‘ಜನ ಸಾಮಾನ್ಯರ ಒಳಿತಿಗಾಗಿ’ ವಿತರಿಸಲು ಎಲ್ಲಾ ಖಾಸಗಿ ಒಡೆತನದ ಸಂಪನ್ಮೂಲಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಂವಿಧಾನದ ಅಡಿಯಲ್ಲಿ ಪ್ರಭುತ್ವಕ್ಕೆ ಅಧಿಕಾರವಿಲ್ಲ ಎಂದು 7:2 ಬಹುಮತದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನಿನ್ನೆ (ನ.5) ಹೇಳಿದೆ.
ಸಂವಿಧಾನದ ಪರಿಚ್ಛೇದ 39 (ಬಿ) ಅಡಿಯಲ್ಲಿ ಎಲ್ಲಾ ಖಾಸಗಿ ಒಡೆತನದ ಸಂಪನ್ಮೂಲಗಳನ್ನು ಪ್ರಭುತ್ವ ಸ್ವಾಧೀನಪಡಿಸಿಕೊಳ್ಳಬಹುದು ಎಂಬ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ಹಿಂದಿನ ತೀರ್ಪನ್ನು ಸಿಜೆಐ ನೇತೃತ್ವದ ಬಹುಮತದ ತೀರ್ಪು ರದ್ದುಪಡಿಸಿದೆ.
‘ಜನ ಸಾಮಾನ್ಯರ ಒಳಿತಿಗಾಗಿ’ ಸಂವಿಧಾನದ ಪರಿಚ್ಛೇದ 39 (ಬಿ) ಅಡಿಯಲ್ಲಿ ಖಾಸಗಿ ಆಸ್ತಿಗಳನ್ನು ‘ಸಮುದಾಯದ ಸಂಪನ್ಮೂಲಗಳು ಎಂದು ಪರಿಗಣಿಸಬಹುದೇ? ಮತ್ತು ಪ್ರಭುತ್ವ ಅವುಗಳನ್ನು ಸ್ವಾಧೀನಪಡಿಸಿಕೊಳ್ಳಬಹುದೇ?’ ಎಂಬ ಕಾನೂನಾತ್ಮಕ ಪ್ರಶ್ನೆಯ ಕುರಿತು ತನ್ನ ಮತ್ತು ಪೀಠದಲ್ಲಿದ್ದ ಇತರ ಆರು ನ್ಯಾಯಾಧೀಶರಾದ ಹೃಷಿಕೇಶ್ ರಾಯ್, ಜೆ.ಬಿ. ಪರ್ದಿವಾಲಾ, ಮನೋಜ್ ಮಿಶ್ರಾ, ರಾಜೇಶ್ ಬಿಂದಾಲ್, ಸತೀಶ್ ಚಂದ್ರ ಶರ್ಮಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ತೀರ್ಪನ್ನು ಸಿಜೆಐ ಚಂದ್ರಚೂಡ್ ಬರೆದಿದ್ದಾರೆ.
ಒಟ್ಟು ಒಂಭತ್ತು ನ್ಯಾಯಾಧೀಶರ ಪೈಕಿ, ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ಸಿಜೆಐ ಬರೆದ ಬಹುಮತದ ತೀರ್ಪನ್ನು ಭಾಗಶಃ ಒಪ್ಪಿಕೊಂಡಿಲ್ಲ. ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಎಲ್ಲಾ ಅಂಶಗಳಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಏಳು ನ್ಯಾಯಾಧೀಶರ ಬಹುಮತದ ತೀರ್ಪು ಪ್ರಕಟಿಸುವ ವೇಳೆ ಸಿಜೆಐ ಚಂದ್ರಚೂಡ್ ಅವರು, 1978ರ ಕರ್ನಾಟಕ VS ರಂಗನಾಥ ರೆಡ್ಡಿ ಪ್ರಕರಣದಲ್ಲಿ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರು ಮಾಡಿರುವ ವಿಧಿ 39 (ಬಿ) ರ ಅಲ್ಪಸಂಖ್ಯಾತರ ವ್ಯಾಖ್ಯಾನವನ್ನು ಟೀಕಿಸಿದ್ದಾರೆ. ಅಲ್ಲದೆ, 1982ರ ಸಂಜೀವ್ ಕೋಕ್ ಮ್ಯಾನುಪ್ಯಾಕ್ಚರಿಂಗ್ ಕಂಪನಿ VS ಭಾರತ್ ಕೋಕಿಂಗ್ ಕೋಲ್ ಲಿ. ಪ್ರಕರಣದ ತೀರ್ಪಿನಲ್ಲಿ ನ್ಯಾಯಮೂರ್ತಿ ನಾಗರತ್ನ ಅವರ ತಂದೆ 1989ರಲ್ಲಿ ಸಿಜೆಐ ಆಗಿದ್ದ ನ್ಯಾಯಮೂರ್ತಿ ಇ.ಎಸ್ ವೆಂಕಟರಾಮಯ್ಯ ಸೇರಿದಂತೆ ಐವರು ನ್ಯಾಯಾಧೀಶರ ಪೀಠ ನೀಡಿದ ತೀರ್ಪಿನ ವ್ಯಾಖ್ಯಾನವನ್ನೂ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.
“ಅಯ್ಯರ್ ಅವರ ಸಿದ್ದಾಂತವು ವಿಶಾಲವಾದ ಮತ್ತು ಹೊಂದಿಕೊಳ್ಳಬಲ್ಲ ಗುಣ ಲಕ್ಷಣಗಳನ್ನು ಹೊಂದಿರುವ ಸಂವಿಧಾನಕ್ಕೆ ಅನ್ಯಾಯ ಮಾಡಿತ್ತು” ಎಂದು ಸಿಜೆಐ ಹೇಳಿದ್ದಾರೆ.
ಸಿಜೆಐ ನೀಡಿದ ಹೇಳಿಕೆಗೆ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಮತ್ತು ಸುಧಾಂಶು ಧುಲಿಯಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಸಿಜೆಐ ಅವರ ಅಭಿಪ್ರಾಯಗಳು ಅನಪೇಕ್ಷಿತ ಹಾಗೂ ಸಮರ್ಥನೀಯವಲ್ಲ” ಎಂದು ನ್ಯಾಯಮೂರ್ತಿ ನಾಗರತ್ನ ಅವರು ಹೇಳಿದರೆ, “ಸಿಜೆಐ ಇಂಥ ಹೇಳಿಕೆಯನ್ನು ತಪ್ಪಿಸಬಹುದಿತ್ತು” ಎಂದು ನ್ಯಾಯಮೂರ್ತಿ ಸುಧಾಂಶು ಧುಲಿಯಾ ತಿಳಿಸಿದ್ದಾರೆ.
ನ್ಯಾಯಮೂರ್ತಿ ನಾಗರತ್ನ ಅವರು 130 ಪುಟಗಳ ಪ್ರತ್ಯೇಕ ತೀರ್ಪು ನೀಡಿದ್ದು, “ಆರ್ಥಿಕ ನೀತಿ ನಿರೂಪಣೆ ಮಾಡುವುದು ನ್ಯಾಯಾಲಯದ ಕೆಲಸವಲ್ಲ. ಆದರೆ, ಆರ್ಥಿಕ ಪ್ರಜಾಪ್ರಭುತ್ವವೊಂದರ ಬುನಾದಿಗೆ ಬೇಕಾದಂತಹ ಚೌಕಟ್ಟು ರಚನೆಗೆ ನೆರವು ನೀಡಬಹುದಾಗಿದೆ. ಹೀಗಾಗಿ, ನ್ಯಾಯಮೂರ್ತಿ ಅಯ್ಯರ್ ಅವರ ಸಿದ್ದಾಂತವು ಸಂವಿಧಾನಕ್ಕೆ ಅಪಚಾರವೆಸಗಿಲ್ಲ” ಎಂದಿದ್ದಾರೆ.
“ಸರ್ಕಾರದ ಆರ್ಥಿಕ ನೀತಿಗಳಲ್ಲಿ ಭಾರೀ ಬದಲಾವಣೆಗಳಾಗಿವೆ ಎಂದ ಮಾತ್ರಕ್ಕೆ ಈ ಹಿಂದಿನ ನ್ಯಾಯಮೂರ್ತಿಗಳಿಂದ ಸಂವಿಧಾನಕ್ಕೆ ಅನ್ಯಾಯವಾಗಿದೆ ಎಂದು ಹೇಳುವುದು ಸರಿಯಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ನ್ಯಾಯಮೂರ್ತಿ ಅಯ್ಯರ್ ಸಿದ್ದಾಂತ ಕುರಿತಂತೆ ವ್ಯಕ್ತವಾದ ಹೇಳಿಕೆಗೆ ನನ್ನ ಬಲವಾದ ಅಸಮ್ಮತಿಯನ್ನು ದಾಖಲಿಸುತ್ತೇನೆ” ಎಂದು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಕೂಡ ಹೇಳಿದ್ದಾರೆ.
ಇದನ್ನೂ ಓದಿ : ಎಲ್ಲಾ ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಭುತ್ವಕ್ಕೆ ಅವಕಾಶವಿಲ್ಲ : ಸುಪ್ರೀಂಕೋರ್ಟ್


