ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಸೋಮವಾರ (ಜ.6) ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ. ಆಡಳಿತಾರೂಢ ಲಿಬರಲ್ ಪಕ್ಷವು ಹೊಸ ನಾಯಕನನ್ನು ಆಯ್ಕೆ ಮಾಡಿದ ತಕ್ಷಣ ಅಧಿಕಾರವನ್ನು ತೊರೆಯುವುದಾಗಿ ಹೇಳಿದ್ದಾರೆ.
ಒಟ್ಟಾವಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಪಕ್ಷದ ನಾಯಕ ಹಾಗೂ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ಉದ್ದೇಶಿಸಿದ್ದೇನೆ” ಎಂದು ತಿಳಿಸಿದ್ದಾರೆ.
ಆಡಳಿತರೂಢ ಲಿಬರಲ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಉಂಟಾದ ಹಿನ್ನೆಲೆ, ಹುದ್ದೆ ತೊರೆಯುವಂತೆ ಟ್ರುಡೊ ಅವರಿಗೆ ಪಕ್ಷದ ಹಿರಿಯ ನಾಯಕರು ಸೂಚಿಸಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಅವರ ರಾಜೀನಾಮೆ ಘೋಷಿಸಿದ್ದಾರೆ ಎಂದು ವರದಿಯಾಗಿದೆ.
“ನಾನು ಯಾವುದೇ ಹೋರಾಟದಲ್ಲಿ ಸುಲಭವಾಗಿ ಸೋಲಲು ಇಚ್ಚಿಸುವುದಿಲ್ಲ. ವಿಶೇಷವಾಗಿ ನಮ್ಮ ಪಕ್ಷ ಮತ್ತು ದೇಶಕ್ಕೆ ಸಂಬಂಧಿಸಿದ ವಿಷಯಗಳಲ್ಲಿ. ಆದರೂ, ನಾನು ಈ ಕೆಲಸ (ರಾಜೀನಾಮೆ) ಮಾಡುತ್ತೇನೆ. ಏಕೆಂದರೆ, ಕೆನಡಿಯನ್ನರ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವ ದೃಢವಾಗಿರಬೇಕು ಎನ್ನುವುದು ನನಗೆ ಬಹಳ ಮುಖ್ಯ” ಎಂದು ರಾಜೀನಾಮೆ ಘೋಷಣೆ ಬಳಿಕ ಟ್ರುಡೊ ಹೇಳಿದ್ದಾರೆ.
“ನಮ್ಮ ಮಹಾನ್ ದೇಶ ಮತ್ತು ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕೆನಡಾದ ಲಿಬರಲ್ ಪಕ್ಷವು ಒಂದು ಪ್ರಮುಖ ಸಂಸ್ಥೆಯಾಗಿದೆ. ಹೊಸ ಪ್ರಧಾನಮಂತ್ರಿ ಮತ್ತು ಲಿಬರಲ್ ಪಕ್ಷದ ನಾಯಕ ಮುಂದಿನ ಚುನಾವಣೆಯಲ್ಲಿ ಅದರ ಮೌಲ್ಯಗಳು ಮತ್ತು ಆದರ್ಶಗಳನ್ನು ಮುಂದುವರೆಸಲಿದ್ದಾರೆ. ಮುಂದಿನ ತಿಂಗಳು ಆ ಪ್ರಕ್ರಿಯೆ ನಡೆಯುವುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ” ಎಂದಿದ್ದಾರೆ.
ಟ್ರುಡೊ ರಾಜೀನಾಮೆ ಘೋಷಣೆ ಹಿನ್ನೆಲೆ, ಜನವರಿ 27ರಂದು ಪುನರಾರಂಭಗೊಳ್ಳಬೇಕಿದ್ದ ಸಂಸತ್ ಅಧಿವೇಶನವನ್ನು ಮಾರ್ಚ್ 24ರವರೆಗೆ ಮುಂದೂಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಟ್ರುಡೊ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕೆ ಲಿಬರಲ್ ಪಕ್ಷ ಯಾರನ್ನು ಆಯ್ಕೆ ಮಾಡಲಿದೆ ಎಂದು ತಿಳಿದು ಬಂದಿಲ್ಲ. ಆದರೂ, ಈ ಹುದ್ದೆಗಾಗಿ ಪಕ್ಷದಲ್ಲಿ ಆಂತರಿಕ ಪೈಪೋಟಿ ಏರ್ಪಡುವುದು ಖಚಿತ.
ಮತ್ತೊಂದೆಡೆ, ಸಂಸತ್ ಅಧಿವೇಶನ ಪುನರಾರಂಭಗೊಂಡರೆ ವಿಶ್ವಾಸ ಮತ ಯಾಚನೆ ವೇಳೆ ಲಿಬರಲ್ ಪಕ್ಷದ ನಾಯಕತ್ವವನ್ನು ಸೋಲಿಸಿ, ಸರ್ಕಾರ ಉರುಳಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ. ಈ ಮೂಲಕ ರಾಜಕೀಯ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆ.
ನಿಗದಿತ ವೇಳಾಪಟ್ಟಿಯಂತೆ ಕೆನಡಾದಲ್ಲಿ ಮುಂದಿನ ವರ್ಷದ ಅಕ್ಟೋಬರ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಬೇಕಿದೆ. ರಾಜಕೀಯ ಅಸ್ಥಿರತೆ ಉಂಟಾದರೆ ಅವಧಿಗೂ ಮುನ್ನವೇ ಚುನಾವಣೆ ನಡೆಯಬಹುದು.
ಹತ್ತು ವರ್ಷಗಳ ಕನ್ಸರ್ವೇಟಿವ್ ಪಕ್ಷದ ಆಡಳಿತದ ನಂತರ, 2015ರಲ್ಲಿ ಟ್ರುಡೊ ಅವರು ಕೆನಡಾ ಪ್ರಧಾನಿ ಹುದ್ದೆಗೇರಿದ್ದರು. ಅದಕ್ಕೂ ಮುನ್ನ 2013ರಲ್ಲಿ ಅವರು ಲಿಬರಲ್ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು. ಪ್ರಧಾನಿಯಾಗಿ ಆಯ್ಕೆಯಾದ ಆರಂಭದಲ್ಲಿ ಜನಮನ್ನಣೆ ಗಳಿಸಿದ್ದ 53 ವರ್ಷದ ಜಸ್ಟಿನ್ ಟ್ರುಡೊ, ಆ ಬಳಿಕ ಆಹಾರ ಮತ್ತು ವಸತಿ ವೆಚ್ಚ ಹೆಚ್ಚಳ ಮತ್ತು ಅನಧಿಕೃತ ವಲಸೆ ಹೆಚ್ಚಳದಂತಹ ವಿಷಯಗಳಲ್ಲಿ ಜನರ ಆಕ್ರೋಶಕ್ಕೆ ಗುರಿಯಾದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳ ಪ್ರಸಿದ್ದಿಯನ್ನು ಪಡೆದಿರುವ ಟ್ರುಡೊ ಅವರು, ಆರಂಭದಲ್ಲಿ ಭಾರತದೊಂದಿಗೆ ಉತ್ತಮ ದ್ವಿಪಕ್ಷೀಯ ಸಂಬಂಧ ಮುಂದುವರೆಸಿದ್ದರು. ಆದರೆ, ಖಲಿಸ್ತಾನಿ ಪ್ರತ್ಯೇಕವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಎರಡು ರಾಷ್ಟ್ರಗಳ ಸಂಬಂಧ ಹಳಸಿದೆ. ಪ್ರಸ್ತುತ, ಭಾರತಕ್ಕೆ ಟ್ರುಡೊ ಶತ್ರುವಿನಂತೆ ಬಿಂಬಿತರಾಗಿದ್ದಾರೆ.
ಇದನ್ನೂ ಓದಿ : ಭಾರತ ಸೇರಿದಂತೆ ಜಾಗತಿಕವಾಗಿ ‘ಎಚ್‌ಎಂಪಿವಿ’ ಈಗಾಗಲೇ ಇದೆ: ಐಸಿಎಂಆರ್


