ಕೆ.ಆರ್.ಪೇಟೆ: ತಾಲ್ಲೂಕಿನ ಕತ್ತರಘಟ್ಟದ ದಲಿತ ಯುವಕ ಜಯಕುಮಾರ್ ಹತ್ಯೆಯನ್ನು ವಿರೋಧಿಸಿ ದಲಿತ ಸಂಘಟನೆಗಳ ಒಕ್ಕೂಟ ಮತ್ತು ನಾಡಿನ ಪ್ರಗತಿಪರ ಸಂಘಟನೆಗಳಿಂದ ಮೇ 27ರಂದು ಕೆ.ಆರ್.ಪೇಟೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಭೆಯನ್ನು ನಡೆಸಲಾಯಿತು. ಸಭೆಯ ಪರವಾಗಿ ದಲಿತ ಸಂಘಟನೆಗಳ ನಾಯಕ ಗುರುಪ್ರಸಾದ್ ಅವರು ರಾಜ್ಯದ ಮುಖ್ಯಮಂತ್ರಿಗೆ ತಾಲ್ಲೂಕಿನ ತಹಶೀಲ್ದಾರ್ ಮೂಲಕ ಸಲ್ಲಿಸಿದ ಬೇಡಿಕೆಗಳನ್ನು ಓದಿದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಲು ಮುಖ್ಯ ಕಾರಣ ನಾಡಿನ ದಲಿತರು ಬಹುಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾಗಿದೆ. ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಲಕ್ಷಾಂತರ ದಲಿತರ ಸಮ್ಮುಖದಲ್ಲಿ ದಲಿತ ಸಂಘರ್ಷ ಸಮಿತಿಗಳ ಚಾಲನಾ ಸಮಿತಿಯು ಕೋಮುವಾದ-ಜಾತಿವಾದವನ್ನು ಹಿಮ್ಮೆಟ್ಟಿಸಲು ಈ ತೀರ್ಮಾನವನ್ನು ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದು ಎಂದು ಪ್ರತಿಭಟನಾ ಸಭೆಯು ಹೇಳಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ದಲಿತರ ಮೇಲಿನ ದೌರ್ಜನ್ಯದ ವಿಚಾರದಲ್ಲಿ ಅದು ಅಸಡ್ಡೆ ತೋರುತ್ತಿರುವುದು, ಪೊಲೀಸರೇ ದಲಿತರ ಮೇಲಿನ ದೌರ್ಜನ್ಯದ ಪ್ರಕರಣವನ್ನು ತಿರುಚಲು ಮುಂದಾಗಿರುವುದು ಆತಂಕಕ್ಕೀಡು ಮಾಡಿದೆ.ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದ ದಲಿತ ಯುವಕ ಜಯಕುಮಾರ್ ಅವರನ್ನು ಅನಿಲ್ ಕುಮಾರ್ ಎಂಬ ಪುಡಿ ರೌಡಿ ಕೊಂದು ಹುಲ್ಲಿನ ಮೆದೆಗೆ ಹಾಕಿ ಸುಟ್ಟಿರುವ ದುರ್ಘಟನೆಯಾಗಿದೆ. ತನ್ನ ಜಮೀನಿನಲ್ಲಿ ಕಳೆದ ಐದಾರು ವರ್ಷಗಳಿಂದ ಆಕ್ರಮವಾಗಿ ಹುಲ್ಲುಮೆದೆ ಹಾಕಿದ್ದಲ್ಲದೆ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮೇ 16ರಂದು ಜಯಕುಮಾರ್ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಅನಿಲ್ ಕುಮಾರ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ದೂರು ನೀಡಿದ ಮರುದಿನವೇ ಅಂದರೆ ಇದೇ ಮೇ 17ರಂದು ಈ ಅಮಾನುಷ ಕೊಲೆ ನಡೆದಿದೆ. ರೌಡಿಶೀಟರ್ ಹಾಗೂ ಫೋಕ್ಸೋ ಕಾಯ್ದೆಯಡಿ ಸೆರೆವಾಸ ಕಂಡಿದ್ದ ಅನಿಲ್ ಕುಮಾರ್ ಬಗ್ಗೆ ಅರಿವಿದ್ದ ಸ್ಥಳೀಯ ಪೊಲೀಸರು ಸಕಾಲಿಕ ಮುನ್ನೆಚರಿಕೆ ವಹಿಸದ ಕಾರಣ ಅಮಾಯಕ ದಲಿತನೊಬ್ಬನ ದಾರುಣ ಹತ್ಯೆ ನಡೆದಿದೆ ಎಂದು ಸಭೆಯು ಆರೋಪಿಸಿದೆ.
ಜಯಕುಮಾರ್ ಅವರ ಅನಕ್ಷರಸ್ಥ ಪತ್ನಿ ಲಕ್ಷ್ಮಿಯವರು ಗಂಡನ ಕೊಲೆಯಿಂದ ಆಘಾತಗೊಂಡು ಆರೋಪಿಯ ಬಂಧನಕ್ಕೆ ಆಗ್ರಹಿಸಿ ಕೊಟ್ಟಿರುವ ದೂರನ್ನು “ನನ್ನ ಗಂಡ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ತಿರುಚಿ ಕೇಸು ದಾಖಲಿಸಿರುವ ಪೊಲೀಸರ ಈ ಕುಕೃತ್ಯಕ್ಕೆ ಕ್ಷಮೆ ಎಂಬುದು ಇರಬಾರದು. ಜಯಕುಮಾರ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ಪ್ರಬಲ ಕಾರಣಗಳೂ ಇರಲಿಲ್ಲ. ಅಲ್ಲದೆ ಶವ ಸಿಕ್ಕ ಸ್ಥಳ ಮತ್ತು ಅದರ ಸ್ಥಿತಿಗತಿಗಳನ್ನು ಪರಿಶೀಲಿಸಿದರೆ ಸ್ವಯಂ ಆತ್ಮಹತ್ಯೆಗೆ ಯತ್ನಿಸಿರುವ ಯಾವ ಕುರುಹು – ಗುರುತುಗಳೂ ಕಂಡು ಬರುವುದಿಲ್ಲ, ಸುಟ್ಟು ಆರೆಬೆಂದ ಶವದ ದುರವಸ್ಥೆಯ ದೃಶ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸಿದರೆ ಕೊಲೆ ಮಾಡಿ ಹುಲ್ಲಿನ ಮೆದೆಯ ಬೆಂಕಿಗೆ ಎಸೆಯಲಾಗಿದೆ ಎಂಬ ಅಂಶ ಕಣ್ಣಿಗೆ ರಾಚುವಂತಿದೆ ಎಂದು ಪ್ರತಿಭಟನಾ ಸಭೆಯು ಮುಖ್ಯಮಂತ್ರಿಗಳಿಗೆ ತನ್ನ ಬೇಡಿಕೆಯನ್ನು ಸಲ್ಲಿಸಿದೆ.
ಸದರಿ ಪ್ರಕರಣವನ್ನು ಅತ್ಯಹತ್ಯೆ ಎಂದು ದೂರು ದಾಖಲಿಸಿಕೊಂಡಿರುವ ಪೊಲೀಸ್ ಇಲಾಖೆಯ ಕರ್ತವ್ಯಲೋಪವನ್ನು ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸಿದ ನಂತರ ಅಂದರೆ ಕೊಲೆ ನಡೆದು 6 ದಿನಗಳ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲದೇ, ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. 2016ರ ಅಟ್ರಾಸಿಟಿ ಕಾಯ್ದೆಯ ಪ್ರಕಾರ ದಲಿತರ ಭೂಮಿಯನ್ನು ಅಕ್ರಮವಾಗಿ ಕಸಿದುಕೊಂಡಿದ್ದ ಆರೋಪಿಯ ವಿರುದ್ಧ ಸೆಕ್ಷನ್ 3(1)(f) ಅಡಿ ಪ್ರಕರಣ ದಾಖಲಿಸುವುದನ್ನೂ ಕೈಬಿಟ್ಟಿದ್ದಾರೆ ಎಂದು ಸಭೆಯು ಹೇಳಿದೆ.
ಈ ದುರ್ಘಟನೆಯ ಹಿಂದಿರುವ ನಿಜ ಸಂಗತಿಗಳನ್ನು ಸ್ಥಳ ಮಹಜರಿನ ಮೂಲಕ ಗೋಚರಿಸುವ ಪುರಾವೆಗಳನ್ನು ಸರಿಯಾಗಿ ತಿಳಿದುಕೊಂಡು ಮೃತ ಜಯಕುಮಾರ್ ಪತ್ನಿಯ ದೂರನ್ನು ಗಂಭೀರವಾಗಿ ಪರಿಗಣಿಸದೆ ಪೊಲೀಸ್ ಅಧಿಕಾರಿಗಳು ಕೊಲೆಯನ್ನು ಆತ್ಮಹತ್ಯೆ ಪ್ರಕರಣವೆಂದು ದೂರು ದಾಖಲು ಮಾಡಿಕೊಂಡಿರುವುದು ಆಘಾತಕ್ಕೊಳಗಾಗಿರುವ ಮೃತನ ಪತ್ನಿ ಲಕ್ಷ್ಮಿಯ ಕುಟುಂಬಕ್ಕಷ್ಟೇ ಅಲ್ಲದ ಅಲ್ಲದೆ ಇಡೀ ದಲಿತ ಸಮುದಾಯಕ್ಕೆ ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಘೋರ ಅನ್ಯಾಯವಾಗಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರದಲ್ಲಿಯೂ ದಲಿತರ ಮೇಲ ದೌರ್ಜನ್ಯ ಹಾಗೂ ಪೊಲೀಸ್ ವ್ಯವಸ್ಥೆಯ ಉದ್ದೇಶಪೂರ್ವಕ ಲೋಪ ಮುಂದುವರಿದಿದೆ. ಇದನ್ನ ನಾವು ಖಂಡಿಸುತ್ತೇವೆ ಹಾಗೂ ಇಂತಹ ಬೆಳವಣಿಗೆಯನ್ನು ಎಂದಿಗೂ ಸಹಿಸುವುದಿಲ್ಲ. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈ ಕೂಡಲೇ ಮಧ್ಯಪ್ರವೇಶಿಸಿ, ಸ್ಥಳೀಯ ಪೊಲೀಸರ ವಿರುದ್ಧ ಕ್ರಮ ಕೈಗೊಂಡು, SIT ತನಿಖೆಗೆ ಆದೇಶಿಸುವ ಮೂಲಕ ದಲಿತರ ವಿರುದ್ಧ ದೌರ್ಜನ್ಯ ಎಸಗುವವರಿಗೆ ಸೂಕ್ತ ಎಚ್ಚರಿಕೆ ನೀಡಬೇಕೆಂದು ಆಗ್ರಹಿಸುತ್ತೇವೆ ಎಂದು ಸಭೆಯು ಹೇಳಿದೆ.
ಪ್ರತಿಭಟನಾ ಸಭೆಯು ಸರ್ಕಾರಕ್ಕೆ ಈ ಕೆಳಗಿನ ಆಗ್ರಹಗಳನ್ನು ಸಲ್ಲಿಸಿದೆ.
- ಬಂಧಿತ ಅನಿಲ್ ಕುಮಾರ್‌ನನ್ನು ತೀವ್ರ ತನಿಖೆಕ್ಕೊಳಪಡಿಸಿ ಕೊಲೆ ಮೊಕದ್ದಮೆ ದಾಖಲಿಸಬೇಕು. ತುರ್ತಾಗಿ ಕಠಿಣ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕು.
- ದಲಿತರ ದೂರುಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಕರ್ತವ್ಯಲೋಪ ಎಸಗಿರುವ ಪೊಲೀಸರನ್ನು ಅಮಾನತ್ತು ಮಾಡಬೇಕು. SIT ತನಿಖೆಗೆ ಆದೇಶಿಸಬೇಕು.
- ಫಾರಂ ನಂ. 57ರಲ್ಲಿ ಎರಡೂವರೆ ಎಕರೆ ಬಗರ್‌ಹುಕುಂ ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸಿರುವ ಜಯಕುಮಾರ್ ಕುಟುಂಬಕ್ಕೆ ಸದರಿ ಭೂಮಿಯನ್ನು ಮಂಜೂರು ಮಾಡಿಕೊಡಬೇಕು.
- ಈ ಹಿಂದೆ ಕೋಮು ಆಯಾಮದಲ್ಲಿ ಕೊಲೆಗಳಾದ ಸಂದರ್ಭದಲ್ಲಿ ಯಾವುದೇ ತನಿಖೆ ಮಾಡದೆ ರಾಜ್ಯ ಸರ್ಕಾರ ಸಂತ್ರಸ್ತ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರವನ್ನು ನೀಡಿದೆ. ಇದೇ ಮಾದರಿಯಲ್ಲಿ ಸಂತ್ರಸ್ತ ದಲಿತ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರೂ. ಬಿಡುಗಡೆ ಮಾಡಬೇಕು. ಹಾಗೂ ಎರಡು ಎಳೆಯ ಮಕ್ಕಳ ತಾಯಿಯಾಗಿರುವ ಸಂತ್ರಸ್ತೆ ಲಕ್ಷ್ಮಿ ಅವರಿಗೆ ಸರ್ಕಾರಿ ಕೆಲಸವನ್ನು ನೀಡಬೇಕು
ಕೆ.ಆರ್.ಪೇಟೆ ಚಲೋ: ಜಾಗೃತ ಸಮುದಾಯ ಜೀವಂತ ಆಗಿರುತ್ತದೆ, ಅದರ ಮೇಲೆ ದಾಳಿ ಆಗಲ್ಲ; ಜ್ಞಾನ ಪ್ರಕಾಶ್ ಸ್ವಾಮಿ