Homeಅಂಕಣಗಳುಪ್ರಜಾಪ್ರಭುತ್ವದ ಹೆಮ್ಮೆಯ ಕ್ಷಣಗಳು: ಸಕಲೇಶಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೆಳನದ ಬಗ್ಗೆ

ಪ್ರಜಾಪ್ರಭುತ್ವದ ಹೆಮ್ಮೆಯ ಕ್ಷಣಗಳು: ಸಕಲೇಶಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೆಳನದ ಬಗ್ಗೆ

- Advertisement -
- Advertisement -

ಕಳೆದುಹೋದ ದಿನಗಳು – 29

ಈ ಘಟನೆ ನಡೆದದ್ದು 2010ರಲ್ಲಿ ಗಣಪಯ್ಯನವರ ಕಾಲಾನಂತರದಲ್ಲಿ. ಆದರೆ ಆಗ ತಿಳಿದ ವಿಚಾರಗಳು ಮತ್ತು ಅದರ ಹಿಂದಿನ ಸಂಗತಿಗಳು ಗಣಪಯ್ಯನವರ ಕುಟುಂಬಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ ಸಕಲೇಶಪುರ ತಾಲ್ಲೂಕಿನ ಗರಿಮೆಗೆ ಮತ್ತು ಇಲ್ಲಿ ನಡೆದ ಹಾಗೂ ನಡೆಯುತ್ತಿರುವ ಪರಿಸರ ಹೋರಾಟಕ್ಕೂ ಸಂಬಂಧಪಟ್ಟವುಗಳಾಗಿವೆ. ಆದ್ದರಿಂದ ಅದನ್ನಿಲ್ಲಿ ದಾಖಲಿಸಿದ್ದೇನೆ.

2010ರಲ್ಲಿ ಹಾನುಬಾಳಿನಲ್ಲಿ ಸಕಲೇಶಪುರ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಆಗ ನಾನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದೆ. (ಅದಕ್ಕೂ ಮೊದಲು ಸಕಲೇಶಪುರದಲ್ಲಿ ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿತ್ತು. ಎಚ್.ಜೆ.ಲಕ್ಕಪ್ಪಗೌಡರು ಸಮ್ಮೇಳನಾಧ್ಯಕ್ಷರಾಗಿದ್ದ ಆ ಸಮ್ಮೇಳನ ಬಹಳ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆದಿತ್ತು. ಆ ಸಮ್ಮೇಳನದ ರೂವಾರಿಗಳಲ್ಲಿ ಬಾಳ್ಳು ಜಗನ್ನಾಥ್  ಮುಖ್ಯರಾಗಿದ್ದರು)

ಹಾನುಬಾಳು ಊರಿನಲ್ಲಿ ಸಾಹಿತ್ಯ ಸಮ್ಮೇಳನದ ಬೆಳಗು

ಪ್ರಥಮ ತಾಲ್ಲೂಕು ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಾಗ ಅದನ್ನು ಹಾನುಬಾಳಿನಲ್ಲೇ ನಡೆಸಬೇಕೆಂದು ನನ್ನ ಆಸೆಯಾಗಿತ್ತು. ಅದಕ್ಕೆ ಕಾರಣ ಹಾನುಬಾಳು ನಾನು ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಯವರೆಗೆ ಓದಿದ ಊರು. ನನ್ನ ನೂರಾರು ಗೆಳೆಯರು ಅಲ್ಲೇ ಸುತ್ತ ಮುತ್ತ ಇದ್ದಾರೆ, ಪರಿಚಯದ ಹಿರಿಯರಿದ್ದಾರೆ ಅದರಿಂದಾಗಿ ಸಂಘಟಿಸುವುದು ಸುಲಭ ಎಂಬ ಧೈರ್ಯವಿತ್ತು.

ಇವೆಲ್ಲದರ ಜೊತೆ ನನ್ನ ವೈಯಕ್ತಿಕ ಕಾರಣವೊಂದಿತ್ತು. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ, ಚಿಕ್ಕ ಮೊಗಯ್ಯ ಎಂಬ ಒಬ್ಬರು ಮೇಷ್ಟ್ರು ಇದ್ದರು. ಶಾಲಾದಿನಗಳಲ್ಲಿಯೇ ಮಕ್ಕಳಿಗೆ ನಾಟಕದ ಗುಂಗು ಹತ್ತಿಸಿದ್ದರು. ಅವರು ಕಲಿಸಿದ ಪೃಥ್ವೀರಾಜನ ಕಥೆಯ ನಾಟಕದಲ್ಲಿ ನಾನೂ ಪಾತ್ರ ಮಾಡಿದ್ದೆ. ಚಿಕ್ಕ ಮೊಗಯ್ಯ ತಮ್ಮ ಸ್ವಂತ ಹಣದಿಂದ ಕನ್ನಡದ ಅತ್ಯುತ್ತಮ ಲೇಖಕರ ಪುಸ್ತಕಗಳನ್ನು ಕೊಂಡಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಕೊಟ್ಟು ಓದಿನ ರುಚಿ ಹತ್ತಿಸುತ್ತಿದ್ದರು. ಅವರು ನನಗೆ ಐದನೇ ತರಗತಿಯಲ್ಲಿಯೇ ಕಾರಂತರ ಕಾದಂಬರಿಗಳನ್ನು ಓದಿಸಿದ್ದರು.! ಇದೆಲ್ಲದರ ನೆನಪು ನನ್ನಲ್ಲಿದ್ದುದೂ ಒಂದು ಭಾವನಾತ್ಮಕ ಕಾರಣವಾಗಿತ್ತು.

ಆಗ ಈ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರವಿತ್ತು. ಸಮ್ಮೇಳನವನ್ನು ಯಶಸ್ಸುಗೊಳಿಸಲು ಕಾರಣರಾದವರು ನನ್ನ ಹಿರಿಯ ಸಹಪಾಠಿ, ಗೆಳೆಯ, ಸಕಲೇಶಪುರದ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಅವರು.

ಇಂಥವರೆಲ್ಲ ಇದ್ದುದರಿಂದ ನಮಗೆ ಕವಿ ಸುಬ್ಬು ಹೊಲೆಯಾರ್ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲು ಸಾಧ್ಯವಾಯಿತು.

ಗೌರವ ಸ್ವೀಕರಿಸಿ ಮಾತನಾಡುತ್ತಿರುವ ಡಾ. ಅಪ್ಪಸ್ವಾಮಿ ಗೌಡರು

ಆ ಸಮ್ಮೇಳನ ನಾವೆಲ್ಲ ವಿದ್ಯೆ ಕಲಿತ ಹಾನುಬಾಳು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆಯಿತು. ಹಾನುಬಾಳುವಿನ ಸುತ್ತಲಿನ ಎಲ್ಲ ಗೆಳೆಯರೂ ತಮ್ಮ ಮನೆಯ ಕಾರ್ಯಕ್ರಮವೆಂದು ದುಡಿದರು. ಸುಮಾರು ನಾಲ್ಕು ಸಾವಿರ ಜನರು ಸಮ್ಮೇಳನದಲ್ಲಿ ಭಾಗವಹಿಸಿದ್ದೊಂದು ದಾಖಲೆಯಾಯಿತು.

ಆ ಸಮ್ಮೇಳನದಲ್ಲೇ “ಪಶ್ಚಿಮ ಘಟ್ಟ ಉಳಿಸಿ” ಎಂಬ ನಿರ್ಣಯವನ್ನೂ ಮಂಡಿಸಿದೆವು.

ಸಮ್ಮೇಳನದಲ್ಲಿ ಕೆಲವರನ್ನು ಗೌರವಿಸುವುದು ಎಲ್ಲ ಕಡೆ ನಡೆಕೊಂಡು ಬಂದಿರುವ ಪದ್ಧತಿ. ಅಂತೆಯೇ ನಾವು ಕೆಲವರನ್ನು ಗೌರವಿಸಲು ಆರಿಸಿಕೊಂಡೆವು. ಆಗ ಹಾರ್ಲೆಯ ಡಾ.ರವೀಂದ್ರನಾಥರ ಹೆಸರು ಮತ್ತು ಹೆತ್ತೂರಿನ ಡಾ.ಅಪ್ಪಸ್ವಾಮಿಗೌಡರ ಹೆಸರು ಆದ್ಯತೆಯಲ್ಲಿ ಮುನ್ನೆಲೆಗೆ ಬಂತು.

ಅಪ್ಪಸ್ವಾಮಿಗೌಡರು ಅಮೆರಿಕಾದಲ್ಲಿ ನೆಲೆಸಿದ್ದಾರೆ. ವರ್ಷಕ್ಕೊಮ್ಮೆ ಊರಿಗೆ ಬರುತ್ತಾರೆ. ಆಗ ಅವರು ಊರಿಗೆ ಬಂದಿದ್ದುದು ನಮಗೆ ಅನುಕೂಲವಾಗಿತ್ತು. ನನಗೆ ಅಪ್ಪಸ್ವಾಮಿಗೌಡರ ಪರಿಚಯ ಇರಲಿಲ್ಲ ಅವರನ್ನು ಆಹ್ವಾನಿಸುವ ಹೊಣೆ ವಿಶ್ವನಾಥ್ ತೆಗೆದುಕೊಂಡರು. ಡಾ. ರವೀಂದ್ರನಾಥರನ್ನು ಒಪ್ಪಿಸುವ ಹೊಣೆ ನನ್ನದಾಗಿತ್ತು. ರವೀಂದ್ರನಾಥರು ಸನ್ಮಾನಗಳಿಗೆಲ್ಲ ಒಪ್ಪುವವರಲ್ಲ. ಅವರನ್ನು ಸನ್ಮಾನಕ್ಕೆ ಒಪ್ಪಿಸಿದ್ದೇ ಒಂದು ರೋಚಕ ಕಥೆಯಿದೆ ಮುಂದೆ ಎಂದಾದರೂ ಬರೆಯಬಹುದು.

ಅಂತೂ ಸಮ್ಮೇಳನದ ದಿನ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿದ ಹನ್ನೆರಡು ಜನರನ್ನು ಗೌರವಿಸಿದೆವು. ಅಲ್ಲೊಂದು ವಿಶೇಷವೆಂದರೆ ರವೀಂದ್ರನಾಥರು ವೇದಿಕೆಯಲ್ಲಿದ್ದರು. ಅದೇ ವೇದಿಕೆಯಲ್ಲಿ ಒಂದು ಕಾಲದಲ್ಲಿ ಅವರ ಮನೆಯಲ್ಲಿ ದನ ಕಾಯುತ್ತ ಸ್ವಾಧ್ಯಾಯಿಯಾಗಿ ಓದು ಕಲಿತು ನಂತರ ತುರ್ತುಪರಿಸ್ಥಿತಿಯನ್ನು ವಿರೋಧಿಸಿ, ಜೈಲುವಾಸವನ್ನೂ ಅನುಭವಿಸಿ, ಮುಂದಿನ ದಿನಗಳಲ್ಲಿ ನಮ್ಮ ರಂಗ ತಂಡದಲ್ಲಿ ದಶಕಗಳ ಕಾಲ ನಟನಾಗಿ, ಸಂಘಟಕನಾಗಿ ದುಡಿದ ನನ್ನ ರಂಗ ಸಂಗಾತಿ ಉಗ್ಗಪ್ಪನವರಿಗೂ ಸನ್ಮಾನವಿದ್ದುದು.

ಡಾ.ರವೀಂದ್ರನಾಥ ರಿಗೆ ಗೌರವ ಸಮರ್ಪಣೆ ಜೊತೆಯಲ್ಲಿ ಕಮಲಾ ರವೀಂದ್ರನಾಥ, ಬಿ.ಬಿ.ಶಿವಪ್ಪ, ಹೆಚ್.ಎಂ.ವಿಶ್ವನಾಥ್, ಅಂದಿನ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಉದಯರವಿ, ಅಂದಿನ ಸಕಲೇಶಪುರ ಪುರಸಭಾಧ್ಯಕ್ಷ ಯಾದಗಾರ್ ಇಬ್ರಾಹಿಂ, ಇಂದಿನ‌ ಪುರಸಭಾಧ್ಯಕ್ಷ ಕಾಡಪ್ಪ ಇವರುಗಳೆಲ್ಲರು ಇದ್ದಾರೆ.

“ಉಗ್ಗಪ್ಪನ ಜೊತೆ ವೇದಿಕೆ ಹಂಚಿಕೊಂಡದ್ದು ನನಗೆ ತುಂಬ ಸಂತೋಷವಾಗಿದೆ. ಇದು ನಮ್ಮ ಪ್ರಜಾಪ್ರಭುತ್ವದ ಹೆಮ್ಮೆಯ ಕ್ಷಣಗಳು” ಎಂದು ರವೀಂದ್ರನಾಥರು ತಮಗೆ ಸಂದ ಗೌರವಕ್ಕೆ ಕೃತಜ್ಞತೆ ಸಲ್ಲಿಸುತ್ತಾ ಹೇಳಿದರು. ಈ ಒಂದು ಘಟನೆಯನ್ನು ಹಾಸನದ ಅನೇಕ ಪತ್ರಿಕೆಗಳು ವಿಶೇಷವಾಗಿ ಗಮನಿಸಿ ಸುದ್ದಿಮಾಡಿದ್ದವು.

ಅಪ್ಪಸ್ವಾಮಿ ಗೌಡರ ಸರದಿ ಬಂದಾಗ ಗೌರವ ಸ್ವೀಕರಿಸಿ ಅವರು ಕೆಲವು ಮಾತುಗಳನ್ನಾಡಿದರು. ಅವರು ರವೀಂದ್ರನಾಥರನ್ನು ತೋರಿಸಿ “ಡಾ. ರವಿ ಇಲ್ಲಿದ್ದಾರೆ ನನಗೆ ಅವರ ಕುಟುಂಬದ್ದೊಂದು ಋಣವಿದೆ” ಎಂದು ಹೇಳಿ ಆ ವಿಚಾರದ ವಿವರಗಳನ್ನು ಹೇಳುತ್ತಾ ಹೋದರು.

ಅಪ್ಪಸ್ವಾಮಿ ಗೌಡರ ತಂದೆಯದು ದೊಡ್ಡ ಸಂಸಾರ ಮನೆ ತುಂಬ ಮಕ್ಕಳು. ಹಾಗಾಗಿ ಮಗನನ್ನು ಓದಿಸಲು ಕಷ್ಟವಿತ್ತು. ಆದ್ದರಿಂದ ಅಪ್ಪಸ್ವಾಮಿ ಗೌಡರು ಓದನ್ನು ನಿಲ್ಲಿಸಿ ಏನಾದರೂ ಉದ್ಯೋಗ ಮಾಡಬೇಕೆಂದುಕೊಂಡು ಟೈಲರಿಂಗ್ ಕಲಿಯಲು ಪ್ರಾರಂಭಿಸಿದರು. ಸ್ವಲ್ಪ ಸಮಯ ದುಡಿದು ನಂತರ ಓದು ಮುಂದುವರೆಸುವ ಹಂಬಲ ಅವರದು. ಉಚ್ಛಂಗಿಯಲ್ಲಿ ಒಬ್ಬರ ಬಳಿ ಟೈಲರಿಂಗ್ ಕಲಿತರು. ಆದರೆ ಮುಂದೆ ಕೆಲಸ ಮಾಡಲು ಹೊಲಿಗೆ ಯಂತ್ರ ಬೇಕಿತ್ತು. ಹಣವಿಲ್ಲ ಆಗ ಸಹಾಯಕ್ಕೆ ಬಂದವರು ಗಣಪಯ್ಯನವರ ಸಹೋದರ ಕೋಗರವಳ್ಳಿ ಕೃಷ್ಣಮೂರ್ತಿಯವರು. ಅವರು ಅಪ್ಪಸ್ವಾಮಿಗೌಡರಿಗೆ ಹೊಲಿಗೆ ಯಂತ್ರ ಕೊಳ್ಳಲು  ಎಂಟುನೂರು ರೂಪಾಯಿಗಳನ್ನು ಕೊಟ್ಟರಂತೆ. ಆ ಎಂಟುನೂರು ರೂಪಾಯಿಗಳಿಂದ ಅಪ್ಪಸ್ವಾಮಿಗೌಡರು ಹೊಲಿಗೆ ಯಂತ್ರವನ್ನು ಕೊಂಡು ಸಕಲೇಶಪುರದಲ್ಲಿ ಸ್ವಂತ ಉದ್ಯೋಗ ಪ್ರಾರಂಭಿಸಿದರು. ನಂತರ ಅವರ ವಿದ್ಯೆಯೂ ಮುಂದುವರಿಯಿತು.

“ಅಂದು ಕೋಗರವಳ್ಳಿ ಕೃಷ್ಣಮೂರ್ತಿಯವರು ಕೊಟ್ಟ ಎಂಟುನೂರು ರೂ ನನಗೆ ಎಂಟು ಕೋಟಿ ರೂಪಾಯಿಗಳಿಗೆ ಸಮ” ಎಂದರು ಅಪ್ಪಸ್ವಾಮಿಗೌಡರು.

ನಂತರ ಅಪ್ಪಸ್ವಾಮಿಗೌಡರು ವೈದ್ಯಕೀಯ ಕಲಿತರು, ಉನ್ನತಾಭ್ಯಾಸ ಮಾಡಿದರು. ಅಮೆರಿಕಾಕ್ಕೆ ಹೋಗಿ ನೆಲೆಸಿದರು. ಅಮೆರಿಕಾದಲ್ಲಿಯೂ ಬಹಳ ಉನ್ನತ ಸ್ಥಾನವನ್ನು ತಲುಪಿದರು.

ನಂತರ ಅವರು ಮುಂದುವರಿದು “ನಾನು ಆ ಎಂಟುನೂರು ರೂಪಾಯಿಗಳ ಋಣವನ್ನ ಈಗಲೂ ತೀರಿಸುತ್ತಾ ಇದ್ದೇನೆ. ಹೇಗೆಂದರೆ ನಾನು ಭಾರತಕ್ಕೆ ಬಂದಾಗೆಲ್ಲ ಊರಿಗೆ ಬರುತ್ತೇನೆ. ಹಾಗೆ ಬಂದಾಗ ಇಲ್ಲಿ ಯಾರಿಗೆ ಅಗತ್ಯವಿದೆಯೋ ಅಂಥವರಿಗೆ ಹೊಲಿಗೆಯಂತ್ರಗಳನ್ನು ಕೊಡಿಸುತ್ತೇನೆ” ಎಂದರು.

ಅಪ್ಪಸ್ವಾಮಿಗೌಡರು ಹೀಗೆ ಉಚಿತವಾಗಿ ಹಂಚಿದ ಹೊಲಿಗೆ ಯಂತ್ರಗಳು ನೂರಾರು. ಅವರು ಇದನ್ನೊಂದು ವ್ರತದಂತೆ ನಡೆಸಿಕೊಂಡು ಬಂದಿದ್ದಾರೆ.

ಹಲವಾರು ಶಾಲೆಗಳಿಗೆ ಕಟ್ಟಡ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ, ಪರಿಕರಗಳು ಮುಂತಾದವನ್ನು ದಾನ ಮಾಡಿದ್ದಾರೆ. ಹತ್ತಾರು ವಿದ್ಯಾಸಂಸ್ಥೆಗಳಿಗೆ ಲಕ್ಷಾಂತರ ರೂಗಳ ಪುಸ್ತಕಗಳನ್ನು ಕೊಟ್ಟಿದ್ದಾರೆ.

ಉಗ್ಗಪ್ಪನವರಿಗೆ ಗೌರವ ಸಮರ್ಪಣೆ

ದಟ್ಟ ಮಲೆನಾಡಿನಲ್ಲಿ ಹುಟ್ಟಿದ ಅಪ್ಪಸ್ವಾಮಿಗೌಡರ ಪರಿಸರ ಪ್ರೇಮವೂ ಮುಖ್ಯವಾದದ್ದು. ಗುಂಡ್ಯ ಜಲವಿದ್ಯುತ್ ಯೋಜನೆಯ ವಿರೋಧದ ಹೋರಾಟಕ್ಕೆ ಬೆಂಬಲ ಮತ್ತು ಧನಸಹಾಯ ಮಾಡಿದ್ದಲ್ಲದೆ. ಇಂದಿಗೂ ಮಲೆನಾಡನ್ನು ಉಳಿಸುವ ಎಲ್ಲ ಹೋರಾಟಗಳಿಗೆ ಬೆಂಬಲಿಗರಾಗಿದ್ದಾರೆ.

ಪರಿಸರ ಹೋರಾಟಗಳಿಗೆ ಬೆಂಬಲ ನೀಡುವುದು ನಿಮ್ಮ ಕರ್ತವ್ಯ ಎಂದು ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮಿಗಳಿಗೂ ಪತ್ರ ಅವರು ಬರೆದಿದ್ದರು. ಮಠ ಮಾನ್ಯರುಗಳು ಪರಿಸರ ಉಳಿಸುವಲ್ಲಿ ಮಹತ್ತರ ಕಾರ್ಯ ನಿರ್ವಹಿಸಬೇಕೆಂದು ಅಪ್ಪ ಸ್ವಾಮಿಗೌಡರ ಖಚಿತ ಅಭಿಪ್ರಾಯ.

ಭಾಷಣದ ಕೊನೆಯಲ್ಲಿ ಡಾ.ಅಪ್ಪಸ್ವಾಮಿ ಗೌಡರು “ಡಾ.ರವಿಯವರ ಕುಟುಂಬದವರು ನೂರಾರು ಜನರಿಗೆ ಸಹಾಯ ಮಾಡಿದವರು. ಅವರೊಡನೆ ಕುಳಿತು ಗೌರವಕ್ಕೆ ಪಾತ್ರನಾಗುವುದು ನನಗೂ ಸಂತಸ ತಂದಿದೆ” ಎಂದರು.

ಗಣಪಯ್ಯನವರ ಸಹೋದರ ಕೃಷ್ಣಮೂರ್ತಿಯವರು ಸಕಲೇಶಪುರ ಕಸಬಾದ ಕೋಗರವಳ್ಳಿಯಲ್ಲಿ ನೆಲೆಸಿದ್ದರು. ಅವರ ಪತ್ನಿ ಭವಾನಿಯಮ್ಮ ಕೊಡಗಿನಲ್ಲಿದ್ದಾಗ ತಾವೇ ತೋಟದಲ್ಲಿ ಕೆಲಸಮಾಡುತ್ತಿದ್ದ ಶ್ರಮಜೀವಿ. ನೂರಾರು ಕಾಫಿಗಿಡಗಳನ್ನು ಅವರೇ ಗುಂಡಿ ತೆಗೆದು ನೆಟ್ಟಿದ್ದರಂತೆ. ಭವಾನಿಯಮ್ಮ ಅವರ ಧಾರಾಳತನದಿಂದ ಕೊಡುಗೈ ಅಮ್ಮನೆಂದು ಹೆಸರಾದವರು.

ಕೋಗರವಳ್ಳಿಗೆ ಬಂದ ನಂತರ ಅನೇಕರಿಗೆ ನೆರವಾದರು. ಆ ಕಾಲದಲ್ಲೇ ಜೀಪು ಚಲಾವಣೆ ಮಾಡುವುದನ್ನು ಕಲಿತು ಒಮ್ಮೊಮ್ಮೆ ಜೀಪು ಚಲಾಯಿಸಿಕೊಂಡು ತೋಟಕ್ಕೆ ಬರುತ್ತಿದ್ದರಂತೆ. ಕೃಷ್ಣಮೂರ್ತಿ ದಂಪತಿಗಳು ಹಲವಾರು ಜನರಿಗೆ ಸಹಾಯ ಮಾಡಿದ್ದರು. ಆ ಪ್ರದೇಶದ ಜನರು ಈಗಲೂ ಅವರನ್ನು ನೆನೆಯುತ್ತಾರೆ. ಈಗ ಅವರ ಮಕ್ಕಳಾದ ರಾಮಮೂರ್ತಿ ಮತ್ತು ಶ್ಯಾಮರಾವ್ ಕೃಷಿಕರಾಗಿ ಮುಂದುವರೆದಿದ್ದಾರೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು – 18: ಗುಂಡೂರಾವ್ ಸರ್ಕಾರದ ವಿರುದ್ಧ ಪ್ರತಿಭಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಕಾಲ್ತುಳಿತ: ಎಂಟು ಮಹಿಳೆಯರು ಸಾವು; ಹಲವು ಮಂದಿಗೆ ಗಾಯ 

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಹಿಳೆಯರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.  ಪೂಜೆಗಾಗಿ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದಾಗ ಈ ಘಟನೆ ಸಂಭವಿಸಿದ್ದು,...

ದಲಿತ ಕ್ರೈಸ್ತರ ಎಸ್‌ಸಿ ಸ್ಥಾನಮಾನ ರದ್ದು ಆದೇಶ; ಸುಪ್ರೀಂ ಕೋರ್ಟ್ ತೀರ್ಪು ಖಂಡಿಸಿದ ಮಂದಕೃಷ್ಣ ಮಾದಿಗ

ದಲಿತರು ಕ್ರೈಸ್ತರಾದರೆ ಅವರ ಎಸ್‌ಸಿ ಸ್ಥಾನಮಾನ ರದ್ದುಗೊಳ್ಳಲಿದೆ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಬಲವಾಗಿ ಖಂಡಿಸುತ್ತೇವೆ ಎಂದು ಎಂಆರ್‌ಪಿಎಸ್ ಫೌಂಡೇಶನ್ ಅಧ್ಯಕ್ಷ ಮಂದಕೃಷ್ಣ ಮಾದಿಗ ಹೇಳಿದರು. "ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು,...

ಜಾರ್ಖಂಡ್: ರಾಮನವಮಿ ಘರ್ಷಣೆಗೆ ಸಂಬಂಧಿಸಿದ 19 ಜನರನ್ನು ಬಂಧಿಸಿ, ಕೈಕೋಳ ಹಾಕಿ ಸಾರ್ವಜನಿಕ ಮೆರವಣಿಗೆ ಮಾಡಿದ ಪೊಲೀಸರು

ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯ ನಂತರ ಕನಿಷ್ಠ 19 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಭದ್ರತಾ ಪಡೆಗಳನ್ನು ಭಾರೀ ಪ್ರಮಾಣದಲ್ಲಿ ನಿಯೋಜಿಸಿದ ನಂತರ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ : ಹೊಸ ಮಸೂದೆ ಅಂಗೀಕರಿಸಿದ ಇಸ್ರೇಲ್ ಸಂಸತ್ತು

ಇಸ್ರೇಲ್ ಸಂಸತ್ತು ಸೋಮವಾರ (ಮಾರ್ಚ್ 30, 2026) ಹೊಸ ಮಸೂದೆಯೊಂದನ್ನು ಅಂಗೀಕರಿಸಿದೆ. ಇದರ ಪ್ರಕಾರ, ಮಿಲಿಟರಿ ನ್ಯಾಯಾಲಯದಲ್ಲಿ ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಲಾಗಿದೆ. ಪ್ರಧಾನಿ ಬೆಂಜಮಿನ್...

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...