ಕೌಟುಂಬಿಕ ಸಮಸ್ಯೆ ಪ್ರಕರಣದಲ್ಲಿ ನ್ಯಾಯಕೋರಿ ಧಾರವಾಡದ ಹೈಕೋರ್ಟ್ ಸರ್ಕ್ಯೂಟ್ ಪೀಠಕ್ಕೆ ಬಂದಿದ್ದ ದಂಪತಿಯನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಮಠಾಧೀಶರ ಬಳಿಗೆ ಕಳುಹಿಸಿರುವುದಕ್ಕೆ ನಾಡಿನ ಚಿಂತಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲೆಯ ದಂಪತಿ ನಾಲ್ಕು ವರ್ಷಗಳ ಹಿಂದೆ ವಿಚ್ಛೇದನ ಕೋರಿ ಹೈಕೋರ್ಟ್ ಪೀಠದ ಮೊರೆ ಹೋಗಿದ್ದರು. ಕಳೆದ ಸೆಪ್ಟೆಂಬರ್ 17ರಂದು ಪ್ರಕರಣದ ವಿಚಾರಣೆ ನಡೆದಿತ್ತು. ಈ ವೇಳೆ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ದೀಕ್ಷಿತ್ ಅವರು, ದಂಪತಿಗೆ ಬುದ್ದಿವಾದ ಹೇಳಿದ್ದಾರೆ. ಸಣ್ಣಪುಟ್ಟ ವಿಚಾರಗಳಿಗೆ ವಿಚ್ಛೇದನ ಪಡೆಯುವುದು ಸರಿಯಲ್ಲ ಎಂದಿದ್ದಾರೆ.
ವಿಚಾರಣೆ ವೇಳೆ ಇಬ್ಬರ ವಾದ ಆಲಿಸಿದ ನ್ಯಾಯಮೂರ್ತಿ, ಆರಂಭದಲ್ಲಿ ಇಬ್ಬರೂ ಕೂಡ ಯಾರಾದರು ಆಪ್ತ ಸಮಾಲೋಚಕರ ಬಳಿ ಹೋಗಿ ಎಂದಿದ್ದರು. ಬಳಿಕ ಮಾತು ಮುಂದುವರಿಸಿದ ಅವರು, ಮಠಕ್ಕೆ ಹೋಗಿ ಸ್ವಾಮೀಜಿಗಳ ಪ್ರವಚನ ಕೇಳಿ ಎಂದಿದ್ದಾರೆ.
ಮೊದಲು ಪತಿಗೆ ಯಾವ ಮಠಕ್ಕೆ ಹೋಗ್ತೀರಿ? ಎಂದಾಗ ಅವರು ಗದಗದ ತೋಂಟದಾರ್ಯ ಮಠದ ಸ್ವಾಮಿ ಬಳಿ ಹೋಗ್ತೀನಿ ಎಂದಿದ್ದಾರೆ. ನಂತರ ಪತ್ನಿ ಬಳಿ ಕೇಳಿದಾಗ, ಆಕೆ ನಾನು ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಹೋಗ್ತೀನಿ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ, ಗವಿಸಿದ್ದೇಶ್ವರ ಸ್ವಾಮೀಜಿ ವಿವೇಕಾನಂದರಿದ್ದಂತೆ, ಅವರ ಬಳಿ ಹೋಗಿ ಎಂದು ಸಲಹೆ ನೀಡಿದ್ದಾರೆ.
ನ್ಯಾಯಮೂರ್ತಿಯ ಈ ನಡೆಯನ್ನು ವಿರೋಧಿಸಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಚಿಂತಕರು, “ಜನರು ಅಂತಿಮವಾಗಿ ನ್ಯಾಯಾಲಯಕ್ಕೆ ಹೋಗುವುದು ನ್ಯಾಯ ಸಿಗುತ್ತದೆ ಎಂಬ ಭರವಸೆಯಿಂದ. ಆದರೆ, ನ್ಯಾಯಾಧೀಶರು ತಮ್ಮ ಕಾನೂನುಬದ್ದ ಕರ್ತವ್ಯ ನಿರ್ವಹಿಸುವ ಬದಲು, ಮಠಾಧೀಶರ ಬಳಿ ಹೋಗಿ ಎಂದಿರುವುದು ‘ಮಠಗಳು ಸಂವಿಧಾನದಡಿ ಇರುವ ನ್ಯಾಯಾಲಯಗಳಿಗಿಂತ ದೊಡ್ಡದು’ ಎಂಬ ಸಂದೇಶ ನೀಡುತ್ತದೆ. ನ್ಯಾಯಾಲಯಗಳು ವಾದ-ಪ್ರತಿವಾದ ಆಲಿಸಿ, ಸಾಕ್ಷ್ಯಗಳನ್ನು ಪರಿಶೀಲಿಸಿ ತೀರ್ಪು ನೀಡುವ ಬದಲು, ಮಠಗಳಿಗೆ ಕಳುಹಿಸುವುದು ಯಾವ ಬಗೆಯ ನ್ಯಾಯ?” ಎಂದು ಪ್ರಶ್ನಿಸಿದ್ದಾರೆ.
“ನಿರ್ದಿಷ್ಟ ಜಾತಿ, ವರ್ಗದ ಮಠಗಳು ವಿವಾದಗಳನ್ನು ಬಗೆಹರಿಸುವ ನ್ಯಾಯಾಲಯಗಳಾದರೆ, ಸಂವಿಧಾನದಡಿ ಇರುವ ನ್ಯಾಯಾಲಯಗಳ ಅಗತ್ಯವೇನು? ಮಠಗಳನ್ನೇ ನ್ಯಾಯಾಲಯಗಳು ಎಂದು ಘೋಷಿಸಿಬಿಡಿ. ನ್ಯಾಯಮೂರ್ತಿ ದೀಕ್ಷಿತ್ ಅವರ ನಡೆ ಸಂವಿಧಾನ ವಿರೋಧಿ. ಇದು ಹಿಂದೆ ಮೇಲ್ಜಾತಿಯವರು ತೀರ್ಮಾನ ನೀಡುತ್ತಿದ್ದ ಪಂಚಾಯತಿ ಕಟ್ಟೆಗಳನ್ನು ನೆನಪಿಸುತ್ತದೆ. ಕಾನೂನಿನ ನಿಯಮದಡಿ ನ್ಯಾಯದಾನ ಮಾಡುವ ಬದಲು, ಜಾತಿ, ವರ್ಗ, ಮತಗಳಡಿ ಅನ್ಯಾಯವನ್ನು ಕ್ರಮಬದ್ದಗೊಳಿಸುವ ಕ್ರಮವಾಗಿದೆ” ಎಂದಿದ್ದಾರೆ.
“ನ್ಯಾಯಾಧೀಶರಿಗೆ ಮಧ್ಯಸ್ಥಿಕೆಯ ಅಗತ್ಯ ಕಂಡು ಬಂದರೆ ಕಾನೂನು ಸೇವಾ ಪ್ರಾಧಿಕಾರ ನಡೆಸುವ ಕಾನೂನು ಬದ್ದ ಸಂಧಾನ ಕೇಂದ್ರ (ಮೀಡಿಯೇಷನ್ ಸೆಂಟರ್ )ಕ್ಕೆ ಕಳಿಸಲು ಸೂಚಿಸಬಹುದಿತ್ತು. ಅದನ್ನು ಬಿಟ್ಟು ಮಠಾಧೀಶರ ಬಳಿ ಕಳುಹಿಸುವುದು ಕಾನೂನುಬದ್ದ ನ್ಯಾಯಪೀಠಕ್ಕಿಂತ ಮಠಾಧೀಶರ ನ್ಯಾಯಪೀಠವೇ ಮೇಲೂ ಎಂಬ ಸಂದೇಶ ರವಾನಿಸುತ್ತದೆ” ಎಂದು ಹೇಳಿದ್ದಾರೆ.
“ವಿವಾದ ಬಗೆಹರಿಸಲಿರುವ ಪರ್ಯಾರ್ಯ ವ್ಯವಸ್ಥೆ (ಎಡಿಆರ್) ಅಥವಾ ಮಧ್ಯಸ್ಥಿಕೆಗೆ ಎಲ್ಲೆಂದರಲ್ಲಿ ಶಿಫಾರಸು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಮಧ್ಯಸ್ಥಿಕೆ ಮಾಡುವವರಿಗೂ ಕೆಲವು ಅರ್ಹತೆಗಳಿರಬೇಕು. ಆ ಅರ್ಹತೆ ಗವಿಸಿದ್ದೇಶ್ವರ ಸ್ವಾಮಿಗೆ ಇದೆಯಾ? ಎಂಬುವುದರ ಬಗ್ಗೆ ನ್ಯಾಯಾಲಯ ಏನನ್ನು ಹೇಳಿಲ್ಲ” ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಡಾ.ವಿ.ಪಿ ನಿರಂಜನಾರಾದ್ಯ, ಬಸವರಾಜ ಸೂಳಿಭಾವಿ, ಡಾ. ವಸುಂದರ ಭೂಪತಿ, ಬಿ.ಸುರೇಶ, ಡಾ. ಸಬೀಹಾ ಭೂಮಿಗೌಡ, ಮೂಡ್ನಕೂಡ ಚಿನ್ನಸ್ವಾಮಿ, ಕ.ಮ ರವಿಶಂಕರ, ಲಕ್ಷ್ಮಣ ಕೊಡಸೆ, ಡಾ.ಜಯಲಕ್ಷ್ಮಿ ಹೆಚ್.ಜಿ, ಡಾ.ಮಂಜುನಾಥ್ ಬಿಆರ್, ಡಾ.ತುಕರಾಮ, ಶ್ರೀಪಾದ ಭಟ್ಟ, ಪೂಜಾ ಸಿಂಗೆ, ಪ್ರಕಾಶ ಬಿ, ಮುತ್ತು ಬಿಳಿಯಲಿ, ಜಿ.ಎಂ ವೀರಸಂಗಯ್ಯ, ಬಸವರಾಜ ಬ್ಯಾಗವಾಟ, ಎಸ್.ಸತ್ಯ, ವಿಶುಕುಮಾರ, ಅನಿಲ ಹೊಸಮನಿ, ಪ್ರಶಾಂತ್ ಹೊಸಪೇಟೆ, ಕರಿಬಸಪ್ಪ ಎಂ ಸೇರಿದಂತೆ ನಾಡಿನ ಪ್ರಗತಿಪರ ಚಿಂತಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಪೌರಕಾರ್ಮಿಕ ಮಹಿಳೆಯರ ಮೇಲೆ ಹಲ್ಲೆ, ಜಾತಿ ನಿಂದನೆ ಪ್ರಕರಣ : ಆರೋಪಿಯ ಬಂಧನ


