1992ರ ಡಿಸೆಂಬರ್ 6 ರಂದು ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯ ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿಯನ್ನು ಆರ್.ಎಸ್.ಎಸ್. – ವಿ.ಹಿಂ.ಪ. ನೇತೃತ್ವದಲ್ಲಿ ಧ್ವಂಸಗೊಳಿಸುವ ಕಾನೂನುಬಾಹಿರ ಘಟನೆ ನಡೆಯಿತು. ಈ ಘಟನೆಗೆ ಪ್ರಚೋದನೆ ನೀಡಿ, 1990ರಲ್ಲಿ ಬಿ.ಜೆ.ಪಿ. ನಾಯಕ ಎಲ್.ಕೆ.ಅದ್ವಾನಿ ನಡೆಸಿದ ‘ರಥಯಾತ್ರೆ’ಯಿಂದ ಹಿಡಿದು ಮಸೀದಿ ನಾಶದ ಘಟನೆಯವರೆಗಿನ ಮೂರು ವರ್ಷಗಳಲ್ಲಿ ದೇಶದಾದ್ಯಂತ 3000ಕ್ಕೂ ಹೆಚ್ಚು ಕೋಮು ಹಿಂಸಾಚಾರದ ಕೃತ್ಯಗಳು ನಡೆದು ಮೂರು ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡರು – ಅವರೆಲ್ಲ ಹೆಚ್ಚು ಪಾಲು ಮುಸಲ್ಮಾನರಾಗಿದ್ದರು. ಈ ಅಪರಾಧ ಕೃತ್ಯಗಳ ವಿಚಾರಣೆಯ ಜೊತೆ, ಬಾಬ್ರಿ ಮಸೀದಿಯ ಆಸ್ತಿ ವಿವಾದದ ಕಟ್ಲೆಯೂ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.

2019ರ ನವೆಂಬರ್ 19 ರಂದು ಸರ್ವೋಚ್ಚ ನ್ಯಾಯಾಲಯವು, ಮಸೀದಿ ಧ್ವಂಸ ಕೃತ್ಯವು ಅಪರಾಧವಾಗಿದ್ದರೂ, ವಿವಾದಿತ ಜಾಗವನ್ನು ‘ಶ್ರೀರಾಮ ಮಂದಿರ’ ನಿರ್ಮಾಣಕ್ಕೆ ಬಿಟ್ಟುಕೊಡುವಂತೆ ತೀರ್ಪು ನೀಡಿತು. ಮಂದಿರ ನಿರ್ಮಾಣ ಹಾಗು ನಂತರದ ಮಂದಿರ ವ್ಯವಸ್ಥಾಪನೆಗೆ ಒಂದು ಖಾಸಗಿ ಟ್ರಸ್ಟ್ ರಚಿಸಿ, ಆಸ್ತಿ ಹಾಗು ಬಾಕಿ ಉಸ್ತುವಾರಿಯನ್ನು ಆ ಟ್ರಸ್ಟಿಗೆ ವಹಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿತ್ತು. ಮಸೀದಿ ಧ್ವಂಸದಲ್ಲಿ ಭಾಗಿದಾರನಾಗಿದ್ದ ಬಿ.ಜೆ.ಪಿ. ಪಕ್ಷವು ಅಧಿಕಾರದಲ್ಲಿರುವ ಕೇಂದ್ರ ಸರಕಾರವು ರಚಿಸಿದ 15 ಸದಸ್ಯರ ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ನಲ್ಲಿ 9 ಸದಸ್ಯರು ಮಸೀದಿ ನಾಶದ ರೂವಾರಿಗಳಾಗಿರುವ ಆರ್.ಎಸ್.ಎಸ್.-ವಿ.ಹಿಂ.ಪ.ಕ್ಕೆ ಸೇರಿದವರಾಗಿದ್ದಾರೆ. ಸದರಿ ಟ್ರಸ್ಟಿನ ವತಿಯಿಂದ ಆಗಸ್ಟ್ 5, 2020ರಂದು ಮಂದಿರ ನಿರ್ಮಾಣದ ‘ಭೂಮಿ ಪೂಜೆ’ ಕಾರ್ಯಕ್ರಮ ನಡೆಯಿತು; ಈ ಖಾಸಗಿ ಟ್ರಸ್ಟಿನ ಕಾರ್ಯಕ್ರಮದ ಉಸ್ತುವಾರಿಯನ್ನು ಬಿ.ಜೆ.ಪಿ. ಆಡಳಿತದ ಉತ್ತರ ಪ್ರದೇಶ ಸರಕಾರವು ವಹಿಸಿಕೊಂಡು, ಮುಖ್ಯಮಂತ್ರಿಗಳ ಭಾಗವಹಿಸುವಿಕೆಯ ಸಹಿತ ನೆರವೇರಿಸಿಕೊಟ್ಟಿತ್ತು ಮಾತ್ರವಲ್ಲದೆ, ದೇಶದ ಪ್ರಧಾನ ಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು; `ಈ ದಿನ ಚರಿತ್ರಾರ್ಹವಾದದ್ದಾಗಿದೆ. ದೇಶವು [ವಸಾಹತುಶಾಹಿಯಿಂದ] ಸ್ವಾತಂತ್ರ್ಯ ಪಡೆದ ದಿನವಾದ ಆಗಸ್ಟ್ 15 ರ ದಿನಾಂಕದಷ್ಟೇ ಪ್ರಾಮುಖ್ಯತೆ ಇರುವ ದಿನಾಂಕವಾಗಿದೆ’ ಎಂದು ಘೋಷಿಸಿದರು.

`1947ರ ಆಗಸ್ಟ್ 15ಕ್ಕಿಂತ ಹಿಂದೆ ನಿರ್ಮಾಣವಾಗಿ ಅಸ್ತಿತ್ವದಲ್ಲಿರುವ ಯಾವುದೇ ಪೂಜಾ ಮತೀಯ ಸ್ವರೂಪವನ್ನು ಬದಲಾಯಿಸಲು ನಿರ್ಬಂಧ ವಿಧಿಸಲಾಗಿದೆ’ ಎಂಬ 1991ರ ಕೇಂದ್ರ ಸರಕಾರದ ಕಾಯ್ದೆ ಇದ್ದರೂ, ಇಷ್ಟೆಲ್ಲವೂ ಸಾಂಗವಾಗಿ ನಡೆದು ಹೋಯಿತು. ಮಸೀದಿ ಧ್ವಂಸದಲ್ಲಿ ಭಾಗಿಯಾದ ಪಕ್ಷವು, ಸಂವಿಧಾನಿಕ ಪ್ರಜಾಪ್ರಭುತ್ವದ ನಿಯಮಾನುಸಾರವೇ ಚುನಾವಣೆಗಳಲ್ಲಿ ಬಹುಮತ ಪಡೆದು, ಕೇಂದ್ರದಲ್ಲಿ ಅಧಿಕಾರ ಪಡೆದಿದೆ; ಸಾಂವಿಧಾನಿಕ ಪ್ರಜಾಪ್ರಭುತ್ವದ ಮುಖ್ಯ ಆಧಾರಸ್ಥಂಭವಾದ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ; ಈ ಎರಡೂ ಸಂವಿಧಾನದ ಮೂಲ ಆಶಯವಾದ ‘ಜಾತ್ಯತೀತತೆ’ಯನ್ನು ಹಂಗಿಸುವಂತಿವೆ. ಇದರ ಅರ್ಥ, ಪ್ರಜಾಪ್ರಭುತ್ವ ಮಾರ್ಗದಲ್ಲೇ, ಭಾರತದ ಪ್ರಭುತ್ವವು ‘ಜಾತ್ಯತೀತ ಪ್ರಭುತ್ವ’ ಮಾದರಿಯಿಂದ ‘ಬಹುಸಂಖ್ಯಾತವಾದಿ ಪ್ರಭುತ್ವ’ವಾಗಿ ರೂಪಾಂತರಗೊಂಡಿದೆ ಎನ್ನುವುದು ಸ್ಪಷ್ಟವಾಗಿದೆ.

ಪ್ರಜಾತಂತ್ರ ಮಾದರಿಯ ಪ್ರಭುತ್ವದ ಕಲ್ಪಿತ ಆದರ್ಶಗಳು [ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ] ಏನೇ ಇದ್ದರೂ, ಅವು ತಮಗೆ ತಾನೇ ಸ್ವಯಂ ಸಾಕಾರವಾಗುವುದಿಲ್ಲ; ಅವುಗಳನ್ನು ಸಾಧ್ಯವಾಗಿಸುವ ವಾಸ್ತವಿಕ ರಾಜಕೀಯ ಆಚರಣೆಗಳು ಗಟ್ಟಿಯಾಗಿ ನೆಲೆಗೊಳ್ಳದೇ ಹೋದರೆ, ಕಲ್ಪಿತ ಆದರ್ಶಗಳಿಗೆ ವ್ಯತಿರಿಕ್ತವಾದ ಪ್ರಭುತ್ವ ರಾಜಕೀಯವು ಅಧಿಕಾರ ಸ್ಥಾಪಿಸುತ್ತದೆ ಎನ್ನುವುದನ್ನು ಫ್ರೆಂಚ್ ಕ್ರಾಂತಿಯ ನಂತರದ 241 ವರ್ಷಗಳ ಜಗತ್ತಿನಾದ್ಯಂತದ ಇತಿಹಾಸವು ನಿರೂಪಿಸುತ್ತಲೇ ಇದೆ. ಹಾಗಂತ, ಭಾರತದ `ಜಾತ್ಯತೀತ ಪ್ರಜಾತಂತ್ರ’ ಮಾದರಿಗೆ ಎದುರಾಗಿರುವ ಅಪಾಯವು, ಸಹಜವಾಗೇ ಬಂದಿದೆ, ಕಾಲಾನುಕ್ರಮದಲ್ಲಿ ಸರಿಯಾಗುತ್ತದೆ ಎಂಬ ನಿಲುವು ಉಡಾಫೆಯದೇ ಸರಿ. ಕಳೆದ ಮೂವತ್ತು ವರ್ಷಗಳಲ್ಲಿ ಘಟಿಸಿರುವ ಸಾಮಾಜಿಕ ಹಾಗು ರಾಜಕೀಯ ಸ್ಥಿತ್ಯಂತರಗಳ ವೇಗವನ್ನು ಗಮನಿಸುತ್ತಿರುವ ಸಿದ್ಧಾಂತಿಗಳ ಆತಂಕವು ಒಂದು ಬಗೆಯದು; ಸ್ಥಿತ್ಯಂತರಗಳ ತಿರುಗಣಿ ಮಡುವಿನಲ್ಲೇ ಇದ್ದು, ಕೇಡುಗಳನ್ನು ತಡೆಯಲು ಕಾರ್ಯಾಚರಿಸುತ್ತಿರುವ ಕ್ರಿಯಾಶೀಲರ ಆತಂಕ-ನಿರಾಶೆಗಳು ಹೆಚ್ಚು ಕರಾಳವಾಗಿ ಇರುವಂತಹವು. ಭಾರತದ ಪ್ರಜಾತಂತ್ರದ ಜಾತ್ಯತೀತ ಸ್ವರೂಪವನ್ನು ಕಾಪಾಡಲು ಸಾಮಾಜಿಕ ಕಣದಲ್ಲಿ ದುಡಿಯುತ್ತಿರುವ ಕಾರ್ಯಶೀಲರಿಗೆ ಆಗಸ್ಟ್ 5, 2020ರಂದು ದೇಶದಲ್ಲಿ `ಜಾತ್ಯತೀತತೆಯು ಸಾವನ್ನಪ್ಪಿದೆ’ ಎಂದು ಅನಿಸಿದ್ದರೆ, ಅದು ನೈಜವಾದದ್ದೇ ಸರಿ. ಹಾಗೇ ತೀವ್ರ ಆತಂಕಕ್ಕೆ ಒಳಗಾಗಿರುವವರು, ನಮ್ಮ ಕಾರ್ಯಾಚರಣೆಗಳಲ್ಲಿ ಏನು ತಪ್ಪುಗಳಾಗಿವೆ? `ಬಹುಸಂಖ್ಯಾತವಾದವು’ ಪ್ರಭುತ್ವದ ಯಜಮಾನಿಕೆಯ ಅಧಿಕಾರ ಪಡೆಯಲು ಕಾರಣವೇನು? ಎಂಬ ಅಂತರಂಗ ವಿಮರ್ಶೆ ಮಾಡಿಕೊಳ್ಳುವುದು, ನಿರಾಸೆಯ ಸ್ಥಿತಿಯಲ್ಲಿ ಅವಡುಗಚ್ಚಿ ಎದೆಎತ್ತಿ ನಿಲ್ಲಲು ತೀರ ಅವಶ್ಯಕ. ಈ ನಮೂನೆಯ ಅಂತರಂಗ ವಿಮರ್ಶೆಯನ್ನು `ಸ್ವರಾಜ್ ಇಂಡಿಯಾ ಪಕ್ಷ’ದ ಮುಂದಾಳು ಯೋಗೇಂದ್ರ ಯಾದವ್ ಅವರು ಶುರುಮಾಡಿದ್ದಾರೆ [ದಿ ಪ್ರಿಂಟ್, ಆಗಸ್ಟ್ 5, 2020]. (ಸೆಕ್ಯುಲಾರ್ ವಾದಿಗಳು ಧರ್ಮದ ಭಾಷೆಯನ್ನು ಬಿಟ್ಟುಕೊಟ್ಟರು. ಅಯೋಧ್ಯೆಯಲ್ಲಿ ನಡೆದ ಭೂಮಿ ಪೂಜೆ ಅದರ ಪರಿಣಾಮ ) ಎಂಬ ಪ್ರಸ್ತುತ ಬರಹದಲ್ಲಿ ಅವರು, ಜಾತ್ಯತೀತತೆಯ ದಯನೀಯ ಸ್ಥಿತಿಗೆ ನೀಡಿರುವ ಕಾರಣಗಳು, 1970ರಿಂದಲೂ ಸೈದ್ಧಾಂತಿಕ ಚರ್ಚೆಯಲ್ಲಿ ಇವೆ; ಅವುಗಳ ವಾಸ್ತವಿಕತೆಯನ್ನು ಒರೆಹಚ್ಚದೆ ನಿರಾಕರಿಸುವ ಸುಖವಂತೂ ಈಗ ಖಂಡಿತ ನಮಗಿಲ್ಲ.

ಯೋಗೇಂದ್ರ ಯಾದವ್ ಬಹಳ ನಿಚ್ಚಳವಾಗಿ, ಜಾತ್ಯತೀತತೆಯ ವಿಚಾರವು ಸೋತ ಬಗೆಯನ್ನು ಪಟ್ಟಿ ಮಾಡುತ್ತಾರೆ:

ಜಾತ್ಯತೀತೆಯ ವಾರಸುದಾರರು (1) ಜನರ ಬುದ್ಧಿಭಾವಗಳಲ್ಲಿ ನೆಲೆಯೂರುವಂತಹ ವಿಚಾರಗಳನ್ನು ಬಿತ್ತಲು ಸೋತರು (2) ತಮ್ಮನ್ನು ಟೀಕಿಸುವವರನ್ನು ಕೀಳಾಗಿ ಕಂಡು ಜನಸಮೂಹಕ್ಕೆ ಎಟುಕದ ಇಂಗ್ಲಿಷು ಭಾಷೆಯಲ್ಲಿ ಮಾತನಾಡಿದರು (3) ಜನರ ಆಡುನುಡಿ, ಅದರಲ್ಲಿರುವ ಪರಂಪರೆಯ ಜೊತೆಗಿನ ನಂಟು ಇವುಗಳನ್ನು ಗ್ರಹಿಸಲು ಸೋತ ಕಾರಣವಾಗಿ ಜನರ ಧಾರ್ಮಿಕ ಭಾವನೆಗಳ ಭಾಷೆಯನ್ನು ಅರಿತು, ಕಲೆತು ಒಡನಾಡುವ ಕೆಲಸವೇ ಆಗಲಿಲ್ಲ (4) ಹಿಂದು ಮತನಂಬಿಕೆಗಳನ್ನು ಪರಾಮರ್ಶಿಸಿಕೊಂಡು, ಪ್ರಸ್ತುತ ಸನ್ನಿವೇಶಕ್ಕೆ ತಕ್ಕುನಾದ ಹೊಸ ರೂಪಗಳನ್ನು ಕಟ್ಟುವ ಬದಲು, ಮತನಂಬಿಕೆಯನ್ನು ಲೇವಡಿ ಮಾಡುವಲ್ಲಿ ತೊಡಗಿದ್ದು ಸೋಲಿಗೆ ನಿರ್ದಿಷ್ಟ ಕಾರಣವಾಗಿದೆ (5) ತಕ್ಷಣದ ಸನ್ನಿವೇಶಕ್ಕೆ ಹೊಂದುವಂತೆ, ಅಲ್ಪಸಂಖ್ಯಾತರ ಪರವಹಿಸಿ ಮಾತನಾಡುವ ಪರಿಪಾಠ ಬೆಳೆಸಿಕೊಂಡರೇ ಹೊರತು, ಅಲ್ಪಸಂಖ್ಯಾತ ಸಮುದಾಯದಲ್ಲಿರುವ ಕೋಮುವಾದಕ್ಕೆ ಕುರುಡಾದರು (6) ಅಲ್ಪಸಂಖ್ಯಾತರ ಸ್ಥಿತಿಯನ್ನು ಅರಿಯುವ ಬದ್ಧತೆ ಇಲ್ಲದ ಅನುಕೂಲಸಿಂಧು ರಾಜಕಾರಣದ ಮೂಲಕ ಅಲ್ಪಸಂಖ್ಯಾತರನ್ನು ವೋಟು ಹಾಕುವ ಅಡಿಯಾಳುಗಳಾಗಿಸಿಕೊಂಡರು.

ಈ ತಪ್ಪುಗಳನ್ನು ಮೀರಲು ಅವರು ಸೂಚಿಸುವ ಪರಿಹಾರ : (1) ಕಳೆದುಕೊಂಡಿರುವ ಮತ ಸಹಿಷ್ಣುತೆಯ ಭಾಷೆಯನ್ನು ಮರಳಿ ಪಡೆಯುವುದು (2) ಹಿಂದು ಮತ ನಂಬಿಕೆಗಳನ್ನು ಮರುಕಟ್ಟಿಕೊಳ್ಳುವುದು.

ಯೋಗೇಂದ್ರಯಾದವ್ ಅವರ ಈ ಸೋಲಿನ ಪ್ರಮೇಯಕ್ಕೆ ಪ್ರತಾಪ್ ಭಾನು ಮೆಹ್ತಾ [ಇಂಡಿಯನ್ ಎಕ್ಸ್ ಪ್ರೆಸ್, ಆಗಸ್ಟ್ 11, 2020] ಹಾಗೂ ಐಜಾಜ್ ಅಶ್ರಫ್ [ನ್ಯೂಸ್‍ಕ್ಲಿಕ್, ಆಗಸ್ಟ್ 20, 2020] ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. [ಇವು ಮೂರು ಇಂಗ್ಲಿಷು ಭಾಷೆಯ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದವು ಎನ್ನುವುದು ಯೋಗೇಂದ್ರ ಅವರ ಎರಡನೇ ಪ್ರಮೇಯದ ವಿಪರ್ಯಾಸವೇ ಸರಿ!] ಇವು ಮೂರನ್ನು ಒಟ್ಟಿಗೆ ಇಟ್ಟುಕೊಂಡು ಅವುಗಳನ್ನು ವಿಸ್ತರಿಸುವುದು ಬೇರೆ ಯಾರಿಗಲ್ಲದಿದ್ದರೂ ಜಾತ್ಯತೀತರಿಗೆ ಅಗತ್ಯವಾಗಿದೆ.

ಭಾರತದಲ್ಲಿ `ಜಾತ್ಯತೀತತೆ’ಯ ಅರ್ಥವೇನು?

`ಸೆಕ್ಯುಲಾರಿಸಂ’ ಎಂಬ ಪರಿಕಲ್ಪನೆಯು ಜಗತ್ತಿನಾದ್ಯಂತ ಆಧುನಿಕ ರಾಷ್ಟ್ರಪ್ರಭುತ್ವಗಳ ರಚನೆಯ ಜೊತೆ ಹುಟ್ಟಿಕೊಂಡ ಪರಿಕಲ್ಪನೆ; ಮುಖ್ಯವಾಗಿ, ಪ್ರಭುತ್ವದ ವ್ಯವಸ್ಥೆಯು ಒಂದು ಮತದ ನ್ಯಾಯ-ನೀತಿಗಳನ್ನು ಆಧರಿಸದೇ, ಎಲ್ಲ ಪ್ರಜೆಗಳಿಗೂ ಸ್ವಾತಂತ್ರ್ಯ-ಸಮಾನತೆಯ ಆಧಾರದಲ್ಲಿ ನ್ಯಾಯ-ನಿಯಮಗಳನ್ನು ರಚಿಸಿಕೊಂಡು ಆಡಳಿತ ನಡೆಸಬೇಕು ಎಂಬ ಪರಿಕಲ್ಪನೆ. ಈ ಕಲ್ಪನೆಗೆ ಮೂಲವಾದದ್ದು, ಮತ ನಂಬಿಕೆಯನ್ನು ನಿಯಂತ್ರಿಸುವ ಸಂಸ್ಥೆಗಳು, ಲೌಕಿಕ ಬದುಕಿನ ವಿಷಯಗಳಲ್ಲಿ ಸರ್ವಾಧಿಕಾರದ ನಿಯಂತ್ರಣವನ್ನು ಹೊಂದಿದ್ದು, ಆಸ್ತಿ-ಅಧಿಕಾರಗಳ ಅಸಮಾನತೆಯನ್ನು ಪೋಷಿಸುವ ಸಂಸ್ಥೆಗಳಾಗಿದ್ದವು ಎಂಬ ವಾಸ್ತವಿಕತೆ. ಈ ಬಗೆಯಲ್ಲಿ ತಮ್ಮ ಸರ್ವಾಧಿಕಾರ ಕಳೆದುಕೊಂಡ ಸಂಸ್ಥೆಗಳು, ಪ್ರಭುತ್ವದ ಮೇಲೆ ತಮ್ಮ ನಿಯಂತ್ರಣವನ್ನು ಇಟ್ಟುಕೊಳ್ಳುವ ಹಲವಾರು ಅಧಿಕಾರ ಕೇಂದ್ರಗಳನ್ನು ಬೆಳೆಸಿಕೊಂಡಿರುವುದು ಬೇರೆ ವಿಷಯ. ಭಾರತದ ವಸಾಹತುಶಾಹಿ ವಿರೋಧಿ ಹೋರಾಟ ಕಾಲದಲ್ಲಿ, ಆಡಳಿತದಲ್ಲಿ ಸೆಕ್ಯುಲರ್ ಕಲ್ಪನೆಗೆ ಜನಮನ್ನಣೆ ಸಿಕ್ಕಿದ್ದಕ್ಕೆ ಕಾರಣ ಹಿಂದು ಮತ ವ್ಯವಸ್ಥೆಯಲ್ಲಿ ಅವಿಭಾಜ್ಯವಾಗಿರುವ ಜಾತಿ ಶ್ರೇಣೀಕರಣ ಆಧಾರಿತ ಲೌಕಿಕ ಅಸಮಾನತೆ. ಉಳುವ ಭೂಮಿಯ ಹಕ್ಕು, ವಿದ್ಯೆ ಪಡೆಯುವ ಹಕ್ಕು, ಘನತೆಯಿಂದ ಸಮಾಜದಲ್ಲಿ ಬದುಕುವ ಹಕ್ಕು – ಇಂತಹ ಲೌಕಿಕ ವಿಷಯಗಳನ್ನು ನಿಯಂತ್ರಿಸುವ ಹಿಂದು ಮತ ನಂಬಿಕೆಯ ಜಾತಿಸಂಹಿತೆಯಿಂದ ಬಿಡುಗಡೆ ಪಡೆಯುವ ಅಧಿಕಾರಹೀನರ ಹೋರಾಟಗಳಿಗೆ ಹಿಂದು ಮತ ವ್ಯವಸ್ಥೆಯಲ್ಲಿ ಯಾವ ಅವಕಾಶವೂ ಇಲ್ಲ. ಈ ಕಾರಣವಾಗಿಯೇ, ಲೌಕಿಕ ಸಮಾನತೆಯನ್ನು ಬೇಡುವ ಹೋರಾಟಗಳಿಗೆ ಹಿಂದು ಮತ ವ್ಯವಸ್ಥೆಯನ್ನು ಟೀಕಿಸುವುದು, ಎದುರಿಸುವುದು ಅನಿವಾರ್ಯವಾಗಿತ್ತು; ಸ್ವತಂತ್ರ ಭಾರತದ ಪ್ರಭುತ್ವ ವ್ಯವಸ್ಥೆಯು ಹಿಂದು ಮತಸಂಹಿತೆಯ ಹಂಗಿಲ್ಲದ ನ್ಯಾಯವ್ಯವಸ್ಥೆಯಾಗಿರಬೇಕು ಎಂಬುದು ಸಹಜವೇ ಆಗಿತ್ತು. ಭಾರತದಲ್ಲಿ `ಸೆಕ್ಯುಲರಿಸಂ’ ಅರ್ಥಾತ್ ಜಾತಿ ವ್ಯವಸ್ಥೆಯ ಆಧಾರದ ಅಸಮಾನ ಲೌಕಿಕ ವ್ಯವಸ್ಥೆಯಿಂದ ಬಿಡುಗಡೆಯ ವಿಚಾರವೆನ್ನುವ ಕಾರಣಕ್ಕೆ `ಜಾತ್ಯತೀತತೆ’ ಎಂಬುದನ್ನು ಪ್ರಧಾನವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ.

ಭಾರತದಲ್ಲಿ ಲೌಕಿಕ ಸಮಾನತೆಗೆ ಹೋರಾಟ ಮಾಡುವವರು ಮತ ನಂಬಿಕೆಯ ಆಧ್ಯಾತ್ಮಿಕತೆ ಅಥವ ಮತಾಚರಣೆಗಳ ಸ್ವಾತಂತ್ರ್ಯಗಳನ್ನು ಸಂಪೂರ್ಣ ತ್ಯಜಿಸಬೇಕೆಂದು ವಾದಿಸುವುದಿಲ್ಲ; ಭಾರತದ ಪ್ರಭುತ್ವವು ಹಿಂದು ಮತಾಚರಣೆಯ ಸ್ವಾತಂತ್ರ್ಯವನ್ನು ಕೈದು ಮಾಡಬೇಕೆಂದು ಒತ್ತಾಯಿಸುವ ಚಳವಳಿ ಮಾಡಿದ್ದಿಲ್ಲ; ಆದರೆ, ಮತಸಂಹಿತೆಯ ಆಧಾರದಲ್ಲಿ ಲೌಕಿಕ ಅಸಮಾನತೆಯನ್ನು ಜಾರಿಯಲ್ಲಿಡುವಾಗ ಅಂತಹ ನಂಬಿಕೆಗಳನ್ನು ಟೀಕಿಸುವುದು, ಪ್ರಭುತ್ವವು ಅಂತಹ ನಂಬಿಕೆಗಳ ಆಧಾರದಲ್ಲಿ ಆಡಳಿತ ನಿಯಮಗಳನ್ನು ರೂಪಿಸಕೂಡದು ಎಂದು ಒತ್ತಾಯಿಸುವುದನ್ನು ಖಂಡಿತ ಮಾಡಿದ್ದಾರೆ. ಇದನ್ನು `ಜನರ ಧಾರ್ಮಿಕ ನಂಬಿಕೆಗಳ ಭಾಷೆಯನ್ನು ಕಲಿಯದೇ, ಅರಿಯದೇ, ಒಡನಾಟ ಹರಿದುಕೊಂಡ’ದ್ದು ಎನ್ನುವುದು ಸಮಸ್ಯೆ. ಹಿಂದು ಪುರೋಹಿತಶಾಹಿಯು ತನ್ನ ಮತದ ಜನರ ಮೇಲೆ ನಡೆಸುವ ಯಜಮಾನಿಕೆಯನ್ನು ವಿವರಿಸುವುದು, ಅದನ್ನು ಪ್ರಶ್ನಿಸಬೇಕು ಎಂದು ಹೇಳುವುದು, `ಜನರ ಧಾರ್ಮಿಕ ನಂಬಿಕೆಗಳನ್ನು ಕೀಳಾಗಿ ಕಾಣುವುದು’ ಎಂದಾಗುತ್ತದೆಯಾ? ಭಾರತದಲ್ಲಿನ `ಜಾತ್ಯತೀತತೆ’ಯನ್ನು ಕುರಿತ ಟೀಕೆಯು, ಈ ಸಮಸ್ಯೆಗಳನ್ನು ಎದುರು ಹಾಕಿಕೊಳ್ಳದೇ ಹೋದರೆ, ಅದು `ಹಿಂದು ಧರ್ಮವನ್ನು ಮರು ಕಟ್ಟಿಕೊಳ್ಳುವುದು’ ಹೇಗೆ ಸಾಧ್ಯವಾಗುತ್ತದೆ?

ಮರುಕಟ್ಟಿಕೊಳ್ಳಲು ಇರುವ ಬೇರು ಏನು?

`ಭಾರತ’ದಲ್ಲಿ, ಅಂದರೆ 1947ರ ಆಗಸ್ಟ್ 15ಕ್ಕೆ ಮುಂಚಿನ ನೆಲದಲ್ಲಿ, ಬೌದ್ಧ-ಜೈನ-ವೈದಿಕ ತ್ರಿಮತ-ಇಸ್ಲಾಂ ಮತಗಳ ನಂಬಿಕೆಗಳನ್ನು ಆಧಾರವಾಗಿಟ್ಟುಕೊಂಡ ರಾಜ್ಯ ಪ್ರಭುತ್ವಗಳು ಆಗಿ ಹೋಗಿವೆ. ಒಂದು ಮತಾಧಾರಿತ ಸಾಮ್ರಾಜ್ಯವು ಗೆದ್ದಾಗ, ಸೋತ ಮತಾಧಾರಿತ ಜನರನ್ನು ನಡೆಸಿಕೊಂಡ ಹಲವು ಬಗೆಗಳು ಇವೆ. ಇವುಗಳ ನಡುವೆ ಪ್ರಭುತ್ವದ ಮತ ಅಧಿಕಾರದ ಹಂಗನ್ನು ಖಂಡಿಸಿ ಕಡೆಗಣಿತವಾದ ತಾತ್ವಿಕರು ಆಗಿ ಹೋಗಿದ್ದಾರೆ. ಅಂತಹವರ ನೆನಪನ್ನು ಇಟ್ಟುಕೊಂಡು ಅಳಿದು ಉಳಿದ ಹಲವು ತತ್ವಪಂಥಗಳ ಮತ ಸಹಿಷ್ಣು ಸುಧಾರಣಾ ಕೆಲಸಗಳೂ ಆಗಿ ಹೋಗಿವೆ. ಇಷ್ಟಾದರೂ ಬ್ರಿಟಿಷರ ವಸಾಹತುಶಾಹಿಯು ಸ್ಥಾಪನೆಯಾದಾಗ, `ಭಾರತ’ದ ಸಮಾಜದಲ್ಲಿ ಜಾತಿ-ಮತ-ಲಿಂಗಗಳ ಅಸಮಾನ ಮತವ್ಯವಸ್ಥೆಯು ಉಳಿದೇಹೋಗಿದೆ. ಇದನ್ನು ಸ್ಫುಟಗೊಳಿಸುವ ಜ್ಞಾನಭಂಡಾರವೂ ಇತ್ತು. ಆದರೂ, ಅಧಿಕಾರವಂಚಿತರು ತಮ್ಮದೇ ಸಮಾನತೆಯ ಸಾಮಾಜಿಕ ಮರುಕಟ್ಟುವಿಕೆಗೆ, ಸೆಕ್ಯುಲರ್ ಅಥವಾ ಜಾತ್ಯತೀತತೆಯ ತತ್ವಕ್ಕೆ ಮೊರೆಹೋದರು. ವಸಾಹತುಶಾಹಿ ವಿರೋಧಿ ಹೋರಾಟದ ಯುಗದ ಮುಕ್ಕಾಲುವಾಸಿ ಕಾಲದಲ್ಲಿ, ಲೋಕ ಸಮಾನತೆಯ ವೈಚಾರಿಕ ತತ್ವಕ್ಕೆ ಹಿಂದು ಮತದ ವೈದಿಕಶಾಹಿಯ ಟೀಕೆಯು ಮುಖ್ಯವಾಗಿತ್ತು; ವೈದಿಕಶಾಹಿ ಸಂಹಿತೆಗಳಿಂದ ಮುಕ್ತವಾದ ಪ್ರಭುತ್ವದ ಆಗ್ರಹವು ಗಟ್ಟಿಯಾಗುತ್ತಿದ್ದ ಸಮಯದಲ್ಲೇ, ವೈದಿಕಶಾಹಿ ಸಂಹಿತೆಯಾಧಾರದ ಹಿಂದುರಾಷ್ಟ್ರದ ಆಗ್ರಹವೂ ಕಟ್ಟಿಕೊಂಡಿತು. ಅದು ಕಟ್ಟಿಕೊಂಡ ನಂತರವಷ್ಟೇ `ಜಾತ್ಯತೀತತೆ’ಯ ಸೆಕ್ಯುಲರ್ ತತ್ವಕ್ಕೆ `ಧರ್ಮನಿರಪೇಕ್ಷತೆ’ಯ, `ಅಲ್ಪ ಸಂಖ್ಯಾತ ಮತದವರ’ ಸಮಾನ ಹಕ್ಕಿನ ಜೋಡಣೆಯಾಯಿತು. ಈ ಹೊತ್ತಲ್ಲೂ `ಸೆಕ್ಯುಲರ್’ ಅಂದರೆ `ಲೌಕಿಕ ಅಸಮಾನತೆಯ ನಿವಾರಣಾ ತತ್ವ’ವಾಗಿ ಎಂ.ಕೆ.ಗಾಂಧಿ, ಬಿ.ಆರ್.ಅಂಬೇಡ್ಕರ್ ಹಾಗು ಸಮಾಜವಾದಿಗಳ ವಿಭಿನ್ನ ಮಾದರಿಗಳಲ್ಲಿ ಇತ್ತು – ಎಲ್ಲರೂ ಜಡ ಹಿಂದು ಮತದ ಅಸಮಾನ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದವರೇ ಆಗಿದ್ದರು. `ಸನಾತನಿ ಹಿಂದು’ ಎಂದು ಕರೆದುಕೊಳ್ಳುತ್ತಿದ್ದ ಎಂ.ಕೆ.ಗಾಂಧಿಯನ್ನು ಗುಂಡಿಟ್ಟು ಕೊಲ್ಲಲಾಯ್ತು. ಸಕಾರಣವಾಗಿಯೇ ಹಿಂದು ಮತದ ಕಟು ಟೀಕಾಕಾರಾಗಿದ್ದ ಅಂಬೇಡ್ಕರ್, ಹಿಂದು ಮತದಲ್ಲಿದ್ದ ಒಂದಷ್ಟು ಸುಧಾರಣಾ ನೆಲೆಯ ಸಂಹಿತೆಗಳನ್ನು ಒಟ್ಟಾಗಿಸಿ `ಹಿಂದು ಕೋಡ್ ಬಿಲ್’ ತಂದಾಗ ಗಲಭೆ ಎಬ್ಬಿಸಿ ಸೋಲಿಸಲಾಯಿತು; ಅವರು ನವ ಬೌದ್ಧ ಮತಕ್ಕೆ ಮತಾಂತರವಾದರು. ಭೂಸುಧಾರಣೆ ಚಳುವಳಿಯು, ಹಿಂದುಗಳಲ್ಲೇ ಕೆಳ ಜಾತಿಗಳಿಗೆ ಸೇರಿದ ಗೇಣಿದಾರರ ಭೂಮಿ ಹಕ್ಕಿನ ಚಳವಳಿಯಾಗಿತ್ತು; ಅಪಾರವಾದ ಉಳುಮೆಯೋಗ್ಯ ಭೂಮಿಯು ಹಿಂದು ಮತದ ಸಾಂಸ್ಥಿಕ ಅಧಿಕಾರಸ್ಥರ ಕೈಯಲ್ಲಿ ಇದ್ದಾಗಲೂ, ಚಳವಳಿಯು ಲೌಕಿಕ ಸಮಾನತೆಯ ಭಾಷೆ ಬಳಸಿತೇ ವಿನಹ ಮತ ಟೀಕೆ ಮಾಡಲಿಲ್ಲ; ಅಧಿಕಾರಸ್ಥರು ಆ ಸುಧಾರಣೆಗೆ ಹಿಂಸಾತ್ಮಕ ತಡೆಗಳನ್ನು ತಂದರು. ಸಾಮಾಜಿಕ ಪ್ರತಿನಿಧೀಕರಣದ ಚಳವಳಿಗಳು, ಹಿಂದು ಮತದ ಸಮಾಜದ ಜಾತಿಭೇದದ ವಿರುದ್ಧ ಚಳವಳಿಗಳಾಗಿದ್ದರೂ, ಅಲ್ಲಿ ಬಳಸಿದ ಭಾಷೆಯು ಮತನಿಂದನೆಯ ಭಾಷೆಯಾಗಿರದೆ, ಲೌಕಿಕ ಸಮಾನತೆಯ ಭಾಷೆಯಾಗಿತ್ತು. ತೆಹ್ರಿ, ನರ್ಮದಾ ಅಣೆಕಟ್ಟುಗಳಿಂದ ನಿರಾಶ್ರಿತರಾದ ಜನರು ಹಿಂದುಗಳೇ ಆಗಿದ್ದರೂ, ಅವರ ಪರವಾಗಿ ದನಿ ಎತ್ತಿದ ಚಳವಳಿಗಳು `ಜಾತ್ಯತೀತ’ವಾಗಿ ಲೌಕಿಕ ಕಷ್ಟದ ಪ್ರಶ್ನೆಗಳನ್ನು ಎತ್ತಿದವು. ಈ ಬಗೆಯ ಕೋಟ್ಯಂತರ ಕೋಟಲೆಗೊಳಗಾದ ಜನರ ಬದುಕಿನ ಜೊತೆ ಮಾತನಾಡಿದವರು, ಅವರ ಸಂಕಷ್ಟ ಅರಿತು ಹೋರಾಟ ಕಟ್ಟಿದವರಿಗೆ, ಆ ಜನರ ಮತ ನಂಬಿಕೆಗಳ ಅರಿವು ಹಾಗು ಅವರ ಲೌಕಿಕ ಕಷ್ಟದ ಭಾಷೆಗಳು ಅರಿವಿರಲಿಲ್ಲ ಎನ್ನಬಹುದೇ? ಈ ಜಾತ್ಯತೀತ ಲೋಕ ಸಮಾನತೆಯ ಕೆಲಸಗಳು ನಡೆಯುತ್ತಿರುವ ಹೊತ್ತಿನಲ್ಲೇ, ಹಿಂದು ರಾಷ್ಟ್ರವಾದಿಗಳು, ಇದೇ ಸಂತ್ರಸ್ತ ಜನರ ಅಘೋಷಿತ ಪ್ರತಿನಿಧಿಗಳಾಗಿ, ಅಲ್ಪಸಂಖ್ಯಾತರ ವಿರುದ್ಧ ಹಿಂಸಾತ್ಮಕವಾಗಿ ಎತ್ತಿಕಟ್ಟುವ ಪ್ರತಿಕ್ರಾಂತಿಯಲ್ಲಿ ನಿರತರಾಗಿದ್ದರು. ಇವೆರಡರ ನಡುವಿರುವ ನಂಟನ್ನು ಅರಿತು, ಜಾತ್ಯತೀತವಾದವು ಪ್ರತಿಕ್ರಾಂತಿಯ ಸ್ವರೂಪವನ್ನು ತಾನೇ ಮುಂದೆ ನಿಂತು ನಡೆಸುತ್ತಿದ್ದ ಲೌಕಿಕ ನ್ಯಾಯದ ಚಳುವಳಿಗಳಲ್ಲಿ ಭಾಗಿಯಾಗಿದ್ದ ಜನಸಮೂಹಕ್ಕೆ ತಿಳಿಸಿ ಹೇಳುವಲ್ಲಿ ಯಾಕೆ ಸೋತಿತು? ಹಾಗೆ ತಿಳಿಸಿ ಹೇಳಲು ಬೇಕಾದ ಭಾಷೆಯ ವಾಗ್ಮಯದ ಕೊರತೆ ಯೋಗೇಂದ್ರ ಅವರು ಹೇಳಿದಷ್ಟು ಸಲೀಸಾದುದಾ?

ಮರುಕಟ್ಟುಕೊಳ್ಳುವಿಕೆಯ ಮುಂದಿರುವ ಸವಾಲು

ಆದರೆ, ಆಗಸ್ಟ್ 5, 2020ರಂದು ನಡೆದದ್ದು ನಿಜವಾದರೆ, ಯೋಗೇಂದ್ರ ಯಾದವ್ ಅವರ ಮೊದಲ ಪ್ರಮೇಯ- “ಜಾತ್ಯತೀತತೆಯ ವಾರಸುದಾರರು ಜನರ ಬುದ್ಧಿಭಾವಗಳಲ್ಲಿ ನೆಲೆಯೂರುವಂತಹ ವಿಚಾರಗಳನ್ನು ಬಿತ್ತಲು ಸೋತರು” ಎನ್ನುವುದು ಖಂಡಿತ ನಿಜ. ಎಲ್ಲಿ ಸೋತೆವು ಎಂಬ ನಿಜದ ನೆಲೆಯ ಹುಡುಕಾಟದ ಸಂಕಟವೂ ನಿಜ. ಆ ಸಂಕಟವನ್ನೇ ಅನುಭವಿಸುತ್ತಾ, ಯೋಗೇಂದ್ರ ಎತ್ತಿರುವ ಮೊದಲ ಪ್ರಮೇಯಕ್ಕೆ ಉತ್ತರ ಹುಡುಕಿಕೊಳ್ಳುವುದೂ ಅನಿವಾರ್ಯ. ಯೋಗೇಂದ್ರ `ಹಿಂದು ಧರ್ಮವನ್ನು ಮರುಕಟ್ಟಿಕೊಳ್ಳುವುದು’ ಎಂದಾಗ, ನಾವಾದರೂ `ಯಾಕೆ ಜಾತ್ಯತೀತತೆಯನ್ನು ಮರುಕಟ್ಟಿಕೊಳ್ಳಬಾರದು?’ ಎಂದು ಯೋಚಿಸಿ ಅಂತ ಕೇಳಬಹುದು.

`ಯಾಕೆ ಜಾತ್ಯತೀತತೆಯನ್ನು ಮರುಕಟ್ಟಿಕೊಳ್ಳಬಾರದು?’ ಎಂಬುದನ್ನು ಪ್ರಮೇಯ ಅಂತರವೇ ಇಟ್ಟುಕೊಂಡು, ಒಂದು ಬದುಕಿನ ಮೂಲಕ ಅದರ ಸಂಕಷ್ಟಗಳನ್ನು ಅರಿಯಬಹುದೋ ನೋಡೋಣ:

ನರೇಂದ್ರ ದಾಭೋಲ್ಕರ್ ಒಬ್ಬ ಸಮಾಜವಾದಿ – ಜನರ ವೈಯಕ್ತಿಕ ನಂಬುಗೆಗಳು ಏನಾದರೂ ಇರಲಿ, ಅವರ ನಂಬುಗೆಗಳನ್ನೇ ಬಂಡವಾಳ ಮಾಡಿಕೊಂಡು ಅವರಿಂದ ಹಣ ಕಿತ್ತುವ ವ್ಯವಹಾರ ಮಾಡಿಕೊಳ್ಳಕೂಡದು – ಎಂದು ನಂಬಿದ್ದ ಸಮಾಜವಾದಿ. ಅವರು, ಹಣಕಾಸಿನ ವಿಷಯದಲ್ಲಿ ಬಡವರಾದವರು, ತಮ್ಮ ಆರೋಗ್ಯ ಹದಗೆಟ್ಟಾಗ ವೈಜ್ಞಾನಿಕ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವಷ್ಟು ಸ್ಥಿತಿವಂತರಲ್ಲದವರನ್ನು, ಮತನಂಬಿಕೆಗಳ ಆಧಾರದಲ್ಲಿ ಚಿಕಿತ್ಸೆ ನೀಡುವ ಭರವಸೆ ಇತ್ತು ಅವರಲ್ಲಿರುವ ಪುಡಿಗಾಸು ಕಿತ್ತುತ್ತಾರೆ ಎಂದು ಬಹಳವಾಗಿ ಕಂಡರು. ಅದರ ಅನುಭವದ ಪ್ರಕಾರ, `ಅಂಧಶ್ರದ್ಧಾ ನಿರ್ಮೂಲನ್ ಸಮಿತಿ’ ಎಂಬ ವೇದಿಕೆ ಸ್ಥಾಪಿಸಿ, ಬಡಜನರ ಕಾಲೋನಿಗಳಿಗೆ ಹೋಗಿ, ಈ ಸಂಬಂಧದ ವಿಷಯಗಳನ್ನು ಅರುಹತೊಡಗಿದರು. ಅವರ ಸಭೆಗಳಲ್ಲಿ ಪೂರ ಇದ್ದವರು ದೇವರನ್ನು ನಂಬಿ ಪೂಜಿಸುವ ಬಡ ಜನರೇ ಆಗಿರುತ್ತಿದ್ದರು. ದಾಭೋಲ್ಕರರ ಆಗ್ರಹ ಜನರಿಗೆ ಅರ್ಥವಾಯ್ತು. ದಾಭೋಲ್ಕರ್ ಮಹಾರಾಷ್ಟ್ರ ಶಾಸನಸಭೆಗೆ, ಜನಾಗ್ರಹ ಸಹಿತ `ಅಂಧಶ್ರದ್ಧಾ ನಿರ್ಮೂಲನ್ ಕಾಯ್ದೆ’ಯನ್ನು ಕೊಟ್ಟು, ಕಾಯ್ದೆಯಾಗಿಸಿದರು. ಅದು ಭಾರತದ ಇತರ ರಾಜ್ಯಗಳಿಗೆ ಮಾದರಿಯಾಗಿತ್ತು – ಕರ್ನಾಟಕದಲ್ಲಿಯೂ ಅಂತಹ ಕಾಯ್ದೆಯ ಕರುಡು ಮಂಡನೆಯಾಗಿತ್ತು. ದಾಭೋಲ್ಕರ್ ಅವರನ್ನು ಹತ್ಯೆ ಮಾಡಲಾಯಿತು. ಇದು `ಹಿಂದು ಧರ್ಮವನ್ನು ಮರುಕಟ್ಟಿಕೊಳ್ಳುವ ದಾರಿಯೋ/ ಜಾತ್ಯತೀತತೆಯನ್ನು ಮರುಕಟ್ಟಿಕೊಳ್ಳುವ ದಾರಿಯೋ?’ ಅದು ಮುಖ್ಯವಲ್ಲ. ಇದು ಮತ ನಂಬಿಕೆ ಹಾಗು ಜಾತ್ಯತೀತತೆಯ ಪ್ರಯೋಗವು ಒಡನಾಡಿದ ಉದಾಹರಣೆ ಹೌದೋ ಅಲ್ಲವೋ? ಎಂದು ಯೋಚಿಸುವುದು ಮತ್ತು ಅದಕ್ಕಿರುವ ಸಂಕಷ್ಟಗಳು ಬರೀ ಧಾರ್ಮಿಕ ಭಾಷೆಯ ಸಮಸ್ಯೆಯೋ? ಎಂದು ಯೋಚಿಸುವುದಕ್ಕೆ ಸಾಧ್ಯವಾದೀತು.

ಭಾರತದ ಪರಿಶಿಷ್ಟ ಜಾತಿಗಳಿಗೆ ಸೇರಿದ ಜನರ ಜಾತಿ ಅಸಮಾನತೆಯ ಚಳವಳಿಗಳನ್ನು ಪಳಗಿಸಲು ಹಿಂದು ರಾಷ್ಟ್ರವಾದಿಗಳು ಅನೇಕಾನೇಕ ವೈದಿಕೀಕರಣಕ್ಕೆ ಒಳಗೊಳಿಸಿಕೊಳ್ಳುವ, `ಬಹುಸಂಖ್ಯಾತ ಸಮುದಾಯ’ದ ಗುರುತು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ, ಈ ಜನಸಮುದಾಯದ ಮೇಲೆ ಜಾತಿಯಾಧಾರಿತ ಹಿಂಸೆಗಳು ಅವಿರತವಾಗಿ ನಡೆಯುತ್ತಿವೆ. ಈ ಹಿಂಸೆಯು ಯಾಕೆ ನಡೆಯುತ್ತಿವೆ ಹಾಗು ತಮ್ಮ ಸಮುದಾಯಕ್ಕೆ ಅಗತ್ಯವಾದ ಘನವಾದ ಗುರುತುಗಳನ್ನು ಹೇಗೆ ಕಟ್ಟಿಕೊಳ್ಳಬೇಕು ಎಂದು ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಅರಹುವ ಸಂಘಟಿತ ಕಾರ್ಯಕ್ರಮದಲ್ಲಿ ನಿರತರಾದವರನ್ನೆಲ್ಲಾ ಹಿಡಿದು, ಪ್ರಭುತ್ವ ಬುಡಮೇಲಿನ ಆರೋಪ ಹೊರಿಸಿ, UAPA ಹಾಗು NSAಯಂತಹ ಕರಾಳ ಕಾಯ್ದೆಗಳಡಿ, ವಿಚಾರಣಾರಹಿತ ಬಂಧನದಲ್ಲಿ ಇಡಲಾಗುತ್ತಿದೆ. ಇವರೆಲ್ಲಾ ಲೌಕಿಕ ಸಮಾನತೆಗೆ ಹೋರಾಡುತ್ತಿರುವ ಅರ್ಥದಲ್ಲಿ ಜಾತ್ಯತೀತರು; ಇವರು ಸ್ವತಃ ಸಂಕಷ್ಟದಲ್ಲಿರುವ ಸಮುದಾಯವಾಗಿ, ತಮ್ಮದೇ ಒಂದು ಸಂಕಷ್ಟ ಸಮುದಾಯದ ಹೊಸ ಗುರುತಿನ ಭಾಷೆ ಕಟ್ಟಿಕೊಳ್ಳುತ್ತಿದ್ದಾರೆ. ಜಾತ್ಯತೀತರಿಗೂ, `ಹೊಸ ಹಿಂದುಮತದ ಮರುಕಟ್ಟುವಿಕೆ’ಗೂ ಇಲ್ಲಿ ಏನಾದರೂ ಪಾಠಗಳಿವೆಯೋ?

  • ಪ್ರೊ.ಕೆ.ಫಣಿರಾಜ್, (ಕೋಮು ಸೌಹಾರ್ದ ಚಳವಳಿಯಲ್ಲಿ ತಳಮಟ್ಟದ ಆಕ್ಟಿವಿಸ್ಟ್ ಥರಾ ಕೆಲಸ ಮಾಡುತ್ತಾ ಅದರ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೆ.ಫಣಿರಾಜ್ ಅವರ ಆಸಕ್ತಿಯ ಮತ್ತು ಕಾಳಜಿಯ ಕ್ಷೇತ್ರಗಳು ಹಲವು. ನಮ್ಮ ಕಾಲದ (ಗ್ರಾಮ್ಶಿ ಹೇಳಿದ) ಆರ್ಗಾನಿಕ್ ಇಂಟಲೆಕ್ಚುವಲ್‌ಗಳಲ್ಲಿ ಅವರೊಬ್ಬರು ಎಂದರೆ, ಗ್ರಾಮ್ಶಿ ಬಗ್ಗೆ ಪುಸ್ತಕ ಬರೆದ ಫಣಿರಾಜ್ ಅವರು ಮುನಿಸು ತೋರಬಹುದು.)

ಇದನ್ನು ಓದಿ: ಹಿಂದುತ್ವದ ಬೆಳವಣಿಗೆ: ಮೇಲ್ಜಾತಿಗಳ ಧ್ರುವೀಕರಣದ ಬಂಡಾಯವೇ? – ಜಾನ್ ಡ್ರೀಜ್ ವಿಶೇಷ ಲೇಖನ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಕೆ.ಫಣಿರಾಜ್
+ posts

LEAVE A REPLY

Please enter your comment!
Please enter your name here