ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಡಿಎಂಕೆ ಪಕ್ಷಗಳ ನಡುವೆ ವಾಕ್ಸಮರ ಆರಂಭವಾಗಿದೆ. ಹೊಸ ಶಿಕ್ಷಣ ನೀತಿ ಮತ್ತು ನೀಟ್ ಪ್ರವೇಶ ಪರೀಕ್ಷೆ ವಿರುದ್ಧ ತಮಿಳುನಾಡು ಸರ್ಕಾರ ನಿರ್ಣಯ ಕೈಗೊಂಡಿದನ್ನು ಟೀಕಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರವರು ‘ಅವಿದ್ಯಾವಂತರು ಆಡಳಿತದ ಚುಕ್ಕಾಣಿ ಹಿಡಿದರೆ ಹೀಗಾಗುತ್ತದೆ’ ಎಂದು ಟೀಕಿಸಿದ್ದಾರೆ. ಅಲ್ಲದೆ ಕುಟುಂಬ ರಾಜಕಾರಣದ ಮೂಲಕ ಹಣ ಲೂಟಿ ಹೊಡೆಯುವ ಪಂಚಾಯತ್ ಆಗಿದೆ ಎಂದು ಡಿಎಂಕೆ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.
ತಮಿಳುನಾಡಿನ ಕರೈಕುಡಿಯಲ್ಲಿ ಜೆ.ಪಿ ನಡ್ಡಾ ಮಾತನಾಡುತ್ತಾ, ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳಿದ್ದು ವಂಶವಾಹಿ ರಾಜಕಾರಣವನ್ನು ಪ್ರೋತ್ಸಾಹಿಸುತ್ತಿವೆ. ಅವುಗಳನ್ನು ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಇದಕ್ಕೆ ತೀಷ್ಣವಾಗಿ ಪ್ರತಿಕ್ರಿಯಿಸಿರುವ ಆಡಳಿತಾರೂಢ ಡಿಎಂಕೆ ಸರ್ಕಾರವು “ಕೇಂದ್ರದಲ್ಲಿ ಅಧಿಕಾರದಲ್ಲಿರುವವರ ಶೈಕ್ಷಣಿಕ ಅರ್ಹತೆ ಕೇಳುವ ಮಟ್ಟಕ್ಕೆ ತಾನು ಇಳಿಯುವುದಿಲ್ಲ” ಎಂದು ತಿರುಗೇಟು ನೀಡಿದೆ. ಕುಟುಂಬ ರಾಜಕಾರಣ ಟೀಕೆಗೆ ಪ್ರತಿಕ್ರಿಯಿಸಿ ‘ಜಯ್ ಶಾ ಯಾರು ಮತ್ತು ಅವರು ಎಷ್ಟು ಶತಕ ಬಾರಿಸಿದ್ದಾರೆ’ ಎಂದು ಪ್ರಶ್ನಿಸಿದೆ.
ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಬಿಜೆಪಿ ಅತಿ ಹೆಚ್ಚು ವಂಶವಾಹಿ ರಾಜಕಾರಣ ಮಾಡುತ್ತಿದೆ. ಗೃಹ ಸಚಿವ ಅಮಿತ್ ಶಾರವರ ಮಗ ಜಯ್ ಶಾರವರು ಯಾವುದೇ ಅನುಭವ, ಅರ್ಹತೆ ಇಲ್ಲದಿದ್ದರೂ ಎರಡೆರಡೂ ಬಾರಿಗೆ ಭಾರತದ ಅತಿ ಶ್ರೀಮಂತ ಕ್ರೀಡಾ ಸಂಸ್ಥೆಯಾದ ಬಿಸಿಸಿಐನ ಕಾರ್ಯದರರ್ಶಿಯಾಗಿದ್ದು ಹೇಗೆ ಎಂದು ಡಿಎಂಕೆ ವಕ್ತಾರ ಎ.ಶರವಣನ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ವಂಶಾಡಳಿತ ರಾಜಕಾರಣದ ವಿರುದ್ಧ ಗುಡುಗಿದ ಮೋದಿ: ಅವರು ಮರೆತ ಬಿಜೆಪಿ ಕುಟುಂಬ ರಾಜಕಾರಣದ ಪಟ್ಟಿ ಇಲ್ಲಿದೆ
ದ್ವೇಷ ಮತ್ತು ವಿಭಜಕ ಸಿದ್ದಾಂತದ ಸೃಷ್ಟಿಕರ್ತ ಬಿಜೆಪಿ ಪಕ್ಷವಾಗಿದೆ. ಅದು ಬಿಜೆಪಿಯ ನಿಜವಾದ ಮುಖವಾಗಿದೆ. ಯುವಜನರಿಗೆ ಉದ್ಯೋಗ ನೀಡಲು ವಿಫಲವಾಗಿರುವ ಬಿಜೆಪಿಯನ್ನು 2024ರಲ್ಲಿ ತಮಿಳುನಾಡಿನ ಜನ ತಿರಸ್ಕರಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಯು ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಕಳೆದ ಎರಡು ಚುನಾವಣೆಗಳ ಫಲಿತಾಂಶ ನಿರಾಶದಾಯಕವಾಗಿದೆ. ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳಲ್ಲಿ ಒಂದನ್ನು ಸಹ ಗೆಲ್ಲಲು ಸಾಧ್ಯವಾಗಿಲ್ಲ. ಅಲ್ಲದೇ 234 ಕ್ಷೇತ್ರಗಳ ವಿಧಾನಸಭೆಯಲ್ಲಿ ಕೇವಲ 4 ಸದಸ್ಯರನ್ನು ಮಾತ್ರ ಹೊಂದಿದೆ. ಎಐಎಡಿಎಂಕೆ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಅದು ಸದ್ಯ ಎಐಎಡಿಎಂಕೆ ಬಿಕ್ಕಟ್ಟಿನ ರಾಜಕೀಯ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ.
ಇನ್ನು ಜೆ.ಪಿ ನಡ್ಡಾರವರು ಕುಟುಂಬ ರಾಜಕಾರಣವನ್ನು ಟೀಕಿಸಿದ್ದಾರೆ. ಆದರೆ ಅವರೆ ಅದರ ಫಲಾನುಭವಿಗಳು ಎಂದು ವಿಪಕ್ಷಗಳು ಟೀಕಿಸಿವೆ. ಸದ್ಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅವರು ಜಬಲ್ ಪುರದ ಮಾಜಿ ಸಂಸದೆ ಜಯಶ್ರೀ ಬ್ಯಾನರ್ಜಿಯವರ ಅಳಿಯರಾಗಿದ್ದಾರೆ.
ಮಾರ್ಚ್ 2019 ರಲ್ಲಿ ಬ್ಲೂಮ್‌ಬರ್ಗ್ ಕ್ವಿಂಟ್ ಪ್ರಕಟಿಸಿದ ಇಂಡಿಯಾ ಸ್ಪೆಂಡ್ ಅಧ್ಯಯನದಂತೆ 1999 ರಿಂದ ಕಾಂಗ್ರೆಸ್ 36 ವಂಶಾಡಳಿತದ ಸಂಸತ್ ಸದಸ್ಯರನ್ನು ಲೋಕಸಭೆಗೆ ಆಯ್ಕೆ ಮಾಡಿದ್ದರೆ ಬಿಜೆಪಿಯು ಸಹ 31 ಸದಸ್ಯರನ್ನು ಆಯ್ಕೆ ಮಾಡಿದೆ. ಅದರ ಪೂರ್ಣ ವರದಿ ಓದಲು, ಬಿಜೆಪಿ ವಂಶವಾಹಿನಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುಟುಂಬ ರಾಜಕಾರಣದ ಆರೋಪ: ಬಿಜೆಪಿ ವಂಶಾಡಳಿತ ರಾಜಕಾರಣದ ಪಟ್ಟಿ ನೀಡಿದ ಎಚ್.ಡಿ ಕುಮಾರಸ್ವಾಮಿ


