ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಪುಲ್ ಮನುಭಾಯಿ ಪಾಂಚೋಲಿ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಸೋಮವಾರ (ಆ.25) ಶಿಫಾರಸು ಮಾಡಿರುವುದು ‘ಸರ್ವಾನುಮತ ತೀರ್ಮಾನವಲ್ಲ’ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕೊಲಿಜಿಯಂನ ಐವರು ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ನ್ಯಾಯಮೂರ್ತಿ ಪಾಂಚೋಲಿ ಅವರನ್ನು ಶಿಫಾರಸು ಮಾಡುವುದಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ನಾಗರತ್ನ ಅವರು ಹಿರಿತನ ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಕಾರಣ ಉಲ್ಲೇಖಿಸಿದ್ದಾರೆ. ಏಕೆಂದರೆ, ಹೈಕೋರ್ಟ್ ನ್ಯಾಯಾಧೀಶರ ಹಿರಿತನದ ಅಖಿಲ ಭಾರತ ಪಟ್ಟಿಯಲ್ಲಿ ನ್ಯಾಯಮೂರ್ತಿ ಪಾಂಚೋಲಿ ಪ್ರಸ್ತುತ 57ನೇ ಸ್ಥಾನದಲ್ಲಿದ್ದಾರೆ ಎಂದು ವರದಿ ವಿವರಿಸಿದೆ.
ಸಿಜೆಐ ಬಿಆರ್ ಗವಾಯಿ ಅವರ ಜೊತೆಗೆ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಜೆ.ಕೆ ಮಹೇಶ್ವರಿ ಮತ್ತು ಬಿ.ವಿ ನಾಗರತ್ನ ಅವರು ಸುಪ್ರೀಂ ಕೋರ್ಟ್ ಕೊಲಿಜಿಯಂನ ಸದಸ್ಯರಾಗಿದ್ದಾರೆ.
ಅಖಿಲ ಭಾರತ ಮಟ್ಟದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರ ಸಂಯೋಜಿತ ಹಿರಿತನ, ಪ್ರಾತಿನಿಧ್ಯದ ತತ್ವ, ಅರ್ಹತೆ ಮತ್ತು ಸಮಗ್ರತೆ’ ಎಂಬ ಮೂರು ಅಂಶಗಳನ್ನು ಸುಪ್ರೀಂ ಕೋರ್ಟ್ ತನ್ನ ಆಯ್ಕೆಯ ಮಾನದಂಡವಾಗಿ ಅನುಸರಿಸುತ್ತದೆ.
ಈ ಹಿಂದೆ, ಈ ಅಂಶಗಳನ್ನು ‘ಸಮತೋಲನ’ಪಡಿಸಿ ಹೈಕೋರ್ಟ್ ನ್ಯಾಯಮೂರ್ತಿಯ ನೇಮಕಕ್ಕೆ ಶಿಫಾರಸು ಮಾಡಲಾಗುತ್ತಿತ್ತು. ವಿಶೇಷವಾಗಿ, ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆ ಇರುವ ಅಭ್ಯರ್ಥಿಗಳ ನೇಮಕದಲ್ಲಿ, ಉತ್ತರಾಧಿಕಾರವನ್ನು (line of succession) ಖಚಿತಪಡಿಸಲು ಹಿರಿತನವನ್ನು (seniority) ಕಡೆಗಣಿಸಲಾಗುತ್ತಿತ್ತು.
ಪ್ರಾದೇಶಿಕ ಸಮತೋಲನ
ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್.ವಿ ಅಂಜಾರಿಯಾ ಅವರನ್ನು ಸುಪ್ರೀಂ ಕೋರ್ಟ್‌ಗೆ ನೇಮಕ ಮಾಡಿದ ಮೂರು ತಿಂಗಳೊಳಗೆ, ಅದೇ ಹೈಕೋರ್ಟ್‌ನಿಂದ ಮತ್ತೊಬ್ಬರು ನ್ಯಾಯಾಧೀಶರನ್ನು ಶಿಫಾರಸು ಮಾಡುವುದಕ್ಕೆ ನ್ಯಾಯಮೂರ್ತಿ ನಾಗರತ್ನ ಅವರು ಭಿನ್ನಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿ ಹೇಳಿದೆ.
ಮೇ ತಿಂಗಳಲ್ಲಿ, ನ್ಯಾಯಮೂರ್ತಿ ಪಾಂಚೋಲಿ ಅವರಿಗೆ ಸುಪ್ರೀಂ ಕೋರ್ಟ್‌ಗೆ ಬಡ್ತಿ ನೀಡುವ ಬಗ್ಗೆ ಚರ್ಚೆ ಶುರುವಾಗಿತ್ತು. ಆಗ ಸುಪ್ರೀಂ ಕೋರ್ಟ್ ಕೊಲಿಜಿಯಂನ ಕನಿಷ್ಠ ಇಬ್ಬರು ನ್ಯಾಯಾಧೀಶರು ಪಾಂಚೋಲಿಯವರ ಹಿರಿತನದ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಗುಜರಾತ್ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಅಂಜಾರಿಯಾ ಸೇರಿದಂತೆ ಹಿರಿಯರನ್ನು ಈ ನೇಮಕ ಬೈಪಾಸ್ ಮಾಡಲಿದೆ ಎಂದಿದ್ದರು.
ಹಿರಿತನದ ಬಗ್ಗೆ ಇರುವ ಕಳವಳಗಳನ್ನು ಪರಿಹರಿಸಲು, ಕೊಲಿಜಿಯಂ ಪಾಂಚೋಲಿ ಬದಲಿಗೆ ಹಿರಿಯರಾದ ಅಂಜಾರಿಯಾ ಅವರನ್ನು ಸುಪ್ರೀಂ ಕೋರ್ಟ್‌ಗೆ ಶಿಫಾರಸು ಮಾಡಿತ್ತು. ಪಾಂಚೋಲಿ ಅವರನ್ನು ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಿತ್ತು.
ಆ ಬಳಿಕ ಇದೀಗ ಪಾಂಚೋಲಿಯವರ ಹೆಸರು ಮತ್ತೆ ಪ್ರಸ್ತಾಪವಾಗಿರುವುದರಿಂದ ನ್ಯಾಯಮೂರ್ತಿ ನಾಗರತ್ನ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆಂದು ತಿಳಿದುಬಂದಿದೆ. ಈ ಬಾರಿ ಸುಪ್ರೀಂ ಕೋರ್ಟ್‌ನಲ್ಲಿ ಗುಜರಾತ್ ಹೈಕೋರ್ಟ್‌ನ ಅತಿಯಾದ ಪ್ರಾತಿನಿಧ್ಯವನ್ನು ನಾಗರತ್ನ ಅವರು ಕೇಂದ್ರೀಕರಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ನ್ಯಾಯಮೂರ್ತಿ ಪಾಂಚೋಲಿ ಅವರನ್ನು ನೇಮಿಸಿದರೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ, ಅಂಜಾರಿಯಾ ಮತ್ತು ಪಾಂಚೋಲಿ ಸೇರಿ ಗುಜರಾತ್ ಹೈಕೋರ್ಟ್‌ನ ಮೂವರು ನ್ಯಾಯಾಧೀಶರನ್ನು ಹೊಂದಲಿದೆ. ನ್ಯಾಯಮೂರ್ತಿಗಳಾದ ಪಾರ್ದಿವಾಲಾ ಮತ್ತು ಪಾಂಚೋಲಿ ಇಬ್ಬರೂ 2028ರಲ್ಲಿ ಕ್ರಮವಾಗಿ ಎರಡು ವರ್ಷಗಳ ಅವಧಿಗೆ ಮತ್ತು 2031ರಲ್ಲಿ ಏಳು ತಿಂಗಳ ಅವಧಿಗೆ ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳಲಿದ್ದಾರೆ.
ಮೇ ತಿಂಗಳವರೆಗೆ, ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲಾ, ಎಂ.ಆರ್. ಶಾ ಮತ್ತು ಬೇಲಾ ಎಂ ತ್ರಿವೇದಿ ಸೇರಿ ಸುಪ್ರೀಂ ಕೋರ್ಟ್‌ನಲ್ಲಿ ಗುಜರಾತ್ ಹೈಕೋರ್ಟ್‌ನ ಮೂವರು ನ್ಯಾಯಾಧೀಶರು ಇದ್ದರು. ನ್ಯಾಯಮೂರ್ತಿ ಶಾ ಮೇ ತಿಂಗಳಲ್ಲಿ ನಿವೃತ್ತರಾದರೆ, ನ್ಯಾಯಮೂರ್ತಿ ತ್ರಿವೇದಿ ಅವರು ಮೇ 16ರಂದು ನಿವೃತ್ತಿ ಹೊಂದಿದ್ದಾರೆ. ಬಾಂಬೆ ಹೈಕೋರ್ಟ್, ಅಲಹಾಬಾದ್ ಹೈಕೋರ್ಟ್, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಿಂದ ತಲಾ ಮೂವರು ನ್ಯಾಯಾಧೀಶರು ಸುಪ್ರೀಂ ಕೋರ್ಟ್‌ನಲ್ಲಿದ್ದಾರೆ.
ಸುಪ್ರೀಂ ಕೋರ್ಟ್ 34 ನ್ಯಾಯಾಧೀಶರ ಅನುಮೋದಿತ ಬಲವನ್ನು ಹೊಂದಿದ್ದು, ಸಾಕಷ್ಟು ಪ್ರಾದೇಶಿಕ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಪ್ರತಿ ಹೈಕೋರ್ಟ್‌ನ ಅನುಮೋದಿತ ಬಲವನ್ನು ಪರಿಗಣಿಸಲಾಗುತ್ತದೆ. ನ್ಯಾಯಮೂರ್ತಿ ನಾಗರತ್ನ ಅವರ ಕಳವಳಗಳು ಸುಪ್ರೀಂ ಕೋರ್ಟ್‌ನಲ್ಲಿ ಇತರ ಹೈಕೋರ್ಟ್‌ಗಳ ಕಡಿಮೆ ಪ್ರಾತಿನಿಧ್ಯವನ್ನು ಪ್ರತಿಬಿಂಬಿಸುತ್ತವೆ.
ಉದಾಹರಣೆಗೆ : 52 ನ್ಯಾಯಾಧೀಶರ ಅನುಮೋದಿತ ಬಲವಿರುವ ಗುಜರಾತ್ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ನಲ್ಲಿ ಮೂವರು ನ್ಯಾಯಾಧೀಶರಿದ್ದಾರೆ. ಆದರೆ, 160 ಅನುಮೋದಿತ ನ್ಯಾಯಾಧೀಶರ ಬಲ ಇರುವ ಅಲಹಾಬಾದ್ ಹೈಕೋರ್ಟ್, 94 ಬಲ ಇರುವ ಬಾಂಬೆ ಹೈಕೋರ್ಟ್ ಹಾಗೂ 85 ಬಲ ಇರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಿಂದಲೂ ಮೂವರೇ ಇದ್ದಾರೆ. ಇನ್ನು 75 ಬಲ ಇರುವ ಮದ್ರಾಸ್ ಹೈಕೋರ್ಟ್ ಮತ್ತು 72 ಬಲ ಇರುವ ಕಲ್ಕತ್ತಾ ಹೈಕೋರ್ಟ್‌ನಿಂದ ತಲಾ ಇಬ್ಬರು ನ್ಯಾಯಾಧೀಶರು ಇದ್ದಾರೆ.
ನುಸುಳುಕೋರರೆಂಬ ಆರೋಪ: 36 ಜನರನ್ನು ಬಾಂಗ್ಲಾದೇಶದ ಗಡಿಗೆ ತಳ್ಳಿದ ಅಸ್ಸಾಂ ಪೊಲೀಸ್


