Homeಅಂಕಣಗಳುಕಳೆದುಹೋದ ದಿನಗಳು -31: ಕರ್ನಾಟಕ ಕಾಫಿ ಮತ್ತು ಗಣಪಯ್ಯನವರ ನಂಟು

ಕಳೆದುಹೋದ ದಿನಗಳು -31: ಕರ್ನಾಟಕ ಕಾಫಿ ಮತ್ತು ಗಣಪಯ್ಯನವರ ನಂಟು

- Advertisement -

ಇತ್ತೀಚಿನ ದಿನಗಳಲ್ಲಿ ಕಾಫಿ ತೋಟಗಳನ್ನು ನೋಡುವವರಿಗೆ 1992-93 ನೇ ಇಸವಿಗೂ ಹಿಂದೆ ಕಾಫಿ ಬೆಳೆಯನ್ನು ಸರ್ಕಾರ ಕಾಫಿ ಬೋರ್ಡಿನ ಮೂಲಕ ಹೇಗೆ ನಿಯಂತ್ರಿಸುತ್ತಿತ್ತು? ಇದಕ್ಕೆ ಕಾರಣಗಳೇನು, ಅದಕ್ಕೆ ಯಾವ ರೀತಿಯ ವ್ಯವಸ್ಥೆ ಇತ್ತು ಎನ್ನುವುದು ತಿಳಿದಿಲ್ಲ. ಕಾಫಿ ಬೋರ್ಡ್ ಅಥವಾ ಕಾಫಿ ಮಂಡಳಿ 1942 ರಲ್ಲಿ ಬ್ರಿಟಿಷ್ ಸರ್ಕಾರದಲ್ಲಿ ಪ್ರಾರಂಭವಾಯಿತು. ಕಾಫಿ ಪ್ರಮುಖವಾಗಿ ಒಂದು ರಫ್ತು ಬೆಳೆ. ಸರ್ಕಾರಕ್ಕೆ ಅಂದಿನ ಕಾಲಕ್ಕೆ ದೊಡ್ಡ ವಿದೇಶೀ ವಿನಿಮಯ  ಕಾಫಿಯಿಂದ ದೊರೆಯುತ್ತಿತ್ತು. ಆದ್ದರಿಂದ ಅದನ್ನು ಕೇಂದ್ರ ಅಬಕಾರಿ ಕಾನೂನಿನಡಿಯಲ್ಲಿ ತಂದು ಕಾಫಿ ಬೆಳೆಯ ನಿಯಂತ್ರಣ ಮತ್ತು ಮಾರಾಟದ ಸಂಪೂರ್ಣ ಹಕ್ಕನ್ನು ಕಾಫಿ ಮಂಡಳಿಗೆ ಒಪ್ಪಿಸಲಾಯಿತು. ಇದರಿಂದ ಹಲವು ವರ್ಷಗಳ ಕಾಲ ಬೆಳೆಗಾರರು ನಿಶ್ಚಿಂತರಾದದ್ದೂ ನಿಜವೇ.  ಆದರೆ ನಾನಿಲ್ಲಿ ಕಾಫಿ ಮಂಡಳಿಯ ಸಾಧಕ ಬಾಧಕಗಳನ್ನಾಗಲೀ, ಕಾಫಿ ಮಂಡಳಿ ಮುಂದೇನಾಯಿತು ಎನ್ನುವುದನ್ನಾಗಲೀ ಈಗ ಪ್ರಸ್ತಾಪಿಸುತ್ತಿಲ್ಲ. ಬದಲಿಗೆ ಕಾಫಿ ಬೆಳೆಗಾರ ಕಾಫಿಯನ್ನು ಬೆಳೆದು ಕಾಫಿ ಮಂಡಳಿಗೆ ಒಪ್ಪಿಸುವವರೆಗೆ ಏನೇನು ಕ್ರಮ ಕೈಗೊಳ್ಳ ಬೇಕಾಗಿತ್ತು ಅದು ಹೇಗೆ ನಡೆಯುತ್ತಿತ್ತು ಎಂಬುದರ ಸ್ಥೂಲ ಚಿತ್ರಣ ಕೊಡುವುದಷ್ಟೇ ಇಲ್ಲಿ ನನ್ನ ಉದ್ದೇಶವಾಗಿದೆ.

ಪ್ರತಿಯೊಬ್ಬ ಕೃಷಿಕನೂ ತನ್ನ ಜಮೀನಿನಲ್ಲಿ ಕಾಫಿ ಬೆಳೆಯನ್ನು ಬೆಳೆಯಲು ಪರವಾನಗಿ ಪಡೆಯುವುದು ಕಡ್ಡಾಯವಾಗಿತ್ತು. ಅಂದರೆ ಆ ಜಮೀನಿನ ಸರ್ವೆ ನಂಬರುಗಳು ಪಹಣಿ ದಾಖಲೆಯಲ್ಲಿ ಕಾಫಿ ನಂಬರ್ ಎಂದು ಇದ್ದರೆ ಅದಕ್ಕೆ ಪರವಾನಿಗೆ ಪಡೆಯುವುದು ಸುಲಭವಿತ್ತು. ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಆ ರೀತಿಯಲ್ಲಿ ಸಾವಿರಾರು ಸರ್ವೆ ನಂಬರುಗಳು ಬ್ರಿಟಿಷರ ಕಾಲದಲ್ಲಿಯೇ ಕಾಫಿ ನಂಬರುಗಳೆಂದು ದಾಖಲಿಸಲಾಗಿತ್ತು. ಈ ರೀತಿಯ ಕಾಫಿ ಬೆಳೆಯಲು ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ (ಈ ಅಧಿಕಾರವನ್ನು ಕೆಲಕಾಲ ತಾಲ್ಲೂಕಿನ ತಹಸೀಲ್ದಾರರಿಗೆ ಕೊಡಲಾಗಿತ್ತು) ಸಲ್ಲಿಸಿ ಅವರಿಂದ ಸಾಮಾನ್ಯವಾಗಿ ಸಿ.ಆರ್.ಸಿ. ಕರೆಯಲಾಗುವ ಕಾಫಿ ರಿಜಿಸ್ಟ್ರೇಷನ್ ಸರ್ಟಿಫಿಕೇಟನ್ನು ಪಡೆಯಬೇಕಿತ್ತು.

ಒಂದು ವೇಳೆ ಜಮೀನಿನ ಸರ್ವೆ ನಂಬರು ಕಾಫಿ ನಂಬರು ಅಲ್ಲದೆ ಕುಷ್ಕಿ ಇತ್ಯಾದಿ ಇದ್ದರೆ ಅದನ್ನು ಬದಲಾಯಿಸಲು ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ, ಆ ಜಮೀನಿಗೆ ಸರ್ಕಾರ ವಿಧಿಸುವ ಪರಿವರ್ತನಾ ಶುಲ್ಕವನ್ನು ಕಟ್ಟಿ ಅದನ್ನು ಕಾಫಿ ನಂಬರ್ ಆಗಿ ಬದಲಾವಣೆ ಮಾಡಿದ ನಂತರವಷ್ಟೇ ಸಿ.ಆರ್.ಸಿಗೆ ಅರ್ಜಿ ಸಲ್ಲಿಸಬಹುದಾಗಿತ್ತು.

ಒಂದು ವೇಳೆ ಕಾಫಿ ನಂಬರು ಅಲ್ಲದ ಜಮೀನಿನಲ್ಲಿ ಕಾಫಿ ಬೆಳೆ ಇದ್ದರೆ. ಅದಕ್ಕೆ ಕೇಂದ್ರ ಅಬಕಾರಿ ಇಲಾಖೆ ಒಂದು ತಾತ್ಕಾಲಿಕ ಲೈಸನ್ಸ್ ಅನ್ನು ಕೊಡುತ್ತಿತ್ತು.

ಈ ಸಿ.ಆರ್.ಸಿ ಅಥವಾ ಲೈಸನ್ಸ್ ಇದ್ದವರಿಗೆ ಮಾತ್ರ ಕಾಫಿ ಕೊಯ್ಲಿನ ನಂತರ ಕಾಫಿಯನ್ನು ಸಾಗಾಟ ಮಾಡಲು ಸಾಗಾಣಿಕೆ ಪರ್ಮಿಟ್ ನಮೂನೆ ಪತ್ರ ದೊರೆಯುತ್ತಿತ್ತು. ಅದಕ್ಕೆ T.P.-3 ಎಂದು ಹೆಸರು. ಅದನ್ನು ಬೆಳೆಗಾರರು ಭರ್ತಿಮಾಡಿ ಜಮೀನಿನ ಮಾಲಿಕ ಅಥವಾ ಅವರಿಂದ ಅಧಿಕೃತರಾದವರು ರುಜು ಮಾಡಿ, ಕಾಫಿ ಸಾಗಾಣಿಕೆ  ವಾಹನದೊಂದಿಗೆ ಕಳುಹಿಸಬೇಕು. ಇದಿಲ್ಲದೆ ಯಾವುದೇ ವಾಹನ, ಗಾಡಿ, ಕಾಫಿ ಸಾಗಾಟ ಮಾಡಿದರೆ ಆತನನ್ನು ಬಂಧಿಸಿ ಮಾಲನ್ನು ಗಾಡಿ ಸಹಿತ ವಶಪಡಿಸಿಕೊಳ್ಳಲಾಗುತ್ತಿತ್ತು. ಹೀಗಾಗಿ ಪ್ರತಿಯೊಬ್ಬ ಬೆಳೆಗಾರನೂ ತಾನು ಬೆಳೆದದ್ದನ್ನು ಕಾಫಿ ಬೋರ್ಡ್ ಅನುಮೋದಿಸಿದ ಡಿಪೋಗಳು ಅಥವಾ ಕಾಫಿ ಕ್ಯೂರಿಂಗ್ ವರ್ಕ್ಸ್‌ಗಳಿಗೆ ,ಮಾತ್ರ ಒಯ್ದು ಹಾಕಬೇಕಿತ್ತು. ಪ್ರತಿಯೊಂದು ಕ್ಯೂರಿಂಗ್ ವರ್ಕ್ಸ್‌ನಲ್ಲೂ ಕೇಂದ್ರ ಅಬಕಾರಿ ಇಲಾಖೆಯ ಒಬ್ಬ ಅಧಿಕಾರಿ ಇದರ ತಪಾಸಣೆ ಮತ್ತು ಉಸ್ತುವಾರಿಗೆ ಇರುತ್ತಿದ್ದರು.

ಇನ್ನು ಕಾಫಿ ಬೆಳೆದು ಕೊಯ್ಲು ಮಾಡುವಾಗಲೂ ಅಷ್ಟೇ ಪ್ರತಿದಿನ ಕೊಯ್ದ ಕಾಫಿಯನ್ನು ಅಳತೆ ಮಾಡಿ ಬರೆಯಬೇಕು. ಅದಕ್ಕೆಂದೇ ಎಸ್ಟೇಟ್ ಬುಕ್-2 (E.B-2) ಎಂಬ ನಮೂನೆಗಳಿದ್ದವು. ಮತ್ತೆ ಕಾಫಿ ಹಣ್ಣನ್ನು ಪಲ್ಪರ್ ಮಾಡಿದರೆ ಆಯಾ ದಿನದ ಅದರ ವಿವರಗಳು, ಮತ್ತು ಉಳಿಕೆ ಉಂಡೆ ಕಾಫಿಯ ವಿವರ ಬರೆಯಬೇಕು. ಹಾಗೇಯೇ ಒಣಗಿ ಬರಲು ಪ್ರಾರಂಭವಾದೊಡನೆ ಪ್ರತಿದಿನದ ಒಣಗಿದ ಕಾಫಿಯ ತೂಕ ಮತ್ತು ಮೂಟೆಗಳ ಸಂಖ್ಯೆಗಳನ್ನು ದಾಖಲಿಸಬೇಕು ಅಷ್ಟೇ ಅಲ್ಲ ಕಾಫಿ ಗೋದಾಮಿನಲ್ಲಿ ಎದುರಿಗೇ ಕಾಣುವಂತೆ ಬೋರ್ಡೊಂದನ್ನು ಇಟ್ಟು ಅದರಲ್ಲಿ ಈ ವಿವರಗಳು ದಾಖಲಾಗಬೇಕು.

ಕಾಫಿಯನ್ನು ಸಂಪೂರ್ಣವಾಗಿ ಡಿಪೋ ಅಥವಾ ಕ್ಯೂರಿಂಗ್ ವರ್ಕ್ಸ್‌ಗೆ ಕಳುಹಿಸಿದ ಮೇಲೆ ಈ ಎಲ್ಲ ವಿವರಗಳನ್ನು ಕೇಂದ್ರ ಅಬಕಾರಿ ಅಧಿಕಾರಿಗೆ ಒಪ್ಪಿಸಿ (ಇವರು ತಾಲ್ಲೂಕಿನಲ್ಲೇ ಇರುತ್ತಿದ್ದರು) ಲೆಕ್ಕ ಚುಕ್ತಾ ಮಾಡಬೇಕು. ಹಾಗೆ ಮಾಡುವಾಗ ಸ್ವಂತ ಉಪಯೋಗಕ್ಕೆ ಇಟ್ಟುಕೊಂಡ ಕಾಫಿಯ ಲೆಕ್ಕವನ್ನೂ ಕೊಡಬೇಕಿತ್ತು!

ದೊಡ್ಡ ಎಸ್ಟೇಟುಗಳಲ್ಲಿ ಇವೆಲ್ಲ ಒಂದಿಷ್ಟೂ ವ್ಯತ್ಯಾಸವಾಗದೆ ನಡೆಯುತ್ತಿತ್ತು. ಇದರಿಂದಾಗಿ ಕಾಫಿಯ ಕಳ್ಳತನವೂ ಸುಲಭದಲ್ಲಿ ಸಾಧ್ಯವಿರಲಿಲ್ಲ.

ಸಣ್ಣ ಬೆಳೆಗಾರರರು ತಾವು ಬೆಳೆದ ಕಾಫಿಯನ್ನು ಟಿ.ಪಿ-3 ಪಡೆದು ಕಾಫಿ ಮಂಡಳಿ ಡಿಪೋಗಳಿಗೆ ಹಾಕುತ್ತಿದ್ದರು. ಬಾಕಿ ಲೆಕ್ಕಾಚಾರಗಳನ್ನು (ಇ.ಬಿ-2 ಇತ್ಯಾದಿ) ಕೇಂದ್ರ ಅಬಕಾರಿ ಕಛೇರಿಯ ಸಿಬ್ಬಂದಿಯೇ ಯಾರಾದರೂ ಒಂದಷ್ಟು ಹಣ ಪಡೆದು ಬರೆದು ಕೊಡುತ್ತಿದ್ದರು!

1943 ರಿಂದ 1995 ರವರೆಗೆ ಇದು ಹೀಗೇಯೇ ನಡೆದು ಬಂತು.

**************

ಗಣಪಯ್ಯನವರಿಗೆ ಒಂದೆರಡು ದಿನಗಳಿಂದ ಸ್ವಲ್ಪ ಜ್ವರವಿತ್ತು. ಹಿಂದೆ ಕಾಲಿಗೆ ಆದ ಪೆಟ್ಟಿನಿಂದ ಸಂಪೂರ್ಣ ಗುಣವಾಗಿದ್ದರೂ ಕೆಲವು ಸಲ ಕಾಲು ನೋವೆಂದು ಮೀನ ಖಂಡಕ್ಕೆ ಪಟ್ಟಿ ಸುತ್ತಿಕೊಂಡಿರುತ್ತಿದ್ದರು.

ನಾನು ಸ್ವಂತ ಕೆಲಸಕ್ಕೆಂದು ಎರಡು ದಿನ ರಜೆಯಲ್ಲಿ ಹೋದವನು, ಹೋದಲ್ಲಿ ಏನೋ ತೊಂದರೆಯಾಗಿ ವಾಪಸ್ ಬರುವಾಗ ಮತ್ತೆರಡು ದಿನ ಆಗಿ ಹೋಯಿತು. ಆ ವಾರ ನಾನು ಅವರನ್ನು ಭೇಟಿಯಾದಾಗ “ನಿನಗೆ ಇನ್ನೂ ಜವಾಬ್ದಾರಿ ಎನ್ನುವುದು ಬಂದಿಲ್ಲ ಹೇಳಿದ ದಿನಕ್ಕೆ ಬರಲಿಲ್ಲ ಎಲ್ಲಿ ಹೋಗಿದ್ದೆ” ಎಂದರು. ಅದು ಕಾಫಿ ಕೊಯ್ಲಿನ ಸಮಯ ಬೇರೆ, ಸಾಮಾನ್ಯವಾಗಿ ಆ ಸಮಯದಲ್ಲಿ ಯಾರೂ ರಜೆ ಕೊಡುವುದಿಲ್ಲ. ನನ್ನ ಸ್ವಭಾವದ ಮತ್ತು ನೂರೆಂಟು ಕೆಲಸಗಳಿಗೆ ಕೈಹಾಕುವ ಮತ್ತು ಬೇಡದನ್ನು ಅಂಟಿಸಿಕೊಳ್ಳುವ ಗುಣಗಳ ಪರಿಚಯ ಇದ್ದ ಅವರು ಇವನೆಲ್ಲೋ ಉಡಾಫೆಯಿಂದ ಹೋಗಿದ್ದಾನೆ ಅಂದುಕೊಂಡಿದ್ದರು. ನಾನು ಹೆಚ್ಚೇನೂ ಹೇಳದೆ ಸುಮ್ಮನಿದ್ದೆ.“ನಿನಿಗೆ ಎಚ್ಚರಿಕೆ ಕೊಡುತ್ತಿದ್ದೇನೆ ಇನ್ನು ಮುಂದೆ ಹಾಗೆ ಮಾಡಬೇಡ, ಈ ವರ್ಷವಾದರೂ ಅಗಲಟ್ಟಿ ಗ್ರಾಮದ ದಲಿತರ ಜಮೀನಿನಲ್ಲಿ ಗಿಡ ಹಾಕಬೇಕು” ಎಂದರು.

ನಾನು ವಾಪಸ್ ಬಂದೆ. ಎರಡು ದಿನಗಳನಂತರ ಪೂರ್ಣಿಮಾ ಎಸ್ಟೇಟಿಗೆ ಭೇಟಿಗೆಂದು ಅವರೇ ಬಂದರು. ಕಣದಲ್ಲಿ ಕಾಫಿ ಒಣಗುತ್ತಿತ್ತು. ಜ್ವರದ ಲಕ್ಷಣ ಮುಖದಲ್ಲಿ ಕಾಣುತ್ತಿತ್ತು. ಕಾಫಿ ಕಣದಲ್ಲಿ ಮೆಟ್ಟಿಲು ಹತ್ತುವಾಗ ಕಾಲಿಗೆ ಕಟ್ಟಿದ್ದ ಪಟ್ಟಿ ಬಿಚ್ಚಿಹೋಯಿತು, ಅವರೇ ಬಗ್ಗಿ ಕಟ್ಟಿ ಕೊಳ್ಳಲು ಪ್ರಯತ್ನಿಸಿದರು, ಸಾಧ್ಯವಾಗಲಿಲ್ಲ, ಆಗ ನಾನೇ ಅವರನ್ನು ಕೂರಲು ಹೇಳಿ ಕಾಲಿನ ಪಟ್ಟಿ ಕಟ್ಟಿದೆ. ನಂತರ ಹಾರ್ಲೆಗೆ ವಾಪಸ್ ಹೋದರು.

ಹಾರ್ಲೆಯಲ್ಲಿಯೂ ಅಂದು ಮ್ಯಾನೇಜರ್ ಎಂ.ನಾರಾಯಣ ಭಟ್ ಅವರು ಇರಲಿಲ್ಲ. ಸ್ವಂತ ಕೆಲಸದ ಮೇಲೆ ರಜೆ ಹಾಕಿ ಹೋಗಿದ್ದರಂತೆ. ಅವರು ಮಾರನೆಯ ದಿನ ಬರುವವರಿದ್ದರು. ಅಂದು ಮಧ್ಯಾಹ್ನದ ವೇಳೆಗೇ ಅವರು ಹೋದ ಕೆಲಸ ಮುಗಿದಿತ್ತು. ಅಷ್ಟರಲ್ಲಿ ಅವರ ಬಂಧುಗಳೊಬ್ಬರ ಲಾರಿ ಹಾಸನದತ್ತ ಬರುವುದಿತ್ತು ಹಾಗಾಗಿ ಅವರು ಲಾರಿಯಲ್ಲಿ ಕುಳಿತು ಅಂದು ಸಂಜೆಯೇ ತೋಟಕ್ಕೆ ವಾಪಸ್ ಬಂದು ತಲುಪಿದರು.

ಸಂಜೆ ಗಣಪಯ್ಯನವರನ್ನು ಭೇಟಿ ಮಾಡಿದಾಗ ನಾಳೆ ಕಾಫಿ ಕಳುಹಿಸಬೇಕು ಸಾಗಾಣಿಕೆಗೆ ಟಿ.ಪಿ -3 ಫಾರ್ಮುಗಳನ್ನು ಭರ್ತಿ ಮಾಡಿಸಿ ಈಗಲೇ ತಾ ರುಜು ಮಾಡುತ್ತೇನೆ ಎಂದರಂತೆ. ಮ್ಯಾನೇಜರ್ ಅವರಿಗೆ, ಅದನ್ನು ಬೆಳಿಗ್ಗೆ ಮಾಡಬಹುದಿತ್ತು ಲಾರಿ ಲೋಡು ಆಗುವಷ್ಟರಲ್ಲಿ ಮಾಡುವುದು ಅದೆಷ್ಟು ಹೊತ್ತು, ಈಗೇನು ಅವಸರ ಅನ್ನಿಸಿದರೂ ಏನೂ ಮಾತಾಡದೆ, ಫಾರ್ಮ್ ಭರ್ತಿ ಮಾಡಿ ಒಯ್ದು ಗಣಪಯ್ಯನವರ ರುಜು ಹಾಕಿಸಿಕೊಂಡರು. ನಾನು ಮೊದಲು ಹೇಳಿದಂತೆ ಆ ಕಾಲದಲ್ಲಿ ಕಾಫಿ ಸಾಗಣೆಯಲ್ಲಿ ಟಿ.ಪಿ-3 ಫಾರ್ಮು ಬಹಳ ಮುಖ್ಯವಾದ ದಾಖಲೆ ಪತ್ರ ಮತ್ತು ಅದಕ್ಕೆ ಯಾರು ಅಧಿಕೃತರೋ ಅವರೇ ರುಜುಮಾಡಬೇಕು.

ಗಣಪಯ್ಯ ರಾತ್ರಿ ಊಟವನ್ನೇನೂ ಮಾಡದೆ ಸ್ವಲ್ಪ ಹಾಲು ಕುಡಿದು ಮಲಗಲು ಹೋಗುವಾಗ ಮತ್ತೆ ಮ್ಯಾನೇಜರ್ ನಾರಾಯಣ ಭಟ್ಟರನ್ನು ಬರಹೇಳಿದರಂತೆ. ಇದೇನು ಮತ್ತೆ ಕರೆದರು ಎಂದುಕೊಂಡು ಅವರು ಬಂದಾಗ ಗಣಪಯ್ಯ ಮಂಚದಲ್ಲಿ ಮಲಗಿದ್ದರಂತೆ. ಆಗ ಗಣಪಯ್ಯ “ನಾರಾಯಣ ನೋಡು ಅಲ್ಲಿ ಭಗವದ್ಗೀತೆ ಇದೆ ಅದನ್ನು ತೆಗೆದು ಇಷ್ಟನೇ ಪುಟಗಳನ್ನು ಓದು ಎಂದು ನಿರ್ದಿಷ್ಟವಾಗಿ ಹೇಳಿದರಂತೆ. ಅವರಿಗೆ ಇವರು ಯಾಕೆ ಹೀಗೆ ಹೇಳುತ್ತಿದ್ದಾರೆ ಎಂದು ಮನಸ್ಸಿನಲ್ಲೇ ಏನೋ ಒಂದು ರೀತಿ ಆದರೂ ಭಗವಧ್ಗೀತೆಯನ್ನು ತೆಗೆದು ಓದಿದರು. ಸ್ವಲ್ಪ ಹೊತ್ತಿನ ನಂತರ “ಸಾಕು ನೀನು ಹೋಗಿ ಮಲಗು” ಎಂದರು ಗಣಪಯ್ಯ.

ಮರುದಿನ 1987ನೇ ಇಸವಿ ಫೆಬ್ರವರಿ ತಿಂಗಳ ಏಳನೇ ತಾರೀಖಿನ ಬೆಳಗ್ಗೆ ಆರು ಗಂಟೆಗೇ ನಮಗೆ ಗಣಪಯ್ಯ ತೀರಿಕೊಂಡರೆಂದು ಸುದ್ದಿ ಬಂತು. ಇಡೀ ತೋಟದ ಜನರೆಲ್ಲರೂ ಹೋದೆವು. ಆಗಲೇ ನೂರಾರು ಜನರು ಸೇರಿದ್ದರು. ಗಣ್ಯರು, ಸರ್ಕಾರಿ ಅಧಿಕಾರಿಗಳು ಬರುತ್ತಲೇ ಇದ್ದರು. ಅಂದು ಮಧ್ಯಾಹ್ನ ಹಾರ್ಲೆ ತೋಟದ ಅಂಚಿನಲ್ಲೇ ಹರಿಯುವ ಎತ್ತಿನ ಹಳ್ಳದ ಪಕ್ಕದಲ್ಲಿ ಗಣಪಯ್ಯ ಪ್ರಕೃತಿಯಲ್ಲಿ ಲೀನವಾದರು.

ಹಾರ್ಲೆಯ ಇತಿಹಾಸದೊಂದಿಗೆ ಕರ್ನಾಟಕದ ರಾಜಕಾರಣದ ಪ್ರಮುಖ ಅಧ್ಯಾಯವೊಂದು ಮುಗಿದು ಹೋಗಿತ್ತು

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ:ಕಳೆದುಹೋದ ದಿನಗಳು -26: ಗಣಪಯ್ಯನವರು ಹಾರ್ಲೆ ತೋಟ ಕೊಂಡಿದ್ದು ಹೀಗೆ..

ಪ್ರಸಾದ್ ರಕ್ಷಿದಿ
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial