ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಕತ್ತರಘಟ್ಟದಲ್ಲಿ ದಲಿತ ಯುವಕ ಜಯಕುಮಾರ್ ಅವರ ಆಪಾದಿತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಓರ್ವ ಕೆಳ ಹಂತದ ಅಧಿಕಾರಿಯನ್ನು ಅಮಾನತು ಮಾಡಿದೆ.
ಪ್ರಕರಣದ ಎನ್‌ಸಿಆರ್ ದಾಖಲಿಸಿದ ಎಎಸ್‌ಐ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಮೃತ ಜಯಕುಮಾರ್ ಅವರಿಗೆ ಜೀವ ಬೆದರಿಕೆ ಇದೆ ಎಂಬ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿ ಮೇಲಾಧಿಕಾರಿಗಳ ಗಮನಕ್ಕೆ ತರದೆ ನಿರ್ಲಕ್ಷ್ಯ ಮಾಡಿದ ಕಾರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಎಸ್‌ಪಿ ತಿಮ್ಮಯ್ಯ ನಾನುಗೌರಿ.ಕಾಂಗೆ ತಿಳಿಸಿದ್ದಾರೆ.
ಸರ್ಕಲ್ ಇನ್‌ಸ್ಟೆಕ್ಟರ್ ಆನಂದೆಗೌಡ, ಸಬ್ ಇನ್‌ಸ್ಟೆಕ್ಟರ್ ಸುಬ್ಬಯ್ಯ ಮತ್ತು ಡಿವೈಎಸ್‌ಪಿ ಚೆಲುವರಾಜು ಅವರನ್ನು ಅಮಾನತು ಮಾಡುವಂತೆ ಹೋರಾಟಗಾರರು ಆಗ್ರಹಿಸುತ್ತಿದ್ದಾರೆ ಎಂಬ ನಮ್ಮ ಪ್ರಶ್ನೆಗೆ ಉತ್ತರಿಸಿದ ಎಎಸ್‌ಪಿ,”ಪ್ರಕರಣದಲ್ಲಿ ಸದ್ಯಕ್ಕೆ ಅನಿಲ್ ಕುಮಾರ್ ಎಂಬವರ ವಿರುದ್ದ ಮಾತ್ರ ದೂರು ದಾಖಲಾಗಿದೆ. ಅದರ ತನಿಖೆ ಮುಂದುವರಿದಿದೆ. ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಲೋಪ ಕಂಡು ಬಂದರೆ ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.
ಎಎಸ್‌ಐ ಕುಮಾರ್ ಅವರು ಕೆಳ ಹಂತದ ಅಧಿಕಾರಿ ಜೊತೆಗೆ ಎಸ್‌ಟಿ ಸಮುದಾಯದವರು ಎಂಬ ಕಾರಣಕ್ಕೆ ಅಮಾನತುಗೊಳಿಸಿ ಕೈತೊಳೆದುಕೊಳ್ಳಲಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಇಲ್ಲ ಆ ರೀತಿಯಾಗಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಕುಮಾರ್ ಅವರ ನಿರ್ಲಕ್ಷ್ಯ ಕಂಡು ಬಂದಿದೆ. ಹಾಗಾಗಿ, ನಮ್ಮ ವ್ಯಾಪ್ತಿಯಲ್ಲಿ ಕ್ರಮ ಕೈಗೊಂಡಿದ್ದೇವೆ” ಎಂದು ಹೇಳಿದ್ದಾರೆ.
ಈ ಬಗ್ಗೆ ನಾನುಗೌರಿ.ಕಾಂಗೆ ಪ್ರತಿಕ್ರಿಯಿಸಿರುವ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ನಾಯಕ ಗುರುಪ್ರಸಾದ್ ಕೆರೆಗೋಡು ಅವರು, “ಎಎಸ್‌ಐ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ. ಅಗತ್ಯವಿದ್ದರೆ ಪತ್ರಿಕಾ ಪ್ರಕಟನೆ ಮೂಲಕ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.
ಮಂಡ್ಯ ಜಿಲ್ಲೆಯ ಡಿಎಸ್‌ಎಸ್ ಮುಖಂಡ ಬಸ್ತಿ ರಂಗಯ್ಯ ಅವರು ಮಾತನಾಡಿ, “ವಾಡಿಕೆಯಂತೆ ಕೆಳ ಹಂತದ ಅಧಿಕಾರಿಯನ್ನು ಅಮಾನತು ಮಾಡಿ ಪೊಲೀಸರು ಕೈ ತೊಳೆದುಕೊಂಡಿದ್ದಾರೆ. ಮೇಲಾಧಿಕಾರಿಗಳಿಗೆ ಮಾಹಿತಿಯಿಲ್ಲದೆ ಕೆಳ ಹಂತದವರು ಏನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಜಯಕುಮಾರ್ ಅವರಿಗೆ ಬೆದರಿಕೆ ಇರುವ ಬಗ್ಗೆ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಇತ್ತು. ಆದರೆ, ಅವರು ನಿರ್ಲಕ್ಷ್ಯ ವಹಿಸಿದ್ದಾರೆ. ಆದ್ದರಿಂದ ಡಿವೈಎಸ್‌ಪಿ ಆದಿಯಾಗಿ ಸಂಬಂಧಿಸಿದ ಎಲ್ಲರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
“ಪ್ರಕರಣದ ತನಿಖೆ ನಾವು ಆರೋಪ ಮಾಡುತ್ತಿರುವ ಅಧಿಕಾರಿಗಳ ವ್ಯಾಪ್ತಿಯಲ್ಲೇ ನಡೆಯುತ್ತಿದೆ. ಅವರು ತಮ್ಮ ಮೇಲಿನ ಆರೋಪ ಮುಚ್ಚಿ ಹಾಕಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ. ಆದ್ದರಿಂದ ವಿಶೇಷ ತಂಡದಿಂದ ತನಿಖೆ ಮಾಡಿಸಬೇಕು ಎಂಬುವುದು ನಮ್ಮ ಒತ್ತಾಯವಾಗಿದೆ” ಎಂದಿದ್ದಾರೆ.
ಕತ್ತರಘಟ್ಟದಲ್ಲಿ ದಲಿತ ಯುವಕ ಜಯಕುಮಾರ್ ಅವರನ್ನು ಹುಲ್ಲಿನ ಮೆದೆಗೆ ದೂಡಿ ಸಜೀವವಾಗಿ ಸುಟ್ಟಿರುವ ಆರೋಪವಿದೆ. ಜಯಕುಮಾರ್ ಜಮೀನಿನಲ್ಲಿ ಕಳೆದ ಐದಾರು ವರ್ಷಗಳಿಂದ ಅಕ್ರಮವಾಗಿ ಹುಲ್ಲುಮೆದೆ ಹಾಕಿದ್ದಲ್ಲದೆ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ, ಮೇ 16ರಂದು ಜಯಕುಮಾರ್ ಕೆ.ರ್.ಪೇಟೆ ಪೊಲೀಸ್ ಠಾಣೆಯಲ್ಲಿ ಅನಿಲ್ ಕುಮಾರ್ ಎಂಬಾತನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ದೂರು ನೀಡಿದ್ದರು. ಮರುದಿನವೇ ಅವರನ್ನು ಅಮಾನುಷವಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ರೌಡಿಶೀಟರ್ ಹಾಗೂ ಪೋಕ್ಸೋ ಕಾಯ್ದೆಯಡಿ ಸೆರೆವಾಸ ಕಂಡಿದ್ದ ಅನಿಲ್ ಕುಮಾರ್ ಬಗ್ಗೆ ಅರಿವಿದ್ದ ಸ್ಥಳೀಯ ಪೊಲೀಸರು ಸಕಾಲಿಕ ಮುನ್ನೆಚರಿಕೆ ವಹಿಸದ ಕಾರಣ ಅಮಾಯಕ ದಲಿತನೊಬ್ಬನ ದಾರುಣ ಹತ್ಯೆ ನಡೆದಿದೆ ಎಂದು ದಲಿತ, ಜನರಪರ, ಪ್ರಗತಿಪರ ಸಂಘಟನೆಗಳು ಆರೋಪ ಮಾಡಿವೆ. ಜಯಕುಮಾರ್ ಅವರ ಸಾವಿನ ನ್ಯಾಯಕ್ಕೆ ಆಗ್ರಹಿಸಿ ಮೇ 27ರಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ‘ಕೆ.ಆರ್ ಪೇಟೆ’ ಚಲೋ ಕೂಡ ನಡೆದಿದೆ.
ಕೆ.ಆರ್.ಪೇಟೆ ಚಲೋ: ಸರಕಾರಕ್ಕೆ ದಲಿತ ಜಯಕುಮಾರ್ ಹತ್ಯೆಯ ಕುರಿತು ಕೆಲ ಬೇಡಿಕೆ ಸಲ್ಲಿಸಿದ ಪ್ರತಿಭಟನಾ ಸಭೆ


