ಕವಿ ಕೆ.ಬಿ.ಸಿದ್ದಯ್ಯ ಏಕಕಾಲಕ್ಕೆ ಕವಿಯೂ, ಸಂತನೂ, ಸಂಸಾರಿಯೂ ಮತ್ತು ರಾಜಕೀಯ ವ್ಯಕ್ತಿಯಾಗಿ ಕಾಣುತ್ತಿದ್ದರು. ಬಿಳಿಗಡ್ಡ ಮತ್ತು ಬಿಳಿ ಕೂದಲು ಕಂಡರೆ ಎಷ್ಟೇ ಜನರಿರಲಿ ಕೆ.ಬಿ ಅವರನ್ನು ಗುರುತಿಸಬಹುದಾಗಿತ್ತು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.
ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತುಮಕೂರಿನ ಅಮಾನಿಕೆರೆ ಎದುರಿನಲ್ಲಿರುವ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಕೆ.ಬಿ.ಸಿದ್ದಯ್ಯನವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆ.ಬಿ. ಪ್ರಯತ್ನಿಸಿದ್ದರೆ ರಾಜ್ಯಸಭಾ ಸದಸ್ಯರಾಗುವ ಎಲ್ಲಾ ಲಕ್ಷಣಗಳು ಅವರಲ್ಲಿದ್ದವು. ಆದರೆ ಕೆಬಿ ಗಂಭೀರವಾಗಿ ಪ್ರಯತ್ನ ಮಾಡಲಿಲ್ಲ ಅನಿಸುತ್ತದೆ ಎಂದರು.

ನಾನು ಕೆ.ಬಿ.ಸಿದ್ದಯ್ಯನವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಬೇಕೆಂಬ ಆಸೆ ಇತ್ತು. ಆದರೆ ನುಡಿನಮನ ಸಮಾರಂಭದಲ್ಲಿ ಭಾಗವಹಿಸುತ್ತೇನೆಂಬ ನಂಬಿಕೆ ಇರಲಿಲ್ಲ. ಹೀಗಾಗಿ ಇದು ಹೆಮ್ಮೆಯ, ಸಂತೋಷದ ವಿಚಾರವಲ್ಲ. ನಾನು ತುಮಕೂರುನಲ್ಲಿದ್ದಾಗ ಕೆಬಿ.ಸಿದ್ದಯ್ಯ ಒಡನಾಟವಿದ್ದರೂ ಹೆಚ್ಚು ಭೇಟಿ ಆಗುತ್ತಿರಲಿಲ್ಲ ಎಂದು ಸ್ಮರಿಸಿಕೊಂಡರು.
ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿದ್ದ ಕೆ.ಬಿ.ಸಿದ್ದಯ್ಯ ಎಂದೂ ವಿಧಾನಸೌಧದಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ ಸಿದ್ದರಾಮಯ್ಯ ಮನೆಗೆ ಬರುತ್ತಿದ್ದರು. ಅಲ್ಲಿ ನಾನು ಅವರನ್ನು ನೋಡಿದ್ದೆ. ಅವರ ಬಿಳಿಯ ಗಡ್ಡ, ಬಿಳಿಯ ಕೂದಲ ಮತ್ತು ಇತ್ತೀಗೆ ಹಾಕಿಕೊಳ್ಳುತ್ತಿದ್ದ ಕಪ್ಪು ಕನ್ನಡ ಎಲ್ಲರ ನಡುವೆ ಅವರನ್ನು ಗುರುತಿಸುವಂತಹ ವ್ಯಕ್ತಿತ್ವವಾಗಿತ್ತು. ಅಷ್ಟೇ ಅಲ್ಲ ಅವರಲ್ಲಿ ಆತ್ಮಸ್ಥೈರ್ಯ ಕೂಡ ಇತ್ತು. ಅವರು ಎಂದೂ ತಲೆತಗ್ಗಿಸಿದವರಲ್ಲ. ಬೇಸರದಿಂದ, ನೋವಿನಿಂದ ಅವರು ಇದ್ದದ್ದು ಕಾಣಲಿಲ್ಲ. ಅವರ ಮಾತುಗಳಲ್ಲಿ ನಿರಾಸೆ, ಸಿನಿಕತೆ ಕಾಣಲಿಲ್ಲ ಎಂದು ವಿವರಿಸಿದರು.
ಕೆಬಿಯವರವನ್ನು ನೋಡಿದಾಗ ಅವರ ಗುರು ಅನಂತಮೂರ್ತಿ ನೆನಪಾಗುತ್ತಿದ್ದರು. ಅನಂತಮೂರ್ತಿ ಕೊನೆಯ ದಿನಗಳಲ್ಲಿ ಮುಂದಿನ ಎರಡು ವರ್ಷಗಳ ಹೇಗೆ ನರೇಂದ್ರ ಮೋದಿ ಅವರನ್ನು ಎದರಿಸಬೇಕು ಎಂಬ ಜೀವನೋತ್ಸಾಹ ಇತ್ತು. ಅದೇ ಜೀವನೋತ್ಸಾಹ ಕೆ.ಬಿ.ಸಿದ್ದಯ್ಯ ಅವರಲ್ಲೂ ಇತ್ತು. ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ನಾವೂ ನಿರೀಕ್ಷಿಸಿರಲಿಲ್ಲ. ಅವರು ಅದನ್ನು ಅಂದುಕೊಂಡಿರಲಿಲ್ಲ. ಸಾವನ್ನು ಯಾರೂ ನಿರೀಕ್ಷಿಸುವುದಿಲ್ಲವಲ್ಲ ಎಂದರು.
ಕವಿ ಕೆ.ಬಿ.ಸಿದ್ದಯ್ಯ ಸಂತನೋ, ಸಂಸಾರಿಯೋ ರಾಜಕಾರಣಿಯೋ ಏನೆಂದು ತಿಳಿಯುವ ಮೊದಲೇ ಅವರು ಹೊರಟು ಹೋದರು. ಸಾಹಿತಿಗಳ ಸುತ್ತಮುತ್ತ ಒಂದು ಪ್ರಭಾವಳಿ ಇರುತ್ತದೆ. ಆ ಪ್ರಭಾವಳಿಯ ಹತ್ತಿರ ಹೋಗಲು ಸಾಧ್ಯವಾಗದಂತಹ ಸ್ಥಿತಿ ಇರುತ್ತದೆ. ಆದರೆ ದೇವನೂರು ಮಹಾದೇವ ಮತ್ತು ಕೆ.ಬಿ.ಸಿದ್ದಯ್ಯ ಅವರಲ್ಲಿ ಅಂತಹ ಯಾವುದೇ ಪ್ರಭಾವಳಿ ಇರಲಿಲ್ಲ. ತುಂಟತನ ಇತ್ತು, ಎಲ್ಲರೊಂದಿಗೆ ಬೆರೆಯುತ್ತಿದ್ದರು ಎಂದು ಹೇಳಿದರು.
ಕೆ.ಬಿ ತುಮಕೂರು ಬಿಟ್ಟು ಬೆಂಗಳೂರಿಗೆ ಬಂದಿದ್ದರೆ ಮಹತ್ವದ ಸ್ಥಾನ ಪಡೆಯುತ್ತಿದ್ದರು. ಬೆಂಗಳೂರಿಗೆ ಬಂದರೆ ಸಂಜೆಗೆ ತುಮಕೂರಿಗೆ ಬರುತ್ತಿದ್ದರು. ಅವರಿಗೆ ತುಮಕೂರು ಸೆಳೆಯುತ್ತಿತ್ತು. ಸಿದ್ದರಾಮಯ್ಯ ಎಷ್ಟೇ ಜನರ ನಡುವೆ ಕೂತು ಮಾತನಾಡುತ್ತಿರಲಿ ಬಿಳಿಗಡ್ಡ ಮತ್ತು ಬಿಳಿತಲೆಯ ಸಿದ್ದಯ್ಯ ಅವರನ್ನು ಕಂಡರೆ ಏನ್ ಪ್ರೊಫೆಸರ್ ಎನ್ನುತ್ತಿದ್ದರು ಎಂದು ನೆನಪಿಸಿದರು.
ಕೆ.ಬಿ. ಸಿದ್ದಯ್ಯ ಭಾಷಣದಲ್ಲಿ ಕಟುವಾಗಿ ಮಾತನಾಡುತ್ತಿದ್ದರೋ ಅವರ ಮನಸ್ಸಿನಲ್ಲಿ ಅಂತಹ ಯಾವುದೇ ಭಾವನೆ ಇರುತ್ತಿರಲಿಲ್ಲ. ಬೇರೆಯವರನ್ನು ಟೀಕೆ ಮಾಡಿ ಏಕೆ ತಮ್ಮ ಮೇಲೆ ಎಳೆದುಕೊಳ್ಳುತ್ತಿರಿ ಎಂದರೆ ಬಿಡೋ ಎನ್ನುತ್ತಿದ್ದರು. ಮೇಲ್ನೋಟಕ್ಕೆ ಕಟುವಾಗಿ ಟೀಕಿಸಿದರೂ ಅವರ ಒಳಗಡೆ ಅಂತಹ ಕಹಿ ಇರಲಿಲ್ಲ. ಇಂತಹ ಸಾಧಕರನ್ನು ನೆನೆಸಿಕೊಳ್ಳುವುದು ಕಡಿಮೆ. ಇಂಥವರು ಬಹಳಷ್ಟು ಮಂದಿ ಇದ್ದಾರೆ. ಅವರು ಇದ್ದಾಗಲೇ ತಮ್ಮ ಸಾಧನೆಗಳನ್ನು ಹೇಳುವ ಕೆಲಸ ಆಗಬೇಕು ಎಂದು ತಿಳಿಸಿದರು.
ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಮಾತನಾಡಿ ಕೆ.ಬಿ.ಸಿದ್ದಯ್ಯ ಇನ್ನೂ ಎತ್ತರಕ್ಕೆ ಬೆಳೆಯಬಹುದಿತ್ತು. ಆದರೆ ಹಾಗೆ ಆಗಲಿಲ್ಲ. ಅವರೊಂದು ಪುಷ್ಪಕವಿಮಾನವಿದ್ದಂತೆ. ಅದರಲ್ಲಿ ಯಾರೂ ಹತ್ತಲಿಲ್ಲ. ಅದು ಮೇಲಕ್ಕೂ ಹೋಗಲಿಲ್ಲ. ಪುಷ್ಪಕ ವಿಮಾನ ಹತ್ತಿದ್ದರೆ ಮೇಲಕ್ಕೆ ಹೋಗುತ್ತಿದ್ದರು ಎಂದು ಮೆಲುಕು ಹಾಕಿದರು.


