‘ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗ ಒಳ ಮೀಸಲಾತಿಗಾಗಿ ಸಮೀಕ್ಷೆ ನಡೆಸಲು ಮುಂದಾಗಿದ್ದು, ಅದನ್ನು ವೈಜ್ಞಾನಿಕವಾಗಿ ನಡೆಸಬೇಕು. ಸಮುದಾಯ ಯಾವುದೇ ವ್ಯಕ್ತಿ ಈ ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ನಾವು ಮನವಿ ಮಾಡುತ್ತಿದ್ದೇವೆ” ಎಂದು ದಲಿತ ಸಂಘರ್ಷ ಸಮಿತಿ ಮುಖಂಡರು ಹಾಗೂ ಹಿರಿಯ ಪತ್ರಕರ್ತರಾದ ಇಂದೂಧರ ಹೊನ್ನಾಪುರ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾಗಮೋಹನ್ ದಾಸ್ ಸಮಿತಿಯು ತನ್ನ ಪ್ರಶ್ನಾವಳಿಗಳನ್ನು ಬಹಳ ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ರೂಪಿಸಬೇಕಿದೆ. ಯಾವುದಾರೂ ಒಂದು ಸಮುದಾಯವು ತನ್ನ ಜಾತಿ ಹೆಸರೇಳುವುದರಿಂದ ತಪ್ಪಿಸಿಕೊಂಡರೆ ಅಥವಾ ವ್ಯತ್ಯಾಸವಾದರೆ, ಅವರ ಮೂಲ ಜಾತಿ ಹೆಸರನ್ನು ತಿಳಿದುಕೊಂಡು ನಮೂದಿಸುವ ಹಾಗೆ ಮಾದರಿ ರೂಪಿಸಬೇಕಾಗಿರುವುದು ಬಹಳ ಮುಖ್ಯವಾದ ಅಂಶ. ಸುಪ್ರೀಂಕೋರ್ಟ್ ಹೇಳಿರುವಂತೆ, ಅಂತರ್ ಹಿಂದುಳಿದಿರುವಿಕೆಯನ್ನು ಸಾಬೀತು ಮಾಡಿ, ಆ ಮೂಲಕ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಹೇಳಿದೆ. ಆದ್ದರಿಂದ, ಜಸ್ಟೀಸ್ ನಾಗಮೋಹನ್ ದಾಸ್ ಅವರು ಈ ಬಗ್ಗೆ ಹೆಚ್ಚುವರಿ ಎಚ್ಚರಿಕೆ ವಹಿಸಬೇಕು” ಎಂದು ಮನವಿ ಮಾಡಿದರು.
“ಅಲೆಮಾರಿ ಸಮುದಾಯಗಳು ಸಮೀಕ್ಷಾ ತಂಡಕ್ಕೆ ಸಿಗದೆ ಇರುವ ಸಾಧ್ಯತೆಗಳು ಹೆಚ್ಚಿವೆ. ಏಕೆಂದರೆ, ಅವರು ಸದಾ ಸಂಚಾರದಲ್ಲಿರುತ್ತಾರೆ. ಬೆಳಗ್ಗೆ ಒಂದು ಊರಿನಲ್ಲಿ ಇದ್ದರೆ, ಮಧ್ಯಾಹ್ನ ಮತ್ಯಾವುದೋ ಊರಿನಲ್ಲಿ ಇರುತ್ತಾರೆ. ಎಲ್ಲೋ ಮಲಗಿ ಮತ್ತಿನ್ನೆಲ್ಲೋ ಎದ್ದೇಳುತ್ತಾರೆ. ಅಗೋಚರ ಸ್ಥಿತಿಯಲ್ಲಿರುವ ಅಲೆಮಾರಿಗಳನ್ನು ಹೇಗೆ ಹುಡುಕುತ್ತಾರೆ ಎಂಬುದು ಮುಖ್ಯವಾಗುತ್ತದೆ. ಸ್ವಾತಂತ್ರ್ಯ ನಂತರ ಅಲೆಮಾರಿಗಳು ಕನಿಷ್ಠ ಸೌಲಭ್ಯ ಪಡೆದುಕೊಂಡಿದ್ದಾರೆ. ಹಾಗಾಗಿ, ಆ ಸಮುದಾಯಕ್ಕೆ ಸಮರ್ಪಕ ನ್ಯಾಯ ಸಿಗುವಂತೆ ಮಾಡಬೇಕು ಎಂಬುದು ನಮ್ಮ ಮನವಿ” ಎಂದರು.
“ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಸರ್ಕಾರ ಹಲವಾರು ಕಾರಣಗಳನ್ನು ನೀಡಿ ಮುಂದೂಡಿದೆ. ಯಾವುದೇ ಕಾರಣಕ್ಕೂ ಮತ್ತಷ್ಟ ವಿಳಂಬ ಮಾಡಬಾರದು. ಸರ್ಕಾರ ನಿಗದಿಪಡಿಸಿರುವ 60 ದಿನಗಳ ಕಾಲಾವಧಿಯಲ್ಲಿ ಸಮೀಕ್ಷೆ ಮುಗಿಸಿ ವರದಿ ಕೊಡಬೇಕು. ಸರ್ಕಾರ ಮೀನಾಮೇಷ ಎಣಿಸದೆ ತಕ್ಷಣ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಒಕ್ಕೂಟದಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದೆ” ಎಂದರು.
40% ಕಮಿಷನ್ ಆರೋಪ ಕುರಿತ ಆಯೋಗದ ವರದಿಯಲ್ಲಿ ಇಬ್ಬರು ಮಾಜಿ ಬಿಜೆಪಿ ಶಾಸಕರ ಹೆಸರು!


