ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಆರೋಪಿಯಾಗಿರುವ ಮಾಲೆಗಾಂವ್ ಸ್ಪೋಟ ಪ್ರಕರಣದ ವಿಚಾರಣೆಯ ನೇತೃತ್ವದ ವಹಿಸಿದ್ದ ಎನ್‌ಐಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶರನ್ನು ವಿಚಾರಣೆಯ ಅಂತಿಮ ಹಂತದಲ್ಲಿ ವರ್ಗಾವಣೆ ಮಾಡಲಾಗಿದೆ.
ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಾರ್ಷಿಕ ನಿಯಮಿತ ವರ್ಗಾವಣೆಯ ಭಾಗವಾಗಿ ಈ ವರ್ಗಾವಣೆ ನಡೆದಿದೆ ಎಂದು ವರದಿಗಳು ಹೇಳಿವೆ.
ಏಪ್ರಿಲ್ 5ರಂದು ಹೊರಡಿಸಲಾದ ವರ್ಗಾವಣೆ ಆದೇಶದಲ್ಲಿ, ವಿಚಾರಣೆ ಮುಗಿದಿರುವ ಎಲ್ಲಾ ಪ್ರಕರಣಗಳ ತೀರ್ಪುಗಳನ್ನು ಅಧಿಕಾರ ಹಸ್ತಾಂತರಿಸುವ ಮುನ್ನ ಪ್ರಕಟಿಸುವಂತೆ ನಿರ್ದೇಶಿಸಲಾಗಿದೆ.
ಮಾಲೆಗಾಂವ್ ಸ್ಟೋಟ ಪ್ರಕರಣದಲ್ಲಿ ಕಳೆದ ಒಂದು ವರ್ಷದಿಂದ ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಎ.ಕೆ. ಲಹೋಟಿ ಅವರು, ಏಪ್ರಿಲ್ 15 ರೊಳಗೆ ಉಳಿದ ವಾದಗಳನ್ನು ಪೂರ್ಣಗೊಳಿಸುವಂತೆ ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿಗಳಿಗೆ ಕಳೆದ ಶನಿವಾರ ನಿರ್ದೇಶನ ನೀಡಿದ್ದರು.
ಲಹೋಟಿ ಅವರು 17 ವರ್ಷಗಳಷ್ಟು ಹಳೆಯದಾದ ಈ ಪ್ರಕರಣದ ವಿಚಾರಣೆ ನೇತೃತ್ವ ವಹಿಸಿರುವ ಐದನೇ ನ್ಯಾಯಾಧೀರಾಗಿದ್ದಾರೆ.
ನ್ಯಾಯಾಧೀಶರ ವರ್ಗಾವಣೆಯನ್ನು ನಿರೀಕ್ಷಿಸಿದ್ದ ಪ್ರಕರಣದ ಸಂತ್ರಸ್ತರು, ಕಳೆದ ವಾರ ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು, ವಿಳಂಬವಿಲ್ಲದೆ ತೀರ್ಪು ಪ್ರಕಟವಾಗುವಂತೆ ನೋಡಿಕೊಳ್ಳಲು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಕೋರಿದ್ದರು.
“ಪ್ರಕರಣವು ಸಂಕೀರ್ಣವಾದ ದಾವೆ ಪ್ರಕ್ರಿಯೆಗಳ ಮೂಲಕ ಸಾಗುತ್ತಿದೆ. ನ್ಯಾಯಾಧೀಶ ಎ.ಕೆ ಲಹೋಟಿ ಅವರು ಪ್ರಕರಣದ ಪ್ರತಿಯೊಂದು ಅಂಶಗಳ ಬಗ್ಗೆಯೂ ಸೂಕ್ಷ್ಮವಾಗಿ ತಿಳಿದಿದ್ದಾರೆ. ನ್ಯಾಯದ ಹಿತದೃಷ್ಟಿಯಿಂದ, ವಿಚಾರಣೆ ಪೂರ್ಣಗೊಳ್ಳುವವರೆಗೆ ಅವರ ಅಧಿಕಾರಾವಧಿಯನ್ನು ವಿಸ್ತರಿಸಲು ಶಿಫಾರಸು ಮಾಡುವಂತೆ ನಾವು ನಿಮ್ಮನ್ನು ಕೋರುತ್ತೇವೆ” ಎಂದು ಪತ್ರದಲ್ಲಿ ಹೇಳಲಾಗಿತ್ತು.
ನ್ಯಾಯಾಧೀಶರ ವರ್ಗಾವಣೆ ತಡೆಯುವಂತೆ ಹೈಕೋರ್ಟ್ ಮೊರೆ ಹೋಗುವ ಬಗ್ಗೆ ಯೋಚಿಸುತ್ತಿದ್ದೇವೆ. ಪ್ರಕರಣದ ವಿಚಾರಣೆ ಈಗಾಗಲೇ ವಿಳಂಬವಾಗಿದೆ. ನ್ಯಾಯಾಧೀಶರನ್ನು ವರ್ಗಾಯಿಸಿದರೆ ಇನ್ನಷ್ಟು ವಿಳಂಬವಾಗಲಿದೆ. ಹಾಗಾಗಿ, ನಾವು ಹಿರಿಯ ವಕೀಲರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸಂತ್ರಸ್ತರ ಪರ ವಕೀಲ ಶಾಹಿದ್ ನದೀಮ್ ಹೇಳಿದ್ದಾರೆ.
ಮಾಲೆಗಾಂವ್ ಸ್ಪೋಟ ಪ್ರಕರಣ
ಸೆಪ್ಟೆಂಬರ್ 29,2008ರಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ಮಸೀದಿಯ ಬಳಿ ಬೈಕ್‌ನಲ್ಲಿ ಬಾಂಬ್ ಸ್ಫೋಟಗೊಂಡು ಆರು ಜನರು ಸಾವನ್ನಪ್ಪಿದ್ದರು ಮತ್ತು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಆರಂಭದಲ್ಲಿ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ನಂತರ 2011ರಲ್ಲಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವರ್ಗಾಯಿಸಲಾಯಿತು.
ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಹಾಗೂ ಇನ್ನಿತರ ಐವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳ ಮೇಲೆ ಯುಎಪಿಎ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ದೂರು ದಾಖಲಾಗಿತ್ತು.
ಈವರೆಗೆ ಪ್ರಾಸಿಕ್ಯೂಷನ್ 323 ಹಾಗೂ ಸಂತ್ರಸ್ತರ ಪರ ವಕೀಲರು 8 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದಾರೆ. ಪ್ರಸ್ತುತ ನ್ಯಾಯಾಲಯ ಪ್ರಕರಣಲ್ಲಿ ಅಂತಿಮ ವಾದ-ಪ್ರತಿವಾದ ಆಲಿಸುತ್ತಿದೆ ಎಂದು ವರದಿಯಾಗಿದೆ.


