ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರು ಆದೇಶವನ್ನು ಓದದೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನನ್ನು ರದ್ದುಗೊಳಿಸಿದ್ದ ರೀತಿಯ ಕುರಿತು ದೆಹಲಿ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ 150 ವಕೀಲರ ನಿಯೋಗವು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಪತ್ರ ಬರೆದಿದೆ.
ದಿ ಹಿಂದೂ ವರದಿಯ ಪ್ರಕಾರ, ಜಾಮೀನು ಆದೇಶಕ್ಕೆ ತಡೆ ನೀಡಿರುವ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರ ಸಹೋದರ ಜಾರಿ ನಿರ್ದೇಶನಾಲಯದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಕೀಲರು ಪತ್ರದಲ್ಲಿ ಹೇಳಿದ್ದಾರೆ.
ಇದು ಆಪಾದಿತ ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ದಾಖಲಿಸಿರುವ ಪ್ರಕರಣವಾಗಿದ್ದು, ಬಂಧನಕ್ಕೊಳಗಾಗಿರುವ ಕೇಜ್ರಿವಾಲ್ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಆರ್ಥಿಕ ಅಪರಾಧಗಳ ಸಂಸ್ಥೆಯಾದ ಇಡಿ ಕೇಜ್ರಿವಾಲ್ ಅವರನ್ನು ಈ ವರ್ಷದ ಮಾರ್ಚ್‌ನಲ್ಲಿ ಬಂಧಿಸಿತ್ತು. ಕಳೆದ ತಿಂಗಳ ಕೊನೆಯಲ್ಲಿ, ಕೇಜ್ರಿವಾಲ್‌ಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಜಾಮೀನು ನೀಡಿತ್ತು. ಈ ಬೆನ್ನಲ್ಲೇ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಕೇಜ್ರಿವಾಲ್ ಅವರನ್ನು ಬಂಧಿಸಿದೆ.
ಜೂ.20ರಂದು ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿದ್ದ ವಿಚಾರಣಾ ನ್ಯಾಯಾಲಯವು, ಇಡಿ ಕೇಜ್ರಿವಾಲ್ ವಿರುದ್ಧ ಪಕ್ಷಪಾತದಿಂದ ವರ್ತಿಸುತ್ತಿದೆ ಎಂದು ಹೇಳಿತ್ತು. ಇಡಿ ಮುಖ್ಯಮಂತ್ರಿಗಳ ಬಂಧನಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ ಎಂದು ನ್ಯಾ. ನ್ಯಾಯ ಬಿಂದು ಹೇಳಿದ್ದರು.
ವಕೀಲರ ಪತ್ರವು ಸ್ಪಷ್ಟ ‘ಹಿತಾಸಕ್ತಿ ಸಂಘರ್ಷ’ವನ್ನು ಎತ್ತಿ ತೋರಿಸಿದೆ. ನ್ಯಾ.ಜೈನ್ ಅವರ ಖಾಸಾ ಸೋದರ ಇಡಿ ವಕೀಲರಾಗಿರುವುದರಿಂದ ಅವರು ವಿಚಾರಣೆಯಿಂದ ಹಿಂದಕ್ಕೆ ಸರಿಯಬೇಕಾಗಿತ್ತು. ಈ ಸ್ಪಷ್ಟ ಹಿತಾಸಕ್ತಿ ಸಂಘರ್ಷವನ್ನು ನ್ಯಾ.ಜೈನ್ ಎಂದಿಗೂ ಘೋಷಿಸಿರಲಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ಅಪರೂಪದ ಬೆಳವಣಿಗೆಯಲ್ಲಿ” ಜಾಮೀನು ಆದೇಶವು ಅಧಿಕೃತವಾಗಿ ಅಪ್ಲೋಡ್ ಆಗುವ ಮುನ್ನವೇ ನ್ಯಾ.ಜೈನ್ ಅವರು ಕೇಜ್ರಿವಾಲ್‌ರ ಜಾಮೀನನ್ನು ಪ್ರಶ್ನಿಸಲು ಇಡಿ ವಕೀಲರಿಗೆ ಅನುಮತಿ ನೀಡಿದ್ದರು ಮತ್ತು ಜಾಮೀನು ಆದೇಶಕ್ಕೆ ತಡೆ ವಿಧಿಸಿದ್ದರು. ಈ ರೀತಿ ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಹಿಂದೆಂದೂ ನಡೆದಿರಲಿಲ್ಲ ಎಂದು ವಕೀಲರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖ್ಯ ವಕೀಲ ಸಂಜೀವ ನಸಿಯಾರ್ ಅವರೂ ಭಾಗವಾಗಿರುವ ವಕೀಲರ ನಿಯೋಗವು, ಅಂತಿಮ ಆದೇಶಗಳನ್ನು ಹೊರಡಿಸದಂತೆ ಮತ್ತು ರಜೆಯ ಬಳಿಕ ನಿಯಮಿತ ನ್ಯಾಯಾಲಯಗಳಿಗೆ ನೋಟಿಸ್‌ಗಳನ್ನು ಮಾತ್ರ ನೀಡುವಂತೆ ರೋಸ್ ಅವೆನ್ಯೂ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರು ಬೇಸಿಗೆ ವಿರಾಮದಲ್ಲಿ ಕಾರ್ಯ ನಿರ್ವಹಿಸುವ ರಜಾಕಾಲದ ನ್ಯಾಯಾಲಯಗಳಿಗೆ ಹೊರಡಿಸಿದ್ದ ಆಂತರಿಕ ಆಡಳಿತಾತ್ಮಕ ಆದೇಶವನ್ನೂ ಎತ್ತಿ ತೋರಿಸಿದೆ.
ಈ ಕ್ರಮವು ರಜಾಕಾಲದ ನ್ಯಾಯಾಲಯಗಳ ಉದ್ದೇಶವನ್ನು ಕಡೆಗಣಿಸಿದೆ ಮತ್ತು ಇಂತಹ ಆದೇಶದ ವಿರುದ್ಧ ಬಲವಾದ ಆಕ್ಷೇಪವನ್ನು ಸಲ್ಲಿಸಲು ಬಯಸಿದ್ದೇವೆ ಎಂದೂ ಪತ್ರದಲ್ಲಿ ಹೇಳಲಾಗಿದೆ.
ಇದನ್ನೂ ಓದಿ : ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್ ಜಾಮೀನು ಅರ್ಜಿಗೆ ಸಿಬಿಐ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್


