀಲಿಸುತ್ತೇನೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಗಿಲ್ ಹೇಳಿದ್ದಾರೆ.
Courtesy : thewire.in and Free Speech Collective


