Homeಮುಖಪುಟನಿವೃತ್ತಿಯಾದ ನ್ಯಾಯಮೂರ್ತಿ ಅರುಣ್ ಮಿಶ್ರಾರವರ 5 ವಿವಾದಿತ ಪ್ರಕರಣಗಳು

ನಿವೃತ್ತಿಯಾದ ನ್ಯಾಯಮೂರ್ತಿ ಅರುಣ್ ಮಿಶ್ರಾರವರ 5 ವಿವಾದಿತ ಪ್ರಕರಣಗಳು

ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಅದಾನಿಯಂತಹ ಕಾರ್ಪೊರೇಟ್‌ ಕಂಪನಿಗಳ ಕುರಿತು ದಾಖಲಾದ ಸುಮಾರು 7 ಪ್ರಕರಣಗಳಲ್ಲಿಯೂ ಅದಾನಿ ಪರ ತೀರ್ಪಿದ್ದಾರೆ. 

- Advertisement -
- Advertisement -

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ ಇಂದು (ಸೆಪ್ಟೆಂಬರ್ 2) ಸುಪ್ರೀಂಕೋರ್ಟ್‌ನಿಂದ ನಿವೃತ್ತರಾಗಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ನಡೆದ ಹಲವು ಘಟನೆಗಳಿಂದ ಅವರು ವಿವಾದಿತ ನ್ಯಾಯಾಧೀಶರಲ್ಲಿ ಒಬ್ಬರಾಗಿದ್ದಾರೆ.

ಜುಲೈ 2014ರಲ್ಲಿ ಸುಪ್ರೀಂಕೋರ್ಟ್‌‌ಗೆ ಏರಿದ ನಂತರ ಅವರ ಅಧಿಕಾರಾವಧಿಯಲ್ಲಿ ನಡೆದ ಘಟನೆಗಳು ಮಿಶ್ರಾರನ್ನು ಇತಿಹಾಸದಲ್ಲಿ ನೆನಪಿಡಬೇಕಾದ ವಿವಾದಿತ ನ್ಯಾಯಾಧೀಶರಲ್ಲಿ ಒಬ್ಬರಾಗಿ ಮಾಡಿದೆ. ನ್ಯಾಯಮೂರ್ತಿಯಾಗಿ ತಮ್ಮ ಕೊನೆಯ ದಿನಗಳಲ್ಲೂ ಸಹ ಅವರ ನ್ಯಾಯಪೀಠದ ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣ ಮತ್ತು ಎಜಿಆರ್ ಪ್ರಕರಣಗಳು ದೇಶಾದ್ಯಂತ ಚರ್ಚೆ ಹುಟ್ಟು ಹಾಕಿದ್ದವು.

ಮಿಶ್ರಾರವರು ಭಾರತದ ಏಳು ಮುಖ್ಯ ನ್ಯಾಯಮೂರ್ತಿಗಳ ಕೆಳಗೆ ಆರು ವರ್ಷಗಳ ಕಾಲ ಹೈ ಪ್ರೋಫೈಲ್ ಕೇಸ್‌ಗಳಲ್ಲಿ, ರಾಜಕೀಯ ಸೂಕ್ಷ್ಮತೆ ಇರುವ ಪ್ರಕರಣಗಳನ್ನು ವಿಚಾರಣೆ ನಡೆಸಿದ್ದರು. ಅವರು ಕಿರಿಯ ನ್ಯಾಯಾಧೀಶರಾದರೂ ಸಹ ಈ ಎಲ್ಲಾ ಪ್ರಕರಣಗಳು ಅವರಿಗೆ ಒಲಿದುಬಂದಿದ್ದವು. ಇದು ನ್ಯಾಯಮೂರ್ತಿ ಮಿಶ್ರಾ ಅವರಿಗಷ್ಟೇ ಅಲ್ಲ, ಅವರಿಗೆ ಪ್ರಕರಣಗಳನ್ನು ನಿಯೋಜಿಸುತ್ತಿದ್ದ ಸಿಜೆಐಗಳ ಬಗ್ಗೆಯೂ ಗಂಭೀರ ಟೀಕೆಗೆ ಕಾರಣವಾಯಿತು.

2018 ರ ಜನವರಿಯಲ್ಲಿ ರಾಜಕೀಯವಾಗಿ ಸೂಕ್ಷ್ಮ ಪ್ರಕರಣಗಳನ್ನು ‘ಆದ್ಯತೆಯ ಪೀಠಗಳಿಗೆ(ಅರುಣ್‌ ಮಿಶ್ರಾ)’ ನಿಯೋಜಿಸುವ ಬಗ್ಗೆ ನಾಲ್ವರು ನ್ಯಾಯಾಧೀಶರು ಪತ್ರಿಕಾಗೋಷ್ಟಿ ನಡೆಸಿ, ಹೆಸರು ಹೇಳದೆಯೇ ನ್ಯಾಯಮೂರ್ತಿ ಅರುಣ್ ಮಿಶ್ರಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ದಿನವೇ ಮಿಶ್ರಾ ಆದ್ಯತೆ ಪೀಠದಲ್ಲಿ ನ್ಯಾಯಮೂರ್ತಿ ಲೋಯಾ ಅವರ ಪ್ರಕರಣದ ವಿಚಾರಣೆ ನಡೆಸಬೇಕಿತ್ತು. ಪತ್ರಿಕಾಗೋಷ್ಠಿಯ ನಂತರ ನ್ಯಾಯಮೂರ್ತಿ ಮಿಶ್ರಾ ಅವರನ್ನು ಆ ಪ್ರಕರಣದ ವಿಚಾರಣೆಯಿಂದ ಕೈಬಿಡಲಾಯ್ತು.

ನ್ಯಾಯಮೂರ್ತಿ ಮಿಶ್ರಾ ಅವರು ಭಾಗಿಯಾಗಿದ್ದ ಕೆಲವು ವಿವಾದಾತ್ಮಕ ಪ್ರಕರಣಗಳು ಮತ್ತು ತೀರ್ಪುಗಳ ನೋಟ ಇಲ್ಲಿದೆ, ಇದು ಸುಪ್ರೀಂ ಕೋರ್ಟ್‌ನಲ್ಲಿ ಅವರ ವಿವಾದಾತ್ಮಕ ಹಾದಿಯನ್ನು ವ್ಯಾಖ್ಯಾನಿಸುತ್ತದೆ.

1. ಸಹರಾ-ಬಿರ್ಲಾ ಡೈರಿಸ್ ಪ್ರಕರಣ- 2017

ಆದಾಯ ತೆರಿಗೆ ಇಲಾಖೆ ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಅಧಿಕಾರಿಗಳು 2013 ರಲ್ಲಿ ಆದಿತ್ಯ ಬಿರ್ಲಾ ಸಮೂಹದ ಕಚೇರಿಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡ ದಾಖಲೆಗಳಲ್ಲಿ ವಿವಿಧ ರಾಜಕಾರಣಿಗಳಿಗೆ ಕೋಟಿ ಕೋಟಿ ರೂ ಪಾವತಿ ಮಾಡಿರುವುದು ಕಂಡುಬರುತ್ತದೆ. ಅಂದಿನ ಗುಜರಾತ್ ಮುಖ್ಯಮಂತ್ರಿ ಮತ್ತು ಹಾಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ 25 ಕೋಟಿ ರೂ.ಪಾವತಿ ಮಾಡಿರುವ ದಾಖಲೆ ಇರುತ್ತದೆ. ಆದರೆ ಯಾವುದೇ ತನಿಖೆ ನಡೆಯುವುದಿಲ್ಲ.

ಹೀಗಾಗಿ 2015ರಲ್ಲಿ ಎನ್‌ಜಿಒ ಕಾಮನ್ ಕಾಸ್, ಸಹಾರಾ-ಬಿರ್ಲಾ ದಾಖಲೆಗಳ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆ ಈ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸಿಲ್ಲ, ಇದರ ಬಗ್ಗೆ ತನಿಖೆಯಾಗಬೇಕು ಎಂದು ಕೋರಿಕೊಂಡಿತ್ತು.

ವಿವಾದ ಶುರುವಾಗಿದ್ದು, 2017 ರ ಜನವರಿ ತೀರ್ಪಿನಲ್ಲಿ, ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಅಮಿತವ್ ರಾಯ್ ಅವರ ನ್ಯಾಯಪೀಠವು ಕಾಮನ್ ಕಾಸ್ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿತು. ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ‘ಸಡಿಲ ದಾಖಲೆಗಳ’ ಆಧಾರದ ಮೇಲೆ ತನಿಖೆಗೆ ಒಳಪಡಿಸಲಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸಹಾರಾ-ಬಿರ್ಲಾ ದಾಖಲೆಗಳ ಬಗ್ಗೆ ಆದಾಯ ತೆರಿಗೆ ಇಲಾಖೆಯಿಂದ ತನಿಖೆಗೆ ಕೆ.ವಿ.ಚೌದರಿ ಮುಂದಾಗಿದ್ದರು. ಅವರನ್ನು ಜೂನ್ 2015 ರಲ್ಲಿ ಮುಖ್ಯ ವಿಜಿಲೆನ್ಸ್ ಆಯುಕ್ತರನ್ನಾಗಿ ನೇಮಿಸಲಾಯಿತು. ಅವರ ವಿರುದ್ಧ ಹಲವಾರು ಭ್ರಷ್ಟಾಚಾರದ ಆರೋಪಗಳಿಂದಾಗಿ ಕಾಮನ್ ಕಾಸ್ ಅವರನ್ನು ಸಿವಿಸಿ ಆಗಿ ನೇಮಕ ಮಾಡುವುದನ್ನು ಪ್ರಶ್ನಿಸಿದ್ದರು. ಕಾಮನ್ ಕಾಸ್ ಸಲ್ಲಿಸಿದ್ದ ಈ ಅರ್ಜಿಯನ್ನೂ ಸಹ ಜುಲೈ 2018 ರಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ನ್ಯಾಯಪೀಠ ವಜಾಗೊಳಿಸಿತ್ತು.

2. ಭೂಸ್ವಾಧೀನ ಪ್ರಕರಣ

ಭೂಸ್ವಾಧೀನ ಪ್ರಕರಣವು ಅದರ ಮೂಲದಿಂದ ಅಂತಿಮ ನಿರ್ಣಯದವರೆಗೆ, ನ್ಯಾಯಮೂರ್ತಿ ಮಿಶ್ರಾ ಅವರು ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ಕಂಡುಬಂದಿದ್ದಾರೆ. 23 ಅಕ್ಟೋಬರ್ 2019 ರಂದು, 2013 ರ ಭೂಸ್ವಾಧೀನ ಕಾಯ್ದೆಗೆ ಸಂಬಂಧಿಸಿದ ಹಿಂದಿನ ಎರಡು ತೀರ್ಪುಗಳಲ್ಲಿ ಯಾವುದು ಸರಿಯಾಗಿದೆ ಎಂದು ನಿರ್ಧರಿಸಲು ಐದು ನ್ಯಾಯಾಧೀಶರ ಸಂವಿಧಾನ ಪೀಠದಲ್ಲಿ ಮಿಶ್ರಾ ಸಹ ಇದ್ದರು. ಆದರೆ 2018ರಲ್ಲಿಯೂ ಅದೇ ವಿಚಾರಕ್ಕೆ ಅವರು ಮತ್ತೆ ನ್ಯಾಯಧೀಶರಾಗಿದ್ದರು. ಈ ಪೀಠ 2020ರಲ್ಲಿ 2018ರ ತೀರ್ಪನ್ನೇ ಎತ್ತಿ ಹಿಡಿಯುತ್ತದೆ.

2013 ರ ಕಾಯಿದೆಯ ಸೆಕ್ಷನ್ 24 (2)ರ ಪ್ರಕಾರ ಐದು ವರ್ಷಗಳೊಳಗೆ ಭೂಮಾಲೀಕರಿಗೆ ‘ಪರಿಹಾರವನ್ನು ಪಾವತಿಸದಿದ್ದರೆ’ ಹಳೆಯ ಭೂಸ್ವಾಧೀನ ಕಾಯ್ದೆ 1894 ರ ಅಡಿಯಲ್ಲಿ ಪ್ರಾರಂಭಿಸಲಾದ ಭೂಸ್ವಾಧೀನ ಪ್ರಕ್ರಿಯೆಗಳು ಮಾನ್ಯತೆ ಕಳೆದುಕೊಳ್ಳುತ್ತವೆ ಎಂದು ತೀರ್ಪು ವಿವರಿಸುತ್ತದೆ.

3. ಹರೇನ್ ಪಾಂಡ್ಯ ಮರ್ಡರ್ ಮಿಸ್ಟರಿ

ಗುಜರಾತ್ ಮಾಜಿ ಗೃಹ ಸಚಿವ ಹರೇನ್ ಪಾಂಡ್ಯ ಅವರನ್ನು ಮಾರ್ಚ್ 26, 2003 ರಂದು ಅಹಮದಾಬಾದ್‌ನಲ್ಲಿ ಅನುಮಾನಾಸ್ಪದವಾಗಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಪಾಂಡ್ಯ ಗುಜರಾತ್‌ನಲ್ಲಿ ಮೋದಿಗೆ ಪರ್ಯಾಯವಾಗಿ ಬೆಳೆಯುತ್ತಿದ್ದವರು ಮಾತ್ರ ಮೋದಿ ಮಾತು ಕೇಳುತ್ತಿರಲಿಲ್ಲ ಎನ್ನಲಾಗುತ್ತಿದೆ. ಹಾಗಾಗಿ ಅವರ ಕೊಲೆ ಹಿಂದೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇದ್ದಾರೆ ಎಂದು ಆರೋಪಿಸಿದ್ದರು. ಆದರೆ 2002 ರ ಗೋಧ್ರಾ ಗಲಭೆಗೆ ಪ್ರತೀಕಾರ ತೀರಿಸಿಕೊಳ್ಳಲು ಪಾಂಡ್ಯನನ್ನು ಕೊಲ್ಲಲಾಯಿತು ಎಂದು ಸಿಬಿಐ ತನ್ನ ವರದಿಯಲ್ಲಿ ತಿಳಿಸಿತ್ತು. ಅದರ ಆಧಾರದಲ್ಲಿ ವಿಶೇಷ ನ್ಯಾಯಾಲಯ ಸಬರಮತಿ ಜೈಲಿನೊಳಗೆ ಸಾರ್ವಜನಿಕರು ಮತ್ತು ಮಾಧ್ಯಮಗಳನ್ನು ಬಿಟ್ಟುಕೊಳ್ಳದೇ ವಿಚಾರಣೆ ನಡೆಸಿ 12 ಮುಸ್ಲಿಂ ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. ಇದನ್ನು ವಿರೋಧಿಸಿ ಹೈಕೋರ್ಟ್ ಮೆಟ್ಟೆಲೇರಿದಾಗ ಆಗಸ್ಟ್ 2011 ರಲ್ಲಿ, ಗುಜರಾತ್ ಹೈಕೋರ್ಟ್ ಕೊಲೆ ಆರೋಪದ 12 ಆರೋಪಿಗಳನ್ನು ಖುಲಾಸೆಗೊಳಿಸಿತು ಮಾತ್ರವಲ್ಲ ತನಿಖೆಯಲ್ಲಿ ನ್ಯೂನತೆಗಳಿವೆ, ಸಾಕ್ಷಿಗಳಿಲ್ಲ ಎಂದು ತಿಳಿಸಿತ್ತು.

2011 ರ ಆಗಸ್ಟ್ ತೀರ್ಪಿನ ನಂತರ ಸಿಬಿಐ ಮತ್ತು ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಗುಜರಾತ್ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದೆ. 2018 ರ ಅಕ್ಟೋಬರ್‌ನಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಇಬ್ಬರು ನ್ಯಾಯಾಧೀಶರ ಪೀಠಕ್ಕೆ ಮೇಲ್ಮನವಿ ನೀಡಲಾಯಿತು.

ಗುಜರಾತ್ ಮಾಜಿ ಗೃಹ ಸಚಿವ ಹರೇನ್ ಪಾಂಡ್ಯ ಅವರ ಕೊಲೆ ಪ್ರಕರಣದಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು 2019 ರ ಜುಲೈ 5 ರಂದು ಅದೇ 12 ಜನರನ್ನು ಶಿಕ್ಷೆಗೊಳಪಡಿಸಿತ್ತು. ಕೊಲೆಯ ಹಿಂದೆ ಬೇರೆಯವರು ಇದ್ದಾರೆ ಎಂಬುದನ್ನು ನಿರಾಕರಿಸಿತು.

ಇದನ್ನು ಪ್ರಶ್ನಿಸಿ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಎಂಬ ಎನ್‌ಜಿಒ ನ್ಯಾಯಂಗ ನೇತೃತವದಲ್ಲಿ ಹೊಸ ತನಿಖೆ ನಡೆಯಬೇಕು ಎಂದು ಸಲ್ಲಿಸಿದ್ದ ಪಿಐಎಲ್‌ ಅನ್ನು ಮಿಶ್ರಾ ನೇತೃತ್ವದ ನ್ಯಾಯಪೀಠವು ವಜಾಗೊಳಿಸಿ, ಅರ್ಜಿ ಸಲ್ಲಿಸಿದ್ದಕ್ಕೆ ಸಿಪಿಐಎಲ್‌ಗೆ ಪೀಠವು 50,000 ರೂ. ದಂಡ ವಿಧಿಸಿತ್ತು.

2003 ರಿಂದ ಗುಜರಾತ್‌ನಲ್ಲಿ ನಡೆದ ಎನ್‌ಕೌಂಟರ್ ಹತ್ಯೆಗಳ ಬಗ್ಗೆ ಹೊಸ ಸಂಗತಿಗಳು ಹೊರಬಿದ್ದಿದ್ದರಿಂದ ಸಿಪಿಐಎಲ್ ಪರ ಹಾಜರಾದ ಪ್ರಶಾಂತ್ ಭೂಷಣ್ ಅವರು ಪಾಂಡ್ಯ ಹತ್ಯೆ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸಬೇಕೆಂದು ಕೋರಿದ್ದರು.

4. ಇಬ್ಬರು ಸಿಜೆಐಗಳ ರಕ್ಷಣೆ

ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಇಬ್ಬರು ಮಾಜಿ ಸಿಜೆಐಗಳ ಘನತೆ ಮತ್ತು ಖ್ಯಾತಿಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೀಠಗಳ ಭಾಗವಾಗಿದ್ದರು.

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಲಂಚ ನೀಡುವ ಮೂಲಕ ಅನುಕೂಲಕರ ತೀರ್ಪು ಪಡೆಯಲು ಪ್ರಯತ್ನಿಸುತ್ತಿದ್ದ ವೈದ್ಯಕೀಯ ಕಾಲೇಜಿನ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿತ್ತು. ಈ ಬಗ್ಗೆ ನ್ಯಾಯಾಂಗದ ನೇತೃತ್ವದಲ್ಲಿ ಸ್ವಂತಂತ್ರ ತನಿಖೆಯಾಗಬೇಕೆಂದು ಹಿರಿಯ ವಕೀಲೆ ಕಾಮಿನಿ ಜೈಸ್ವಾಲ್ ನೇತೃತ್ವದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ 14 ನವೆಂಬರ್ 2017 ರಂದು, ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರನ್ನು ಒಳಗೊಂಡ ಮೂವರು ನ್ಯಾಯಾಧೀಶರ ನ್ಯಾಯಪೀಠವು ಈ ಅರ್ಜಿಯನ್ನು ವಜಾಗೊಳಿಸಿತು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ 1 ಡಿಸೆಂಬರ್ 2017 ರಂದು, ಕ್ಯಾಂಪೇನ್ ಫಾರ್ ಜ್ಯುಡಿಶಿಯಲ್ ಅಕೌಂಟೆಬಿಲಿಟಿ ಅಂಡ್ ರಿಫಾರ್ಮ್ಸ್ (ಸಿಜೆಎಆರ್) ಸಲ್ಲಿಸಿದ ಮತ್ತೊಂದು ಪಿಐಎಲ್ ಅನ್ನು ಅದೇ ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಆರ್.ಕೆ. ಅಗ್ರವಾಲ್, ಎ.ಎಂ.ಖಾನ್ವಿಲ್ಕರ್ ಮತ್ತು ಅರುಣ್ ಮಿಶ್ರಾ ಪೀಠವು ವಜಾಗೊಳಿಸಿತು. ಜೊತೆಗೆ ಸಿಜೆಎಆರ್‌ಗೆ 25 ಲಕ್ಷ ರೂ. ದಂಡ ವಿಧಿಸಿತ್ತು.

ಲೈಂಗಿಕ ಕಿರುಕುಳ ಆರೋಪ

ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯಿರವರು ತನ್ನ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು 35 ವರ್ಷದ ಮಹಿಳೆಯೊಬ್ಬರು ಆರೋಪಿಸಿ, ಏಪ್ರಿಲ್ 19ರ ಶುಕ್ರವಾರ ಸುಪ್ರೀಂ ಕೋರ್ಟ್‍ನ 22 ನ್ಯಾಯಾಧೀಶರಿಗೆ ಅಫಿಡವಿಟ್ ಸಲ್ಲಿಸಿದ್ದರು.

ಇನ್ನು 20 ಏಪ್ರಿಲ್ 2019 ರಂದು ಸಿಜೆಐ ರಂಜನ್ ಗೊಗೊಯ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆ ಸ್ಥಾಪಿಸಲಾದ ವಿಶೇಷ ನ್ಯಾಯಪೀಠದಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ ಕೂಡ ಅದರ ಭಾಗವಾಗಿದ್ದರು. ಸಿಜೆಐ ಗೊಗೊಯ್, ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ, ವಿಶೇಷ ನ್ಯಾಯಪೀಠದ ಮುಖ್ಯಸ್ಥರಾಗಿದ್ದರು, ಆದರೆ ಅವರ ಪಾಲ್ಗೊಳ್ಳುವಿಕೆಯನ್ನು ನಂತರ ದಾಖಲೆಯಿಂದ ಅಳಿಸಲಾಗಿದೆ.

ನ್ಯಾಯಮೂರ್ತಿ ಮಿಶ್ರಾ ಅವರು ಮೂರು ನ್ಯಾಯಾಧೀಶರ ಪೀಠವನ್ನು ವಹಿಸಿಕೊಂಡರು, ಇದು ಸಿಜೆಐಗೆ ಬ್ಲ್ಯಾಕ್ ಮೇಲ್ ಮಾಡಲು ದೊಡ್ಡ ಪಿತೂರಿ ಎಂದು ಆಕೆಯ ವಿರುದ್ಧ ತೀರ್ಪಿತ್ತರು. ಸಿಜೆಐ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳು ನ್ಯಾಯಾಂಗವನ್ನು ಅಸ್ಥಿರಗೊಳಿಸುವ ದೊಡ್ಡ ಕಥಾವಸ್ತುವಿನ ಭಾಗವಾಗಿದೆ ಎಂದು ಪ್ರತಿಪಾದಿಸಿದ ಮಿಶ್ರಾರವರು ಆಕೆಯ ವಕೀಲ ಉತ್ಸವ್ ಬೈನ್ಸ್ ನೋಟಿಸ್ ನೀಡಿದರು. ನಂತರ ಈ ಬಗ್ಗೆ ವಿವರವಾದ ವರದಿ ಸಲ್ಲಿಸಲು ನಿವೃತ್ತ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ಅವರನ್ನು ನಿಯೋಜಿಸಲಾಯಿತು.

ವಿವಾದ ಏನು?

ವೈದ್ಯಕೀಯ ಕಾಲೇಜು ಲಂಚ ಪ್ರಕರಣವು ಅಂದಿನ ಸಿಜೆಐ ದೀಪಕ್ ಮಿಶ್ರಾ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದೆ. ಆರೋಪಿ ಸ್ಥಾನದಲ್ಲಿದ್ದ ದೀಪಕ್‌ ಮಿಶ್ರಾರವರಿಗೆ ಯಾವ ನ್ಯಾಯಾಧೀಶರು ಈ ಪ್ರಕರಣವನ್ನು ಆಲಿಸುತ್ತಾರೆ ಎಂಬುದನ್ನು ನಿರ್ಧರಿಸುವ ಹಕ್ಕು ಅವರಿಗೆ ಇತ್ತು. ಅವರು ಅದನ್ನು ಅರುಣ್ ಮಿಶ್ರಾರವರಿಗೆ ನೇಮಿಸಿದರು. ಅರುಣ್ ಮಿಶ್ರಾ ಅರ್ಜಿ ವಜಾಗೊಳಿಸಿ ದೀಪಕ್‌ ಮಿಶ್ರಾಗೆ ಸಹಾಯ ಮಾಡಿದರು ಎಂಬ ಆರೋಪವಿದೆ.

ಸಿಜೆಐ ಗೊಗೊಯ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ, ನಿವೃತ್ತ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ಅವರು ತಮ್ಮ ವರದಿಯನ್ನು 2019 ರ ಸೆಪ್ಟೆಂಬರ್ ಅಂತ್ಯದಲ್ಲಿ ಮೊಹರು ಮಾಡಿದ ಕವರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದರು. ಆದರೆ ಈ ವರದಿಯ ಬಗ್ಗೆ ಇಲ್ಲಿಯವರೆಗೆ ಯಾವುದೇ ವಿಚಾರಣೆ ನಡೆದಿಲ್ಲ. 2019 ರ ಏಪ್ರಿಲ್‌ನಿಂದ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ವಿಶೇಷ ನ್ಯಾಯಪೀಠದ ವಿಚಾರಣೆ ಕೂಡ ನಡೆಸುತ್ತಿಲ್ಲ.

ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿದ್ದ ಸುಪ್ರೀಂ ಕೋರ್ಟ್ ಆ ಮಹಿಳಾ ಉದ್ಯೋಗಿಯನ್ನು 2020 ರ ಜನವರಿಯಲ್ಲಿ ಪುನಃ ನೇಮಿಸಲಾಯಿತು. ಆಕೆಯ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡಲಾಯಿತು. ನಂತರ ಮಾರ್ಚ್ 2020 ರಲ್ಲಿ ಸಿಜೆಐ ಗೊಗೊಯ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಯಿತು.

5. 100% ಬುಡಕಟ್ಟು ಮೀಸಲಾತಿ ತೀರ್ಪು

ಈ ವರ್ಷ ಏಪ್ರಿಲ್ 22 ರಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಆಂಧ್ರಪ್ರದೇಶ ಸರ್ಕಾರವು 2000 ನಿಗದಿತ ಪ್ರದೇಶಗಳಲ್ಲಿ ಶಾಲಾ ಶಿಕ್ಷಕರ ಹುದ್ದೆಗೆ ನಿಗದಿತ ಬುಡಕಟ್ಟು ಅಭ್ಯರ್ಥಿಗಳಿಗೆ 100 ಪ್ರತಿಶತ ಮೀಸಲಾತಿ ಒದಗಿಸುವ ಸರ್ಕಾರಿ ಆದೇಶವನ್ನು ರದ್ದುಗೊಳಿಸಿತು. ಆಂಧ್ರ ಪ್ರದೇಶ ಮತ್ತು ತೆಲಂಗಾಣ ಎರಡರಲ್ಲೂ ಈ ಆದೇಶವನ್ನು ಅನುಸರಿಸಲಾಗುತ್ತಿದೆ.

ಸರ್ಕಾರದ ಆದೇಶವು ಅನಿಯಂತ್ರಿತವಾಗಿದೆ ಮತ್ತು ಸಂವಿಧಾನದ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ ಎಂದು ಸಂವಿಧಾನ ಪೀಠವು ಅಭಿಪ್ರಾಯಪಟ್ಟಿದೆ. 1992ರ ಇಂದಿರಾ ಸಾಹ್ನಿ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಮೀಸಲಾತಿ ಕುರಿತು ಶೇಕಡಾ 50ರಷ್ಟು ಕೋಟಾ ಅನ್ವಯಿಸುತ್ತದೆ ಎಂದು ಪುನರುಚ್ಚರಿಸಿತು. ಈ ತೀರ್ಪು ಬುಡಕಟ್ಟು ಸಮುದಾಯ ಮತ್ತು ಬುಡಕಟ್ಟು ಹಕ್ಕುಗಳ ಕಾರ್ಯಕರ್ತರಿಂದ ತೀವ್ರ ಟೀಕೆಗೆ ಗುರಿಯಾಯಿತು.

ವಿವಾದ ಏನು?

ಬುಡಕಟ್ಟು ಗುಂಪುಗಳ ಪ್ರಕಾರ, ನಿಗದಿತ ಪ್ರದೇಶಗಳಲ್ಲಿ ಉಳಿದುಕೊಂಡಿರುವ ಜನರು ದೇಶದ ಇತರ ಭಾಗಗಳಲ್ಲಿ ವಾಸಿಸುವ ಜನರಿಂದ ವಿಭಿನ್ನ ಅಗತ್ಯಗಳನ್ನು ಹೊಂದಿರುತ್ತಾರೆ. ಈ ಆದೇಶವು ಬುಡಕಟ್ಟು ಜನಾಂಗದವರ ಹಕ್ಕುಗಳನ್ನು ರಕ್ಷಿಸುವ ಭಾರತದ ಸಂವಿಧಾನದ 5 ನೇ ವಿಧಿಯನ್ನು ಉಲ್ಲಂಘಿಸಿದೆ ಎಂದು ಅವರು ವಾದಿಸಿದರು.

ನಿಗದಿತ ಬುಡಕಟ್ಟು ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲು ರಾಜ್ಯ ಸರ್ಕಾರಕ್ಕೆ ಆಡಳಿತಾತ್ಮಕ ಸಮಸ್ಯೆಯೂ ಇದೆ. ಹಾಗಾಗಿಯೇ ಅವರಿಗೆ 100 ಮೀಸಲಾತಿ ನೀಡುತ್ತಿದ್ದರು.

ಬಿಜೆಪಿಯೊಂದಿಗೆ ಅರುಣ್ ಮಿಶ್ರಾ ಸಂಬಂಧ

ಇವುಗಳು ನಿವೃತ್ತ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ವಿವಾದಿತ ಪ್ರಕರಣಗಳಾದರೆ, ಇತ್ತ ನ್ಯಾಯಮೂರ್ತಿಗಳು ಬಿಜೆಪಿ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಒಂದು ಪಕ್ಷದ ಕಡೆ ಒಲವಿದ್ದವರಾಗಿದ್ದರು ಎಂಬ ಆರೋಪಗಳು ಇವೆ. ಹಾಗಾದರೆ ಬಿಜೆಪಿ ಮತ್ತು ಮಿಶ್ರಾ ನಡುವಿನ ಸಂಬಂಧದ ಕುರಿತು ಕೆಲ ಮಾಹಿತಿಗಳು ಇಲ್ಲಿವೆ.

2014 ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರನ್ನಾಗಿಸಿತು. ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದ ಹಲವಾರು ವಿವಾದಾತ್ಮಕ ತೀರ್ಪುಗಳಲ್ಲಿ ಅವರು ಭಾಗಿಯಾಗಿದ್ದಾರೆ.

2002 ರ ಗುಜರಾತ್‌ನಲ್ಲಿ ಹಿಂಸಾಚಾರ ನಡೆಯಲು ಅವಕಾಶ ನೀಡುವಂತೆ ಅಂದಿನ ಗುಜರಾತ್ ಮುಖ್ಯಮಂತ್ರಿ ಮೋದಿಯವರು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಸಂಜೀವ್ ಭಟ್ ಆರೋಪಿಸಿದ್ದರು. ಆದರೆ 2015 ರಲ್ಲಿ ಸಂಜೀವ್ ಭಟ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠದ ಭಾಗವಾಗಿದ್ದರು ಅರುಣ್ ಮಿಶ್ರಾ.

2017 ರಲ್ಲಿ, ನ್ಯಾಯಮೂರ್ತಿ ಮಿಶ್ರಾ ಅವರು ಸಹರಾ-ಬಿರ್ಲಾ ಡೈರಿಸ್ ಪ್ರಕರಣದ ಅರ್ಜಿಯನ್ನು ವಜಾಗೊಳಿಸಿದರು. ಇದರಲ್ಲಿ ಸಹರಾ ಸಮೂಹದ ಹಿರಿಯ ಕಾರ್ಯನಿರ್ವಾಹಕರಿಂದ 25 ಕೋಟಿ ರೂಪಾಯಿಗಳನ್ನು ಆಗಿನ ಗುಜರಾತ್ ಸಿಎಂ ಮೋದಿಯವರಿಗೆ ಪಾವತಿಸಲಾಗಿದೆ ಎಂದು ದಾಖಲಾಗಿತ್ತು.

ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಅದಾನಿಯಂತಹ ಕಾರ್ಪೊರೇಟ್‌ ಕಂಪನಿಗಳ ಕುರಿತು ದಾಖಲಾದ ಸುಮಾರು 7 ಪ್ರಕರಣಗಳಲ್ಲಿಯೂ ಅದಾನಿ ಪರ ತೀರ್ಪಿದ್ದಾರೆ.

ನ್ಯಾಯಾಧೀಶರಾದವರು ಸಂವಿಧಾನಕ್ಕೆ ಬದ್ಧರಾಗಿರುವುದನ್ನು ಬಿಟ್ಟು ಸರ್ಕಾರಕ್ಕೆ ಬದ್ಧರಾಗಿದ್ದರೇ ಯಾವುದೇ ತೊಂದರೆ, ಸಮಸ್ಯೆಗಳು ಅವರ ಬಳಿ ಸುಳಿಯುವುದಿಲ್ಲ ಎಂಬುದಕ್ಕೆ ಅರುಣ್ ಮಿಶ್ರಾ ಉದಾಹರಣೆಯಾಗಬಲ್ಲರು ಎಂದು ಹಲವರು ಆರೋಪಿಸಿದ್ದಾರೆ.


ಇದನ್ನೂ ಓದಿ: Justice Arun Mishra Helps Adani Profits For Seventh Time in a Row

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...